ಹುತಾತ್ಮರ ದಿನವೂ ಮಹಾತ್ಮಾ ಗಾಂಧೀಜಿಯವರ ವಿಚಾರಗಳೂ...

ವರ್ಷಗಳು ಉರುಳುತ್ತಿರುವಂತೆ, ಭಾರತದ ಹಲವು ಪ್ರಜ್ಞಾವಂತ ಮನಸ್ಸುಗಳು ಜನವರಿ 30ನೇ ದಿನದಂದು ಕೆಲವು ವಿಚಾರಗಳನ್ನಾದರೂ ವಿಶ್ಲೇಷಣಾ ಒರೆಗಲ್ಲಿಗೆ ಹಚ್ಚುತ್ತವೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಸಮಷ್ಟಿಯ ಹಿತದಲ್ಲಿ, ನಮ್ಮ ರಾಷ್ಟ್ರದ ಏಳಿಗೆಗಾಗಿ, ತಮ್ಮ ಪ್ರಾಣವನ್ನು ಅರ್ಪಿಸಿದ ವಿಸ್ತೃತ ದೃಷ್ಟಿಕೋನದ, ವಿಶಾಲಹೃದಯಿಗಳ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕಾದದ್ದು ಈ ದಿನದ ವೈಶಿಷ್ಟ್ಯ. ಇಂತಹ ಅನೇಕ ವ್ಯಕ್ತಿಗಳನ್ನು ಒಂದರ್ಥದಲ್ಲಿ ಮಹಾತ್ಮಾ ಗಾಂಧೀಜಿಯವರು ಪ್ರತಿನಿಧಿಸುತ್ತಾರಾದ್ದರಿಂದ, ಅವರು ನಂಬಿದ, ಪಾಲಿಸಿದ ಕೆಲವು ಮೌಲ್ಯಗಳ ಕುರಿತು ಚಿಂತನ-ಮಂಥನ ನಡೆಸಿ, ಅದರಂತೆ ಮಧ್ಯಪ್ರವೇಶವನ್ನು ಮಾಡುವ ನಿಟ್ಟಿನತ್ತ ಗಮನವನ್ನು ಹರಿಸಬೇಕಿರುವುದು ವರ್ತಮಾನದ ಅವಶ್ಯ.
ಹಂತ, ಹಂತವಾಗಿ ಬೆಳೆದ ಬಾಪು ಅವರದ್ದು ಏಕಮಸೂರದ ದರ್ಶನವಾಗಿರಲಿಲ್ಲ. ಅವರು ತನ್ನನ್ನು ಸನಾತನಿ ಹಿಂದೂ ಎಂದು ಬಣ್ಣಿಸಿಕೊಂಡರೂ, ಕೂಪ ಮಂಡೂಕದ ಮನೋವಲಯದಾಚೆ ಚಿಂತನೆಗಳನ್ನು ಹರಿಸುವ, ಕಾರ್ಯೋನ್ಮುಖರಾಗುವ ಮನಸ್ಸನ್ನು ಹೊಂದಿದ್ದರು. ಸುಮಾರು 1930ರ ಹಿಂದಿನ ವರ್ಷಗಳವರೆಗೂ ಗಾಂಧೀಜಿಯವರಿಗೆ ಅಂಬೇಡ್ಕರ್ ಉಗ್ರವಾಗಿ ಪ್ರತಿಪಾದಿಸುತ್ತಿದ್ದ ಹಿಂದೂ ಮತದ ಜಾತಿವ್ಯವಸ್ಥೆಯ ಕಟುಟೀಕೆಗಳ ಬಗೆಗೆ ಭಿನ್ನಾಭಿಪ್ರಾಯಗಳಿದ್ದವು. ಅವರಿಗೆ ಜಾತಿವ್ಯವಸ್ಥೆಯ ರಚನೆಗೆ ಧಕ್ಕೆಯಾದರೆ, ಸಮಾಜದಲ್ಲಿ ಅವ್ಯವಸ್ಥೆ ಮತ್ತು ಪ್ರಕ್ಷುಬ್ಧತೆ ಉಂಟಾಗಬಹುದು ಎಂಬ ಆತಂಕದ ಆಲೋಚನೆಗಳು ಇದ್ದವು. ಹೀಗಾಗಿ ಅವರು ಸಹಪಂಕ್ತಿ ಭೋಜನ, ಅಂತರ್ಜಾತಿ-ಮತಗಳ ವಿವಾಹಗಳ ಪರವಾಗಿರಲಿಲ್ಲ. ಇದೇ ಕಾರಣದಿಂದ, ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ತಮ್ಮ ಮಗ ಮಣಿಲಾಲ್, ಮುಸಲ್ಮಾನ ಯುವತಿಯನ್ನು ಮದುವೆಯಾಗಲು ಬಯಸಿದಾಗ ಅಸಮ್ಮತಿಸಿದ್ದರು! ಇನ್ನೊಬ್ಬ ಮಗ ದೇವದಾಸ್, ಬ್ರಾಹ್ಮಣರಾಗಿದ್ದ ಸಿ. ರಾಜಗೋಪಾಲಾಚಾರಿಯವರ ಮಗಳಾದ ಲಕ್ಷ್ಮೀಯನ್ನು ವರಿಸಲು ಐದು ವರ್ಷಗಳ ಕಾಲ ಕಾಯಬೇಕಾಯಿತು!
ಆದರೆ ನಂತರದ ವರ್ಷಗಳಲ್ಲಿ ಹಿಂದೂ ಮತದ ಜಾತಿವ್ಯವಸ್ಥೆಯ ಬಗೆಗಿನ ಅವರ ನಿಲುವುಗಳು ಬದಲಾದವು. ಅದು ಹಿಂದೂ ಮತಕ್ಕೆ ಮಾರಕ ಎಂಬ ತೀರ್ಮಾನಕ್ಕೆ ಅವರು ಬಂದರು. ಇದಕ್ಕೆ ಅಂಬೇಡ್ಕರ್ ಅವರ ಜೊತೆಗಿನ ವಾದ-ವಾಗ್ವಾದಗಳೂ ಕೂಡ ಒಂದು ಪ್ರಮುಖ ಕಾರಣವಾಗಿತ್ತು ಎನ್ನಬಹುದು. ನಂತರದ ವರ್ಷಗಳಲ್ಲಿ ಅವರು ಅಂತ್ಯಜರ ಹಿತದಲ್ಲಿ ಅನೇಕ ದಿಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದನ್ನು ಸ್ಮರಿಸಬಹುದು.
ಮಹಾತ್ಮಾ ಗಾಂಧೀಜಿಯವರು ಸನಾತನ ಧರ್ಮವನ್ನು ಎತ್ತಿಹಿಡಿದಿದ್ದರೂ ಇತರ ಮತಗಳ ಬಗೆಗೆ ದ್ವೇಷದ ನಂಜನ್ನು ಹರಿಸುತ್ತಿರಲಿಲ್ಲ; ಅವುಗಳನ್ನು ಕೀಳಾಗಿ ಕಾಣುತ್ತಿರಲಿಲ್ಲ. ಅವರು ಮತಶ್ರೇಷ್ಠತೆಯ ವ್ಯಸನಿಯಾಗಿರಲಿಲ್ಲ. ನಿಜಾರ್ಥದಲ್ಲಿ ಎಲ್ಲ ಮತಗಳ ಬಗೆಗೆ ಸಹಿಷ್ಣುತಾ ಭಾವವನ್ನು ಹೊಂದಿದ್ದರು. ಅನ್ಯಸಂಸ್ಕೃತಿಗಳ ಬಗೆಗೆ ಅವರದ್ದು ಉದಾರ ನಿಲುವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ, ‘‘ನಮ್ಮ ಮನೆಯ ಕಿಟಕಿ, ಬಾಗಿಲುಗಳು ತೆರೆದಿರಬೇಕು, ಹಾಗಿದ್ದರೆ ಮಾತ್ರ ಗಾಳಿ, ಬೆಳಕುಗಳು ಒಳಗೆ ಬರುತ್ತವೆ’’ ಎಂಬರ್ಥದ ಅವರ ಮಾತುಗಳು ಮನನಯೋಗ್ಯ.
ಅವರಿಗಿದ್ದ ರಾಷ್ಟ್ರವಾದದ ಅಭಿಪ್ರಾಯಗಳ ಬಗೆಗೆ ಗುರುದೇವ ರವೀಂದ್ರನಾಥ್ ಟಾಗೋರರು ಭಿನ್ನಮತವನ್ನು ವ್ಯಕ್ತಪಡಿಸುತ್ತಿದ್ದರು. ತಾವು ‘ಅಂತರ್‌ರಾಷ್ಟ್ರೀಯ’ ವಾದವನ್ನು ಎತ್ತಿಹಿಡಿಯುವುದಾಗಿ ಬಾಪೂ ಅವರಿಗೆ ತಿಳಿಸಿದ್ದರು. ಅಂಬೇಡ್ಕರ್ ಅವರಿಗೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಕುರಿತು ಸಹಮತವಿರಲಿಲ್ಲ. ಎಡಪಂಥೀಯರು ಮತ್ತು ಗಾಂಧೀಜಿಯವರು ಆರ್ಥಿಕತೆಗೆ ಸಂಬಂಧಿಸಿದಂತೆ ಭಿನ್ನ ಪಾಳಯಗಳಲ್ಲಿದ್ದರು. ಅಷ್ಟೇ ಏಕೆ, ಕಾಂಗ್ರೆಸ್ ಪಕ್ಷದಲ್ಲೇ, ಜವಾಹರಲಾಲ್‌ನೆಹರೂ, ಸುಭಾಷ್ ಚಂದ್ರ ಬೋಸ್‌ಮುಂತಾದವರು ಗಾಂಧೀಜಿಯವರ ಕೆಲವು ವಿಚಾರಗಳ ಸಮರ್ಥಕರಾಗಿರಲಿಲ್ಲ. ಕೈಗಾರಿಕೀಕರಣ ಕುರಿತಂತೆ ನೆಹರೂ ಮತ್ತು ಗಾಂಧೀಜಿಯವರಿಗೆ ಭಿನ್ನ ನೋಟಗಳಿದ್ದವು. ನಾಸ್ತಿಕರಾಗಿದ್ದ ಗೋರಾ ಗಾಂಧೀಜಿಯವರ ಅನುಯಾಯಿಯಾಗಿದ್ದರೂ, ಅವರೀರ್ವರ ನಡುವೆ ದೇವರು, ಆಸ್ತಿಕತೆ ಮುಂತಾದ ವಿಷಯಗಳ ಬಗೆಗೆ ಭಿನ್ನಾಭಿಪ್ರಾಯಗಳಿದ್ದವು. ಆದರೂ ಗಾಂಧೀಜಿಯವರು ಭಿನ್ನಮತ ಹೊಂದಿರುವವರ ಜೊತೆ ಮುಕ್ತವಾಗಿ, ಸೌಹಾರ್ದಯುತ ಸಂವಾದಗಳನ್ನು ನಡೆಸುತ್ತಿದ್ದರು.
ಮುಖ್ಯವಾಗಿ ಗಾಂಧೀಜಿಯವರಿಗೆ ನಮ್ಮ ರಾಷ್ಟ್ರದ ಸಮ್ಮಿಳಿತ(ಬಹುಮುಖಿ) ಸಂಸ್ಕೃತಿ ಬಗೆಗೆ ಆಳವಾದ ನಂಬಿಕೆ ಹಾಗೂ ಆದರವಿತ್ತು. ಸಹಬಾಳ್ವೆಗೆ ಬಹುತ್ವದ ಬಗೆಗಿನ ಇತ್ಯಾತ್ಮಕ ನಿಲುವು ಅವಶ್ಯ ಎಂಬ ಅಂಶವನ್ನು ಗ್ರಹಿಸಿದ ಅವರು ಅದಕ್ಕಾಗಿ ಶ್ರಮಿಸಿದರು. ಕೋಮು ದಂಗೆಗಳಾದಾಗ ಸಕಾರಾತ್ಮಕವಾಗಿ ಸ್ಪಂದಿಸಿ, ಕ್ರಿಯಾಶೀಲರಾಗುತ್ತಿದ್ದರು. ಕೋಮು ಸಾಮರಸ್ಯ ನೆಲೆಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದರು.
ಇಂತಹ ಮೌಲ್ಯಗಳನ್ನು ಹೊಂದಿದ್ದ ಮಹಾನ್ ವ್ಯಕ್ತಿ ಗಾಂಧೀಜಿ ಒಬ್ಬ ಹಿಂದುತ್ವದ ಕಟ್ಟರ್ ಪ್ರತಿಪಾದಕನಾಗಿದ್ದ ನಾಥೂರಾಮ್ ಗೋಡ್ಸೆಯ ಗುಂಡೇಟಿನಿಂದ ಹತರಾದರು. ಮಾನವೀಯತೆ, ಶಾಂತಿಯನ್ನು ಪ್ರೀತಿಸುತ್ತಿದ್ದ, ಬಾಳುತ್ತಿದ್ದ ಒಬ್ಬ ಹಿಂದೂವನ್ನು ಇನ್ನೊಬ್ಬ ಮತಾಂಧ ಹಿಂದೂ ಹತ್ಯೆ ಮಾಡಿದುದರ ಹಿಂದೆ ಯಾವ ಶಕ್ತಿಗಳಿದ್ದವು, ಅವು ಯಾವ ವಾತಾವರಣವನ್ನು ಸೃಷ್ಟಿಸಿದ್ದವು ಎಂಬುದು ಇಂದು ಕೂಡ ಮನನಯೋಗ್ಯ ವಿಷಯವೇ. ಬಹುಸಂಖ್ಯಾತ ಮತಾಧಾರಿತ ರಾಷ್ಟ್ರವಾಗಬೇಕು, ಅದಕ್ಕೆ ತಕ್ಕಂತೆ ನಮ್ಮ ಸಂವಿಧಾನವನ್ನು ಬದಲಿಸಬೇಕು ಎಂದು ಷಡ್ಯಂತ್ರಗಳನ್ನು ಹೆಣೆಯುತ್ತಿರುವ ಶಕ್ತಿಗಳ ಆಟಾಟೋಪಗಳು ವೃದ್ಧಿಸುತ್ತಿರುವಾಗ, ಪ್ರಜ್ಞಾವಂತ ನಾಗರಿಕರು ಸೂಕ್ತವಾಗಿ ಮಧ್ಯಪ್ರವೇಶ ಮಾಡಿದರೆ ಮಾತ್ರ ನಾವು ಉತ್ತಮ ನಾಳೆಗಳನ್ನು ಕಾಣಬಹುದು.
ಮಹಾತ್ಮಾ ಗಾಂಧೀಜಿಯವರನ್ನು ಕೊಲೆಗೈದ ಗುಂಡುಗಳು ಅವರನ್ನು ಭೌತಿಕವಾಗಿ ಇಲ್ಲವಾಗಿಸಿದವು. ಆದರೆ ಅವರು ಎತ್ತಿಹಿಡಿದ ಮೌಲ್ಯಗಳಿಗೆ ಸಾವಿಲ್ಲ!