ಕಣ್ಮರೆಯಾಗುತ್ತಿರುವ ಕಾಡಿನ ಫಲ ʼಬೇಲದ ಹಣ್ಣುʼ

ಹೊಸಕೋಟೆ : ವಯಸ್ಕರಿಂದ ಹಿಡಿದು ವಯೋವೃದ್ಧರ ತನಕ ಕಾಡುತ್ತಿರುವ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ, ಡಯಾಬಿಟೀಸ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಯಂತ್ರಿಸುವ ಗುಣ ಹೊಂದಿರುವ ಬೇಲದ ಹಣ್ಣಿನ ಮರಗಳು ಕಣ್ಮರೆಯಾಗುತ್ತಿವೆ.
ಹಳ್ಳಿಗಳಲ್ಲಿ ಈ ಗಿಡ-ಮರಗಳು ಹೊಲದ ಬದು, ಕೆರೆಗಳ ಸುತ್ತಮುತ್ತ, ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಸರಕಾರಿ ಅರಣ್ಯ ಪ್ರದೇಶ ಹಾಗೂ ನಿರುಪಯುಕ್ತ ಪ್ರದೇಶದಲ್ಲಿ ಕಾಣಸಿಗುತ್ತವೆ. ಪ್ರತೀ ಬೇಸಿಗೆ ಸಂದರ್ಭದಲ್ಲಿ ತೊಟ್ಟು ಕಳಚಿ ನೆಲಕ್ಕೆ ಬೀಳುವ ಈ ಹಣ್ಣು ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇಬು ಹಣ್ಣಿನ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
ಇದೊಂದು ನಿಂಬೆ ಹಣ್ಣಿನ ಜಾತಿಗೆ ಸೇರಿದ ಮರವಾಗಿದ್ದು, ಎಲೆಗಳನ್ನು ಉಜ್ಜಿದರೆ ನಿಂಬೆ ಹಣ್ಣಿನ ವಾಸನೆ ಬರುತ್ತದೆ. ಈ ಹಣ್ಣು ಗಟ್ಟಿಯಾದ ಹೊರಕವಚ ಹೊಂದಿದ್ದು, ಅದರ ಒಳಗೆ ಕಂದು ಬಣ್ಣದ ತಿರುಳು, ಬಿಳಿ ಬಣ್ಣದ ಬೀಜ ಹೊಂದಿರುತ್ತದೆ. ತಿರುಳು ಹುಳಿಮಿಶ್ರಿತ ಸಿಹಿ ಹೊಂದಿರುತ್ತದೆ.
ಬೇಲದ (ಬೆಳವಲ) ಹಣ್ಣಿನ ಮರಗಳು ಇತ್ತೀಚೆಗೆ ಕಣ್ಮರೆಯಾಗುತ್ತಿವೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಹಾಗೂ ಮಾನವನ ದೇಹಕ್ಕೆ ಬೇಕಾದ ಪೋಷಕಾಂಶ ಪೂರೈಸುವ ಈ ಹಣ್ಣು ಇತ್ತೀಚೆಗೆ ಮುಗಿದ ಮಹಾಶಿವರಾತ್ರಿ ಹಬ್ಬದಲ್ಲಿ ಶಿವನ ಪೂಜೆಯಲ್ಲಿ ಪ್ರಮುಖ ಸ್ಥಾನ ಪಡೆದಿತ್ತು.
ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಲಿ: ಅರಣ್ಯ ಇಲಾಖೆಯು ಪ್ರತೀ ವರ್ಷದ ಮಳೆಗಾಲದಲ್ಲಿ ಅರಣ್ಯ ಪದೇಶ, ರಸ್ತೆ ಬದಿ, ಶಾಲಾ ಕಾಲೇಜು ಸೇರಿದಂತೆ ಖಾಲಿ ಜಾಗದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳನ್ನು ನೆಡುತ್ತದೆ. ಅವುಗಳ ಜತೆ ಈ ರೀತಿಯ ಹಣ್ಣು ಬಿಡುವ ಗಿಡಗಳನ್ನು ನೆಟ್ಟರೆ ಮನುಷ್ಯರಿಗೆ, ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುತ್ತದೆ. ಮುಂದಿನ ಪೀಳಿಗೆಗೆ ಈ ಹಣ್ಣಿನ ಪರಿಚಯವಾಗುತ್ತದೆ.
ಹಲವು ಕಾಯಿಲೆಗಳಿಗೆ ಔಷಧ :
ಈ ಹಣ್ಣನ್ನು ಬೆಲ್ಲದ ಜತೆ ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಅಲ್ಸರ್‌ಗೆ ಇದು ಔಷಧ. ಇದರಲ್ಲಿರುವ ವಿಟಮಿನ್ ಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜತೆಗೆ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಉತ್ತೇಜನ ನೀಡುತ್ತದೆ. ಬೇಸಿಗೆಯಲ್ಲಿ ಈ ಹಣ್ಣಿನ ಪಾನಕ ದೇಹವನ್ನು ತಂಪಾಗಿಸುತ್ತದೆ. ಯುವ ಪೀಳಿಗೆಗೆ ನೈಸರ್ಗಿಕವಾಗಿ ಸಿಗುವ ಔಷಧೀಯ ಗುಣವುಳ್ಳ ಕಾಡು ಹಣ್ಣುಗಳ ಪರಿಚಯವಿಲ್ಲ. ಆದರೀಗ ಮಹತ್ವದ ಅರಿವಿನ ಕೊರತೆಯಿಂದ ಬೆಳವಲ ಮರಗಳು ಕಡಿಮೆಯಾಗುತ್ತಿವೆ. ಸಾಮಾನ್ಯವಾಗಿ ಈ ಹಣ್ಣು 100 ಗ್ರಾಂ ತೂಕ ಹೊಂದಿದ್ದರೆ 18 ಗ್ರಾಂ ಶರ್ಕರ ಪಿಷ್ಟ, 3.7 ಗ್ರಾಂ ಕೊಬ್ಬು 7.1 ಗ್ರಾಂ ಪ್ರೊಟೀನ್, 28 ಗ್ರಾಂ ವಿಟಮಿನ್ ಸಿ. ವಿಟಮಿನ್ ಬಿ ಹಾಗೂ 130 ಮಿಲಿಗ್ರಾಂ ಕ್ಯಾಲ್ಸಿಯಂ ಮತ್ತು ಖನಿಜ ಹೊಂದಿದೆ.
ಬೇಲದ ಹಣ್ಣು ಮನುಷ್ಯರಿಗೆ ಮಾತ್ರವಲ್ಲದೆ ಕೀಟ, ಪಕ್ಷಿ, ಪ್ರಾಣಿಗಳಿಗೆ ಆಹಾರ. ಆಶ್ರಯ ಒದಗಿಸುತ್ತಿದ್ದ ಇಂತಹ ಗಿಡ, ಮರಗಳು ದಿನೇದಿನೆ ಕಣ್ಮರೆಯಾಗುತ್ತಿದ್ದು, ಪ್ರತಿಯೊಬ್ಬರೂ ಸಂರಕ್ಷಿಸಬೇಕು. ಅರಣ್ಯ ಇಲಾಖೆ ಇಂತಹ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸ ಮಾಡಬೇಕು.
-ಕಿರಣ್ ಕುಮಾರ್, ಪರಿಸರ ಪ್ರೇಮಿ
ಔಷಧ ಗುಣ ಹೊಂದಿರುವ ಬೇಲದ ಹಣ್ಣು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಈ ಗಿಡಗಳನ್ನು ಅರಣ್ಯ ಇಲಾಖೆ ಖಾಲಿ ಜಾಗಗಳಲ್ಲಿ ನೆಡುವ ಕೆಲಸ ಮಾಡಬೇಕು. ಜತೆಗೆ ಕಡಿಮೆ ಬೆಳೆಯಲ್ಲಿ ರೈತರಿಗೆ ನೀಡಿ ಈ ಗಿಡ ಮರಗಳನ್ನು ಉಳಿಸುವ ಕೆಲಸ ಮಾಡಲಿ.
-ಎಂ.ಆರ್.ಉಮೇಶ್ ಸೂಲಿಬೆಲೆ, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ತಾಲೂಕು ಅಧ್ಯಕ್ಷ