ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಒಂದು ವರ್ಷ

Update: 2025-04-28 14:30 IST
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಒಂದು ವರ್ಷ

ಪ್ರಜ್ವಲ್ ರೇವಣ್ಣ | PC : PTI

  • whatsapp icon

ಹಾಸನ, ಎ.27: 2024ರ ಎಪ್ರಿಲ್‌ನಲ್ಲಿ ನಡೆದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಲ್ಲದೇ, ಈ ಪ್ರಕರಣವು ಕೇವಲ ರಾಜಕೀಯ ವಿವಾದವಾಗಿ ಉಳಿಯದೇ, ಸಾಮಾಜಿಕ, ನೈತಿಕ ಮತ್ತು ಕಾನೂನು ಚರ್ಚೆಗೆ ಕಾರಣವಾಯಿತು.

ಒಂದು ವರ್ಷದ ನಂತರ, ಸಂತ್ರಸ್ತರ ಸ್ಥಿತಿ, ಕಾನೂನು ಪ್ರಕ್ರಿಯೆಯ ಪ್ರಗತಿ ಮತ್ತು ಸಮಾಜದ ಮೇಲೆ ಬೀರಿದ ಪರಿಣಾಮವನ್ನು ಪರಿಶೀಲಿಸಿದಾಗ ಘಟನೆಯಲ್ಲಿ ನೊಂದವರು ಇನ್ನೂ ತಮ್ಮ ಸಾಮಾನ್ಯ ಜೀವನಕ್ಕೆ ಮರಳಿಲ್ಲ ಎನ್ನಲಾಗುತ್ತಿದೆ.

2024ರ ಎಪ್ರಿಲ್ 22ರಂದು ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದವು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಈ ವೀಡಿಯೊಗಳಲ್ಲಿ ಕಾಣಿಸಿಕೊಂಡವರು ಇನ್ನೂ ಚೇತರಿಸಿಲ್ಲ ಎಂದು ತಿಳಿದು ಬಂದಿದೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾದ ಅಶ್ಲೀಲ ವೀಡಿಯೊಗಳಿಂದ ಚುನಾವಣೆಯ ಮೇಲೆ ಪ್ರಭಾವ ಬೀರಿತ್ತು. ಇಂದಿಗೂ ಸಹ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಘಟನೆಗಿಂತ ಹೆಚ್ಚಾಗಿ ಅಶ್ಲೀಲ ವೀಡಿಯೊ ಹರಿಬಿಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ, ಕರ್ನಾಟಕ ಸರಕಾರವು ತಕ್ಷಣವೇ ವಿಶೇಷ ತನಿಖಾ ತಂಡ ರಚಿಸಿತು.ಈ ನಡುವೆ ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಜರ್ಮನಿಗೆ ಪರಾರಿಯಾದರು. ಇದು ತನಿಖೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿತು. ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪಾಸ್‌ಪೋರ್ಟ್ ರದ್ದತಿಗೆ ಮನವಿ ಮಾಡಿತು, ಮತ್ತು ಎಸ್‌ಐಟಿ ತಂಡವು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿತು.

ಮೇ 31, 2024ರಂದು, ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್ ಆಗಮಿಸಿದಾಗ, ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದರು. ಪ್ರಸ್ತುತ, ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಮತ್ತು ಅವರು ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಪ್ರಜ್ವಲ್‌ನ ತಂದೆ ಎಚ್.ಡಿ. ರೇವಣ್ಣ ಆರೋಪಿಯಾಗಿದ್ದು. ಜಾಮೀನಿನ ಮೇಲೆ ಹೊರಗಿದ್ದಾರೆ.

ಇನ್ನು ವೀಡಿಯೊದಲ್ಲಿ ಕಾಣಿಸಿಕೊಂಡ ಮಹಿಳೆಯರು ಸಂಕಷ್ಟಕ್ಕೀಡಾದರು. ಮಹಿಳೆಯರ ಕುಟುಂಬ ಸಂಬಂಧಗಳು ಹದಗೆಟ್ಟಿತ್ತು. ಮಾನಸಿಕವಾಗಿ ನೊಂದ ಮಹಿಳೆಯರ ಪೈಕಿ ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದು ಬಂದಿದೆ. ಇನ್ನು ಕೆಲವರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೂ ಎಂದು ಹೇಳಲಾಗುತ್ತದೆ.

ಎಸ್‌ಐಟಿ ತನಿಖೆ ನಿಧಾನ?

ಘಟನೆ ನಡೆದು ಒಂದು ವರ್ಷ ಕಳೆದರೂ, ಈ ಪ್ರಕರಣದ ಸಂತ್ರಸ್ತರಿಗೆ ಪೂರ್ಣ ನ್ಯಾಯ ದೊರೆತಿಲ್ಲ. ಎಸ್‌ಐಟಿ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಾನೂನು ಪ್ರಕ್ರಿಯೆಯ ವಿಳಂಬವು ಸಂತ್ರಸ್ತರಲ್ಲಿ ನಿರಾಸೆ ಮೂಡಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದರೂ, ಸಂತ್ರಸ್ತ ಮಹಿಳೆಯರು ಭಯದಲ್ಲಿ ಇದ್ದಾರೆ. ಹಾಸನ ಜಿಲ್ಲೆಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ವಾಸವಾಗಿರುವ ಒಂದು ಕುಟುಂಬ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದೆ ಎಂಬಂತೆ ಜೀವನ ನಡೆಸುತ್ತಿದೆ. ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಈ ಪ್ರಕರಣವು ಪ್ರತಿಪಾದಿಸುತ್ತದೆ.

ಈ ಮಹಿಳೆಯರು ತಮ್ಮ ಮಕ್ಕಳನ್ನೇ ಎದುರಿಸಲಾಗದ ಸ್ಥಿತಿಯಲ್ಲಿದ್ದಾರೆ ಎಂಬ ಮಾತು ನಿಜಕ್ಕೂ ಗಂಭೀರವಾದದ್ದು. ಇವರ ಹೇಳಿಕೆ ಮಹಿಳೆಯರ ಭೀಕರ, ಭಯಾನಕ ಪರಿಸ್ಥಿತಿಯನ್ನು ವಿವರಿಸುತ್ತದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಸ್‌ಐಟಿ ತಂಡವು ಕೆಲವು ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿದೆ. ಆದರೆ, ಸಾಮಾಜಿಕ ಕಳಂಕದ ಭಯದಿಂದ ಬಹಳಷ್ಟು ಮಹಿಳೆಯರು ದೂರು ನೀಡಲು ಹಿಂಜರಿದರು. ಈ ಸಂದರ್ಭದಲ್ಲಿ, ಸರಕಾರ ಸಂತ್ರಸ್ತರಿಗೆ ಮಾನಸಿಕ ಮತ್ತು ಕಾನೂನು ಬೆಂಬಲವನ್ನು ಒದಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಸಂತ್ರಸ್ತರಿಗೆ ಧೈರ್ಯ ತುಂಬಲು ಹಾಸನಕ್ಕೆ ಗೃಹ ಮಂತ್ರಿ ಅಥವಾ ಇತರ ಪ್ರಮುಖ ಮಂತ್ರಿಗಳು ಬರಬಹುದಾಗಿತ್ತು. ಈ ಕನಿಷ್ಠ ಕೆಲಸವನ್ನು ಸಹ ಸರಕಾರ ಮಾಡಲಿಲ್ಲ.

-ರೂಪಾ ಹಾಸನ, ಲೇಖಕಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಲ್ನಾಡ್ ಮೆಹಬೂಬ್

contributor

Similar News