ನ್ಯಾಯ ಸಮ್ಮತ ಚುನಾವಣೆ ನಡೆಯದಿರುವುದೇ 'ಇಂಡಿಯಾ' ಹಿನ್ನಡೆಗೆ ಕಾರಣ

Update: 2024-07-12 06:30 GMT

ಸಸಿಕಾಂತ್‌ ಸೆಂಥಿಲ್‌ (PC:fb/sasikanthsenthil)

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣಾ ರಾಜಕೀಯಕ್ಕೆ ಬಂದು ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ವಿಶೇಷ ಸಂದರ್ಶನದ ಬರಹ ರೂಪ ಇದು.

ವಾ.ಭಾ: 2019ರಲ್ಲಿ ನಾಗರಿಕ ಸೇವೆಗೆ ರಾಜೀನಾಮೆ ನೀಡಿದ ಬಳಿಕ ಸಂಸದರಾಗಿ ಚುನಾಯಿತರಾಗುವವರೆಗಿನ ಅವಧಿಯನ್ನು ಹೇಗೆ ನೋಡುತ್ತೀರಿ?

ಸಸಿಕಾಂತ್: 2019ರಲ್ಲಿ ನಾನು ರಾಜೀನಾಮೆ ನೀಡಿದಾಗ ನನ್ನ ಇಡೀ ಜೀವನ ಒಂದು ಹೋರಾಟ ಆಗಿರಲಿದೆ, ನನ್ನ ಮುಂದೆ ದೊಡ್ಡ ಸವಾಲಿದೆ ಎಂಬುದು ಗೊತ್ತಿತ್ತು. ಆದರೆ, ಅದು ಯಾವ ರೀತಿ ಆಗುತ್ತದೆ ಎಂದು ಗೊತ್ತಿರಲಿಲ್ಲ. ಆ ಸಮಯದಲ್ಲಿ ನನಗೆ ರಾಜಕೀಯಕ್ಕೆ ಬರಬೇಕೆಂಬ ಆಲೋಚನೆಯೂ ಇರಲಿಲ್ಲ. ಎರಡು ಮೂರು ವರ್ಷ ನಾನು ಸಂಘ ಸಂಸ್ಥೆಗಳ ಜೊತೆ ಇದ್ದು ಹೋರಾಟಗಳಲ್ಲಿ ಭಾಗಿಯಾಗಿದ್ದೆ. ಆನಂತರ, ಕಾಂಗ್ರೆಸ್ ಪಕ್ಷಕ್ಕೆ ಸೇರಿ 2024ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಆಲೋಚನೆ ಮಾಡಿದೆ.

ವಾ.ಭಾ: ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿದ್ದರೂ ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ಸಸಿಕಾಂತ್: 2021ರಲ್ಲಿ ದಿಲ್ಲಿಯಲ್ಲಿ ಗಲಭೆಗ ಳಾಯಿತು. ಅದಕ್ಕೆ ಪ್ರೋತ್ಸಾಹ ನೀಡಿದ್ದು ಕೇಂದ್ರದ ಒಬ್ಬ ಸಚಿವ. ನಾನು ದಿಲ್ಲಿಗೆ ಹೋಗಿ ಜನರಿಗೆ ನೆರವು ನೀಡಿದೆ. ಜನಪರವಾಗಿ ಹೋರಾಟ ಮಾಡಲು ಪರ್ಯಾಯ ವೇದಿಕೆ ಬೇಕಿತ್ತು. ಚುನಾವಣಾ ಕಣದಲ್ಲಿ ಈ ಶಕ್ತಿಗಳನ್ನು ಸೋಲಿಸಬೇಕು ಎಂದು ನಿರ್ಧರಿಸಿದೆ. ಸೈದ್ಧಾಂತಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಈ ಶಕ್ತಿಗಳನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯವಿರುವುದರಿಂದ ನಾನೇ ಸ್ವತಃ ಹೋಗಿ ಕಾಂಗ್ರೆಸ್ ಸೇರ್ಪಡೆಯಾದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿದು ಹಲವಾರು ದಶಕಗಳಾಗಿವೆ. ಕಠಿಣ ಪರಿಶ್ರಮ ಹಾಗೂ ನಾಯಕತ್ವವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಯಶಸ್ಸು ಸಿಗುತ್ತದೆ.

ವಾ.ಭಾ: ಸಂಸತ್ ಪ್ರವೇಶ ಮಾಡಿರುವುದು ಹೇಗನಿಸುತ್ತಿದೇ?

ಸಸಿಕಾಂತ್: ಸಂಸತ್‌ನಲ್ಲಿ ಹೋಗಿ ಮಾತನಾಡುವುದು ವಿಭಿನ್ನ ಅನುಭವ. ಬಹಿರಂಗವಾಗಿ ವಿಷಯಗಳನ್ನು ಚರ್ಚೆ ಮಾಡಬಹುದು. ನಾವು ವಿಪಕ್ಷದಲ್ಲಿದ್ದೇವೆ. ನೊಂದವರ, ತುಳಿತಕ್ಕೊಳಗಾದವರ ಧ್ವನಿಯಾಗಿ ಇರುತ್ತೇವೆ. ಕೇಂದ್ರ ಸರಕಾರದ ಜನ ವಿರೋಧಿ ನೀತಿ, ಕಾರ್ಯಕ್ರಮಗಳನ್ನು ವಿರೋಧಿಸುತ್ತೇವೆ. ಜನರನ್ನು ಹೆದರಿಸುವ ರಾಜಕೀಯದ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ.

ವಾ.ಭಾ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಸಾಕಷ್ಟು ಪರಿಶ್ರಮ ಹಾಕಿದರೂ ಬಹುಮತಗಳಿಸಲು ಸಾಧ್ಯವಾಗಿಲ್ಲ ಏಕೆ?

ಸಸಿಕಾಂತ್: ಈ ಚುನಾವಣೆ ನ್ಯಾಯ ಸಮ್ಮತವಾಗಿ ನಡೆದಿಲ್ಲ. ಚುನಾವಣಾ ಪ್ರಕ್ರಿಯೆ ಆರಂಭವಾಗುವ ಎರಡು ವಾರಗಳ ಮುಂಚೆ ಕಾಂಗ್ರೆಸ್ ಪಕ್ಷದ ಪ್ರಮುಖ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಯಿತು. ಸ್ವತಂತ್ರ ಮಾಧ್ಯಮಗಳನ್ನು ಹೊರತುಪಡಿಸಿ ಎಲ್ಲ ಮಾಧ್ಯಮಗಳಲ್ಲೂ ನಮ್ಮ ಧ್ವನಿಗೆ ಅವಕಾಶವಿರಲಿಲ್ಲ. ನಮ್ಮ ಪಕ್ಷದ ಪ್ರಮುಖ ನಾಯಕರ ವಿರುದ್ಧ ಈ.ಡಿ., ಸಿಬಿಐ, ಐಟಿ ಮೊದಲಾದ ಏಜೆನ್ಸಿಗಳ ಮೂಲಕ ದಾಳಿ ನಡೆಸಿದರು. ಚುನಾವಣಾ ಆಯೋಗದಿಂದ ಯಾವುದೇ ನೆರವು ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಚುನಾವಣೆ ಎದುರಿಸಿದೆವು.

ರಾಮಮಂದಿರ, ಅಬ್ ಕಿ ಬಾರ್ 400 ಪಾರ್ ಎಂಬ ಘೋಷಣೆಯೊಂದಿಗೆ ಬಿಜೆಪಿ ಮತಯಾಚನೆ ಮಾಡಿತು. ಈ ಚುನಾವಣೆಯಲ್ಲಿ ಉಳಿಯುವುದೇ ಕಷ್ಟಕರವಾಗಿತ್ತು. ಅಂತಹ ಸ್ಥಿತಿಯಲ್ಲಿಯೂ ನಾವು ಚುನಾವಣೆ ಎದುರಿಸಿ, ಅವರನ್ನು 240ಕ್ಕೆ ನಿಲ್ಲಿಸಿದ್ದು ದೊಡ್ಡ ಸಾಧನೆಯೇ ಸರಿ.

ವಾ.ಭಾ: ಬಿಜೆಪಿ ಸಿದ್ಧಾಂತವನ್ನು ಒಪ್ಪುವವರ ಪ್ರಮಾಣ ಹೆಚ್ಚಾಗುತ್ತಿದೆ ಎಂದು ನಿಮಗೆ ಅನಿಸುವುದಿಲ್ಲವೇ?

ಸಸಿಕಾಂತ್: ಚುನಾವಣೆಗಳಲ್ಲಿ ಬಿಜೆಪಿ ಪಡೆಯುವ ಮತಗಳ ಪ್ರಮಾಣ ಬಹಳ ಕಡಿಮೆ. ಕಾರಣಾಂತರಗಳಿಂದ ಹೆಚ್ಚು ಸ್ಥಾನಗಳನ್ನು ಗಳಿಸುತ್ತಿರಬಹುದು. ಅವರ ಸಿದ್ಧಾಂತದ ವಿರುದ್ಧವಾಗಿ ಹೆಚ್ಚು ಮತಗಳು ಚಲಾವಣೆ ಆಗುತ್ತವೆ. ನಮ್ಮ ದೇಶದಲ್ಲಿ ಫ್ಯಾಶಿಸ್ಟ್ ಸಿದ್ಧಾಂತವನ್ನು ಒಪ್ಪುವ ಜನ ಬಹಳ ಕಡಿಮೆ.

 ವಾ.ಭಾ: ಕಾಂಗ್ರೆಸಿಗರು ಹಿಂದೂ ವಿರೋಧಿಗಳು ಎಂಬ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸಸಿಕಾಂತ್: ನಾವು ಹಿಂದೂಗಳೇ, ಹಿಂದೂಗಳನ್ನು ವಿರೋಧಿಸುತ್ತೇವೆ ಎಂದರೆ ಹೇಗೆ? ಹಿಂದೂ ಬೇರೆ, ಹಿಂದುತ್ವ ಬೇರೆ. ಹಿಂದುತ್ವ ಅನ್ನೋದು ಜನರಲ್ಲಿ ಭಯ ಮೂಡಿಸಲು ಸೃಷ್ಟಿ ಮಾಡಿರುವ ಒಂದು ರಾಜಕೀಯ ದಾಳ. 10 ವರ್ಷ ಬಿಜೆಪಿಯವರು ಈ ಜೋಕ್ ಮಾಡಿದ್ದಾರೆ. ಧರ್ಮಕ್ಕಿಂತ ದೊಡ್ಡ ವಿಷಯ ಏನಿಲ್ಲ ಎಂಬುದು ಅವರ ಪ್ರತಿಪಾದನೆ. ಹಾಗಿದ್ದರೆ ಅಯೋಧ್ಯೆಯಲ್ಲಿ ಯಾಕೆ ಸೋತರು?.

ವಾ.ಭಾ: ವಿದೇಶಗಳಲ್ಲಿಯೂ ಬಲಪಂಥೀಯ ಪಕ್ಷಗಳು ಅಧಿಕಾರ ಕಳೆದುಕೊಳ್ಳುತ್ತಿವೆ, ಭಾರತದ ಮೇಲೂ ಇದರ ಪರಿಣಾಮ ಬಿರಬಹುದೇ?

ಸಸಿಕಾಂತ್: ಭಾರತವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಜನ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲರೇ? ಕಳೆದ 10 ವರ್ಷಗಳಲ್ಲಿ ಸುಮಾರು 1.60 ಕೋಟಿ ಉದ್ಯೋಗಗಳು ನಷ್ಟವಾಗಿವೆ.

ನೋಟು ಅಮಾನ್ಯೀಕರಣ, ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಿದೆ. ಬಲಪಂಥೀಯರಿಗೆ ಸಂತೋಷ ಗೊತ್ತಿಲ್ಲ, ನಗು ಗೊತ್ತಿಲ್ಲ. ದ್ವೇಷ, ಕೋಪ, ಹೊಡೆದಾಟ ಮಾತ್ರ ಅವರ ಆಲೋಚನೆ, ಎಷ್ಟು ಅಂತ ದೇಶ ಇದನ್ನು ಸಹಿಸುತ್ತದೆ. ಅದೇ ರೀತಿ ಜಾಗತಿಕವಾಗಿಯೂ ಜನರು ಚಿಂತನೆ ನಡೆಸುತ್ತಿದ್ದಾರೆ.

ವಾ.ಭಾ: ಸಿದ್ದರಾಮಯ್ಯ ಸರಕಾರ ನಡೆಸಿರುವ ಜಾತಿ ಜನಗಣತಿ ವರದಿ ಬಗ್ಗೆ ಯಾಕೆ ತೀರ್ಮಾನ ಆಗುತ್ತಿಲ್ಲ?

ಸಸಿಕಾಂತ್: ಜಾತಿ ಜನಗಣತಿ ಮಾಡಿರುವ ವಿಧಾನ ಸರಿಯಿಲ್ಲ ಎಂಬ ದೂರುಗಳು ಬಂದಿವೆ. ಕೇಂದ್ರ ಸರಕಾರವು ಜಾತಿ ಜನಗಣತಿಯನ್ನು ಮಾಡಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅದನ್ನು ಹಾಗೆ ಇಡಲಾಗಿದೆ.

ಜಾತಿ ಜನಗಣತಿಯನ್ನು ಸರಿಯಾದ ರೀತಿಯಲ್ಲಿ ಮಾಡುವುದು ಬೇರೆ, ಮಾಡಲೇಬಾರದು ಎಂದು ಪ್ರತಿಪಾದಿಸುವುದು ಬೇರೆ. ಬಿಜೆಪಿಯವರಿಗೆ ಇರುವ ಭಯ ಏನೇಂದರೆ ದಲಿತರು, ಹಿಂದುಳಿದವರಿಗೆ ಅವರ ಜನಸಂಖ್ಯೆ ತಿಳಿದರೆ ಅವರ ಬೇಡಿಕೆಗಳು ಹೆಚ್ಚಲಿವೆ. ಅದನ್ನು ಈಡೇರಿಸುವುದು ಹೇಗೆ ಅನ್ನೋದು. ಬಿಜೆಪಿಯವರು ಸಮಸ್ತ ಹಿಂದೂ ಸಮಾಜ ಅಲ್ಲ, ಅವರು ಹಿಂದೂ ಸಮಾಜದಲ್ಲಿರುವ ಮೈಕ್ರೋ ಮೈನಾರಿಟಿ.

ವಾ.ಭಾ: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಲಿದೆಯೇ?

ಸಸಿಕಾಂತ್: ಕ್ಷೇತ್ರಗಳ ಪುನರ್ ವಿಂಗಡೆ ಕುರಿತು ಈಗಿರುವ ಮಾದರಿಯ ಬದಲಾಗಿ ಬೇರೆ ಮಾದರಿಯನ್ನು ಅನುಸರಿಸಿದರೆ ನಮಗೆ ನ್ಯಾಯ ಸಿಗುವ ಸಾಧ್ಯತೆಯಿದೆ. ಬಿಜೆಪಿ ಪಕ್ಷಕ್ಕೆ ಒಕ್ಕೂಟ ವ್ಯವಸ್ಥೆಯ ವ್ಯಾಖ್ಯಾನವೇ ಆರ್ಥ ಆಗಿಲ್ಲ. ಅವರಿಗೆ ಒಬ್ಬ ಸುಪ್ರೀಂ ನಾಯಕ ಇರಬೇಕು. ಆತ ಹೇಳಿದಂತೆ ಎಲ್ಲವೂ ನಡೆಯಬೇಕು. ಒಂದೊಂದು ರಾಜ್ಯವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ ಅನ್ನೋದು ಅವರಿಗೆ ಅರ್ಥ ಆಗಲ್ಲ. ಬಹು ಸಂಸ್ಕೃತಿ ನಾಶ ಮಾಡಿ ‘ಯುನೈಟೆಡ್ ಇಂಡಿಯಾ’ ಬದಲು ‘ಒನ್ ಇಂಡಿಯಾ’ ಮಾಡಲು ಹೊರಟಿದ್ದಾರೆ.

 ವಾ.ಭಾ: ನೀಟ್ ಪರೀಕ್ಷೆಯನ್ನು ತಮಿಳುನಾಡು ಆರಂಭದಲ್ಲೇ ವಿರೋಧ ಮಾಡಿದ್ದು ಏಕೆ?

ಸಸಿಕಾಂತ್: ನೀಟ್ ಅನ್ನು ತಮಿಳುನಾಡು ಯಾಕೆ ವಿರೋಧ ಮಾಡಿತು ಎಂದು ಯಾರು ಅರ್ಥ ಮಾಡಿಕೊಂಡಿಲ್ಲ. ಇವತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಎಲ್ಲರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ತಮಿಳುನಾಡು ಸರಕಾರದ ಆದ್ಯತೆ ಸಾಮಾಜಿಕ ನ್ಯಾಯ. ಅದರಲ್ಲಿ ಶಿಕ್ಷಣ ತುಂಬಾ ಮಹತ್ವದ್ದು. ವೈದ್ಯಕೀಯ ಶಿಕ್ಷಣವನ್ನು ಕೇಂದ್ರ ಸರಕಾರ ನಿಯಂತ್ರಿಸಿದರೆ ಗ್ರಾಮೀಣ ಹಾಗೂ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ನನ್ನ ಭಾಷೆ, ಪ್ರದೇಶದ ಬದಲಾಗಿ ಬೇರೆ ಭಾಷೆ, ಪ್ರದೇಶದ ಆಧಾರದ ಮೇಲೆ ನನ್ನ ಅರ್ಹತೆಯನ್ನು ಅಳೆಯಲು ಸಾಧ್ಯವೇ? ನೀಟ್ ಪರೀಕ್ಷೆಯನ್ನು ನಡೆಸುವ ಎನ್‌ಟಿಎ ಎಂಬ ಏಜೆನ್ಸಿ ಸರಕಾರದ್ದಲ್ಲ. ಅದೊಂದು ಸೊಸೈಟಿ. ಅದರಲ್ಲಿ ಏನಿದೇ, ಯಾರಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇಂತಹ ಸೊಸೈಟಿಗೆ ಪೋಷಕರು ತಮ್ಮ ಮಕ್ಕಳ ಭವಿಷ್ಯ ಒಪ್ಪಿಸಲು ಸಿದ್ಧರಾಗುತ್ತಾರಾ? ಹೇಳಿ.

 ವಾ.ಭಾ: ತಮಿಳುನಾಡಿನಲ್ಲಿ ಬಿಜೆಪಿಯ ಮತಗಳಿಕೆ ಪ್ರಯಾಣ ಹೆಚ್ಚಾಗುತ್ತಿದೆಯಲ್ಲ?

ಸಸಿಕಾಂತ್: ಪ್ರಾದೇಶಿಕವಾಗಿ ಪ್ರಬಲವಾಗಿರುವ ಪಕ್ಷಗಳೊಂದಿಗೆ ಕೈ ಜೋಡಿಸಿಕೊಂಡು ಚುನಾವಣೆ ಎದುರಿಸಿದ್ದಾರೆ. ಆ ಪಕ್ಷಗಳಿಗೆ ಬಂದಿರುವ ಮತಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಸಂಘಟನೆ ಇಲ್ಲ. ಕೆಲವು ಮೇಲ್ಜಾತಿಯವರು ಬಿಜೆಪಿಯಲ್ಲಿದ್ದಾರೆ ಅಷ್ಟೇ.

ವಾ.ಭಾ: ನರೇಂದ್ರ ಮೋದಿ 3.0 ಸರಕಾರದಲ್ಲಿ ಏನು ಬದಲಾವಣೆ ಆಗಿದೆ?

ಸಸಿಕಾಂತ್: ಯಾವ ಬದಲಾವಣೆಯೂ ಆಗಿಲ್ಲ. ಸಮ್ಮಿಶ್ರ ಸರಕಾರ ನಡೆಸಲು ಅವರಿಗೆ ಅನುಭವ ಇಲ್ಲ. ಬಹಳ ಬೇಗವೇ ಅವರಿಗೆ ಬೆಂಬಲ ನೀಡಿರುವವರು ಹೊರಗೆ ಬರುತ್ತಾರೆ. ಈ ಸರಕಾರ ಬಹಳ ಕಾಲ ನಡೆಯುವುದಿಲ್ಲ. ನರೇಂದ್ರ ಮೋದಿಯ ಬಗ್ಗೆ ಮಾಧ್ಯಮಗಳಲ್ಲಿ ಬಹಳ ಪ್ರಚಾರ ಮಾಡಲಾಗಿತ್ತು. ಆದರೆ, ಸಂಸತ್‌ನ ಒಳಗೆ 56 ಇಂಚು ಎದೆಯ ವ್ಯಕ್ತಿ ಕುಬ್ಜರಾಗಿ ಕಂಡರು. ಅವರ ಜನಪ್ರಿಯತೆ ಕಡಿಮೆ ಅಲ್ಲ, ಖಾಲಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ

contributor

Contributor - ಬರಹ ರೂಪ: ಅಮ್ಜದ್ ಖಾನ್ ಎಂ.

contributor

Similar News