ಶೋಷಿತರ ಬೆಳಕು-ಕುದ್ಮುಲ್ ರಂಗ ರಾವ್

Update: 2025-01-30 07:28 GMT
ಶೋಷಿತರ ಬೆಳಕು-ಕುದ್ಮುಲ್ ರಂಗ ರಾವ್
  • whatsapp icon

ವಿಮೋಚನ ಚಳವಳಿಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ವಿಶಿಷ್ಟ ಒಳನೋಟಗಳನ್ನು ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ ಅವರ ಕೃತಿಗಳು ಹೊಂದಿವೆ. ಸಂಶೋಧಕನಿಗೆ ಇರಬೇಕಾದ ಶ್ರಮ, ಆಳವಾದ ಅಧ್ಯಯನ, ಸತ್ಯದ ಹುಡುಕಾಟದ ತುಡಿತ ಇವೆಲ್ಲವನ್ನು ಅವರ ಅಧ್ಯಯನದಲ್ಲಿ ಕಾಣಬಹುದಾಗಿದೆ. ಗೌತಮಬುದ್ಧ, ಡಾ. ಬಿ.ಆರ್. ಅಂಬೇಡ್ಕರ್, ನಾರಾಯಣ ಗುರುಗಳು ಮೊದಲಾದ ವಿಮೋಚನಾ ಚಳವಳಿಯ ದಾರ್ಶನಿಕರ ಬದುಕಿನ ಬಗ್ಗೆ ಬರೆದ ಕೃತಿಗಳಲ್ಲಿ ಈ ಅಂಶಗಳನ್ನು ಕಾಣಬಹುದಾಗಿದೆ. ದಲಿತ ಚಳವಳಿಯ ಬಗ್ಗೆ ವಿಮರ್ಶಾತ್ಮಕ ಚಿಂತನೆ ಅವರ ಕೃತಿಗಳಲ್ಲಿವೆ. ಈಗ ಇಂತಹ ಕೃತಿಗಳ ಸಾಲಿಗೆ ಸೇರುವ ಇನ್ನೊಂದು ಮಹತ್ವದ ಕೃತಿ ‘ಶೋಷಿತರ ಬೆಳಕು-ಕುದ್ಮುಲ್ ರಂಗರಾವ್’

ಸ್ವಾತಂತ್ರ್ಯಪೂರ್ವದ ಕರಾವಳಿ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದವರು ಕುದ್ಮುಲ್ ರಂಗರಾಯರು. ಮೇಲ್ಜಾತಿಯೆಂದು ಗುರುತಿಸಲ್ಪಟ್ಟ ಸಾಂಪ್ರದಾಯಿಕ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ದಲಿತ ವಿಮೋಚನೆಗೆ ಅವರು ಮಾಡಿದ ಕಾರ್ಯಗಳು ಆ ಕಾಲದ ದೃಷ್ಟಿಯಿಂದ ನಿಜವಾಗಿಯೂ ಮಹಾನ್ ಸಾಹಸವಾಗಿದೆ. ಶೋಷಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ಜಾತಿ ತಾರತವ್ಯ, ಅಮಾನವೀಯ ಅಸ್ಪಶ್ಯತೆ ಎಲ್ಲವನ್ನೂ ಅತೀ ಹತ್ತಿರದಿಂದ ಕಂಡ ರಂಗರಾವ್ ಅವರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಅದನ್ನು ಪ್ರತಿಭಟಿಸಿದರು. ಶಿಕ್ಷಣವೇ ಎಲ್ಲಾ ವಿಮೋಚನೆ ದಾರಿ ಎಂಬುದನ್ನು ಕಂಡುಕೊಂಡ ಕುದ್ಮುಲ್ ರಂಗರಾಯರು ದಲಿತ ಮತ್ತು ಹಿಂದುಳಿದವರ ಶಿಕ್ಷಣಕ್ಕೆ ಮಹತ್ವ ನೀಡಿ, ಅವರ ವಿಮೋಚನೆಯ ದಾರಿ ತೆರೆದರು. ಅವರ ಸಾಮಾಜಿಕ ಸೇವಾ ಕಾರ್ಯಗಳು ಸ್ವಾತಂತ್ರ್ಯ ಚಳವಳಿಯ ಉದ್ದೇಶಗಳಿಗೆ ಪೂರಕವಾಗಿತ್ತು. ಈ ದೃಷ್ಟಿಯಿಂದ ಕುದ್ಮುಲ್ ರಂಗರಾವ್ ಅವರು ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಪ್ರಾತಃಸ್ಮರಣೀಯರಾಗಿದ್ದಾರೆ. ಇಂತಹ ಮಹಾನ್ ಚೇತನ ಕುದ್ಮುಲ್ ರಂಗ ರಾವ್ ಅವರನ್ನು ಮಹಾತ್ಮಾ ಗಾಂಧಿಯವರೇ ‘ನನ್ನ ಗುರುಗಳು’ ಎಂದು ಕರೆದಿರುವುದು ಅವರ ಉನ್ನತ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಇಂತಹ ತ್ಯಾಗಜೀವಿ ಕುದ್ಮುಲ್ ರಂಗರಾವ್ ಅವರ ಬದುಕಿನ ಸಮಗ್ರ ಚಿತ್ರಣವನ್ನು ನೀಡುವಲ್ಲಿ ಡಾ. ಕೆ.ಪಿ. ಮಹಾಲಿಂಗು ಯಶಸ್ವಿಯಾಗಿದ್ದಾರೆ.

ಮೊದಲೆರಡು ಅಧ್ಯಾಯಗಳಲ್ಲಿ ಕುದ್ಮುಲ್ ರಂಗರಾವ್ ಅವರ ವಿಮೋಚನಾ ಹೋರಾಟಕ್ಕೆ ಪೂರಕವಾಗಿ ಆ ಕಾಲದ ಕರಾವಳಿಯ ಸಾಮಾಜಿಕ ಸ್ಥಿತಿಯನ್ನು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ತಮಿಳುನಾಡಿನ ಭೌಗೋಳಿಕ ಹಿನ್ನೆಲೆಯೊಂದಿಗೆ ಇಲ್ಲಿನ ಸಾಮಾಜಿಕ ಚಿತ್ರಣವನ್ನು ನೀಡಿದ್ದಾರೆ. ಕರ್ನಾಟಕದ ಇತರ ಭಾಗಗಳಿಗಿಂತ ಭಿನ್ನವಾದ ಕರಾವಳಿಯ ಸಾಮಾಜಿಕ ರಚನೆಯನ್ನು ವಿವರಿಸಿದ್ದಾರೆ. ಭಾರತದ ಇತರ ಭಾಗಗಳ ಸಾಮಾಜಿಕ ರಚನೆಯ ಹಿನ್ನೆಲೆಯಲ್ಲಿ ಕರಾವಳಿಯ ಜಾತಿ ವ್ಯವಸ್ಥೆಯನ್ನು ವಿವರಿಸಲು ಸಾಧ್ಯವಿಲ್ಲ. ಉದಾಹರಣೆಗೆ ಇಲ್ಲಿನ ಬಂಟರು ಶೂದ್ರವರ್ಗಕ್ಕೆ ಸೇರಿದರೂ ಆಳುವ ವರ್ಗವಾಗಿದ್ದಾರೆ. ಈ ರೀತಿಯ ಹಲವು ಸಂಕೀರ್ಣತೆಗಳು ಇಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಪೂರ್ವದ ಇಲ್ಲಿನ ಜಾತಿ ವ್ಯವಸ್ಥೆ ಅದರಲ್ಲೂ ದಲಿತರ ಸ್ಥಿತಿಗತಿಗಳನ್ನು ವಸ್ತುನಿಷ್ಠವಾಗಿ ವಿವರಿಸಿದ್ದಾರೆ. ಕರಾವಳಿಯ ಸ್ವಾತಂತ್ರ್ಯಪೂರ್ವದ ಶೋಷಣಾ ವ್ಯವಸ್ಥೆಯ ಸ್ವರೂಪವು ರಂಗರಾವ್ ಅವರ ಸುಧಾರಣಾ ಕಾಯಕದ ಮಹತ್ವವನ್ನು ವಿವರಿಸುತ್ತದೆ.

ಕುದ್ಮುಲ್ ರಂಗರಾವ್ ಅವರ ಹುಟ್ಟು ಮತ್ತು ಬಾಲ್ಯದ ಸಮಗ್ರ ಚಿತ್ರಣವನ್ನು ಅಧ್ಯಾಯ ಮೂರರಲ್ಲಿ ನೀಡಲಾಗಿದೆ. ಶೋಷಿತ ಜನಾಂಗದ ನೋವನ್ನು ಕುದ್ಮುಲ್ ರಂಗರಾವ್ ಅವರು ಅರ್ಥ ಮಾಡಿಕೊಳ್ಳಲು ಅವರ ಬಾಲ್ಯದ ಅನುಭವಗಳು ಕಾರಣವಾಗಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಜೀವನದ ಕಷ್ಟನಷ್ಟಗಳು ಮತ್ತು ಸಮಾಜದ ತಾರತಮ್ಯ ವ್ಯವಸ್ಥೆ ರಂಗರಾವ್ ಅವರನ್ನು ಮಾನವೀಯ ವ್ಯಕ್ತಿಯಾಗಿ

ರೂಪಿಸಿ, ಇತರ ಮೇಲ್ಜಾತಿಯ ಜನರ ಯೋಚನಾ ಕ್ರಮಕ್ಕಿಂತ ಅವರನ್ನು ಭಿನ್ನವಾಗಿ ರೂಪಿಸಲು ಸಾಧ್ಯವಾದುದನ್ನು ಲೇಖಕರು ಈ ಅಧ್ಯಯನದಲ್ಲಿ ಚಿತ್ರಿಸಿದ್ದಾರೆ.

ಬಡವರಿಗೆ ಕುದ್ಮುಲ್ ರಂಗರಾಯರು ಹೇಗೆ ದಾರಿದೀಪವಾಗಿದ್ದರು ಎಂಬುದನ್ನು ನಾಲ್ಕನೆಯ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಪಾಠ ಎಂಬುವುದು ಮಾತ್ರವಲ್ಲ ಸಾಮಾಜಿಕ ಸ್ಪಂದನೆಯನ್ನು ಬೆಳೆಸಬೇಕು ಎಂಬುದಕ್ಕೆ ರಂಗರಾಯರು ಅತ್ಯುತ್ತಮ ಉದಾಹರಣೆಯಾಗಿದ್ದರು. ಅಸ್ಪಶ್ಯರ ಕುರಿತಾಗಿ ಮಾನವೀಯ ಅಂತಃಕರಣವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಅವರು ಸಫಲರಾಗಿದ್ದರು.

ವಕೀಲರಾದ ಬಳಿಕ ತಮ್ಮ ವೃತ್ತಿಯ ಮೂಲಕವೂ ದಲಿತ-ಹಿಂದುಳಿದವರ ಪರ ಹೋರಾಡುತ್ತಿದ್ದರು. ಪರಿಶಿಷ್ಟ ಜಾತಿ ಹೆಣ್ಣುಮಗಳೊಬ್ಬಳು ಸವರ್ಣೀಯನಿಂದ ಗರ್ಭವತಿಯಾಗಿ ಶೋಷಣೆಗೆ ಒಳಗಾದಾಗ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿ ನಿರ್ಗತಿಕ ಹೆಣ್ಣುಮಗಳಿಗೆ ಜೀವನಾಂಶ ಕೊಡಿಸಿದ ಘಟನೆ ಇದಕ್ಕೆ ಒಳ್ಳೆಯ ಉದಾಹರಣೆ. ಬಡವರ ಪರ ಹೋರಾಟದ ಕಾರಣದಿಂದ ರಂಗ ರಾವ್ ಅವರು ಬ್ರಿಟಿಷ್ ನ್ಯಾಯಾಧೀಶರ ಗೌರವವಕ್ಕೂ ಪಾತ್ರರಾಗಿದ್ದರು ಎಂಬುದನ್ನು ವಿವರಿಸುತ್ತಾರೆ. ಶೋಷಿತರ ಪರವಾದ ರಂಗ ರಾಯರ ಕ್ರಾಂತಿಕಾರಕ ಹೋರಾಟದ ಪರಿಚಯವನ್ನು ಮಾಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

ಕುದ್ಮುಲ್ ರಂಗರಾವ್ ಅವರು ನಿಜವಾದ ಅರ್ಥದಲ್ಲಿ ದಲಿತ ಮತ್ತು ಶೋಷಿತರ ಪರವಾಗಿ ಮಾಡಿರುವ ಸೇವೆಯನ್ನು ಮುಂದಿನ ಅಧ್ಯಾಯಗಳಲ್ಲಿ ದಾಖಲೆಗಳೊಂದಿಗೆ ಲೇಖಕರು ವಿವರಿಸುತ್ತಾರೆ. ಬೆಂದೂರು ಬಾಬು ಎಂಬವರಿಗೆ ನ್ಯಾಯಾಲಯದಲ್ಲಿ ಪೇದೆ ಹುದ್ದೆಯನ್ನು ನೀಡಿದಾಗ ಅದನ್ನು ಸವರ್ಣೀಯರು ಪ್ರತಿಭಟಿಸಿ, ನ್ಯಾಯಾಧೀಶರೇ ವರ್ಗಾವಣೆಯಾಗುವಂತೆ ಮಾಡಿದ ಘಟನೆ ರಂಗರಾಯರ ಮೇಲೆ ಪರಿಣಾಮ ಬೀರಿತು. ನ್ಯಾಯಾಧೀಶರು ವರ್ಗಾವಣೆಯ ಸಂದರ್ಭದಲ್ಲಿ ದಲಿತರ ವಿಮೋಚನೆಗೆ ಏನಾದರೂ ಮಾಡಬೇಕು ಎಂದು ಸೂಚನೆ ನೀಡಿದ್ದು, ಅವರ ದಲಿತ ವಿಮೋಚನಾ ಕಾರ್ಯಕ್ಕೆ ಬಲ ತಂದಿತ್ತು. ತನ್ನ 29ನೇ ವಯಸ್ಸಿನಲ್ಲಿ ಇಂತಹ ಪುರೋಗಾಮಿ ವಿಚಾರಗಳು ಅವರ ಮನಸ್ಸಿನಲ್ಲಿ ಮೂಡಿರುವುದು ಮುಂದಿನ ಕ್ರಾಂತಿಕಾರಕ ಹೆಜ್ಜೆಗಳಿಗೆ ಕಾರಣವಾಯಿತು. ಇದು ಅವರ ಶಿಕ್ಷಣ ಕ್ರಾಂತಿಯ ಮೂಲ ಪ್ರೇರಣೆ ಎಂಬುದನ್ನು ಈ ಅಧ್ಯಯನ ಸ್ಪಷ್ಟಪಡಿಸುತ್ತದೆ.

ದಲಿತರಿಗೆ ಶಾಲೆಯನ್ನು ತೆರೆಯಲು ನಿರ್ಧರಿಸಿರುವುದು ಆ ಕಾಲದಲ್ಲಿ ಕ್ರಾಂತಿಕಾರಕ ಹೆಜ್ಜೆ. ಸವರ್ಣೀಯರ ವಿರೋಧದ ನಡುವೆಯೂ ಕ್ರಿಶ್ಚಿಯನ್ನರ ಮನೆಯನ್ನು ಬಾಡಿಗೆಗೆ ಪಡೆದು, ದಲಿತರಿಗೆ ಶಾಲೆಯನ್ನು ಆರಂಭಿಸಿದರು. ಆದರೆ ಸವರ್ಣೀಯರ ತೀವ್ರ ಉಪಟಳದಿಂದಾಗಿ ಶಾಲೆಯನ್ನು ಮುಚ್ಚಬೇಕಾಯಿತು. ಆ ಕಾಲದಲ್ಲಿ ಅವರು ಮಾಡಿದ ಶಿಕ್ಷಣ ಕ್ರಾಂತಿಯ ವಿವರಗಳನ್ನು ಲೇಖಕರು ನೀಡುತ್ತಾರೆ. ಮಂಗಳೂರಿನ ಕಂಕನಾಡಿ ಮತ್ತು ಬೋಳೂರಿನಲ್ಲಿ ಶಾಲೆಯನ್ನು ಆರಂಭಿಸಿದರು. ದಲಿತ ಯುವಕರಿಗೆ ನಾಲ್ಕನೇ ತರಗತಿಯವರೆಗೆ ಕಲಿಸಿ, ಬಳಿಕ ಶಿಕ್ಷಕ ತರಬೇತಿಯನ್ನು ನೀಡಿ, ಅಧ್ಯಾಪಕರನ್ನಾಗಿ ಮಾಡಿರುವುದರಿಂದ ಆಗಿನ ಅವಿಭಜಿತ ದಕ್ಷಿಣ ಕನ್ನಡದ ಹಲವೆಡೆ ಹೊಸ ಪ್ರಾಥಮಿಕ ಶಾಲೆಗಳು ಆರಂಭವಾಗಲು ಕಾರಣವಾದುದನ್ನು ವಿವರಿಸುತ್ತಾರೆ. 1892ರಿಂದ ಶೋಷಿತ ಸಮುದಾಯಕ್ಕೆ ಅವರು ಆರಂಭಿಸಿದ ಶಾಲೆಗಳಲ್ಲಿ ಕಲಿತು ಶಿಕ್ಷಣ ಹಾಗೂ ಇತರ ಹುದ್ದೆಗಳನ್ನು ಪಡೆದವರ ವಿವರಗಳನ್ನು ನೀಡುತ್ತಾರೆ. 1897ರಲ್ಲಿ ಅವರು ಆರಂಭಿಸಿದ ‘ದಿ ಡಿಪ್ರೆಸ್‌ಡ್ ಕ್ಲಾಸಸ್ ಮಿಶನ್’ನ ಮೂಲಕ ಕರಾವಳಿಯಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿಯಾದುದನ್ನು ಲೇಖಕರು ವಿವರಿಸುತ್ತಾರೆ. ಶೋಷಿತ ಜನಾಂಗಕ್ಕೆ ಕೃಷಿ ಭೂಮಿಯನ್ನು ನೀಡಿದ ರಂಗ ರಾವ್ ಅವರ ಸಹೃದಯತೆಯನ್ನು ಐತಿಹಾಸಿಕ ವಿಮೋಚನೆ ಎಂದು ಲೇಖಕರು ಗುರುತಿಸುತ್ತಾರೆ. ದಲಿತರಿಗೆ ವಸತಿ ನಿರ್ಮಾಣದ ಮಹತ್ವದ ಯೋಜನೆಯನ್ನು ರಂಗರಾವ್ ಅವರು ಜಾರಿಗೆ ತಂದುದನ್ನು ವಿವರಿಸುತ್ತಾರೆ. ದಲಿತರಿಗಾಗಿ ಸಭೆ ಸಮಾರಂಭ ನಡೆಸಲು ಕಟ್ಟಿಸಿದ ಸ್ಟಾರ್ ಹೋಮ್ ಎಂಬ ಭವನದ ನಿರ್ಮಾಣದ ಪ್ರಕ್ರಿಯೆಯನ್ನು ವಿವರಿಸುತ್ತಾರೆ. ಶೋಷಿತರಿಗೆ ಭೂಮಿ ಪಡೆಯುವಾಗ ಹಲವಾರು ಷರತ್ತುಗಳನ್ನು ವಿಧಿಸಿರುವುದು ರಂಗರಾಯರ ಮುಂದಾಲೋಚನೆಗೆ ಸಾಕ್ಷಿಯಾಗಿರುವುದನ್ನು ಗುರುತಿಸುತ್ತಾರೆ.

ಶೋಷಿತರಿಗಾಗಿ ಸಹಕಾರ ಸಂಘದ ಸ್ಥಾಪನೆ, ಮೂಢನಂಬಿಕೆಗಳ ಅರಿವು ಮೂಡಿಸಿರುವುದು ಆಶ್ರಮ ಶಾಲೆಗಳ ಸ್ಥಾಪನೆ, ದೇವದಾಸಿ ಮತ್ತು ವಿಧವೆಯರಿಗೆ ಆಶ್ರಮ ಶಾಲೆ, ಸ್ಥಳೀಯ ಸಂಸ್ಥೆಗಳಲ್ಲಿ ದಲಿತರಿಗೆ ಪ್ರಾತಿನಿಧ್ಯ, ಅಂತರ್‌ಜಾತಿಯ ವಿವಾಹಕ್ಕೆ ಪ್ರೋತ್ಸಾಹ-ಹೀಗೆ ರಂಗ ರಾವ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮಾಡಿದ ಪ್ರಗತಿಪರ ಕಾಯಕಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ. ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್‌ರಿಗಿಂತ ಮೊದಲೇ ದಲಿತ ವಿಮೋಚನಾ ಕಾರ್ಯವನ್ನು ಮಾಡಿದವರು ಕುದ್ಮುಲ್ ರಂಗ ರಾವ್ ಅವರು. 1891 ರಲ್ಲಿ ಅಂಬೇಡ್ಕರ್ ಹುಟ್ಟಿದರೆ, 1892 ರಲ್ಲಿ ಕುದ್ಮುಲ್ ರಂಗರಾಯರು ದಲಿತರಿಗಾಗಿ ಶಾಲೆಯನ್ನು ನಿರ್ಮಿಸಿದರು. 1897ರಲ್ಲಿ ದಲಿತರಿಗಾಗಿ ಮಂಗಳೂರಿನ ಚಿಲಿಂಬಿಯಲ್ಲಿ ಶಾಲೆ ತೆರೆಯುತ್ತಾರೆ. ಈ ದೃಷ್ಟಿಯಿಂದ ದಲಿತ ವಿಮೋಚನೆ ಪರಿಕಲ್ಪನೆಯ ದಿಗ್ಗಜರಾದ ಗಾಂಧಿ ಮತ್ತು ಅಂಬೇಡ್ಕರ್‌ರಿಗೂ ಕುದ್ಮುಲ್ ರಂಗರಾವ್ ಮೊದಲಿಗರಾಗುತ್ತಾರೆ ಎಂಬುದನ್ನು ಗುರುತಿಸಿರುವುದು ವಿಶಿಷ್ಟವಾಗಿದೆ.

ಒಟ್ಟಿನಲ್ಲಿ ಕುದ್ಮುಲ್ ರಂಗರಾವ್ ಅವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಮಹತ್ವದ ಕೃತಿ ಇದಾಗಿದೆ. ಲೇಖಕರ ದಲಿತ ಪರ ಚಿಂತನೆ ಮತ್ತು ಪುರೋಗಾಮಿ ವ್ಯಕ್ತಿತ್ವವೂ ಇಲ್ಲಿನ ಬರಹಗಳಲ್ಲಿದೆ. ಕುದ್ಮುಲ್ ರಂಗರಾಯರ ವ್ಯಕ್ತಿತ್ವವನ್ನು ಇಂದಿನ ಯುವಜನತೆಗೆ ತಿಳಿಸುವುದು ಅತೀ ಅಗತ್ಯವಾಗಿದೆ. ಸ್ವಾತಂತ್ರ್ಯ ಹೋರಾಟವು ಸ್ಪಷ್ಟ ರೂಪ ಪಡೆಯುವ ಮೊದಲು, ಗಾಂಧೀಜಿಯವರ ದಲಿತರ ಪರ ಚಿಂತನೆ ರೂಪುಗೊಳ್ಳುವ

ಮೊದಲು, ಅಂಬೇಡ್ಕರರು ದಲಿತ ವಿಮೋಚನೆಗೆ ಸ್ಪಷ್ಟ ಹಾದಿಯನ್ನು ರೂಪಿಸುವ ಮೊದಲು, ಈ ಬಗ್ಗೆ ಚಿಂತಿಸಿದವರು ಕುದ್ಮುಲ್ ರಂಗ ರಾವ್. ಅವರ ಸಮಗ್ರ ವ್ಯಕ್ತಿತ್ವವನ್ನು ಪ್ರಗತಿಪರ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟ ಡಾ. ಕೆ.ಪಿ. ಮಹಾಲಿಂಗು ಕಲ್ಕುಂದರು ಅಭಿನಂದನಾರ್ಹರು. ಈ ಕೃತಿಯೂ ಅವರ ಇತರ ಕೃತಿಗಳಂತೆ ಜನಮನ್ನಣೆ ಪಡೆಯಲಿ ಎಂದು ಆಶಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಗಣನಾಥ ಎಕ್ಕಾರು

contributor

Similar News