ಸೂರುಮನೆ ಜಲಪಾತಕ್ಕೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು

ಚಿಕ್ಕಮಗಳೂರು: ಕಾಫಿನಾಡು ಎಂದೇ ಖ್ಯಾತಿಗೆ ಪಾತ್ರವಾಗಿರುವ ಚಿಕ್ಕಮಗಳೂರು ಜಿಲ್ಲೆ ಸುಂದರ ನಿಸರ್ಗ ತಾಣಗಳ ತವರೂರಾಗಿದೆ. ಈ ಕಾರಣಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿನ ನಿಸರ್ಗ ಸಿರಿ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ.
ಬಿಸಿಲಝಳಕ್ಕೆ ಕೊಂಚ ಸೊರಗಿದ್ದ ಇಲ್ಲಿನ ಗಿರಿಶ್ರೇಣಿಗಳು, ಝರಿ, ಜಲಪಾತಗಳು ಸದ್ಯ ಸುರಿದ ಅಕಾಲಿಕ ಮಳೆಯ ಪರಿಣಾಮ ಮತ್ತೆ ಹಸಿರು ಹೊದ್ದು ಪ್ರವಾಸಿಗರನ್ನು ಆಯಸ್ಕಾಂತದಂತೆ ಸೆಳೆಯುತ್ತಿವೆ. ಜಿಲ್ಲೆಯ ಕಳಸ ತಾಲೂಕಿನ ಕಲ್ಗೋಡು ಗ್ರಾಮದಲ್ಲಿರುವ ಸೂರುಮನೆ ಜಲಪಾತ ಕಾಫಿನಾಡಿನ ಸುಂದರ ಪ್ರವಾಸಿ ತಾಣವಾಗಿದ್ದು, ನೀರಿಲ್ಲದೆ ಸೊರಗಿದ್ದ ಈ ಜಲಪಾತ ಸದ್ಯ ಸುರಿದ ಮಳೆಯಿಂದಾಗಿ ಜೀವಕಳೆ ಪಡೆದುಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 90ಕಿಮೀ ದೂರದಲ್ಲಿ ಕಳಸ ಪಟ್ಟಣ ಇದ್ದು, ಕಳಸ ಪಟ್ಟಣದಿಂದ 6ಕಿಮೀ ದೂರ ಕ್ರಮಿಸಿದರೆ ಕಲ್ಗೋಡು ಗ್ರಾಮ ಸಿಗುತ್ತದೆ. ಈ ಗ್ರಾಮ ತಲುಪಿದ ಬಳಿಕ ಕಾಫಿ ತೋಟಗಳನ್ನು ಸೀಳಿಕೊಂಡು ಹೋಗಿರುವಂತೆ ಭಾಸವಾಗುವ ಮಣ್ಣಿನ ಕಚ್ಚಾ ರಸ್ತೆಯಲ್ಲಿ 1ಕಿಮೀ ಕ್ರಮಿಸಿದರೆ ಕಾಫಿ, ಅಡಿಕೆ ತೋಟಗಳ ಸಂದಿಯಲ್ಲಿ ಸುಮಾರು 20 ಅಡಿ ಎತ್ತರದಿಂದ ಹಾಲ್ನೊರೆಯೇ ಧುಮ್ಮಿಕ್ಕುತ್ತಿರುವಂತೆ ಭಾಸವಾಗುವ ಸೂರುಮನೆ ಜಲಪಾತ ಕಣ್ಣಿಗೆ ಬೀಳುತ್ತದೆ.
ಕಾಫಿ, ಅಡಿಕೆ ತೋಟಗಳ ಸಂದಿಯಲ್ಲಿ, ಪಶ್ಚಿಮಘಟ್ಟ ಗಿರಿಶ್ರೇಣಿಗಳ ಹಿನ್ನೆಲೆಯಲ್ಲಿ ಕರಿಬಂಡೆಯ ಮೇಲಿನಿಂದ ಹಾಲು ಸುರಿಯುತ್ತಿರುವಂತೆ ಕಾಣುವ ಮನಮೋಹಕ ಜಲಪಾತದ ವೈಯ್ಯಾರ ನೋಡಲು ಎರಡು ಕಣ್ಣುಗಳು ಸಾಲದು ಎಂದೆನಿಸುತ್ತದೆ.
ಮನಮೋಹಕ ಜಲಪಾತದ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ಜಲಪಾತದ ಕೆಳಗಿರುವ ವಿಶಾಲ ಜಾಗದಲ್ಲಿ ನಿಂತು ಸುಂದರ ಪರಿಸರದೊಂದಿಗೆ ಜಲಪಾತದ ಸೊಬಗು ನೋಡುತ್ತಾ ಮಂತ್ರಮುಗ್ಧರಾಗುತ್ತಾರೆ. ಹೆಚ್ಚು ಆಳವಿಲ್ಲದ ಜಲಪಾತದ ಮುಂದಿನ ಸ್ವಚ್ಛ ಹಾಗೂ ಮೈಕೊರೆಯುವ ನೀರಿನಲ್ಲಿ ಮಿಂದೇಳುವುದು ಮಾಮೂಲಿ ಸಂಗತಿಯಾಗಿದೆ. ನಗರಗಳ ಕಾಂಕ್ರೀಟ್ ಕಟ್ಟಡಗಳ ನಡುವೆ ಯಾಂತ್ರಿಕವಾಗಿ ಬದುಕುವ ಜನರ ಮುಂದೆ ಸೂರುಮನೆ ಜಲಪಾತದ ಪರಿಸರ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಈ ಕಾರಣಕ್ಕೆ ಈ ಜಲಪಾತ ನೋಡಲು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಅರಣ್ಯ ಇಲಾಖೆ ಉಸ್ತುವಾರಿಯಲ್ಲಿರುವ ಸೂರುಮನೆ ಜಲಪಾತದ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕಾಳಜಿ ವಹಿಸಿರುವ ಪರಿಣಾಮ ಇಲ್ಲಿನ ಪರಿಸರ ಮಲಿನಗೊಂಡಿಲ್ಲ. ಸ್ಥಳೀಯರಿಗೆ ಜಲಪಾತದ ಸೊಬಗು ಕಣ್ತುಂಬಿಕೊಳ್ಳಲು ಯಾವುದೇ ಶುಲ್ಕ ಇಲ್ಲ, ಆದರೆ ದೂರದ ಪ್ರವಾಸಿಗರ ಪೈಕಿ ಓರ್ವರಿಗೆ 30 ರೂ. ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕದ ಹಣ ಜಲಪಾತದ ಬಳಿ ಮೂಲಸೌಕರ್ಯ ಕಲ್ಪಿಸಲು ಬಳಸಲಾಗುತ್ತಿದೆ.
ಸೂರುಮನೆ ಜಲಪಾತ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 100ಕಿಮೀ ದೂರದಲ್ಲಿದೆ. ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಇತರ ಜಿಲ್ಲೆಗಳ ಪ್ರವಾಸಿಗರು ಸೂರುಮನೆ ಜಲಪಾತ ನೋಡಲು ಮೊದಲು ಕಳಸ ಪಟ್ಟಣಕ್ಕೆ ಬರಬೇಕು. ಕಳಸ ಪಟ್ಟಣದ ಬಳಿ ಹರಿಯುವ ಭದ್ರಾ ನದಿಗೆ ಕೋಟೆಹೊಳೆ ಎಂಬಲ್ಲಿ ಸೇತುವೆ ನಿರ್ಮಿಸಿದ್ದು, ಈ ಸೇತುವೆ ದಾಟಿ ಮುಂದಕ್ಕೆ ಚಲಿಸಿದರೆ ಅರ್ಧ ಗಂಟೆಯೊಳಗೆ ಸೂರುಮನೆ ಜಲಪಾತ ತಲುಪಬಹುದು.