ಕುಂದಾಪುರದ ಸೃಜನಾರಿಂದ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ
ಕುಂದಾಪುರ: ಬಾಲ್ಯದಿಂದಲೂ ವಾಕ್ ಹಾಗೂ ಶ್ರವಣ ಸಮಸ್ಯೆ ಹೊಂದಿರುವ ವಿಶೇಷ ಚೇತನ ಮಗಳನ್ನು ಸಾಮಾನ್ಯ ಮಗುವಿನಂತೆ, ಒಬ್ಬ ಸಾಧಕಿಯನ್ನಾಗಿ ಬೆಳೆಸುವ ಛಲ ಆಕೆಯ ತಂದೆ-ತಾಯಿಯದು. ಅವರು ಅಂದು ತೊಟ್ಟ ದೃಢ ನಿರ್ಧಾರ ಇಂದು ಫಲ ನೀಡಿದೆ. ಕ್ರೀಡೆಯಲ್ಲಿ ಮಗಳ ಸಾಧನೆಯನ್ನು ಕಂಡು ಇದೀಗ ಪೋಷಕರು ಸಂಭ್ರಮಿಸುತ್ತಿದ್ದಾರೆ.
ಕುಂದಾಪುರ ನಗರದ ವಿಠಲವಾಡಿ ಎಂಬಲ್ಲಿನ ಸುಧಾಕರ ಹಾಗೂ ಸವಿತಾ ದಂಪತಿಯ ಪುತ್ರಿ ಸೃಜನಾ ಎಸ್.ಪಿ.(19) ಕ್ರಿಕೆಟ್‌ನಲ್ಲಿ ಎಲ್ಲರೂ ಮೂಗಿನ ಮೇಲೆ ಬೆರಳಿರಿಸುವಂತೆ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹರ್ಯಾಣದಲ್ಲಿ ನಡೆದ ರಾಷ್ಟ್ರೀಯ ಕಿವುಡ ಮಹಿಳೆಯರ ಕ್ರಿಕೆಟ್ ಟೂರ್ನಿಯಲ್ಲಿ ಸೃಜನಾ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಆಡಿದ್ದು, ಇವರ ತಂಡ ರಾಷ್ಟ್ರೀಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ!
ವಾಕ್-ಶ್ರವಣ ದೋಷ: ಸೃಜನಾ ತಂದೆ ತಾಯಿಗೆ ಒಬ್ಬಳೇ ಮಗಳು. ತಂದೆ ಕುಂದಾಪುರದಲ್ಲಿ ಕೂಲ್ ಡ್ರಿಂಕ್ಸ್ ಅಂಗಡಿ ಹೊಂದಿದ್ದು, ತಾಯಿ ಬ್ಯೂಟಿಶಿಯನ್ ವೃತ್ತಿ ಮಾಡಿಕೊಂಡಿದ್ದಾರೆ. ಮಗುವಾಗಿದ್ದಾಗ ಸೃಜನಾ ಒಂದೂವರೆ ವರ್ಷವಾದರೂ ಮಾತನಾಡದೇ ಇದ್ದಾಗ ಅನುಮಾನಗೊಂಡ ಪೋಷಕರು ಬೆಂಗಳೂರಿನ ಆಸ್ಪತ್ರೆಗೆ ತೋರಿಸುತ್ತಾರೆ. ಆಕೆಗೆ ಶೇ.80ರಷ್ಟು ಕಿವಿ ಸಮಸ್ಯೆ ಇದ್ದು, ಕಿವಿ ಕೇಳಿಸಲ್ಲ ಹಾಗೂ ಇದರಿಂದ ಸಹಜವಾಗಿ ಮಾತನಾಡಲು ಆಗುವುದಿಲ್ಲ ಎಂಬುದನ್ನು ವೈದ್ಯರು ದೃಢೀಕರಿಸುತ್ತಾರೆ. ಇದನ್ನು ಕೇಳಿ ಪೋಷಕರು ಹೆಣ್ಣು ಮಗುವಿನ ಭವಿಷ್ಯ ನೆನೆದು ಚಿಂತಾಕ್ರಾಂತರಾಗುತ್ತಾರೆ. ಆದರೆ ಧೃತಿಗೆಡದ ಅವರು ಮಗಳನ್ನು ಸಾಧನೆಯ ಹಾದಿಯತ್ತ ಮುಖ ಮಾಡಿಸುತ್ತಾರೆ.
ಸೃಜನಾಳಿಗೆ ಸುಮಾರು 4 ವರ್ಷ 3 ತಿಂಗಳಿರುವಾಗ ಅಂಪಾರು- ಮೂಡುಬಗೆಯಲ್ಲಿರುವ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯ ಶಿಕ್ಷಕಿ ರಾಜೇಶ್ವರಿ ಎನ್ನುವವರು ಮನೆಗೆ ಬಂದು ಆಕೆಗೆ ಮಾತಿನ ತರಬೇತಿ (ಸ್ಪೀಚ್ ಟ್ರೈನಿಂಗ್) ನೀಡಲು ಪ್ರಾರಂಭಿಸುತ್ತಾರೆ. ಸುಮಾರು ಐದು ವರ್ಷಗಳ ಸತತ ತರಬೇತಿಯಿಂದ ಈಗ ಸೃಜನಾ ಜೊತೆ ಮುಖತಃ ಮಾತನಾಡಿದರೆ ಸರಳ ಪದಗಳನ್ನು ಮಾತನಾಡುತ್ತಾಳೆ. ತಂದೆ-ತಾಯಿ, ಮನೆಯವರೊಂದಿಗೆ ಭಾಗಶಃ ಅವಳದ್ದೆ ಶೈಲಿಯಲ್ಲಿ ಮಾತನಾಡುತ್ತಾಳೆ. ತುಟಿ ಚಲನೆಯ ಮೂಲಕ (ಲಿಪ್ ರೀಡಿಂಗ್) ಎದುರಿನವರು ಆಡುವ ಮಾತನ್ನು ಅರ್ಥ ಮಾಡಿಕೊಂಡು ಅದಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಆಕೆ ಪಡೆದಿದ್ದಾರೆ.
ಬಹುಮುಖ ಪ್ರತಿಭೆ
ಬಾಲ್ಯದಿಂದಲೇ ಚುರುಕು ಸ್ವಭಾವದ ಸೃಜನಾ 1ರಿಂದ 8ನೇ ತರಗತಿಯನ್ನು ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಹಾಗೂ 9 ಮತ್ತು ಎಸೆಸೆಲ್ಸಿ ಶಿಕ್ಷಣವನ್ನು ಮೈಸೂರಿನ ಪುಟ್ಟವೀರಮ್ಮ ಶಾಲೆಯಲ್ಲಿ ಮುಗಿಸುತ್ತಾಳೆ. ಶಾಲೆಯಲ್ಲಿ ಚಿತ್ರಕಲೆ, ನೃತ್ಯ, ಗುಂಡೆಸೆತ, ಚೆಸ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಆಕೆಗೆ ಶಿಕ್ಷಕಿ ಪ್ರಮೀಳಾ ನೃತ್ಯ ತರಬೇತಿ ನೀಡಿದ್ದರು. ಇನ್ನು ಸ್ಥಳೀಯ ಕೀಳೇಶ್ವರಿ ಯೂತ್ ಕ್ಲಬ್ ಹಾಗೂ ವಿಠಲವಾಡಿ ಫ್ರೆಂಡ್ಸ್ ಈಕೆಯ ಕ್ರೀಡಾ ಸಾಧನೆಗೆ ಮತ್ತಷ್ಟು ಪ್ರೋತ್ಸಾಹಿಸುತ್ತಿದೆ. ಸೃಜನಾ ಪಠ್ಯ ಚಟುವಟಿಕೆಯಲ್ಲೂ ಮುಂದಿದ್ದು, ಪ್ರತೀ ತರಗತಿಯಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗುತ್ತಿದ್ದಳು. 10ನೇ ತರಗತಿ ಬಳಿಕ ಹೆಚ್ಚಿನ ವಿದ್ಯಾಭ್ಯಾಸದ ಆಸೆಯಿದ್ದರೂ ಕೊರೋನ ವೇಳೆ ಆನ್‌ಲೈನ್ ತರಗತಿಯ ಸಮಸ್ಯೆಯಿಂದಾಗಿ ಹೆಚ್ಚುವರಿ ಶಿಕ್ಷಣಕ್ಕೆ ಕಡಿವಾಣ ಬಿದ್ದಿತ್ತು. ನಂತರ ಬ್ಯೂಟಿಶಿಯನ್ ವೃತ್ತಿ ಕಲಿತು ಇದೀಗ ತಾಯಿಯೊಂದಿಗೆ ವೃತ್ತಿಯಲ್ಲಿ ಜೊತೆಯಾಗಿದ್ದಾರೆ.
ಕ್ರಿಕೆಟ್ ಅಚ್ಚುಮೆಚ್ಚು, ತಂದೆಯೇ ಸ್ಫೂರ್ತಿ.!
ಸೃಜನಾ ತಂದೆ ಸುಧಾಕರ್‌ಗೆ ಕ್ರಿಕೆಟ್‌ನಲ್ಲಿ ವಿಪರೀತ ಆಸಕ್ತಿ. ಇಂದಿಗೂ ನಿತ್ಯ ಬೆಳಗ್ಗೆ 2 ಗಂಟೆ ಹೊತ್ತು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ತಂದೆ ಹಾಗೂ ಮನೆಯವರ ಜೊತೆ ಮನೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಆಕೆ ವಿದ್ಯಾಭ್ಯಾಸ ಮುಗಿಸಿ ಊರಿಗೆ ಬಂದಾಗ ಕ್ರಿಕೆಟ್ ಆಟವನ್ನು ಇನ್ನಷ್ಟು ನೆಚ್ಚಿಕೊಂಡಳು. ಈಕೆಯ ಕ್ರಿಕೆಟ್ ಆಸಕ್ತಿಗೆ ನೀರೆರೆದು ಪ್ರೋತ್ಸಾಹ ನೀಡಿದವರು ಕಿವುಡರ ವಿಭಾಗದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಪೃಥ್ವಿರಾಜ ಶೆಟ್ಟಿ ಮತ್ತವರ ತಂಡ. ಸೃಜನಾಳನ್ನು ಇನ್ನಷ್ಟು ತರಬೇತುಗೊಳಿಸಿದ್ದು ಜಸ್ಲೀನ್‌ರ ಸಹಕಾರದಲ್ಲಿ ಕ್ರಿಕೆಟ್ ತರಬೇತಿ ನಿರಂತರವಾಗಿ ನಡೆಯುತ್ತಿದೆ. 2022ರಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಈಕೆ ಆಡಿದ್ದ ತಂಡ ದ್ವಿತೀಯ ಸ್ಥಾನ ಗಳಿಸಿತ್ತು. ಹೀಗಾಗಿ ಸೃಜನಾ ರಾಜ್ಯ ಮಟ್ಟದಲ್ಲಿ ಆಯ್ಕೆಗಾರರ ಗಮನ ಸೆಳೆದಿದ್ದರು.
ಬಾಲ್ಯದಲ್ಲಿ ಸೃಜನಾಳ ಪರಿಸ್ಥಿತಿ ನೋಡಿ ಒತ್ತಡ-ನೋವಿತ್ತು. ಆದರೆ ಈಗ ಮಗಳ ಸಾಧನೆ ನೋಡುವಾಗ ಮನಸ್ಸಿನ ಎಲ್ಲಾ ನೋವುಗಳು ಮಾಯವಾಗಿದ್ದು ಖುಷಿಯನ್ನು ವರ್ಣಿಸಲು ಪದಗಳಿಲ್ಲ. ಅವಳಿಗೆ ವಿವಿಧೆಡೆಗಳಿಂದ ಸನ್ಮಾನಗಳು ಅರಸಿ ಬರುತ್ತಿವೆ. ಕ್ರೀಡೆ ಸಹಿತ ವಿವಿಧ ಕ್ಷೇತ್ರದಲ್ಲಿ ಅವಳು ಸಾಧನೆ ಮಾಡುತ್ತಿದ್ದು ಛಲವಿಟ್ಟುಕೊಂಡಿದ್ದಾಳೆ. ಇಂತಹ ಮಕ್ಕಳನ್ನು ಕಡೆಗಣಿಸದೆ ಅವರಿಚ್ಛೆಯ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡಿದಾಗ ಸಾಧಿಸುತ್ತಾರೆ.
ಸುಧಾಕರ ಮತ್ತು ಸವಿತಾ, ಸೃಜನಾ ತಂದೆ-ತಾಯಿ
ಸೃಜನಾ 1-8ನೇ ತರಗತಿಯವರೆಗೆ ನಮ್ಮ ಶಾಲೆಯಲ್ಲಿ ಓದಿದ ಹೆಮ್ಮೆಯ ವಿದ್ಯಾರ್ಥಿನಿ. ಆಕೆ ಚಿತ್ರಕಲೆ, ನೃತ್ಯ, ನಾಟಕ ಹಾಗೂ ಕ್ರೀಡೆಯಲ್ಲಿ ಪ್ರತಿಭಾವಂತೆಯಾಗಿರುವುದು ಖುಷಿ ಮತ್ತು ಹೆಮ್ಮೆಯ ವಿಚಾರ. ಸ್ವಂತ ಕಾಲಿನ ಮೇಲೆ ನಿಂತು ಸ್ವತಂತ್ರವಾಗಿ ಬದುಕುವ ಎಲ್ಲಾ ಶಕ್ತಿ ಹಾಗೂ ಗುಣಗಳು ಆಕೆಯಲ್ಲಿದೆ.
-ಎಚ್.ರವೀಂದ್ರ, ಮುಖ್ಯ ಶಿಕ್ಷಕ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ ಅಂಪಾರು, ಮೂಡುಬಗೆ