ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ
ಬಸವಣ್ಣನವರನ್ನು ಒಂದು ಆದರ್ಶದಂತೆ ಪರಿಭಾವಿಸುವ ಮತ್ತು ಸಾಮಾಜಿಕ ನ್ಯಾಯದ ಕುರಿತ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸುವುದರ ಭಾಗವಾಗಿ ಸಿದ್ದರಾಮಯ್ಯ ಸರಕಾರ ಈ ಘೋಷಣೆ ಮಾಡಿರುವುದು ರಾಜಕೀಯ ಉದ್ದೇಶ ಮೀರಿದ್ದು ಎನ್ನುವುದನ್ನು ಹೇಳಲೇಬೇಕು. ಆದರೆ ಚುನಾವಣೆ ಬಂದಾಗೆಲ್ಲ ಪೌರಾಣಿಕ, ಚಾರಿತ್ರಿಕ ವ್ಯಕ್ತಿಗಳನ್ನು ಹೈಜಾಕ್ ಮಾಡುವ ಮತ್ತದರ ಲಾಭವನ್ನು ರಾಜಕೀಯವಾಗಿ ಮಾಡಿಕೊಳ್ಳುವ ಬಿಜೆಪಿ ಈಗ ರಾಜ್ಯ ಸರಕಾರದ ಇಂಥದೊಂದು ಘೋಷಣೆಯಿಂದಾಗಿ ತಕರಾರು ತೆಗೆಯಲಾರದೆ ಚಡಪಡಿಸುವ ಕಷ್ಟಕ್ಕಂತೂ ಸಿಲುಕಿದೆ.
ರಾಜ್ಯ ಸರಕಾರ ಇಂಥದೊಂದು ಮಹತ್ವದ ಅಧಿಕೃತ ಘೋಷಣೆ ಮಾಡುವ ಮೂಲಕ, ತಾನು ನಂಬಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಜಾತಿಭೇದವಿಲ್ಲದ, ವರ್ಗ ತಾರತಮ್ಯವಿಲ್ಲದ, ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲೇ ನಡೆಯಿತು. ಅದೇ ತತ್ವಗಳನ್ನೇ ನಮ್ಮ ಸಂವಿಧಾನ ಕೂಡ ಎತ್ತಿ ಹಿಡಿದಿದೆ.
ಕನ್ನಡದ ನೆಲದಲ್ಲಿ ಅನುಭವ ಮಂಟಪದ ಮೂಲಕ ಆದ ವೈಚಾರಿಕ ಮತ್ತು ಸಾಮಾಜಿಕ ಕ್ರಾಂತಿ ಇವತ್ತಿಗೂ ಒಂದು ಆದರ್ಶದಂತೆ, ಸಾಧ್ಯತೆಯಂತೆ ಕಾಣಿಸುತ್ತದೆ.
ಅಂಥ ಮಹತ್ವವುಳ್ಳ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ರಾಜ್ಯ ಸರಕಾರ ಘೋಷಣೆ ಮಾಡುವ ಮೂಲಕ ಬಸವಣ್ಣನವರ ತತ್ವಗಳನ್ನು ಪ್ರಚುರಪಡಿಸುವ ಕೆಲಸವೂ ಆಗಲಿದೆ.
ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರಕಾರದ ಪರವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿವರಾತ್ರಿ ದೇಶಿಕೇಂದ್ರ ಮಠಾಧೀಶರ ನೇತೃತ್ವದಲ್ಲಿ ನಾಡಿನ ವಿವಿಧ ಲಿಂಗಾಯತ ಮಠಗಳ ಸ್ವಾಮೀಜಿಗಳ ನಿಯೋಗ ಮನವಿ ಮಾಡಿತ್ತು.
ಅದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದು, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣನವರು ಅಸ್ಪಶ್ಯತೆ ವಿರುದ್ಧ ಚಳವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ. ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಈಗ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಈ ತೀರ್ಮಾನ ತಮಗೆ ಅತೀವ ತೃಪ್ತಿ ತಂದಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಕೆಲವು ವಿಚಾರಗಳನ್ನು ಗಮನಿಸಬೇಕು.
1. ಇದು ಕೇವಲ ಘೋಷಣೆ ಅಲ್ಲ, ಬಸವ ತತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ಧತೆ.
2. ನಾಡಿನ ಲಿಂಗಾಯತ ಮಠಗಳ ಸ್ವಾಮಿಗಳು ನನ್ನ ಬಳಿ ಬಂದು ಮನವಿ ಮಾಡಿದ್ದರು.
ಇದು ವೈಯಕ್ತಿಕವಾಗಿ ನನ್ನ ಅಪೇಕ್ಷೆಯೂ ಆಗಿತ್ತು. ಸ್ವಾಮಿಗಳ ಈ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನಮ್ಮ ಸರಕಾರಕ್ಕೆ ಇದೆ.
3. ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಬಸವಣ್ಣ ನನ್ನ ವೈಚಾರಿಕ ಗುರು.
ಬಸವ ಜಯಂತಿಯ ದಿನವೇ ನಾನು ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ.
4. ಬಸವಣ್ಣನವರು, ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶವೆಂದು ನಾನು ನಂಬಿದ್ದೇನೆ.
5. ಕಾಯಕ ಮತ್ತು ದಾಸೋಹ ನನ್ನ ಇಷ್ಟದ ಬಸವಣ್ಣನನವರ ತತ್ವದ ಮೂಲಧಾತುಗಳು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಸಂಪತ್ತಿನ ಉತ್ಪಾದನೆಯ ಶಕ್ತಿ ಎಲ್ಲರದ್ದಾಗಬೇಕು, ಅದರ ವಿತರಣೆ ಸಮನಾಗಿ ನಡೆಯಬೇಕು ಎಂದು ಬಸವಣ್ಣನವರ ಆಶಯವಾಗಿತ್ತು.
6. ಅಣ್ಣನ ಅನ್ನದಾಸೋಹದ ಸಂದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯಾದ ಮರುಗಳಿಗೆಯಲ್ಲಿಯೇ ‘ಅನ್ನಭಾಗ್ಯ’ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ಕೈಗೊಂಡೆ.
7. ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಮೂಲಕ ಹಾಲು, ಇಂದಿರಾ ಕ್ಯಾಂಟೀನ್, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆಗಳು ಬಸವಣ್ಣನವರ ಅನ್ನದಾಸೋಹದ ಚಿಂತನೆಯಿಂದಲೇ ಪ್ರೇರಿತವಾದುದು.
8. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂದು ಬಸವಣ್ಣ ಬಯಸಿದ್ದರು. ನಮ್ಮ ಸರಕಾರದ ಯೋಜನೆಗಳತ್ತ ಕಣ್ಣು ಹಾಯಿಸಿದರೆ ಬಸವಣ್ಣನ ಆಶಯಗಳ ಪ್ರಭಾವ ಪ್ರತಿಯೋಜನೆಯಲ್ಲಿಯೂ ಕಾಣಬಹುದು.
9. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆಯನ್ನಷ್ಟೇ ಮಾಡಿ ನಾವು ವಿರಮಿಸುವುದಿಲ್ಲ. ಬಸವ ತತ್ವವನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತೇವೆ. ಸಮಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಕಂಡ ಕನಸನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಇರಲಿ.
ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ತಮ್ಮ ರಾಜಕೀಯ ನಡೆಯನ್ನು ನಿರ್ಧರಿಸುವವರು. ಅವರ ನೇತೃತ್ವದ ಸರಕಾರ ಮೊದಲ ಗಮನ ಕೊಟ್ಟಿರುವುದೇ ಬಡವರ ಕಡೆಗೆ, ಹಸಿದವರ ಕಡೆಗೆ.
ಸಿದ್ದರಾಮಯ್ಯನವರ ಸಮಾಜವಾದಿ ಹಿನ್ನೆಲೆಯ ಮನಸ್ಸು ಮತ್ತು ಆಡಳಿತದಲ್ಲಿ ಅವರ ಧೋರಣೆ ಎಷ್ಟು ಜನಪರವಾದುದು ಎಂಬುದಕ್ಕೆ ಅನ್ನಭಾಗ್ಯ ಸೇರಿದಂತೆ ಅವರು ತಂದಿರುವ ಹಲವು ಯೋಜನೆಗಳೇ ಸಾಕ್ಷಿ. ಹಾಗಾಗಿ ಅವರ ಸರಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಲ್ಲಿ ಡಾಂಭಿಕತೆ ಇಲ್ಲವೆಂದು ಭಾವಿಸಬೇಕಾಗುತ್ತದೆ.
ಬಸವಣ್ಣನವರು ಕನ್ನಡವನ್ನು ಅಂದಿನ ಧರ್ಮದ ಭಾಷೆಯಾಗಿ, ವಿಚಾರದ ಭಾಷೆಯಾಗಿ, ಸಂವಹನದ ಭಾಷೆಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬೆಲೆ ಕಟ್ಟಲಾರದ್ದು. ಹಾಗೆ ನೋಡಿದರೆ ಕನ್ನಡ ಮಾಧ್ಯಮ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದೇ ಹನ್ನೆರಡನೇ ಶತಮಾನದಲ್ಲಿ ಎನ್ನುವುದು ಆಶ್ಚರ್ಯದ ಸಂಗತಿಯಾದರೂ ವಾಸ್ತವ ಎಂಬ ಅವರ ಮಾತು ಬಹಳ ಮಹತ್ವದ್ದು.
ಇನ್ನು, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಿದ್ದರಾಮಯ್ಯ ಸರಕಾರ ಘೋಷಿಸಿರುವುದು ರಾಜಕೀಯವಾದುದಕ್ಕಿಂತ ಹೆಚ್ಚಾಗಿ ತಾತ್ವಿಕ ಗೌರವವಾಗಿ ವ್ಯಕ್ತವಾಗಿರುವಂಥದ್ದು. ಆದರೆ ಅದಕ್ಕೆ ತಾನೇ ತಾನಾಗಿ ರಾಜಕೀಯ ಆಯಾಮವೊಂದು ಒದಗುವುದನ್ನು ಇವತ್ತಿನ ಸಂದರ್ಭದಲ್ಲಿ ನಿರಾಕರಿಸಲಾಗುವುದಿಲ್ಲ.
ಬಿಜೆಪಿ ಸರಕಾರ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡ ಪ್ರತಿಮೆಯನ್ನು ಮೋದಿಯವರನ್ನು ಕರೆಸಿ ಅನಾವರಣ ಮಾಡಿದಾಗ ಬಿಜೆಪಿಯೂ ರಾಜಕೀಯ ಉದ್ದೇಶವನ್ನೇ ಹೊಂದಿತ್ತು.
ಉರಿಗೌಡ, ನಂಜೇಗೌಡ ಎಂಬ ಚರಿತ್ರೆಯಲ್ಲೆಲ್ಲೂ ಇದ್ದಿರದ ಕಥೆ ಹೇಳುವಾಗ ಅದಕ್ಕೆ ಬಹಳ ಕುತ್ಸಿತ ರಾಜಕೀಯ ಉದ್ದೇಶವೇ ಇತ್ತು.
ಆದರೆ, ಬಸವಣ್ಣನವರನ್ನು ಒಂದು ಆದರ್ಶದಂತೆ ಪರಿಭಾವಿಸುವ ಮತ್ತು ಸಾಮಾಜಿಕ ನ್ಯಾಯದ ಕುರಿತ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸುವುದರ ಭಾಗವಾಗಿ ಸಿದ್ದರಾಮಯ್ಯ ಸರಕಾರ ಈ ಘೋಷಣೆ ಮಾಡಿರುವುದು ರಾಜಕೀಯ ಉದ್ದೇಶ ಮೀರಿದ್ದು ಎನ್ನುವುದನ್ನು ಹೇಳಲೇಬೇಕು.
ಒಂದು ಮಾತನ್ನಂತೂ ಹೇಳಲೇಬೇಕು.
ಕಾಂಗ್ರೆಸ್ ಸರಕಾರದ ಒಳ್ಳೆಯ ಕೆಲಸಗಳನ್ನೂ ಬೇಕೆಂತಲೇ ಟೀಕಿಸುವ, ಏನಾದರೊಂದು ಅಪಸ್ವರ ತೆಗೆದು, ಅಪಪ್ರಚಾರಕ್ಕೆ ಸದಾ ಯತ್ನಿಸುತ್ತಲೇ ಇರುವ ಬಿಜೆಪಿಗೆ ಈಗ ಕೈಕೈ ಹೊಸಕಿಕೊಳ್ಳುವಂತಾಗಿದೆ ಮತ್ತು ಈಗ ಈ ಘೋಷಣೆಯಿಂದಾಗಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ತಳಮಳ, ಆತಂಕ ಆಗಿರುವುಂತೂ ನಿಜ.
ಚುನಾವಣೆ ಬಂದಾಗೆಲ್ಲ ಪೌರಾಣಿಕ, ಚಾರಿತ್ರಿಕ ವ್ಯಕ್ತಿಗಳನ್ನು ಹೈಜಾಕ್ ಮಾಡುವ ಮತ್ತದರ ಲಾಭವನ್ನು ರಾಜಕೀಯವಾಗಿ ಮಾಡಿಕೊಳ್ಳುವ ಬಿಜೆಪಿ ಈಗ ರಾಜ್ಯ ಸರಕಾರದ ಇಂಥದೊಂದು ಘೋಷಣೆಯಿಂದಾಗಿ ತಕರಾರು ತೆಗೆಯಲಾರದೆ ಚಡಪಡಿಸುವ ಕಷ್ಟಕ್ಕಂತೂ ಸಿಲುಕಿದೆ.