ಡೆಂಗಿಗೆ ಮುಂಜಾಗ್ರತೆಯೇ ಮದ್ದು

ರೋಗಿ-ಸೊಳ್ಳೆ-ಆರೋಗ್ಯವಂತ ಈ ಮೂರು ಕೊಂಡಿಗಳ ಚಕ್ರದಲ್ಲಿಯೇ ಡೆಂಗಿ ಕಾಯಿಲೆ ಸುತ್ತುತ್ತದೆ. ಈ ಸರಪಳಿಯ ಕೊಂಡಿಗಳು ಕಳಚಿಕೊಂಡಾಗಲೇ ಈ ರೋಗಕ್ಕೆ ಸುಲಭವಾಗಿ ಕಡಿವಾಣ ಹಾಕಬಹುದು. ಈ ಕಾಯಿಲೆಯ ಹತೋಟಿಗಿರುವ ಪ್ರಬಲ ಅಸ್ತ್ರವೆಂದರೆ ಈಡಿಸ್ ಈಜಿಪ್ಟಿ ಸೊಳ್ಳೆಗಳನ್ನು ನಿಯಂತ್ರಿಸುವುದು ಹಾಗೂ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದೇ ಆಗಿದೆ.

Update: 2024-07-15 05:12 GMT

ಆಕಾಶಕ್ಕೆ ಏಣಿಹಾಕಲು ಹೊರಟಿರುವ ಮಾನವ, ಅಂಟು ರೋಗಗಳನ್ನು ಅಳಿಸಿ ಹಾಕಲು ಇನ್ನೂ ಶತಾಯಗತಾಯ ಪ್ರಯತ್ನಿಸುತ್ತಲೇ ಇದ್ದಾನೆ. ಆದರೂ ಮಲೇರಿಯಾ, ಕ್ಷಯ, ಟೈಫಾಯ್ಡ್, ದಡಾರ, ಕುಷ್ಠ ಮುಂತಾದ ಸೋಂಕು ರೋಗಗಳನ್ನು ಜಗತ್ತಿನಿಂದ ಹೊಡೆದೋಡಿಸಲಾಗಿಲ್ಲ. ಅವು ಸಾಲದೆಂಬಂತೆ ಏಡ್ಸ್, ಎಬೋಲ, ಚಿಕುನ್ ಗುನ್ಯಾಗಳಂಥ ಸೋಂಕುಗಳ ಕಾಟ ಇತ್ತೀಚೆಗೆ ಹೆಚ್ಚಾಗಿದೆ. ಈಗ ಡೆಂಗಿ ಜ್ವರವಂತೂ ಭಾರತ ಸೇರಿದಂತೆ ಇಡೀ ವಿಶ್ವವನ್ನೇ ಕಾಡಲಾರಂಭಿಸಿದೆ. ಡೆಂಗಿ ಇಂದು ನೂರಕ್ಕೂ ಹೆಚ್ಚು ದೇಶಗಳಲ್ಲಿ ಹರಡಿಕೊಂಡಿದೆ. ವಿಶ್ವದಲ್ಲಿ ವಾರ್ಷಿಕ 5 ಕೋಟಿ ಜನರು ಡೆಂಗಿ ಜ್ವರ ಪೀಡಿತರಾಗುತ್ತಿದ್ದಾರೆ. ಅವುಗಳ ಪೈಕಿ ಸುಮಾರು 5 ಲಕ್ಷ ರೋಗಿಗಳಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಅಗತ್ಯ. ವಿಚಿತ್ರವೆಂದರೆ ಕಾಯಿಲೆಗೆ ತುತ್ತಾಗುವವರಲ್ಲಿ ಶೇ.95 ರಷ್ಟು ಜನ 14 ವರ್ಷದೊಳಗಿನ ಮಕ್ಕಳು.

ನಮ್ಮಲ್ಲೂ ಡೆಂಗಿ ಸ್ಫೋಟ ಜನರ ದುಗುಡ, ದುಮ್ಮಾನ ಹೆಚ್ಚಿಸಿದೆ. ರಾಜ್ಯಾದ್ಯಂತ ಡೆಂಗಿ ಮಹಾಮಾರಿ ಉಲ್ಬಣಗೊಳ್ಳುತ್ತಿದ್ದು, ಆಸ್ಪತ್ರೆಗಳಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಸಾವಿರಾರು ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಹಲವು ಜನರು ಅಸು ನೀಗಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಎದುರಾಗಿದೆ. ಅಲ್ಲದೆ ಝೀಕಾ ವೈರಸ್ ಸದ್ದಿಲ್ಲದೆ ಹೆಜ್ಜೆ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಕೊರೋನದಂತೆ ಜ್ವರಾತಂಕದ ಸವಾಲು ಎದುರಾಗುವ ಸಾಧ್ಯತೆ ಗೋಚರಿಸುತ್ತಿದೆ. ದಾಖಲೆ ಪ್ರಮಾಣದಲ್ಲಿ ನಿತ್ಯ ಡೆಂಗಿ ಜ್ವರ ಬಾಧಿತರ ಪ್ರಮಾಣ ಹೆಚ್ಚಾಗುತ್ತಿದ್ದು, ತಿಂಗಳಾಂತ್ಯಕ್ಕೆ 10 ಸಾವಿರಕ್ಕೂ ಹೆಚ್ಚು ಮಂದಿಗೆ ಹರಡಬಹುದು ಎಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.

ರೋಗ ಪ್ರಸಾರ:

ಡೆಂಗಿ ಜ್ವರ ಆರ್ಬೋವೈರಸ್‌ನ ನಾಲ್ಕು ಪ್ರಭೇದಗಳಿಂದ ಉಂಟಾಗುವುದು. ಈ ಕಾಯಿಲೆ ಈತನಕ ಮಾನವನ ಹೊರತು ಪಡಿಸಿ ಬೇರಾವ ಪ್ರಾಣಿಗಳಲ್ಲೂ ಕಂಡು ಬಂದಿಲ್ಲ. ಈ ರೋಗದ ಪ್ರಸಾರದಲ್ಲಿ ಈಡಿಸ್ ಈಜಿಪ್ಟಿ ಪ್ರಮುಖ ಪಾತ್ರ ವಹಿಸುವುದು. ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರಾದರೂ, ಸೊಳ್ಳೆಗಳು ಟಾಸ್ಕ್ ಫೋರ್ಸ್‌ಗೆ ಅಂಜಿದಂತೆ ಕಾಣುತ್ತಿಲ್ಲ. ಬೆಳೆಯುತ್ತಿರುವ ಜನಸಂಖ್ಯೆ, ಪಟ್ಟಣಗಳು ಬೇಕಾಬಿಟ್ಟಿ ಬೆಳೆಯುತ್ತಿರುವುದು, ಅವ್ಯವಸ್ಥಿತ ನೀರಿನ ನಿರ್ವಹಣೆ, ರಸ್ತೆಯಲ್ಲಿನ ಗುಂಡಿ, ನೀರು ಸಂಗ್ರಹವಾಗುವಂತಹ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಪರಿಸರ ಮಲಿನಗೊಳಿಸುವ ಉದ್ಯಮಗಳು...ಡೆಂಗಿ ಹರಡಲು ಈವರೆಗೆ ತಿಳಿದು ಬಂದಿರುವ ಮುಖ್ಯ ಕಾರಣಗಳು.

ರೋಗದ ಲಕ್ಷಣಗಳು:

ರೋಗದ ಅದಿಶಯನ ಕಾಲ 2 - 15 ದಿನಗಳು. ಆರಂಭಿಕ ಲಕ್ಷಣವೇ ಜ್ವರ. ಏಳೆಂಟು ದಿನಗಳವರೆಗೆ ಮುಂದುವರಿಯುವ ಜ್ವರದ ಪ್ರಮಾಣ 38 ಡಿಗ್ರಿ ಸೆಲ್ಸಿಯರ್ಸ್‌ನಿಂದ 40 ಡಿಗ್ರಿ ಸೆಲ್ಸಿಯಸ್. ಹಗಲು ರಾತ್ರಿ ಎನ್ನದೇ ಒಂದೇ ಸವನೆ ಪೀಡಿಸುತ್ತದೆ. ಸಹಿಸಲಸಾಧ್ಯವಾದ ತಲೆನೋವು, ಮೈ ಕೈ ನೋವು, ಮೂಳೆ ಕೀಲುಗಳ ನೋವು, ಮಾಂಸಖಂಡಗಳ ನೋವು ಕಾಣಿಸಿಕೊಂಡು ಯಮಯಾತನೆ ನೀಡುತ್ತವೆ. ರೋಗಿ ನಿತ್ರಾಣವಾಗಿ ಹಾಸಿಗೆ ಹಿಡಿಯುತ್ತಾನೆ. ಮೂಳೆಗಳೆಲ್ಲಾ ಮುರಿದು ಹೋಗುತ್ತವೆಯೇನೋ ಎನ್ನುವಷ್ಟು ಪ್ರಮಾಣದಲ್ಲಿ ನೋವು ಕಾಣುವುದು ಇದರ ಲಕ್ಷಣ. ಹೀಗಾಗಿ ಈ ಕಾಯಿಲೆಗೆ ‘ಮೂಳೆ ಮುರಿದ ಜ್ವರ’ ಎಂದೂ ಹೇಳುತ್ತಾರೆ. ಕೆಲವರಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಮತ್ತೆ ಕೆಲವರಲ್ಲಿ ರಕ್ತರಸ ಇಂಗಿ ಆಘಾತಕ್ಕೊಳಗಾಗಿ ಅವರು ಸಾವಿನಂಚಿಗೆ ತಲುಪಬಹುದು! ಒಟ್ಟಾರೆ ಹೇಳಬೇಕೆಂದರೆ ಡೆಂಗಿ ಜ್ವರದ ಆಯಾಮ ಹಲವು ಸ್ತರಗಳಲ್ಲಿ ಪ್ರಕಟವಾಗುತ್ತದೆ.

ಕಣ್ಣಿನ ಹಿಂಬದಿಯಲ್ಲಿ ನೋವು, ಸ್ನಾಯು ಮತ್ತು ಗಂಟಲು ನೋವು, ಮೈಮೇಲೆ ದದ್ದು, ವಾಕರಿಕೆ, ವಾಂತಿ ಕೂಡಾ ಬರಬಹುದು. ಈ ರೋಗದಿಂದ ಬಾಧಿತ ಗರ್ಭಿಣಿಯಿಂದ ಆಕೆಯ ಮಗುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅವಧಿಗೂ ಮುನ್ನ ಜನನ, ಶಿಶುವಿನ ತೂಕ ಕಡಿಮೆಯಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ. ಡೆಂಗಿ ಜ್ವರ ನಿಂತ ನಂತರದ ಎರಡು ಮೂರು ದಿನಗಳು ರೋಗಿಯ ಆರೋಗ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ದಿನಗಳಾಗಿರುತ್ತವೆ. ಶೇ.90ರಷ್ಟು ಜನರು ಯಾವುದೇ ಚಿಕಿತ್ಸೆಯಿಲ್ಲದೆ ಸುಧಾರಿಸಿಕೊಳ್ಳಬಲ್ಲರು. ಆದರೆ ಉಳಿದವರ ದೇಹದಲ್ಲಿ ರಕ್ತನಾಳಗಳು ರಕ್ತವನ್ನು ಒಳಗಡೆ ಹಿಡಿದಿಟ್ಟುಕೊಳ್ಳುವುದರಲ್ಲಿ ವಿಫಲವಾಗುವ ಕಾರಣ, ಅಂತಹ ರೋಗಿಗಳಲ್ಲಿ ರಕ್ತದೊತ್ತಡ ತೀವ್ರಗತಿಯಲ್ಲಿ ಕುಸಿಯಬಹುದು. ರಕ್ತನಾಳಗಳ ಸೋರಿಕೆಯ ಜೊತೆ ಜೊತೆಗೆ ಪ್ಲೇಟ್ ಲೆಟ್ ಕಣಗಳು ಕಡಿಮೆ ಆಗುವುದರಿಂದ ದೇಹದೊಳಗೆ ರಕ್ತಸ್ರಾವವಾಗಬಹುದು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಯಕೃತ್ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರು, ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಡೆಂಗಿ ಹೆಚ್ಚು ಮಾರಣಾಂತಿಕವಾಗಬಲ್ಲುದು.

ವೈದ್ಯರನ್ನು ಯಾವಾಗ ಕಾಣಬೇಕು?

ಕೆಲವು ಪ್ರಕರಣಗಳಲ್ಲಿ ರೋಗ ಲಕ್ಷಣ ತೀವ್ರವಾಗಿರುತ್ತವೆ. ಅಂತಹ ಸಮಯದಲ್ಲಿ ವೈದ್ಯರ ಸಲಹೆ ಅಗತ್ಯ. ಸುಮಾರು 20 ಸೋಂಕಿತರಲ್ಲಿ ಒಬ್ಬರಿಗೆ ಡೆಂಗಿ ತೀವ್ರವಾಗಿರುತ್ತದೆ. ಸೂಕ್ತ ಚಿಕಿತ್ಸೆ ಸಕಾಲಕ್ಕೆ ಸಿಗದ ಸಮಯದಲ್ಲಿ ಇವು ಜೀವಕ್ಕೆ ಅಪಾಯ ಒಡ್ಡಬಹುದಾಗಿದೆ .

ಉಪಚಾರ ಏನು?

ಡೆಂಗಿ ಜ್ವರಕ್ಕೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ಮಾರಣಾಂತಿಕವಾಗದಂತೆ ತಕ್ಕ ಚಿಕಿತ್ಸೆಯನ್ನು ವೈದ್ಯರು ಕೊಡುತ್ತಾರೆ. ಸೂಕ್ತ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ವಿಶ್ರಾಂತಿ ಅವಶ್ಯ. ಸಾಕಷ್ಟು ದ್ರವಾಹಾರ ಸೇವಿಸಬೇಕು. ಪೌಷ್ಟಿಕ ಆಹಾರ ಸೇವನೆ, ನೀರಿನಾಂಶವಿರುವ ಹಣ್ಣು, ಜ್ಯೂಸ್‌ಗಳ ಸೇವನೆಯಿಂದ ಸುಸ್ತು, ನಿಶ್ಯಕ್ತಿಯನ್ನು ಕಡಿಮೆ ಮಾಡಬಹುದು. ಜ್ವರ ಕಡಿಮೆ ಆದ ಬಳಿಕವೂ ವ್ಯಕ್ತಿ ಮೊದಲಿನ ಸ್ಥಿತಿಗೆ ಮರಳಲು ವಾರಗಳ ಸಮಯವೇ ಬೇಕಾಗುತ್ತದೆ.

ಮುಂಜಾಗ್ರತೆಯೇ ಮದ್ದು:

ನೆನಪಿಡಿ: ಡೆಂಗಿ ಜ್ವರಕ್ಕೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮುಂಜಾಗ್ರತೆ ಅಗತ್ಯ. ಇವೇ ಅತ್ಯುತ್ತಮ ಮದ್ದುಗಳು. ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಮಾಡುವುದನ್ನು ಬಿಟ್ಟು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಆಚರಣೆಗೆ ತಂದಲ್ಲಿ ಜನರ ಗೋಳಾಟ ತಪ್ಪಿಸಲು ಸಾಧ್ಯವಾದೀತು! ಇದಕ್ಕೆ ಜನರೂ ಸ್ಪಂದಿಸಬೇಕು, ಸಹಕರಿಸಬೇಕು. ಏಕೆಂದರೆ ಡೆಂಗಿ ಜ್ವರಕ್ಕೆ ನಿಶ್ಚಿತ ಚಿಕಿತ್ಸೆಯಿಲ್ಲ.

ರೋಗಿ-ಸೊಳ್ಳೆ-ಆರೋಗ್ಯವಂತ ಈ ಮೂರು ಕೊಂಡಿಗಳ ಚಕ್ರದಲ್ಲಿಯೇ ಡೆಂಗಿ ಕಾಯಿಲೆ ಸುತ್ತುತ್ತದೆ. ಈ ಸರಪಳಿಯ ಕೊಂಡಿಗಳು ಕಳಚಿಕೊಂಡಾಗಲೇ ಈ ರೋಗಕ್ಕೆ ಸುಲಭವಾಗಿ ಕಡಿವಾಣ ಹಾಕಬಹುದು. ಈ ಕಾಯಿಲೆಯ ಹತೋಟಿಗಿರುವ ಪ್ರಬಲ ಅಸ್ತ್ರವೆಂದರೆ ಈಡಿಸ್ ಈಜಿಪ್ಟಿ ಸೊಳ್ಳೆಗಳನ್ನು ನಿಯಂತ್ರಿಸುವುದು ಹಾಗೂ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದೇ ಆಗಿದೆ. ಈಡಿಸ್ ಸೊಳ್ಳೆಗಳ ಸಂತಾನ ಅಭಿವೃದ್ಧಿಯಾಗುವುದನ್ನು ತಡೆಯಲು ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ತಗ್ಗು ಗುಂಡಿಗಳನ್ನು ಮುಚ್ಚಬೇಕು.

ಈ ಸೊಳ್ಳೆಗಳು ಮಳೆಗಾಲದಲ್ಲಿ ವ್ಯಪಕವಾಗಿರುತ್ತವೆ. ಈ ಕಾಲದಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಖಾಲಿಡಬ್ಬ, ಬಾಟಲಿ, ತೆಂಗಿನ ಕರಟ, ಮರದ ಪೊರಟೆ, ಮೊಟ್ಟೆ ಚಿಪ್ಪು, ಟ್ಯೂಬ್, ಟೈರ್‌ಗಳಲ್ಲಿ ನೀರು ನಿಂತು ಸೊಳ್ಳೆ ಸಂತತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ವಾಸಸ್ಥಳದ ಸುತ್ತ ಮುತ್ತ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಕೊಳಚೆ ಪ್ರದೇಶಗಳನ್ನು ನಿರ್ಮೂಲನ ಮಾಡಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಒಳಚರಂಡಿ ಯೋಜನೆಯಿಂದ ನೈರ್ಮಲ್ಯ ಕಾಪಾಡಬೇಕು. ಈ ಕಾರಣ ದಿಂದ ಡೆಂಗಿ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಗಿಂತ ಹೆಚ್ಚಿನ ಜವಾಬ್ದಾರಿ ನಗರಪಾಲಿಕೆಯ ಮೇಲಿರುತ್ತದೆ.

ಸೊಳ್ಳೆ ಮರಿಗಳನ್ನು ನಾಶಪಡಿಸಲು ಅರ್ಗಾನೋಫಾಸ್ಪರಸ್ ಕ್ರಿಮಿನಾಶಕ ಬಳಸಬೇಕು. ಇದು ಸಾಂಕ್ರಾಮಿಕ ತಡೆಗಟ್ಟುವಲ್ಲಿ ಹೆಚ್ಚು ಪ್ರಯೋಜನಕಾರಿ. ಆದರೆ, ಸಾಂಕ್ರಾಮಿಕತೆ ಸ್ಫೋಟಗೊಂಡಾಗ ರೋಗ ಪ್ರಸಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕೀಟನಾಶಕಗಳ ಸಿಂಪಡಣೆ ಉಪಯುಕ್ತ. ಇದಕ್ಕಾಗಿ ಮೆಲಾಥಿಯಾನ್ ಅಥವಾ ಸುಮಿಥಿಯಾನ್ ಬಳಸಬೇಕು. ಮನೆಯ ಬಾಗಿಲು ಮತ್ತು ಕಿಟಕಿಗಳಿಗೆ ಸೊಳ್ಳೆಗಳು ಒಳ ನುಗ್ಗದಂತೆ ಜಾಲರಿಗಳನ್ನು ಹಚ್ಚಬೇಕು.

ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆ ಸಂತಾನಾಭಿವೃದ್ಧಿ ಯಾಗುವುದರಿಂದ ಪ್ರತೀ ಎರಡು ದಿನಗಳಿಗೊಮ್ಮೆ ನೀರನ್ನು ಖಾಲಿ ಮಾಡಬೇಕು. ಸೊಳ್ಳೆಯ ಲಾರ್ವಾ ಪಾತ್ರೆಯ ಒಳಭಾಗಕ್ಕೆ ಅಂಟಿಕೊಂಡು ಬೆಳೆಯುವ ಸಾಮರ್ಥ್ಯ ಹೊಂದಿರುವುದರಿಂದ ನೀರು ಸಂಗ್ರಹಿಸುವ ಪಾತ್ರೆ ಹಾಗೂ ತೊಟ್ಟಿಗಳ ಒಳಮೈಯನ್ನು ತಿಕ್ಕಿ ತೊಳೆಯಬೇಕು. ಸಿಮೆಂಟ್ ನಿರ್ಮಿತ ತೊಟ್ಟಿಯಲ್ಲಿ ಲಾರ್ವಾ ಬೆಳೆಯುವ ಅವಕಾಶ ಹೆಚ್ಚಿರುವುದರಿಂದ ಸೂಕ್ತ ಸ್ವಚ್ಛತಾ ಕ್ರಮಗಳು ಅನಿವಾರ್ಯ. ಹೂದಾನಿ, ಅಕ್ವೇರಿಯಂ, ಹವಾನಿಯಂತ್ರಕ ಮೊದಲಾದವುಗಳಲ್ಲಿಯ ನೀರನ್ನು ಕನಿಷ್ಠ ಮೂರು ದಿನಗಳಿಗೊಮ್ಮೆಯಾದರೂ ಬದಲಿಸಬೇಕು.

ನೀರಿನ ಸಂಪರ್ಕ ಇಲ್ಲದಿದ್ದರೂ ಮೂರು ವರ್ಷಗಳವರೆಗೆ ಈಡಿಸ್ ಈಜಿಪ್ಟಿ ಸೊಳ್ಳೆ ಮೊಟ್ಟೆಗಳು ಜೀವಂತವಾಗಿರುತ್ತವೆ. ಮೊಟ್ಟೆಯಿಂದ ಮರಿ ಜನಿಸಲು 10 ರಿಂದ 12 ದಿನಗಳು ಬೇಕು. ಆದರೆ, ಬೇಸಿಗೆಯಲ್ಲಿ ಒಂದೇ ವಾರದಲ್ಲಿ ಮರಿಗಳು ಹೊರಬರುತ್ತವೆ. ಸೊಳ್ಳೆ ಜೀವಿತಾವಧಿ ಒಂದು ತಿಂಗಳಿದ್ದು, ಈ ಅವಧಿಯಲ್ಲಿ ಲಕ್ಷಾಂತರ ಮೊಟ್ಟೆಗಳನ್ನು ಇಡುತ್ತದೆ. ಈಡಿಸ್ ಈಜಿಪ್ಟಿ ಸೊಳ್ಳೆ ತುಂಬಾ ಚಲನಶೀಲವಾಗಿದ್ದು, ಹಗಲು ಕ್ರಿಯಾಶೀಲ. 50 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಮನೆಯಲ್ಲಿಯೇ ಇರುವ ಹೆಣ್ಣು ಮಕ್ಕಳು, ವೃದ್ಧರಲ್ಲಿ ರೋಗ ಹರಡುವುದು ಸಾಮಾನ್ಯ.

ವೈಯಕ್ತಿಕ ರಕ್ಷಣೆ:

ಮಲಗುವಾಗ ಸೊಳ್ಳೆ ಪರದೆಯನ್ನು ಬಳಸುವುದು. ಮೈಗೆ ಸೊಳ್ಳೆ ನಿರೋಧಕ ಮುಲಾಮನ್ನು ಹಚ್ಚಿಕೊಳ್ಳುವುದು. ಘಾಟು ಪದಾರ್ಥಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸಬೇಕು.

ಆರೋಗ್ಯ ಶಿಕ್ಷಣ:

ಇಂದಿನ ದಿನಗಳಲ್ಲಿ ನೀರು ಸಂಗ್ರಹಿಸಲು ಬಳಸುವ ಡ್ರಮ್, ಬ್ಯಾರಲ್, ಸಿಂಟೆಕ್ಸ್ ಟ್ಯಾಂಕುಗಳು ಈಡಿಸ್ ಈಜಿಪ್ಟಿ ಸೊಳ್ಳೆಗಳ ಸಂಖ್ಯಾಭಿವೃದ್ಧಿಯ ತಾಣಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ಡೆರಿಕ್ ರಾಬಿನ್ ಸನ್ ಹೇಳಿರುವುದು ಔಚಿತ್ಯಪೂರ್ಣವಾಗಿದೆ.

ಹೀಗಾಗಿ ಪರಿಸರ ನೈರ್ಮಲ್ಯ, ವೈಯಕ್ತಿಕ ನೈರ್ಮಲ್ಯ, ರೋಗದ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ಜನರಿಗೆ ಆರೋಗ್ಯ ಶಿಕ್ಷಣ ನೀಡುವುದು. ಇದಕ್ಕಾಗಿ ಲಭ್ಯವಿರುವ ಎಲ್ಲ ಸಮೂಹ ಮಾಧ್ಯಮಗಳನ್ನು ಬಳಸಿಕೊಂಡು ಜನಜಾಗೃತಿ ಉಂಟುಮಾಡಿದರೆ ಜನತೆ ಎಚ್ಚೆತ್ತು ಕೊಂಡಾರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಕರವೀರಪ್ರಭು ಕ್ಯಾಲಕೊಂಡ

contributor

Similar News