ಸಾಹಿತ್ಯ ಸಮ್ಮೇಳನಾಧ್ಯಕ್ಷಸ್ಥಾನ : ಮಹಿಳೆಯರ ನಿರ್ಲಕ್ಷ್ಯ ಯಾಕೆ?

Update: 2024-12-09 06:28 GMT
Editor : Thouheed | Byline : ನಾ. ದಿವಾಕರ

ಗಂಡು ಮೆಟ್ಟಿದ ಭೂಮಿ ಎಂದು ಎದೆಬಡಿದುಕೊಳ್ಳುವ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 23ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕೊನೆಗೂ ಸಂಪನ್ನವಾಗಿದೆ. ಖ್ಯಾತ ಸಾಹಿತಿ ಗೊ.ರು. ಚನ್ನಬಸಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯ ವಿಚಾರದಲ್ಲಿ ಯಾವುದೇ ಭಿನ್ನಮತ ಇರಲು ಸಾಧ್ಯವಿಲ್ಲ. ಕನ್ನಡದ ಮೇರು ಸಾಹಿತಿಗಳಲ್ಲೊಬ್ಬರಾದ ಗೊರುಚ ಅವರು ಸಮ್ಮೇಳನಾಧ್ಯಕ್ಷರಾಗಿರುವುದು ಸ್ವಾಗತಾರ್ಹವೇ. ಆದರೆ ಮೂರು ದಶಕಗಳ ನಂತರ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಯನ್ನು ಆಯ್ಕೆ ಮಾಡಬೇಕೆಂಬ ಸದಾಗ್ರಹಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಯ್ಕೆ ಸಮಿತಿ ಮನ್ನಣೆ ನೀಡದಿರುವುದು, ಸಾಹಿತ್ಯ ವಲಯದ ಗಂಡಾಳ್ವಿಕೆಯನ್ನು ಮತ್ತೊಮ್ಮೆ ಪುಷ್ಟೀಕರಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮ್ಮೇಳನದ ಜ್ಯೋತಿ ರಥವನ್ನು ಸ್ವಾಗತಿಸುವ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದ್ದು ಸಮ್ಮೇಳನದ ಯಶಸ್ಸಿಗೆ ಮುನ್ನುಡಿ ಬರೆದಂತೆ ಕಾಣುತ್ತಿದೆ.

ಪ್ರತಿ ಸಲ ಸಾಹಿತ್ಯ ಸಮ್ಮೇಳನ ನಡೆಯುವಾಗಲೂ ಸಮ್ಮೇಳನಾಧ್ಯಕ್ಷ ಸ್ಥಾನ ತನಗೆ ಲಭಿಸಬಹುದು ಎಂಬ ಕನಸು ಕರ್ನಾಟಕದ ಮಹಿಳೆಯರಲ್ಲಿ, ಸಾಹಿತ್ಯಾಸಕ್ತರಲ್ಲಿ, ಲಿಂಗ ಸೂಕ್ಷ್ಮತೆಯುಳ್ಳವರಲ್ಲಿ ಇದ್ದೇ ಇರುತ್ತದೆ. ಆದರೆ ಕಳೆದ 25 ವರ್ಷಗಳಲ್ಲಿ ನಡೆದ 19 ಸಮ್ಮೇಳನಗಳಲ್ಲಿ ಈ ಕನಸು ಮೂರು ಬಾರಿ ಮಾತ್ರ , 68, 71 ಮತ್ತು 76ನೇ ಸಮ್ಮೇಳನಗಳಲ್ಲಿ,

ಕೈಗೂಡಿದೆ. 2010ರ ನಂತರ ನಡೆದಿರುವ 11 ಸಮ್ಮೇಳನಗಳಲ್ಲಿ ಈ ಪ್ರಾತಿನಿಧ್ಯದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇಷ್ಟಕ್ಕೂ ಮಹಿಳಾ ಸಮ್ಮೇಳನಾಧ್ಯಕ್ಷರ ಆಗ್ರಹ ಏತಕ್ಕಾಗಿ ಕೇಳಿಬರುತ್ತದೆ ? ಮೂರು ದಿನದ ಅಕ್ಷರ ಜಾತ್ರೆಯಲ್ಲಿ ಅಧ್ಯಕ್ಷರಾಗಿ ವಿಜೃಂಭಿಸಿದ ಮಾತ್ರಕ್ಕೆ ಮಹಿಳೆಯರನ್ನು ಕಾಡುತ್ತಿರುವ ಜಟಿಲ-ಸಂಕೀರ್ಣ ಸವಾಲುಗಳಿಗೆ ಉತ್ತರ ಕೊಟ್ಟಂತಾಗುತ್ತದೆಯೇ ?

ಈ ಪ್ರಶ್ನೆಗಳೂ ಉದ್ಭವಿಸಬಹುದು. ನಿಜ, ಈ ಆಡುಂಬೊಲದಲ್ಲಿ ಎಲ್ಲವೂ ಇತ್ಯರ್ಥವಾಗುವುದಿಲ್ಲ.

ಆದರೆ ತನ್ನ 110 ವರ್ಷಗಳ ಇತಿಹಾಸದಲ್ಲಿ 26 ಅಧ್ಯಕ್ಷರನ್ನು ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಎಂಬ ಸಂಸ್ಥೆ ಒಮ್ಮೆಯೂ ಮಹಿಳಾ ಸಾಹಿತಿಯೊಬ್ಬರಿಗೆ ಆದ್ಯತೆ ನೀಡದಿರುವುದನ್ನು ಗಮನಿಸಿದಾಗ, ಭಾರತದ ಸಾಂಸ್ಕೃತಿಕ ಜಗತ್ತಿನ ಗಂಡಾಳ್ವಿಕೆಯ ಮನಸ್ಥಿತಿ ಈ ಸೃಜನಶೀಲ ಲೋಕದಲ್ಲೂ ಅಷ್ಟೇ ಗಟ್ಟಿಯಾಗಿ ಬೇರೂರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕೊರತೆಯನ್ನು ನೀಗಿಸಿಕೊಳ್ಳುವ ನೈತಿಕ ಪ್ರಜ್ಞೆಯಿಂದಾದರೂ ಸಾಹಿತ್ಯ ಪರಿಷತ್ತು ತಾನು ನಡೆಸುವ ವಾರ್ಷಿಕ-ದ್ವೈವಾರ್ಷಿಕ ಸಮ್ಮೇಳನಗಳಿಗೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಬಹುದಲ್ಲವೇ ? ಇದು ಕೇವಲ ಹುದ್ದೆಯನ್ನಲಂಕರಿಸುವ ಅಥವಾ ಸಮ್ಮಾನ-ಸನ್ಮಾನಗಳ ಪ್ರಶ್ನೆಯಲ್ಲ, ಮೂಲತಃ ಇದು ಪ್ರಾತಿನಿಧ್ಯದ ಪ್ರಶ್ನೆ. ಶತಮಾನ ಕಳೆದರೂ ನಮ್ಮೊಳಗಿನ ಅಂತರ್ ಪ್ರಜ್ಞೆಯಲ್ಲಿ ಲಿಂಗ ಸಮಾನತೆಯ ಬೀಜ ಬಿತ್ತನೆ ಆಗಿಲ್ಲವೇ ಎಂಬ ಪ್ರಶ್ನೆ ಪುರುಷಾಧಿಪತ್ಯದ ನೆಲೆಗಳಲ್ಲಿ ಚರ್ಚೆಯಾಗಬೇಕಲ್ಲವೇ ?

ಲಿಂಗ ಸೂಕ್ಷ್ಮತೆಯ ಸಾಹಿತ್ಯಕ ದನಿ

ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯಕ ಸಂವಾದ ಅಥವಾ ಒಣ ಚರ್ಚೆಗಳಲ್ಲಿ ಸಂಪನ್ನವಾಗುವ ಬೌದ್ಧಿಕ ಕಸರತ್ತುಗಳಾಗಕೂಡದು. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಗಳಿಗೊಮ್ಮೆ ನಡೆಯುವ ಅಖಿಲ ಭಾರತ ಸಮ್ಮೇಳನಗಳಿಗೆ ‘ಅಖಿಲ ಭಾರತ ಆಯಾಮ’ (Pan Indian dimension) ಇರುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಮ್ಮೇಳನ ನಡೆಯುವ ಸಂದರ್ಭದಲ್ಲಿ ಕನ್ನಡಿಗರನ್ನು, ಕರ್ನಾಟಕವನ್ನು ಕಾಡುವಂತಹ ಜ್ವಲಂತ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ ಸಮಸ್ಯೆಗಳು ಅದರ ಪರಿಹಾರೋಪಾಯಗಳು. ಪ್ರಸಕ್ತ ಸನ್ನಿವೇಶದಲ್ಲಿ, ಮಂಡ್ಯ ಸಮ್ಮೇಳನಕ್ಕೆ ಮಹಿಳೆಯೇ ಏಕೆ ಆಗಬೇಕಿತ್ತು ಎನ್ನಲೂ ಕೆಲವು ಕಾರಣಗಳಿವೆ ಎನ್ನುವುದನ್ನು ಸಾಹಿತ್ಯ ವಲಯ ಗಮನಿಸಬೇಕಿತ್ತಲ್ಲವೇ ? ಈ ಒತ್ತಾಸೆ ಮತ್ತು ಆಗ್ರಹ ಮಹಿಳಾ ಸಂಘಟನೆಗಳಿಂದ, ಮಹಿಳಾ ಪರ ದನಿಗಳಿಂದ ಕೇಳಿಬಂದರೂ, ಸಾಹಿತ್ಯಲೋಕದಿಂದ ಗಟ್ಟಿಯಾದ ಗಂಡುದನಿ ಹೊರಬರಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಕನ್ನಡದ ಹಿರಿಯ ಸಾಹಿತಿಗಳಾದರೂ ದನಿಗೂಡಿಸಬಹುದಿತ್ತು.

ಇರಲಿ, ಗಂಡು ಮೆಟ್ಟಿದ ಭೂಮಿ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ತನ್ನ ಈ ಗುಣವಿಶೇಷಣವನ್ನು ಉಳಿಸಿಕೊಂಡಿದೆ ಎಂದೇ ಭಾವಿಸೋಣ. ಆದರೆ ಮಂಡ್ಯದ ಸಮ್ಮೇಳನದ ಸಂದರ್ಭದಲ್ಲೇ ಈ ಹೆಣ್ಣುದನಿ ಏಕೆ ಗಟ್ಟಿಯಾಗಿತ್ತು ? ಸಾಹಿತ್ಯ ತನ್ನ ಬೇರುಗಳನ್ನು ಸಮಾಜದ ನಡುವೆಯೇ ಗುರುತಿಸಿಕೊಳ್ಳುವುದಾದರೆ, ಸಾಹಿತ್ಯ ಸಮ್ಮೇಳನ ಎನ್ನುವ ಅಕ್ಷರ ಜಾತ್ರೆಯಲ್ಲಿ ಈ ಸಮಾಜವನ್ನು ಕಾಡುವ ಜಟಿಲ ಸಿಕ್ಕುಗಳು ಪ್ರಧಾನ ವಿಷಯವಾಗಬೇಕು. ಇಲ್ಲಿ ಚರಿತ್ರೆಗಿಂತಲೂ ಹೆಚ್ಚು ಚರ್ಚೆಗೊಳಗಾಗಬೇಕಿರುವುದು ವರ್ತಮಾನ ಮತ್ತು ಭವಿಷ್ಯ. ಹಾಗಾಗಿ ಸಮ್ಮೇಳನ ನಡೆಯುವ ಸಂದರ್ಭ, ಸ್ಥಳ ಮತ್ತು ಸಾಂಸ್ಕೃತಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಚರ್ಚಿಸಬೇಕಾದ ವಿಚಾರಗಳು ಮತ್ತು ಅಲ್ಲಿ ಇರಬೇಕಾದ ಲಿಂಗ ಸಮಾನತೆ ಮತ್ತು ಲಿಂಗ ಪ್ರಾತಿನಿಧ್ಯವೂ ಮುಖ್ಯವಾಗಬೇಕು.

ಮೂರು ದಶಕಗಳು ಕಳೆದು, ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ನೀಡುತ್ತಿರುವ ಸಕ್ಕರೆ ಜಿಲ್ಲೆ ಮಂಡ್ಯ ಈಗ ಕಬ್ಬು-ಭತ್ತ-ಸಕ್ಕರೆಗಿಂತಲೂ ಹೆಚ್ಚು (ಅಪ)ಖ್ಯಾತಿ ಪಡೆದಿರುವುದು ಹೆಣ್ಣು ಭ್ರೂಣ ಹತ್ಯೆಗೆ ಮತ್ತು ಕುಸಿಯುತ್ತಿರುವ ಲಿಂಗಾನುಪಾತಕ್ಕೆ. ಇತ್ತೀಚಿನ ಅಧಿಕೃತ ವರದಿಯ ಅನುಸಾರ ಮಂಡ್ಯ ಜಿಲ್ಲೆಯಲ್ಲಿ 1,000 ಗಂಡುಮಕ್ಕಳಿಗೆ 875 ಹೆಣ್ಣು ಮಕ್ಕಳು ಹುಟ್ಟುತ್ತಿದ್ದಾರೆ. ಈ 1000:875 ಅನುಪಾತ ಯಾವುದೇ ಸಮಾಜವನ್ನಾದರೂ ಬಡಿದೆಬ್ಬಿಸುವಂತಹುದು. ಇದರೊಟ್ಟಿಗೆ ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಈ ವರ್ಷದ ಎಪ್ರಿಲ್‌ನಿಂದ ಇಲ್ಲಿಯವರೆಗೆ ಮಂಡ್ಯ ಜಿಲ್ಲೆಯಲ್ಲಿ 70 ಬಾಲ್ಯ ವಿವಾಹಗಳು ವರದಿಯಾಗಿದ್ದು, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯಾಗುತ್ತಿರುವುದು ಇನ್ನೂ ಆಘಾತಕಾರಿಯಾಗಿದೆ. ಇಷ್ಟು ಸಾಲದೆಂಬಂತೆ ಮಂಡ್ಯ ಜಿಲ್ಲೆಯಲ್ಲೇ ನಡೆದಿರುವ ಸಾವಿರಾರು ಹೆಣ್ಣು ಭ್ರೂಣ ಹತ್ಯೆಗಳು ನಾಗರಿಕ ಜಗತ್ತು ತಲೆ ತಗ್ಗಿಸುವಂತೆ ಮಾಡಿವೆ.

ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಸಾಹಿತ್ಯ ವಲಯವು ಗುರುತಿಸಲೇಬೇಕಾದ ಅಂಶ ಎಂದರೆ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇರುವ ಮಹಿಳಾ ದೌರ್ಜನ್ಯಗಳು. ಅಧಿಕೃತ ವರದಿಗಳ ಅನುಸಾರ ರಾಜ್ಯದಲ್ಲಿ 2022ರಲ್ಲಿ 2,630 ಮಹಿಳಾ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ 3,260 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 1,135 ಲೈಂಗಿಕ ಕಿರುಕುಳದ ಪ್ರಕರಣಗಳಿವೆ. ಪೊಲೀಸ್ ಇಲಾಖೆಯ ದತ್ತಾಂಶದ ಪ್ರಕಾರ ಬೆಂಗಳೂರಿನಲ್ಲಿ 2024ರ ಜೂನ್ ವೇಳೆಗೆ 298 ಪೊಕ್ಸೋ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿರುವುದಾದರೂ, ಲೈಂಗಿಕ ಅಪರಾಧಗಳಿಗೆ ತುತ್ತಾಗುತ್ತಿರುವ ಬಾಲಕಿಯರ ರಕ್ಷಣೆಗೆ ಅಗತ್ಯವಾದ ಉಪಕ್ರಮಗಳನ್ನು ಸರಕಾರಗಳು ಕೈಗೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಂಕಿ ಸಂಖ್ಯೆಗಳಿಂದಾಚೆ ನೋಡಿದಾಗ, ದೇಶವ್ಯಾಪಿಯಾಗಿ ಕಾಣುವಂತೆ ರಾಜ್ಯದಲ್ಲೂ ಮಹಿಳಾ ಸಂಕುಲ ಅತ್ಯಾಚಾರ, ಅಪಮಾನ, ಕಿರುಕುಳಗಳನ್ನು ಎದುರಿಸುತ್ತಲೇ ಇರುವುದು ಸುಸ್ಪಷ್ಟ.

ಸಾಹಿತ್ಯಾಭಿವ್ಯಕ್ತಿಯ ಸಾಮಾಜಿಕ ನೆಲೆ

ಇಲ್ಲಿ ಮುಖ್ಯವಾಗಿ ಕಾಡಬೇಕಾದ್ದು ಹೆಣ್ತನದ ಘನತೆಯ ಪ್ರಶ್ನೆ. ಲಿಂಗಾನುಪಾತ, ಬಾಲ್ಯ ವಿವಾಹ, ಭ್ರೂಣ ಹತ್ಯೆ ಮತ್ತು ಮಹಿಳಾ ದೌರ್ಜನ್ಯಗಳು, ಈ ವಿದ್ಯಮಾನಗಳಲ್ಲಿ ನಾವು ಗುರುತಿಸಬೇಕಿರುವುದು ಸತತ ಆಘಾತಕ್ಕೊಳಗಾಗುತ್ತಿರುವ ಹೆಣ್ತನದ ಘನತೆಯನ್ನು. ರಾಜಕೀಯವಾಗಿ ಇದನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಸರಕಾರಗಳ ನಿರಾಸಕ್ತಿ ಎದ್ದು ಕಾಣುತ್ತದೆ. ಆಡಳಿತ ವ್ಯವಸ್ಥೆಯನ್ನು ನಿರ್ದೇಶಿಸುವ ಪುರುಷಾಧಿಪತ್ಯ ಮತ್ತು ಪಿತೃಪ್ರಧಾನ ಧೋರಣೆ ಮಹಿಳೆಯರ ರಕ್ಷಣೆಗೆ ಕಾನೂನಾತ್ಮಕ-ಶಾಸನಾತ್ಮಕ ಕೋಟೆಗಳನ್ನೂ ಸಡಿಲಗೊಳಿಸುತ್ತದೆ. ಸಂವಿಧಾನವನ್ನು ನಿತ್ಯ ಪಠಿಸುವ ರಾಜ್ಯ ಸರಕಾರವು ರಾಜ್ಯ ಮಹಿಳಾ ಆಯೋಗಕ್ಕೆ ಸದಸ್ಯರನ್ನು ನೇಮಿಸುವುದರಲ್ಲಿ ವಿಳಂಬ ನೀತಿಯನ್ನು ಅನುಸರಿಸುವುದೇ ಇದನ್ನು ಸೂಚಿಸುತ್ತದೆ. ಆದರೆ ಸೃಜನಶೀಲತೆ ಮತ್ತು ಮನುಜ ಸೂಕ್ಷ್ಮತೆಯನ್ನೇ ತನ್ನ ಆಧಾರ ಸ್ತಂಭವಾಗಿ ಪರಿಗಣಿಸಬೇಕಾದ ಸಾಹಿತ್ಯ ಪರಿಷತ್ತು-ಸಮ್ಮೇಳನಗಳು ತಮ್ಮೊಳಗೆ ಲಿಂಗ ಸಮಾನತೆಯ ಆಶಯವನ್ನಾದರೂ ಹೊಂದಿರಬೇಕಲ್ಲವೇ?

► ನಾಳಿನ ಸಂಚಿಕೆಗೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾ. ದಿವಾಕರ

contributor

Similar News