ಮಕ್ಕಳ ಜೀವನದ ಜತೆ ಚೆಲ್ಲಾಟವಾಡುವ ಅನಧಿಕೃತ ಶಾಲೆಗಳು
ಹೊಸಕೋಟೆ: ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಅನಧಿಕೃತ ಶಾಲೆಗಳಿದ್ದು, ಪ್ರತೀ ವರ್ಷ ನಾಯಿಕೊಡೆಗಳಂತೆ ಹತ್ತಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಹೈಟೆಕ್ ಮಾದರಿ ಶಿಕ್ಷಣ ನೀಡುತ್ತೇವೆಂಬ ಪ್ರಚಾರ ಗಿಟ್ಟಿಸಿ, ಪೋಷಕರನ್ನು ಮರುಳು ಮಾಡಿ, ಲಕ್ಷಕ್ಕೂ ಹೆಚ್ಚು ರೂ. ಡೊನೇಷನ್ ವಸೂಲಿ ಮಾಡುತ್ತಿದ್ದರೂ, ಶಿಕ್ಷಣ ಇಲಾಖೆ ಯಾವ ಶಾಲೆಗೆ ಮಾನ್ಯತೆ ಇದೆ. ಅನಧಿಕೃತ ಶಾಲೆ ಯಾವುದೆಂದು ಪೋಷಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳನ್ನು ನುಚ್ಚು ನೂರು ಮಾಡುತ್ತಿವೆ. ಜಿಲ್ಲೆಯಲ್ಲಿ ತಲೆ ಎತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ ಕಣ್ಣಾಮುಚ್ಚಾಲೆ ಆಡುತ್ತಿದೆ.
ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಒಳ್ಳೆಯ ಶಿಕ್ಷಣ ನೀಡಿ ಉನ್ನತ ಹುದ್ದೆಗೇರಿಸಬೇಕು ಅಂತ ಅದೆಷ್ಟೋ ಪೋಷಕರು ಹಗಲಿರುಳು ಕಷ್ಟಪಟ್ಟು ದುಡಿದು ಮಕ್ಕಳನ್ನು ಹೈಟೆಕ್ ಶಾಲೆಗಳಿಗೆ ದಾಖಲಾತಿ ಮಾಡಿಸುತ್ತಾರೆ. ಆದರೆ ಲಕ್ಷಾಂತರ ರೂ. ಶುಲ್ಕ ಕಟ್ಟಿಸಿಕೊಂಡ ಅನಧಿಕೃತ ಶಾಲೆಗಳು ಪೋಷಕರ ಆಸೆಗಳಿಗೆ ಬೆಂಕಿ ಹಚ್ಚಲು ಮುಂದಾಗಿವೆ.
ಶಾಲೆಗಳ ದಾಖಲಾತಿ ಪ್ರಕ್ರಿಯೆ ಶುರುವಾಗಿದ್ದರೂ, ಶಿಕ್ಷಣ ಇಲಾಖೆ ಮಾತ್ರ ಮೌನ ವಹಿಸಿದ್ದು, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು. ಜತೆಗೆ ಆಯಾ ಜಿಲ್ಲೆಗಳ ಪ್ರಮುಖ ಪತ್ರಿಕೆಗಳಲ್ಲಿ ಈ ಪಟ್ಟಿ ಪ್ರಕಟವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದರೂ ಶಿಕ್ಷಣ ಇಲಾಖಾ ಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.
ಬೇರೆ ಪಠ್ಯ ಕ್ರಮ ಬೋಧಿಸುತ್ತಿರುವ ಶಾಲೆಗಳು: ನೋಂದಣಿ ಮತ್ತು ಮಾನ್ಯತೆ ಪಡೆದ ಶಾಲೆಯಲ್ಲಿ ಅಧಿ ಕೃತ ಪಠ್ಯಕ್ರಮದ ಬದಲಾಗಿ ಬೇರೆ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಪನಿರ್ದೇಶಕರು (ಆಡಳಿತ), ಇವರ ಕಚೇರಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಸೇವಾ ನಿಯಮಾವಳಿ ಅನ್ವಯ ಕ್ರಮವಹಿಸಲಾಗುವುದು ಎನ್ನುತ್ತಾರೆ ಜಿಲ್ಲಾ ಉಪನಿರ್ದೇಶಕರು. ಒಟ್ಟಿನಲ್ಲಿ ಜಿಲ್ಲೆಯ ಹಲವೆಡೆ ಪೋಷಕರಿಗೆ ದಾರಿ ತಪ್ಪಿಸುತ್ತಿರುವ ಅನಧಿಕೃತ ಶಾಲೆಗಳ ಕಳ್ಳಾಟದ ವಿರುದ್ಧ ಶಿಕ್ಷಣ ಇಲಾಖೆ ಇನ್ನಾದರೂ ಚಾಟಿ ಬೀಸಬೇಕಿದೆ. ಮುಂದಿನ ದಿನಗಳಲ್ಲಿ ಪೋಷಕರು ಮೋಸ ಹೋಗದಂತೆ ತಡೆಯಲು ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೊಳಿಸಿ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕೆಂಬುದೇ ಪೋಷಕರ ಆಗ್ರಹವಾಗಿದೆ.
ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇಲಾಖೆಯಿಂದ ನೋಂದಣಿ ಮತ್ತು ಮಾನ್ಯತೆ ಪಡೆದ ಖಾಸಗಿ ಶಾಲೆಗಳ ವಿವರಗಳನ್ನು ಪೋಷಕರಿಗೆ ಅನುಕೂಲವಾಗುವಂತೆ ಮಾಹಿತಿಗಾಗಿ ಪ್ರಕಟಿಸಿದ್ದಾರೆ. ಕಚೇರಿಯ ಆವರಣದಲ್ಲಿ ಸಾರ್ವಜನಿಕ ಸಾರ್ವಜನಿಕರಿಗೆ ಗೋಚರವಾಗುವಂತೆ ಶಾಲೆಗಳ ಹೆಸರು, ಮಾಧ್ಯಮ, ಪಠ್ಯಕ್ರಮ ಹಾಗೂ ವಿಳಾಸದ ವಿವರಗಳನ್ನು ಪ್ರಕಟಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ 92 ನೋಂದಣಿ, ಮಾನ್ಯತೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಾಲೆಗಳ ಪಟ್ಟಿ ಸರಕಾರದ ಆದೇಶದಂತೆ ಇಲಾಖೆ ವೆಬ್‌ಸೈಟ್, ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ಕಚೇರಿಯ ನಾಮಫಲಕದಲ್ಲಿ ಪ್ರಕಟವಾಗಿದ್ದು, ಪೋಷಕರು ಅಧಿಕೃತ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾಡಿಸಬೇಕು.
-ಪದ್ಮನಾಭ, ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸಕೋಟೆ
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಲೆಂದು ಸಾಲ ಮಾಡಿ ಖಾಸಗಿ ಶಾಲೆಗೆ ಸೇರಿಸುತ್ತೇವೆ. ಬಹುತೇಕ ಶಾಲೆಗಳಲ್ಲಿ ದಾಖಲಾತಿ ಮುಕ್ತಾಯಗೊಳ್ಳುತ್ತಿದ್ದು, ಯಾವ ಶಾಲೆಗೆ ಮಾನ್ಯತೆ ಇದೆ, ಇಲ್ಲ ಎಂದು ನಮಗೆ ತಿಳಿದಿಲ್ಲ. ಸಾವಿರಾರು ರೂ.ಗಳ ಡೊನೇಷನ್ ಕೊಟ್ಟು ಖಾಸಗಿ ಶಾಲೆಗೆ ಸೇರಿಸಿದ ಮೇಲೆ, ಅನಧಿಕೃತ ಶಾಲೆ ಎಂದು ಗೊತ್ತಾದರೆ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾವುಂಟಾಗುತ್ತದೆ.
- ಸಂತೋಷ್, ಪೋಷಕರು ಹೊಸಕೋಟೆ
ಈಗಾಗಲೇ ಜಿಲ್ಲೆಯ ಎಲ್ಲ ಬಿಇಒ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಗೋಚರಿಸುವಂತೆ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ಇಲ್ಲದ ಶಾಲೆಗಳಿಗೆ ನೋಂದಣಿಗೆ ಪೂರಕ ದಾಖಲೆಗಳನ್ನು ಒದಗಿಸಿಕೊಳ್ಳಲು ಸಮಯಾವಕಾಶ ನೀಡಲಾಗಿದೆ. ಅನಧಿಕೃತ ಶಾಲೆಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡಲು ಪ್ರಕ್ರಿಯೆ ಆರಂಭವಾಗಿದೆ.
-ಕೃಷ್ಣಮೂರ್ತಿ, ಉಪ ನಿರ್ದೇಶಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ