ಸಮಸ್ಯೆಗಳ ಸುಳಿಯಲ್ಲಿ ವೈದ್ಯಕೀಯ ವೃತ್ತಿ

ರೋಗಿ ವೈದ್ಯರನ್ನು ನೋಡುವ ಮುನ್ನ ಅವನು ಎಲ್ಲಿ ನನ್ನನ್ನು ಸುಲಿದುಬಿಡುತ್ತಾನೋ ಎಂಬ ಅನುಮಾನ ರೋಗಿಗೆ. ರೋಗಿ ತನ್ನನ್ನು ಯಾವ ಕಾನೂನು ಕಟ್ಟಳೆಗೆ ಎಳೆದು ಬಿಡುತ್ತಾನೋ ಎಂಬ ಆತಂಕ ವೈದ್ಯನಿಗೆ ಉಂಟಾಗಿರುವ ಸಂದಿಗ್ಧ ಅನುಮಾನದ ಸನ್ನಿವೇಶ ಇಂದು ನಿರ್ಮಾಣವಾಗಿದೆ. ಅನುಮಾನದ ಪರಿಸರದಲ್ಲಿ ವೈದ್ಯ ರೋಗಿಯ ನಡುವೆ ಆತ್ಮವಿಶ್ವಾಸ ಬೆಳೆಯಲು ಸಾಧ್ಯವೇ? ಖಂಡಿತಾ ಇಲ್ಲ.

Update: 2024-02-20 05:12 GMT

ವೆದ್ಯಕೀಯ ವೃತ್ತಿ ಈಗ ಕವಲುದಾರಿಯಲ್ಲಿ ನಿಂತಿವೆ. ವೈದ್ಯ-ರೋಗಿಗಳ ಸಂಬಂಧ ಹಳಸಿದೆ. ವಿಶ್ವಾಸ ನಂಬಿಕೆ ನೆಲ ಕಚ್ಚಿದೆ. ಜನರ ನಿರೀಕ್ಷೆಗಳು ಗಗನಕ್ಕೇರಿವೆ. ಸಮಾಜದಲ್ಲಿಯ ಕನಿಷ್ಠ ಸಹನೆ, ಸಂಯಮ ಶಕ್ತಿ ಭಾರತೀಯ ಜನಮಾನಸಗಳಿಂದ ಮಾಯವಾಗಿವೆ. ಸರಕಾರಿ ಆಸ್ಪತ್ರೆಗಳಲ್ಲಿಯ ವೈದ್ಯರ ಕೊರತೆ, ಔಷಧಿ, ಸಲಕರಣೆಗಳ, ಪರಿಕರಗಳ ಕೊರತೆ......ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿವೆ. ಇವೆಲ್ಲ ಗೊಂದಲ, ಗೌಜುಗಳು ವೈದ್ಯರ ಮೇಲಿನ ಹಲ್ಲೆಗೆ ನಾಂದಿ ಹಾಡಿವೆ.

ತಗ್ಗು, ಗುಂಡಿಗಳ ಹದಗೆಟ್ಟ ರಸ್ತೆ, ಬೇಕಾಬಿಟ್ಟಿ ಓಡಿಸುವ ವಾಹನ ಚಾಲಕರು, ಹೆಚ್ಚುತ್ತಿರುವ ಅಪಘಾತಗಳು. ಹೀಗಾಗಿ ಜನರು ಆಸ್ಪತ್ರೆಯಲ್ಲಿ ಅಸು ನೀಗಿದಾಗ, ವೈದ್ಯರಿಗೆ ಹೊಡೆತ.... ದುಶ್ಚಟಗಳ ದಾಸ್ಯದಲ್ಲಿ ಹೃದಯ, ಲಿವರ್ ವೈಫಲ್ಯಗೊಂಡು ಆಸ್ಪತ್ರೆಯಲ್ಲಿ ರೋಗಿಯ ಸಾವಾದರೂ ವೈದ್ಯರಿಗೆ ಗುದ್ದು...... ನಗರಗಳ ಅವ್ಯವಸ್ಥೆಯಿಂದಾಗಿ ಡೆಂಗಿ ದಾಳಿಯಿಂದ ಆಸ್ಪತ್ರೆಯಲ್ಲಿ ಮಗುವಿನ ಸಾವಾದರೂ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ.... ಕೋವಿಡ್-19 ಕಾಲಘಟ್ಟದಲ್ಲಿ ವೈದ್ಯರು ಪ್ರಾಣವನ್ನು ಪಣಕ್ಕಿಟ್ಟು ರೋಗಿಗಳಿಗೆ ಸೇವೆ ಸಲ್ಲಿಸಿದ್ದರೂ, ಚಿಕಿತ್ಸೆ ಫಲಪ್ರದವಾಗದೆ ರೋಗಿಗಳು ಸತ್ತಾಗ, ರೋಗಿಗಳ ಸಂಬಧಿಕರು ಇಲ್ಲ ಸಲ್ಲದ ಆರೋಪ ಮಾಡುತ್ತ, ವೈದ್ಯರಿಗೆ, ಸಹಾಯಕ ಸಿಬ್ಬಂದಿಗೆ ಹಲ್ಲೆ ಮಾಡಿದ್ದು ಎಲ್ಲರಿಗೂ ಗೊತ್ತು. ಇದು ಒಂದು ಊರಲ್ಲಿ ಅಲ್ಲ. ದೇಶದ ಎಲ್ಲಾ ಕಡೆ ನಡೆದಿರುವುದು ವಿಷಾದನೀಯ. ನಾವು ರಾಜಕಾರಣಿಗಳನ್ನು ಎಂದೂ ಕೇಳುವುದಿಲ್ಲ. ಕೆಟ್ಟ ರಸ್ತೆ ನಿರ್ಮಿಸಿದವರ, ಭ್ರಷ್ಟ ಅಧಿಕಾರಿಗಳ, ಕುಡುಕ ಡ್ರೈವರ್‌ಗಳನ್ನು ಎಂದೂ ಬೈಯುವುದಿಲ್ಲ. ಬಡಿಯುವುದಿಲ್ಲ. ಆದರೆ, ವೈದ್ಯರ ಮೇಲೆ ಹಲ್ಲೆ ಮಾಡಲು ಮರೆಯುವುದಿಲ್ಲ.

ಇಂದಿನ ಕಾಲಘಟ್ಟದಲ್ಲಿ ವೈದ್ಯ ವೃತ್ತಿಯು ಗೊಂದಲದಲ್ಲಿ ಮತ್ತು ದ್ವಂದ್ವದಲ್ಲಿ ಬಂದು ನಿಂತಿದೆ. ಪ್ರಸಕ್ತ ನಮ್ಮ ಸುತ್ತಮುತ್ತಲೂ ವೈದ್ಯರ ಮೇಲೆ ನಡೆಯುವ ದಾಳಿ, ಆಸ್ಪತ್ರೆಯ ಮೇಲೆ ನಡೆಯುವ ಗೂಂಡಾಗಿರಿ ಕಂಡಾಗ, ಆಸ್ಪತ್ರೆಯಲ್ಲಿರುವುದಕ್ಕಿಂತ ಮನೆಯಲ್ಲಿಯೇ ನೆಮ್ಮದಿಯಿಂದ ಉಸಿರು ಬಿಡುವುದು ಲೇಸು ಎನ್ನುವ ನಕಾರಾತ್ಮಕ ಚಿಂತನೆಗಳೇ ಹೆಚ್ಚಾಗಿವೆ. ಇತ್ತೀಚೆಗೆ ಜಾಗತಿಕ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದಲ್ಲಿ ವೈದ್ಯ ಮತ್ತು ಜನಸಂಖ್ಯೆಯ ಅನುಪಾತ 0.7/1000. ಚೀನಾದಲ್ಲಿ 1.7/1000, ಅಮೆರಿಕದಲ್ಲಿ 2.5/1000, ಬ್ರಿಟನ್‌ನಲ್ಲಿ 2.8 /1000, ಸ್ಪೇನ್‌ನಲ್ಲಿ 4.9/1000. ಹೀಗಿರುವಾಗ, ಒಬ್ಬ ವೈದ್ಯನನ್ನು ದೇವರಾಗಿ ಕಾಣುವುದು ಬಿಡಿ, ಕೇವಲ ಮನುಷ್ಯನನ್ನಾಗಿ ನೋಡಿದರೂ ತನ್ನ ಇತಿ ಮಿತಿಯೊಳಗೆ ಆತ ಬಹಳ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಕಠಿಣ ಪರಿಸ್ಥಿತಿ ಇದೆ. ಹೀಗಿರುವಾಗ, ವೈದ್ಯರ ಮೇಲೆ ಆಕ್ರಮಣ, ಆಸ್ಪತ್ರೆಯ ಮೇಲೆ ದಾಳಿ, ದೌರ್ಜನ್ಯ ಮಾಡುವುದು ಎಷ್ಟು ಸರಿ? ಬದಲಿಗೆ ರೋಗಿಯ ಸಂಬಂಧಿಕರು ವಾಸ್ತವವನ್ನು ಅರಿತು ತಾಳ್ಮೆಯಿಂದ ವೈದ್ಯರೊಂದಿಗೆ ವರ್ತಿಸಿದಲ್ಲಿ ಮಾತ್ರ ಸಮಾಜದಲ್ಲಿ ವೈದ್ಯರು ತಮ್ಮ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯ.

ವೈದ್ಯರ ಮೇಲಿನ ಹಲ್ಲೆಗೆ ಕಾರಣ ಹಲವು. ಪ್ರತೀ ಘಟನೆಯ ಹಿಂದೆಯೂ ಒಂದೊಂದು ಕಾರಣ. ಇಂಥದ್ದೇ ನಿಖರವಾದ ಕಾರಣವೆಂದು ನಿಶ್ಚಿತವಾಗಿ ಹೇಳಲು ಬರುವುದಿಲ್ಲ. ಕೆದಕಿದಷ್ಟೂ ಆಳ, ಅಗಲ ಹೆಚ್ಚುವುದು.

ಗ್ರಾಹಕರ ರಕ್ಷಣಾ ಕಾನೂನು

ಗ್ರಾಹಕರ ರಕ್ಷಣಾ ಕಾನೂನು (ಸಿ.ಪಿ.ಎ.)ನನ್ನು ಸರಕಾರ ಜಾರಿಗೆ ತಂದಾಗಲೇ ವೈದ್ಯವೃತ್ತಿಯಲ್ಲಿಯ ಸೇವಾ ಮನೋಭಾವ ನೇಪಥ್ಯಕ್ಕೆ ಸರಿಯಿತು. ಉದ್ದಿಮೆಯಾಗಿ ಬೆಳೆಯಿತು. ವೈದ್ಯ ತನ್ನ ಮತ್ತು ತನ್ನವೃತ್ತಿ ರಕ್ಷಣೆಗಾಗಿ ಎವಿಡೆನ್ಸ್ ಬೇಸ್ಡ್ ಪ್ರಾಕ್ಟೀಸ್ ಪ್ರಾರಂಭಿಸಿದ. ಅದು ಜನರಿಗೆ ವಿಚಿತ್ರವಾಗಿ ಕಾಣಿಸಿತು. ಅವರು ಬರೆಯುವ ಇನ್‌ವೆಸ್ಟಿಗೇನ್ಸ್‌ಗೆ ಹಣ ಸುಲಿಗೆಯ ಹೊಸ ರೂಪ ಎಂಬ ಆರೋಪ ಬಂತು. ಗ್ರಾಹಕರ ರಕ್ಷಣಾ ಕಾನೂನು ಜಾರಿಗೆ ಬಂದಾಗ ಅವೆಲ್ಲಾ ಅವಶ್ಯವಾಗಿದ್ದವು. ಸರಕಾರ ಸಿ.ಪಿ.ಎ. ಕಾನೂನು ಜಾರಿಗೆ ತರುವಾಗ/ತಂದ ಮೇಲೆ ಜನರಿಗೆ ತಿಳುವಳಿಕೆ ಮಾಡಿ ಕೊಡುವ ಪ್ರಯತ್ನ ಮಾಡಲಿಲ್ಲ.

ಹೀಗಾಗಿ ವೈದ್ಯ ರೋಗಿಯ ನಡುವಿನ ಸಂಬಂಧದ ಬಿರುಕು ದೊಡ್ಡದಾಯಿತು. ಕಂದಕವಾಯಿತು. ಕಾದಾಟಕ್ಕೆ ಕಾರಣವಾಯಿತು. ಮಾಧ್ಯಮಗಳು ಹೊತ್ತಿದ ಬೆಂಕಿಗೆ ತುಪ್ಪ ಸುರಿದವು. ನಮ್ಮನ್ನಾಳುವ ಪ್ರತಿನಿಧಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವೈದ್ಯರ ಹಲ್ಲೆಗೆ ಕುಮ್ಮಕ್ಕು ಕೊಟ್ಟರು. ಸಿ.ಪಿ.ಎ.ಯಲ್ಲಿ ಏನಿದೆ ಎಂಬುದು ಜನರಿಗೆ ಗೊತ್ತಿರಲಿಲ್ಲ. ಜನಪ್ರತಿನಿಧಿಗಳು ಅಂಗೈಯಲ್ಲಿ ಅರಮನೆ ತೋರಿಸಿದರು. ಜನ ಬೆಂಬಲ ಪಡೆದರು. ವೈದ್ಯ ವೃತ್ತಿಯನ್ನು ಸಿ.ಪಿ.ಎ. ಒಳಗಡೆ ತಂದರು. ವೈದ್ಯರು ಸೇವಾವೃತ್ತಿಗೆ ವಿದಾಯ ಹೇಳಿದರು. ಬದಲಾವಣೆ ಅನಿವಾರ್ಯವಾಯಿತು. ಬದಲಾದರು. ಜನರಿಗೆ ಆರೋಗ್ಯ ರಕ್ಷಣೆ ಹೊರೆಯಾಯಿತು. ಇದಕ್ಕೆ ವೈದ್ಯರು ಕಾರಣರಲ್ಲ. ನಮ್ಮನ್ನಾಳಿದ ಜನ ಪ್ರತಿನಿಧಿಗಳು, ಸರಕಾರಗಳು ಕಾರಣ ಎಂಬುದನ್ನು ಸಾರ್ವಜನಿಕರು ಅರಿಯಬೇಕು.

ವೈದ್ಯರ ಮೇಲಿನ ಹಲ್ಲೆಗೆ ಕಾರಣಗಳು:

ವೈದ್ಯರ ಮೇಲೆ ಹಲ್ಲೆಗಳು ಕಳೆದ ದಶಕದಿಂದ ನಡೆಯುತ್ತಾ ಬಂದಿವೆ. ಇನ್ನೂ ನಡೆಯುತ್ತಲೇ ಇವೆ. ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧ ನಶಿಸಿರುವುದೇ ಇಂಥ ಘಟನೆಗೆ ಕಾರಣ ಎನ್ನುವುದಾದರೆ, ಅದನ್ನು ಪುನಃ ಗಟ್ಟಿಗೊಳಿಸುವುದು ಹೇಗೆ? ಹಲ್ಲೆಗಳಿಂದಲೇ ಈ ಸಮಸ್ಯೆ ಬಗೆಹರಿಸಬಹುದೆಂಬುದು ಸಾರ್ವಜನಿಕರ ತಪ್ಪು ತಿಳುವಳಿಕೆಯೇ ಇಂಥ ಘಟನೆಗಳಿಗೆ ಕಾರಣ ಎನ್ನವುದಾದಲ್ಲಿ, ಅದನ್ನು ಕಿತ್ತು ಹಾಕುವುದು ಹೇಗೆ? ದುಬಾರಿಯಾಗಿರುವ ವೈದ್ಯಕೀಯ ಸೇವೆಗಳೇ ಇವುಗಳಿಗೆ ಮೂಲ ಕಾರಣವೆಂದಾದರೆ, ಅದನ್ನು ಕಡಿಮೆ ಮಾಡಲು ಸಾಧ್ಯವೇ?

ವೈದ್ಯಕೀಯ ಸೇವೆಯ ಬೆಲೆ ನಿಗದಿಯಾಗುವುದು ಉತ್ಪಾದನೆಗೆ ತಗಲುವ ವೆಚ್ಚದ ಮೇಲೆ ಅವಲಂಬಿತವಾಗಿರುತ್ತದೆ. ವೈದ್ಯಕೀಯ ಶಿಕ್ಷಣ ಅತ್ಯಂತ ದುಬಾರಿಯಾಗಿದೆ. ಅದು ದೀರ್ಘಕಾಲಿಕವೂ ಹೌದು. ಆರು ವರ್ಷದ ವೈದ್ಯಕೀಯ ಪದವಿ ಮುಗಿಸುವುದರೊಳಗೆ ಪಾಲಕರು ಹೈರಾಣಾಗಿ ಬಿಟ್ಟಿರುತ್ತಾರೆ. ಒಂದೇ ಪ್ರಯತ್ನದಲ್ಲಿ ಎಲ್ಲಾ ಪರೀಕ್ಷೆಗಳನ್ನು ಪಾಸಾದರೆ.......ಹಾಗಾಗುವುದು ಕಷ್ಟ ಸಾಧ್ಯ. ಸರಕಾರಿ ಸೀಟು ಪಡೆದು, ಸರಕಾರಿ ಕಾಲೇಜಿನಿಂದ ಪಾಸಾಗಬೇಕಾದರೆ, ಈಗಿನ ಕಾಲದಲ್ಲಿ ತಗಲುವ ವೆಚ್ಚ ಸುಮಾರು ಅರ್ಧ ಕೋಟಿ. ಖಾಸಗಿ ಕಾಲೇಜಾದರೆ ಅದು ಒಂದು ಕೋಟಿಯಾಗಬಹುದು. ಬ್ಯಾಂಕ್ ಸಾಲ ಮಾಡದೆ ಕಲಿಯುವುದು ಕಷ್ಟ. ವೈದ್ಯಕೀಯ ವಿದ್ಯಾರ್ಥಿ ಪದವಿ ಮುಗಿಸುವ ಹೊತ್ತಿಗೆ ಅವನ ಶಾಲಾ ಸಹಪಾಠಿಗಳು ಗಳಿಸುವ ಸದಸ್ಯರಾಗಿರುತ್ತಾರೆ.

ಅನುಮಾನದ ಪಿಡುಗು

ವಾಣಿಜ್ಯಮಯವಾಗಿರುವ ವೈದ್ಯಕೀಯ ವೃತ್ತಿ, ಕಾನೂನಿನಡಿಯಲ್ಲಿ ವೈದ್ಯಕೀಯ ಸೇವೆಯನ್ನು ನಿಯಂತ್ರಿಸಲು ಅನುಸರಿಸುತ್ತಿರುವ ಪದ್ಧತಿಗಳು, ತಮ್ಮ ಸೇವಾ ಭದ್ರತೆಗಾಗಿ ವೈದ್ಯರುಗಳು ಅನುಸರಿಸುತ್ತಿರುವ ದುಬಾರಿ ಬೆಲೆಯ ರೋಗಪತ್ತೆ ವಿಧಾನಗಳನ್ನೊಳಗೊಂಡ ರಕ್ಷಣಾತ್ಮಕ ವೈದ್ಯಕೀಯ ಸೇವೆ, ಹದಗೆಟ್ಟ ಆಡಳಿತಾತ್ಮಕ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಇತ್ಯಾದಿ ಕಾರಣಗಳಿಂದಾಗಿ ವೈದ್ಯ ರೋಗಿಯ ನಡುವಿನ ಆತ್ಮವಿಶ್ವಾಸದ ಕೊಂಡಿ ಕಳಚಿಬೀಳುತ್ತಿದ್ದು, ಒಬ್ಬರನ್ನೊಬ್ಬರು ಸಂಶಯದಿಂದ ನೋಡುವಂತಾಗಿ ಪವಿತ್ರವಾದ ವೈದ್ಯಕೀಯ ಸೇವೆ ಇಂದು ಅಡ್ಡದಾರಿ ಹಿಡಿಯುತ್ತಿದೆ.

ರೋಗಿ ವೈದ್ಯರನ್ನು ನೋಡುವ ಮುನ್ನ ಅವನು ಎಲ್ಲಿ ನನ್ನನ್ನು ಸುಲಿದುಬಿಡುತ್ತಾನೋ ಎಂಬ ಅನುಮಾನ ರೋಗಿಗೆ. ರೋಗಿ ತನ್ನನ್ನು ಯಾವ ಕಾನೂನು ಕಟ್ಟಳೆಗೆ ಎಳೆದು ಬಿಡುತ್ತಾನೋ ಎಂಬ ಆತಂಕ ವೈದ್ಯನಿಗೆ ಉಂಟಾಗಿರುವ ಸಂದಿಗ್ಧ ಅನುಮಾನದ ಸನ್ನಿವೇಶ ಇಂದು ನಿರ್ಮಾಣವಾಗಿದೆ. ಅನುಮಾನದ ಪರಿಸರದಲ್ಲಿ ವೈದ್ಯ ರೋಗಿಯ ನಡುವೆ ಆತ್ಮವಿಶ್ವಾಸ ಬೆಳೆಯಲು ಸಾಧ್ಯವೇ? ಖಂಡಿತಾ ಇಲ್ಲ.

ವೈದ್ಯ ಎಲ್ಲ ರೋಗಗಳನ್ನು ವಾಸಿ ಮಾಡುವ ಜೈವಿಕ ಯಂತ್ರವಲ್ಲ. ಪ್ರತಿಯೊಂದು ಕಾಯಿಲೆಗೂ ತನ್ನದೇ ಆದ ಭವಿಷ್ಯಗತಿಯಿದ್ದು, ಸಮರ್ಥವಾಗಿ ಚಿಕಿತ್ಸೆ ನೀಡಿದರೂ ವಾಸಿಯಾಗದೆ ಸಾವನ್ನಪ್ಪುವ ಸಾಧ್ಯತೆಗಳು ಬಹಳ. ತೀವ್ರ ನಿಗಾ ಘಟಕದ ರೋಗಿಗಂತೂ ಅಲ್ಲಿಂದ ಹೊರಬರುವವರೆಗೆ ಜೀವ ಭಯ ಇದ್ದೇ ಇರುತ್ತದೆ.

ಕ್ರೀಮ್ ಆಫ್ ದಿ ಸೊಸೈಟಿ

ಈಗ ಬರೀ ವೈದ್ಯಕೀಯ ಪದವಿ ಪಡೆದರೆ ಪ್ರಯೋಜನವಿಲ್ಲ. ಸ್ನಾತಕೋತ್ತರ ಪದವಿ ಬೇಕು. ಸೂಪರ್ ಸ್ಪೆಶಾಲಿಟಿ ಕಾಲ ಇದು. ಅದಕ್ಕೂ ಸಜ್ಜಾಗಬೇಕು. ಒಟ್ಟಿನಲ್ಲಿ ವೈದ್ಯನಾಗಿ ಬದುಕು ಪ್ರಾರಂಭಿಸುವ ಹೊತ್ತಿಗೆ ಜೀವನದ ಮೂರು ದಶಕಗಳು ಮುಗಿದಿರುತ್ತವೆ. ನಂತರ ಕ್ಲಿನಿಕ್/ಆಸ್ಪತ್ರೆ ಪ್ರಾರಂಭಿಸಲು ಬಿಲ್ಡಿಂಗ್, ಯಂತ್ರೋಪಕರಣಗಳಿಗಾಗಿ ಪರದಾಟ. ಮತ್ತೆ ಬ್ಯಾಂಕಿನ ಸಾಲಕ್ಕೆ ಮೊರೆಹೋಗಬೇಕು. ಕಲಿಯುವಾಗಿನ ಸಾಲ, ಬಿಲ್ಡಿಂಗ್, ಯಂತ್ರೋಪಕರಣಗಳ ಸಾಲ, ಒಟ್ಟಿನಲ್ಲಿ ನಿರಂತರ ಸಾಲದ ಹೊರೆ. ಸರಕಾರ ಸಣ್ಣ ಕೈಗಾರಿಕೆ ಉದ್ದಿಮೆ ಪ್ರಾರಂಭಿಸುವವರಿಗೆ ಎಲ್ಲ ಹಂತದಲ್ಲೂ ಸಬ್ಸಿಡಿ ನೀಡುತ್ತದೆ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಇವುಗಳಿಗೆ ಅವಕಾಶವೇ ಇಲ್ಲ.

ಸರಕಾರ ಸಕ್ಕರೆ ಲೇಪಿತ ಕಹಿ ಗುಳಿಗೆಗಳನ್ನು ನಿತ್ಯ ನೂರಾರು ಆಶ್ವಾಸನೆಗಳ ರೂಪದಲ್ಲಿ ಜನರಿಗೆ ನೀಡುತ್ತಿದೆ. ಆದರೆ ವೈದ್ಯಕೀಯ ಶಿಕ್ಷಣದ ವೆಚ್ಚ ತಗ್ಗಿಸುವ, ವೈದ್ಯರಿಗೂ ಸಬ್ಸಿಡಿ ಕೊಡುವ ಬಗ್ಗೆ ಕಿಂಚತ್ತೂ ಯೋಚಿಸಲಿಲ್ಲ. ಇವುಗಳತ್ತ ನಮ್ಮ ಜನಪ್ರತಿನಿಧಿಗಳು ಬಾಯಿ ಬಿಡುವುದಿಲ್ಲ. ಏಕೆಂದರೆ, ಬಹುತೇಕ ವೈದ್ಯಕೀಯ ಕಾಲೇಜುಗಳ ಮಾಲಕರು ಅವರೇ ಆಗಿರುತ್ತಾರೆ. ವೈದ್ಯಕೀಯ ಸೇವೆ ಜನಸಾಮಾನ್ಯರಿಗೆ ಹೊರೆ ಆಗುತ್ತಿದೆ ಎಂಬ ಅರಿವು ನಮ್ಮನ್ನಾಳುವ ಪ್ರಭುಗಳಿಗೆ ಇದೆ. ಇದರ ಬಗ್ಗೆ ಗಂಟೆಗಟ್ಟಲೆ ಬಡಾಯಿ ಕೊಚ್ಚುತ್ತಾರೆ. ವೈದ್ಯಕೀಯ ಸೇವೆ ದುಬಾರಿಯಾಗಿರುವುದರ ಹಿನ್ನೆಲೆ ಅವರಿಗೆ ಸಂಪೂರ್ಣ ಗೊತ್ತಿದೆ. ಆದರೆ, ಅದನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಅವರೆಂದೂ ಬಾಯಿ ಬಿಡುವುದಿಲ್ಲ.

ಮೊಸಳೆ ಕಣ್ಣೀರು

ಉತ್ತಮ ವೈದ್ಯಕೀಯ ಸೇವೆಯ ಹೆಸರಿನಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ಬೆಳೆಯುತ್ತಿದೆ. ಅಲ್ಲಿಯ ಸೌಲಭ್ಯಗಳು, ಸೌಕರ್ಯಗಳು ಸಾಕಷ್ಟು. ಶ್ರೀಮಂತರಿಗೆ ಟೂರಿಸ್ಟ್ ತಾಣ ಗಳಾದರೆ, ಬಡವರಿಗೆ ಇಲ್ಲಿಯ ವೈದ್ಯಕೀಯ ಸೇವೆ ಗಗನಕುಸುಮವೇ ಸೈ.

ಇತ್ತೀಚೆಗೆ ಅಳವಡಿಸಲಾಗಿರುವ ಕ್ಯಾಶ್‌ಲೆಸ್ ಎನ್ನುವ ಇನ್ಶೂರೆನ್ಸ್ ಆಧಾರಿತ ವೈದ್ಯಕೀಯ ಚಿಕಿತ್ಸೆ ವೈದ್ಯಕೀಯ ಸೇವೆಯನ್ನು ಇನ್ನಷ್ಟು ತುಟ್ಟಿಯಾಗಿಸಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಒಟ್ಟಾರೆ ‘ವೈದ್ಯಕೀಯ ಸೇವೆ’ಯನ್ನು ‘ಸುಲಿಗೆ’ ಎಂಬ ಪಟ್ಟಕ್ಕೆ ಕಟ್ಟುವ ಮೊದಲು ಇದಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ ಚರ್ಚಿಸಿ, ಅವುಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸರಕಾರ ಮುಂದಾಗಬೇಕು. ಇಲ್ಲದೆ ಹೋದಲ್ಲಿ ವೈದ್ಯ ಸದಾ ಕಾಲ ಖಳನಾಯಕನಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪವಿತ್ರ ವೈದ್ಯಕೀಯ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸವನ್ನು ಸರಕಾರ ಕೈಬಿಡಬೇಕು. ಮೊಸಳೆ ಕಣ್ಣೀರಿನ ನಾಟಕಕ್ಕೆ ನಾಂದಿ ಹಾಡಬೇಕು.

ವೈದ್ಯರ ಮೇಲೆ ಹಲ್ಲೆ ಮಾಡಿದ ಜನಪ್ರತಿನಿಧಿಗಳ ದೊಡ್ಡ ಪಟ್ಟಿಯೇ ಇದೆ. ಅವರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಕಾನೂನು ಕೈಗೆತ್ತಿಕೊಳ್ಳಬಾರದು ಎಂಬುದು ಎಲ್ಲರಿಗೂ ಗೊತ್ತಿದ್ದರೂ, ಸಮಸ್ಯೆಯ ದೂರು, ವಿಚಾರಣೆಯನ್ನು ಸಹನೆ, ಸಂಯಮದಿಂದ ನೋಡುವ ದೃಷ್ಟಿಗೆ ಪೊರೆ ಬಂದಿದೆ. ಸಮಾಜದಲ್ಲಿ ಇಂದು ವೈದ್ಯರ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಅಪಾರ ಅನುಭವ, ಪರಿಣತ ವೈದ್ಯರು ನೀಡುವ ಮಾಹಿತಿಯನ್ನು ಅರ್ಧಂಬರ್ಧ ನಂಬುವ ಜನ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ತಕ್ಷಣ ಮೊರೆಹೋಗುವುದು ‘ಗೂಗಲ್ ಡಾಕ್ಟರ್’ ಅನ್ನು. ಇದು ಐ.ಟಿ.-ಬಿ.ಟಿ. ಜನರಲ್ಲಿ ಇನ್ನೂ ಹೆಚ್ಚು. ಯಾವ ವೈದ್ಯರನ್ನು ನೋಡಬೇಕು? ಎನ್ನುವ ಮೊದಲು ‘ಗೂಗಲ್ ಸಲಹೆ’ ಪಡೆದುಕೊಂಡೇ ಬಂದಿರುತ್ತಾರೆ.

ವೈದ್ಯರು ದೇವಮಾನವರಲ್ಲ

ಯಾವ ವೈದ್ಯನೂ ತನ್ನ ರೋಗಿ ಸಾಯಬೇಕೆಂದು ಕನಸಿನಲ್ಲೂ ಎನಿಸುವುದಿಲ್ಲ. ರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನೀಡುವ ಔಷಧಿಗಳು ಎಷ್ಟು ಮುಖ್ಯವೋ, ವೈದ್ಯರ ಮೇಲಿನ ನಂಬಿಕೆ, ವಿಶ್ವಾಸವೂ ಅಷ್ಟೇ ಮುಖ್ಯ. ವೈದ್ಯರು ದೇವಮಾನವರಲ್ಲ. ಅವರೂ ನಮ್ಮಂತೆ ಮನುಷ್ಯರು. ಅವರಿಗೂ ಅವರದೇ ಆದ ಇತಿಮಿತಿಗಳಿವೆ ಎಂಬುದನ್ನು ಸಮಾಜ ಅರಿಯಬೇಕು. ವೈದ್ಯರು-ರೋಗಿಗಳು ತಮ್ಮ ತಮ್ಮ ಹೊಣೆಗಾರಿಕೆ, ಕರ್ತವ್ಯಗಳನ್ನು ಅರಿತು, ಆಚರಿಸಿದಲ್ಲಿ ವೈದ್ಯ-ರೋಗಿಗಳ ನಡುವಿನ ಅನವಶ್ಯಕ ಸಂಘರ್ಷ ಅಂತ್ಯಗೊಳ್ಳಬಹುದು.

ವೈದ್ಯ ಸಮುದಾಯ ಇರುವುದು ರೋಗದ ಮೇಲೆ ಯುದ್ಧ ಮಾಡಿ ರೋಗಿಯನ್ನು ನಿರೋಗಿಗೊಳಿಸುವುದಕ್ಕಾಗಿಯೇ ವಿನಃ ರೋಗಿ ಮತ್ತು ರೋಗಿಯ ಸಂಬಂಧಿಕರ ಮೇಲೆ ಯುದ್ಧ ಮಾಡಲು ಅಲ್ಲ. ರೋಗಿ ಮತ್ತು ರೋಗಿಯ ಸಂಬಂಧಿಕರು ರೋಗದ ಮೇಲೆ ಯುದ್ಧ ಮಾಡಲು ವೈದ್ಯ ಸಮುದಾಯಕ್ಕೆ ಸಹಕಾರ ನೀಡದೆ, ಅವರ ಮೇಲೆ ಯುದ್ಧ ಮಾಡುವುದು ಎಷ್ಟು ಸಮಂಜಸ? ವಿಶ್ವ ಆರೋಗ್ಯ ಸಂಸ್ಥೆ ಎಲ್ಲರಿಗೂ ಆರೋಗ್ಯ, ಎಲ್ಲೆಲ್ಲೂ ಆರೋಗ್ಯ ಎಂದು ಘೋಷಣೆ ಮಾಡಿದೆ. ಭಾರತವೂ ಇದಕ್ಕೆ ಬದ್ಧತೆ ತೋರಿದೆ. ವೈದ್ಯ - ರೋಗಿಯ ನಡುವಿನ ಸಂಬಂಧ ದಿನಗಳೆದಂತೆ ಬಿಗಡಾಯಿಸುತ್ತ ಹೋದರೆ ಈ ಗುರಿ ತಲುಪುವುದಾದರೂ ಹೇಗೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News