ಸೋಯಾ ಹಿಂಡಿಯ ಕಬಾಬು

ಮಾಂಸಾಹಾರದ ಕುರಿತು ಇತ್ತೀಚೆಗೆ ಸ್ವತಃ ಮಾಂಸಾಹಾರಿಗಳಲ್ಲೂ ಮಡಿವಂತಿಕೆ ಹೆಚ್ಚುತ್ತಿದೆ. ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳ ಟಿಫಿನ್ ಬಾಕ್ಸಿನಲ್ಲಿ ಮಾಂಸಾಹಾರ ಇರಬಾರದೆಂದು ಕಟ್ಟಪ್ಪಣೆ ಮಾಡಿರುವುದು ಸುದ್ದಿ ಆಗವುದಿಲ್ಲ. ಆದರೆ, ಯಾವುದೋ ಶಾಲೆಯಲ್ಲಿ ಶಿಕ್ಷಕರು ತಮ್ಮದೇ ದುಡ್ಡಿನಲ್ಲಿ ಮಾಂಸಾಹಾರ ತರಿಸಿಕೊಂಡು ತಿಂದದ್ದು ಸುದ್ದಿ ಆಗುತ್ತದೆ. ಮಾಂಸಾಹಾರಿಯಾಗಿರುವವರು ಎಂದಿನಂತೆ ಮಾಂಸಾಹಾರ ಸೇವಿಸಿ ದೇವಸ್ಥಾನವನ್ನು ಪ್ರವೇಶಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. ಮುಕ್ಕಾಲು ಪಾಲು ಮಾಂಸಾಹಾರಿಗಳಿರುವ ದೇಶದಲ್ಲಿಯೇ ಮಾಂಸಾಹಾರಕ್ಕೆ ನೈತಿಕತೆಯ ನಂಟು ಮೆತ್ತಿಕೊಂಡದ್ದು ಹೇಗೆ ಎಂಬುದು ಅಚ್ಚರಿಯ ವಿಷಯ.

Update: 2024-12-11 07:25 GMT

ತಲೆಗೆ ಹೆಡ್‌ಲೈಟ್ ಸಿಕ್ಕಿಸಿಕೊಂಡು ಕೈಯಲ್ಲಿ ಕೋವಿ ಹಿಡಿದು ಕಾಡಿಗೆ ನಡೆಯುವ ನನ್ನ ದೊಡ್ಡಪ್ಪನ ಮಗ ಪ್ರತೀ ರಾತ್ರಿ ಮರಳಿ ಬರುವಾಗಲೂ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡ ಕಾಡಹಂದಿಯ ಕತೆಯನ್ನೋ, ಬರ್ಕಗಳ ಹಿಂಡು ಎದುರು ನಿಂತಾಗ ಕೈಕೊಟ್ಟ ಕೋವಿಯ ಬಗ್ಗೆ ದೂರನ್ನೋ ಹೇಳುವುದು ನಿತ್ಯದ ರೂಢಿ. ಮಾಂಸದೂಟದ ಹಂಬಲದಲ್ಲಿ ಬದುಕಿನ ಹಲವು ರಾತ್ರಿಗಳನ್ನು ಶಿಕಾರಿಗಾಗಿ ವಿನಿಯೋಗಿಸುವ ಆತನನ್ನೂ, ಆತ ತನ್ನ ಶಿಕಾರಿಯ ಜೊತೆ ಮರಳುತ್ತಾನೆ ಎಂದು ನಿರೀಕ್ಷಿಸುತ್ತಾ ರಾತ್ರಿಯೂಟವನ್ನು ತಡವಾಗಿ ಮಾಡುವ ಊರಿನ ಹತ್ತು ಹಲವರನ್ನೂ ನೋಡುವಾಗೆಲ್ಲ ಮನುಷ್ಯನ ಯಾವುದೋ ಜೀನಿನ ಡಿಎನ್‌ಎ ಸರಪಳಿಯ ಅದ್ಯಾವುದೋ ಪ್ರೊಟೀನು ಸರಣಿಯು ಮಾಂಸಕ್ಕಾಗಿ ಸದಾ ಹಪಾಹಪಿಸುತ್ತದೆ ಎಂದೇ ಅನ್ನಿಸುತ್ತದೆ. ಮಾಸ್ತಿ, ಜಟ್ಟಿಗ, ಹುಲದೇವ್ರ, ಬೇಟೆಬೀರ ಮುಂತಾದ ನಮ್ಮೂರ ದೇವರುಗಳಿಗೂ ಕೋಳಿ, ಕುರಿಗಳೇ ಬೇಕು. ಅಷ್ಟಮಂಗಲ ಪ್ರಶ್ನೆ, ಅಷ್ಟಬಂಧ ಜೀರ್ಣೋದ್ಧಾರಗಳ ನಂತರ ಎಷ್ಟೋ ಭೂಮ್ತಾಯಿ, ಕೀಳು, ಮಾಸ್ತಿ ಮತ್ತಿತ್ಯಾದಿ ದೇವರುಗಳೆಲ್ಲ ತಮ್ಮ ಆಧಾರ್‌ಕಾರ್ಡು ಅಪ್ಡೇಟು ಮಾಡಿಕೊಂಡು ಶಾಂತಿಕಾ ಪರಮೇಶ್ವರಿಯೋ ಕಾಂಚಿಕಾಂಬೆಯೋ ಆಗಿದ್ದಾರೆ. ಅದಕ್ಕೂ ಮೊದಲು ಈ ಎಲ್ಲ ದೇವರುಗಳೂ ಅಪ್ಪಟ ಬಾಡೂಟದ ದೇವರುಗಳೇ ಆಗಿದ್ದವು.

ಮಾಂಸಾಹಾರದ ಕುರಿತು ಇತ್ತೀಚೆಗೆ ಸ್ವತಃ ಮಾಂಸಾಹಾರಿಗಳಲ್ಲೂ ಮಡಿವಂತಿಕೆ ಹೆಚ್ಚುತ್ತಿದೆ. ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳ ಟಿಫಿನ್ ಬಾಕ್ಸಿನಲ್ಲಿ ಮಾಂಸಾಹಾರ ಇರಬಾರದೆಂದು ಕಟ್ಟಪ್ಪಣೆ ಮಾಡಿರುವುದು ಸುದ್ದಿ ಆಗವುದಿಲ್ಲ. ಆದರೆ, ಯಾವುದೋ ಶಾಲೆಯಲ್ಲಿ ಶಿಕ್ಷಕರು ತಮ್ಮದೇ ದುಡ್ಡಿನಲ್ಲಿ ಮಾಂಸಾಹಾರ ತರಿಸಿಕೊಂಡು ತಿಂದದ್ದು ಸುದ್ದಿ ಆಗುತ್ತದೆ. ಮಾಂಸಾಹಾರಿಯಾಗಿರುವವರು ಎಂದಿನಂತೆ ಮಾಂಸಾಹಾರ ಸೇವಿಸಿ ದೇವಸ್ಥಾನವನ್ನು ಪ್ರವೇಶಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. ಮುಕ್ಕಾಲು ಪಾಲು ಮಾಂಸಾಹಾರಿಗಳಿರುವ ದೇಶದಲ್ಲಿಯೇ ಮಾಂಸಾಹಾರಕ್ಕೆ ನೈತಿಕತೆಯ ನಂಟು ಮೆತ್ತಿಕೊಂಡದ್ದು ಹೇಗೆ ಎಂಬುದು ಅಚ್ಚರಿಯ ವಿಷಯ.

ಈಗ ಮಾರುಕಟ್ಟೆಯಲ್ಲಿ ಮಾಂಸಾಹಾರಕ್ಕೆ ಬದಲಿಯಾದ ಆದರೆ, ಮಾಂಸದ್ದೇ ಜಿಹ್ವಾನುಭವ ನೀಡುವ ಸಸ್ಯ ಮೂಲದ ಉತ್ಪನ್ನಗಳ ಭರಾಟೆ ಶುರುವಾಗಿದೆ. ಮಾಂಸಕ್ಕೆ ಇವು ನೈತಿಕ ಪರ್ಯಾಯಗಳೆಂಬ ಪ್ರಚಾರವೂ ಶುರುವಾಗಿದೆ. ಸಸ್ಯಮೂಲದ ವೇಗಾನ್‌ಹಾಲು ಈಗ ಭಾರತದ ಮಾರುಕಟ್ಟೆಯಲ್ಲಿ ಸುಲಭ ಲಭ್ಯ. ಈ ಹಿಂದೆ ಆದಂತೆ, ಆಹಾರ ಉತ್ಪಾದಕ ದೈತ್ಯ ಕಂಪೆನಿಗಳು ಯಾರನ್ನೂ ಕೊಳ್ಳಬಲ್ಲರು; ಆಹಾರ ತಜ್ಞರನ್ನೂ ಸಹ. ಇನ್ನೊಂದು ದೇಶದಲ್ಲಿ ಕುದುರೆಗೆ ನೀಡುವ ಆಹಾರವು ನಮ್ಮ ದೇಶದಲ್ಲಿ ಸೂಪರ್ ಫುಡ್ ಆಗಬಲ್ಲದು. ಯುರೋಪಿನಲ್ಲಿ ರಾತ್ರಿ ಮಲಗುವಾಗ ಮಕ್ಕಳು ಕುಡಿಯುವ ಪಾನೀಯವು ಅಂತಹ ಅಭ್ಯಾಸವಿಲ್ಲದ ಭಾರತದಲ್ಲಿ ಉತ್ಸಾಹ ನೀಡುವ ಬೆಳಗಿನ ಚೇತೋಹಾರಿ ಪೇಯವಾಗಬಲ್ಲದು. ವೇಗಾನ್ ಮಾಂಸದ ಹಿಂದೆಯೂ ಇಂತಹದ್ದೇ ಕತೆಗಳಿವೆ.

ಆದರೆ, ಯಾವುದೂ ಆಕಸ್ಮಿಕವಲ್ಲ ಎಂದು ಈಗ ಮತ್ತೆ ಮತ್ತೆ ಖಚಿತವಾಗುತ್ತಿದೆ. ‘ಡೌನ್ ಟು ಅರ್ಥ್’ ಪತ್ರಿಕೆಯಲ್ಲಿ ಪ್ರಕಟವಾದ ಬರೆಹದಲ್ಲಿ ಖ್ಯಾತ ಆಹಾರ ಇತಿಹಾಸಕಾರ ಪುಷ್ಪೇಶ್ ಪಂತ್ ಅವರು ಹೇಳುವಂತೆ ಮೆಕ್ ಡೊನಾಲ್ಡ್, ಕೆಎಫ್‌ಸಿ, ಡೊಮಿನೊ ಮತ್ತಿತರ ಆಹಾರ ಮಾರುಕಟ್ಟೆಯ ದೊಡ್ಡ ಕುಳಗಳಿಗೆ ಮಾಂಸಾಹಾರದ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಿಲ್ಲವೆಂಬುದು ಇತ್ತೀಚೆಗೆ ಮನದಟ್ಟಾಗಿದೆಯಂತೆ. ಹೊಸ ಸಸ್ಯಾಹಾರಿಗಳು ತಮ್ಮಂಗಡಿಗೆ ಬಂದರಷ್ಟೇ ಅವರಿಗೆ ವ್ಯಾಪಾರ. ಹೊಸ ಸಸ್ಯಾಹಾರಿಗಳೆಲ್ಲಿಂದ ಸಿಗುತ್ತಾರೆ? ಅವರನ್ನು ತಯಾರು ಮಾಡಬೇಕಷ್ಟೇ! ಮೆಕ್‌ಡೊನಾಲ್ಡ್ಸ್‌ನವರು ಎಷ್ಟೇ ಕಷ್ಟ ಪಟ್ಟರೂ ಭಾರತೀಯರ ಮಾಂಸದಡುಗೆಯ ಮಾರುಕಟ್ಟೆಯನ್ನು ಹಿಡಿಯಲಾಗದಿರುವುದಕ್ಕೂ ಸಸ್ಯಾಹಾರಕ್ಕೆ ನೈತಿಕತೆಯ ನಂಟನ್ನು ಬೆಸೆದಿದ್ದಕ್ಕೂ ಸಂಬಂಧ ಇದೆ ಎನ್ನುತ್ತಾರೆ ಪಂತ್. ಮಾಂಸ ತಿಂದ ನಾಲಿಗೆಗೆ ಒಮ್ಮೆಲೆ ಹಸಿ ಲೆಟ್ಯೂಸು ಇಷ್ಟವಾಗಬೇಕೆಂದರೆ ಹೇಗೆ? ಅದೂ ಅಲ್ಲದೆ, ಮೊಗಲರ ಕಾಲದ ಅಡುಗೆಯಿಂದ ಹಿಡಿದು ಚೈನೀಸ್ ಅಡುಗೆಯವರೆಗೆ ಯಾವುದನ್ನೂ ಭಾರತೀಯ ಜಿಹ್ವಾ ಸಂಸ್ಕಾರಕ್ಕೆ ಹೊಂದಿಕೊಳ್ಳುವಂತೆ ಮಾಡಬಲ್ಲ ರಸ್ತೆ ಬದಿ ದುಖಾನುಗಳಿಗೂ ಮಾಂಸದಡುಗೆಯ ವಿಚಾರದಲ್ಲಿ ಪೈಪೋಟಿ ನೀಡಲಾರದ ಈ ಬಹುರಾಷ್ಟ್ರೀಯ ಆಹಾರದಂಗಡಿಗಳು ಭಾರತೀಯ ರೆಸ್ಟೋರೆಂಟುಗಳಿಗೆ ಪೈಪೋಟಿ ನೀಡುವುದಿದ್ದರೆ ಅದು ಸಸ್ಯಾಹಾರದಲ್ಲಿ ಮಾತ್ರ!

ಹಾಗಂತ, ಒಂದೇ ಸಲ ಸೊಪ್ಪು ಸದೆ ತಿನ್ನಿಸಲಾಗುವುದೇ? ಆಗದು. ಅದಕ್ಕೆಂದೇ ಮಾಂಸದ ನಕಲಿನಂತಹ ಉತ್ಪನ್ನಗಳೀಗ ಮಾರುಕಟ್ಟೆಗೆ ಬಂದಿವೆ. ಅದೇ ಕಾಲಕ್ಕೆ ಮಾಂಸಾಹಾರದ ನೈತಿಕತೆಯನ್ನು ಪ್ರಶ್ನಿಸುವಂತಹ ನಿರೂಪಣೆಗಳನ್ನು ಎಲ್ಲಿಂದಲೋ ಹರಿಯಬಿಡಲಾಗುತ್ತಿದೆ.

ಜೊತೆ ಜೊತೆಯಲ್ಲೇ ಮಾಂಸದ ನಕಲುಗಳಿಂದ ಮಾಡಿದ ತಿನಿಸುಗಳನ್ನು ಭಾರತೀಯರ ಬಾಯಿಗೆ ತುರುಕುವ ಪ್ರಯತ್ನ ನಡೆಯುತ್ತಿದೆ. ಈ ಹಿಂದೆ ಇಡ್ಲಿ ದೋಸೆಯ ಜಾಗವನ್ನು ಕಬಳಿಸಲು ಬ್ರೇಕ್ ಫಾಸ್ಟ್ ಸಿರಿಯಲ್ಸ್‌ಗಳನ್ನು, ಚಾಕೋ ಫ್ಲೇಕ್ಸುಗಳನ್ನು ತಮ್ಮ ಅಂಗಡಿಗಳ ಸೆಲ್ಫಿಗಳಲ್ಲಿ ಒಪ್ಪ ಓರಣವಾಗಿಟ್ಟು ನಂತರ ಅವುಗಳೇ ಸಂಪೂರ್ಣ ಆಹಾರ ಎಂದು ಕತೆ ಕಟ್ಟಿ ಹೇಳಿದ್ದನ್ನು ಪಂತ್ ನೆನಪಿಸಿಕೊಳ್ಳುತ್ತಾರೆ. ನಮ್ಮ ಕೋಟೇಶ್ವರದ ನಾಗಣ್ಣನ ಚಾದಂಗಡಿಯಲ್ಲಿ ಇನ್ನೆಷ್ಟು ದಿನ ಬಟಾಣಿ ಅವಲಕ್ಕಿ, ಖಾರಶೇವು ಅವಲಕ್ಕಿ ಸಿಗುತ್ತದೋ ಗೊತ್ತಿಲ್ಲ; ಮೊಸರವಲಕ್ಕಿ ಬೇಕೆಂದರೆ ಹೊನ್ನಾವರದ ಗುಣವಂತೆಯಲ್ಲಿರುವ ಮರಿಭಟ್ಟರ ಹೊಟೇಲಿಗೇ ಹೋಗಬೇಕು. ಹಿಂದೆ ಉತ್ತರ ಕನ್ನಡದ ಎಲ್ಲ ಚಾದಂಗಡಿಗಳಲ್ಲೂ ದೊರೆಯುತ್ತಿದ್ದ ಮಿಸಳ್‌ಭಾಜಿ ಈಗ ಮಿರ್ಜಾನಿನ ಕಮಲಾಕರಣ್ಣನ ಚಾದಂಗಡಿಯಲ್ಲಷ್ಟೇ ಸಿಗುತ್ತದೆ. ಇದೇ ಮಾತನ್ನು ಕಲಬುರಗಿಯ ಒಗ್ಗರಣೆ ಮಂಡಕ್ಕಿಗೂ, ಧಾರವಾಡದ ಮಂಡಕ್ಕಿ ಮಿರ್ಚಿಗೂ ಹಾಗೂ ದಾವಣಗೆರೆಯ ಬೆಣ್ಣೆ ದೋಸೆಗೂ ಅನ್ವಯಿಸಬಹುದು. ಒಂದಂತೂ ಸತ್ಯ: ನಮ್ಮ ಆಹಾರದ ರೂಢಿಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ನಡೆಸಬೇಕಾಗಿರುವುದಂತೂ ಅನಿವಾರ್ಯ.

ಈಗ ಮತ್ತದೇ ಮಾಂಸದ ಸಸ್ಯಮೂಲ ನಕಲುಗಳ ವಿಷಯಕ್ಕೆ ಬರೋಣ. ವೈದ್ಯೆಯೂ ಆಹಾರ ಇತಿಹಾಸಕಾರ್ತಿಯೂ ಆಗಿರುವ ಮಾನಸಿ ಭಟ್ಟಾಚಾರ್ಯ ಅವರ ಪ್ರಕಾರ ಭಾರತವು ಸಕ್ಕರೆ ರೋಗಿಗಳು ಮತ್ತು ಹೃದಯ ಸಂಬಂಧಿ ಕಾಯಿಲೆಯವರ ದೇಶ. ನಮ್ಮ ಆಹಾರವು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಹೊಂದಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ ಹೊಂದಿರಬೇಕು. ಸಸ್ಯ ಮೂಲದ ಪ್ರೊಟೀನುಗಳು ಸಾಕಷ್ಟು ಪ್ರಮಾಣದಲ್ಲಿ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುತ್ತವಾದರೂ ಅವುಗಳಿಂದ ಕಾರ್ಬೋಹೈಡ್ರೇಟ್‌ಗಳನ್ನು ಪ್ರತ್ಯೇಕಿಸಲಾಗದು. ಒಂದು ಉದಾಹರಣೆ ಹೇಳಬೇಕೆಂದರೆ, 100 ಗ್ರಾಂ ಹೆಸರು ಬೇಳೆ ತಿಂದರೆ 20 ಗ್ರಾಂ ಪ್ರೋಟೀನು ಸಿಗುತ್ತದೆ. ಆದರೆ, ಅದರ ಜೊತೆ 46 ಗ್ರಾಂ ಕಾರ್ಬೋಹೈಡ್ರೇಟನ್ನು ಸೇವಿಸಬೇಕಾಗುತ್ತದೆ. 100 ಗ್ರಾಂ ಮಾಂಸದಲ್ಲಿ ಕೂಡಾ 20 ಗ್ರಾಂ ಪ್ರೊಟೀನ್ ಸಿಗುತ್ತದೆ. ಜೊತೆಗೆ, ಅತ್ಯಲ್ಪ ಪ್ರಮಾಣದಲ್ಲಿ ಕೊಬ್ಬು, ಮಿಕ್ಕುಳಿದಿದ್ದೆಲ್ಲ ನೀರು.

ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಜಾಗತಿಕ ಆಹಾರ ಸಂಶೋಧನೆಗಳ ವಿಶ್ಲೇಷಣೆಯ ಪ್ರಕಾರ ಸಸ್ಯಮೂಲದ ಪ್ರೊಟೀನನ್ನು ಜೀರ್ಣಿಸಿಕೊಳ್ಳುವುದು ಮನುಷ್ಯನಿಗೆ ತುಸು ಕಷ್ಟವೇ. ಜೊತೆಗೆ, ಈ ದೇಶದ ದೊಡ್ಡ ಸಂಖ್ಯೆಯ ಜನರು ಪ್ರೊಟೀನ್, ಕಬ್ಬಿಣ, ವಿಟಮಿನ್ ಬಿ-6, ವಿಟಮಿನ್ ಬಿ-12 ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಸಸ್ಯ ಮೂಲದ ಆಹಾರದಲ್ಲಿ ಲಭ್ಯವಾಗುವ ಕಬ್ಬಿಣವು ರಕ್ತದಲ್ಲಿರುವ ಕಬ್ಬಿಣವಲ್ಲವಾದ್ದರಿಂದ ಅಷ್ಟು ಸುಲಭವಾಗಿ ದೇಹಗತವಾಗದು. ಕಡಿಮೆ ಖರ್ಚಿನಲ್ಲಿ ಈ ದೇಶದ ಹಸಿವು ನೀಗಿಸಲು ಮಾಂಸದೂಟವೇ ಬೇಕು.

ಆದರೆ, ನಾವೇನು ತಿನ್ನಬೇಕೆಂದು ನಾವೇ ನಿರ್ಧರಿಸುತ್ತಿದ್ದೇವೆಯೇ?

ನಮ್ಮ ದೇಹದ ಮೇಲೆ, ನಮ್ಮ ತೀರ್ಮಾನಗಳ ಮೇಲೆ ನಿಯಂತ್ರಣ ಹೊಂದಿದ್ದ ಸರ್ವಾಧಿಕಾರಗಳೆಲ್ಲ ಆಗಿ ಹೋಗಿವೆ. ನಮ್ಮ ಯೋಚನೆಗಳನ್ನೂ ನಿಯಂತ್ರಿಸುವ ಸರ್ವಾಧಿಕಾರವು ಆ ಪೈಕಿ ಅತ್ಯಂತ ಅಪಾಯಕಾರಿಯಾದದ್ದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಉದಯ ಗಾಂವಕಾರ

contributor

Similar News