ಈ ಚುನಾವಣೆ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಇನ್ನೊಂದು ಚಳವಳಿಯಾಗಿದೆ : ಪ್ರೊ. ಎಂ.ವಿ. ರಾಜೀವ್ ಗೌಡ

10 ವರ್ಷದಲ್ಲಿ ಏನನ್ನೂ ಮಾಡದ ಬಿಜೆಪಿ ಸರಕಾರ ಈಗ ನಡುಗುತ್ತಿದೆ. ಬೆಲೆಯೇರಿಕೆ, ನಿರುದ್ಯೋಗ, ಮಣಿಪುರ ಸಂಘರ್ಷ ಇವೇ ಅವರ ಕೊಡುಗೆಗಳು. ಕರ್ನಾಟಕಕ್ಕೆ ಏನು ಕೊಟ್ಟರು? ನಮಗೆ ಹಣಕಾಸು ಆಯೋಗದಿಂದ ಏನು ಬರಬೇಕಿತ್ತೋ ಅದನ್ನೂ ಕೊಟ್ಟಿಲ್ಲ. ಮಾಡಿದ್ದು ಬರೀ ಅನ್ಯಾಯ. ಡಿಮಾನಿಟೈಸೇಷನ್‌ನಂಥ ಎಷ್ಟೆಲ್ಲ ತಪ್ಪುಗಳನ್ನು ಮಾಡಿರುವುದು ಅವರಿಗೇ ಗೊತ್ತಿದೆ. ಒಂದು ಕಡೆ ನಾವು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನ್ನುತ್ತಾರೆ. ಇನ್ನೊಂದು ಕಡೆಯಿಂದ 83 ಕೋಟಿ ಜನರಿಗೆ ಉಚಿತ ಪಡಿತರವನ್ನು ಅವರೇ ಕೊಡುತ್ತಾರೆ. ಇಂಥ ಸ್ಥಿತಿಯಲ್ಲಿ ಹೆದರುತ್ತಿರುವ ಅವರು ಏನಾದರೂ ಮಾಡಿ, ಹುಕ್ ಆರ್ ಬೈ ಕ್ರುಕ್ ಎಂದು ಇಂಗ್ಲಿಷಿನಲ್ಲಿ ಹೇಳುವಂತೆ ವಿಪಕ್ಷಗಳನ್ನು ಹೇಗಾದರೂ ಹಣಿಯುವುದರಲ್ಲಿ ತೊಡಗಿದ್ದಾರೆ. ಆದರೆ, ನಾವ್ಯಾರೂ ಹೆದರುತ್ತಿಲ್ಲ. ನಾವು ನ್ಯಾಯಾಲಯದಲ್ಲಿ ಹೋರಾಡಲು ತಯಾರಾಗಿದ್ದೇವೆ. ಬಿಜೆಪಿ ಸರಕಾರದ ವಿದಾಯ ಯಾನ ಕರ್ನಾಟಕದಿಂದಲೇ ಶುರುವಾಗಿದೆ.

Update: 2024-04-05 07:13 GMT

ಶಿಕ್ಷಣ, ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ, ಮಾಜಿ ರಾಜ್ಯಸಭಾ ಸದಸ್ಯ ಪ್ರೊ. ಎಂ.ವಿ. ರಾಜೀವ್ ಗೌಡ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಾಜ್ಯದ ಹಿತ ಕಾಯುವಲ್ಲಿ ಬಿಜೆಪಿಯ ವೈಫಲ್ಯ ಹಾಗೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಯಾವ ಕಾರಣಕ್ಕಾಗಿ ಜನತೆ ಮತ ನೀಡಬೇಕೆಂಬುದನ್ನು ‘ವಾರ್ತಾಭಾರತಿ’ಯ ಜೊತೆ ಹಂಚಿಕೊಂಡಿದ್ದಾರೆ.

► ರಾಜ್ಯಸಭಾ ಸದಸ್ಯರಾಗಿದ್ದ ಮತ್ತು ಶಿಕ್ಷಣ, ಆಡಳಿತ ಮೊದಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ನಿಮಗೆ ಈ ಹೋರಾಟದ ರಾಜಕೀಯ, ಸಕ್ರಿಯ ರಾಜಕಾರಣ ಈಗಿನ ಸಂದರ್ಭದಲ್ಲಿ ಯಾಕೆ ಬೇಕು ಎನ್ನಿಸಿತು?

ರಾಜೀವ್ ಗೌಡ: ಮೊದಲಿಂದಲೂ ಸಕ್ರಿಯ ರಾಜಕಾರಣದಲ್ಲಿಯೇ ಆಸಕ್ತಿ ಇರುವವನು ನಾನು. ನನ್ನ ಸ್ಫೂರ್ತಿ ನನ್ನ ಕುಟುಂಬದಿಂದ ಬಂದಿದ್ದು. ನಮ್ಮ ದೊಡ್ಡಪ್ಪ ಎಂ.ವಿ. ಕೃಷ್ಣಪ್ಪನವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಕೇಂದ್ರ ಮಂತ್ರಿಯಾಗಿದ್ದರು. ಇದೇ ಬೆಂಗಳೂರು ಉತ್ತರ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಆಗ ಹೊಸಕೋಟೆ ಎಂದು ಹೆಸರಿತ್ತು. ನಮ್ಮ ತಂದೆ ಎಂ.ವಿ. ವೆಂಕಟ್ಟಪನವರು ವಿಧಾನಸಭಾಧ್ಯಕ್ಷರಾಗಿದ್ದರು. ಪರಿಷತ್ ಸಭಾಪತಿಯಾಗಿದ್ದರು. ಹೀಗೆ ಸಕ್ರಿಯ ರಾಜಕಾರಣದ ಹಿನ್ನೆಲೆಯೇ ಇತ್ತು.

► ರಾಜ್ಯಸಭೆ, ಪರಿಷತ್ತು ಇವೆಲ್ಲದರ ವಿಚಾರವಾಗಿ, ಹಿಂಬಾಗಿಲ ರಾಜಕಾರಣ ಎಂದು ಕರೆಯಲಾಗುತ್ತದೆ. ಚುನಾವಣಾ ರಾಜಕೀಯಕ್ಕೆ ಬರುವುದು ಬಹಳ ತಡವಾಯಿತೇ?

ರಾ.ಗೌ: ಹತ್ತಿಪ್ಪತ್ತು ವರ್ಷ ತಡವಾಯಿತು ಎಂದು ನಾನೇ ಹೇಳುತ್ತೇನೆ. ಮೊದಲೇ ಅವಕಾಶ ಸಿಕ್ಕಿದ್ದಿದ್ದರೆ ಎಷ್ಟೆಲ್ಲ ಸಾಧಿಸಬಹುದಿತ್ತಲ್ಲ ಎಂದು ಅನ್ನಿಸುತ್ತದೆ. ಆದರೂ ಹೈಕಮಾಂಡ್ ಮತ್ತು ಸಿದ್ದರಾಮಯ್ಯನವರು, ಡಿ.ಕೆ. ಶಿವಕುಮಾರ್ ಎಲ್ಲರೂ ಮನಸ್ಸು ಮಾಡಿ ಈ ಅವಕಾಶ ಕೊಟ್ಟಿದ್ದಾರೆ. ಸೂಕ್ತ ಅಭ್ಯರ್ಥಿ ಎಂಬ ಪ್ರತಿಕ್ರಿಯೆ ಎಲ್ಲರಿಂದ ಬರುತ್ತಿದೆ. ಯಾವಾಗ ಅವಕಾಶ ಸಿಗುತ್ತದೆಯೋ ಆಗ ಉಪಯೋಗಿಸಬೇಕು, ಈ ಸಂದರ್ಭದಲ್ಲಿ ಇದು ಬಹಳ ಮುಖ್ಯ. ಯಾಕೆಂದರೆ ನಮ್ಮ ದೇಶ, ಪ್ರಜಾಪ್ರಭುತ್ವ, ಸಂವಿಧಾನ ಎಲ್ಲವೂ ಅಪಾಯದಲ್ಲಿದೆ. ಈ ಪರಿಸ್ಥಿತಿಯಲ್ಲಿ ನಾನು ಏಕೆ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದೇನೆ ಎಂದರೆ, ನಮ್ಮ ದೊಡ್ಡಪ್ಪ ಮತ್ತು ತಂದೆಯವರ ಕಾಲದಲ್ಲಿ ಬೇರೆ ಥರದ ಸ್ಯಾತಂತ್ರ್ಯ ಹೋರಾಟ ಇತ್ತು. ಇದು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಇನ್ನೊಂದು ಚಳವಳಿ. ಅದಕ್ಕಾಗಿ ನಾನು ಕಣಕ್ಕಿಳಿದಿದ್ದೇನೆ. ಬೇಕೆಂದರೆ ರಾಜ್ಯಸಭಾ ಸೀಟು ಸಿಗುತ್ತಿತ್ತು. ನಾನು ಕೇಳಲಿಲ್ಲ. ಇಲ್ಲಿಂದ ಗೆದ್ದು ಬರುತ್ತೇನೆ. ಆ ಛಲ ಇಟ್ಟುಕೊಂಡು ಮುಂದೆ ಬಂದಿದ್ದೇನೆ.

► ಈ ಹತ್ತು ವರ್ಷಗಳಲ್ಲಿ ಸಂವಿಧಾನ ಅಷ್ಟೊಂದು ದುರ್ಬಲ ವಾಗಿದೆಯೇ? ಅದನ್ನು ತಡೆಯುವಲ್ಲಿ ನಿಮ್ಮ ಪ್ರಯತ್ನವೇನು?

ರಾ.ಗೌ: ನಾನು ಸಂಸತ್ತಿನಲ್ಲಿ ವಿರೋಧ ಪಕ್ಷದಲ್ಲಿದ್ದು ಆರು ವರ್ಷ ಸಂವಿಧಾನ ದುರ್ಬಲಗೊಳಿಸುವ ಪ್ರಯತ್ನವನ್ನು ಬಹಳ ಆಕ್ರಮಣಕಾರಿಯಾಗಿ ವಿರೋಧಿಸಿದ್ದೇನೆ. ಏನಾಗಿದೆ ಎಂದರೆ, ಆದಾಯ ತೆರಿಗೆ ಇಲಾಖೆ ವಿಚಾರವನ್ನೇ ತೆಗೆದುಕೊಳ್ಳಿ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್. ತೆರಿಗೆ ಫೈಲಿಂಗ್‌ನಲ್ಲಿನ ಏನೋ ಸಣ್ಣ ವ್ಯತ್ಯಾಸವಾಗಿರುವುದಕ್ಕೆ ಸಾವಿರ ಕೋಟಿ ರೂ. ದಂಡ ಹಾಕುತ್ತದೆ. ಯಾಕೆ? ಚುನಾವಣೆ ಹೊತ್ತಿನಲ್ಲಿ ಪೈಪೋಟಿಯೇ ಇರಕೂಡದು ಎಂದು ಕಾಂಗ್ರೆಸ್ ಪಕ್ಷವನ್ನು ದಮನಿಸುವುದಕ್ಕೆ, ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ. ಜನರಿಗೂ ಇದೆಲ್ಲ ಕಾಣಿಸುತ್ತಿದೆ. ಹೀಗೆಲ್ಲ ಮಾಡಿದಾಗ ಇದು ನಿಜವಾಗಿಯೂ ಪ್ರಜಾಪ್ರಭುತ್ವಕ್ಕೆ ಅಪಾಯ.

► ಅಷ್ಟು ದೊಡ್ಡ ದಂಡ ಹಾಕುತ್ತದೆ ಎಂದಾದರೆ ಇಲ್ಲಿ ಲೋಪದೋಷಗಳೂ ದೊಡ್ಡ ಮಟ್ಟದಲ್ಲಿಯೇ ಆಗಿರಬೇಕಲ್ಲ?

ರಾ.ಗೌ: ಇಲ್ಲ. ಬಿಜೆಪಿಯವರ ಆರೋಪದಲ್ಲಿಯೂ 40 ಲಕ್ಷದ ವಿಚಾರಕ್ಕೆ ಈ ಕ್ರಮ ಎಂಬುದು ಇದೆ. ತಮಗೆ ತೋಚಿದಷ್ಟು ದಂಡ ಹಾಕುತ್ತೇವೆ ಎಂಬ ಧೋರಣೆ. ಮೇಲಿನಿಂದ ಆದೇಶ ಬಂದಿರುತ್ತದೆ.

► ಸಿಪಿಐಗೂ 10 ಕೋಟಿ ದಂಡ ಹಾಕಿದ್ದಾರೆ?

ರಾ.ಗೌ: ಅದು ಇನ್ನೊಂದು ಪ್ರತಿಪಕ್ಷ. ವಿಪಕ್ಷಗಳನ್ನು ಗುರಿ ಮಾಡಲಾಗುತ್ತಿದೆ. ಅರವಿಂದ ಕೇಜ್ರಿವಾಲ್ ಅವರನ್ನು ನೇರ ಸಾಕ್ಷ್ಯ ಇಲ್ಲದೆ ಜೈಲಿಗೆ ಹಾಕಿದ್ದಾರೆ. 10 ವರ್ಷದಲ್ಲಿ ಏನನ್ನೂ ಮಾಡದ ಈ ಸರಕಾರ ಈಗ ನಡುಗುತ್ತಿದೆ. ಬೆಲೆಯೇರಿಕೆ, ನಿರುದ್ಯೋಗ, ಮಣಿಪುರ ಸಂಘರ್ಷ ಇವೇ ಅವರ ಕೊಡುಗೆಗಳು. ಕರ್ನಾಟಕಕ್ಕೆ ಏನು ಕೊಟ್ಟರು? ನಮಗೆ ಹಣಕಾಸು ಆಯೋಗದಿಂದ ಏನು ಬರಬೇಕಿತ್ತೋ ಅದನ್ನೂ ಕೊಟ್ಟಿಲ್ಲ. ಮಾಡಿದ್ದು ಬರೀ ಅನ್ಯಾಯ. ಡಿಮಾನಿಟೈಸೇಷನ್‌ನಂಥ ಎಷ್ಟೆಲ್ಲ ತಪ್ಪುಗಳನ್ನು ಮಾಡಿರುವುದು ಅವರಿಗೇ ಗೊತ್ತಿದೆ. ಒಂದು ಕಡೆ ನಾವು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನ್ನುತ್ತಾರೆ. ಇನ್ನೊಂದು ಕಡೆಯಿಂದ 83 ಕೋಟಿ ಜನರಿಗೆ ಉಚಿತ ಪಡಿತರವನ್ನು ಅವರೇ ಕೊಡುತ್ತಾರೆ. ಇಂಥ ಸ್ಥಿತಿಯಲ್ಲಿ ಹೆದರುತ್ತಿರುವ ಅವರು ಏನಾದರೂ ಮಾಡಿ, ಹುಕ್ ಆರ್ ಬೈ ಕ್ರುಕ್ ಎಂದು ಇಂಗ್ಲಿಷಿನಲ್ಲಿ ಹೇಳುವಂತೆ ವಿಪಕ್ಷಗಳನ್ನು ಹೇಗಾದರೂ ಹಣಿಯುವುದರಲ್ಲಿ ತೊಡಗಿದ್ದಾರೆ. ಆದರೆ, ನಾವ್ಯಾರೂ ಹೆದರುತ್ತಿಲ್ಲ. ನಾವು ನ್ಯಾಯಾಲಯದಲ್ಲಿ ಹೋರಾಡಲು ತಯಾರಾಗಿದ್ದೇವೆ. ಬಿಜೆಪಿ ಸರಕಾರದ ವಿದಾಯ ಯಾನ ಕರ್ನಾಟಕದಿಂದಲೇ ಶುರುವಾಗಿದೆ.

► ನಿಮ್ಮ ಕ್ಷೇತ್ರದ ವಿಚಾರಕ್ಕೆ ಬರುವುದಾದರೆ, ಸತತ ನಾಲ್ಕು ಬಾರಿ ಬಿಜೆಪಿ ಇಲ್ಲಿ ಗೆದ್ದಿದೆ. ಈಗ ಅವರ ಅಭ್ಯರ್ಥಿ ಬದಲಾವಣೆಯಾಗಿದ್ದಾರೆ. ಅವರ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರ ಮೇಲಿನ ಮನಿ ಲಾಂಡರಿಂಗ್ ಕೇಸ್ ಬಗ್ಗೆ ಕೂಡ ನೀವು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೀರಿ. ಯಾಕೆ ಆ ಕೇಸ್ ಬಗ್ಗೆ ಇಷ್ಟು ದಿನ ಕಾಂಗ್ರೆಸ್ ಹೋರಾಟ ಮಾಡಲಿಲ್ಲ? ಚುನಾವಣೆ ಹೊತ್ತಿನಲ್ಲಿಯೇ ಮಾಡುತ್ತಿರುವುದು ಚುನಾವಣಾ ಉದ್ದೇಶದ್ದು ಎಂದು ಅನ್ನಿಸುತ್ತದಲ್ಲವೆ?

ರಾ.ಗೌ: ಶೋಭಾ ಅವರು ನಾಮಪತ್ರ ಸಲ್ಲಿಸುವಾಗ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಮೇಲಿನ ಕೇಸ್ ಖಾಸಗಿ ವ್ಯಕ್ತಿ ಹಾಕಿರುವುದು, ಇಲ್ಲಿ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅವರು ಸುಳ್ಳು ಹೇಳಿರುವುದು ಈಗ ಗೊತ್ತಾಗಿದೆ ಮತ್ತು ಅವರು ಸರಕಾರದ ವಿರುದ್ಧ ಕೂಡ ಒಂದು ಕೇಸ್ ಹಾಕಿದ್ದು ಅದಿನ್ನೂ ನಡೆಯುತ್ತಿದೆ. 10 ವರ್ಷದಿಂದ ಈ ಸರಕಾರ ಏನೂ ಕ್ರಮವನ್ನೇ ತೆಗೆದುಕೊಂಡಿಲ್ಲ. ಬೇರೆ ಬೇರೆ ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸುತ್ತಾರೆ. ಹಾಗಾದರೆ ಇವರಿಗೇಕೆ ವಿಶೇಷ ರಿಯಾಯಿತಿ? ಇನ್ನೊಂದೆಡೆ ಪ್ರಧಾನಿ ಯಾವಾಗ ನೋಡಿದರೂ ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೆ. ಬಿಜೆಪಿಯವರಿಗಿಂತ ದೊಡ್ಡ ಭ್ರಷ್ಟಾಚಾರಿಗಳು ಯಾರೂ ಇಲ್ಲ ಎನ್ನುವುದು ಈಗ ಬಯಲಾಗಿದೆ, ಇಲ್ಲಿ ಅವರ ಸರಕಾರವೇ ಶೋಭಾ ವಿರುದ್ಧ ಮನಿ ಲಾಂಡರಿಂಗ್ ಕೇಸ್ ಹಾಕಿದೆ. ಇವರು ಸರಕಾರದ ವಿರುದ್ಧ ಕೇಸ್ ಹಾಕಿದ್ದಾರೆ. ಆದರೆ ಅಂಥವರನ್ನು ಸಂಪುಟದಲ್ಲಿಯೂ ಇಟ್ಟುಕೊಳ್ಳಲಾಗಿದೆ, ಏನಿದು? ಪ್ರಜಾಪ್ರಭುತ್ವದ ಸಂಪ್ರದಾಯವೇ ಗೊತ್ತಿಲ್ಲವೇ ಬಿಜೆಪಿಯವರಿಗೆ? ಕಾನೂನಿನ ರಿವಾಜು ಗೊತ್ತಿಲ್ಲವೇ? ಇದು ಹಿತಾಸಕ್ತಿಗೆ ವಿರುದ್ಧವಾದುದು ಎಂದು ಗೊತ್ತಿಲ್ಲವೇ? ಒಮ್ಮೆ ಸರಕಾರದಲ್ಲಿ ಮಂತ್ರಿಯಾದರೆ ಸಾಕ್ಷ್ಯಗಳನ್ನೇ ಇಲ್ಲವಾಗಿಸಬಹುದು. ನಮ್ಮ ದೇಶದ ಸಂಸ್ಥೆಗಳನ್ನು ಈ ರೀತಿಯಲ್ಲಿ ಹಾಳುಗೆಡವುತ್ತಿದೆ ಈ ಸರಕಾರ.

► ಯಾರನ್ನು ದೂಷಿಸಬೇಕು? ಸರಕಾರವನ್ನೋ ಸ್ವಾಯತ್ತ ಸಂಸ್ಥೆಗಳನ್ನೋ?

ರಾ.ಗೌ: ಸ್ವತಂತ್ರ ಸಂಸ್ಥೆಗಳು ಎಂದು ನೀವು ಅಂದುಕೊಳ್ಳುತ್ತಲೇ ಇರುತ್ತೀರಿ. ಅವೆಲ್ಲವೂ ಸರಕಾರದಿಂದ ಏನು ಆದೇಶ ಬರುತ್ತದೋ ಅದನ್ನು ಮಾಡುವ ಸ್ಥಿತಿಗೆ ಬಂದು ಮುಟ್ಟಿವೆ. ಸ್ವಾತಂತ್ರ್ಯ ಎಂಬುದೆಲ್ಲ ಇಲ್ಲ. ಒಬ್ಬರ ಮೇಲೆ ಗಂಭೀರವಾದ ಕೇಸ್ ದಾಖಲಿಸಿರುವಾಗಲೂ ಅವರನ್ನು ಮಂತ್ರಿ ಮಾಡಲಾಗುತ್ತದೆ ಎಂದರೆ ಏನು? ಅದೇ ಸಂಸದರು ಸರಕಾರದ ಮೇಲೂ ಒಂದು ಕೇಸ್ ಹಾಕಿದ್ದಾರೆ. ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತೀರಿ. ಸಾಕ್ಷ್ಯ ನಾಶದಂಥ ಎಲ್ಲದಕ್ಕೂ ಅವಕಾಶ ಮಾಡಿಕೊಡುತ್ತೀರಿ. ಇದೆಂಥ ವ್ಯವಸ್ಥೆ? ಏನಿದರ ಅರ್ಥ?

► ನಿಮ್ಮ ಕ್ಷೇತ್ರದಲ್ಲಿ ಜಾಫರ್ ಷರೀಫ್ ಏಳು ಬಾರಿ ಗೆದ್ದಿದ್ದರು. ಕೆಂಗಲ್ ಹನುಮಂತಯ್ಯ ಸ್ಪರ್ಧಿಸಿದ್ದರು. ಯಾಕೆ ಈ ಕ್ಷೇತ್ರ ಕಾಂಗ್ರೆಸ್ ಕೈತಪ್ಪುವಂತಾಯಿತು?

ರಾ.ಗೌ: ಮೊದಲು ಬೆಂಗಳೂರು ಎಂದು ಒಂದು ಕ್ಷೇತ್ರ ಇತ್ತು. ಬೆಂಗಳೂರು ಉತ್ತರ ಕ್ಷೇತ್ರದ ಹೆಸರು ಹೊಸಕೋಟೆ ಎಂದಿತ್ತು. ನಂತರ ಅದು ಬೆಂಗಳೂರು ಉತ್ತರ ಎಂದಾಯಿತು. ಹನುಮಂತಯ್ಯನವರು ಈಗ ಬೆಂಗಳೂರು ದಕ್ಷಿಣ ಎಂದಾಗಿರುವಲ್ಲಿಂದ ಗೆದ್ದಿದ್ದರು. ಇಲ್ಲಿ ಷರೀಫ್ ನಂತರ ಎರಡು ಬಾರಿ ನಮ್ಮ ದೊಡ್ಡಪ್ಪನವರೇ ಗೆದ್ದಿದ್ದು. ಮೊದಲು ಇಡೀ ಕರ್ನಾಟಕವೇ ಕಾಂಗ್ರೆಸ್ ಭದ್ರಕೋಟೆಯಾಗಿತ್ತು, ಮೊದಲಿದ್ದ 27 ಸೀಟುಗಳನ್ನೂ ಕಾಂಗ್ರೆಸ್ ಗೆಲ್ಲುತ್ತಿತ್ತು. 1977ರ ಹೊತ್ತಿಗೆ ಸ್ವಲ್ಪ ಬದಲಾಯಿತು. ಈಚಿನ ಚುನಾವಣೆಗಳಲ್ಲಿ ಏನೋ ಚಾಕಚಕ್ಯತೆಯಿಂದ ಅವರು ಮತ ಗಳಿಸಿದ್ದಾರೆ. ಈಗ ಜನರೇ ಹೇಳುತ್ತಾರೆ. ನಾಲ್ಕು ಸಲ ಗೆಲ್ಲಿಸಿದರೂ ಸಂಸದರನ್ನು ಕಂಡಿಲ್ಲ ಎಂದು ದೂರುತ್ತಾರೆ. ಬಿಜೆಪಿಗೇ ಅದು ಗೊತ್ತಾಗಿ ಅಭ್ಯರ್ಥಿಯನ್ನು ಬದಲಿಸಿದೆ. ಬದಲಿಸಿದ್ದು ಯಾರನ್ನು? ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನರಿಂದ ತಿರಸ್ಕೃತರಾದವರನ್ನು. ಬಿಜೆಪಿಯವರೇ ಯಾರ ವಿರುದ್ಧ ಗೋ ಬ್ಯಾಕ್ ಎಂದು ಹೇಳಿದ್ದರೋ ಅವರನ್ನು ಇಲ್ಲಿ ತಂದು ನಿಲ್ಲಿಸಿದ್ಧಾರೆ. ಬೆಂಗಳೂರು ಉತ್ತರದ ಜನರ ಬುದ್ಧಿವಂತಿಕೆ ಬಗ್ಗೆ ಗೌರವವಿಲ್ಲವಾ ಹಾಗಾದರೆ?

► ಶೋಭಾ ಕರಂದ್ಲಾಜೆ ಅವರಿಗೂ ಬೆಂಗಳೂರು ಉತ್ತರಕ್ಕೂ ಸಂಬಂಧವೇ ಇಲ್ಲ ಅಂತೇನಿಲ್ಲ, ಹಾಗೆಯೇ ನಿಮ್ಮ ಕ್ಷೇತ್ರದಲ್ಲಿ ನಿಂತವರೆಲ್ಲ ಹೊರಗಿನವರೇ. ಚಂದ್ರೇಗೌಡರು, ಈಗ ಶೋಭಾ ಅವರೂ ಹೊರಗಿನವರು.

ರಾ.ಗೌ: ನಾನು ಲೋಕಲ್.

► ನಿಜ. ಆದರೆ ನಿಮ್ಮ ಕ್ಷೇತ್ರದ ಜನ ಹೊರಗಿನವರನ್ನೇ ಯಾಕೆ ಆಯ್ಕೆ ಮಾಡುತ್ತಾರೆ?

ರಾ.ಗೌ: ದೊಡ್ಡ ಮನಸ್ಸಿದೆ. ಈ ಭಾಗದಿಂದ ಮೊದಲ ಬಿಜೆಪಿ ಎಂಪಿ ಸಾಂಗ್ಲಿಯಾನಾ ಅವರು. ಸೆಕ್ಯೂಲರ್ ಬಗೆಗಿನ ತಿಳುವಳಿಕೆ ಉಳ್ಳ ಕ್ಷೇತ್ರದವರ ಆಯ್ಕೆ ಅದು. ಅವರು ಮಿಜೋರಾಂನವರು ಮತ್ತು ಕ್ರೈಸ್ತರು. ಕನ್ನಡಿಗರೂ ಅಲ್ಲ. ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಹೆಸರಿದ್ದ ಅವರನ್ನು ಜನ ಆಯ್ಕೆ ಮಾಡಿದರು. ಅದಾದ ಬಳಿಕ ಈಗ ಪಾಠ ಕಲಿತಿದ್ದಾರೆ. ಈಗ ಬುದ್ಧಿವಂತಿಕೆ ಉಪಯೋಗಿಸಿ ಕಾಂಗ್ರೆಸ್ ಅನ್ನು ಆಯ್ಕೆ ಮಾಡುತ್ತಾರೆ. ಮೊದಲಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರ ಈಗ ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗಲಿದೆ.

► ರಾಜಕೀಯದ ಭಾಷೆಗೆ ಬಂದರೆ ಅಧಿಕಾರ, ಹಣ, ಜಾತಿ, ಧರ್ಮ ಇವೆಲ್ಲವೂ ಮುಖ್ಯವಾಗುತ್ತವೆ. ನಿಮ್ಮ ಎದುರಾಳಿ ಪಕ್ಕಾ ಹಿಂದುತ್ವದ ಫೈರ್ ಬ್ರಾಂಡ್ ರೀತಿಯಲ್ಲಿಯೇ ಮಾತನಾಡುತ್ತಾರೆ. ನಿಮ್ಮ ಕ್ಷೇತ್ರದ ಜನ ಹಿಂದುತ್ವದ ವಿಚಾರಗಳಿಗೆ ಹೆಚ್ಚು ಒಲವು ತೋರಿಸುತ್ತಾರೆ ಎನಿಸುತ್ತದೆಯೇ ಅಥವಾ ಸೆಕ್ಯುಲರ್ ಆಗಿ ನಿರ್ಧರಿಸಬಹುದೇ ಈ ಸಲ?

ರಾ.ಗೌ: ನನಗೆ ರಾಜಕೀಯ ಅಂದರೆ ಈ ಪದಗಳಲ್ಲ. ರಾಜಕೀಯವೆಂದರೆ ಅಭಿವೃದ್ಧಿ, ಶಾಂತಿ, ಸೌಹಾರ್ದ, ಆದರ್ಶಗಳು, ಸಂವಿಧಾನ. ಅದಕ್ಕಾಗಿಯೇ ನಾನಿಲ್ಲಿ ಕಣಕ್ಕಿಳಿದಿರುವುದು. ಹಣ, ಭ್ರಷ್ಟಾಚಾರ, ಕೋಮು ವಿವಾದ ಇಂಥದ್ದರ ವಿರುದ್ಧ ಉದ್ಯೋಗ, ಅಭಿವೃದ್ಧಿ, ಗುಣಮಟ್ಟದ ಬದುಕು ಇವು ನಮ್ಮ ಉದ್ದೇಶ ಎಂದು ಜನರಿಗೆ ಮನದಟ್ಟು ಮಾಡುತ್ತೇವೆ. ಪಾಸಿಟಿವ್ ಅಜೆಂಡಾ ಇಟ್ಟುಕೊಂಡು ಮುಂದೆ ಹೋಗುತ್ತೇವೆ.

► ವಾಸ್ತವ ಏನೆಂದರೆ ಯಾವುದೇ ಪಕ್ಷ ಟಿಕೆಟ್ ಕೊಡುವ ಸಂದರ್ಭದಲ್ಲಿ ಜಾತಿಯನ್ನು ಗಮನದಲ್ಲಿಟ್ಟುಕೊಳ್ಳುತ್ತದೆ. ನಿಮ್ಮ ಕ್ಷೇತ್ರದಲ್ಲಿ 5 ಲಕ್ಷ 19 ಸಾವಿರ ಒಕ್ಕಲಿಗ ಮತದಾರರಿದ್ದಾರೆ. ನಿಮ್ಮ ಹೆಸರಿನ ಜೊತೆಗಿರುವ ಜಾತಿ ಸೂಚಕ ನಿಮ್ಮ ರಾಜಕೀಯಕ್ಕೆ ನೆರವಾಗುತ್ತಾ, ಮುಕ್ತವಾಗಿ ಹೇಳುವುದಾದರೆ?

ರಾ.ಗೌ: ನನ್ನ ಹೆಸರಿನ ಮೂಲಕ ನೀವು ಏನು ಯೋಚನೆ ಮಾಡುತ್ತೀರೊ ಅದು ನಿಮಗೆ ಬಿಟ್ಟದ್ದು. ನಮ್ಮ ಸಮುದಾಯ ಎಂದರೆ ನಮ್ಮ ಸಂಬಂಧಿಕರು. ಅವರು ನಮ್ಮನ್ನು ನೋಡಿಕೊಳ್ಳುತ್ತಾರೆ. ಆದರೆ ನಾವು ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗುತ್ತೇವೆ.

► ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶ ಗಮನಿಸಿದರೆ ಈ ಸಲ ಮತ ಹಂಚಿಕೆಯಲ್ಲಿ ಬದಲಾವಣೆ ತರಬಲ್ಲ ತಂತ್ರಗಳೇನಾದರೂ ಇವೆಯೇ?

ರಾ.ಗೌ: ನಮ್ಮ ಪಾಲಿನ ಪಾಸಿಟಿವ್ ಅಂಶವೆಂದರೆ ಸಿದ್ದರಾಮಯ್ಯ ಸರಕಾರದ ಐದು ಗ್ಯಾರಂಟಿಗಳು. ನಾನು ಮಹಿಳೆಯರ ಜೊತೆ ಮಾತಾಡಿದಾಗ ಗ್ಯಾರಂಟಿಗಳು ತಮ್ಮ ಜೀವನದಲ್ಲಿಯೇ ಬದಲಾವಣೆ ತಂದಿವೆ ಎನ್ನುತ್ತಿದ್ದಾರೆ. ತಮಗೊಂದು ಶಕ್ತಿ ಬಂದಿದೆ ಎಂದು ಖುಷಿಯಾಗಿದ್ದಾರೆ. ಬಿಜೆಪಿಯ ವೈಫಲ್ಯಗಳನ್ನು ಎದುರಿಸಲು ಇದು ಅನುಕೂಲಕರವಾಗಲಿದೆ. ಎರಡನೆಯದಾಗಿ, ಈ ಬಾರಿ ಅವರು ಅಭ್ಯರ್ಥಿ ಯಾರೆಂಬುದನ್ನೂ ನೋಡಲಿದ್ದಾರೆ. ಜನರಿಗೆ ನನ್ನ ಬಗ್ಗೆ ಸಾಕಷ್ಟು ಗೊತ್ತಿದೆ. ಪಾರ್ಕ್ ನಂಥ ಸ್ಥಳಗಳಿಗೆ ಹೋದಾಗ ನನ್ನನ್ನು ಸುಶಿಕ್ಷಿತ ಎಂದು ಜನರೇ ಹೇಳುತ್ತಿದ್ದಾರೆ.

► ಸುಶಿಕ್ಷಿತ ಎಂಬ ಪದ ಹೇಳಿದಿರಿ. ಕೋಮು ಧ್ರುವೀಕರಣದ ಇವತ್ತಿನ ಸನ್ನಿವೇಶದಲ್ಲಿ ಅದರಿಂದ ಹೊರಬಂದು ಭಾರತ ಅಭಿವೃದ್ಧಿಯ ಕಡೆ ಹೋಗಲು ಸಿದ್ಧವಾಗಿದೆಯೇ?

ರಾ.ಗೌ: ಖಂಡಿತ. ಇಲ್ಲಿ ಅಧಿಕಾರದಲ್ಲಿದ್ದವರು ಬಿಜೆಪಿಯವರು. ಅವರು ಹೇಗೆ ಅಧಿಕಾರಕ್ಕೆ ಬಂದರು ಎಂಬುದು ಬೇರೆಯೇ ಕಥೆ. ಹಿಜಾಬ್, ಹಲಾಲ್ ಇವೇ ಅವರ ಆದ್ಯತೆಗಳಾಗಿದ್ದವು. ನಮ್ಮ ಆದ್ಯತೆಗಳು ಜನರ ಅಭಿವೃದ್ಧಿ, ಶಿಕ್ಷಣ ಇತ್ಯಾದಿ. ಧರ್ಮ ಮನೆಯಲ್ಲಿರಲಿ. ಸಂವಿಧಾನವೇ ನಮ್ಮ ಧರ್ಮ. ಇದು ಹೊಸದಲ್ಲ. 1947ರಿಂದಲೂ ಇದೆ. ನಮ್ಮ ದೇಶ ವಿಭಜನೆಯಾಗಿದ್ದು ಹೀಗೆಯೇ. ಈಗ ಸರ್ವಜನಾಂಗದ ಶಾಂತಿಯ ತೋಟ ಎಂದು ನೆಮ್ಮದಿಯ ಬದುಕು ಬಾಳಲು ಎಲ್ಲರೂ ಬಯಸಿದ್ದಾರೆ. ಹಲವು ವರ್ಷಗಳ ಅವಕಾಶವನ್ನೂ ಕೊಟ್ಟರು. ಅಭಿವೃದ್ಧಿ ಎಲ್ಲಿ? ಬರೀ ಸ್ಲೋಗನ್‌ಗಳು. 10 ವರ್ಷದ ಮೇಲೆ ಆರ್ಥಿಕ ಶ್ವೇತಪತ್ರ ಮಂಡಿಸುವ ಕೇಂದ್ರ ಹಣಕಾಸು ಸಚಿವರು, ತಾವೇನು ಸಾಧಿಸಿದೆವು ಎಂದು ಹೇಳುವುದಿಲ್ಲ, ಬದಲಾಗಿ, 10 ವರ್ಷದ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಏನೇನು ತಪ್ಪುಗಳಾದವು ಎಂದು ಹೇಳುತ್ತಾರೆ. ಆಗ ತಪ್ಪುಗಳಾಗಿದ್ದರೆ ಸುಧಾರಿಸಲು ನಿಮಗೆ ಅವಕಾಶ ಇತ್ತಲ್ಲವೆ? ನೀವು ಡಿಮಾನಿಟೈಸೇಷನ್ ತಂದಿರಿ, ಪ್ರತೀ ವರ್ಷ ಪ್ರತೀ ತ್ರೈಮಾಸಿಕದಲ್ಲಿ ಆರ್ಥಿಕತೆ ಕುಸಿಯುತ್ತಲೇ ಬಂತು. ಕೋವಿಡ್ ಬಂದಾಗ ನಿಮಗೊಂದು ನೆಪ ಬೇರೆ ಸಿಕ್ಕಿತು. ಅದರೆ ಇವೆಲ್ಲವೂ ನಿಮ್ಮ ವೈಫಲ್ಯಗಳೇ ಆಗಿದ್ದವು. ಅದರಿಂದ ಸಾಮಾನ್ಯ ಜನರು ಒದ್ದಾಡುತ್ತಿದ್ದಾರೆ. ಮತ್ತೆ ಪುನಃ ಅವರ ಬಳಿ ಧರ್ಮ, ಧರ್ಮ ಎನ್ನುತ್ತ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದೀರಿ. ಆದರೆ ದೇಶದ ಜನರು ಬುದ್ಧಿವಂತರು. ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗ ಮತದಾನದ ದಿನ ಅವರು ಒಂದು ಪ್ರತಿಕ್ರಿಯೆ ಕೊಡುತ್ತಾರೆ. ‘ಇಂಡಿಯಾ’ ಒಕ್ಕೂಟ ಸರಕಾರ ರಚಿಸುತ್ತದೆ. ನಾನೂ ಅದರಲ್ಲಿ ಇರುತ್ತೇನೆ.

► ಯುಪಿಎ ಅವಧಿಯಲ್ಲಿ ಎಲ್ಲ ಸರಕಾರಿ ಸಂಸ್ಥೆಗಳೂ ದುರ್ಬಲವಾಗಿದ್ದವು, ನಾವು ಬಂದು ಸರಿ ಮಾಡಿದೆವು ಎಂದು ನಿರ್ಮಲಾ ಸೀತಾರಾಮನ್ ಶ್ವೇತಪತ್ರದಲ್ಲಿ ಹೇಳುತ್ತಾರೆ?

ರಾ.ಗೌ: ಶ್ವೇತಪತ್ರದಲ್ಲಿ ಏನೇನೋ ಬರೆಯಲಾಗಿದೆ. ನಾವು ಒಂದು ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಿದೆವು. ಅವರು ಹಣಕಾಸು ಸಚಿವರಾಗಿರುವುದರಿಂದ ಏನು ಹೇಳಿದರೂ ಮೀಡಿಯಾಗಳು ಬರೆಯುತ್ತವೆ. ನಿಜ ಎಂದು ತಿಳಿಯುತ್ತವೆ. ಪ್ರಶ್ನಿಸುವುದೇ ಇಲ್ಲ. ಇದೇ ರಾಜ್ಯದಿಂದ ಆಯ್ಕೆಯಾಗಿ ರಾಜ್ಯಸಭೆಗೆ ಹೋಗಿರುವ ಹಣಕಾಸು ಸಚಿವರು ಒಂದು ದೊಡ್ಡ ಸುಳ್ಳು ಹೇಳುತ್ತಾರೆ. ಹಣಕಾಸು ಆಯೋಗ ಕರ್ನಾಟಕಕ್ಕೆ ಇಷ್ಟು ಕೊಡಬೇಕು ಎಂದಿದ್ದು ಮಧ್ಯಂತರ ಶಿಫಾರಸಾಗಿತ್ತು. ಹಾಗಾಗಿ ನಾವದನ್ನು ಪರಿಗಣಿಸಲಿಲ್ಲ ಎಂದಿದ್ದಾರೆ. 14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದವರನ್ನು ನಾನೇ ಹೋಗಿ ವಿಚಾರಿಸಿದಾಗ ಅವರು ಅದು ಅಂತಿಮ ವರದಿಯೇ ಆಗಿತ್ತು ಎಂಬುದನ್ನು ತೋರಿಸಿದರು. ಅದರಲ್ಲಿನ ಶಿಫಾರಸು ಒಂದು ರೀತಿಯ ಆದೇಶದ ಹಾಗೆ. ಅದನ್ನು ಅನುಷ್ಠಾನಗೊಳಿಸಬೇಕು. ಆ ಪದ್ಧತಿಯನ್ನೇ ಬಿಟ್ಟುಬಿಡುತ್ತಾರೆಂದರೆ ಕರ್ನಾಟಕದ ವಿರುದ್ಧ ಇವರಿಗೆ ಯಾಕೆ ಹೀಗೆ ಕೋಪ? ನಮ್ಮ ರಾಜ್ಯ ಎಷ್ಟೊಂದು ತೆರಿಗೆಯನ್ನು ದೇಶಕ್ಕೆ ಕೊಡುತ್ತದೆ. ವಿಶೇಷ ಅನುದಾನ ಕೇಳಿದರೆ ಅದನ್ನೂ ನಿರಾಕರಿಸಲಾಗುತ್ತದೆ. ಬಿಜೆಪಿಯ ಎಂಪಿಗಳು ಬಾಯ್ಮುಚ್ಚಿಕೊಂಡು ಕೂರುತ್ತಾರೆ. ಹೀಗಿರುವಾಗ ಬಿಜೆಪಿಗೆ ಯಾರಾದರೂ ಮತ ಹಾಕಿದರೆ ಅವರು ಕರ್ನಾಟಕದ ವಿರೋಧಿಗಳು ಎಂದು ಹೇಳಲು ಬಯಸುತ್ತೇನೆ.

► ಆಗ ಏಕೆ ಪ್ರಶ್ನೆ ಎತ್ತಿಲ್ಲ ಎನ್ನುವುದು ಅವರ ಪ್ರಶ್ನೆ.

ರಾ.ಗೌ: ನಮ್ಮ ಸರಕಾರವೂ ಪ್ರಶ್ನೆ ಎತ್ತಿದೆ. ಅದರ ಬಗ್ಗೆ ಹಣಕಾಸು ಸಚಿವರಿಂದ ಉತ್ತರವೇ ಇಲ್ಲ.

► ಮನಮೋಹನ್ ಸಿಂಗ್ ಅವಧಿಯಲ್ಲಿ ರಾಜ್ಯಕ್ಕೆ ಬರುತ್ತಿದ್ದುದಕ್ಕಿಂತ ಹೆಚ್ಚು ಅನುದಾನವನ್ನು ಕೊಡುತ್ತಿದ್ದೇವೆ ಎಂಬುದು ಅವರ ಇನ್ನೊಂದು ವಾದ.

ರಾ.ಗೌ: ಅದಂತೂ ವಾದವೇ ಅಲ್ಲ. ಆಗ ಎಷ್ಟಿತ್ತೋ ಅದರ 10ರಷ್ಟು ಆಗಬೇಕು ಈಗ. ಯಾವತ್ತೂ ಕಡಿಮೆಯಾಗಕೂಡದು. ಆ ಹಿನ್ನೆಲೆಯಲ್ಲಿಯೇ ಹಣಕಾಸು ಆಯೋಗ ಇಷ್ಟು ಕೊಡಬೇಕು ಎಂದು ಶಿಫಾರಸು ಮಾಡಿತ್ತಲ್ಲವೆ? ಅದನ್ನು ಕೊಡುವುದಕ್ಕೆ ಇವರಿಗೆ ಏನಾಗಿತ್ತು?

► ‘ನನ್ನ ಹಕ್ಕು ನನ್ನ ತೆರಿಗೆ’ ಎಂಬ ಅಭಿಯಾನ ಮಾಡಿದಿರಿ. ಕರ್ನಾಟಕಕ್ಕೆ ತೆರಿಗೆ ಅನ್ಯಾಯ ಆಗಿದೆ ಎಂಬುದನ್ನು ಜನರಿಗೆ ತಲುಪಿಸಲು ಸಾಧ್ಯವಾಗಿದೆಯೇ ನಿಮಗೆ? ಅಥವಾ ಬಿಜೆಪಿ ಮಾತುಗಳನ್ನೇ ಜನ ನಂಬಿದ್ದಾರೆಯೇ?

ರಾ.ಗೌ: ನಮ್ಮ ವಾದವೇನಿದೆಯೋ ಅದಕ್ಕೆ ಮಾಧ್ಯಮಗಳು ಕೂಡ ಹೆಚ್ಚು ಆದ್ಯತೆ ಕೊಡಬೇಕು. ಇದು ನಮ್ಮ ರಾಜ್ಯದ ಹಿತದ ಪ್ರಶ್ನೆ. ಇದು ರಾಜಕೀಯ ಅಲ್ಲ. ಇದು ಜನರ ಒಳಿತಿನ ಪ್ರಶ್ನೆ.

► ನೀವು ಜನರ ಕೈಗೆ ಸಿಗುವುದಿಲ್ಲ ಎನ್ನುವುದು ಜನರ ಮಾತಾಗಿದೆ. ಇದಕ್ಕೆ?

ರಾ.ಗೌ: ನಾನು ಇಲ್ಲಿಯವನು, ಅಂಥ ಮಾತು ಬರಲು ಹೇಗೆ ಸಾಧ್ಯ? ನಾನು ಮೇಷ್ಟ್ರು, ಎಲ್ಲರಿಗೂ ಅವಕಾಶ ಮಾಡಿಕೊಡುವುದೇ ನಮ್ಮ ಧರ್ಮ. ನಾವು ಯಾವಾಗಲೂ ಜನಸಂಪರ್ಕದಲ್ಲಿಯೇ ಇದ್ದವರು. ಅಂಥ ಪ್ರಶ್ನೆ ಬರುವುದೇ ಇಲ್ಲ.

► ಆಗಿನ ರಾಜಕೀಯ ಬೇರೆ. ಆಗ ಇದ್ದ ಜನಸಂಪರ್ಕವನ್ನು ಹೆಚ್ಚು ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎನ್ನಿಸುತ್ತದೆಯೆ?

ರಾ.ಗೌ: 31 ಲಕ್ಷ ಮತದಾರರಿದ್ದಾರೆ. ಅವರ ನಡುವೆಯೇ ನಾನು ಓಡಾಡುತ್ತಿದ್ದೇನೆ. ಎಲ್ಲರನ್ನೂ ಮುಟ್ಟಬೇಕೆಂದರೆ ಟಿವಿ, ಸೋಷಿಯಲ್ ಮೀಡಿಯಾ ಮೂಲಕವೂ ಸಂಪರ್ಕದಲ್ಲಿ ಇರಬಹುದು. ನಾನು ಕೈಗೆ ಸಿಗಲಾರದವನು ಎಂಬ ಭಾವನೆ ಜನರಿಗೆ ಖಂಡಿತ ಬೇಡ. ಅಂಥ ಅನುಮಾನವಿದ್ದರೆ ಒಮ್ಮೆ ಭೇಟಿಯಾಗಲಿ. ಪ್ರಚಾರಕ್ಕೆ ನಮ್ಮ ಜೊತೆಯಾಗಲಿ.

► ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀರಿ. ಆ ಎಲ್ಲ ಅನುಭವ ಈಗಿನ ರಾಜಕೀಯಕ್ಕೆ ಉಪಯೋಗಕ್ಕೆ ಬರುತದೆಯೇ?

ರಾ.ಗೌ: ಖಂಡಿತ. ಜನರು ಸಮಸ್ಯೆಗಳ ಬಗ್ಗೆ ಕೇಳಿದಾಗ ಅದರ ಕಾರಣಗಳನ್ನು ಮನದಟ್ಟು ಮಾಡಿ, ಅದಕ್ಕೆ ಇರುವ ಪರಿಹಾರ ಸಾಧ್ಯತೆಗಳ ಬಗ್ಗೆ ತಿಳಿಸಬೇಕಾದ ಹೊಣೆ ಇದೆ. ನಮ್ಮ ಉತ್ತರ ಸ್ಲೋಗನ್ ಆಗಿರುವುದಿಲ್ಲ. ಅದು ಅಧ್ಯಯನಾತ್ಮಕವಾಗಿರುತ್ತದೆ.

► ಮತದಾರರ ಮನಸ್ಸು ಗೆಲ್ಲಲು ಏನು ಮಾಡುತ್ತಿದ್ದೀರಿ? ಮತ್ತು ಯಾವ ಕಾರಣಕ್ಕೆ ಜನರು ಕಾಂಗ್ರೆಸ್‌ಗೆ ಮತ ಕೊಡಬೇಕು?

ರಾ.ಗೌ: ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಕಾಂಗ್ರೆಸ್. ಜನರ ಹಿತಕ್ಕಾಗಿ ಗ್ಯಾರಂಟಿಗಳನ್ನೆಲ್ಲ ಕೊಟ್ಟಿರುವುದು ಕಾಂಗ್ರೆಸ್. ಅದನ್ನು ನೋಡಿಕೊಂಡು ಜನರು ನಿರ್ಣಯ ಕೊಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ

contributor

Similar News