31 ಜಿಲ್ಲೆಗಳ 12,671 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು

ಬೆಂಗಳೂರು : ರಾಜ್ಯದ ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಒಟ್ಟಾರೆ 31 ಜಿಲ್ಲೆಗಳಲ್ಲಿನ 12,671 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಇದೆ. ಹಾಸನ ಜಿಲ್ಲೆಯೊಂದರಲ್ಲೇ 2,674 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಇದೆ. ಜಿಲ್ಲಾವಾರು ಪಟ್ಟಿಯಲ್ಲಿ ಶೇ.30ಕ್ಕಿಂತ ಕಡಿಮೆ ನೀರು ಇರುವ ಕೆರೆಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆ ಅಗ್ರ ಸ್ಥಾನ ಪಡೆದುಕೊಂಡಿದೆ.
ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಕೆರೆಗಳಲ್ಲಿ ನೀರು ತುಂಬಿಸುವುದು ಮತ್ತು ಜೀರ್ಣೋದ್ಧಾರ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಸರಕಾರದಿಂದ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿದೆ. ಅನುದಾನ ಒದಗಿಸಿದಲ್ಲಿ ಮಾತ್ರ ಕೆರೆಗಳ ಪುನಃಶ್ಚೇತನ ಮಾಡಬಹುದು ಎಂದು ವಿವರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 2025ರ ಎಪ್ರಿಲ್ 22ರಂದು ಕೆರೆಗಳಲ್ಲಿನ ನೀರಿನ ಪ್ರಮಾಣ ಕುರಿತು ನಡೆಯಲಿರುವ ಸಭೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಈ ಮಾಹಿತಿ ನೀಡಿದೆ. ಇದರ ಪ್ರತಿಯು ‘ಣhe-ಜಿiಟe.iಟಿ‘ಗೆ ಲಭ್ಯವಾಗಿದೆ.
ಕಳೆದ ವರ್ಷ ಅಂದರೆ 2024 ಮೇ ಆರಂಭದಲ್ಲಿಯೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. 2024ರ ಮೇ ತಿಂಗಳಲ್ಲಿ 16,625 ಕೆರೆಗಳಲ್ಲಿ ಶೇ.30ಕ್ಕಿಂತಲೂ ಕಡಿಮೆ ಪ್ರಮಾಣದ ನೀರಿತ್ತು.
ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ 2,805 ಕೆರೆಗಳಲ್ಲಿ ಎಷ್ಟು ಕೆರೆಗಳಲ್ಲಿ ನೀರು ಇದೆ, ಶೇ.30ಕ್ಕಿಂತ ಕಡಿಮೆ ನೀರಿದೆ ಎಂಬ ವಿವರವನ್ನು ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆಗೆ ಒದಗಿಸಿಲ್ಲ. ಅದೇ ರೀತಿ ರಾಯಚೂರು ಜಿಲ್ಲೆಯ 221 ಕೆರೆಗಳಲ್ಲಿ, ಚಾಮರಾಜನಗರ ಜಿಲ್ಲೆಯಲ್ಲಿ 1,715 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರಿರುವ ಕೆರೆಗಳ ಸಂಖ್ಯೆ ಎಷ್ಟಿವೆ ಎಂಬ ಬಗ್ಗೆಯೂ ವಿವರಗಳನ್ನು ಇದುವರೆಗೂ ಒದಗಿಸಿಲ್ಲ ಎಂದು ತಿಳಿದು ಬಂದಿದೆ.
ಬಾಗಲಕೋಟೆ ಸೇರಿದಂತೆ ರಾಜ್ಯದ 31 ಜಿಲ್ಲೆಗಳಲ್ಲಿ 32,648 ಕೆರೆಗಳಿವೆ. ಈ ಪೈಕಿ 16,185 ಕೆರೆಗಳಲ್ಲಿ ಹೂಳು ತುಂಬಿದೆ. ಕಳೆ, ಜೊಂಡು ತುಂಬಿರುವ ಕೆರೆಗಳ ಸಂಖ್ಯೆ ರಾಜ್ಯದಲ್ಲಿ 11,771ರಷ್ಟಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ 160 ಕೆರೆಗಳಲ್ಲಿ 84 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರಿದೆ. 160 ಕೆರೆಗಳಲ್ಲಿ 44 ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದರೇ 62 ಕೆರೆಗಳಲ್ಲಿ ಕಳೆ, ಜೊಂಡು ಬೆಳೆದು ನಿಂತಿದೆ. ಬಳ್ಳಾರಿಯಲ್ಲಿನ 21 ಕೆರೆಗಳಲ್ಲಿ ನೀರಿದೆ. ಆದರೆ, 21 ಕೆರೆಗಳಲ್ಲಿ ಹೂಳು ತುಂಬಿದ್ದರೇ 5 ಕೆರೆಗಳಲ್ಲಿ ಕಳೆ, ಜೊಂಡು ಬೆಳೆದಿದೆ.
ಬಳ್ಳಾರಿ, ದಾವಣಗೆರೆ, ರಾಮನಗರ, ಉಡುಪಿ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಿದರೆ ಕೆರೆಗಳ ಪುನಶ್ಚೇತನ ಮಾಡಬಹುದು ಎಂದು ಇಲಾಖೆಯು ವಿವರಿಸಿದೆ. ಅದೇ ರೀತಿ ಕೆಲವು ಜಿಲ್ಲೆಗಳು ನೀಡಿರುವ ಕೆರೆಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 1,887 ಕೆರೆಗಳು ಎಂದು ನಮೂದಿಸಿದೆ. ಆದರೆ ಜಿಲ್ಲೆಯ ತಾಲೂಕು ಪಂಚಾಯತ್‌ಗಳ ವರದಿ ಪ್ರಕಾರ 2,176 ಕೆರೆಗಳು ಇವೆ.
ವಿಜಯನಗರ ಜಿಲ್ಲೆಯಲ್ಲಿನ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿ 93 ಕೆರೆಗಳು ಬರಲಿವೆ. ಮಳೆ ಪ್ರಮಾಣ ಕಡಿಮೆಯಾಗಿರುವುದು ಮತ್ತು ಬೇಸಿಗೆ ಇರುವ ಕಾರಣ ಕೆರೆಗಳು ಬತ್ತಿ ಹೋಗಿವೆ. ಅನುದಾನ ಒದಗಿಸಿದಲ್ಲಿ ಕೆರೆಗಳ ಹೂಳು ತೆಗೆಯಬಹುದು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಇಲಾಖೆಯು ಹೇಳಿದೆ.
ಜಿಲ್ಲಾವಾರು ಪಟ್ಟಿ :
ಬೆಳಗಾವಿಯಲ್ಲಿ 57, ಬೆಂಗಳೂರು ನಗರ ಜಿಲ್ಲೆಯಲ್ಲಿ 287, ಬೆಂಗಳೂರು ಗ್ರಾಮಾಂತರದಲ್ಲಿ 244, ಬೀದರ್ 160, ಚಿಕ್ಕಬಳ್ಳಾಪುರ 1,278, ಚಿಕ್ಕಮಗಳೂರು 115, ದಕ್ಷಿಣ ಕನ್ನಡ 130, ದಾವಣಗೆರೆ 82, ಧಾರವಾಡ 388, ಗದಗ 72, ಹಾಸನ 2,674, ಹಾವೇರಿ, ಕಲಬುರಗಿ 33, ಕೊಡಗು 470, ಕೋಲಾರ 1,546, ಕೊಪ್ಪಳ 26, ಮಂಡ್ಯ 231, ರಾಮನಗರ 492, ಶಿವಮೊಗ್ಗ 1,253, ತುಮಕೂರು 725, ಉಡುಪಿ 7, ಉತ್ತರ ಕನ್ನಡ 1,434, ವಿಜಯಪುರ 47, ವಿಜಯನಗರ 54 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 83 ಕೆರೆಗಳಲ್ಲಿ ಶೇ.30ಕ್ಕಿಂತಲೂ ಕಡಿಮೆ ನೀರಿದೆ.
ಹಾಗೆಯೇ ಹಾಸನ ಜಿಲ್ಲೆಯಲ್ಲಿನ 6,367 ಕೆರೆಗಳ ಪೈಕಿ 4,048 ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಇದೇ ಹಾಸನ ಜಿಲ್ಲೆಯಲ್ಲಿ 5,411 ಕೆರೆಗಳಲ್ಲಿ ಕಳೆ, ಜೊಂಡು ಬೆಳೆದು ನಿಂತಿದೆ. ಚಿಕ್ಕಬಳ್ಳಾಪುರದಲ್ಲಿ 1,121, ರಾಮನಗರದಲ್ಲಿ 2,096 ಕೆರೆಗಳಲ್ಲಿ ಹೂಳು ತುಂಬಿಕೊಂಡಿರುವುದು ಗೊತ್ತಾಗಿದೆ.