ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ: ಮಹಿಳೆಯರ ನಿರ್ಲಕ್ಷ್ಯ ಯಾಕೆ?
(ನಿನ್ನೆಯ ಸಂಚಿಕೆಯಿಂದ)
ಪುರುಷಾಧಿಪತ್ಯವೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನೂ ಪ್ರಭಾವಿಸುವುದಾದರೆ, ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಲೋಕ ಯಾವ ರೀತಿಯಲ್ಲಿ ತನ್ನ ಸೂಕ್ಷ್ಮ ಸಂವೇದನೆಯನ್ನು ಭಿನ್ನ ನೆಲೆಯಲ್ಲಿ ಬಿಂಬಿಸಲು ಸಾಧ್ಯ? ಗಂಡು ಮೆಟ್ಟಿದ ಭೂಮಿ ಎಂಬ ಪುರುಷಾಹಮಿಕೆಯ ಧ್ವನಿಯನ್ನು ಸಾಕ್ಷೀಕರಿಸುವ ಹಾಗೆ ಸಮ್ಮೇಳನದಲ್ಲಿ ಮಹಿಳೆಯ ಧ್ವನಿಗೆ ಅವಕಾಶವನ್ನು ನಿರಾಕರಿಸಿರುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಈ ಪ್ರಶ್ನೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಉತ್ತರಿಸಬೇಕಿದೆ. ಈ ಬಾರಿಯ ಸಮ್ಮೇಳನದ ಪೂರ್ವ ಸಿದ್ಧತೆಗಳ ನಡುವೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂಬ ಗಟ್ಟಿ ದನಿ ಕೇಳಿಬಂದಿದ್ದಂತೂ ಹೌದು. ರಾಜ್ಯದ ಹಲವು ಮೂಲೆಗಳಿಂದ ಪ್ರಗತಿಪರ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ನಾಗರಿಕ ಸಂಘಟನೆಗಳು ಹಕ್ಕೊತ್ತಾಯದಂತೆ ಆಗ್ರಹಿಸಿವೆ. ಆದರೂ ಅಂತಿಮ ಆಯ್ಕೆಯ ಪ್ರಶ್ನೆ ಎದುರಾದಾಗ ಈ ದನಿಗಳೆಲ್ಲವನ್ನೂ ನಿರ್ಲಕ್ಷಿಸಲಾಗಿದೆ.
ಮಂಡ್ಯ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಎದುರಿಸುತ್ತಿರುವ ಮಹಿಳಾ ಕೇಂದ್ರಿತ ಸಮಸ್ಯೆಗಳನ್ನು ಸ್ತ್ರೀವಾದಿ ನೆಲೆಯಲ್ಲಿ ನಿಂತು ವಸ್ತುನಿಷ್ಠವಾಗಿ ಚರ್ಚಿಸುವ ಒಂದು ಸಾಹಿತ್ಯ ಭೂಮಿಕೆಯಾಗಿ ಸಾಹಿತ್ಯ ಸಮ್ಮೇಳನವನ್ನು ನೋಡಬೇಕಿದೆ. ಇದನ್ನು ಪುರುಷ ಸಾಹಿತಿ ಮಾಡಲಾರರು ಎಂದೇನೂ ಇಲ್ಲ. ಆದರೆ, ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಇಲ್ಲಿ ಅವಶ್ಯವಾಗಿ ಬೇಕಾಗುವಂತಹ ಸ್ತ್ರೀ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಗಳಿಗೆ ಮಾನವೀಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ಮಹಿಳಾ ಸಾಹಿತಿಯ ಅಂತರಾಳದಿಂದ ಹೊರಸೂಸುವ ಒಳದನಿಗೂ, ಅನ್ಯರಿಂದ ಮೂಡುವ ಅಭಿವ್ಯಕ್ತಿಗೂ ಅಪಾರ ಅಂತರ ಇರುತ್ತದೆ. ಈ ಸೂಕ್ಷ್ಮವನ್ನು ಸಮ್ಮೇಳನದ ಆಯೋಜಕರು ಮತ್ತು ಆಯ್ಕೆ ಸಮಿತಿಯ ಸದಸ್ಯರು ಗಮನಿಸಿದ್ದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಸಾಹಿತಿಯೇ ಆಯ್ಕೆಯಾಗಬಹುದಿತ್ತು. ಇದು ಕೇವಲ ಪ್ರಾತಿನಿಧ್ಯ ‘ನೀಡುವ’ ಪ್ರಶ್ನೆಯೂ ಅಲ್ಲ. ಸಹಜವಾಗಿಯೇ ಹೊರಬರಬೇಕಾದ ಅಂತರಂಗದ ಅಭಿವ್ಯಕ್ತಿಯ ಪ್ರಶ್ನೆ.
ಗ್ರಹಿಕೆ ಅರಿವು ಮತ್ತು ಅಭಿವ್ಯಕ್ತಿ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರಿಗೆ ಸೇರಿದ ಒಂದು ಸಾಂಸ್ಕೃತಿಕ ಸಂಸ್ಥೆ. ಮಹಿಳಾ ಸಾಹಿತಿಗಳು ಪರಿಷತ್ತಿನ ಅಧ್ಯಕ್ಷತೆ ಪಡೆಯುವುದನ್ನು ನಿರೀಕ್ಷಿಸಲೂ ಆಗದಷ್ಟು ಮಟ್ಟಿಗೆ ಪರಿಷತ್ತು ರಾಜಕೀಯಕ್ಕೊಳಗಾಗಿದೆ. ಬಾಹ್ಯ ಸಮಾಜದ ರಾಜಕೀಯ ಮತ್ತು ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸುವ ಜಾತಿ ಮತ್ತು ಹಣಬಲದೊಂದಿಗೆ, ಇಡೀ ಸಮಾಜವನ್ನು ನಿರ್ದೇಶಿಸುವ ಪಿತೃಪ್ರಧಾನತೆಯೇ ಪರಿಷತ್ತನ್ನೂ ಆಕ್ರಮಿಸಿಕೊಂಡಿದೆ. ಈ ದಿಕ್ಕಿನಲ್ಲಿ ಯೋಚಿಸುವಾಗ ನಮ್ಮ ಇಡೀ ಸಾಮಾಜಿಕ ಆಲೋಚನಾ ಕ್ರಮವನ್ನೇ ಮರುಪರಿಷ್ಕರಿಸಬೇಕೆನಿಸುತ್ತದೆ. ಏಕೆಂದರೆ ಇನ್ನೂ ನಮ್ಮ ಸಮಾಜವು ಮಹಿಳೆಗೆ ‘ಪ್ರಾತಿನಿಧ್ಯ’ ಅವಕಾಶ-ಹುದ್ದೆ ನೀಡುವ ಪರಿಭಾಷೆಯನ್ನೇ ಬಳಸುತ್ತಿದೆ. ಅಂದರೆ ಒಂದು ಆಳ್ವಿಕೆಯಲ್ಲಿ ತಮಗೂ ಒಂದು ಸ್ಥಾನ ಕೊಡಿ ಎಂದು ಮಹಿಳಾ ಸಂಕುಲ ಕೋರಬೇಕಾಗಿದೆ. ಈ ಮನಸ್ಥಿತಿಯನ್ನು ಹೋಗಲಾಡಿಸಿ, ಸಮಾನತೆಯ ನೆಲೆಯಲ್ಲಿ ನಿಂತು ಯೋಚಿಸಿದರೆ ಬಹುಶಃ ಅರಿವಿನ ವಿಕಾಸ ಸಾಧ್ಯ ಎನಿಸುತ್ತದೆ.
ಇತ್ತೀಚೆಗೆ ಮೈಸೂರಿನಲ್ಲಿ ಸಂವಿಧಾನ ದಿನದಂದು ನಡೆದ ಎರಡು ದಿನಗಳ ಅಧ್ಯಯನ ಶಿಬಿರದಲ್ಲೂ ಇದೇ ವ್ಯತ್ಯಯವನ್ನು ಕಾಣಬಹುದಿತ್ತು. ಆರು ಪ್ರಧಾನ ಗೋಷ್ಠಿಗಳಲ್ಲಿ ಒಂದರಲ್ಲಿ ಮಾತ್ರ ಅದೂ ಸಂವಿಧಾನ ಮತ್ತು ಮಹಿಳೆ ಗೋಷ್ಠಿಯಲ್ಲಿ ಮಹಿಳೆಯನ್ನು ಕಾಣಬಹುದಿತ್ತು. ಉಳಿದಂತೆ ಮತ್ತೊಂದರಲ್ಲಿ ನಿರ್ವಹಣೆಯ ಜವಾಬ್ದಾರಿ ನೀಡಲಾಗಿತ್ತು. ನೂರಾರು ಶಿಬಿರಾರ್ಥಿಗಳನ್ನೊಳಗೊಂಡ, ಸಂವಿಧಾನದ ಓದು-ಅಧ್ಯಯದ ಒಂದು ಶಿಬಿರದಲ್ಲಿ ಚರ್ಚೆ ಮಾಡಲಾದ ಉಳಿದ ಗಂಭೀರ ವಿಚಾರಗಳನ್ನು ಮಂಡಿಸಲು ಮಹಿಳಾ ವಿದ್ವಾಂಸರು ಇರಲಿಲ್ಲವೇ? ಅಥವಾ ಸಂವಿಧಾನದ ಮಹಿಳಾ ದೃಷ್ಟಿಕೋನವನ್ನು ಮಹಿಳೆ ಮಾತ್ರ ವಿಶ್ಲೇಷಿಸಲು ಸಾಧ್ಯ ಎಂಬ ಧೋರಣೆಯೇ? ಮುನ್ನೂರು ಯುವ ಶಿಬಿರಾರ್ಥಿಗಳನ್ನೊಳಗೊಂಡಿದ್ದ ಈ ಕಾರ್ಯಕ್ರಮ ಮುಂದಿನ ತಲೆಮಾರಿಗೆ ಯಾವ ಸಂದೇಶವನ್ನು ನೀಡಲಿಕ್ಕೆ ಸಾಧ್ಯ? ಆಯೋಜಕರು ಯೋಚಿಸಬೇಕಾದ ವಿಚಾರ ಇದು.
ಮೂಲತಃ ಪಿತೃಪ್ರಧಾನ ವ್ಯವಸ್ಥೆಯಲ್ಲೇ ನಡೆದಿರುವ ನಮ್ಮ ಸಮಾಜವು ತನ್ನ ಚಿಂತನಾ ಕ್ರಮಗಳನ್ನೇ ಮರು ನಿರ್ವಚಿಸಬೇಕಿದೆ. ಲಿಂಗ ಸಮಾನತೆ ಅಥವಾ ಸಮಾನ ಪ್ರಾತಿನಿಧ್ಯ ಎಂಬ ಉದಾತ್ತ ಚಿಂತನೆಗಳನ್ನು ಶಾಸನಾತ್ಮಕವಾಗಿಯೇ ವಿಧಿಸಬೇಕು ಎಂಬ ನಿರೀಕ್ಷೆಯೇ ಅಪ್ರಜಾಸತ್ತಾತ್ಮಕವಾದ ಧೋರಣೆ. ಸಮ ಸಮಾಜದ ಕನಸು ಕಾಣುವವರಲ್ಲಿ ಇದು ಸಹಜವಾಗಿಯೇ ಮೂಡಬೇಕು. ಈ ಸಮ ಸಮಾಜದ ಕನಸಿಗೆ ಬೌದ್ಧಿಕ ರೆಕ್ಕೆಗಳನ್ನು ಜೋಡಿಸುವ, ಸಂವೇದನಾಶೀಲ ಚಲನೆಯನ್ನು ನೀಡುವ, ಮನುಜ ಸೂಕ್ಷ್ಮತೆಯ ಉಸಿರನ್ನು ಗಟ್ಟಿಗೊಳಿಸುವ, ಲಿಂಗ ಸಮಾನತೆಯ ಸೃಜನಶೀಲ ಔದಾತ್ಯವನ್ನು ಕಲ್ಪಿಸುವ ನೈತಿಕ ಕರ್ತವ್ಯ ಸಾಹಿತ್ಯ ಲೋಕದ್ದಾಗಿರುತ್ತದೆ. ಈ ಲೋಕವನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತು ಅದರ ನಿರ್ದೇಶನದಲ್ಲೇ ನಡೆಯುವ ಸಾಹಿತ್ಯ ಸಮ್ಮೇಳನ ಇದನ್ನು ಬಿಂಬಿಸುವಂತಿರಬೇಕು ಎನ್ನುವುದು ಪ್ರಜ್ಞಾವಂತ ಸಮಾಜದ ಸಹಜವಾದ ಅಪೇಕ್ಷೆ ಮತ್ತು ನಿರೀಕ್ಷೆ.
ಈ ನಿರೀಕ್ಷೆಯನ್ನು ಹುಸಿಯಾಗಿಸಿ, ಮಂಡ್ಯದ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಸಮಿತಿಯಲ್ಲಿ ಇದ್ದಿರಬಹುದಾದ ಮಹಿಳಾ ಪರ ದನಿಗಳನ್ನು ಅಲಕ್ಷಿಸಿರುವ ಸಾಧ್ಯತೆಗಳನ್ನು ಮನಗಾಣುತ್ತಲೇ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಪಿತೃಪ್ರಧಾನ-ಊಳಿಗಮಾನ್ಯ ಲಕ್ಷಣಗಳಿಂದ ಮುಕ್ತವಾಗಿಲ್ಲ ಎನ್ನುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ. ಕನಿಷ್ಠ ಗೋಷ್ಠಿಗಳಲ್ಲಾದರೂ ಹೆಣ್ತನದ ಘನತೆ ಧ್ವನಿಸುವುದೋ ಅಥವಾ ಆಲಂಕಾರಿಕ ಮಹಿಳಾ ಪ್ರಾತಿನಿಧ್ಯಕ್ಕೇ ಸೀಮಿತವಾಗುವುದೋ ಕಾದು ನೋಡೋಣ.