ಕೇರಳದ ಆನೆ, ಕೋಲ್ಕತಾದ ಅತ್ಯಾಚಾರ ಮತ್ತು ಕರ್ನಾಟಕದ ರಾಜಕಾರಣ

ಅತ್ಯಾಚಾರ ಮತ್ತು ಭ್ರಷ್ಟಾಚಾರಗಳಂತಹ ಪಿಡುಗುಗಳನ್ನು ಪ್ರತಿಭಟಿಸಲೇಬೇಕು. ಆದರೆ ಹಾಗೆ ಪ್ರತಿಭಟಿಸುವಾಗ, ನಾವು ಯಾವ ಆಶಯದ ಭಾಗವಾಗಿ ಪ್ರತಿಭಟಿಸುತ್ತಿದ್ದೇವೆ? ನಾವೇನಾದರೂ ಉದ್ದೇಶಿತ ಯೋಜನೆಯ ಪಾಲುದಾರರಾಗುತ್ತಿದ್ದೇವೆಯೇ? ನಮ್ಮ ಖಂಡನೆಯ ದನಿಯು ದುರುದ್ದೇಶ ಹಿತಾಸಕ್ತಿಯ ಬೇರೆ ಯಾರಿಗಾದರೂ ಮಾನ್ಯತೆ ತಂದುಕೊಡುತ್ತಿದೆಯೇ? ಎನ್ನುವ ಸಣ್ಣ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಕಾಲದ ತುರ್ತು ಮತ್ತು ಸಮಕಾಲದ ಸಂಕೀರ್ಣತೆಯ ಒಳನೋಟವಿಲ್ಲದ ನಮ್ಮ ಹೊಣೆಗಾರಿಕೆಗಳು ನಮಗೆ ತಿರುಗುಬಾಣವಾಗುವ ಅಪಾಯವನ್ನು ಇಂತಹ ಸಂದರ್ಭಗಳಲ್ಲಿ ಮರೆಯಬಾರದು.

Update: 2024-08-22 05:33 GMT

ಸರಿ ಮತ್ತು ತಪ್ಪು ಎಂದು ವಿಂಗಡಿಸಲು ಸಾರ್ವತ್ರಿಕ, ಸಾರ್ವಕಾಲಿಕ ಚೌಕಟ್ಟುಗಳೇನಾದರೂ ಇವೆಯೇ? ನಾಗರಿಕ ಪ್ರಜ್ಞೆ ಎನ್ನುವುದು ಕಣ್ಣಿಗೆ ಕಾಣುವ ವಿದ್ಯಮಾನದ ಆಚೆಗೂ ವಿಸ್ತಾರಗೊಂಡು ಸ್ಪಂದಿಸಲು ಸಾಧ್ಯವಿಲ್ಲವೇ?

ಈ ಎರಡು ಪ್ರಶ್ನೆಗಳು ಕಾಡಲು ಕಾರಣ ಇದೆ. ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಯಿತು. ಅತ್ಯಾಚಾರದ ನಂತರ ಆ ಸಂತ್ರಸ್ತೆಯನ್ನು ಸಜೀವವಾಗಿ ಸುಟ್ಟು ಹತ್ಯೆ ಮಾಡಲಾಗಿತ್ತು. ಅದರ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿತು. ಪೊಲೀಸರು ಅದಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದರು. ಆರೋಪಿಗಳ ವಿರುದ್ಧ ಅದೆಷ್ಟು ತೀಕ್ಷ್ಣವಾಗಿ ನಮ್ಮ ನಾಗರಿಕ ಸಮಾಜ ತನ್ನ ಸಿಟ್ಟು ಹೊರಹಾಕಿತೆಂದರೆ, ಕೆಲವೇ ದಿನಗಳಲ್ಲಿ ಎನ್‌ಕೌಂಟರ್‌ನಲ್ಲಿ ನಾಲ್ವರನ್ನೂ ಪೊಲೀಸರು ಕೊಂದುಹಾಕಿದರು. ಆ ಕೊಲೆಗಳನ್ನು ನಮ್ಮ ದೇಶ ಸಂಭ್ರಮಿಸಿತು. ಸಂತ್ರಸ್ತೆಗೆ ನ್ಯಾಯ ಸಿಕ್ಕಿತೆಂದು ನಿಟ್ಟುಸಿರುಗರೆಯಿತು. ಎನ್‌ಕೌಂಟರ್ ನಡೆಸಿದ ಪೊಲೀಸರನ್ನು ಹಲವರು ಸನ್ಮಾನಿಸಿದ್ದೂ ನಡೆಯಿತು.

ಅತ್ಯಾಚಾರ ಅಥವಾ ಯಾವುದೇ ಬಗೆಯ ಅಮಾನವೀಯ ಕ್ರೈಮ್‌ಗಳನ್ನು ನಾವು ಖಂಡಿಸಲೇಬೇಕು. ಆದರೆ ಹಾಗೆ ಖಂಡಿಸುವ ನಮ್ಮ ಪ್ರಜ್ಞೆಗೆ ಒಂದಷ್ಟು ವಿಸ್ತಾರವೂ ಇರಬೇಕಾಗುತ್ತದೆ. ಯಾಕೆ ಈ ಮಾತು ಹೇಳಬೇಕಾಗಿದೆಯೆಂದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ನಾಗರಿಕ ಹೊಣೆಗಾರಿಕೆ ಅಥವಾ ಪ್ರಜ್ಞೆಗಳನ್ನು ಕೆಲವು ಶಕ್ತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಮ್ಯಾನ್ಯುಪ್ಯುಲೇಟ್ ಮಾಡಿ, ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ನಮಗೆ ಅರಿವಿಲ್ಲದೆ ಅಥವಾ ನಾಗರಿಕ ಪ್ರಜ್ಞೆಯನ್ನು ನಿಭಾಯಿಸುವ ಧಾವಂತದಲ್ಲಿ ಅಂತಹವರ ಜಾಲಗಳಿಗೆ ಬಲಿಪಶುಗಳಾಗಿರುತ್ತೇವೆ. ಹೈದರಾಬಾದ್ ಘಟನೆಯನ್ನೇ ತೆಗೆದುಕೊಳ್ಳೋಣ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದಕ್ಕೂ ಮೊದಲು ಅವರು ಅತ್ಯಾಚಾರ ಮಾಡಿದ್ದರು ಎಂದು ಸಾಬೀತಾಗುವುದು ಅಷ್ಟೇ ಮುಖ್ಯವಾಗುತ್ತದೆ. ಅದಕ್ಕೆಂದೇ ನಮ್ಮ ನ್ಯಾಯಾಲಯಗಳಿರುವುದು. ಎನ್‌ಕೌಂಟರ್‌ನಲ್ಲಿ ಬಲಿಯಾದ ನಾಲ್ವರು ಅಮಾಯಕರು ಎಂದು ಹೇಳುತ್ತಿಲ್ಲ, ಅವರು 100ಕ್ಕೆ ಶೇ. 99.99 ನಿಜವಾದ ಅತ್ಯಾಚಾರಿಗಳೇ ಆಗಿರಬಹುದು. ಒಂದುವೇಳೆ, ಶೇ. 0.001 ಅವಕಾಶದಲ್ಲಿ ಅವರು ನಿರಪರಾಧಿಗಳಾಗಿದ್ದರೆ!? ಅತ್ಯಾಚಾರವನ್ನು ಖಂಡಿಸಬೇಕೆನ್ನುವ ನಮ್ಮ ನೈತಿಕ ಮತ್ತು ಸಾಮಾಜಿಕ ಧಾವಂತ, ನಾಲ್ವರ ಸಾವುಗಳಿಗೂ ಕಾರಣವಾಗಿರಬಹುದಾಗಿರುತ್ತದೆ. ಅತ್ಯಾಚಾರವನ್ನೇ ಆಗಲಿ ಅಥವಾ ಇನ್ನ್ಯಾವುದೇ ಅಮಾನವೀಯ ಕ್ರೈಮ್ ಅನ್ನೇ ಆಗಲಿ, ಮಾಡಿದ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಖಂಡಿಸುವುದು ಎಷ್ಟು ಮುಖ್ಯವೋ, ಆ ಖಂಡನೆ ನಮ್ಮ ನಾಗರಿಕ ಚೌಕಟ್ಟಿನೊಳಗೆ ಇರುವಂತೆ ನೋಡಿಕೊಳ್ಳುವುದೂ ಮುಖ್ಯವಾಗುತ್ತದೆ. ಇಲ್ಲವಾದರೆ ಅರಣ್ಯ ನ್ಯಾಯ ಅಥವಾ ಬುಲ್ಡೋಜರ್ ನ್ಯಾಯಗಳಿಗೆ ನಾವೇ ಮುನ್ನುಡಿ ಬರೆದಂತಾಗುತ್ತದೆ. ಇದರರ್ಥ, ತಪ್ಪು ಎಂದೆನಿಸಿದ ಯಾವುದೇ ವಿಚಾರವನ್ನು ನಾವು ಖಂಡಿಸುವಾಗ, ನಮ್ಮ ನೈತಿಕ ಪ್ರಜ್ಞೆಯ ಜೊತೆಗೆ ಸಂದರ್ಭದ ವಿವೇಚನೆಯೂ ನಮಗೆ ಅಗತ್ಯವಾಗುತ್ತದೆ. ಇಲ್ಲವಾದಲ್ಲಿ, ನಾವು ಯಾವುದನ್ನು ಖಂಡಿಸಲು ಮುಂದಾಗುತ್ತೇವೆಯೋ, ಅದಕ್ಕಿಂತಲೂ ಅಪಾಯಕಾರಿಯಾದುದನ್ನು ಆ ಮೂಲಕ ಬೆಂಬಲಿಸಲು ನಮಗರಿವಿಲ್ಲದೆ ನಾವು ಭಾಗೀದಾರರಾಗುವ ಅಪಾಯವೂ ಇರುತ್ತದೆ.

ನಾವು ಇಂತಹ ಖಂಡನೆಯ ವಿಚಾರದಲ್ಲಿ ಎಷ್ಟು ಸೂಕ್ಷ್ಮವಾಗಿಯೂ, ಮುಂಗಾಣುವಿಕೆಯಿಂದಲೂ ಇರಬೇಕೆನ್ನುವುದಕ್ಕೆ ಅಣ್ಣಾ ಹಝಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು ದಿಲ್ಲಿಯ ನಿರ್ಭಯಾ ಅತ್ಯಾಚಾರ ವಿರುದ್ಧದ ಪ್ರತಿಭಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಆಶಯದ ರೂಪದಲ್ಲಿ ಇವೆರಡೂ ಸ್ವಾಗತಾರ್ಹ ಹೋರಾಟಗಳೆಂಬುದು ನಿಜವಾದರೂ, ‘ಪೊಲಿಟಿಕಲ್ ಡಿಸೈನಿಂಗ್’ ಆಯಾಮದಿಂದ ನೋಡಿದಾಗ ಇವೆರಡನ್ನೂ ಆಯೋಜಿಸಿ, ನಿಯಂತ್ರಿಸಿದ್ದು ಕೋಮುವಾದಿ ಅಜೆಂಡಾಗಳು. ಅತ್ಯಾಚಾರ ಮತ್ತು ಭ್ರಷ್ಟಾಚಾರಗಳು ಅತ್ಯಂತ ಹೇಯ ಸಾಮಾಜಿಕ ಪಿಡುಗುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೋಮುವಾದ ಎನ್ನುವುದು ಇಂತಹ ಇನ್ನೂ ಹತ್ತಾರು ಪಿಡುಗುಗಳನ್ನು ತನ್ನೊಳಗೆ ಸಾಕಿ ಸಲಹುವ ಮತ್ತು ಅಂತಹ ಕೃತ್ಯಗಳಿಗೆ ಸಮ್ಮತಿಯನ್ನು ಉತ್ಪಾದಿಸಿಕೊಳ್ಳುವ ಅಪಾಯಕಾರಿ ಸಂಕೀರ್ಣ ಕೂಟ. ಭ್ರಷ್ಟಾಚಾರ ವಿರುದ್ಧದ ಆಂದೋಲನದಲ್ಲಿ ಅಣ್ಣಾ ಹಝಾರೆಯನ್ನು ಬೆಂಬಲಿಸುವಾಗ ಅಥವಾ ಎಬಿವಿಪಿ ತರಹದ ಬಲಪಂಥೀಯ ಸಂಘಟನೆಗಳು ಮುಂಚೂಣಿ ವಹಿಸಿದ ನಿರ್ಭಯಾ ಪ್ರತಿಭಟನೆಯನ್ನು ಬೆಂಬಲಿಸುವಾಗ, ನಾವು ನಮ್ಮ ನೈತಿಕ ಪ್ರಜ್ಞೆಯಿಂದಷ್ಟೇ ಪ್ರತಿಕ್ರಿಯಿಸಿದ ಪರಿಣಾಮವಾಗಿ ಅವುಗಳನ್ನು ಡಿಸೈನ್ ಮಾಡಿದ ಕೋಮುವಾದಿಗಳು ಅದರ ಸಂಪೂರ್ಣ ಲಾಭ ಪಡೆದು ರಾಜಕೀಯ ಅಧಿಕಾರ ದಕ್ಕಿಸಿಕೊಂಡವು. ಹಾಗಾದರೆ, ಕೋಮುವಾದಿಗಳಿಗೆ ಅನುಕೂಲವಾಗುತ್ತದೆ ಎಂಬ ಭೀತಿಯಿಂದ, ಅಂತಹ ಕೃತ್ಯಗಳಿಗೆ ಸ್ಪಂದಿಸದೆ ಇರಬೇಕೆ? ಖಂಡಿತ ಅಂತಹ ಪಿಡುಗುಗಳನ್ನು ಪ್ರತಿಭಟಿಸಲೇಬೇಕು. ಆದರೆ ಹಾಗೆ ಪ್ರತಿಭಟಿಸುವಾಗ, ನಾವು ಯಾವ ಆಶಯದ ಭಾಗವಾಗಿ ಪ್ರತಿಭಟಿಸುತ್ತಿದ್ದೇವೆ? ನಾವೇನಾದರೂ ಉದ್ದೇಶಿತ ಯೋಜನೆಯ ಪಾಲುದಾರರಾಗುತ್ತಿದ್ದೇವೆಯೇ? ನಮ್ಮ ಖಂಡನೆಯ ದನಿಯು ದುರುದ್ದೇಶ ಹಿತಾಸಕ್ತಿಯ ಬೇರೆ ಯಾರಿಗಾದರೂ ಮಾನ್ಯತೆ ತಂದುಕೊಡುತ್ತಿದೆಯೇ? ಎನ್ನುವ ಸಣ್ಣ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಕಾಲದ ತುರ್ತು ಮತ್ತು ಸಮಕಾಲದ ಸಂಕೀರ್ಣತೆಯ ಒಳನೋಟವಿಲ್ಲದ ನಮ್ಮ ಹೊಣೆಗಾರಿಕೆಗಳು ನಮಗೆ ತಿರುಗುಬಾಣವಾಗುವ ಅಪಾಯವನ್ನು ಇಂತಹ ಸಂದರ್ಭಗಳಲ್ಲಿ ಮರೆಯಬಾರದು. ನಿರ್ಭಯಾ ನಿದರ್ಶನವನ್ನೇ ತೆಗೆದುಕೊಳ್ಳೋಣ. ಬಲಪಂಥೀಯ ಕೋಮುವಾದಿ ಶಕ್ತಿಗಳು ಮುಂಚೂಣಿ ವಹಿಸಿದ ಆ ಪ್ರತಿಭಟನೆಯಲ್ಲಿ, ಅಂದಿನ ಯುಪಿಎ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಅವರು ಯಶಸ್ವಿಯಾದರು. ಅದು ತಪ್ಪೇನು ಅಲ್ಲ. ಆಳುವ ಸರಕಾರ ವಿಫಲವಾದಾಗ, ಅದರ ವಿರುದ್ಧ ಜನಚಳವಳಿ ರೂಪಿಸುವುದು ವಿರೋಧ ಪಕ್ಷಗಳೂ ಸೇರಿದಂತೆ ಸಿವಿಲ್ ಸೊಸೈಟಿಯ ಕರ್ತವ್ಯವಾಗಿರುತ್ತದೆ. ಆದರೆ ಅಂತಹ ಚಳವಳಿಯ ಆಶಯವೂ ನಮಗೆ ಮುಖ್ಯವಾಗಬೇಕಾಗುತ್ತದೆ. ಹೆಣ್ಣುಮಕ್ಕಳ ರಕ್ಷಣೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ರೂಪಿಸಿ, ಅದರ ಲಾಭದ ಫಲವಾಗಿ ಅಧಿಕಾರಕ್ಕೇರಿದ ಕೋಮುವಾದಿ ಪಕ್ಷಗಳು ನಂತರ ಮಾಡಿದ್ದೇನು? ಹೆಣ್ಣುಮಕ್ಕಳ ಪಾಲಿಗೆ ಮತ್ತಷ್ಟು ಕಂಟಕವಾದವು. ವ್ಯತಿರಿಕ್ತವಾಗಿ, ಯಾವ ನಿರ್ಭಯಾ ಪ್ರಕರಣವನ್ನಿಟ್ಟುಕೊಂಡು ಯುಪಿಎ ಸರಕಾರವನ್ನು ಡೀಥ್ರೋನ್ ಮಾಡಲಾಯಿತೋ, ಅದೇ ಯುಪಿಎ ಭಾಗವಾಗಿದ್ದ ರಾಹುಲ್ ಗಾಂಧಿ, ಯಾರ ಗಮನಕ್ಕೂ ಬಾರದಂತೆ ಆ ಸಂತ್ರಸ್ತೆಯ ತಮ್ಮನ ವ್ಯಾಸಂಗದ ಹೊಣೆ ಹೊತ್ತು, ಆತನನ್ನು ಪೈಲಟ್ ಮಾಡಿದರು. ಅತ್ಯಾಚಾರದಂತಹ ಪಿಡುಗನ್ನು ಪ್ರತಿಭಟಿಸಬೇಕೆನ್ನುವ ನಮ್ಮ ನಾಗರಿಕ ಪ್ರಜ್ಞೆಯು, ಯಾರ ದನಿಯಾಗಿ ನಾವು ಹೊರಹೊಮ್ಮುತ್ತಿದ್ದೇವೆ ಎಂಬ ಸಕಾಲಿಕ ಎಚ್ಚರವನ್ನು ಕಳೆದುಕೊಂಡ ಪರಿಣಾಮವಾಗಿ ಅಪಾತ್ರರು ಅಧಿಕಾರಕ್ಕೇರಿ, ದೇಶ ಅಧಃಪತನಕ್ಕೆ ಇಳಿಯಬೇಕಾಯಿತು.

ಇತ್ತೀಚಿನ ದಿನಗಳಲ್ಲಿ ನಮ್ಮ ನೈತಿಕ ಹೊಣೆಗಾರಿಕೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಕೃತ್ಯಗಳು ಹೆಚ್ಚಾಗುತ್ತಿವೆ. ಪ್ರಧಾನವಾಗಿ ಪೊಲಿಟಿಕಲ್ ಪ್ರೊಪೊಗ್ಯಾಂಡವನ್ನು ಆಳದಲ್ಲಿ ಅವಿತಿಟ್ಟುಕೊಂಡ ಕೋಮುವಾದಿಗಳು ಇಂತಹ ಜಾಲಗಳನ್ನು ಹೆಣೆಯುತ್ತಿದ್ದಾರೆ. ಸಂತ್ರಸ್ತ ಯಾರು? ಅಪರಾಧ ನಡೆದಿದ್ದು ಎಲ್ಲಿ? ಈ ಪ್ರತಿಭಟನೆಯಿಂದ ಲಾಭ ಯಾರಿಗೆ? ಲುಕ್ಸಾನು ಯಾರಿಗೆ? ತಮಗಾಗುವ ದೂರಗಾಮಿ ಅನುಕೂಲವೇನು? ಎಂಬ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು, ಆಂದೋಲನಗಳನ್ನು, ಸಾಮುದಾಯಿಕ ಅಭಿಪ್ರಾಯಗಳನ್ನೂ ರೂಪಿಸಲಾಗುತ್ತಿದೆ. ಉದಾಹರಣೆಗೆ, ಕೇರಳದಲ್ಲಿ ಗರ್ಭಿಣಿ ಆನೆಯೊಂದು ಹೂತಿಟ್ಟಿದ್ದ ಸ್ಫೋಟಕವನ್ನು ತಿಂದು, ಅದು ಬಾಯಿಯಲ್ಲಿ ಸ್ಫೋಟಿಸಿ ಅಸುನೀಗಿದ ದುರ್ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಆಗ ಇಡೀ ದೇಶವೇ ಪ್ರಾಣಿದಯಾ ಆಯಾಮದಿಂದ ಆ ಘಟನೆಯನ್ನು ಖಂಡಿಸಿತು. ಖಂಡಿಸಲೇಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ಖಂಡನೆ ಕೇವಲ ಮಾನವೀಯ ಆಯಾಮದಿಂದ ಹೊಮ್ಮಿದ ಆಂದೋಲನವಾಗಿರಲಿಲ್ಲ. ಕೇರಳದಲ್ಲಿ ಬಿಜೆಪಿಗೆ ನೆಲೆಯೂರಲು ಅವಕಾಶ ಕೊಡದ ಅಲ್ಲಿನ ಸರಕಾರಕ್ಕೆ ಮಸಿ ಬಳಿಯುವ ಹುನ್ನಾರ ಅದರಲ್ಲಿ ಅಡಗಿತ್ತು. ತಮ್ಮ ಪರವಾಗಿರುವ ಬಾಲಿವುಡ್ ನಟರಿಂದ ಕಾಪಿ ಪೇಸ್ಟ್ ಟ್ವೀಟ್‌ಗಳನ್ನು ಟ್ವೀಟಿಸಿ ಅದನ್ನೊಂದು ಆಂದೋಲನವಾಗಿ, ರಾಜ್ಯ ಸರಕಾರದ ವೈಫಲ್ಯವಾಗಿ ಬಿಂಬಿಸಲು ಯತ್ನಿಸಲಾಯಿತು. ಆ ಅಮಾಯಕ ವನ್ಯಮೃಗಕ್ಕಾದ ಅನ್ಯಾಯಕ್ಕೆ ಮರುಗುವ ನಮ್ಮ ನೈತಿಕ ಹೊಣೆಗಾರಿಕೆಯ ಭಾಗವಾಗಿ ನಮ್ಮಲ್ಲೂ ಹಲವರು ಆ ಆಂದೋಲನದ ದನಿಯಾಗಿ ಮಾತಾಡಿದರು, ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡರು. ವಿಪರ್ಯಾಸವೆಂದರೆ, ತನ್ನ ಹೆಗ್ಗಳಿಕೆಗೋಸ್ಕರ ಪರಿಸರದ ನಿಯಮಗಳನ್ನು ಉಲ್ಲಂಘಿಸಿ ಆಫ್ರಿಕಾದ ಚಿರತೆಗಳನ್ನು ಭಾರತದ ಕಾಡುಗಳಿಗೆ ತರಿಸಿ, ಅದನ್ನೊಂದು ಸಾಧನೆಯೆನ್ನುವಂತೆ ಮೋದಿ ಬಿಂಬಿಸಿಕೊಂಡರು. ಪ್ರಾಕೃತಿಕ ವೈಪರೀತ್ಯದ ಪರಿಸರಕ್ಕೆ ಒಗ್ಗಿಕೊಳ್ಳಲಾರದೆ ಅವು ಒಂದೊಂದಾಗಿ ಅಸುನೀಗಿದವು. ಆಗ ಕೇರಳದ ಆನೆಗೆ ಮರುಗಿದ್ದ ಯಾವೊಬ್ಬ ಸೆಲೆಬ್ರಿಟಿ ಪ್ರಾಣಿಪ್ರಿಯನೂ ಮೋದಿಯವರ ವಿರುದ್ಧ ಮಾತಾಡಲಿಲ್ಲ. ಅಂದರೆ ಆನೆಗೆ ಮರುಗಿದ್ದು ಒಂದು ಯೋಜಿತ, ಉದ್ದೇಶಿತ ಪ್ರತಿಭಟನೆಯಾಗಿತ್ತು. ಅದರ ಹಿಂದೊಂದು ನಿರ್ದಿಷ್ಟ ರಾಜಕೀಯ ಉದ್ದೇಶವಿತ್ತು.

ಈಗ ಪಶ್ಚಿಮ ಬಂಗಾಳದ ವೈದ್ಯೆಯ ಅತ್ಯಾಚಾರದ ವಿರುದ್ಧ ಭುಗಿಲೇಳುತ್ತಿರುವ ಪ್ರತಿಭಟನೆಯೂ ಅಂತಹದ್ದೇ ರಾಜಕೀಯ ಪ್ರೇರಿತವಾಗಿ ಕಾಣಿಸುತ್ತದೆ. ಆ ಅತ್ಯಾಚಾರವನ್ನೂ ಖಂಡಿತ ಖಂಡಿಸೋಣ. ಅತ್ಯಾಚಾರಿಗಳಿಗೆ ನ್ಯಾಯಾಲಯದ ಚೌಕಟ್ಟಿನಲ್ಲಿ ಉಗ್ರ ಶಿಕ್ಷೆಯಾಗಲಿ ಎಂದು ಒತ್ತಾಯಿಸೋಣ. ಆದರೆ ನಮ್ಮಂತಹವರ ಈ ನೈತಿಕ ಹೊಣೆಗಾರಿಕೆಯನ್ನೇ ಬಂಡವಾಳ ಮಾಡಿಕೊಂಡು ಪಶ್ಚಿಮ ಬಂಗಾಳದ ರಾಜ್ಯ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಕೋಮುವಾದಿಗಳ ಹುನ್ನಾರ ಇದರ ಹಿಂದಿರುವುದನ್ನೂ ನಾವು ಮನಗಾಣಬೇಕಿದೆ. ಯಾಕೆಂದರೆ ನಮ್ಮ ದೇಶ ಇವತ್ತಿಗೂ ಹೆಣ್ಣುಮಕ್ಕಳ ಪಾಲಿಗೆ ಸುರಕ್ಷಿತವಲ್ಲ. ಸರಕಾರದ ಅಧಿಕೃತ ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ ಪ್ರತೀ ಹದಿನೈದು ನಿಮಿಷಕ್ಕೆ ಒಂದು ಹೆಣ್ಣಿನ ಮೇಲೆ ಅತ್ಯಾಚಾರವಾಗುತ್ತಿದೆ. 2012ರಲ್ಲಿ ನಿರ್ಭಯಾ ಪ್ರಕರಣವಾದಾಗ, ಅತ್ಯಾಚಾರವನ್ನು ಹತ್ತಿಕ್ಕುವ ಸಲುವಾಗಿಯೇ ಯುಪಿಎ ಸರಕಾರ ನಿರ್ಭಯಾ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೂ ಅತ್ಯಾಚಾರಗಳು ತಗ್ಗಲೇ ಇಲ್ಲ. ಹೆಚ್ಚಾಗುತ್ತಲೇ ಬಂದವು. 2012ರಲ್ಲಿ 25,000 ಪ್ರಕರಣಗಳು ದಾಖಲಾಗಿದ್ದರೆ, 2022ರ ವೇಳೆಗೆ ಈ ಪ್ರಮಾಣ 39,000ಕ್ಕೆ ಏರಿಕೆಯಾಗಿತ್ತು. ಇವು ದಾಖಲಾದ ಪ್ರಕರಣಗಳ ಸಂಖ್ಯೆ. ದಾಖಲಾಗದ ಅತ್ಯಾಚಾರಗಳ ಸಂಖ್ಯೆ ಇನ್ನೂ ಹೆಚ್ಚಿದೆ. ದಾಖಲಾಗಿ ನ್ಯಾಯಾಲಯದ ಕಟಕಟೆಯೇರುವ ಪ್ರಕರಣಗಳಲ್ಲೂ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಶೇ. 27-28 ಮಾತ್ರ (2018-2022ರ ಅವಧಿಯ ಎನ್‌ಸಿಆರ್‌ಬಿ ವರದಿ ಪ್ರಕಾರ). ಅಂದರೆ ಅತ್ಯಾಚಾರಿಗಳಿಗೆ ಶಿಕ್ಷೆ ನೀಡುವ ವಿಚಾರದಲ್ಲೂ ನಮ್ಮ ಸರಕಾರಗಳು ಉದಾಸೀನ ಭಾವ ತಳೆದಿವೆ. ಈ ಇಷ್ಟೂ ಏರಿಕೆ ಅವಧಿಯಲ್ಲಿ ಅಧಿಕಾರದಲ್ಲಿದ್ದದ್ದು ಮೋದಿ ನೇತೃತ್ವದ ಬಿಜೆಪಿ ಸರಕಾರ. ಇನ್ನು ಅತ್ಯಾಚಾರಿಗಳ ವಿಚಾರದಲ್ಲಿ ಬಿಜೆಪಿ ಪಕ್ಷದ ವರ್ತನೆ ಎಂತಹದ್ದು ಅನ್ನುವುದನ್ನು ನೋಡಿದರೆ ಆಘಾತವಾಗುತ್ತದೆ. ಜಮ್ಮು-ಕಾಶ್ಮೀರದ ಕಥುವಾದಲ್ಲಿ ಆಸಿಫಾ ಎಂಬ ಎಂಟು ವರ್ಷದ ಹೆಣ್ಣುಮಗುವನ್ನು ಆರು ದಿನಗಳ ಕಾಲ ನಿರಂತರ ಅತ್ಯಾಚಾರ ಮಾಡಿ, ಹತ್ಯೆ ಮಾಡಿದಾಗ ಬಿಜೆಪಿಯ ಸಚಿವರುಗಳು ಅತ್ಯಾಚಾರಿಗಳ ಪರವಾಗಿ ಪ್ರತಿಭಟನೆ ನಡೆಸಿದ್ದರು. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯನ್ನು ಸವರ್ಣೀಯರು ಅತ್ಯಾಚಾರ ಮಾಡಿ, ಹತ್ಯೆ ಮಾಡಿದಾಗ ಬಿಜೆಪಿಯ ಯೋಗಿ ಆದಿತ್ಯನಾಥ್ ಸರಕಾರ, ಯುವತಿಯ ಶವವನ್ನು ರಾತ್ರೋರಾತ್ರಿ ಮನೆಯವರ ಅನುಮತಿಯೂ ಇಲ್ಲದೆ ಸುಟ್ಟುಹಾಕಿ, ಅತ್ಯಾಚಾರಿಗಳ ರಕ್ಷಣೆಗೆ ಹರಸಾಹಸ ಪಟ್ಟಿತು. ಉನ್ನಾವೋದಲ್ಲಿ ಬಿಜೆಪಿ ಶಾಸಕನೇ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ, ಆಕೆಯ ಮನೆಯವರನ್ನೆಲ್ಲ ಹತ್ಯೆ ಮಾಡಿದ್ದು ಸಾಲದೆ, ಆಕೆ ನ್ಯಾಯಾಯಲಕ್ಕೆ ಹೋಗುವ ದಾರಿ ಮಧ್ಯದಲ್ಲೇ ಅಪಘಾತ ಮಾಡಿಸಿ ಕೊಂದು ಹಾಕಿದ. 2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನು ಎಂಬ ಗರ್ಭಿಣಿಯನ್ನು ಆಕೆಯ ಮಗಳ ಎದುರೇ ಗ್ಯಾಂಗ್ ರೇಪ್ ಮಾಡಿದ ಆರೋಪಿಗಳನ್ನು ಸಚ್ಚಾರಿತ್ರ್ಯದ ಆಧಾರದಲ್ಲಿ ಬಿಡುಗಡೆ ಮಾಡಿ, ಹೊರಬಂದ ಅವರನ್ನು ಸನ್ಮಾನಿಸಿ, ವೇದಿಕೆ ಹಂಚಿಕೊಂಡಿದ್ದು ಇದೇ ಬಿಜೆಪಿ ನಾಯಕರು. ತಮ್ಮ ಮೇಲೆ ಬಿಜೆಪಿ ಸಂಸದ, ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಮಹಿಳಾ ಕುಸ್ತಿಪಟುಗಳು ಪ್ರತಿಭಟಿಸಿದಾಗ, ಅವರ ವಿರುದ್ಧ ಮೋದಿ ಸರಕಾರ ಹೇಗೆಲ್ಲ ನಡೆದುಕೊಂಡಿತು ಎನ್ನುವುದನ್ನೂ ಕಂಡಿದ್ದೇವೆ.

ದೇಶದಲ್ಲಿ ಇವತ್ತಿಗೂ ಇಷ್ಟೆಲ್ಲ ಅತ್ಯಾಚಾರಗಳು ನಡೆಯುತ್ತಿದ್ದರೂ, ಸ್ವತಃ ತಾನೇ ಅತ್ಯಾಚಾರಿಗಳ ಪರವಾಗಿ ನಿಂತ ನಗ್ನ ನಿದರ್ಶನಗಳು ಕಣ್ಣ ಮುಂದೆ ಇದ್ದರೂ, ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎಂಬ ಕಾರಣಕ್ಕೆ ಕೋಲ್ಕತಾ ವೈದ್ಯೆಯ ಅತ್ಯಾಚಾರದ ವಿರುದ್ಧ, ಸಮಾಜದ ನೈತಿಕ ಪ್ರಜ್ಞೆಯನ್ನು ಬಳಸಿಕೊಂಡು ಬಿಜೆಪಿ ಆಂದೋಲನ ರೂಪಿಸುತ್ತಿದೆ. ವೈದ್ಯೆಯ ಮೇಲೆ ನಡೆದುದು ಮಾತ್ರ ಅತ್ಯಾಚಾರವಲ್ಲ; ಯಾವುದೇ ಹೆಣ್ಣಿನ ಮೇಲೆ ನಡೆಯುವ ಪುರುಷಾಧಿಪತ್ಯದ ಪ್ರತೀ ಲೈಂಗಿಕ ಅತಿಕ್ರಮಣಗಳೂ ಅತ್ಯಾಚಾರಗಳೇ. ಹಾಗಿರುವಾಗ, ಕೋಲ್ಕತಾದ ಅತ್ಯಾಚಾರದ ವಿರುದ್ಧ ಮಾತ್ರ ಒಂದು ವ್ಯವಸ್ಥಿತ ಆಂದೋಲನ ರೂಪುಗೊಳ್ಳುತ್ತಿರುವುದನ್ನು, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಳ್ಳುವುದನ್ನು, ಹರ್‌ಭಜನ್ ಸಿಂಗ್ ತರಹದ ಕ್ರಿಕೆಟರ್‌ಗಳು ಪತ್ರ ಬರೆಯುವುದನ್ನು, ಸಿನೆಮಾ ಸೆಲೆಬ್ರಿಟಿಗಳು ಕಂಬನಿಗರೆಯುವುದನ್ನೂ ನಾವು ಹೇಗೆಲ್ಲ ಪರಿಗಣಿಸಬೇಕು? ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ‘ಪ್ರಬಲ’ ಎಂದು ವಿಂಗಡಿಸಬಹುದಾದ ವೈದ್ಯ ಸಮೂಹದಲ್ಲಿ ಬಿಜೆಪಿ ಮತ್ತು ಕೋಮುವಾದದ ಐಡಿಯಾಲಜಿಗಳೊಂದಿಗೆ ಮಿಳಿತವಾದವರೇ ಹೆಚ್ಚು. ಅದನ್ನು ಬಳಸಿಕೊಂಡು ದೇಶಾದ್ಯಂತ ವೈದ್ಯರು ಪ್ರತಿಭಟಿಸುವಂತೆ ಇದನ್ನು ಡಿಸೈನ್ ಮಾಡಿರುವ ಸಾಧ್ಯತೆ ಹೆಚ್ಚು. ಅಂದಹಾಗೆ, ಕೋಲ್ಕತಾದ ಘಟನೆ ನಡೆದ ತರುವಾಯ, ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ವೈದ್ಯನೇ, ನರ್ಸ್ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ವರದಿಯಾಯಿತು. ಇಲ್ಲಿ ಅತ್ಯಾಚಾರದ ಆರೋಪಿಯೇ ವೈದ್ಯ! ಅದಕ್ಕೆ ನಮ್ಮ ಸಮಾಜ ಕೋಲ್ಕತಾ ಪ್ರಕರಣಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ಯಾಕೆ ಕೊಡಲಿಲ್ಲ? ಆಂದೋಲನಗಳು ಗರಿಬಿಚ್ಚಲಿಲ್ಲ?

ಒಂದು ಸಮಚಿತ್ತದ ಕಾಲ ಅಥವಾ ಸಂವೇದನಾತ್ಮಕ ಆಡಳಿತದ ಕಾಲಘಟ್ಟದಲ್ಲಿ ನಾವು ಇದ್ದಿದ್ದರೆ ಖಂಡಿತ, ಇಂತಹ ಯಾವ ಪ್ರಶ್ನೆಗಳನ್ನೂ ಕೇಳಿಕೊಳ್ಳದೆ ಆ ಘಟನೆಯನ್ನು ಖಂಡಿಸುವುದು ನಮ್ಮ ಜವಾಬ್ದಾರಿಯಾಗುತ್ತಿತ್ತು. ಆದರೆ, ಅಂತಹ ಕಾಲಘಟ್ಟದಲ್ಲಿ ನಾವಿಲ್ಲ. ಈಗ ಪ್ರತೀ ವಿದ್ಯಮಾನವನ್ನೂ ರಾಜಕೀಯವಾಗಿ ಅಳೆದುತೂಗಿ ಹುನ್ನಾರವನ್ನು ಹೆಣೆಯಲಾಗುತ್ತಿದೆ. ಸಂತ್ರಸ್ತರು ಮತ್ತು ಆಪಾದಿತರ ಜಾತಿ, ಧರ್ಮಗಳನ್ನು ಆಧರಿಸಿ ಅಭಿಪ್ರಾಯಗಳನ್ನು ರೂಪಿಸಲಾಗುತ್ತಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ನಮ್ಮ ನೈತಿಕ ಪ್ರಜ್ಞೆ ಮತ್ತು ಸಾಮಾಜಿಕ ಹೊಣೆಗಾರಿಕೆಗಳೂ ತುಸು ತಾಲೀಮು ನಡೆಸಿಯೇ ಅಭಿವ್ಯಕ್ತಗೊಳ್ಳಬೇಕಾಗುತ್ತದೆ.

ಈಗ ಕರ್ನಾಟಕದ ರಾಜಕೀಯ ವಿಚಾರಕ್ಕೆ ಬರೋಣ. ಸಿಎಂ ಸಿದ್ದರಾಮಯ್ಯನವರ ಮೇಲೆ ಮುಡಾ ಸೈಟು ಹಂಚಿಕೆಯ ಆರೋಪವನ್ನು ಹೊರಿಸಿ, ರಾಜ್ಯಪಾಲರ ಮೂಲಕ ತನಿಖೆಗೂ ಅನುಮತಿ ಕೊಡಿಸಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಎಂಥವರಿಗೇ ಆದರೂ ಬಿಜೆಪಿ-ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪ ಎಷ್ಟು ನಿರಾಧಾರವಾದುದು ಮತ್ತು ರಾಜ್ಯಪಾಲರ ನಡೆ ಎಂತಹ ರಾಜಕೀಯ ಪ್ರೇರಿತವಾದುದು ಎಂಬುದು ಮನದಟ್ಟಾಗುತ್ತದೆ. ಆದರೆ ಪ್ರಜ್ಞಾವಂತರು, ಪ್ರಗತಿಪರರು ಎನಿಸಿಕೊಂಡ ಒಂದಷ್ಟು ಜನ ಕೂಡಾ ‘‘ಆರೋಪ ಬಂದಿದೆ, ಸಿದ್ದರಾಮಯ್ಯನವರು ರಾಜೀನಾಮೆ ನೀಡಿ, ತನಿಖೆ ಎದುರಿಸಿ ನಿರಪರಾಧಿ ಎಂದು ಸಾಬೀತು ಪಡಿಸಲಿ. ಆಮೇಲೆ ಬೇಕಾದರೆ ಸಿಎಂ ಆಗಲಿ’’ ಎಂಬ ಸಿನಿಕತನದ ಮಾತುಗಳನ್ನಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕ ಕಾರಣಕ್ಕೋ, ಜಾತಿಯ ಕಾರಣಕ್ಕೋ ಅಥವಾ ಅವಕಾಶ ವಂಚನೆಯ ಕಾರಣಕ್ಕೋ ಮುನಿಸಿಕೊಂಡ ಇಂತಹ ಪ್ರಜ್ಞಾವಂತರ ಈ ಅಭಿಪ್ರಾಯ, ಮೇಲೆ ವಿವರಿಸಿದಂತೆ ಕೋಮುವಾದಿಗಳ ಹುನ್ನಾರಕ್ಕೆ ದನಿಯಾಗುವ ರೂಪಕ ಎನ್ನಬಹುದು. ಅಂತಹವು ಕಾಲದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದ ಒಣನೈತಿಕತೆಯ ಮಾತುಗಳೆನಿಸುತ್ತವೆ. ಆರೋಪ ಮತ್ತು ಹುನ್ನಾರಗಳ ನಡುವೆ ವ್ಯತ್ಯಾಸವನ್ನು ಗುರುತಿಸಿಕೊಳ್ಳದೆ ಹೋದರೆ, ನಮ್ಮ ನೈತಿಕ ಪ್ರಜ್ಞೆ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಗ್ಗುಲು ಮುರಿಯಬೇಕೆನ್ನುವ ಕೋಮುವಾದಿಗಳ ಹಠ ಎಷ್ಟು ತೀಕ್ಷ್ಣವಾದುದು ಎಂಬುದನ್ನು ಅರ್ಥ ಮಾಡಿಕೊಂಡ ನಂತರವೂ, ಅವರ ಹುನ್ನಾರಗಳನ್ನು ಖಂಡಿಸದೇ ಉಳಿಯುವುದು, ಅವರ ಹುನ್ನಾರಗಳಿಗೆ ಹೆಗಲುಕೊಟ್ಟಷ್ಟೇ ಅಪಾಯಕಾರಿ. ಅಂತಹದ್ದರಲ್ಲಿ, ಅವರ ದನಿಗಳಿಗೆ ಮಾನ್ಯತೆ ತಂದುಕೊಡುವಂತೆ ನಮ್ಮ ನೈತಿಕ ಪ್ರಜ್ಞೆಗಳನ್ನು ಅವರಿಗೆ ನೆರವಿಡಲು ಮುಂದಾಗುವುದರ ಪರಿಣಾಮ ಏನಾದೀತು? ಇಷ್ಟು ಮಾತ್ರ ಎಚ್ಚರ ನಮಗೆ ಇರಬೇಡವೇ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಾಚಯ್ಯ ಎಂ. ಹಿಪ್ಪರಗಿ

contributor

Similar News