ಯಹೂದಿಗಳ ರಕ್ಷಣೆಯ ಹೆಸರಲ್ಲಿ ಈ ಅನ್ಯಾಯ ಬೇಡ : ಜೋನಾಥನ್ ಬೆನ್-ಮೆನಾಕೆಮ್

Update: 2025-03-19 10:43 IST
ಯಹೂದಿಗಳ ರಕ್ಷಣೆಯ ಹೆಸರಲ್ಲಿ ಈ ಅನ್ಯಾಯ ಬೇಡ : ಜೋನಾಥನ್ ಬೆನ್-ಮೆನಾಕೆಮ್
  • whatsapp icon

ಕೊಲಂಬಿಯಾ ವಿಶ್ವವಿದ್ಯಾನಿಲಯದ ಯಹೂದಿ ವಿದ್ಯಾರ್ಥಿ ಯಾಗಿ, ನನ್ನ ಫೆಲೆಸ್ತೀನಿ ಸಹಪಾಠಿ ಮಹ್ಮೂದ್ ಖಲೀಲ್‌ನ ಬಂಧನವನ್ನು ಯಹೂದಿ ಸಮುದಾಯದ ಸುರಕ್ಷತೆಯ ಹೆಸರಿನಲ್ಲಿ ನ್ಯಾಯಸಮ್ಮತ ಎಂದು ಬಿಂಬಿಸಲು ಶ್ವೇತ ಭವನ ಮಾಡಿದ ಪ್ರಯತ್ನವನ್ನು ನೋಡಿ ನನಗೆ ಅಸಹ್ಯವೆನ್ನಿಸಿತು. ಮಹ್ಮೂದ್ ಅನ್ನು ಬಂಧಿಸಿರುವ ವಿಷಯವನ್ನು ಘೋಷಿಸುವಾಗ, ವೈಟ್ ಹೌಸ್ ‘‘SHALOM, MAHMOUD’’ ಎಂಬಂತಹ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿತು. ಹೀಬ್ರೂನಲ್ಲಿ ಬಳಸುವ ಬೀಳ್ಕೊಡುವ ಪದವನ್ನು ಫ್ಯಾಶಿಸ್ಟ್ ಗಳು ತೀರಾ ದುಷ್ಟತನದಿಂದ ಬಳಸಿಕೊಂಡು ನಮ್ಮನ್ನು ಭಯಭೀತಗೊಳಿಸಲಾಗುತ್ತಿದೆ.

ಮಹ್ಮೂದ್ ನಾನು ಈವರೆಗೆ ಭೇಟಿಯಾದ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬ. ಇತರ ಯಹೂದಿ ವಿದ್ಯಾರ್ಥಿ ಕಾರ್ಯಕರ್ತರೊಂದಿಗೆ, ನಾನು ಯಾವಾಗಲೂ ಅವರ ಗೌರವ, ದಿಟ್ಟತನ ಮತ್ತು ಸಹಾನುಭೂತಿಯನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ. ಅವರೇ ಸಿಎಎನ್‌ಗೆ ಹೇಳಿದ್ದಂತೆ, ‘‘ಫೆಲೆಸ್ತೀನಿ ಜನರ ಮತ್ತು ಯಹೂದಿ ಜನರ ಮುಕ್ತಿಯು ಪರಸ್ಪರ ಬೆಸೆದುಕೊಂಡಿದೆ. ಒಂದನ್ನು ಮತ್ತೊಂದಿಲ್ಲದೆ ಸಾಧಿಸಲಾಗದು.’’ ಮಹ್ಮೂದ್‌ನ ಪರಿಚಯವಾಗಿರುವ ಯಾರಾದರೂ ಶ್ವೇತಭವನ ಮಾಡುತ್ತಿರುವ ಅಪಪ್ರಚಾರದ ಹಿಂದಿನ ಸತ್ಯವನ್ನು ಅರ್ಥಮಾಡಿಕೊಳ್ಳಬಹುದು. ಇದು ಕೇವಲ ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಸರಕಾರ ಹಿಂಸಾಚಾರ ನಡೆಸಲು ಮತ್ತು ಈಗಾಗಲೇ ಭಯಭೀತ ವಿದ್ಯಾರ್ಥಿ ಹೋರಾಟಗಾರರನ್ನು ಇನ್ನಷ್ಟು ವಿಭಜಿಸಲು ಮಾಡಲಾದ ಒಂದು ಹೀನ ಪ್ರಯತ್ನ.

‘‘ನಮ್ಮೊಂದಿಗೆ ಹೋರಾಡಲು ಉಳಿಯುವವರು ಯಾರು?’’

ಮಹ್ಮೂದ್ ಬಂಧನವಾದ ನಂತರ, ಡಿಎಚ್‌ಎಸ್ (Department of Homeland Security) ಏಜೆಂಟರು ಕ್ಯಾಂಪಸ್‌ಗೆ ಬಂದು ವಿದ್ಯಾರ್ಥಿಗಳನ್ನು ಬೆದರಿಸುತ್ತಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಷ್ಟು ಬಂಧನಗಳು ನಡೆಯಲಿವೆ ಎಂದು ಹೇಳಿರುವುದರಿಂದ, ಈ ದಾಳಿ ಹೆಚ್ಚು ಗಂಭೀರವಾಗಿದೆ. ಈ ಪ್ರದೇಶದಲ್ಲಿ ಪ್ರೊ-ಫೆಲೆಸ್ತೀನ್ ಚಳವಳಿಯನ್ನು ಅದುಮಿ ಹಾಕಲು ಶ್ವೇತ ಭವನ ಮಾಡುತ್ತಿರುವ ಪ್ರಯತ್ನ ಮತ್ತು ಅದಕ್ಕೆ ಕೊಲಂಬಿಯಾ ವಿವಿ ನೀಡುತ್ತಿರುವ ಸಹಕಾರ ನನ್ನಂತಹ ಯಹೂದಿ ವಿದ್ಯಾರ್ಥಿಗಳ ಸುರಕ್ಷತೆಗೆ ನಿಜವಾದ ಅಪಾಯವಾಗಿದೆ. ಇಸ್ರೇಲ್ ಸರಕಾರದ ಕುರಿತ ಟೀಕೆಯನ್ನು ಹತ್ತಿಕ್ಕಲು ಯಹೂದಿ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿ ಅದಕ್ಕೆ ಉಗ್ರರೂಪ ನೀಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾತ್ರವಲ್ಲ, ಅದರಿಂದ ಯಹೂದಿಗಳ ಸುರಕ್ಷತೆಗೆ ಯಾವುದೇ ಪ್ರಯೋಜನವಿಲ್ಲ. ಇದನ್ನು ಕೊಲಂಬಿಯಾ ವಿವಿಯಲ್ಲಿರುವ ಹಲವು ಇಸ್ರೇಲಿ ವಿದ್ಯಾರ್ಥಿಗಳೂ ಕಳೆದ ತಿಂಗಳು ಹೇಳಿದ್ದಾರೆ.

ವಿದ್ಯಾರ್ಥಿ ಕಾರ್ಯಕರ್ತರ ವೀಸಾ ರದ್ದತಿ 1952ರ ಒಂದು ಕಾನೂನಿನ ಆಧಾರದ ಮೇಲೆ ನಡೆಯುತ್ತಿದೆ. ಈ ಕಾನೂನಿನ ಗೂಢ ಆಶಯವು ಯಹೂದಿ ನರಮೇಧದಿಂದ ಪಾರಾದ ಜನರನ್ನು ಕಮ್ಯುನಿಸ್ಟ್ ಎಂದು ಶಂಕಿಸಿ ಗುರಿಯಾಗಿಸುವುದಾಗಿತ್ತು. ಈ ವ್ಯವಸ್ಥೆಯು ಯಹೂದಿಗಳಿಗೆ ಸುರಕ್ಷತೆಯನ್ನು ಒದಗಿಸುವುದಿಲ್ಲ. ಆದ್ದರಿಂದ, ಟ್ರಂಪ್ ಆಡಳಿತದ ಹಿಂಸಾಚಾರವನ್ನು ಬೆಂಬಲಿಸುತ್ತಿರುವ ಕೆಲವು ಯಹೂದಿ ಸಂಸ್ಥೆಗಳ ನಿಲುವು ನನಗೆ ಆಘಾತವನ್ನುಂಟುಮಾಡಿದೆ.

ವರ್ಷಗಳ ಕಾಲ ಪದವಿ ವಿದ್ಯಾರ್ಥಿಗಳ ಖಾಸಗಿ ಮಾಹಿತಿಗಳನ್ನು ಅವರ ಒಪ್ಪಿಗೆ ಇಲ್ಲದೆ ದುರುದ್ದೇಶದಿಂದ ಆನ್ ಲೈನ್‌ನಲ್ಲಿ ಬಹಿರಂಗಪಡಿಸುತ್ತಿದ್ದ ಝಿಯೋನಿಸ್ಟ್ ಸಂಸ್ಥೆಗಳು ಈಗ ಅಮೆರಿಕದಿಂದ ಹೊರಹಾಕಬೇಕಾದವರ ಪಟ್ಟಿಗಳನ್ನು ಹಂಚುತ್ತಿವೆ. ಕೊಲಂಬಿಯಾ ವಿಶ್ವವಿದ್ಯಾನಿಲಯದೊಳಗೆ, ಕೆಲವು ಯಹೂದಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ದೇಶದಿಂದ ಗಡಿಪಾರು ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಕಳೆದ ವರ್ಷ ಹಿಂಸಾತ್ಮಕ ಪೊಲೀಸ್ ಬಲಪ್ರಯೋಗಕ್ಕೆ ಕಾರಣವಾದ ದಾನಿಗಳ ಪ್ರಭಾವ ಅಭಿಯಾನದಂತೆಯೇ ಇದೆ. ಅಲ್ಪಸಂಖ್ಯಾತರನ್ನು ನಿರ್ಬಂಧಿಸುತ್ತಿರುವವರೊಂದಿಗೆ ಕೈಜೋಡಿಸುವ ಬಗ್ಗೆ ಈ ಯಹೂದಿ ಸದಸ್ಯರು ಪುನರ್ ಪರಿಶೀಲಿಸಬೇಕಾಗಿದೆ. ಎಲ್ಲಾ ಇತರ ಅಲ್ಪಸಂಖ್ಯಾತರನ್ನು ಇಲ್ಲಿಂದ ಹೊರಹಾಕಿದ ಬಳಿಕ, ನಮ್ಮೊಂದಿಗೆ ಹೋರಾಡಲು ಉಳಿಯುವವರು ಯಾರು? ಆ್ಯಂಟಿ-ಜಿಯೋನಿಸಂ (ಝಿಯೋನಿಸ್ಟ್ ವಿರೋಧಿ) ಹಾಗೂ ಆ್ಯಂಟಿ-ಸೆಮೆಟಿಸಂ (ಯಹೂದಿ ವಿರೋಧಿ)ಗಳ ನಡುವಿನ ವ್ಯತ್ಯಾಸದ ಕುರಿತು ಕುಶಲತೆಯಿಂದ ಗೊಂದಲಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ಅದು ಬಹುಸಂಸ್ಕೃತಿಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಹೂದಿ ಜೀವನವನ್ನು ಉಳಿಸಿಕೊಳ್ಳಲು ಅಗತ್ಯವಿರುವ ಬಹುಜನಾಂಗ ಏಕತೆಯನ್ನು ಧ್ವಂಸ ಮಾಡುತ್ತಿದೆ.

ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯ (ಐಸಿಇ) ದಾಳಿಗಳು ಎಲ್ಲಾ ಮೂಲಗಳ ಮತ್ತು ಧರ್ಮಗಳ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳನ್ನು ಭಯಭೀತಗೊಳಿಸುತ್ತಿವೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಐಸಿಇ ಏಜೆಂಟ್‌ಗಳು ಕ್ಯಾಂಪಸ್ ಮತ್ತು ಸುತ್ತಮುತ್ತ ಇರುವ ಕಾರಣ ತಮ್ಮ ಮನೆಯಿಂದ ಹೊರಬರುವುದಕ್ಕೂ ಹೆದರುತ್ತಿದ್ದಾರೆ. ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸುರಕ್ಷಿತವಾಗಿ ನೆಲೆಸಲು ಅವಕಾಶ ಕಲ್ಪಿಸುವಂತಹ ಮೂಲಭೂತ ‘‘ನಿಮ್ಮ ಹಕ್ಕುಗಳನ್ನು ಅರಿತುಕೊಳ್ಳಿ’’ ಮಾಹಿತಿ ನೀಡಲು ಅಥವಾ ಶಿಷ್ಟಾಚಾರ ವ್ಯವಸ್ಥೆ ಸ್ಥಾಪಿಸಲು ವಿಶ್ವವಿದ್ಯಾನಿಲಯ ಯಾವುದೇ ಪ್ರಯತ್ನ ಮಾಡಿಲ್ಲ. ಕಳೆದ ವಾರಾಂತ್ಯದಲ್ಲಿ ವಿಶ್ವವಿದ್ಯಾನಿಲಯ ನಮ್ಮನ್ನು ರಕ್ಷಿಸಲು ವಿಫಲವಾದರೂ, ನನ್ನ ವಿದ್ಯಾರ್ಥಿ ಸಂಘ Student Workers of Columbiaದ ಸದಸ್ಯರು, ಮಾಹಿತಿ ಮೂಲಗಳನ್ನು ಸಿದ್ಧಪಡಿಸಲು ಮತ್ತು ವಿದ್ಯಾರ್ಥಿಗಳು ಐಸಿಇ ಅಧಿಕಾರಿಗಳನ್ನು ಭೇಟಿಯಾಗುವ ಅನಿವಾರ್ಯತೆ ಎದುರಿಸದಂತೆ ತರಗತಿಗಳನ್ನು ರದ್ದುಗೊಳಿಸಲು ಅಥವಾ ಆನ್‌ಲೈನ್ ನಲ್ಲಿ ತರಗತಿ ಮಾಡಿಸಲು ಒತ್ತಾಯಿಸಿದರು. ಆದರೆ ವಿಶ್ವವಿದ್ಯಾನಿಲಯದ ಪ್ರತಿಕ್ರಿಯೆ, ತರಗತಿಗಳನ್ನು ಆನ್‌ಲೈನ್‌ಗೆ ವರ್ಗಾಯಿಸುವ ಅಥವಾ ರದ್ದುಗೊಳಿಸುವುದಕ್ಕೆ ನಿರಾಕರಣೆ ನೀಡುವುದಾಗಿತ್ತು. ಕೊಲಂಬಿಯಾ ವಿಶ್ವವಿದ್ಯಾ ನಿಲಯವು ತನ್ನ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಭಿನ್ನಾಭಿಪ್ರಾಯವಿರುವ ವಿದ್ಯಾರ್ಥಿಗಳನ್ನು ಫ್ಯಾಶಿಸ್ಟ್ ಗಳಿಗೆ ತಾನಾಗಿಯೇ ಒಪ್ಪಿಸುತ್ತಿಲ್ಲ ಎಂದು ಭರವಸೆ ಮಾತ್ರ ಇಟ್ಟುಕೊಳ್ಳಬಹುದು ಅನಿಸುತ್ತೆ.

ಜೋನಾಥನ್ ಬೆನ್-ಮೆನಾಕೆಮ್

ನಾನು ಕೊಲಂಬಿಯಾ ವಿವಿಯ ಯಹೂದಿ ವಿದ್ಯಾರ್ಥಿ. ಮಹ್ಮೂದ್ ಖಲೀಲ್ ನಾನು ಭೇಟಿಯಾದ ಅತ್ಯಂತ ಸತ್ಯನಿಷ್ಠ ವ್ಯಕ್ತಿಗಳಲ್ಲೊಬ್ಬ. ಯಹೂದಿಗಳ ರಕ್ಷಣೆ ಎಂಬ ನೆಪದಲ್ಲಿ ವಿದ್ಯಾರ್ಥಿ ಸಮುದಾಯಗಳ ಮೇಲೆ ದಾಳಿ ಮಾಡಲು ನಾವು ಫ್ಯಾಶಿಸ್ಟ್‌ಗಳಿಗೆ ಅವಕಾಶ ನೀಡಬಾರದು.

‘‘ನಮ್ಮ ಹೆಸರಿನಲ್ಲಿ ಇದನ್ನು ಮಾಡಲು ಬಿಡಬಾರದು’’

ನಾವು ಯಹೂದಿ ಸಮುದಾಯದ ಸುರಕ್ಷತೆಯ ಹೆಸರಿನಲ್ಲಿ ನಮ್ಮ ವಿದ್ಯಾರ್ಥಿ ಸಮುದಾಯಗಳ ಮೇಲೆ ದಾಳಿ ಮಾಡಲು ಫ್ಯಾಶಿಸ್ಟ್‌ಗಳಿಗೆ ಅವಕಾಶ ನೀಡಬಾರದು. ನಮ್ಮನ್ನು ಅಪಾಯಕ್ಕೀಡು ಮಾಡುತ್ತಿರುವ ನಾಝಿಗಳು ಯಾರು ಎಂದು ಗುರುತಿಸಬೇಕಾದರೆ - ಅದು ಬೇರಾರೂ ಅಲ್ಲ, ಅದು ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷದವರು. ಟ್ರಂಪ್‌ರ ಎರಡನೇ ಅವಧಿಯ ಫ್ಯಾರದಲ್ಲಿ ಉಗ್ರ ನಿಲುವು ಇರುವ ಖಟ್ಟರ್ ಬಲಪಂಥೀಯ ರಾಷ್ಟ್ರೀಯತಾವಾದಿಗಳು (ಆಲ್ಟ್ ರೈಟ್), ಶ್ವೇತವರ್ಣದವರೇ ಶ್ರೇಷ್ಠರು ಎಂದು ನಂಬುವವರು (ವೈಟ್ ಸುಪ್ರಿಮಸಿಸ್ಟ್ಸ್) ಪ್ರಮುಖ ಹುದ್ದೆಗಳನ್ನು ಪಡೆದಿದ್ದಾರೆ.

ರಿಪಬ್ಲಿಕನ್ ಪಕ್ಷದವರು ವಿಶ್ವವಿದ್ಯಾನಿಲಯಗಳನ್ನು ಶತ್ರುವಾಗಿ ನೋಡುತ್ತಿರುವ ಈ ಸಮಯದಲ್ಲಿ, ಪ್ರಮುಖ ಫೆಲೆಸ್ತೀನಿಯನ್ ಹೋರಾಟಗಾರನನ್ನು ಗುರಿಯಾಗಿಸುವುದು ವಿದ್ಯಾರ್ಥಿ ಹೋರಾಟಗಳ ಕುರಿತು ಲಿಬರಲ್‌ಗಳ ನಡುವೆ ಭಿನ್ನತೆ ಮೂಡಿಸುವ ಕುತಂತ್ರವಾಗಿದೆ. ಟ್ರಂಪ್ ಆಡಳಿತವು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಧಿಕ್ಕರಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿದೆ. ಚಕ್ ಶೂಮರ್ ಹಾಗೂ ಹಕೀಮ್ ಜೆಫ್ರಿಸ್‌ರಂತಹ ಡೆಮಾಕ್ರಟಿಕ್ ನಾಯಕರು ಇದಕ್ಕೆ ನೀಡಿದ ಮೃದು ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ವಿಶೇಷವಾಗಿ, ಚಕ್ ಶೂಮರ್ ನೀಡಿದ ಹೇಳಿಕೆ, ಫೆಲೆಸ್ತೀನಿಯರ ವಿರುದ್ಧ ಅವರ ಅಸ್ಪಷ್ಟ ದ್ವೇಷವನ್ನು ತೋರಿಸುತ್ತದೆ. ಬಂಧಿತ ಮಹ್ಮೂದ್ ವಿರುದ್ಧ ಎರಡು ಪ್ಯಾರಾ ಬರೆದ ಬಳಿಕ ಚಕ್ ಶೂಮರ್ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೇಳಿದ್ದಾರೆ. ಅಷ್ಟೇ ಅಲ್ಲ. ಮಹ್ಮೂದ್ ತಪ್ಪು ಮಾಡಿದ್ದರೆ ಅವರನ್ನು ಗಡಿಪಾರು ಮಾಡಬೇಕು ಎಂದೂ ಇನ್ನೊಂದು ಸಂದರ್ಶನದಲ್ಲಿ ಹೇಳಿದ್ದರು. ಆ ಮೂಲಕ ಟ್ರಂಪ್ ಆಡಳಿತದಿಂದ ಕಿರುಕುಳ ಎದುರಿಸುತ್ತಿರುವ ತಮ್ಮ ಬೆಂಬಲಿಗರು ಹಾಗೂ ಮತದಾರರಿಗೆ ದ್ರೋಹ ಎಸಗಿದ್ದಾರೆ. ನಮಗೆ ಈ ರೀತಿಯ ನಾಯಕರಿದ್ದರೆ, ಶತ್ರುಗಳ ಅಗತ್ಯವೇನಿದೆ?

ನಾವು ನಮ್ಮೆಲ್ಲರ ಸಂಪೂರ್ಣ ಸಾಮರ್ಥ್ಯ ಹಾಕಿ ಮಹ್ಮೂದ್‌ರನ್ನು ರಕ್ಷಿಸುವುದು ಅತ್ಯಗತ್ಯ. ಆದರೆ ಇದು ಕೇವಲ ಮಹ್ಮೂದ್‌ಗೆ ಮಾತ್ರ ಸೀಮಿತವಲ್ಲ. ವಲಸೆ ಇಲಾಖೆಯ ದಾಳಿಗೆ ಒಳಗಾಗಿರುವ ಪ್ರತಿಯೊಬ್ಬರಿಗೂ ನಮ್ಮ ಬೆಂಬಲ ಅಗತ್ಯವಿದೆ. ಮಹ್ಮೂದ್ ಅಮೆರಿಕದ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿದ್ದರೂ, ಆತ ಯಾವುದೇ ಅಪರಾಧ ಎಸಗದೇ ಇದ್ದರೂ, ಆತನ ವಿರುದ್ಧ ತಿರುಗಿಬಿದ್ದ ದಮನಯಂತ್ರ ತೋರಿಸುವ ಸಂಕೇತ ಏನೆಂದರೆ, ಯಾವುದೇ ಅಕ್ರಮ ವಲಸಿಗರು ಅಥವಾ ಅಪರಾಧಿಗಳೆಂಬ ಹಣೆಪಟ್ಟಿ ಹಚ್ಚಿಸಿಕೊಂಡಿರುವ ನಮ್ಮ ನೆರೆಹೊರೆಯವರನ್ನೂ

ನಾವು ಬೆಂಬಲಿಸಬೇಕು. ಈ ಬಗ್ಗೆ ನಾವು ತಕ್ಷಣ ಕಾರ್ಯಪ್ರವೃತ್ತರಾಗ ದಿದ್ದರೆ ಈ ಬಿರುಕು ಹೆಚ್ಚಿದಷ್ಟೂ, ನಮ್ಮ ಸ್ವಾತಂತ್ರ್ಯ ಕೇವಲ ಒಂದು ಕಣ್ಮರೆಯಾದ ನೆನಪಾಗಿ ಉಳಿಯುವ ಸಾಧ್ಯತೆ ಹೆಚ್ಚುತ್ತದೆ.

ಪ್ರಸ್ತುತ ನಾವು ನವ ನಾಝಿ ದುಸ್ವಪ್ನದೊಂದಿಗೆ ಜೀವಿಸುತ್ತಿದ್ದೇವೆ. ತೀವ್ರ ಬಲಪಂಥೀಯ ಗುಂಪುಗಳು ಸಂಘರ್ಷವನ್ನು ಪ್ರಚೋದಿಸುತ್ತಿವೆ, ಝಿಯೋನಿಸ್ಟ್ ಮತ್ತು ಫೆಲೆಸ್ತೀನ್ ಪರ ಶಿಬಿರಗಳು ಪರಸ್ಪರ ಸಂಘರ್ಷದಲ್ಲಿವೆ. ಆದರೆ, ಟ್ರಂಪ್ ಆಡಳಿತದ ಬೆಂಬಲದಲ್ಲಿ ಝಿಯೋನಿಸ್ಟ್‌ಗಳು ಸ್ವತಃ ಫ್ಯಾಶಿಸ್ಟ್‌ಗಳೊಂದಿಗೆ ಕೈಜೋಡಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಬೆಳವಣಿಗೆಗೆ ನಾನು ಸ್ಪಷ್ಟವಾಗಿ ಹೇಳುವ ಉತ್ತರ: ನನ್ನ ಹೆಸರಿನಲ್ಲಿ ಅಂದರೆ, ಯಹೂದಿಗಳ ರಕ್ಷಣೆಯ ಹೆಸರಲ್ಲಿ ಇದು ಬೇಡ.

(ಜೋನಾಥನ್ ಬೆನ್-ಮೆನಾಕೆಮ್, ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಪಿಎಚ್‌ಡಿ ವಿದ್ಯಾರ್ಥಿ)

ಕೃಪೆ: zeteo.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿಹಾಲ್ ಕುದ್ರೋಳಿ

contributor

Similar News