ಉಡುಪಿ-ಬೈಂದೂರು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಆಗರ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ದಶಕಗಳ ಹಿಂದೆ ಪ್ರಾರಂಭಗೊಂಡು ಇನ್ನೂ ಮುಂದುವರಿದಿದ್ದು, ಸಾಕಷ್ಟು ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿದೆ. ಸುರತ್ಕಲ್-ಕುಂದಾಪುರ ಹಾಗೂ ಕುಂದಾಪುರ-ಬೈಂದೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಸದ್ಯಕ್ಕೆ ಮುಕ್ತಾಯಗೊಳ್ಳುವಂತೆ ಕಾಣಿಸುತ್ತಿಲ್ಲ. ಸಂತೆಕಟ್ಟೆಯ ಅಂಡರ್‌ಪಾಸ್ ಕಾಮಗಾರಿ ಇದಕ್ಕೊಂದು ಸ್ಪಷ್ಟ ಉದಾಹರಣೆಯಾಗಿದೆ. ಅಂಬಲಪಾಡಿ ಹಾಗೂ ಕಟಪಾಡಿ ಬೈಪಾಸ್‌ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಈ ನಡುವೆ ಸರ್ವೀಸ್ ರಸ್ತೆ ಗೊಂದಲ ಸಹ ನಿವಾರಣೆಯಾಗಿಲ್ಲ.
ಹೆದ್ದಾರಿ ಸಂಚಾರ ದುಸ್ತರ: ಉಡುಪಿಯಿಂದ ಕುಂದಾಪುರ ತನಕ ಒಂದು ಗುತ್ತಿಗೆ ಕಂಪೆನಿ ರಸ್ತೆ ಕಾಮಗಾರಿ ನಡೆಸಿ ನಿರ್ವಹಣೆ ಮಾಡುತ್ತಿದ್ದು, ಕುಂದಾಪುರದಿಂದ ಬೈಂದೂರು-ಗೋವಾ ತನಕ ಇನ್ನೊಂದು ಕಂಪೆನಿ ಕಾಮಗಾರಿ ಗುತ್ತಿಗೆ ಪಡೆದಿದೆ. ಜಿಲ್ಲಾದ್ಯಂತ ಕುಂದಾಪುರ ಸಹಿತ ಹಲವೆಡೆ ಸರ್ವೀಸ್ ರಸ್ತೆ ನಿರ್ಮಾಣ ನಾಗರಿಕರ ಬೇಡಿಕೆಯಂತೆ ಆಗಿಲ್ಲ. ಸರ್ವೀಸ್ ರಸ್ತೆಯಲ್ಲೂ ಮಳೆ ನೀರು ನಿಂತು ಕೃತಕ ಕೆರೆ ಸೃಷ್ಟಿಯಾಗುತ್ತಿದೆ. ಅಲ್ಲಲ್ಲಿ ಅವೈಜ್ಞಾನಿಕ ಡಿವೈಡರ್ ತೆರೆದಿರುವುದು, ಹೆದ್ದಾರಿ ದೀಪವಿಲ್ಲದೆ ರಾತ್ರಿ ವೇಳೆ ಸಂಚಾರ ತ್ರಾಸದಾಯಕ.
ಸಾಸ್ತಾನದಿಂದ ಕುಂದಾಪುರದ ವರೆಗೆ ಹೆದ್ದಾರಿಯ ಹೊಂಡ-ಗುಂಡಿಗಳು ವಾಹನ ಸವಾರರಿಗೆ ಅಸಹನೀಯವಾಗಿದೆ. ಬೈಂದೂರು ಹೆದ್ದಾರಿಯಂತೂ ಲಘು ವಾಹನಗಳು ತೇಲಾಡುತ್ತಾ ಹೋದಂತೆ ಅನುಭವಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಯಿದ್ದರೂ ಟೋಲ್ ಸಂಗ್ರಹದಲ್ಲಿ ಮಾತ್ರ ಯಾವುದೇ ರಿಯಾಯಿತಿ ಇಲ್ಲ, ಸ್ಥಳೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪವಿದೆ.
ಬ್ಯಾರಿಕೇಡ್ ಅವಾಂತರಕ್ಕೆ ಸವಾರರು ಆಕ್ರೋಶ: ರಾ.ಹೆದ್ದಾರಿಯನ್ನು ಬಳಸುವ ವಾಹನ ಸವಾರರಿಗೆ ಈ ಎಲ್ಲಾ ಅಧ್ವಾನಗಳು ಸಾಲದೆಂಬಂತೆ ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆ ಕೂಡುವಲ್ಲಿ ಹಾಗೂ ಡಿವೈಡರ್ ಇರುವಲ್ಲಿ ಬ್ಯಾರಿಕೇಡ್ ಅಳವಡಿಕೆ ಸಾಮಾನ್ಯವಾಗಿದೆ. ವಾಹನಗಳ ವೇಗ ನಿಯಂತ್ರಣಕ್ಕೆ ಇದು ಆವಶ್ಯಕ ಹೌದು. ಆದರೆ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ರೀತಿಯಲ್ಲಿ ಬ್ಯಾರಿಕೇಡ್‌ಗಳು ಹೆದ್ದಾರಿಯಲ್ಲಿ ಅಳವಡಿಕೆ ಆಗುತ್ತಿಲ್ಲ. ಅಲ್ಲದೆ, ಬ್ಯಾರಿಕೇಡ್‌ಗಳನ್ನು ಜಾಹೀರಾತುಗಳೇ ಆವರಿಸಿರುವ ಕಾರಣ ಸವಾರರಿಗೆ ಎದುರುಗಡೆಯ ವಾಹನಗಳು ಸರಿಯಾಗಿ ಗೋಚರವಾಗುವುದಿಲ್ಲ. ವಿಪರೀತ ಮಳೆ ಸಮಯ, ರಾತ್ರಿ ವೇಳೆ ಇಂತಹ ಬ್ಯಾರಿಕೇಡ್‌ಗಳಿಂದ ವಾಹನ ಸವಾರರು ಗೊಂದಲಕ್ಕೀಡಾಗಿ ಅಪಘಾತಕ್ಕೀಡಾಗುತ್ತಿವೆ. ಎರಡು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ಕಾರೊಂದು ಪಲ್ಟಿಯಾದ ಘಟನೆ ಇದಕ್ಕೆ ತಾಜಾ ದೃಷ್ಟಾಂತ. ಪೊಲೀಸ್ ಇಲಾಖೆ ಬ್ಯಾರಿಕೇಡ್‌ಗಳನ್ನು ಹೆದ್ದಾರಿಯಲ್ಲಿ ಕ್ರಮಬದ್ಧವಾಗಿ, ವೈಜ್ಞಾನಿಕ ಅಳವಡಿಸಿದರೆ ಅಪಘಾತ ನಿಯಂತ್ರಣ ಸಾಧ್ಯ ಎನ್ನುವುದು ವಾಹನ ಸವಾರರ ಅಭಿಪ್ರಾಯ.
‘ಸರ್ವೀಸ್ ರಸ್ತೆಯು ಹೆದ್ದಾರಿ ಸೇರುವಲ್ಲಿ ರಕ್ಷಣೆಗೆಂದು ನಿಲ್ಲಿಸುವ ಈ ಬ್ಯಾರಿಕೇಡ್‌ಗಳು ಈಗ ಜಾಹೀರಾತು ಫಲಕಗಳಾಗಿ ಬದಲಾಗಿರುವುದು ದುರದೃಷ್ಟಕರ. ರಸ್ತೆ ದಾಟುವವರಿಗೆ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳನ್ನು ಈ ಬೋರ್ಡ್‌ಗಳು ಮರೆಮಾಚುತ್ತವೆ. ಪೊಲೀಸರು ಬ್ಯಾರಿಕೇಡ್ ಇರಿಸುವುದು ತಪ್ಪಲ್ಲ, ಆದರೆ ಅವುಗಳನ್ನು ಕ್ರಮಬದ್ಧವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು.
-ಗಣೇಶ್ ಮೆಂಡನ್, ಸಾಮಾಜಿಕ ಕಾರ್ಯಕರ್ತ ಕುಂದಾಪುರ
ಟೋಲ್ ಸಂಗ್ರಹಿಸಿ ಹೆದ್ದಾರಿ ನಿರ್ವಹಿಸುತ್ತಿರುವ ಗುತ್ತಿಗೆ ಕಂಪೆನಿಗೆ ಪ್ರಾಯೋಜಕರನ್ನು ಪಡೆಯದೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಸಾಧ್ಯವಿಲ್ಲವೇ?. ಹೆದ್ದಾರಿ ಯಲ್ಲಿ ಸಾಗುವ ವಾಹನ ಸವಾರರು ಯೂ ಟರ್ನ್‌ಗಳಲ್ಲಿ ಈ ಗೊಂದಲದ ಬ್ಯಾರಿಕೇಡ್‌ಗಳನ್ನು ದಾಟಲು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಬೇಕು. ರಾತ್ರಿಯಲ್ಲಂತೂ ಅತೀ ಎಚ್ಚರ ವಹಿಸಬೇಕು. ಜಾಹೀರಾತು ಪ್ರಾಯೋಜಕರು ಅನಿವಾರ್ಯ ಎಂದೆನಿಸಿ ದ್ದಲ್ಲಿ ಅವರ ಪ್ರಚಾರಕ್ಕೆ ಬೇರೆ ವ್ಯವಸ್ಥೆ ಮಾಡುವುದು ಉತ್ತಮ. ಒಟ್ಟಾರೆ ವಾಹನ ಸವಾರರ ಸುರಕ್ಷತೆ ಮುಖ್ಯ. ಈ ಬಗ್ಗೆ ಜಿಲ್ಲೆಯಲ್ಲಿ ಪೊಲೀಸರು ಅಗತ್ಯ ಕ್ರಮ ವಹಿಸಬೇಕು.
-ಜೋಯ್ ಜೆ. ಕರ್ವಾಲೋ, ಸಾಮಾಜಿಕ ಕಾರ್ಯಕರ್ತ ಕುಂದಾಪುರ.