ಕುಂಭಮೇಳದಲ್ಲಿ ಆಪದ್ಬಾಂಧವರಾಗಿ ಮಾನವೀಯತೆ ಮೆರೆದವರು...

‘‘ದಯೆವಿಲ್ಲದ ಧರ್ಮ ಅದ್ಯಾವುದಯ್ಯ, ದಯೆಯಿರಬೇಕು ಸಕಲ ಪ್ರಾಣಿಗಳಲ್ಲಿ’’ ಎಂದು ಶರಣರೇ ಸಾರಿದ್ದಾರೆ. ಅಂತಹ ದಯೆಯನ್ನು ಮುಸ್ಲಿಮ್ ಬಾಂಧವರು ಸಾಬೀತು ಪಡಿಸಿದ್ದಾರೆ. ಕೋಮುವ್ಯಾಧಿಪೀಡಿತ ಸಂಘಿ ಸಂತಾನಗಳಿಗೆ ಮಾನವೀಯತೆ ಎಂದರೆ ಧರ್ಮವನ್ನು ಮೀರಿದ್ದು ಎಂದು ತೋರಿಸಿಕೊಟ್ಟಿದ್ದಾರೆ.;

Update: 2025-02-02 12:50 IST
ಕುಂಭಮೇಳದಲ್ಲಿ ಆಪದ್ಬಾಂಧವರಾಗಿ ಮಾನವೀಯತೆ ಮೆರೆದವರು...
  • whatsapp icon

ಸನಾತನ ಧರ್ಮದ ಹೆಸರಲ್ಲಿ ಸಂಘಿ ಸರಕಾರ ಪ್ರಾಯೋಜಿತ ಮಹಾಕುಂಭಮೇಳವೆಂಬ ಧಾರ್ಮಿಕ ಜಾತ್ರೆಯಲ್ಲಾದ ಕಾಲ್ತುಳಿತಕ್ಕೆ ಹಲವು ಜನರು ಜೀವಕಳೆದುಕೊಂಡರೆ, ಒಂದಷ್ಟು ಜನ ಗಾಯಗೊಂಡು ನೋವಿನಲ್ಲಿ ನರಳಿದರು.

ಹೆಜ್ಜೆ ಹೆಜ್ಜೆಗೂ ಕ್ಯಾಮರಾಗಳಿವೆ, ಕಂಡಲ್ಲಿ ಪೊಲೀಸರ ಪಹರೆ ಇದೆ ಎಂಬ ಅತಿ ಆತ್ಮವಿಶ್ವಾಸಲ್ಲಿದ್ದ ಉತ್ತರ ಪ್ರದೇಶದ ಯೋಗಿ ಸರಕಾರ ಭಕ್ತ ಸಮೂಹದ ಜನಜಂಗುಳಿಯನ್ನು ನಿಯಂತ್ರಿಸಲಾಗದೆ ಕಂಗಾಲಾಯಿತು. ದಿಢೀರ್ ಸಾವು ನೋವುಗಳಾದಾಗ ಏನು ಮಾಡಬೇಕೆಂಬುದು ತಿಳಿಯದೆ ತ್ರಿವೇಣಿ ಸಂಗಮಕ್ಕೆ ಸಾಗುವ ರಸ್ತೆಗಳನ್ನೆಲ್ಲಾ ಬಂದ್ ಮಾಡಲಾಯಿತು. ಸೇತುವೆಗಳನ್ನು ಹತೋಟಿಗೆ ತೆಗೆದುಕೊಳ್ಳಲಾಯಿತು. ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಯಿತು. ಒಂದು ರೀತಿಯಲ್ಲಿ ಜನರ ಮೇಲೆ ದಿಗ್ಬಂಧನ ವಿಧಿಸಲಾಯಿತು. ಹೈವೇಗಳಲ್ಲಿ ಸಂಚಾರ ದಟ್ಟಣೆ ಯುಂಟಾಗಿ ಟ್ರಾಫಿಕ್ ಜಾಮ್ ಆಗಿತ್ತು. ಯಾತ್ರಾರ್ಥಿಗಳ ಬಸ್‌ಗಳು ದಾರಿ ಮಧ್ಯದಲ್ಲೇ ನಿಂತವು. ಲಕ್ಷಾಂತರ ಭಕ್ತರು ಬೀದಿಗಳಲ್ಲೇ ರಾತ್ರಿ ಕಳೆಯುವಂತಾಗಿತ್ತು.

ಈ ಸರಕಾರಿ ದಿಗ್ಬಂಧನದ ಚಕ್ರವ್ಯೆಹದಲ್ಲಿ ಸಿಲುಕಿಕೊಂಡ ಲಕ್ಷಾಂತರ ಜನ ಭಕ್ತರು ಇದ್ದಲ್ಲೇ ಲಾಕ್ ಆಗಬೇಕಾಯಿತು. ಅಲ್ಲಿಂದ ಪಾರಾಗಿ ಹೋಗುವ ಎಲ್ಲ ದಾರಿಗಳೂ ಮುಚ್ಚಿರುವುದರಿಂದ ಆತಂಕ ಅತಿಯಾಯಿತು. ಎಲ್ಲೂ ಮತ್ತೆ ಕಾಲ್ತುಳಿತ ಉಂಟಾಗಿ ಸಾಯದೆ ಬದುಕಿ ಸುರಕ್ಷಿತವಾಗಿ ಊರು ಸೇರಿದರೆ ಸಾಕಾಗಿತ್ತು. ಕೊರೆಯುವ ಚಳಿ, ನೀರು ಆಹಾರಗಳ ಕೊರತೆ, ಕಾಲ್ತುಳಿತದ ಭಯ, ಜೊತೆಯಾಗಿ ಬಂದವರು ಎಲ್ಲಿ ಜನಜಾತ್ರೆಯಲ್ಲಿ ಕಳೆದು ಹೋಗುತ್ತಾರೋ ಎಂಬ ಆತಂಕ. ಕಳೆದುಕೊಂಡವರನ್ನು ಎಲ್ಲಿ ಹುಡುಕಬೇಕು ಎನ್ನುವ ಹತಾಶೆ. ಹೀಗೆ ಅಸಹಾಯಕತೆ ಅತಿಯಾದಾಗ, ರಕ್ಷಣೆ ಕೊಡಬೇಕಾದ ಸರಕಾರವೇ ಅಘೋಷಿತ ಬೀದಿ ಬಂಧನಕ್ಕೆ ತಳ್ಳಿದಾಗ ದೇವರೇ ಕಾಪಾಡು ಎಂದು ಭಕ್ತರು ಕಾಣದ ದೇವರಿಗೆ ಮೊರೆ ಇಟ್ಟರು.

ಆದರೆ ಆಗ ದೇವರ ರೂಪದಲ್ಲಿ ಬಂದವರು ಆ ಆಪದ್ಬಾಂಧವರು. ಸನಾತನಿ ಸಂಘಿಗಳು ದ್ವೇಷಿಸುವ ಸಮುದಾಯದವರು. ಆ ಪ್ರದೇಶದ ಮಸೀದಿಗಳ ಬಾಗಿಲುಗಳನ್ನು ತೆರೆದರು. ದರ್ಗಾಗಳಷ್ಟೇ ಅಲ್ಲಾ ತಮ್ಮ ಮನೆಗಳ ಬಾಗಿಲುಗಳನ್ನೂ ತೆರೆದು ಆತಂಕಪೀಡಿತರನ್ನು ಒಳಗೆ ಬರಮಾಡಿಕೊಂಡರು. ನೂರಲ್ಲಾ, ಸಾವಿರವಲ್ಲಾ, ಸರಿಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಆಶ್ರಯವನ್ನು ಒದಗಿಸಿದರು. ಚಳಿಗೆ ಕಂಬಳಿಗಳನ್ನು ಕೊಟ್ಟರು, ಮಲಗಲು ಹಾಸಿಗೆಯ ವ್ಯವಸ್ಥೆ ಮಾಡಿದರು, ಹಸಿದವರಿಗೆ ಆಹಾರ ನೀರು ಒದಗಿಸಿದರು. ಅಗತ್ಯ ಇರುವವರಿಗೆ ಔಷಧೋಪಚಾರ ಹಾಗೂ ವೈದ್ಯಕೀಯ ನೆರವನ್ನು ಮಾಡಿಕೊಟ್ಟರು.

ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಾದ ಖುಲ್ದಾಬಾದ್, ನಖ್ಖಸ್ ಕೋಹ್ನಾ, ರೋಷನ್ ಬಾಘ್, ಹಿಕ್ಮತ್ ಗಂಜ್, ರಾಣಿ ಮಂಡಿ ಹಾಗೂ ಶಾಗಂಜ್ ಪ್ರದೇಶದ ಮುಸ್ಲಿಮ್ ನಿವಾಸಿಗಳು ತಮ್ಮ ಮನೆಯಲ್ಲೇ ಹಿಂದೂ ಧರ್ಮೀಯರಿಗೆ ಅನ್ನ, ಆಹಾರ ಆಶ್ರಯ ಕೊಟ್ಟು ಮಾನವೀಯತೆ ಮೆರೆದರು. ಸಂಚಾರ ದಟ್ಟನೆಯಲ್ಲಿ ಸಿಲುಕಿದ ಭಕ್ತರಿಗೂ ಸಹ ಮುಸ್ಲಿಮ್ ಸಮುದಾಯದವರು ಅಗತ್ಯ ವಸ್ತುಗಳನ್ನು ಪೂರೈಸಿದರು, ಸಾರ್ವಜನಿಕ ಅನ್ನ ಸಂತರ್ಪಣೆಯನ್ನೂ ಆಯೋಜಿಸಿದ್ದರು ಎಂದು ‘ದೈನಿಕ್ ಭಾಸ್ಕರ್’ ಪತ್ರಿಕೆ ವಿವರವಾಗಿ ವರದಿ ಮಾಡಿದೆ.

ಇದೇ ಮುಸ್ಲಿಮ್ ಸಮುದಾಯವನ್ನು ಈ ಸನಾತನಿ ಧಾರ್ಮಿಕ ಆಚರಣೆಯಿಂದ ಸಂಘಿ ಸರಕಾರ ದೂರ ಇಟ್ಟಿತ್ತು. ಮಹಾ ಕುಂಭಮೇಳದಲ್ಲಿ ಮುಸ್ಲಿಮರಿಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲವೆಂದು ಪ್ರಕಟಿಸಿ ಹಿಂದುತ್ವವಾದಿ ಮತಾಂಧತೆಯನ್ನು ತೋರ್ಪಡಿಸಲಾಗಿತ್ತು. ಆದರೆ ಹಿಂದೂ ಸಮುದಾಯದ ಯಾತ್ರಾರ್ಥಿಗಳು ತೀವ್ರ ಸಂಕಷ್ಟದಲ್ಲಿದ್ದಾಗ ರಕ್ಷಣೆ ಕೊಡಬೇಕಾದ ಸರಕಾರಗಳೇ ವಿಫಲವಾದಾಗ ಅನ್ಯಧರ್ಮದವರು ಓಡಿ ಬಂದು ಅನ್ನ, ಆಶ್ರಯ ಒದಗಿಸಿದ್ದರ ಹಿಂದೆ ಧಾರ್ಮಿಕತೆಯನ್ನೂ ಮೀರಿದ ಮಾನವೀಯತೆ ಇತ್ತು. ಇಂತಹ ಕಳಕಳಿ ಜಿಹಾದಿಗಳೆಂದು ಆರೋಪಿಸಿ ಒಂದು ಸಮುದಾಯದ ವಿರುದ್ಧ ದ್ವೇಷ ಸಾಧಿಸುವ ಸಂಘಿ ಸಂತಾನಗಳಿಗೆ ಮಾನವೀಯ ಮೌಲ್ಯಗಳ ಪಾಠ ಹೇಳಿಕೊಡುವಂತಿತ್ತು. ಕೋಮು ಸೌಹಾರ್ದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು.

ಯಾವುದೇ ಸಮುದಾಯದ ಜನರು ತೊಂದರೆಯಲ್ಲಿದ್ದಾಗ ಸಹಾಯಹಸ್ತ ಚಾಚುವುದೇ ನಿಜವಾದ ಧರ್ಮ. ‘‘ದಯೆವಿಲ್ಲದ ಧರ್ಮ ಅದ್ಯಾವುದಯ್ಯ, ದಯೆಯಿರಬೇಕು ಸಕಲ ಪ್ರಾಣಿಗಳಲ್ಲಿ’’ ಎಂದು ಶರಣರೇ ಸಾರಿದ್ದಾರೆ. ಅಂತಹ ದಯೆಯನ್ನು ಮುಸ್ಲಿಮ್ ಬಾಂಧವರು ಸಾಬೀತು ಪಡಿಸಿದ್ದಾರೆ. ಕೋಮುವ್ಯಾಧಿಪೀಡಿತ ಸಂಘಿ ಸಂತಾನಗಳಿಗೆ ಮಾನವೀಯತೆ ಎಂದರೆ ಧರ್ಮವನ್ನು ಮೀರಿದ್ದು ಎಂದು ತೋರಿಸಿಕೊಟ್ಟಿದ್ದಾರೆ.

ಇದೆಲ್ಲಾ ಹೇಗೆ ಸಾಧ್ಯ? ಹಿಂದುತ್ವವಾದಿ ಸಂಘಿಗಳ ರೀತಿಯಲ್ಲಿ ಈ ಮುಸ್ಲಿಮ್ ಸಮುದಾಯದವರೂ ದ್ವೇಷ ಸಾಧನೆಗೆ ಮುಂದಾಗಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿತ್ತಾ? ಇಂತಹ ಕಳಕಳಿ ಸಾಧ್ಯವಾಗುವುದು ಎಲ್ಲ ಧರ್ಮಗಳನ್ನೂ ಮೀರಿದ ಮಾನವೀಯತೆಯಲ್ಲಿ ಮಾತ್ರ. ಕಷ್ಟದಲ್ಲಿರುವ ಸಹಜೀವಿಗಳ ಜಾತಿ ಧರ್ಮ ನೋಡದೇ ಮೊದಲು ಸಹಾಯಕ್ಕೆ ಧಾವಿಸುವುದೇ ಮಾನವೀಯ ಧರ್ಮ. ಅದೊಂದೇ ದಯೆ ಇರುವ ಜಗತ್ತಿನ ಧರ್ಮ. ಪ್ರತಿಯೊಬ್ಬ ಮನುಷ್ಯರಲ್ಲೂ ಅಂತರ್ಗತವಾಗಿರುವ ಧರ್ಮಾತೀತ ಧರ್ಮ.

ಮಹಾಕುಂಭಮೇಳದಲ್ಲಿ ಹಿಂದೂ ಭಕ್ತರು ಆತಂಕ, ಸಂಕಷ್ಟದಲ್ಲಿದ್ದಾಗ ಮುಸ್ಲಿಮ್ ಬಾಂಧವರು ತಮ್ಮ ಮನೆ, ಮಸೀದಿಗಳ ಬಾಗಿಲನ್ನೇ ತೆರೆದು ಅನ್ನ, ಆಶ್ರಯ ಕೊಟ್ಟು ತಮ್ಮ ಮಾನವೀಯತೆ ತೋರಿದ್ದಾರೆ. ಅದೇ ರೀತಿ ಎಲ್ಲಿಯೇ ಯಾವುದೇ ಮನುಷ್ಯರು ಸಂಕಷ್ಟದಲ್ಲಿದ್ದರೂ ಜಾತಿ, ಧರ್ಮಗಳನ್ನು ಪಕ್ಕಕ್ಕಿಟ್ಟು ಸಹಾಯ ಮಾಡಲು ಹಿಂದೂ ಸಮುದಾಯದವರು ಮುಂದಾಗಬೇಕಿದೆ. ಕೋಮುಸೌಹಾರ್ದವನ್ನು ದೇಶಾದ್ಯಂತ ಕಾಪಾಡಿಕೊಳ್ಳಬೇಕಿದೆ. ಧರ್ಮದ್ವೇಷದ ಮೂಲಕವೇ ಜನರನ್ನು ಒಡೆದು ಸನಾತನ ಮನು ಸಂಸ್ಕೃತಿಯನ್ನು ಮತ್ತೆ ಹೇರಿಕೆ ಮಾಡಲು ಪ್ರಯತ್ನಿಸುತ್ತಿರುವ ಹಿಂದುತ್ವವಾದಿಗಳ ಹುನ್ನಾರವನ್ನು ಸೋಲಿಸಲೇಬೇಕಿದೆ. ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಶಿಕಾಂತ ಯಡಹಳ್ಳಿ

contributor

Similar News