ಮಂಗನಬಾವು: ನಿರ್ಲಕ್ಷ್ಯ ಬೇಡ

ಪ್ರಾರಂಭದಲ್ಲಿ ಕಿವಿಯ ಕೆಳಗಡೆ ನೋವು ಕಾಣಿಸಿಕೊಂಡು ಮರುದಿನ ಆ ಜಾಗದಲ್ಲಿ ಊತ ಉಂಟಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಊತ ಕಿವಿಯ ಮುಂಭಾಗ ಹಾಗೂ ಕೆನ್ನೆಗಳನ್ನು ಆವರಿಸುತ್ತದೆ. ಊತ ಹೆಚ್ಚಿದ ಹಾಗೆ ಜ್ವರ ಏರುತ್ತ ಹೋಗುತ್ತದೆ. ಲಾಲಾರಸ ಗ್ರಂಥಿಯ ಊತ ಸಾಮಾನ್ಯವಾಗಿ ಎರಡೂ ಕೆನ್ನೆಗಳಲ್ಲೂ ಬರುತ್ತದೆ. ಒಂದೇ ಕೆನ್ನೆಗೆ ಆವರಿಸುವ ಪ್ರಮಾಣ ಶೇ. 20ರಿಂದ 30ರಷ್ಟು. ಒಂದು ಪಾರ್ಶ್ವದ ಕೆನ್ನೆಯ ಬಾವು ಬಂದ ಒಂದೆರಡು ದಿನಗಳ ನಂತರ ಇನ್ನೊಂದು ಕೆನ್ನೆಗೆ ಲಗ್ಗೆ ಹಾಕಬಹುದು.

Update: 2024-01-25 06:41 GMT

ಹೆಚ್ಚು ಸುದ್ದಿಮಾಡದ, ಸಾವು ನೋವುಗಳಿಗೆ ಕಾರಣವಾಗದ ಸೌಮ್ಯ ಸ್ವರೂಪದ ಸಾಂಕ್ರಾಮಿಕ ಕಾಯಿಲೆ ಮಂಗನಬಾವು. ಈ ವರ್ಷ ಈಗಾಗಲೇ ಅಬ್ಬರಿಸುತ್ತ ಬೊಬ್ಬೆಯಿಡುತ್ತಿದೆ. ಜನವರಿಯಲ್ಲಿಯೇ ಮಕ್ಕಳಲ್ಲಿ ಮಂಗನಬಾವಿನ ಸೋಂಕು ಹೆಚ್ಚಾಗುತ್ತಿದೆ. ಮಂಗನಬಾವಿನ ಪ್ರಕರಣಗಳು ಸಾಮಾನ್ಯವಾಗಿ ಜನವರಿಯಿಂದ ಮೇ ತಿಂಗಳ ನಡುವೆ ಹೆಚ್ಚುತ್ತವೆ. ಆದರೆ,ಸಾಂಕ್ರಾಮಿಕದ ಸ್ಫೋಟ ಪ್ರತೀ 4-5 ವರ್ಷಗಳಿಗೊಮ್ಮೆ ಆಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಲಸಿಕೆ ಬಳಸುವ ಮನೋಭಾವದ ಜನರಿಂದಾಗಿ ಇದರ ಸದ್ದು ಅಡಗಿದೆ. ಭಾರತದಂತಹ ರಾಷ್ಟ್ರಗಳಲ್ಲಿ ಅನಕ್ಷರತೆ, ಅನೈರ್ಮಲ್ಯ, ಅಜ್ಞಾನ, ಮೂಢನಂಬಿಕೆಗಳು ಮಡುಗಟ್ಟಿದ್ದರಿಂದಾಗಿ ಮಂಗನಬಾವಿನ ಮಂಗನಾಟ ಮುಂದುವರಿದೇ ಇದೆ.

ಭಾರತೀಯ ಮಕ್ಕಳ ತಜ್ಞರ ಅಕಾಡಮಿಯ ನಿಯೋಜಿತ ಅಧ್ಯಕ್ಷ ಡಾ.ವಸಂತ ಖಾಲತ್ಕರ್ ಹೇಳಿಕೆಯ ಪ್ರಕಾರ - ನಾಗಪುರದಲ್ಲಿ ಮಂಗನಬಾವಿನ ಪ್ರಕರಣಗಳು ಒಮ್ಮಿಂದೊಮ್ಮೆಲೆ ಜನವರಿಯಲ್ಲಿ ಹೆಚ್ಚಾಗಿವೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಹಾನಗರಗಳಲ್ಲಿಯೂ ಇದೇ ರೀತಿ ಏರಿಕೆ ಕಂಡುಬಂದಿದೆ. ಒಳ್ಳೆಯ ಸುದ್ದಿಯೆಂದರೆ ಎಲ್ಲ ಪ್ರಕರಣಗಳು ಸೌಮ್ಯ ಸ್ವರೂಪದಾಗಿರುವುದು. ಸಂಪೂರ್ಣ ವಿಶ್ರಾಂತಿ, ನೋವು ನಿವಾರಕ ಔಷಧಿ, ಸಾಕಷ್ಟು ದ್ರವಾಹಾರ ಸೇವನೆ ಅವಶ್ಯ. ತೀವ್ರ ತರಹದ ಲಕ್ಷಣಗಳು ಗೋಚರಿಸಿದಾಗ, ಅಲಕ್ಷಿಸದೇ ವೈದ್ಯರನ್ನು ಕಾಣಬೇಕಾಗಿದೆ.

ರೋಗಕಾರಕ

ಮಂಗನಬಾವು ವೈರಸ್ ನಿಂದ ಬರುವ ಕಾಯಿಲೆ. ಈ ವೈರಸ್ ಹೆಸರು ಮಿಕ್ಸೋವೈರಸ್ ಪೆರೋಟಿಡೈಟಿಸ್. ಗಲ್ಲದ ಬಾವು ಕಾಣಿಸಿಕೊಳ್ಳುವುದಕ್ಕಿಂತ ಒಂದು ವಾರ ಮೊದಲು ಮತ್ತು ಬಾವು ಕಾಣಿಸಿಕೊಂಡ ಒಂದೆರಡು ದಿನ ಮಾತ್ರ ಸೋಂಕನ್ನು ರೋಗಿ ಬೇರೆಯವರಿಗೆ ಕೊಡಬಹುದು. ಆನಂತರ ಸೋಂಕು ಹರಡುವಿಕೆಯ ಶಕ್ತಿ ಸತ್ವಹೀನಗೊಳ್ಳುವುದು.

ಈ ರೋಗಕ್ಕೆ ಕೆನ್ನೆಬಾವು, ಕೆನ್ನೆಬೀಗು, ಕೆಪ್ಪಟರಾಯ, ಗದ್ದಕಟ್ಟು, ಸಿಂಗಾರಗೌರಿಬೇನೆ, ಕೆಪ್ಪಟೆ ಎಂತಲೂ ಕರೆಯುವುದುಂಟು. 5ರಿಂದ 9 ವರ್ಷದ ಮಕ್ಕಳಲ್ಲಿ ಇದರ ಹಾವಳಿ ಹೆಚ್ಚು.

ರೋಗ ಪ್ರಸಾರ

ರೋಗದಿಂದ ಬಳಲುತ್ತಿರುವ ರೋಗಿಗಳೇ ಸೋಂಕಿನ ಮೂಲವಾಗಿರುತ್ತಾರೆ. ಪೂರ್ವಭಾವಿ ಕಾಲಾವಧಿಯಲ್ಲಿಯೇ ರೋೀಗಿಗಳು ಸೋಂಕನ್ನು ಬೇರೆಯವರಿಗೆ ಬಳುವಳಿ ಕೊಡುವ ಸ್ಥಿತಿಯಲ್ಲಿರುತ್ತಾರೆ. ರೋಗಿಗಳ ನಿಕಟ ಸಂಪರ್ಕ ರೋಗ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪರೋಕ್ಷವಾಗಿ ರೋಗಿ ಬಳಸುವ ರೋಗವಾಹಕ ವಸ್ತುಗಳಿಂದ ಅಂದರೆ ವಸ್ತ್ರ-ಒಡವೆಗಳಿಂದ, ಪಾತ್ರೆಗಳಿಂದ, ಹಾಸಿಗೆ ಹೊದಿಕೆಗಳನ್ನು ಮತ್ತೊಬ್ಬರು ಬಳಸುವುದರಿಂದಲೂ ರೋಗ ಹರಡಬಹುದು. ಅನೇಕರ ದೇಹದಲ್ಲಿ ಈ ವೈರಸ್ ಸೋಂಕು ಬೆಳವಣಿಗೆ ಹೊಂದಿದರೂ ಬಹಿರಂಗದಲ್ಲಿ ಯಾವ ಲಕ್ಷಣಗಳನ್ನು ಪ್ರಕಟಗೊಳಿಸದೆ ರೋಗದ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಇದರ ಪ್ರಮಾಣ ಶೇ.30ರಿಂದ 40ರಷ್ಟು ಇರುತ್ತದೆ.ಒಮ್ಮೆ ರೋಗದಿಂದ ಬಳಲಿದರೆ ಜೀವನ ಪರ್ಯಂತ ರೋಗ ಪ್ರತಿರೋಧಕ ಶಕ್ತಿ ಉಳಿಯುತ್ತದೆ.

ಈ ರೋಗ ಶಾಲೆಗೆ ಹೋಗುವ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಲಿಂಗಭೇದವಿಲ್ಲದೆ ತೋರಿಬರುತ್ತದೆ. ಮಂಗನಬಾವು ವೈರಸ್ ಜೊಲ್ಲಿನ ತುಂತುರು ಹನಿಗಳ ಮೂಲಕ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

ರೋಗದ ಲಕ್ಷಣಗಳು

ರೋಗ ದೇಹದಲ್ಲಿ ಬೆಳೆಯುವ ಕಾಲ 14ರಿಂದ 21 ದಿನಗಳು. ಸರಾಸರಿ 17 ದಿನಗಳಲ್ಲಿ ರೋಗ ಏಕಾಏಕಿಯಾಗಿ ಪ್ರಕಟಗೊಳ್ಳುತ್ತದೆ. ಪೂರ್ವಭಾವಿ ಕಾಲದಲ್ಲಿ ಸಣ್ಣಗೆ ಜ್ವರ, ಗಂಟಲು ನೋವು, ಕಿವಿ ನೋವುಗಳ ಜೊತೆಗೆ ಮೆಲುಕಾಡಿಸುವಾಗ ಮಲಕಿನಲ್ಲಿ ನೋವು ಕಾಣಿಸುತ್ತದೆ. ಮಲಕಿನ ಕೆಳಗೆ ಮುಟ್ಟಿದರೆ ನೋವಾಗಬಹುದು ಅಥವಾ ಲಾಲಾರಸ ಸ್ರವಿಸುವ ಗ್ರಂಥಿಯ ನಾಳದ ಕೊನೆಯಲ್ಲಿ ಊತ ಕೆಂಪಡರಿಕೆ ಕಾಣುತ್ತದೆ.

ಪ್ರಾರಂಭದಲ್ಲಿ ಕಿವಿಯ ಕೆಳಗಡೆ ನೋವು ಕಾಣಿಸಿಕೊಂಡು ಮರುದಿನ ಆ ಜಾಗದಲ್ಲಿ ಊತ ಉಂಟಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಊತ ಕಿವಿಯ ಮುಂಭಾಗ ಹಾಗೂ ಕೆನ್ನೆಗಳನ್ನು ಆವರಿಸುತ್ತದೆ. ಊತ ಹೆಚ್ಚಿದ ಹಾಗೆ ಜ್ವರ ಏರುತ್ತ ಹೋಗುತ್ತದೆ. ಲಾಲಾರಸ ಗ್ರಂಥಿಯ ಊತ ಸಾಮಾನ್ಯವಾಗಿ ಎರಡೂ ಕೆನ್ನೆಗಳಲ್ಲೂ ಬರುತ್ತದೆ. ಒಂದೇ ಕೆನ್ನೆಗೆ ಆವರಿಸುವ ಪ್ರಮಾಣ ಶೇ. 20ರಿಂದ 30ರಷ್ಟು. ಒಂದು ಪಾರ್ಶ್ವದ ಕೆನ್ನೆಯ ಬಾವು ಬಂದ ಒಂದೆರಡು ದಿನಗಳ ನಂತರ ಇನ್ನೊಂದು ಕೆನ್ನೆಗೆ ಲಗ್ಗೆ ಹಾಕಬಹುದು. ಗದ್ದದ ಕೆಳಗಿನ ಗ್ರಂಥಿಗಳೂ ಊದಿಕೊಳ್ಳಬಹುದು. ಈ ಅವಧಿಯಲ್ಲಿ ಒಬ್ಬೊಬ್ಬರಿಗೆ ವಾಂತಿ ಆಗಬಹುದು. ವಾರಗಟ್ಟಲೆ ಪೀಡಿಸಿದ ಜ್ವರ ಇಳಿಮುಖವಾಗಬಹುದು. ಮುಂದಿನ ವಾರದಲ್ಲಿ ಮಗು ಮೊದಲಿನಂತಾಗುತ್ತದೆ.

ಮಂಗನಬಾವು ಬಂದ ಮಗುವಿಗೆ ತಲೆನೋವು ಕಾಡಿದರೆ, ಕತ್ತಿನಲ್ಲಿ ನೋವು, ಬಿಗಿ ಕಂಡರೆ, ಸೆಳವುಗಳು ಗೋಚರಿಸಿದರೆ, ಮಗುವಿಗೆ ಮಂಪರು ಮುತ್ತಿದರೆ, ಪ್ರಜ್ಞಾ ಸ್ಥಿತಿಯಲ್ಲಿ ಬದಲಾವಣೆಗಳು ತೋರಿದಲ್ಲಿ ಅಲಕ್ಷಿಸದೆ ತಕ್ಷಣ ತಜ್ಞ ವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕು. ಈ ಸೋಂಕಿನ ಸುಳಿಯಲ್ಲಿ ಸಿಕ್ಕವರೆಲ್ಲ ಎಲ್ಲ ಲಕ್ಷಣಗಳನ್ನು ತೋರ್ಪಡಿಸಬೇಕೆಂಬ ಕಡ್ಡಾಯವೇನಿಲ್ಲ. ಕೆಲವು ಮಕ್ಕಳಲ್ಲಿ ಕೆನ್ನೆ ಸ್ವಲ್ಪ ಊದಿ, ಜ್ವರ ಬಾರದೇ ಹೋಗಬಹುದು. ಅವರಿಗೆ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿದೆ ಎಂದು ಅರ್ಥ.

ದುಷ್ಪರಿಣಾಮಗಳು

ಈ ರೋಗವು ಮಕ್ಕಳಲ್ಲಿ ಅಪರೂಪಕ್ಕೆ ವೃಷಣದ ಉರಿತ ಆಗಬಹುದು. ಆದರೆ, ವಯಸ್ಕರಲ್ಲಿ ಇದರ ಹಾವಳಿ ಹೆಚ್ಚು. ಯುವತಿಯರಲ್ಲಿ ಅಂಡಾಶಯ ಉರಿತವಾಗಿ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಉಂಟಾಗಬಹುದು. ಇವು ಮುಂದೆ ಬಂಜೆತನಕ್ಕೂ ಕಾರಣವಾಗಬಹುದು.

ಕೆಲವರಲ್ಲಿ ಮೇದೋಜ್ಜೀರಕ ಗ್ರಂಥಿಯ ಉರಿತ ಉದ್ಭವಿಸಿ, ಏಕಾ ಏಕಿಯಾಗಿ ತೀವ್ರತರ ಹೊಟ್ಟೆನೋವು, ವಾಂತಿ, ಭೇದಿ, ಸುಸ್ತು, ಆಘಾತಗಳುಂಟಾಗಬಹುದು. ಚಳಿ ಮತ್ತು ಜ್ವರ ಉಂಟಾಗಬಹುದು. ಇನ್ನು ಕೆಲವರಲ್ಲಿ ಮಿದುಳು ಪೊರೆ ಉರಿತದಿಂದ ವಿಪರೀತ ತಲೆನೋವು, ಜ್ವರ, ವಾಂತಿ, ಮಂಪರು, ಸೆಳವು ತೋರಬಹುದು.

ಶ್ರವಣ ನರದ ಉರಿತದಿಂದ ಕಿವುಡುತನ, ಹೃದಯ ಮಾಂಸಖಂಡ ಉರಿತ, ಕೀಲುಗಳ ಉರಿತ, ಯಕೃತ್ತಿನ ಉರಿತ ಮಂಗನಬಾವಿನಿಂದ ಉಂಟಾಗಬಹುದಾದ ಇತರ ತೊಡಕುಗಳು .

ಆರೈಕೆ ಹೇಗೆ?

ಮಂಗನಬಾವು ಬಂದಾಗ ಗಲ್ಲದ ಬಾವು ಭಯಂಕರವಾಗಿ ತೋರಿದರೂ, ಆ ಬಾವು ಬಹುದಿನ ಉಳಿಯುವುದಿಲ್ಲ ಮತ್ತು ಕೀವು ಆಗುವುದಿಲ್ಲ. ರೋಗಿಯಲ್ಲಿ ಬಾವು ಕಾಣಿಸಿಕೊಳ್ಳುವ ಮೊದಲೇ ರೋಗವನ್ನು ಇತರರಿಗೆ ಹಂಚುವುದರಿಂದ ರೋಗಿಯನ್ನು ಪ್ರತ್ಯೇಕವಾಗಿ ಇರಿಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ತೊಂದರೆಗಳಿಗೆ ತಕ್ಕ ಚಿಕಿತ್ಸೆಯನ್ನು ಮಾಡಬೇಕಾಗುವುದು. ರೋಗಿಯ ಬಾಯಿ ತೊಳೆದು ಸ್ವಚ್ಛವಾಗಿರಿಸಬೇಕು. ಇವರಿಗೆ ಹೆಚ್ಚಾಗಿ ದ್ರವ ಆಹಾರ, ಇಲ್ಲವೆ ಮೆತ್ತಗಿರುವ ಆಹಾರವನ್ನು ಕೊಡಬೇಕು. ನೋವು ಶಮನಕ್ಕಾಗಿ ನೋವು ನಿವಾರಕ ಗುಳಿಗೆಗಳನ್ನು ನೀಡಬೇಕು. ದ್ವಿತೀಯ ಸೋಂಕು ಮತ್ತು ದುಷ್ಪರಿಣಾಮಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜೀವನಿರೋಧಕಗಳನ್ನು ನೀಡಬೇಕು.

ಪ್ರತಿಬಂಧಕೋಪಾಯಗಳು

* ಎಂ.ಎಂ.ಆರ್.ಲಸಿಕೆಯನ್ನು ಮೌರಿಸ್ ಹಿಲೆಮನ್ 1967ರಲ್ಲಿ ಕಂಡು ಹಿಡಿದರು. ಇದನ್ನು ಮಕ್ಕಳಿಗೆ ಶಾಲೆಗೆ ಹೋಗುವ ಪೂರ್ವದಲ್ಲಿ ಎರಡು ಸಲ ನೀಡಬೇಕು.

* ಮಗುವಿಗೆ 12 ರಿಂದ 15 ತಿಂಗಳ ಅವಧಿಯಲ್ಲಿ ಒಮ್ಮೆ, 4 ರಿಂದ 6 ವರ್ಷಗಳ ನಡುವೆ ಮತ್ತೊಮ್ಮೆ ಚುಚ್ಚುಮದ್ದನ್ನು (ಲಸಿಕೆ) ನೀಡುವುದರಿಂದ ಮಂಗನಬಾವಿನಿಂದ ಮಗು ಸಂಪೂರ್ಣ ರಕ್ಷಣೆ ಪಡೆಯುವುದು. ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗುವಿಗೆ, ರಕ್ತದ ವೈಪರೀತ್ಯಗಳಿರುವ ಮಗುವಿಗೆ, ಮಗುವಿನ ರೋಗ ಪ್ರತಿರೋಧಕ ಶಕ್ತಿ ಕುಗ್ಗಿಸುವ ಎಚ್.ಐ.ವಿ./ ಏಡ್ಸ್ ರೋಗದಿಂದ ಮಗು ಬಳಲುತ್ತಿದ್ದರೆ, ಸ್ಟಿರಾಯ್ಡ್ ಚಿಕಿತ್ಸೆ ಮಗು ಪಡೆಯುತ್ತಿದ್ದರೆ, ಮಗು ನಾಲ್ಕು ವಾರಗಳೊಳಗೆ ಬೇರೆ ಲಸಿಕೆ ಪಡೆದಿದ್ದರೆ ವೈದ್ಯರೊಡನೆ ಸಮಾಲೋಚನೆ ಅವಶ್ಯ ಎಂಬುದನ್ನು ಪಾಲಕರು ಮರೆಯಬಾರದು. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ಮಂಗನಬಾವಿನಿಂದ ಬಳಲದೇ ಇದ್ದರೆ, ಅವರಿಗೆ ಒಂದು ಡೋಸ್ ಲಸಿಕೆಯನ್ನು ನೀಡಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News