ಪಿರಿಯಾಪಟ್ಟಣ | ಗ್ರಾಮ ಠಾಣಾ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ಆಗ್ರಹ

ಪಿರಿಯಾಪಟ್ಟಣ, ಎ.17: ದಲಿತರಿಗೆ ಸೇರಬೇಕಾದ ಗ್ರಾಮ ಠಾಣಾ ಜಾಗವನ್ನು ಕಸಿದುಕೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಕಂಪಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಹುಚ್ಚಿ ಕೊಪ್ಪಲು ಗ್ರಾಮ ಠಾಣಾ ಜಾಗವಿದ್ದು, ಈ ಜಾಗವನ್ನು ಕಂಪಲಾಪುರ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದವರಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ಮೀಸಲಿಡಲಾಗಿದೆ. ಈ ಬಗ್ಗೆ ಪಂಚಾಯತ್ ರಾಜ್ ಹಾಗೂ ಕಂದಾಯ ಇಲಾಖೆಗಳಿಗೆ ಹಲವಾರು ಬಾರಿ ಪತ್ರ ವ್ಯವಹಾರ ನಡೆಸಲಾಗಿದ್ದು, ಒಪ್ಪಿಗೆ ಪಡೆಯಲಾಗಿದ್ದರೂ ಈ ಕುತಂತ್ರ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್‌ರವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಂಡು ಹುಚ್ಚಿ ಕೊಪ್ಪಲು ಗ್ರಾಮ ಠಾಣಾ ಜಾಗದ ಸರ್ವೇ ನಂ.379, 381, 382, 385, 387 ಹಾಗೂ ಮಾಕನ ಹಳ್ಳಿ ಪಾಳ್ಯ ಮತ್ತು ಕೆಂಪಿ ಕೆರೆಗೆ ಹೊಂದಿಕೊಂಡಿರುವ 5 ಎಕರೆ ಜಾಗದಲ್ಲಿ 150ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಕುಟುಂಬಗಳು ಗುಡಿಸಲು ನಿರ್ಮಿಸಿ ಈ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಾರಣಾಂತಿಕ ಕಾಯಿಲೆಗಳಿಗೆ ಹೆದರಿ ಖಾಲಿ ಮಾಡಲಾಗಿತ್ತು: ಕಮಲಾಪುರ ಗ್ರಾಮದ ಜೈ ಭೀಮ್ ಯುವ ಸೇನೆಯ ಮುಖಂಡ ರಾಮು ಮಾತನಾಡಿ, 1938ರಲ್ಲಿ ಈ ಜಾಗದಲ್ಲಿ ದಲಿತ ಕುಟುಂಬಗಳು ವಾಸವಾಗಿದ್ದವು. ಆದರೆ ಆ ಸಂದರ್ಭದಲ್ಲಿ ಕಾಲರಾ, ಪ್ಲೇಗ್ ಮುಂತಾದ ಮಾರಣಾಂತಿಕ ಕಾಯಿಲೆಗಳು ತಲೆದೋರಿದ ಹಿನ್ನೆಲೆಯಲ್ಲಿ ನಮ್ಮ ಪೂರ್ವಜರು ಈ ಜಾಗದಿಂದ ಸ್ಥಳಾಂತರಗೊಂಡು ಕಂಪಲಾಪುರದಲ್ಲಿ ಬಂದು ನೆಲೆಸಿದರು ಎಂಬುದಕ್ಕೆ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ದಿನ ಕಳೆದಂತೆ ಕುಟುಂಬಗಳ ಸಂಖ್ಯೆ ಹೆಚ್ಚಾದಂತೆ ನಮ್ಮ ದಲಿತ ಕುಟುಂಬಗಳು ನಿವೇಶನ ಹಾಗೂ ಜಾಗದ ಸಮಸ್ಯೆ ಉಂಟಾದ ಕಾರಣ ನಮ್ಮ ಪೂರ್ವಜರು ಈ ಹಿಂದೆ ವಾಸವಿದ್ದ ಗ್ರಾಮ ಠಾಣಾ ಜಾಗದಲ್ಲಿ ನಿವೇಶನ ಕಲ್ಪಿಸಿಕೊಡುವಂತೆ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಮನವಿ ಪತ್ರ ಸಲ್ಲಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಸಚಿವ ಕೆ.ವೆಂಕಟೇಶ್‌ರವರು ನಿವೇಶನ ರಹಿತ ಬಡ ದಲಿತ ಕುಟುಂಬಗಳಿಗೆ ಈ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ನಿವೇಶನ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳು, ತಾಪಂ ಇಒಗೆ ಸೂಚನೆ ನೀಡಿದ್ದಾರೆ.
ಆದರೆ, ಇಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ ಸಚಿವರ ಮಾತಿಗೆ ಕಿಂಚಿತ್ತೂ ಮನ್ನಣೆ ನೀಡದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಶಾಮೀಲಾಗಿ ದಲಿತರಿಗಾಗಿ ಮೀಸಲಿಟ್ಟಿರುವ ಗ್ರಾಮ ಠಾಣಾ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುವುದಾಗಿ ಪಂಚಾಯತ್‌ನಲ್ಲಿ ಅಸಂಬದ್ಧ ನಿರ್ಣಯವನ್ನು ಕೈಗೊಂಡು ದಲಿತ ಕುಟುಂಬಗಳಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ನಾವುಗಳು ನಮ್ಮ ಪೂರ್ವಜರು ವಾಸವಿದ್ದ ಜಾಗದಲ್ಲಿ ನಮಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ನಮ್ಮ ಗ್ರಾಮದ 150 ಕ್ಕೂ ಹೆಚ್ಚು ದಲಿತ ಕುಟುಂಬಗಳು ಸೇರಿ ಈ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಕೆ.ವಿ.ನಾರಾಯಣ, ವೆಂಕಟೇಶ್, ಶ್ರೀನಿವಾಸ್, ಶಿವರಾಂ ಮೌರ್ಯ, ಚಂದ್ರು, ಸಂಗಮನಾಥ, ತಮ್ಮಯ್ಯ, ವೈರಮುಡಿ, ಚೆಲುವರಾಜು, ನಿಂಗರಾಜು, ಮಹಾದೇವ್, ರಾಚಯ್ಯ, ಸಿದ್ದರಾಮಯ್ಯ, ಹೇಮಚಂದ್ರ, ರವಿ, ಕಾರ್ತಿಕ್, ಪುಟ್ಟು ರಾಜ್, ಲೋಕೇಶ್, ಶ್ರೀಧರ್, ರಾಮು, ಗಣೇಶ್, ಪ್ರಮೋದ್, ಸಾವಿತ್ರಿ, ಕುಮಾರಿ, ಜಯಮಾಲಾ, ಸುಧಾ, ಸುಮಿತ್ರಾ, ಶಿವಕುಮಾರ್, ರಾಜು ಸಹಿತ 150 ಕ್ಕೂ ಹೆಚ್ಚು ದಲಿತ ಕುಟುಂಬಗಳು ವಿವಿಧ ರೀತಿಯಲ್ಲಿ ಹೋರಾಟವನ್ನು ವಿಸ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಠಾಣಾ ಜಾಗ ಎಂದು ದಾಖಲೆ ಇದೆ. ಆದರೆ, ಒಂದೇ ಸಮುದಾಯಕ್ಕೆ ಸೇರಿದ್ದು ಎಂದು ಸ್ಪಷ್ಟವಾಗಿಲ್ಲ. ಆದ್ದರಿಂದ ನಿವೇಶನ ಹಂಚುವ ಸಂದರ್ಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಶೇಕಡವಾರು ಆಯಾಯ ವರ್ಗವನ್ನು ನಿಯಮದಡಿಯಲ್ಲಿ ಪರಿಗಣಿಸಿ ಅವಕಾಶ ಕಲ್ಪಿಸಬೇಕಾಗುತ್ತದೆ.
-ಡಿ.ಬಿ.ಸುನಿಲ್ ಕುಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ