ಮೂಲಸೌಕರ್ಯ ವಂಚಿತ ಗಂಗಸಂದ್ರ ದಲಿತರ ಬಡಾವಣೆ

Update: 2024-03-18 05:47 GMT

ತುಮಕೂರು: ನಗರದ ಹೊರವಲಯದಲ್ಲಿರುವ ತುಮಕೂರು ಮಹಾನಗರಪಾಲಿಕೆಯ 11ನೇ ವಾರ್ಡಿಗೆ ಸೇರಿರುವ ಗಂಗಸಂದ್ರ ಗ್ರಾಮದಲ್ಲಿ ದಲಿತರ ಬಡಾವಣೆ ಮೂಲಸೌಕರ್ಯದಿಂದ ವಂಚಿತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಂಗಸಂದ್ರ ಗ್ರಾಮದಲ್ಲಿ ಲಿಂಗಾಯಿತರು, ತಿಗಳ ಸಮುದಾಯವರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ವಾಸವಾಗಿದ್ದಾರೆ. ದಲಿತರು ವಾಸಿಸುವ ಬಡಾವಣೆಗಳನ್ನು ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಪಾಲಿಕೆಯ ವಿವಿಧ ಯೋಜನೆಗಳ ಅಡಿಯಲ್ಲಿ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು ದೊರೆಯಬೇಕು ಎಂಬ ಸಂವಿಧಾನದ ಆಶಯ ಮಾತ್ರ ಇಲ್ಲಿ ಮಣ್ಣುಪಾಲಾಗಿದೆ.

ಗಂಗಸಂದ್ರ ಗ್ರಾಮ ಹಾಲಿ ಸಂಸದ ಜಿ.ಎಸ್.ಬಸವರಾಜು ಅವರ ಜನ್ಮ ಸ್ಥಳವಾಗಿದ್ದು, ಅವರ ಪುತ್ರ ಜಿ.ಬಿ.ಜ್ಯೋತಿಗಣೇಶ್ 2018ರಿಂದ ಇಂದಿನವರೆಗೆ ಶಾಸಕರಾಗಿದ್ದರೂ ಗಂಗಸಂದ್ರದ ದಲಿತರ ಬಡಾವಣೆ ಮಾತ್ರ ಕುಡಿಯುವ ನೀರು, ಬಾಕ್ಸ್ ಚರಂಡಿ ಸೇರಿದಂತೆ ಹಲವು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.

ಕಳೆದ ಎರಡು ವರ್ಷಗಳ ಹಿಂದೆ ಗಂಗಸಂದ್ರ ಗ್ರಾಮದಲ್ಲಿ ಚರಂಡಿ, ಕುಡಿಯುವ ನೀರಿನ ಕಾಮಗಾರಿ ನಡೆದಿದೆ. ಆದರೆ ದಲಿತರು ವಾಸಿಸುವ ಬೀದಿಗಳನ್ನು ಹೊರತು ಪಡಿಸಿ ಬೇರೆ ಸಮುದಾಯದವರು ವಾಸಿಸುವ ಬಡಾವಣೆಗಳಲ್ಲಿ ನಿರ್ಮಿಸಿರುವ ಚರಂಡಿಗೆ ಮಾತ್ರ ಮೇಲ್ಬಾಗದಲ್ಲಿ ಸ್ಲಾಬ್ ಹಾಕಿ ಚರಂಡಿ ವಾಸನೆ ಬಾರದಂತೆ ಮುಚ್ಚಲಾಗಿದೆ. ಆದರೆ ದಲಿತರು ವಾಸಿಸುವ ಬೀದಿಗಳಲ್ಲಿ ಇರುವ ಚರಂಡಿಗಳಿಗೆ ಸ್ಲ್ಯಾಬ್ ಹಾಕಿಲ್ಲ. ಶಾಲೆಯ ಪಕ್ಕದಲ್ಲಿಯೇ ಚರಂಡಿ ಹಾದು ಹೋಗಿದ್ದು, ಮಕ್ಕಳು ತೆರೆದ ಚರಂಡಿ ಪಕ್ಕದಲ್ಲಿಯೇ ಕುಳಿತು ಮಧ್ಯಾಹ್ನದ ಬಿಸಿಯೂಟ ಸೇವಿಸುವಂತಹ ದುಸ್ಥಿತಿ ಇದೆ ಎಂದು ನಿವಾಸಿಗಳ ಆರೋಪವಾಗಿದೆ.

ಕುಡಿಯುವ ನೀರಿಗೆ ಚರಂಡಿಯ ಕೊಳಕು ನೀರು: ದಲಿತ ಕಾಲನಿಯಲ್ಲಿ ಕುಡಿಯುವ ನೀರು ಒದಗಿಸಲು ಹಾಕಿರುವ ಪಿಸ್ಟನ್‌ಗೆ ಚರಂಡಿಯ ಕೊಳಚೆ ನೀರು ಸೇರುತ್ತಿದ್ದು, ಈ ಬಗ್ಗೆ ದಲಿತ ಮುಖಂಡ ಗಂಗಸಂದ್ರ ರಾಜು ಎಂಬವರು 2024ರ ಫೆ.17ರಂದು ನಗರಪಾಲಿಕೆಗೆ ದೂರು ಸಲ್ಲಿಸಿ, ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಮಿಕ್ಸ್ ಆಗುತ್ತಿರುವುದರಿಂದ ರೋಗ ರುಜೀನಗಳು ಬರುವ ಸಾಧ್ಯ ಇದೆ. ದುರಸ್ತಿ ಮಾಡಿಸಿಕೊಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳಾಗಲಿ, ನಗರಪಾಲಿಕೆಯ ನೌಕರರಾಗಲಿ ಇತ್ತ ತಿರುಗಿಯೂ ನೋಡಿಲ್ಲ. ಇದೇ ವಿಚಾರವಾಗಿ ಪಾಲಿಕೆಯ ಆಯುಕ್ತರ ಗಮನಕ್ಕೆ ತಂದು ಅವರ ಕೋರಿಕೆಯಂತೆ ಫೋಟೊ ಮತ್ತು ವೀಡಿಯೊವನ್ನು ಆಯುಕ್ತರಿಗೆ ಕಳುಹಿಸಿದ್ದರೂ ಇದುವರೆಗೂ ಕ್ರಮ ಆಗಿಲ್ಲ. ದಲಿತರೆಂದರೆ ಪಾಲಿಕೆಗೆ ಅಷ್ಟೊಂದು ತಾತ್ಸರವೇ ಎಂಬ ಪ್ರಶ್ನೆ ದಲಿತರದ್ದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ರಂಗರಾಜು ತುಮಕೂರು

contributor

Similar News