ಪ್ರಜಾಪ್ರಭುತ್ವದ ಉಸಿರಿಗೆ ಶಕ್ತಿ ತುಂಬುವ ಕೆಲಸವನ್ನು ಈ ಬಾರಿ ಜನರೇ ಮಾಡುತ್ತಾರೆ : ಎಂ. ಲಕ್ಷ್ಮಣ್

ಕೊಡಗನ್ನು ಸ್ವಿಟ್ಸರ್‌ಲ್ಯಾಂಡ್ ಮಾಡುತ್ತೇವೆ ಎಂದು ಮೋದಿ 2019ರಲ್ಲಿ ಮೈಸೂರಿನಲ್ಲಿ ಭಾಷಣ ಮಾಡಿದರು. 2014ರಲ್ಲಿ ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದಿದ್ದರು. ಏನು ಮಾಡಿದರು? ವಿಮಾನ ನಿಲ್ದಾಣ ನಿರ್ಮಾಣ ಎಂದರು. ಕುಶಾಲನಗರದವರೆಗೂ ರೈಲನ್ನು ಬಿಡುತ್ತಲೇ ಇದ್ದಾರೆ. ಏನನ್ನೂ ಮಾಡಿಲ್ಲ. ಕೊಡಗು ಭಾವುಕವಾಗಿರುವ ಜನರ ಪ್ರದೇಶ. ಅವರ ಭಾವುಕತೆಯನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಂಡು, ಕೋಮು ಘರ್ಷಣೆಯನ್ನು ತಂದು ಜನರನ್ನು ದಿಕ್ಕುತಪ್ಪಿಸಿ ಗೆಲ್ಲುವ ಕೆಲಸ ಮಾಡುತ್ತಿದ್ದರು. ‘ವಾರ್ತಾಭಾರತಿ’ಯಂಥ ಪ್ರಾಮಾಣಿಕವಾಗಿರುವ ಪತ್ರಿಕೆಗಳು, ಚಾನೆಲ್‌ಗಳು ದೇಶದಲ್ಲಿ 10 ಇರಬಹುದು. ಇಂಥ ಸನ್ನಿವೇಶದಲ್ಲಿಯೂ, ಅಪಾಯದ ಸಂದರ್ಭದಲ್ಲಿಯೂ ‘ವಾರ್ತಾಭಾರತಿ’ ಉಳಿದಿದೆ ಎಂದಾದರೆ, ಇನ್ನೂ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿದೆ ಎಂದರ್ಥ. ಆ ಉಸಿರಿಗೆ ದೊಡ್ಡ ಮಟ್ಟದ ಶಕ್ತಿ ಬೇಕಾಗುತ್ತದೆ. ಆ ಶಕ್ತಿಯನ್ನು ಕೊಡುವ ಕೆಲಸವನ್ನು ಜನರೇ ಮಾಡುತ್ತಾರೆ.

Update: 2024-04-07 05:02 GMT

► ಪ್ರಚಾರ ನಡೆಯುತ್ತಿದೆ. ಏನಿದೆ ಜನರ ಪ್ರತಿಕ್ರಿಯೆ?

ಲಕ್ಷ್ಮಣ್: ಮೈಸೂರು ನಗರಕ್ಕೆ ನಾನು ಹೊಸಬನಲ್ಲ. ಕಳೆದ 30 ವರ್ಷಗಳಿಂದಲೂ ಹೋರಾಟಗಳ ಹಿನ್ನೆಲೆಯಲ್ಲಿ ಬಂದಿರುವವನು. ಮೈಸೂರು ಜಿಲ್ಲೆಯೂ ಹೊಸದಲ್ಲ. ಇತ್ತೀಚೆಗೆ ವಕ್ತಾರನಾದ ಮೇಲೆ ರಾಜ್ಯದಲ್ಲೂ ಬಹುತೇಕ ಜನರಿಗೆ ನಾನು ಪರಿಚಿತ. ಮೈಸೂರು ಲೋಕಸಭಾ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ಪಕ್ಷ, ನಮ್ಮ ನಾಯಕರು, ಕಾರ್ಯಕರ್ತರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಗೆಲ್ಲುವುದಕ್ಕೆ ಏನು ಪ್ರಯತ್ನ ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇವೆ.

► ಕಾಂಗ್ರೆಸ್‌ನಲ್ಲಿ ಯತೀಂದ್ರ ಅವರಿಗೆ ಟಿಕೆಟ್ ಎಂದಿತ್ತು. ಸಿದ್ದರಾಮಯ್ಯನವರು ಮನಸ್ಸು ಮಾಡಿದ್ದರೆ ಕೊಡಬಹುದಾಗಿತ್ತು. ನಿಮಗೆ ಟಿಕೆಟ್ ಸಿಕ್ಕಿತಲ್ಲ, ಅದರ ಬಗ್ಗೆ ಏನೆನ್ನುತ್ತೀರಿ?

ಲಕ್ಷ್ಮಣ್: ಲೋಕಸಭೆ ಟಿಕೆಟ್ ಕೊಡುವಾಗ ಎಲ್ಲ ಬಗೆಯಿಂದಲೂ ಬಲಶಾಲಿಯಾಗಿರಬೇಕು ಎಂದು ನಿರೀಕ್ಷಿಸುತ್ತಾರೆ. ನಾನೊಬ್ಬ ಕಾರ್ಯಕರ್ತ. ನಿರಂತರವಾಗಿ 30 ವರ್ಷಗಳಿಂದ ಪಕ್ಷಕ್ಕೋಸ್ಕರ ದುಡಿಯುತ್ತಿರುವವನು. ನನ್ನನ್ನು ಗುರುತಿಸಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ಪಕ್ಷದ ಇಲ್ಲಿನ ಎಲ್ಲ ಶಾಸಕರ ಅಭಿಪ್ರಾಯವನ್ನೂ ತೆಗೆದುಕೊಂಡು ನನಗೆ ಅವಕಾಶ ಕಲ್ಪಿಸಿದ್ದಾರೆ. ಕಾರ್ಯಕರ್ತನನ್ನು ಗುರುತಿಸುವುದಿದೆಯಲ್ಲ, ರಾಜಕೀಯದ ಮೂಲ ತತ್ವ, ಅದು ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ನಾನು ಉದಾಹರಣೆ.

► 47 ವರ್ಷಗಳ ನಂತರ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ನಿಮ್ಮ ಸಮುದಾಯದಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಆ ಸಮುದಾಯ ಈ ಬಾರಿ ನಿಮ್ಮ ಕೈಹಿಡಿಯುತ್ತದೆ ಎಂಬ ನಂಬಿಕೆ ಇದೆಯಾ?

ಲಕ್ಷ್ಮಣ್: 21 ಲಕ್ಷ ಮತದಾರರೂ ನನ್ನ ಕೈಹಿಡಿಯುತ್ತಾರೆ ಎಂಬ ನಂಬಿಕೆಯಲ್ಲಿದ್ದೇನೆ. ಒಕ್ಕಲಿಗ ಸಮುದಾಯದವನಾದರೂ ಎಲ್ಲಿಯೂ ಜಾತಿಯ ಆಧಾರದ ಮೇಲೆ ಗುರುತಿಸಿಕೊಂಡು ಕೆಲಸ ಮಾಡಿದ್ದಿಲ್ಲ. ಎಲ್ಲ ಜನಾಂಗಗಳ ಜೊತೆ ಸೇರಿಕೊಂಡು ಕೆಲಸ ಮಾಡಿಕೊಂಡು ಅನ್ಯೋನ್ಯವಾಗಿರುವ ವ್ಯಕ್ತಿ ನಾನು. ನಮ್ಮ ಸಮುದಾಯದ ವಿಚಾರದಲ್ಲಿ ನಾನು ವಿವರಿಸಬೇಕಾಗಿ ಬಂದದ್ದು ಒಕ್ಕಲಿಗನೇ ಅಲ್ಲ ಎಂದು ನನ್ನ ಬಗ್ಗೆ ಪ್ರತಾಪ ಸಿಂಹ ಹೇಳಿದ ಕಾರಣದಿಂದಾಗಿ. ಒಕ್ಕಲಿಗನಾದರೂ ಬೆಳೆಯುತ್ತ ನಾನು ವಿಶ್ವಮಾನವ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವವನು. 1977ರ ನಂತರ ಒಕ್ಕಲಿಗರಲ್ಲಿ ಒಂದು ಕೊರಗು ಇತ್ತು. ತುಳಸೀದಾಸಪ್ಪ ಎನ್ನುವವರಿಗೆ ಟಿಕೆಟ್ ಕೊಟ್ಟಿದ್ದ ಬಳಿಕ ಈಗ ಒಕ್ಕಲಿಗ ಸಮುದಾಯಕ್ಕೆ, ಅಂದರೆ ನನಗೆ ಟಿಕೆಟ್ ಸಿಕ್ಕಿದೆ. ಕಳೆದ ಬಾರಿ ಪ್ರತಾಪ ಸಿಂಹ ಗೆಲ್ಲುವುದಕ್ಕೂ ಒಕ್ಕಲಿಗ ಸೆಂಟಿಮೆಂಟ್ ಕಾರಣವಾಯಿತು. ಎಲ್ಲರೂ ಕಡೆಗೆ, ಕಾಂಗ್ರೆಸ್‌ನಲ್ಲಿದ್ದ ಒಕ್ಕಲಿಗರೂ ಪ್ರತಾಪ ಸಿಂಹಗೇ ಮತ ಹಾಕಿದರು. ಅದನ್ನು ನನ್ನ ವಿಚಾರದಲ್ಲಿ ಯಾಕೆ ಮಾಡಬಾರದು ಎಂಬುದು ನನ್ನ ಪ್ರಶ್ನೆ.

► ಪ್ರತಾಪ ಸಿಂಹ ಅವರಿಗೆ ಟಿಕೆಟ್ ತಪ್ಪಿರುವುದರಿಂದ ಚುನಾವಣೆಯಲ್ಲಿ ನಿಮಗೆ ಸಹಾಯವಾಗುತ್ತದೆಯೆ?

ಲಕ್ಷ್ಮಣ್: ಯಾರೇ ನಿಂತರೂ ನಾನು ಚುನಾವಣೆ ಎದುರಿಸುತ್ತಿದ್ದೆ. ಆದರೆ ಬಿಜೆಪಿಯಿಂದ ಪ್ರತಾಪ ಸಿಂಹ ನಿಂತು, ಕಾಂಗ್ರೆಸ್‌ನಿಂದ ನಾನು ಸ್ಪರ್ಧಿಸಿದ್ದರೆ ಒಕ್ಕಲಿಗ ಸಮುದಾಯದ ಇಬ್ಬರ ಮಧ್ಯೆ ಮತಗಳು ವಿಭಜನೆಯಾಗುತ್ತಿದ್ದವು. ಸಮುದಾಯಕ್ಕೆ ಗೊಂದಲವಾಗುತ್ತಿತ್ತು. ಎರಡನೆಯದಾಗಿ ಹತ್ತು ವರ್ಷಗಳಿಂದ ಸಂಸದನಾಗಿ ಹಣಕಾಸಿನ ವಿಚಾರದಲ್ಲಿ ಬಲಿಷ್ಠವಾಗಿದ್ದರು. ಈಗ ಯದುವೀರ್ ಅವರಿಗೆ ಕೊಟ್ಟಿದ್ದಾರೆ. ಅವರ ಬಗ್ಗೆ ನಾವೇನೂ ಮಾತನಾಡುವುದಿಲ್ಲ. ಅವರು ರಾಜರ ದತ್ತುಪುತ್ರರು. ರಾಜವಂಶಸ್ಥರೇನಲ್ಲ. ಹೊರಗಿನವರು. ಅವರು ಅರಮನೆಯಲ್ಲಿರುವವರು. ನಾನು ಸಣ್ಣ ಮನೆಯಲ್ಲಿರುವವನು. ನಾನು ಬೀದಿಯಲ್ಲಿ ಸಿಗುತ್ತೇನೆ. ಅವರು ಅರಮನೆಯಲ್ಲಿ ಸಿಗುತ್ತಾರೆ. ಜನರೇನಾದರೂ ಅವರನ್ನು ನೋಡಬೇಕೆಂದರೆ ಅರಮನೆಗೆ ಹೋಗಲು ನೂರು ರೂ. ಟಿಕೆಟ್ ಇದೆ. ಕೊಂಡು ಒಳಗೆ ಹೋಗಬೇಕು. ನಾನು ಎಲ್ಲಿ ಬೇಕಾದರೂ ಸಿಗುತ್ತೇನೆ.

► ಯದುವೀರ್, ನಾನು ಜನರ ನಡುವೆ ಬರಲು ತಯಾರಿದ್ದೇನೆ. ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಕ್ಕೆ ಮೋದಿಯವರ ಕೈ ಬಲಪಡಿಸಬೇಕು. ಈ ಮನೆತನ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಮಾಡಿಕೊಂಡು ಬಂದಿದ್ದು, ಅದೇ ಕಾರಣದಿಂದಾಗಿ ಮೋದಿಯನ್ನು ಪ್ರಧಾನಿ ಮಾಡುವುದು ಉದ್ದೇಶ ಎಂದು ಹೇಳುತ್ತಿದ್ದಾರೆ.

ಲಕ್ಷ್ಮಣ್: ಅಂಥ ಹೇಳಿಕೆ ಕೊಟ್ಟಿರುವುದು ನಮ್ಮ ದುರಂತ. ಮೈಸೂರು ಭಾಗದ ಜನಸಾಮಾನ್ಯರು ಬಹಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದವರು. ಕೆಆರ್‌ಎಸ್ ಅಣೆಕಟ್ಟು ಕಟ್ಟಿಸಿದವರು ಅವರು. ಜನಪ್ರತಿನಿಧಿ ಕಾಯ್ದೆ ತಂದವರು ಅವರು. ಮೀಸಲಾತಿ ತಂದವರು ಅವರು. ಸಂವಿಧಾನಕ್ಕೂ ಮುಂಚೆ 1903ರಲ್ಲಿ ಮಿಸಲಾತಿ ತಂದಿದ್ದವರು. ಮೀಸಲಾತಿಗೆ ವಿರುದ್ಧ ಇರುವ ಪಕ್ಷ, ಜನಪ್ರತಿನಿಧಿ ಕಾಯ್ದೆಗೆ ವಿರುದ್ಧ ಇರುವ ಪಕ್ಷ, ಜನಸಾಮಾನ್ಯರನ್ನು ಒಡೆದು ಆಳುವ ನೀತಿಯನ್ನು ಹೊಂದಿರುವ ಪಕ್ಷದ ಅಭ್ಯರ್ಥಿಯಾಗಿ ನಿಂತಿರುವಂಥದ್ದೇ ಬೇಸರ ಮೂಡಿಸಿರುವ ವಿಚಾರ. ಅವರು ನಿಜವಾಗಿಯೂ ರಾಜಕೀಯಕ್ಕೆ ಬರಬೇಕು ಎಂದಿದ್ದರೆ ಕಾಂಗ್ರೆಸ್ ಪಕ್ಷದಿಂದಲೇ ಅವರಿಗೆ ಟಿಕೆಟ್ ಕೊಡುತ್ತಿದ್ದೆವು. ಮೋದಿ ಕೈ ಬಲಪಡಿಸುತ್ತಾರೆ ಎಂದರೆ, ಮತ್ತೆ ಜನಗಳನ್ನು ಒಡೆದು ದೇಶವನ್ನು ಇನ್ನೂ ಹಿಂದಕ್ಕೆ ತೆಗೆದುಕೊಂಡು ಹೋಗುವ, ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ಎಂದು ಒಡೆಯುವ, ಹಿಂದೂಗಳಲ್ಲೂ ದಲಿತರನ್ನು ಇತರ ಸಮುದಾಯವರನ್ನು ಬೇರೆ ಮಾಡುವ ಪ್ರಯತ್ನದಲ್ಲಿ ಅವರ ಕೈಬಲಪಡಿಸುವುದಕ್ಕೆ ನಿಂತಿದ್ದೀರಾ ಎಂಬುದಕ್ಕೆ ಸ್ಪಷ್ಟೀಕರಣ ಕೊಡಬೇಕು.

► ವಿಪಕ್ಷ ಒಕ್ಕೂಟದ ಕೆಲವರು ಜೈಲಿಗೆ ಹೋಗಿದ್ದಾರೆ. ನಿಮ್ಮ ಪಕ್ಷದ ಬ್ಯಾಂಕ್ ಖಾತೆ ಸ್ಥಗಿತ ಮಾಡಲಾಗಿತ್ತು. ಇವೆಲ್ಲವೂ ನಿಮ್ಮನ್ನು ಚುನಾವಣೆಯಲ್ಲಿ ಹಿಮ್ಮೆಟ್ಟಿಸುವ ಕೆಲಸವೇ?

ಲಕ್ಷ್ಮಣ್: ಹೌದು. ಇದು ನೇರವಾಗಿ ಕಾಣಿಸುತ್ತಿದೆ. ಮತ ಹಾಕುವುದಕ್ಕೇ ಬಿಡದೆ ನಿಮಗೆ ಬಂದೂಕನ್ನು ಗುರಿಯಾಗಿಟ್ಟು ನಿಲ್ಲಿಸಿರಬೇಕಾದರೆ ಜನರಿಗೆ ಅರ್ಥವಾಗುತ್ತದಲ್ಲವೆ? ಹಾಗೆ ಇಡೀ ದೇಶದ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ಧಾರೆ. ಈ.ಡಿ., ಐಟಿ, ಚುನಾವಣಾ ಆಯೋಗ ಎಲ್ಲವುಗಳ ಮೂಲಕ, ವಿಪಕ್ಷಗಳಿಗೆ ಚುನಾವಣೆ ಎದುರಿಸುವುದಕ್ಕೇ ಬಿಡುವುದಿಲ್ಲ ಎಂದಾದರೆ ಏನರ್ಥ?

► ಇದರ ನಡುವೆ ಹೇಗೆ ನಿಮಗೆ ಗೆಲ್ಲುವ ವಿಶ್ವಾಸ?

ಲಕ್ಷ್ಮಣ್: ಎಲ್ಲವೂ ಜನರಿಗೆ ಗೊತ್ತಾಗಿದೆ. ಜನರು ಈ ಬಾರಿ ನೂರಕ್ಕೆ ನೂರರಷ್ಟು ‘ಇಂಡಿಯಾ’ ಒಕ್ಕೂಟವನ್ನೇ ಬೆಂಬಲಿಸುತ್ತಾರೆ. ಹಾಗಲ್ಲ ಎಂದಾಗಿದ್ದರೆ ಅವರೇಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದರು? 400 ಸೀಟು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರು ಸ್ಪರ್ಧಿಸಿರುವುದೇ 453 ಸ್ಥಾನಗಳಲ್ಲಿ. ಅವುಗಳ ಪೈಕಿ, ದಕ್ಷಿಣ ಭಾರತವೂ ಸೇರಿ 97ರಲ್ಲಿ ಅವರು ಝೀರೊ. ಕರ್ನಾಟಕದಲ್ಲಿ ಯಾವ ಕಾರಣಕ್ಕೂ ಈ ಸಲ ಒಂದಂಕಿ ದಾಟುವುದಿಲ್ಲ. ಅದನ್ನೂ ಸೇರಿಸಿ 400 ಎನ್ನುತ್ತಾರೆ. ಹೇಗೆ ಬರಲು ಸಾಧ್ಯ? 97ನ್ನು ಕಳೆದರೆ 320 ಸ್ಥಾನಗಳಲ್ಲಿ ಮಾತ್ರವೇ ಅವರು ಪೈಪೋಟಿ ಒಡ್ಡಲು ಅವಕಾಶವಿರುವುದು. ಹಾಗಿರುವಾಗ 400 ಎನ್ನುತ್ತಿದ್ದರೆ ಇವಿಎಂ ಎಲ್ಲ ಅವರ ಜೇಬಿನಲ್ಲಿದೆಯೇ? ಜನರಿಗೆ ಗೊತ್ತಾಗುತ್ತಿದೆ. 10 ವರ್ಷಗಳಿಂದ ಆಗಿರುವ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದಾರೆ. ಆ ಕಾರಣದಿಂದಲೇ ಈ ಬಾರಿ ‘ಇಂಡಿಯಾ’ ಒಕ್ಕೂಟಕ್ಕೆ ಅವಕಾಶವಿರುತ್ತದೆ. ಅದರಲ್ಲೂ ಕರ್ನಾಟಕದಲ್ಲಿ ಮೈಸೂರು, ಚಾಮರಾಜನಗರವೂ ಸೇರಿ 22ರಿಂದ 25ರವರೆಗೂ ಕಾಂಗ್ರೆಸ್ ಗೆಲ್ಲುತ್ತದೆ.

► ಬಹಳ ವರ್ಷಗಳ ನಂತರ ಕೊಡಗು ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಅಲ್ಲಿನ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎಂದುಕೊಂಡಿದ್ದೀರಿ?

ಲಕ್ಷ್ಮಣ್: ಕೊಡಗಿನ ವಿಚಾರದಲ್ಲಿ ಬಿಜೆಪಿಯವರು ಏನೆಲ್ಲ ಆಶ್ವಾಸನೆಗಳನ್ನು ಕೊಟ್ಟಿದ್ದರು, ಏನೆಲ್ಲ ಈಡೇರಿದೆ ಎಂಬುದನ್ನು ಪಟ್ಟಿ ಮಾಡಿದ್ದೇನೆ. ಅಪ್ಪಚ್ಚು ರಂಜನ್ 25 ವರ್ಷ ಒಂದು ಕ್ಷೇತ್ರದ ಶಾಸಕರಾಗಿದ್ದರು. ಕೆ.ಜಿ. ಬೋಪಯ್ಯನವರು 20 ವರ್ಷ ಇದ್ದರು. ಕೊಡಗಿಗೆ ಒಂದು ರೂಪಾಯಿಯ ಯೋಜನೆಯನ್ನೂ ಅವರು ತರಲಿಲ್ಲ. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ ಭಾರತರತ್ನ ಘೋಷಿಸುವ ಆಶ್ವಾಸನೆಯನ್ನು ಚುನಾವಣೆ ವೇಳೆ ಕೊಡಲಾಯಿತು. ಆಗಲಿಲ್ಲ. ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿ ಮುಂದಿಟ್ಟುಕೊಂಡು ಮತ ಪಡೆದರು. ಅದೂ ಆಗಲಿಲ್ಲ. ಕೊಡಗಿಗೆ ಪ್ರತ್ಯೇಕವಾಗಿ ಪ್ರವಾಸೋದ್ಯಮ ಪ್ರಾಧಿಕಾರ ಮಾಡುವುದಾಗಿ ಹೇಳಿದರು. ಮಾಡಲಿಲ್ಲ. ಕಾಫಿ ಬೆಳೆಗೆ ಬೆಂಬಲ ಬೆಲೆ ವಿಚಾರವನ್ನಂತೂ ಕಡೆಗೆ ಜನರು ಕೇಳುವುದನ್ನೇ ಬಿಟ್ಟರು. ಕೊಡವ ಭಾಷೆಯನ್ನು 8ನೇ ಶೆೆಡ್ಯೂಲ್‌ನಲ್ಲಿ ಸೇರಿಸುವುದಾಗಿ ಹೇಳಿದರು. ಎಲ್ಲಿ ಸೇರಿಸಿದರು? ಇದೇ ಪ್ರತಾಪ ಸಿಂಹ ಕೊಟ್ಟಿದ್ದ ಆಶ್ವಾಸನೆ. ಕೊಡಗನ್ನು ಸ್ವಿಟ್ಸರ್‌ಲ್ಯಾಂಡ್ ಮಾಡುತ್ತೇವೆ ಎಂದು ಮೋದಿ 2019ರಲ್ಲಿ ಮೈಸೂರಿನಲ್ಲಿ ಭಾಷಣ ಮಾಡಿದರು. 2014ರಲ್ಲಿ ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದಿದ್ದರು. ಏನು ಮಾಡಿದರು? ವಿಮಾನ ನಿಲ್ದಾಣ ನಿರ್ಮಾಣ ಎಂದರು. ಕುಶಾಲನಗರದವರೆಗೂ ರೈಲನ್ನು ಬಿಡುತ್ತಲೇ ಇದ್ದಾರೆ. ಏನನ್ನೂ ಮಾಡಿಲ್ಲ. ಕೊಡಗು ಭಾವುಕವಾಗಿರುವ ಜನರ ಪ್ರದೇಶ. ಅವರ ಭಾವುಕತೆಯನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಂಡು, ಕೋಮು ಘರ್ಷಣೆಯನ್ನು ತಂದು ಜನರನ್ನು ದಿಕ್ಕುತಪ್ಪಿಸಿ ಗೆಲ್ಲುವ ಕೆಲಸ ಮಾಡುತ್ತಿದ್ದರು. ‘ವಾರ್ತಾಭಾರತಿ’ಯಂಥ ಪ್ರಾಮಾಣಿಕವಾಗಿರುವ ಪತ್ರಿಕೆಗಳು, ಚಾನೆಲ್‌ಗಳು ದೇಶದಲ್ಲಿ 10 ಇರಬಹುದು. ಇಂಥ ಸನ್ನಿವೇಶದಲ್ಲಿಯೂ, ಅಪಾಯದ ಸಂದರ್ಭದಲ್ಲಿಯೂ ‘ವಾರ್ತಾಭಾರತಿ’ ಉಳಿದಿದೆ ಎಂದಾದರೆ, ಇನ್ನೂ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿದೆ ಎಂದರ್ಥ. ಆ ಉಸಿರಿಗೆ ದೊಡ್ಡ ಮಟ್ಟದ ಶಕ್ತಿ ಬೇಕಾಗುತ್ತದೆ. ಆ ಶಕ್ತಿಯನ್ನು ಕೊಡುವ ಕೆಲಸವನ್ನು ಜನರೇ ಮಾಡುತ್ತಾರೆ.

► ಈ ಬಾರಿ ಆ ಧ್ರುವೀಕರಣ ರಾಜಕೀಯಕ್ಕೆ ಜನ ಮಣೆ ಹಾಕುವುದಿಲ್ಲ ಎನ್ನಿಸುತ್ತದೆಯೇ? ಅಭಿವೃದ್ಧಿ ರಾಜಕಾರಣದ ಕಡೆಗೆ ಹೋಗುತ್ತಾರೆಯೇ?

ಲಕ್ಷ್ಮಣ್: ಕೊಡಗು ಭಾಗದ ಪಂಚಾಯತ್‌ಗಳಲ್ಲಿ 25 ವರ್ಷಗಳಿಂದ ಆಗದೇ ಇರುವ ಕೆಲಸಗಳನ್ನು ಈಗ ಮಾಡಿ ತೋರಿಸಲಾಗುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಭಾಷಣ ಮಾಡಿ ಜನರ ಮತ ಕೇಳುವುದಲ್ಲ. 10 ತಿಂಗಳಿಂದ ಒಂದಾದರೂ ಕೋಮುಗಲಭೆ ಆಗಿದೆಯೇ? ಅಲ್ಲಿನ ಮುಸ್ಲಿಮರು ಕೊಡಗಿನವರಲ್ಲವೆ? ಇಡೀ ದೇಶದಲ್ಲಿರುವ ಮುಸ್ಲಿಮರು ಭಾರತೀಯರಲ್ಲವೆ? ಹಿಂದೂ ಸತ್ತರೆ ಮುಸ್ಲಿಮರು ಕಾರಣವೆನ್ನುವುದು, ಅವರ ಪ್ರದೇಶಗಳಿಗೆ ಹೋಗಿ ಹನುಮಾನ್ ಚಾಲೀಸಾ ಹೇಳುವುದು, ಹುಣಸೂರಿನಂಥ ಸಾಮರಸ್ಯದ ಊರಿನಲ್ಲಿ ಹನುಮ ಜಯಂತಿಯಿಂದಾಗಿ ನಾಲ್ಕೈದು ಮಂದಿಯ ಸಾವಿಗೆ ಕಾರಣವಾದದ್ದು, ಇವರೇ ಹೊಡೆದು ಮುಸ್ಲಿಮರ ಮೇಲೆ ಆರೋಪಿಸುವುದು ಹೀಗೆಲ್ಲ ನಡೆಯುತ್ತಿತ್ತು. ಈಗ ಇಲ್ಲ.

► ನಿಮ್ಮ ಇದೇ ಮಾತನ್ನು ಮುಸ್ಲಿಮರ ಓಲೈಕೆ ಎಂದು ಬಿಜೆಪಿಯವರು ಹೇಳುತ್ತಾರೆ.

ಲಕ್ಷ್ಮಣ್: ಇದು ಓಲೈಕೆ ಹೇಗಾಗುತ್ತದೆ? ಮುಸ್ಲಿಮರೂ ಈ ದೇಶದ ನಾಗರಿಕರು. ಅವರು ಈ ಮಣ್ಣಿನ ಮಕ್ಕಳು. 142 ಕೋಟಿ ಜನರೂ ಭಾರತ ಮಾತೆಯ ಮಕ್ಕಳೇ. ನೀವು ಅವರನ್ನು ವಿಂಗಡಿಸುವುದು, ಬೇರೆ ದೇಶದವರೆಂಬಂತೆ ಬಿಂಬಿಸುವುದು ಎಷ್ಟರ ಮಟ್ಟಿಗೆ ಸರಿ? ಅಭ್ಯರ್ಥಿಯಾಗಿ ಕೇಳುತ್ತಿದ್ದೇನೆ. ತುಷ್ಟೀಕರಣ ಅಲ್ಲ ಇದು. ಯಾವುದೋ ಒಬ್ಬ ಮುಸ್ಲಿಮ್ ಇಲ್ಲವೇ ಹಿಂದೂ ವ್ಯಕ್ತಿ ತಪ್ಪು ಮಾಡಿದರೆ ಇಡೀ ಸಮುದಾಯದ ಮೇಲೆಯೇ ಆರೋಪಿಸುವುದು ಎಷ್ಟು ಸರಿ? ಎಲ್ಲವನ್ನೂ ಸಮುದಾಯದ ಜೊತೆ ಜೋಡಿಸುವ ಕೆಲಸ ಮಾಡುತ್ತೀರಲ್ಲ? ಅದು ಬೇಸರ ತರುವ ವಿಚಾರ. 2023ರ ಚುನಾವಣೆಗೆ ಮೊದಲು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಮುಸ್ಲಿಮ್ ಸಮುದಾಯಕ್ಕೆ ಏನೆಲ್ಲಾ ತೊಂದರೆಗಳನ್ನು ಕೊಡಲಾಯಿತು? ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ಇಟ್ಟುಕೊಳ್ಳಲೂ ಬಿಡಲಿಲ್ಲ. ಹೊಡೆದು ಓಡಿಸಿದರು. ಆಝಾನ್ ಕೂಗುವಂತಿಲ್ಲ ಎಂದರು.

► ಈಗ ಹೇಗೆ ಬಿಂಬಿಸಲಾಗುತ್ತದೆ ಎಂದರೆ, ವಿಧಾನಸಭೆ ಚುನಾ ವಣೆ ರಾಜ್ಯಕ್ಕೆ ಸಂಬಂಧಿಸಿದ್ದು. ಇಲ್ಲಿ ದೇಶಕ್ಕೊಂದು ನಾಯಕತ್ವ ಬೇಕು, ಮೋದಿ ಬೆಂಬಲಿಸುವುದಕ್ಕೆ ಮತ ಹಾಕಬೇಕು ಹೀಗೆ.

ಲಕ್ಷ್ಮಣ್: ದೇಶಾದ್ಯಂತ ಎಲ್ಲರೂ ನರೇಂದ್ರ ಮೋದಿ ಎನ್ನುತ್ತಿದ್ದಾರೆಯೇ? ಕಳೆದ ಬಾರಿ ಎಷ್ಟು ಪ್ರತಿಶತ ಮತ ಅವರಿಗೆ ಸಿಕ್ಕಿತು? ಅದಕ್ಕೂ ಹಿಂದೆ ಎಷ್ಟು ಪ್ರತಿಶತ ಮತ ಸಿಕ್ಕಿತು? ನೂರಕ್ಕೆ ನೂರು ಮಂದಿಯೂ ನರೇಂದ್ರ ಮೋದಿಯೇ ಬೇಕು ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆಯೆ? ಉರುಳುಸೇವೆ ಮಾಡುತ್ತಿದ್ದಾರೆಯೆ? ಮೋದಿ ಕೊಡುಗೆ ಏನು? ದೇಶವನ್ನು ಇವರು ಬಿಟ್ಟರೆ ಬೇರೆ ಯಾರೂ ಕಾಪಾಡುವುದಿಲ್ಲ ಎಂದು ಬಿಂಬಿಸುವ ಕೆಲಸವಾಗುತ್ತಿದೆಯಲ್ಲ, 1947ರ ನಂತರ 2014ರವರೆಗೂ ಕಾಪಾಡಿದ್ದು ಯಾರು? ಸುಮಾರು 3,800 ಚದರ ಕಿ.ಮೀ. ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡು ಕೂತಿದ್ದರ ಬಗ್ಗೆ ಕೇಳಿದರೆ ಸುಳ್ಳನ್ನೇ ಹೇಳುತ್ತಿದ್ದಾರಲ್ಲ? ಸುಳ್ಳನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ ಅವರು. ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ.

► ಈ ಸಲವೂ ಅದು ಮುಂದುವರಿಯುತ್ತದೆಯೆ?

ಲಕ್ಷ್ಮಣ್: ಗೊತ್ತಾಗಿ ಹೋಗಿದೆ ಜನರಿಗೆ. ಉದ್ಯೋಗ ಇಲ್ಲ. ಬೆಲೆಯೇರಿಕೆ ಆಗಿದೆ. ಜನರು ಜೀವನ ನಡೆಸುವುದಕ್ಕೇ ಆಗದ ಸ್ಥಿತಿ ಬಂದಿದೆ. ಯುವಕರನ್ನೆಲ್ಲ ಮೂರ್ಖರನ್ನಾಗಿಸುವ ಕೆಲಸ ನಡೆದಿದೆ. ಇದರ ನಡುವೆ ನಮ್ಮ ಗ್ಯಾರಂಟಿ ಯೋಜನೆಗಳು ಫಲ ಕೊಡುತ್ತಿವೆ. ದೇಶದಲ್ಲಿ ಕೊಡುತ್ತಿರುವ ಗ್ಯಾರಂಟಿ ಯೋಜನೆಗಳೂ ಫಲ ಕೊಡುತ್ತಿವೆ. ರಾಹುಲ್ ಗಾಂಧಿಯವರ ವ್ಯಕ್ತಿತ್ವದಲ್ಲಿ ದೊಡ್ಡ ಬೆಳವಣಿಗೆ ಆಗಿದೆ.

► ಮೈತ್ರಿ ಅಭ್ಯರ್ಥಿಯಾಗಿರುವ ಯದುವೀರ್‌ಗೆ ಜೆಡಿಎಸ್ ಮತಗಳು ವರ್ಗಾವಣೆಯಾದರೆ ಹೇಗಿರುತ್ತದೆ?

ಲಕ್ಷ್ಮಣ್: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಡೆದದ್ದು ಶೇ.17 ಮತಗಳು. ಬಿಜೆಪಿಯವರು ಪಡೆದದ್ದು ಸುಮಾರು ಶೇ.28ರಷ್ಟು. ನಾವು ತೆಗೆದುಕೊಂಡದ್ದು ಶೇ.49ರಷ್ಟು. ಇತರರು ಶೇ.3ರಷ್ಟು ಪಡೆದಿದ್ದಾರೆ. ಮುಸ್ಲಿಮರು, ಹಿಂದುಳಿದ ವರ್ಗದವರು, ಒಕ್ಕಲಿಗರು ಮತ ಹಾಕಿದ್ದರು. ಹಾಗಾಗಿಯೇ ಜೆಡಿಎಸ್‌ಗೆ ಶೇ. 17 ಬಂದಿತ್ತು. ಈಗ ಅದನ್ನು ಶೇ.28ಕ್ಕೆ ಕೂಡಿಸಲು ಆಗುತ್ತದೆಯೇ? ಅಂದರೆ ಜೆಡಿಎಸ್‌ನ ಮತಗಳು ಹಾಗೆಯೇ ಅಲ್ಲಿಗೆ ವರ್ಗಾವಣೆಯಾಗುವುದಿಲ್ಲವಲ್ಲ?

► ಜನರು ಯಾಕಾಗಿ ನಿಮಗೆ ಮತ ಹಾಕುತ್ತಾರೆಂದು ಅನ್ನಿಸುತ್ತದೆ? ಗೆಲುವಿಗೆ ಕಾರಣವಾಗುವ ಅಂಶಗಳು ಯಾವುವು?

ಲಕ್ಷ್ಮಣ್: ರಾಜ್ಯ ಸರಕಾರ ಕೊಟ್ಟಿರುವ ಐದು ಗ್ಯಾರಂಟಿಗಳು. ಶೇ..90ರಷ್ಟು ಮಹಿಳೆಯರಿಗೆ ಪ್ರಯೋಜನವಾಗಿದ್ದು, ಅವರು ನೂರಕ್ಕೆ ನೂರರಷ್ಟು ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳುತ್ತಿದ್ದಾರೆ. ಎರಡನೆಯದು, ದುರಾಡಳಿತ ಇಲ್ಲ. ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ಅವರ ಸರಕಾರಕ್ಕೆ ಕ್ಲೀನ್ ಇಮೇಜ್ ಇದೆ. ಮೂರನೆಯದು, ಕೇಂದ್ರ ಸರಕಾರದ ವಿರುದ್ಧದ ಅಲೆ. ನಾಲ್ಕನೆಯದು ಸಂವಿಧಾನ ಬದಲಿಸಲು ಅವರು ಹೊರಟಿರುವುದು. ಅನಂತ ಕುಮಾರ್ ಹೆಗಡೆ 400 ಸೀಟು ಬಂದರೆ ಏನು ಬೇಕಾದರೂ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಐದನೆಯದಾಗಿ, ಒಂದು ದೇಶ ಒಂದು ಚುನಾವಣೆ ಎಂದು ತರಲು ಹೊರಟಿರುವುದು. ಅಲ್ಲಿಗೆ ಮುಗಿಯಿತು, ಚುನಾವಣೆಗಳೇ ನಡೆಯುವುದಿಲ್ಲ, ಸರ್ವಾಧಿಕಾರ ಬರುತ್ತದೆ.

► ಅದಕ್ಕೆ ಎರಡು ಹೆಜ್ಜೆ ಮಾತ್ರ ಬಾಕಿಯಿದೆ ಎಂದು ಧ್ರುವ ರಾಠಿ ಹೇಳುತ್ತಿದ್ದಾರೆ.

ಲಕ್ಷ್ಮಣ್: ಈಗ 400 ಸೀಟು ಗೆಲ್ಲಿಸಿದರೆ ಎರಡು ಹೆಜ್ಜೆಯೂ ಹೋಗುತ್ತದೆ. ಸರ್ವಾಧಿಕಾರವೂ ಬಂದು, ಜನರಿಗೆ ಒದ್ದು ಕೆಲಸ ತೆಗೆಸಿ, ಊಟ ಹಾಕುತ್ತಾರೆ. ಅಂಥ ಸ್ಥಿತಿ ಬರುತ್ತದೆ. ಆಗಲೇ ಒಂದು ಹಂತಕ್ಕೆ ನಿರ್ಮಾಣ ಮಾಡಿದ್ದಾರೆ. ಅದು ಜನರಿಗೆ ಗೊತ್ತಾಗುತ್ತಿಲ್ಲ.

► ನೀವು ಗೆದ್ದರೆ ಕ್ಷೇತ್ರದ ಜನರಿಗಾಗಿ ಏನು ಮಾಡುತ್ತೀರಿ?

ಲಕ್ಷ್ಮಣ್: ಬಹಳ ಪ್ರಮುಖವಾಗಿ ಮೈಸೂರು ಮತ್ತು ಕೊಡಗನ್ನು ಪ್ರವಾಸಿ ಹಬ್ ಆಗಿಸಬೇಕು ಎಂದುಕೊಂಡಿದ್ಧೇನೆ. ಜನರು ಬರೀ ಬೆಳಗ್ಗೆ ಬಂದು ಸಂಜೆ ಹೊರಟುಬಿಡುವುದಲ್ಲ. ಇಲ್ಲಿ ಇದ್ದು ಇಡೀ ವಾತಾವರಣವನ್ನು ಅನುಭವಿಸಿ ಹೋಗುವ ವ್ಯವಸ್ಥೆ ತರಬೇಕು. ಆಗ ನೇರವಾಗಿ ಪರೋಕ್ಷವಾಗಿ 50ರಿಂದ 60 ಸಾವಿರ ಜನರಿಗೆ ಕೆಲಸ ಸಿಗಲಿದೆ. ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಕೊಡಗು ಸ್ವಿಟ್ಸರ್‌ಲ್ಯಾಂಡ್ ಥರವೇ ಇದೆ. ಅದನ್ನು ಸರಿಯಾಗಿ ಅಭಿವೃದ್ಧಿಪಡಿಸಲೇ ಇಲ್ಲ. ಎರಡನೆಯದಾಗಿ, ಐಟಿ ವಲಯವಾಗಿ ಇದು ಜನಪ್ರಿಯ. ಏಕಕಾಲಕ್ಕೆ 5 ಸಾವಿರ ಜನರಿಗೆ ತರಬೇತಿ ಕೊಡುವ ಕೇಂದ್ರ ಇಲ್ಲಿದೆ. ಅದಕ್ಕೆ ರಾಜ್ಯದಲ್ಲಿ ನಮ್ಮ ಸರಕಾರ ಇದ್ದಾಗಲೇ ಪುಕ್ಕಟೆ ಭೂಮಿ ಮತ್ತೆಲ್ಲ ಸೌಲಭ್ಯಗಳನ್ನು ಕೊಡಲಾಗಿತ್ತು. ಸ್ಥಳೀಯರಿಗೆ ಮೀಸಲಾತಿ ಕೊಡಬೇಕು ಎಂಬುದು ನಮ್ಮ ಬೇಡಿಕೆ. ಅರ್ಹತೆ ಮಾನದಂಡ ಇರಲಿ, ಆದ್ಯತೆ ಕೊಡಿ. ಇಲ್ಲಿಯೇ ಓದಿದವರಿಗೆ ಅವಕಾಶ ಕೊಡಿ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆಯೊಂದಿಗೆ ಅವಕಾಶ ಕೊಡುವ ಪ್ರಯತ್ನ ಮಾಡುತ್ತೇನೆ. ಮೂರನೆಯದಾಗಿ, ಮುಖ್ಯಮಂತ್ರಿಯವರು ಈ ಜಿಲ್ಲೆಯವರು. ಏನು ಬೇಕಾದರೂ ತರಲು ಅವಕಾಶ ಇದೆ. ‘ಇಂಡಿಯಾ’ ಒಕ್ಕೂಟದ ಸರಕಾರ ಕೇಂದ್ರದಲ್ಲಿ ಬಂದರೆ ಇನ್ನೂ ಸಾಕಷ್ಟು ಯೋಜನೆಗಳನ್ನು ತರಬಹುದು. ಏರ್‌ಪೋರ್ಟ್ ರನ್‌ವೇ ವಿಸ್ತರಣೆ ಮಾಡಿದರೆ ಸಾಕು. ದೇಶದ ಮತ್ತು ಪ್ರಪಂಚದ ಜೊತೆ ಸಂಪರ್ಕ ಸಾಧ್ಯವಾಗುತ್ತದೆ. ಆಗ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಜನ ಬರುತ್ತಾರೆ, ಉದ್ಯಮಗಳು ಬರುತ್ತವೆ. ಸಾಕಷ್ಟು ಅಭಿವೃದ್ಧಿಗೆ ಅವಕಾಶ ಇದೆ. ಮೈಸೂರು-ಬೆಂಗಳೂರನ್ನು ಪುಣೆ-ಮುಂಬಯಿ ಮಾದರಿಯಲ್ಲಿ ಅವಳಿ ನಗರ ಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ

contributor

Contributor - ನೇರಳೆ ಸತೀಶ್ ಕುಮಾರ್

contributor

Similar News