ಜಾತಿ ನಿಂದನೆಗಳ ಮೇಲೆ ಸೃಷ್ಟಿಸಲಾದ ‘ಪೊರ್ಕಿ ಮ್ಯಾನ್’ ಮತ್ತು ಇತರ ವೈರಲ್ ವೀಡಿಯೊಗಳು ನಗುವ ವಿಷಯವಲ್ಲ

Update: 2025-01-29 06:20 GMT
Editor : Thouheed | Byline : ಶಿವಾನಿ ಕಾವ
ಜಾತಿ ನಿಂದನೆಗಳ ಮೇಲೆ ಸೃಷ್ಟಿಸಲಾದ ‘ಪೊರ್ಕಿ ಮ್ಯಾನ್’ ಮತ್ತು ಇತರ ವೈರಲ್ ವೀಡಿಯೊಗಳು ನಗುವ ವಿಷಯವಲ್ಲ
  • whatsapp icon

ಆನ್‌ಲೈನ್‌ನಲ್ಲಿ ‘Vickypedia' ಎಂದೇ ಪರಿಚಿತ ಕನ್ನಡದ ಸಾಮಾಜಿಕ ಮಾಧ್ಯಮ ಪ್ರಭಾವಿ ವಿಕಾಸ್ ಸೃಷ್ಟಿಸಿರುವ ‘ಪೊರ್ಕಿ ಮ್ಯಾನ್’ ಎಂಬ ಇತ್ತೀಚಿನ ವೀಡಿಯೊ ಮೇಲ್ವರ್ಗದ ಗುಂಪುಗಳು ಹೇಗೆ ದುರ್ಬಲ ಸಮುದಾಯಗಳನ್ನು ಅಪಹಾಸ್ಯ ಮಾಡುವ ಕಂಟೆಂಟ್‌ಗಳನ್ನು ರಚಿಸುತ್ತವೆ ಮತ್ತು ಸಂಭ್ರಮಿಸುತ್ತವೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಈ ಗುಂಪುಗಳು ಹೆಚ್ಚಾಗಿ ಅವರ ಜಾತಿ ಮೂಲಗಳನ್ನು ಒಳಗೊಂಡಿರುವ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸುತ್ತವೆ.

ಬಾಯಲ್ಲಿ ಸಿಗರೆಟ್ ಕಚ್ಚಿಕೊಂಡಿರುವ, ಗಾಢ ಬಣ್ಣದ ಟಿ-ಶರ್ಟ್ ಮತ್ತು ‘ಬಿಗಿಯಾದ ಪ್ಯಾಂಟ್-ಯು’, ಆಭರಣ ಮತ್ತು ಬ್ರ್ಯಾಂಡೆಡ್ ಕೂಲಿಂಗ್ ಗ್ಲಾಸ್ ಧರಿಸಿರುವ, ವರ್ಣರಂಜಿತ ವಿಚಿತ್ರ ಕೇಶಶೈಲಿಯ ಹಾಗೂ ಅಗ್ಗದ ‘ಚೈನಾ ಸೆಟ್’ ಫೋನ್ ಬಳಸುತ್ತಿರುವ ಯುವಕ ‘ಪೊರ್ಕಿ ಮ್ಯಾನ್’ ಅನ್ನು ವೀಡಿಯೊ ತೋರಿಸುತ್ತದೆ. ಆತನ ಕಲ್ಪನೆಯಲ್ಲಿ ಸ್ಥಳೀಯ ರೌಡಿ ಹೀಗೆಯೇ ಕಾಣುತ್ತಾನೆ. ಈತ ಇತರ ಮಹಿಳೆಯರೊಂದಿಗೆ ಚೆಲ್ಲಾಟವಾಡುವಾಗ ತನ್ನ ಗೆಳತಿಯಿಂದ ಹಣವನ್ನು ಕಿತ್ತುಕೊಳ್ಳುವ, ಬೀದಿಗಳಲ್ಲಿ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡುವ ಉಪದ್ರವಕಾರಿ ವ್ಯಕ್ತಿ.

ಜ.9ರಂದು ಅಪ್‌ಲೋಡ್ ಮಾಡಲಾದ ವೀಡಿಯೊ ಸಾಕಷ್ಟು ಗಮನವನ್ನು ಸೆಳೆದಿದ್ದು ಇನ್‌ಸ್ಟಾಗ್ರಾಮ್ ಒಂದರಲ್ಲೆ 18 ಲಕ್ಷಕ್ಕೂ ಅಧಿಕ ವೀಕ್ಷಣೆಗಳು,1,30,000 ಲೈಕ್‌ಗಳನ್ನು ಗಳಿಸಿದ್ದು, 5,26,000 ಜನರು ಅದನ್ನು ಶೇರ್ ಮಾಡಿಕೊಂಡಿದ್ದಾರೆ.

‘ತಮಾಷೆ’ಗಾಗಿ ಬಳಸಲಾಗಿರುವ ಪೊರ್ಕಿ ಪದವು ಜಾತಿ ಆಧಾರಿತ ಉದ್ಯೋಗದಲ್ಲಿ ತನ್ನ ಮೂಲವನ್ನು ಹೊಂದಿದ್ದು, ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಕೊಂಡಿರುವ ಸಮುದಾಯಗಳನ್ನು ಉಲ್ಲೇಖಿಸಿ ನಿಂದನೆಯಾಗಿದೆ.

ವೀಡಿಯೊದ ಸಂಪೂರ್ಣ ಪರಿಕಲ್ಪನೆಯು ಜಾತಿವಾದಿ ಪೂರ್ವಾಗ್ರಹದಿಂದ ಹುಟ್ಟಿಕೊಂಡಿದೆ ಮತ್ತು ನೈತಿಕ ಹಾಗೂ ಸಾಮಾಜಿಕ ಕೀಳರಿಮೆಯೊಂದಿಗೆ ನಿರ್ದಿಷ್ಟ ಶೈಲಿಯ ಉಡುಗೆ ಮತ್ತು ನೋಟದೊಂದಿಗೆ ಗುರುತಿಸಿಕೊಂಡಿದೆ.

ಅನೇಕ ವೀಕ್ಷಕರು ವೀಡಿಯೊವನ್ನು ಮೋಜಿನದು ಎಂದು ಪರಿಗಣಿಸಿದ್ದರೆ, ಕಮೆಂಟ್ ವಿಭಾಗವು ಪೊರ್ಕಿ ಪದದ ಕುರಿತು ಅಜ್ಞಾನವನ್ನು ಬಹಿರಂಗಗೊಳಿಸಿದೆ. ಅದರ ಜಾತಿವಾದಿ ಮೂಲಗಳ ಬಗ್ಗೆ ಗೊತ್ತಿರದ ಕೆಲವು ವೀಕ್ಷಕರು ಅದು ‘ಚಪ್ರಿ’ ಎಂದು ಸೂಚಿಸುವ ಮೂಲಕ ವೀಡಿಯೊದ ಸೃಷ್ಟಿಕರ್ತನ ‘ತಪ್ಪನ್ನು ಸರಿಪಡಿಸಿದ್ದಾರೆ’. ‘ಚಪ್ರಿ’ ಜಾತಿ ಆಧಾರದಲ್ಲಿ ನಿಂದನೆಯ ಇನ್ನೊಂದು ಪದವಾಗಿದೆ. ಈ ಬಳಕೆದಾರರ ಪೈಕಿ ಕೆಲವರನ್ನು thenewsminute.com ಸಂಪರ್ಕಿಸಿದಾಗ, ಎರಡೂ ಪದಗಳ ಜಾತಿವಾದಿ ಅರ್ಥ ತಮಗೆ ತಿಳಿದಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೂ ಈ ಪದಗಳ ಮೂಲಗಳ ಬಗ್ಗೆ ಗೊತ್ತಾದ ಬಳಿಕವೂ ತಮ್ಮ ಕಮೆಂಟ್‌ಗಳನ್ನು ಅಳಿಸುವ ಅಥವಾ ಇಂತಹ ಪದಗಳ ಬಳಕೆಯನ್ನು ನಿಲ್ಲಿಸುವ ಯಾವುದೇ ಉದ್ದೇಶವನ್ನು ಅವರು ವ್ಯಕ್ತಪಡಿಸಲಿಲ್ಲ.

ಭಾರತೀಯ ತ್ಯಾಜ್ಯ ಸಂಗ್ರಹಕಾರರ ಒಕ್ಕೂಟದ ರಾಷ್ಟ್ರಿಯ ಸಂಯೋಜಕ ವಿಘ್ನೇಶ್ ಶಿವ ಸುಬ್ರಮಣಿಯಂ ಪ್ರಕಾರ ಪೊರ್ಕಿ ಪದವು ಹೆಕ್ಕುವುದನ್ನು ಸೂಚಿಸುವ ತಮಿಳು ಪದ ‘ಪೊರುಕ್ಕುದಲ್’ನಿಂದ ಹುಟ್ಟಿಕೊಂಡಿದೆ. ಐತಿಹಾಸಿಕವಾಗಿ ಇದು ಹೆಚ್ಚಾಗಿ ಜಾತಿಯಾಧಾರಿತ ದಬ್ಬಾಳಿಕೆಯಿಂದಾಗಿ ತಮ್ಮ ಉಳಿವಿಗಾಗಿ ಜನರು ತ್ಯಜಿಸಿದ ವಸ್ತುಗಳನ್ನು ಸಂಗ್ರಹಿಸುವ ವ್ಯಕ್ತಿಗಳನ್ನು ಸೂಚಿಸುತ್ತದೆ. ನಗರಗಳ ಅಂಚುಗಳಿಗೆ ತಳ್ಳಲ್ಪಟ್ಟ ಈ ಸಮುದಾಯಗಳು ಶಿಕ್ಷಣ,ಸಾರ್ವಜನಿಕ ಸೇವೆಗಳು ಮತ್ತು ಉದ್ಯೋಗ ಲಭ್ಯತೆಯ ಕೊರತೆಯಿಂದಾಗಿ ತಮ್ಮ ಏಕೈಕ ಜೀವನೋಪಾಯವಾಗಿ ತ್ಯಾಜ್ಯ ಸಂಗ್ರಹವನ್ನೇ ನೆಚ್ಚಿಕೊಂಡಿವೆ.

ತಮಿಳುನಾಡಿನಲ್ಲಿ ತ್ಯಾಜ್ಯಗಳನ್ನು ಹೆಕ್ಕುವವರನ್ನು ಸಾಮಾನ್ಯವಾಗಿ ಕುಪ್ಪೈ ಪೊರುಕ್ಕಿ ಎಂದು ಕರೆಯಲಾಗುತ್ತದೆ ಮತ್ತು ಇದು ವ್ಯಕ್ತಿಗಳನ್ನು ಅಶಿಸ್ತಿನ, ಅವಕಾಶವಾದಿ ಅಥವಾ ನೀತಿಬಾಹಿರರು ಎಂದು ಸೂಚಿಸುವ ಪದವಾಗಿ ಪರಿವರ್ತನೆಗೊಂಡಿದೆ. ತಮಿಳು ಸಿನೆಮಾಗಳಲ್ಲಿ ಈ ಪದವು ಇನ್ನಷ್ಟು ಋಣಾತ್ಮಕ ಅರ್ಥವನ್ನು ಪಡೆದುಕೊಂಡಿದೆ.

ಬೆಂಗಳೂರನ್ನು ಬಿಟ್ಟರೆ ಕರ್ನಾಟಕದ ಇತರ ಭಾಗಗಳಲ್ಲಿ ಪೊರ್ಕಿ ಪದವನ್ನು ವಿಭಿನ್ನ ಅರ್ಥದೊಂದಿಗೆ ಬಳಸಲಾಗುತ್ತಿದೆ, ಇದು ಹೆಚ್ಚಾಗಿ ಯಾವುದೇ ಜವಾಬ್ದಾರಿಯಿಲ್ಲದ ಅಥವಾ ಅಲೆಮಾರಿಗಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಜನರನ್ನು ಸೂಚಿಸುತ್ತದೆ.

ಇತ್ತೀಚೆಗೆ ಕೆ.ಬಿ.ಸಿದ್ದಯ್ಯನವರ ದಕ್ಲಕಥಾ ದೇವಿಕಾವ್ಯವನ್ನು ಏಕಾಂಕ ನಾಟಕವಾಗಿ ಅಳವಡಿಸಿದ ಕರ್ನಾಟಕದ ದಲಿತ ನಟ ಹಾಗೂ ನಿರ್ದೇಶಕ ಲಕ್ಷ್ಮಣ ಕೆ.ಪಿ.ಅವರು ಪೊರ್ಕಿ ಪದದ ಸಂಪೂರ್ಣ ಜಾತಿವಾದಿ ಅರ್ಥ ಗೊತ್ತಿಲ್ಲದೆ ತಾನು ಆಗಾಗ ಅದನ್ನು ಬಳಸಿದ್ದಾಗಿ ಹೇಳಿದರು.

‘Vickypedia' ಜೋಕ್ ಮಾಡಲು ಜಾತಿ, ವರ್ಗ ಅಥವಾ ಲಿಂಗ ಪೂರ್ವಾಗ್ರಹವನ್ನು ಬಳಸುವ ಕಾಮಿಡಿ ಕಂಟೆಂಟ್ ಸೃಷ್ಟಿಸುವವರ ಉದ್ದನೆಯ ಸಾಲಿನಲ್ಲಿ ಕೇವಲ ಒಬ್ಬರಾಗಿದ್ದಾರೆ.

ಪೊರ್ಕಿ ಮ್ಯಾನ್‌ನಲ್ಲಿಯ ದೃಶ್ಯ ಮತ್ತು ನಿರೂಪಣಾ ಆಯ್ಕೆಗಳು ಮೇಲ್ವರ್ಗಗಳ ಜಾತಿ/ಗುಂಪುಗಳು ಫ್ಯಾಷನ್‌ಗಳ ಮೂಲಕ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳುವ ದುರ್ಬಲ ವರ್ಗಗಳನ್ನು ಅಪಹಾಸ್ಯ ಮಾಡುವ ಮತ್ತು ಕೀಳಾಗಿ ಕಾಣುವ ವ್ಯಾಪಕ ಪ್ರವೃತ್ತಿಯನ್ನು ಸೂಚಿಸುತ್ತದೆ. ಈ ಸಮುದಾಯಗಳ ಫ್ಯಾಷನ್ ಪ್ರಜ್ಞೆಯನ್ನು ಋಣಾತ್ಮಕ ನಡವಳಿಕೆಯೊಂದಿಗೆ ಸಂಯೋಜಿಸುವ ಮೂಲಕ ಇಂತಹ ವ್ಯಕ್ತಿಗಳು ಅಶಿಸ್ತಿನ, ಬೇಜವಾಬ್ದಾರಿಯ, ಸಂಸ್ಕಾರವಿಲ್ಲದವರೆಂದು ಬಿಂಬಿಸುವ ಮೂಲಕ ಜಾತಿಯಾಧಾರಿತ ಪೂರ್ವಾಗ್ರಹಗಳನ್ನು ಇನ್ನಷ್ಟು ಬಲಗೊಳಿಸಿದೆ.

ವ್ಹೀಲಿಂಗ್‌ನ್ನು ಕೆಟಿಎಂ ಡ್ಯೂಕ್ ಬೈಕ್‌ನಲ್ಲಿಯೂ ಮಾಡಲಾಗುತ್ತದೆ. ಆದರೆ ಹೊಂಡಾ ಡಿಯೊ ಸ್ಕೂಟರ್‌ನಲ್ಲಿ ಅದನ್ನು ಮಾಡಿದಾಗ ಅದು ಪೊರ್ಕಿ ಅಥವಾ ಚಾಪ್ರಿ ಏಕೆ ಆಗುತ್ತದೆ? ದುರ್ಬಲ ವರ್ಗಗಳ ಯುವಕರು ತಮ್ಮ ಕೂದಲನ್ನು ಬಣ್ಣಬಣ್ಣದ್ದಾಗಿ ಮಾಡಿಕೊಂಡರೆ ಅದು ಯಾರ ಗಮನವನ್ನೂ ಸೆಳೆಯುವುದಿಲ್ಲ, ಆದರೆ ಅದನ್ನೇ ಮೇಲ್ವರ್ಗದ ವ್ಯಕ್ತಿ ಮಾಡಿದಾಗ ಅದು ಮುಖ್ಯವಾಹಿನಿಗೆ ಸೇರುತ್ತದೆ ಮತ್ತು ಆಕರ್ಷಕವಾಗುತ್ತದೆ ಎಂದು ವಿಘ್ನೇಶ್ ಹೇಳಿದರು.

‘ಪೊರ್ಕಿ ಮ್ಯಾನ್’ನಂತಹ ಪಾತ್ರಗಳು ಸ್ಟೀರಿಯೊಟೈಪ್ಡ್ ವ್ಯಂಗ್ಯಚಿತ್ರಗಳನ್ನು ಆಧರಿಸಿವೆ, ಅಲ್ಲಿ ಹಾಸ್ಯವು ಆತ್ಮಾವಲೋಕನ ಅಥವಾ ಟೀಕೆಯಿಂದ ಹುಟ್ಟುವುದಿಲ್ಲ, ಪ್ರಬಲ ಜಾತಿಗಳು ದುರ್ಬಲರನ್ನು ಅಪಹಾಸ್ಯ ಮಾಡುವ ನಡವಳಿಕೆಗಳಿಂದ ಹುಟ್ಟಿಕೊಳ್ಳುತ್ತವೆ ಎಂದು ಲಕ್ಷ್ಮಣ ಹೇಳಿದರು.

ಇಂತಹ ನಿರೂಪಣೆಗಳು ಅಂಚಿನಲ್ಲಿರುವ ಸಮುದಾಯಗಳನ್ನು ಘನತೆ ಮತ್ತು ಸಾಮಾಜಿಕ ಹಕ್ಕುಗಳನ್ನು ಹೊಂದಿರುವ ವ್ಯಕ್ತಿಗಳನ್ನಾಗಿ ನೋಡಲು ನಿರಾಕರಣೆಯನ್ನು ಪ್ರತಿಬಿಂಬಿಸುತ್ತವೆ ಎಂದು ವಿಘ್ನೇಶ್ ಹೇಳಿದರು.

ಇಂತಹ ವೈರಲ್ ವೀಡಿಯೊಗಳಲ್ಲಿನ ಅಪಹಾಸ್ಯವು ಸಾಮಾನ್ಯವಾಗಿ ಆಕ್ರೋಶವನ್ನು ಹುಟ್ಟಿಸುವ ಸಾಂಪ್ರದಾಯಿಕ ಜಾತಿ ಅಥವಾ ವರ್ಗ ತಾರತಮ್ಯದಷ್ಟು ಬಹಿರಂಗವಾಗಿಲ್ಲ, ಬದಲಾಗಿ ಇದು ಹಾಸ್ಯದ ಸೋಗಿನಲ್ಲಿ ಬೆಳೆಯುತ್ತಿದೆ ಮತ್ತು ಅದನ್ನು ಪ್ರಶ್ನಿಸುವುದು ಕಷ್ಟವಾಗುತ್ತದೆ. ವಿಘ್ನೇಶ್ ವಿವರಿಸಿರುವಂತೆ ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಈ ತಾರತಮ್ಯಗಳನ್ನು ಪ್ರಶ್ನಿಸಲು ರಾಜಕೀಯ ಅರಿವಿನ ಕೊರತೆಯಿದೆ.ಬದಲಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಅವುಗಳನ್ನು ವರ್ಧಿಸುತ್ತವೆ, ಸ್ಟೀರಿಯೊಟೈಪ್‌ಗಳನ್ನು ಸಾಮಾನ್ಯಗೊಳಿಸುತ್ತವೆ ಮತ್ತು ಕಳಂಕವನ್ನು ಬಲಗೊಳಿಸುತ್ತವೆ.

ಈ ಪೂರ್ವಾಗ್ರಹದ ಕಪಟತನವು ಅದರ ಸೂಕ್ಷ್ಮತೆಯಲ್ಲಿದೆ. ವೀಕ್ಷಕರು ಈ ಚಿತ್ರಣಗಳನ್ನು ನೋಡಿ ನಗುತ್ತಾರೆ ಮತ್ತು ಅವುಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ತಮಗೆ ಅರಿವಿಲ್ಲದೆಯೇ ಜಾತಿವಾದಿ ನಿಲುವುಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಇದು ಸರಳ ವಿಷಯವಾಗಿ ಕಾಣಬಹುದು,ಆದರೆ ಇದು ಜಾತಿ ಮತ್ತು ವರ್ಗ ಗುರುತುಗಳೊಂದಿಗೆ ಆಳವಾಗಿ ಹೆಣೆದುಕೊಂಡಿದೆ ಎಂದು ಲಕ್ಷಣ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಾನಿ ಕಾವ

contributor

Similar News