ಶಾಲೆ ಮಕ್ಕಳಿಗಾಗಿ ವಾಹನ ಖರೀದಿಸಿ ಸ್ವತಃ ಚಲಾಯಿಸುವ ಎಸ್‌ಡಿಎಂಸಿ ಅಧ್ಯಕ್ಷೆ!
ಕುಂದಾಪುರ: ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಹಂಬಲ, ದೃಢಸಂಕಲ್ಪ ಮಕ್ಕಳ ಪೋಷಕರಲ್ಲಿ ಮೂಡಿದರೆ ಏನು ಬೇಕಾದರೂ ಸಾಧಿಸಬಹುದು. ಅದರಲ್ಲೂ ಮಹಿಳೆಯೊಬ್ಬರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಬೈಂದೂರು ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಪಂಕ್ತಿ (ಪೇಟೆ) ಶಿರೂರು ಶಾಲೆ ಮಾದರಿಯಾಗಿದೆ.
ಶಿರೂರು ಸಮೀಪದ ಜೋಗೂರು ನಿವಾಸಿ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆಯಾಗಿರುವ ಜ್ಯೋತಿ ಜಯರಾಮ ಶೆಟ್ಟಿ ತನ್ನ ಸ್ವಂತ ಖರ್ಚಿನಲ್ಲಿ ಇಕೋ ಕಾರು ಖರೀದಿಸಿ ಕಳೆದೆರಡು ಶೈಕ್ಷಣಿಕ ವರ್ಷಗಳಿಂದ ಪ್ರತಿನಿತ್ಯ 40 ಮಕ್ಕಳನ್ನು ಅವರವರ ಮನೆಗಳಿಂದ ಶಾಲೆಗೆ ಕರೆತಂದು-ಮನೆಗೆ ಬಿಡುವ ಕಾಯಕ ಮಾಡುತ್ತಿದ್ದಾರೆ.
ಶಾಲೆಯ ಇತಿಹಾಸ: ಶಿರೂರು ಮೇಲ್ಪಂಕ್ತಿ ಪೇಟೆ ಶಾಲೆಗೆ 64 ವರ್ಷಗಳ ಇತಿಹಾಸವಿದೆ. ಈ ಹಿಂದೆ ಇಲ್ಲಿಗೆ ಸಮೀಪದ ಮಕ್ಕಳು ಖಾಸಗಿ ಶಾಲೆ ನೆಚ್ಚಿಕೊಂಡಿದ್ದು, ಕಳೆದ ಹತ್ತು ವರ್ಷಗಳಿಂದೀಚೆಗೆ ಶಾಲೆಯಲ್ಲಿ ಅಸ್ತಿತ್ವಕ್ಕೆ ಬಂದ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಒಂದಷ್ಟು ಹೊಸ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸಿ ಆಸುಪಾಸಿನ ಪೋಷಕರ ಮನವೊಲಿಸಿ ಅವರ ಮಕ್ಕಳನ್ನು ಕಳೆದ ಆರು ದಶಕಗಳಿಂದ ಊರಿಗೆ ವಿದ್ಯೆ ಕಲಿಸುತ್ತಿರುವ ಸರಕಾರಿ ಶಾಲೆಗೆ ಕಳಿಸುವಂತೆ ಮನವೊಲಿಸಿತು ಎಂದು ಎಸ್‌ಡಿಎಂಸಿ ಉಪಾಧ್ಯಕ್ಷ ವಿನೋದ್ ಪೂಜಾರಿ ಸಾತೋಡಿ ತಿಳಿಸಿದ್ದಾರೆ.
1ರಿಂದ 7ನೇ ತರಗತಿವರೆಗೆ ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೀಗ 65 ವಿದ್ಯಾರ್ಥಿಗಳು ಕಲಿಯುತಿದ್ದು, 15 ಮಂದಿ ಎಲ್‌ಕೆಜಿ-ಯುಕೆಜಿ ಓದುವ ಚಿಣ್ಣರಿದ್ದಾರೆ. ಇಂಗ್ಲಿಷ್ ಕಲಿಕೆಗೂ ಉತ್ತಮ ಅವಕಾಶ ನೀಡಲಾಗುತ್ತಿದೆ ಎಂದು ಪ್ರಭಾರ ಮುಖ್ಯಶಿಕ್ಷಕಿ ಸರಸ್ವತಿ ಮಾಹಿತಿ ನೀಡಿದ್ದಾರೆ.
ಕೊರೋನ ಸಂದರ್ಭ ಹಳ್ಳಿಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ’ದಡಿ ಶಿಕ್ಷಕರು ಪಾಠ ಮಾಡಬೇಕಿದ್ದಾಗ ಅವರನ್ನು ಸ್ವತಃ ನಾನೇ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದೆ. ಬಳಿಕ ಒಂದು ಬಾಡಿಗೆ ಓಮ್ನಿ ಕಾರು ಹಾಕಿದ್ದು ಇದೀಗಾ ಇಕೋ ಕಾರು ಮೂಲಕ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದೇನೆ. ಸರಕಾರಿ ಶಾಲೆ ಉಳಿಸಿ-ಬೆಳೆಸುವ ಬದ್ಧತೆಯೊಂದಿಗೆ ಪೂರ್ಣ ಇಚ್ಛಾಶಕ್ತಿಯಿಂದ ಈ ಕಾರ್ಯ ಮಾಡುತ್ತಿರುವೆ.
-ಜ್ಯೋತಿ ಜಯರಾಮ ಶೆಟ್ಟಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ
ನಮ್ಮ ಮನೆಯಿಂದ ಮೂರು ಮಕ್ಕಳು ಈ ಶಾಲೆಗೆ ಬರುತ್ತಾರೆ. ಎಸ್‌ಡಿಎಂಸಿ ಅಧ್ಯಕ್ಷರೆ ಪ್ರತಿದಿನ ಮಕ್ಕಳನ್ನು ಶಾಲೆಗೆ ಕರೆದೊಯ್ದು, ಸಂಜೆ ಮನೆಗೆ ಬಿಡುತ್ತಾರೆ. ಇದರಿಂದ ನಮಗೆ ತುಂಬಾ ಅನುಕೂಲವಾಗಿದೆ. ಶೈಕ್ಷಣಿಕ ಗುಣಮಟ್ಟವೂ ಉತ್ತಮವಾಗಿದೆ. ಸರಕಾರಿ ಶಾಲೆ ಇನ್ನೂ ಉನ್ನತ ಮಟ್ಟಕ್ಕೆ ಏರಬೇಕೆಂಬುದು ನಮ್ಮ ಆಶಯ.
- ವಹಿದಾ ಕೋಣ್ಮಕ್ಕಿ, ಪೋಷಕರು
ಎಸ್‌ಡಿಎಂಸಿ ಅಧ್ಯಕ್ಷೆಯೇ ಸಾರಥಿ..!
ಮೊದಲು ಶಾಲೆಗೆ ಮಕ್ಕಳನ್ನು ಕರೆತರಲು ರಿಕ್ಷಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಅವರ ತಲೆಯಲ್ಲಿ ಸ್ವತಃ ತಾನೇ ವಾಹನ ಖರೀದಿಸಿ ಏಕೆ ಮಕ್ಕಳನ್ನು ಶಾಲೆಗೆ ಕರೆತರಬಾರದು ಎಂಬ ಆಲೋಚನೆ ಬರುತ್ತಲೆ, ಇಕೋ ಕಾರು ಖರೀದಿಸುತ್ತಾರೆ.
ಪ್ರತಿನಿತ್ಯ ಬೆಳಗ್ಗೆ ಮೂರು ಟ್ರಿಪ್, ಸಂಜೆ ಮೂರು ಟ್ರಿಪ್ ಮೂಲಕ 40 ಮಕ್ಕಳನ್ನು ಶಾಲೆಗೆ ಕರೆತಂದು, ವಾಪಸ್ ಮನೆಗೆ ಬಿಡುತ್ತಿದ್ದಾರೆ. ವಿಶೇಷವೆಂದರೆ ಅವರೇ ಕಾರನ್ನು ಚಲಾಯಿಸಿಕೊಂಡು ಶಾಲೆಯಿಂದ ಅತೀ ದೂರದ ಹಣೆಬೆಟ್ಟು ಸಹಿತ ಜೋಗೂರು, ಹಣಬರಕೇರಿ, ಮೊಯ್ದಿನ್ ಪುರ, ಕೋಣ್ಮಕ್ಕಿ, ಮಾರ್ಕೆಟ್, ಕೋಣ್ಮಕ್ಕಿ ಕ್ರಾಸ್‌ನಿಂದ ಮಕ್ಕಳನ್ನು ಪಿಕಪ್-ಡ್ರಾಪ್ ಮಾಡುತ್ತಾರೆ. ಅಂದಹಾಗೇ ಜ್ಯೋತಿ ಶೆಟ್ಟಿ ಎಸ್‌ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಖಜಾಂಚಿಯಾಗಿರುವುದರ ಜೊತೆಗೆ ಉಡುಪಿ ಜಿಲ್ಲಾಧ್ಯಕ್ಷೆಯೂ ಆಗಿದ್ದಾರೆ.