ವೇಗವಾಗಿ ಸಾಗುತ್ತಿರುವ ಟೋಲ್ ಪ್ಲಾಝಾ ಕಾಮಗಾರಿ: ಶೀಘ್ರದಲ್ಲೇ ಕಾರ್ಯಾರಂಭ ಸಾಧ್ಯತೆ?

Update: 2025-04-21 17:10 IST
ವೇಗವಾಗಿ ಸಾಗುತ್ತಿರುವ ಟೋಲ್ ಪ್ಲಾಝಾ ಕಾಮಗಾರಿ: ಶೀಘ್ರದಲ್ಲೇ ಕಾರ್ಯಾರಂಭ ಸಾಧ್ಯತೆ?
  • whatsapp icon

ಚಾಮರಾಜನಗರ : ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕರ್ನಾಟಕ ತಮಿಳುನಾಡು ನಡುವಿನ ದಿಂಡಿಗಲ್‌ಗೆ ಗಡಿ ಚಾಮರಾಜನಗರದ ಮೂಲಕ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-948ರಲ್ಲಿ ಶೀಘ್ರದಲ್ಲೇ ಟೋಲ್ ಸಂಗ್ರಹ ಕಾರ್ಯಾರಂಭ ಆಗುವ ಸಾಧ್ಯತೆ ಇದೆ.

ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದ ಎದುರು ಟೋಲ್ ಪ್ಲಾಝಾ ನಿರ್ಮಾಣ ಕಾಮಗಾರಿ ಕೆಲಸ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಎರಡೂ ಕಡೆಗಳಿಂದ ಬರುವ ವಾಹನಗಳಿಂದ ಟೋಲ್ ಪಾವತಿ ಮಾಡಿಸಿಕೊಳ್ಳುವ ಕೌಂಟರ್‌ಗಳು, ಹೆದ್ದಾರಿ ಪಕ್ಕದಲ್ಲಿ ಕಚೇರಿ ಮತ್ತು ಪ್ರಯಾಣಿಕರಿಗೆ ಶೌಚಗೃಹ, ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಛಾವಣಿ, ಸೂಚನಾ ಫಲಕಗಳ ಅಳವಡಿಕೆ ಮಾಡಲಾಗುತ್ತಿದೆ. ಕಾಮಗಾರಿ ಕೆಲಸ ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಟೋಲ್ ಸಂಗ್ರಹ ಆರಂಭವಾಗುವ ಸಾಧ್ಯತೆ ಇದೆ.

ಕಳೆದ ಕೆಲವು ವರ್ಷಗಳ ಹಿಂದೆ ಈ ಟೋಲ್ ಪ್ಲಾಝಾವನ್ನು ಚಾಮರಾಜನಗರ ತಾಲೂಕಿನ ಹರದನಹಳ್ಳಿ ಸಮೀಪದಲ್ಲಿ ನಿರ್ಮಾಣ ಮಾಡಲಾಗಿತ್ತು.

ಆದರೆ ಪ್ಲ್ಯಾನ್ ಬದಲಾದ ಹಿನ್ನೆಲೆಯಲ್ಲಿ ಕಾರ್ಯಾರಂಭವಾಗಲಿಲ್ಲ. ಈ ಜಾಗದ ಬದಲಿಗೆ ಸುವರ್ಣಾವತಿ ಜಲಾಶಯದ ಎದುರು ಟೋಲ್ ಪ್ಲಾಝಾ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಯಿತು. ಇದೀಗ ಟೋಲ್ ಗೇಟ್ ಸ್ಥಾಪನೆ ಕಾರ್ಯ ಮುಗಿಯುತ್ತಿದ್ದು, ಮುಂದಿನ ದಿನಗಳಲ್ಲಿ ವಾಹನ ಸವಾರರು ಹೆದ್ದಾರಿ ಸುಂಕ ಕಟ್ಟಿ ಸಂಚರಿಸಬೇಕಾಗುತ್ತದೆ.

ಚಾಮರಾಜನಗರ ಮಾರ್ಗವಾಗಿ ದಿಂಡಿಗಲ್‌ಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ. ಚಾಮರಾಜನಗರದಿಂದ ಹಾಸನೂರು-ದಿಂಬಂ-ಬಣ್ಣಾರಿ-ಸತ್ಯಮಂಗಲ-ಧರ್ಮಪುರಿ-ದಿಂಡಿಗಲ್ ಮಾರ್ಗದಲ್ಲಿ ವಾಹನಗಳ ಸಂಚಾರ ಅಧಿಕ ಪ್ರಮಾಣದಲ್ಲಿವೆ. ಈ ಹೆದ್ದಾರಿ ಮಾರ್ಗವಾಗಿ ತಮಿಳುನಾಡಿನ ಮಾರುಕಟ್ಟೆಗಳಿಗೆ ತರಕಾರಿ, ಹಣ್ಣುಗಳನ್ನು ರೈತರು ಸಾಗಣೆ ಮಾಡುತ್ತಾರೆ. ಅಲ್ಲದೇ ಸರಕು-ಸಾಗಣೆಗಳ ಭಾರೀ ಗಾತ್ರದ ವಾಹನಗಳ ಓಡಾಟಕ್ಕೂ ಹೆದ್ದಾರಿ ಮುಖ್ಯವಾಗಿದೆ.

ಹೀಗಾಗಿ ಟೋಲ್‌ಗೇಟ್‌ನಲ್ಲಿ ಶುಲ್ಕ ಪಾವತಿ ಆರಂಭವಾದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಖಜಾನೆಗೆ ದೊಡ್ಡ ಮೊತ್ತದ ಲಾಭ ಹರಿದು ಬರಲಾರಂಭಿಸಲಿದೆ.

ಎರಡು ಕಡೆ ಶುಲ್ಕ ಪಾವತಿ :

ಪ್ರಸಕ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುವರ್ಣಾವತಿ ಜಲಾಶಯದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್‌ಗೆ ಶುಲ್ಕ ಪಾವತಿ ಮಾಡುವುದರೊಂದಿಗೆ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಅರಣ್ಯ ಇಲಾಖೆಗೆ ಹಸಿರು ಶುಲ್ಕವನ್ನೂ ಕಟ್ಟಬೇಕು.

ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಪುಣಜನೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ ಗ್ರೀನ್ ಟ್ಯಾಕ್ಸ್ ಗೇಟ್ ಇದೆ. ಇಲ್ಲಿ ಚಾಮರಾಜನಗರ ಕಡೆಯಿಂದ ಬರುವ ಲಘು ವಾಹನಗಳಿಗೆ 20 ರೂ., ಭಾರೀ ಮೋಟಾರ್ ವಾಹನಗಳಿಗೆ 50 ರೂ. ಪ್ರವೇಶ ಶುಲ್ಕ ಕಟ್ಟಬೇಕು. ಇಲ್ಲಿನ ಸಿಬ್ಬಂದಿ ಹೇಳುವ ಪ್ರಕಾರ ಒಂದು ದಿನಕ್ಕೆ 2ರಿಂದ 3 ಸಾವಿರ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ವಾಹನಗಳ ಪ್ರವೇಶ ಶುಲ್ಕದಿಂದ ಅರಣ್ಯ ಇಲಾಖೆಯ ಬೊಕ್ಕಸಕ್ಕೂ ಒಳ್ಳೆಯ ಆದಾಯ ಬರುತ್ತಿದೆ.

ರಾತ್ರಿ ಸಂಚಾರಕ್ಕೆ ಅವಕಾಶವಿಲ್ಲ:

ಚಾಮರಾಜನಗರದಿಂದ ತಮಿಳುನಾಡಿಗೆ ದಿಂಬಂ ಮೂಲಕ ಸತ್ಯಮಂಗಲಕ್ಕೆ ಹೋಗುವ ಮಾರ್ಗದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ರ ತನಕ ಸಂಚಾರ ಬಂದ್ ಆಗಿದೆ. ಈ ಮಾರ್ಗದಲ್ಲಿ ಸಿಗುವ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗಾಗಿ ಚೆನ್ನೈ ಹೈಕೋರ್ಟ್ 2022ರಲ್ಲಿ ರಾತ್ರಿ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಿತು. 2019ರಲ್ಲಿ ತಮಿಳುನಾಡಿನ ಈರೋಡ್ ಜಿಲ್ಲಾಧಿಕಾರಿ ರಾತ್ರಿ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ಆದೇಶದ ಅನುಷ್ಠಾನ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ಮಾಡಿ ಕೋರ್ಟ್ ಈ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಸ್ಥಳೀಯ ವಾಹನಗಳು, ಸರಕಾರಿ ವಾಹನಗಳು, ಆ್ಯಂಬುಲೆನ್ಸ್‌ಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದ ಬಳಿ ನಿರ್ಮಾಣ ಮಾಡುತ್ತಿರುವ ಟೋಲ್ ಪ್ಲಾಝಾ ಬಹುಶಃ ಕೆಲವೇ ದಿನಗಳಲ್ಲಿ ಆರಂಭವಾಗಬಹುದು.

-ರಾಹುಲ್ ಗುಪ್ತಾ, ಯೋಜನಾ ನಿರ್ದೇಶಕ

ಮೃತ್ಯುಕೂಪವಾಗಿರುವ ಹೆದ್ದಾರಿ :

ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಅಪಘಾತಗಳು ನಡೆಯುತ್ತಲೇ ಇದ್ದು, ಟೋಲ್ ನಿರ್ಮಾಣದತ್ತ ಚಿತ್ತ ನೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆಗಳತ್ತಲೂ ಕಿವಿಗೊಡಬೇಕಾಗಿದೆ.

ಸೋಮವಾರಪೇಟೆ ಗ್ರಾಮಸ್ಥರು ಹೆದ್ದಾರಿಯಲ್ಲಿ ಅಪಘಾತ ತಪ್ಪಿಸಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಅಟ್ಟುಗೂಳಿಪುರದಲ್ಲೂ ಇತ್ತೀಚೆಗಷ್ಟೇ ಅಪಘಾತ ನಡೆದಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಗ್ರಾಮಗಳ ಜನರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ಅದರಂತೆ ಕ್ರಮ ಕೈಗೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ನಾ.ಅಶ್ವಥ್ ಕುಮಾರ್

contributor

Similar News