ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದ ಕೊರಗ ಸಮುದಾಯ

Update: 2024-08-26 13:49 IST
ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದ ಕೊರಗ ಸಮುದಾಯ
  • whatsapp icon

ಕುಂದಾಪುರ: ಜನನ ಪ್ರಮಾಣದಲ್ಲಿ ತೀವ್ರ ಕುಂಠಿತ, ತೀವ್ರವಾಗಿರುವ ಅಪೌಷ್ಟಿಕತೆ, ಹೆಚ್ಚಾಗಿರುವ ಅಕಾಲಿಕ ಮರಣ ಪ್ರಮಾಣದಿಂದ ಸಮುದಾಯವೇ ನಶಿಸುವ ಭೀತಿಯಲ್ಲಿರುವ ಕರಾವಳಿಯ ಮೂಲ ನಿವಾಸಿ ಕೊರಗ ಸಮುದಾಯ ಇದೀಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲೇ ಆರೋಗ್ಯ ವಿಚಾರದಲ್ಲೂ ಎಚ್ಚೆತ್ತುಕೊಂಡು ಮೂರ್ನಾಲ್ಕು ಜಿಲ್ಲೆಗಳ ಸಮುದಾಯದ ತಂಡಗಳು ಒಗ್ಗೂಡಿಕೊಂಡು ಕುಂದಾಪುರದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಆ.25ರ ರವಿವಾರ ಕುಂದಾಪುರ ತಾಲೂಕಿನ ಕುಂಭಾಶಿಯ ಕೊರಗ ಕಾಲನಿ ಸಮೀಪದ ಮಕ್ಕಳ ಮನೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸಮುದಾಯದ ಯುವಕ-ಯುವತಿಯರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಮೂಲ ನಿವಾಸಿಗಳಾಗಿರುವ ಆದಿವಾಸಿ ಬುಡಕಟ್ಟು (ಎಸ್‌ಟಿ) ಜನಾಂಗದ ಕೊರಗ ಸಮುದಾಯ ಮೊದಲಿನಿಂದಲೂ ಶೋಷಿತ, ಅಸ್ಪಶ್ಯ ಸಮಾಜವಾಗಿದೆ. ಶತಶತಮಾನಗಳಿಂದ ಸಮಾಜದಿಂದ ದೂರವಾಗಿ ಕಾಡು, ಹಾಡಿಯಂತಹ ಸ್ಥಳದಲ್ಲೇ ವಾಸಿಸುವ ಮೂಲಕ ಕೂಲಿ, ಬುಟ್ಟಿ ನೇಯುವುದು, ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಾ ಬಂದವರು.

ಸ್ವಾತಂತ್ರ್ಯಾ ನಂತರ ಸರಕಾರಗಳು ಹಾಗೂ ಕೆಲವು ಸರಕಾರೇತರ ಸಂಸ್ಥೆಗಳ ಸತತ ಪ್ರಾಮಾಣಿಕ ಪ್ರಯತ್ನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲದೇ ಹೋದರೂ ಸಣ್ಣ ಪ್ರಮಾಣದಲ್ಲಿ ಮುಖ್ಯವಾಹಿನಿಗೆ ಬರುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ಕ್ರಮೇಣ ಆ ವ್ಯವಸ್ಥೆಯ ಜೊತೆಗೆ ಮಕ್ಕಳನ್ನು ಶಿಕ್ಷಿತರಾಗಿ ಮಾಡು ವಲ್ಲಿ ಸಮುದಾಯದ ಮುಖಂಡರು ಪ್ರಯತ್ನಿಸಿ ಕ್ರೀಡೆ, ಶಿಕ್ಷಣ, ಸಾಮಾಜಿಕ ಚಟುವಟಿಕೆಯಲ್ಲಿ ಕೊರಗ ವಿದ್ಯಾರ್ಥಿಗಳು, ಯುವ ಜನಾಂಗವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು ಆರೋಗ್ಯಕ್ಕೂ ಮಹತ್ವದ ಒತ್ತು ನೀಡುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಕುಂದಾಪುರದಲ್ಲಿ ನಡೆದ ಅವಿಭಜಿತ ದ.ಕ. ಜಿಲ್ಲೆ ಹಾಗೂ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಕೊರಗ ಸಮುದಾಯದ ಯುವಕ-ಯುವತಿಯರ ಕ್ರಿಕೆಟ್ ಪಂದ್ಯಾಟ ‘ಒಟ್ಟಾಮ್ ಬಲ್ಲಾ-2024’ ವೇಳೆ ಸಮಾಜವನ್ನು ಗಟ್ಟಿಗೊಳಿಸುವ ಹಾಗೂ ಆರೋಗ್ಯ ವಿಚಾರಕ್ಕೆ ಹೆಚ್ಚು ಮಹತ್ವ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಸಮುದಾಯದ ನಾಯಕರ ಚಿಂತನೆಯ ಫಲವೇ ಈ ರಕ್ತದಾನ ಶಿಬಿರ.

ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಶ್ಲಾಘನೆ

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಫಿಸೀಶಿಯನ್ ಡಾ.ನಾಗೇಶ್, ಕುಂಭಾಶಿ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ, ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ, ಕುಂಭಾಶಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೋಭಾ, ಜಿಲ್ಲಾ ರಕ್ತನಿಧಿ ವೈದ್ಯಾ ಧಿಕಾರಿ ಡಾ.ವೀಣಾ, ಐಟಿಡಿಪಿ ಅಧಿಕಾರಿ ವಿಶ್ವನಾಥ ಶೆಟ್ಟಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಕೊರಗ ಸಮುದಾಯದಲ್ಲಿ ಮೂಡಿರುವ ಜಾಗೃತಿಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಹಿತ ಕೊರಗ ಶ್ರೇಯೋಭಿವೃದ್ಧಿ ಸಂಘದ ಗಣೇಶ್ ಕುಂದಾಪುರ, ಪರಿಶಿಷ್ಟ ಗೆಳೆಯರ ಬಳಗದ ಸುರೇಂದ್ರ ಮುರ್ಡೇಶ್ವರ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಪ್ರಗತಿಪರ ದಲಿತ ವೇದಿಕೆ ಉತ್ತರ ಕನ್ನಡ-ಶಿರಸಿಯ ಸುಭಾಷ್ ಮಂಡೂರು, ಕೊರಗ ಸಮು ದಾಯದ ಮುಖಂಡರಾದ ಗಣೇಶ್ ಬಾರ್ಕೂರು, ಲಕ್ಷ್ಮಣ ಬೈಂದೂರು, ಶೇಖರ್ ಮರವಂತೆ, ಕುಮಾರದಾಸ್ ಹಾಲಾಡಿ, ಮಕ್ಕಳ ಮನೆಯ ವಿನಿತಾ ಮೊದಲಾದವರು ಉಪಸ್ಥಿತರಿದ್ದರು.

ಕರಾವಳಿಯ ಮೂಲ ನಿವಾಸಿಗಳಾದ ಕೊರಗ ಸಮುದಾಯದಿಂದ ಇದೇ ಮೊದಲ ಬಾರಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ರಕ್ತಕ್ಕೆ ಯಾವುದೇ ಜಾತಿ-ಭೇದವಿಲ್ಲ. ಎಲ್ಲರ ರಕ್ತವೂ ಕೆಂಪು ಬಣ್ಣವಾಗಿದ್ದು, ಗುಂಪುಗಳು ಮಾತ್ರ ಬೇರೆ. ರಕ್ತದಾನದ ಶಿಬಿರದ ಮೂಲಕ ಸಮಾಜವನ್ನು ಸಂಘಟಿಸುವ ಜೊತೆಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಚಿಂತನೆ ನಮ್ಮದು.

-ಗಣೇಶ್ ವಿ. ಕುಂದಾಪುರ, ಅಧ್ಯಕ್ಷರು, ಕುಂದಾಪುರ ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘ

ಕೊರಗ ಸಮುದಾಯದವರು ಬಂದು ರಕ್ತದಾನ ಶಿಬಿರ ಏರ್ಪಡಿಸುವ ಚಿಂತನೆ ವ್ಯಕ್ತಪಡಿಸಿದಾಗ ಸಂತಸವಾಗಿತ್ತು. ಸಹಕಾರ ನೀಡುವುದಾಗಿ ಪೂರ್ವಭಾವಿ ಸಭೆ ಕೂಡ ಕರೆದಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ. ಆರೋಗ್ಯದ ಬಗ್ಗೆ ಅರಿವು ಪಡೆದುಕೊಳ್ಳುವ ಜೊತೆಗೆ ಸಮಾಜದ ಪರವಾಗಿ ಕೆಲಸ ಮಾಡುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ.

-ಡಾ.ಪ್ರೇಮಾನಂದ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ

ಅನ್ನದಾನ, ವಿದ್ಯಾದಾನಕ್ಕಿಂತಲೂ ರಕ್ತದಾನ ಶ್ರೇಷ್ಠವಾದದ್ದು. ಕೊರಗ ಸಮುದಾಯದಿಂದ ಇಂತಹ ಮಹತ್ವದ ಕಾರ್ಯಕ್ರಮ ಆಯೋಜಿಸಿ ಸಮಾಜಕ್ಕೆ ಮಾದರಿಯಾಗಿದೆ. ಜೀವ ಉಳಿಸುವ ಕಾರ್ಯಕ್ಕೆ ಮುಂದಾಗುವ ಇಂತಹ ಸಮಾಜಮುಖಿ ಚಿಂತನೆ ನಿರಂತರವಾಗಿ ಸಮುದಾಯದಿಂದ ನಡೆಯಲಿ. ದೂರದೂರುಗಳಿಂದ ಬಂದು ರಕ್ತದಾನ ಮಾಡಿರುವುದು ಕೊರಗ ಸಮುದಾಯದ ಬದ್ಧತೆಗೆ ಸಾಕ್ಷಿಯಾಗಿದೆ.

-ಡಾ.ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ

59 ಯುನಿಟ್ ರಕ್ತ ಸಂಗ್ರಹ

ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಂಘ, ಪರಿಶಿಷ್ಟ ಗೆಳೆಯರು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಅಜ್ಜರಕಾಡು ಇವರ ಸಹಯೋಗದಲ್ಲಿ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯವರ ಮುತುವರ್ಜಿಯಲ್ಲಿ ಈ ರಕ್ತದಾನ ಶಿಬಿರ ರವಿವಾರ ನಡೆಯಿತು.

ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ಐಟಿಡಿಪಿ) ಉಡುಪಿ, ಹುಭಾಷಿಕ ಕೊರಗರ ಯುವ ಕಲಾ ವೇದಿಕೆ ರಂಗನಕೆರೆ-ಬಾರ್ಕೂರು, ಮಹಾತ್ಮ ಜ್ಯೋತಿ ಬಾಫುಲೆ ಯುವ ವೇದಿಕೆ ಬೈಂದೂರು, ಕೊರಗ ತನಿಯ ಯುವ ಕಲಾ ವೇದಿಕೆ ಮರವಂತೆ ಈ ಪ್ರಯತ್ನಕ್ಕೆ ಸಹಕಾರ ನೀಡಿದೆ. ಕೊರಗ ಸಮುದಾಯದ ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ. ಒಟ್ಟು 59 ಯುನಿಟ್ ರಕ್ತ ಸಂಗ್ರಹವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೀಶ್ ಕುಂಭಾಸಿ

contributor

Similar News