ಮಂಕಿ ಪಾಕ್ಸ್: ಆತಂಕ ಬೇಡ, ಎಚ್ಚರಿಕೆ ಇರಲಿ

Update: 2024-08-23 06:13 GMT

ಮಂಕಿ ಪಾಕ್ಸ್ ‘ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ’ ಎಂದು ಘೋಷಿಸಲ್ಪಟ್ಟ ಬೆನ್ನಲ್ಲಿ ದೇಶದಲ್ಲಿ ತುರ್ತು ಚಿಕಿತ್ಸಾ ವಿಭಾಗಗಳನ್ನು ಸಿದ್ಧಪಡಿಸುವುದು ಮತ್ತು ವಿಮಾನ ನಿಲ್ದಾಣಗಳನ್ನು ಎಚ್ಚರಿಸುವುದೂ ಸೇರಿದಂತೆ ಸರಕಾರವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ, ಚಿಕಿತ್ಸೆಯ ಬಗ್ಗೆ ಮಾರ್ಗಸೂಚಿಗಳನ್ನು ನೀಡಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಮಂಕಿಪಾಕ್ಸ್ ವೈರಸ್ ಹೊಸ ತಳಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ದಾಳಿಗಿಳಿದಿದೆ. ಈಗಾಗಲೇ ಹಲವಾರು ದೇಶಗಳಲ್ಲಿ ಕಾಣಿಸಿ ಕೊಂಡಿರುವ ಮಂಕಿಪಾಕ್ಸ್ ಕಾಯಿಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ‘ಎಂಪಾಕ್ಸ್’ ಎಂದು ಕರೆದಿದೆ. ಇದು ಸಿಡುಬಿನ ಒಂದು ಪ್ರಕಾರ.

ನಮ್ಮ ದೇಶದಲ್ಲಿ ಇದು ವರೆಗೆ ಮಂಕಿಪಾಕ್ಸ್ ವರದಿಯಾಗಿಲ್ಲ. ಆದರೆ ನಮ್ಮ ಮಗ್ಗಲು ದೇಶಗಳಾದ ಪಾಕಿಸ್ತಾನದಲ್ಲಿ ಆಗಸ್ಟ್ 16ರಂದು ಯುಎಇಯಿಂದ ಬಂದ ಮೂವರಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದೆ. ಬಾಂಗ್ಲಾದೇಶದಲ್ಲಿಯೂ ಮಂಕಿಪಾಕ್ಸ್ ವರದಿಗಳಾಗಿವೆ. ಹೀಗಾಗಿ ನಮ್ಮ ದೇಶಕ್ಕೆ ಹರಡುವ ಸಾಧ್ಯತೆ ಇರುವುದರಿಂದ ಹದ್ದಿನ ಕಣ್ಣಿಂದ ಹುಡುಕಬೇಕಿದೆ. ಕೊರೋನದಲ್ಲಿ ಆದದ್ದು ಮರುಕಳಿಸಬಾರದು.

ಈ ಶತಮಾನ ಹೊಸ ಹೊಸ ರೋಗಗಳಿಗೆ ಹೆಸರಾಗುತ್ತಿದೆ. ವೈದ್ಯಕೀಯ ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ ಪ್ರತೀ ಹತ್ತು ವರ್ಷಕ್ಕೊಮ್ಮೆ ಹೊಸ ಮಾದರಿಯ ವಿಷಭರಿತ ವೈರಸ್‌ಗಳು ಕಾಣಿಸುವುದು ಸಾಮಾನ್ಯ. ನೂರು ವರ್ಷಕ್ಕೊಮ್ಮೆ ಒಂದು ‘ಪ್ಯಾಂಡೆಮಿಕ್’ ಬರುತ್ತದೆ. ಅದೇ ಈಗ ಕೊರೋನ ರೂಪದಲ್ಲಿ ಬಂದಿದೆ. ಕೆಲವೊಮ್ಮೆ ರೋಗಗಳು ಪ್ರಾಣಿಗಳಿಂದ ಮತ್ತು ಪಕ್ಷಿ ಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ. ಇವಕ್ಕೆ ’ಝೂನಾಟಿಕ್ ಡಿಸಿಜಿಸ್’ ಎಂದು ಕರೆಯುವರು. ಈಗ ಕಾಣಿಸಿ ಕೊಂಡಿರುವ ‘ಮಂಕಿ ಪಾಕ್ಸ್’ ಕೂಡ ಈ ಗುಂಪಿಗೆ ಸೇರಿದ್ದು. ಕೊರೋನ ಕಾಟಕ್ಕೆ ತತ್ತರಿಸಿ ಹೋಗಿರುವ ಜನ, ಇದೊಂದು ಅದರ ಹೊಸ ರೂಪವಿರಬಹುದೆಂದು ಭಯ ಪಡುವ ಅವಶ್ಯಕತೆ ಇಲ್ಲ. ಕೊರೋನಕ್ಕೂ ಮಂಕಿಪಾಕ್ಸ್‌ಗೂ ಸಂಬಂಧವಿಲ್ಲ.

ಇತಿಹಾಸ:

ಹಾಗೆ ನೋಡಿದರೆ ಇದೇನೂ ಹೊಸ ಕಾಯಿಲೆಯಲ್ಲ. 1958ರಷ್ಟು ಹಿಂದೆಯೇ ಇದನ್ನು ಗುರುತಿಸಲಾಗಿದೆ. ಇದೊಂದು ವೈರಸ್‌ನಿಂದ ಬರುವ ಕಾಯಿಲೆ. 1970ರಲ್ಲಿ ಸೋಂಕಿತ ಮನುಷ್ಯನನ್ನು ಕಾಂಗೋ ದೇಶದಲ್ಲಿ ಪತ್ತೆ ಹಚ್ಚಲಾಗಿತ್ತು. ಪತ್ತೆಯಾದ ರೋಗಿಗಳು ಆಫ್ರಿಕಾ ಖಂಡದಲ್ಲಿ ವಾಸಿಸುವವರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಹೊಸ ರೋಗಗಳಿಗೆಲ್ಲ ಆಫ್ರಿಕಾ ಉಗಮಸ್ಥಾನವಾಗಿರುವುದು ವಿಪರ್ಯಾಸ. ಮಂಕಿಪಾಕ್ಸ್ ವೈರಸ್ ಇಲಿಗಳಲ್ಲಿ ಮತ್ತು ಕೋತಿಗಳಲ್ಲಿ ಕಂಡು ಬರುವುದು ಸಾಮಾನ್ಯ. ಸೋಂಕಿಗೀಡಾದ ಪ್ರಾಣಿಗಳು ಮನುಷ್ಯನ ಸಂಪರ್ಕಕ್ಕೆ ಬಂದಾಗ ಅವರಿಗೂ ಹರಡುವ ಸಾಧ್ಯತೆ ಇರುತ್ತದೆ. 2003 ರಲ್ಲಿ ಅಮೆರಿಕದಲ್ಲಿ 47 ರೋಗಿಗಳು ಪತ್ತೆಯಾಗಿದ್ದರು. ಆಫ್ರಿಕಾದಿಂದ ತರಿಸಿಕೊಂಡ ಪ್ರಾಣಿಗಳ ಮೂಲಕ ಸೋಂಕು ಅಮೆರಿಕಕ್ಕೆ ಕಾಲಿಟ್ಟಿತ್ತು ಎಂಬುದನ್ನು ಸಂಶೋಧಕರು ನಂತರ ಸ್ಪಷ್ಟ ಪಡಿಸಿದ್ದರು.

ಪ್ರಸಾರ ಹೇಗೆ?:

ಮಂಕಿಪಾಕ್ಸ್ ಮಾನವರಲ್ಲಿ ಕಾಣುವುದು ಬಹಳ ಅಪರೂಪ. ಸೋಂಕಿತ ಪ್ರಾಣಿಗಳ ರಕ್ತ, ದೇಹದಿಂದ ಸ್ರವಿಸುವ ದ್ರವಗಳು ಮನುಷ್ಯನ ದೇಹ ಪ್ರವೇಶಿಸಿದಾಗ ಅಥವಾ ಸೋಂಕಿತ ದ್ರವಗಳು ಮಾನವರ ದೇಹದ ಮೇಲಾಗಿರುವ ಗಾಯಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ ಈ ರೋಗ ಹರಡುವ ಸಾಧ್ಯತೆ ಇದೆ. ಸೋಂಕಿತ ಪ್ರಾಣಿಗಳ ಮಾಂಸ ಅಥವಾ ಅದರ ಉತ್ಪನ್ನಗಳನ್ನು ಚೆನ್ನಾಗಿ ಬೇಯಿಸದೆ ಸೇವಿಸಿದಾಗ ಮಂಕಿಪಾಕ್ಸ್ ವೈರಸ್ ಹರಡಬಹುದಾಗಿದೆ. ಸೋಂಕಿತ ವ್ಯಕ್ತಿಯೊಂದಿಗೆ ಬೇರೆಯವರು ಸಂಪರ್ಕಕ್ಕೆ ಬಂದಾಗಲೂ ರೋಗ ಹರಡಬಹುದು.

ಸೋಂಕಿತ ವ್ಯಕ್ತಿ ಸೀನುವ ಇಲ್ಲವೇ ಕೆಮ್ಮುವ ಮೂಲಕ ರೋಗಾಣುಗಳನ್ನು ಹೊರಗಿನ ಪರಿಸರಕ್ಕೆ ಉಡುಗೊರೆ ನೀಡುತ್ತಾನೆ. ಇವು ಆರೋಗ್ಯವಂತರ ದೇಹ ಪ್ರವೇಶಿಸಿದಲ್ಲಿ ರೋಗಕ್ಕೆ ನಾಂದಿ ಹಾಡಬಹುದು. ಸೋಂಕಿತ ವ್ಯಕ್ತಿಯ ಜನನಾಂಗದಲ್ಲಿ ಮಂಕಿ ಪಾಕ್ಸ್ ಗುಳ್ಳೆಗಳಿದ್ದರೆ, ಲೈಂಗಿಕ ಕ್ರಿಯೆಯಿಂದ ರೋಗ ಹರಡುವ ಸಾಧ್ಯತೆ ಇದೆ. ಈ ವೈರಸ್ ಉಸಿರಾಟದ ಮೂಲಕವೂ ಹರಡುವುದು ಕಂಡು ಬಂದಿರುವುದರಿಂದ, ಪ್ರಾಣಿ ಪ್ರಿಯರು ಈ ಬಗ್ಗೆ ಎಚ್ಚರ ವಹಿಸಬೇಕು. ಸಾಕು ಪ್ರಾಣಿಗಳನ್ನು ಸೋಂಕಿತ ಪ್ರಾಣಿಗಳ ಮತ್ತು ವ್ಯಕ್ತಿಯ ಸಮೀಪ ಸೇರುವುದನ್ನು ತಡೆಯಬೇಕು ಮತ್ತು ಸೋಂಕಿನ ಲಕ್ಷಣಗಳಿದ್ದರೆ ಪಶು ವೈದ್ಯರ ಸಲಹೆ ಪಡೆಯಬೇಕು.

ರೋಗನಿರೋಧಕ ಶಕ್ತಿ ಕಡಿಮೆ ಇರುವ ನವಜಾತ ಶಿಶುಗಳು, ಗರ್ಭಿಣಿಯರು, ಮಧುಮೇಹಿಗಳು, ಯಾವುದಾದರೂ ಚಿಕಿತ್ಸೆಯ ಅಂಗವಾಗಿ ಸ್ಟಿರಾಯ್ಡ್ ಔಷಧ ಸೇವಿಸುವವರು, ಅಂಗಕಸಿಯ ಕಾರಣದಿಂದ ರಕ್ಷಣಾ ವ್ಯವಸ್ಥೆಯ ಶಕ್ತಿಯನ್ನು ಕುಗ್ಗಿಸುವ ಔಷಧ ಪಡೆಯುವವರು, ಎಚ್‌ಐವಿ ಪೀಡಿತರು ಮೊದಲಾದವರಿಗೆ ಮಂಕಿಪಾಕ್ಸ್ ಉಲ್ಬಣಿಸುವ ಸಾಧ್ಯತೆಗಳು ಹೆಚ್ಚು. ರೋಗಪ್ರತಿರೋಧಕ ಶಕ್ತಿ ಚೆನ್ನಾಗಿರುವವರಲ್ಲಿ ಪ್ರಾಣಾಪಾಯವಾಗುವುದು ಅಪರೂಪ.

ರೋಗ ನಿಧಾನ:

ಗೋಚರಿಸುವ ಲಕ್ಷಣಗಳಿಂದಲೇ ರೋಗ ಪತ್ತೆ ಹಚ್ಚಲು ಸಾಧ್ಯ. ಎಲ್ಲಾ ಸಿಡುಬುಗಳು ಒಂದೇ ಅಲ್ಲ. ಮಂಕಿಪಾಕ್ಸ್, ಸ್ಮಾಲ್ ಪಾಕ್ಸ್, ಚಿಕನ್‌ಪಾಕ್ಸ್ ಒಂದೇ ಕುಟುಂಬದ ಸದಸ್ಯರಾದರೂ, ಅವು ಬೇರೆ ಬೇರೆಯಾಗಿವೆ. ಹಾಗಾಗಿ ಇದನ್ನು ಕಂಡು ಹಿಡಿಯಲು ಪಿಸಿಆರ್ ಟೆಸ್ಟ್ ಮಾಡಬೇಕಾಗುವುದು.

ಚಿಕಿತ್ಸೆ:

ಇದು ವೈರಸ್ ನಿಂದ ಬರುವ ಕಾಯಿಲೆಯಾಗಿರುವುದರಿಂದ ನಿಶ್ಚಿತ ಚಿಕಿತ್ಸೆ ಇಲ್ಲ. ದೇಹದ ಅತ್ಯುತ್ತಮ ರೋಗ ಪ್ರತಿರೋಧಕ ಶಕ್ತಿಯೇ ಇದು ಗುಣಮುಖವಾಗುವಲ್ಲಿ ಪ್ರಮುಖ ಪಾತ್ರ ವಹಿಸುವುದು. ರೋಗಿಯನ್ನು ಪ್ರತ್ಯೇಕವಾಗಿಟ್ಟು,ತಕ್ಕ ಚಿಕಿತ್ಸೆ ನೀಡುವುದೊಂದೇ ಈಗಿರುವ ಚಿಕಿತ್ಸೆ. ರೋಗಿಗೆ ಹೆಚ್ಚಿಗೆ ದ್ರವ ಆಹಾರ ಸೇವಿಸಲು ಕೊಡಬೇಕು. ಸತ್ವಯುತ, ಶಕ್ತಿಯುತ, ಸಮತೋಲನ ಆಹಾರ ತಗೆದುಕೊಳ್ಳಬೇಕು. ದದ್ದುಗಳಿಂದ ತುರಿಕೆ ಸಾಮಾನ್ಯ. ತುರಿಕೆ ನಿರೋಧಕ ಮದ್ದುಗಳನ್ನು ಸೇವಿಸಬೇಕು. ಕೆಲಮಿನ್ ಲೋಷನ್ ಮೈಗೆ ಹಚ್ಚಿಕೊಳ್ಳಬೇಕು. ಸಿಡುಬಿನ ವಿರುದ್ಧ ಬಳಸುವ ಲಸಿಕೆ, ಮಂಕಿ ಪಾಕ್ಸ್ ರೋಗವನ್ನು ತಡೆಗಟ್ಟುವಲ್ಲಿ ಶೇ.85ರಷ್ಟು ಪರಿಣಾಮಕಾರಿ ಎಂದು ತಿಳಿದಿದೆ. ಆದ್ದರಿಂದ ಮಂಕಿ ಪಾಕ್ಸ್‌ನ ಗಂಭೀರ ಲಕ್ಷಣಗಳನ್ನು ತಡೆಗಟ್ಟಲು ಸಿಡುಬು ಲಸಿಕೆಯನ್ನು ತಗೆದುಕೊಂಡಿದ್ದರೆ ಹೆದರುವ ಅವಶ್ಯಕತೆಯಿಲ್ಲ. ಕೋವಿಡ್ -19 ನಮಗೆ ಜಾಗತಿಕ ವಿಪತ್ತನ್ನು ಹೇಗೆ ಎದುರಿಸಬೇಕು ಎನ್ನುವ ಅನುಭವವನ್ನು ನೀಡಿದೆ. ಹೀಗಾಗಿ ಮಂಕಿಪಾಕ್ಸ್ ಬಗ್ಗೆ ಆತಂಕ ಬೇಡ. ಎಚ್ಚರಿಕೆ ಅವಶ್ಯ ಎಂಬುದನ್ನು ಮರೆಯುವಂತಿಲ್ಲ. ಸೋಂಕಿನ ಸಂಶಯ ಇದ್ದವರು ರೋಗ ಲಕ್ಷಣಗಳು ತೋರುವ ಮುನ್ನ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಸಲಹೆ ಸೂಚನೆ ಪಡೆಯಬೇಕು.

 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News