ಅಸ್ಪಶ್ಯತೆ: ಅಂಬೇಡ್ಕರ್ ಮತ್ತು ಗಾಂಧಿ

Update: 2024-04-25 07:20 GMT

ಅಸ್ಪಶ್ಯತೆಯ ಕುರಿತು ಮಹಾತ್ಮಾ ಗಾಂಧೀಜಿಯವರ ಅಭಿಪ್ರಾಯಗಳು ಭಾರತೀಯ ಸಾರ್ವಜನಿಕ ಜೀವನದಲ್ಲಿ ರಾಜಕಾರಣಿ-ಸಂತನೆಂಬ ದ್ವಿಪಾತ್ರದಲ್ಲಿ ಬಿಂಬಿತವಾಗಿವೆ. ಹಿಂದೂಗಳು ಉದ್ದೇಶಪೂರ್ವಕವಾಗಿ ಅಸ್ಪಶ್ಯತೆಯನ್ನು ತಮ್ಮ ಧರ್ಮದ ಭಾಗವೆಂದು ಮತ್ತು ತಮ್ಮ ಸಹೋದರರ ಸಮೂಹವನ್ನು ಸ್ಪರ್ಶಿಸುವುದು ಪಾಪವಲ್ಲ ಎಂದು ಪರಿಗಣಿಸುವುವವರೆಗೂ ಸ್ವರಾಜ್ಯವನ್ನು ಸಾಧಿಸಲಾಗುವುದಿಲ್ಲ ಎಂದು ಅವರು ಆಗಾಗ ಪುನರಾವರ್ತನೆ ಮಾಡುತ್ತಿದ್ದರು. ಶೋಷಣೆಗೆ ಒಳಗಾದ ವರ್ಗಗಳ ಪರವಾಗಿ ಮಾತನಾಡುವುದಾಗಿ ಹೇಳಿದ್ದಕ್ಕಾಗಿ, ಸ್ವರಾಜ್ಯ ಬೇಡಿಕೆಯನ್ನು ವಿರೋಧಿಸಿದ್ದಕ್ಕಾಗಿ ಗಾಂಧೀಜಿ ಬ್ರಿಟಿಷರ ಮೇಲೆ ಕೋಪಗೊಂಡರು. ಏಕೆಂದರೆ ಶೋಷಿತ ವರ್ಗಗಳಿಗೆ ಮೇಲ್ಜಾತಿ ಹಿಂದೂಗಳಿಂದ ರಕ್ಷಣೆ ಬೇಕು ಎಂದು ಅವರು ಭಾವಿಸಿದ್ದರು. ಶೋಷಣೆಗೆ ಒಳಗಾದ ವರ್ಗಗಳಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಅವರು ನಿರಾಕರಿಸಿದ್ದರು; ಏಕೆಂದರೆ ಅದು ಹಿಂದೂಗಳ ನಡುವೆ ಹಿಂಸಾಚಾರ ಮತ್ತು ರಕ್ತಪಾತಕ್ಕೆ ಕಾರಣವಾಗುವ ವಿಭಜನೆಯನ್ನು ಸೃಷ್ಟಿಸುತ್ತದೆ ಎಂದು ಅವರು ನಂಬಿದ್ದರು.1921ರ ಅಕ್ಟೋಬರ್‌ನಲ್ಲಿ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಬರೆದಂತೆ ಹಿಂದೂಗಳು ಅಸ್ಪಶ್ಯರ ದುರವಸ್ಥೆಯನ್ನು ಸುಧಾರಿಸದಿದ್ದರೆ ವಿದೇಶಿ ಪ್ರಾಬಲ್ಯದ ಗುಲಾಮಗಿರಿಯ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ರಾಷ್ಟ್ರೀಯ ಆಂದೋಲನದ ಬೆಂಬಲಕ್ಕೆ ಪ್ರತಿಯಾಗಿ ರಾಜಕೀಯ ವಿನಾಯಿತಿಗಳನ್ನು ಅವರಿಗೆ ನೀಡಿದಲ್ಲಿ ಯಾವುದೇ ಅಸ್ಪಶ್ಯತೆ ಸ್ವರಾಜ್ಯದ ಅಧೀನದಲ್ಲಿ ಇರುವುದಿಲ್ಲ. ಸಂಪ್ರದಾಯ ಅಥವಾ ಧರ್ಮದ ಹೆಸರಿನಲ್ಲಿ ವ್ಯಕ್ತಿಗಳ ಅಥವಾ ವರ್ಗಗಳ ಯಾವುದೇ ದುರಹಂಕಾರದ ಶ್ರೇಷ್ಠತೆಯನ್ನು ಕಾನೂನು ಸಹಿಸುವುದಿಲ್ಲ ಎಂದು ಗಾಂಧೀಜಿ ಒತ್ತಿ ಹೇಳಿದ್ದರು.

ಧರ್ಮದ ಹೆಸರಿನಲ್ಲಿ ಅಸ್ಪಶ್ಯತೆಯನ್ನು ಶಾಶ್ವತಗೊಳಿಸುವುದು ಹೇಸಿಗೆಯನ್ನು ಹುಟ್ಟಿಸುತ್ತದೆ ಮತ್ತು ವೇದಗಳು ಅನುಮೋದಿಸಿರುವ ಅಸ್ಪಶ್ಯತೆಯ ಪ್ರತಿಪಾದನೆಯು ತಪ್ಪು ಕಲ್ಪನೆ ಎಂದು ಗಾಂಧೀಜಿ ಪುನರುಚ್ಚರಿಸಿದರು. ಆದರೆ ಗಾಂಧೀಜಿ ವರ್ಣಾಶ್ರಮದ ಸಿದ್ಧಾಂತವನ್ನು ಬೆಂಬಲಿಸುತ್ತಾರೆ. ಏಕೆಂದರೆ ಅದು ವಿಭಿನ್ನ ವೃತ್ತಿಗಳಿಗೆ ಸೇರಿದ ಪುರುಷರ ಕರ್ತವ್ಯಗಳನ್ನು ವ್ಯಾಖ್ಯಾನಿಸುತ್ತದೆ ಎಂದು ಅವರು ನಂಬಿದ್ದರು. ಜನ್ಮವನ್ನು ಆಧರಿಸಿದ್ದರೂ ವರ್ಣಾಶ್ರಮ ಗಾಂಧೀಜಿಯವರ ಗ್ರಹಿಕೆಯಂತೆ ಶೂದ್ರ ಕಾರ್ಮಿಕ ಮತ್ತು ಬ್ರಾಹ್ಮಣ ಅಥವಾ ವಿಚಾರವಂತರೆಲ್ಲರೂ ಒಂದೇ ಪ್ರಮಾಣದ ಪರಿಗಣನೆಗೆ ಅರ್ಹರಾಗಿದ್ದಾರೆ.

ಅಸ್ಪಶ್ಯತೆಯ ವಿರುದ್ಧ ಪ್ರಬಲರಾಗಿದ್ದು ಶತಮಾನಗಳ ಪೂರ್ವಗ್ರಹಗಳು ಮತ್ತು ಕುರುಡು ಸಾಂಪ್ರದಾಯಿಕತೆಯನ್ನು ಜಯಿಸಲು ಗಾಂಧೀಜಿ ಮೇಲ್ಜಾತಿ ಹಿಂದೂಗಳ ಕಡೆಗೆ ಶಾಂತಿಯುತ, ತಾಳ್ಮೆಯ ಮತ್ತು ಮನವೊಲಿಸುವ ನೀತಿಯನ್ನು ಅಳವಡಿಸಿಕೊಂಡಿದ್ದರು. ಅವರ ಆಶ್ರಮದಲ್ಲಿ ಅಸ್ಪಶ್ಯರನ್ನು ಇತರರೊಂದಿಗೆ ಸಮಾನವಾಗಿ ಪರಿಗಣಿಸಿದ್ದರು ಮತ್ತು ಗಾಂಧೀಜಿ ಅಸ್ಪಶ್ಯ ಹುಡುಗಿಯೊಬ್ಬಳನ್ನು ತಮ್ಮ ಮಗಳಾಗಿ ದತ್ತು ಪಡೆದುಕೊಂಡಿದ್ದರು. ಮೇಲಾಗಿ, ಗಾಂಧೀಜಿ ಮರುಹುಟ್ಟು ಪಡೆದರೆ ಅಸ್ಪಶ್ಯನಾಗಿಯೇ ಹುಟ್ಟುತ್ತೇನೆಂದು ಬಯಸಿದ್ದರು. ಅಸ್ಪಶ್ಯರು ತಾಳ್ಮೆಯಿಂದ ಇರಬೇಕು ಮತ್ತು ಸಮಾಜ ಸುಧಾರಕರಿಗೆ ಸಹಕಾರ, ಗೌರವ ನೀಡಬೇಕು ಎಂದು ಸಲಹೆ ನೀಡಿದ್ದರು. ಅಸ್ಪಶ್ಯರು ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವಂತೆ ಪ್ರೇರೇಪಿಸಿದರು. ಸತ್ತ ಪ್ರಾಣಿಯ ಮಾಂಸ ಮತ್ತು ಉಳಿದ ಕೊಳೆತ ಆಹಾರಗಳನ್ನು ತಿನ್ನಬಾರದು ಮತ್ತು ಮದ್ಯಪಾನ ಹಾಗೂ ಜೂಜಾಟವನ್ನು ತ್ಯಜಿಸುವಂತೆ ಸಲಹೆ ನೀಡಿದರು ಮತ್ತು ಅವರ ಮಕ್ಕಳಿಗೆ ಶಿಕ್ಷಣ ನೀಡುವಂತೆ ಒತ್ತಾಯಿಸಿದರು.

ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರೂ ಮೊದಲು ಹಿಂದೂಗಳ ಜೊತೆಗೆ ಅಸ್ಪಶ್ಯರನ್ನು ಒಗ್ಗೂಡಿಸಲು ಕೆಲಸ ಮಾಡಲು ಪ್ರಯತ್ನಿಸಿದರು. ಆದರೂ ಅಂಬೇಡ್ಕರ್ ಪ್ರತೀ ಹಳ್ಳಿಯಲ್ಲಿ ಅಸ್ಪಶ್ಯರು ತಮ್ಮ ಹಕ್ಕುಗಳ ಹೋರಾಟಕ್ಕಾಗಿ ಸಂಘಟಿತರಾಗಲು ಕರೆಕೊಟ್ಟರು ಮತ್ತು ಹಿಂದೂ ಮೇಲ್ಜಾತಿಗಳ ವರ್ತನೆಯ ಬದಲಾವಣೆಗೆ ಒತ್ತಾಯಿಸಲು ಶೋಷಣೆಗೆ ಒಳಗಾದ ವರ್ಗಗಳನ್ನು ಪ್ರೋತ್ಸಾಹಿಸಿದರು. ಪೂನಾ ಒಪ್ಪಂದದ ನಂತರ ಅಂಬೇಡ್ಕರ್ ಭ್ರಮ ನಿರಸನರಾದರು. ಮೇಲ್ಜಾತಿ ಹಿಂದೂಗಳು ಮತ್ತು ರಾಷ್ಟ್ರೀಯ ನಾಯಕರ ವರ್ತನೆ ಸಾಕಷ್ಟು ಸುಧಾರಿತವಾಗಿಲ್ಲ ಎಂದು ಭಾವಿಸಿದರು. ಅದರಿಂದ ನೊಂದ ಬಾಬಾ ಸಾಹೇಬರು ಅನುಯಾಯಿಗಳಿಗೆ ‘‘ಧರ್ಮವು ಮನುಷ್ಯನಿಗೆ ಮತ್ತು ಧರ್ಮಕ್ಕಾಗಿ ಮನುಷ್ಯನಲ್ಲ’’ ಎಂದು ಉತ್ತೇಜಿಸಿದರು. ‘‘ನೀವು ಜಗತ್ತಿನಲ್ಲಿ ಸಂಘಟಿತರಾಗಲು, ಬಲಗೊಳ್ಳಲು ಮತ್ತು ಯಶಸ್ವಿಯಾಗಲು ಬಯಸಿದರೆ ಈ ಧರ್ಮವನ್ನು ಬದಲಿಸಿ. ನಿಮ್ಮನ್ನು ಮನುಷ್ಯರೆಂದು ಗುರುತಿಸದ, ಕುಡಿಯಲು ನೀರು ಕೊಡದ ಅಥವಾ ದೇವಸ್ಥಾನಗಳಿಗೆ ಪ್ರವೇಶಿಸಲು ಬಿಡದ ಧರ್ಮ, ಧರ್ಮ ಎನ್ನಲು ಅರ್ಹವಲ್ಲ. ಧರ್ಮ ಬದಲಾವಣೆಗೆ ಮುಂದಾದರೆ ಅವರಿಗೆ ಕಳೆದುಕೊಳ್ಳಲು ಏನೂ ಇಲ್ಲ ಮತ್ತು ಸಾಕಷ್ಟು ಲಾಭವಿದೆ’’ ಎಂದು ಹೇಳಿದರು.

ಆದರೂ ಗಾಂಧೀಜಿ ಅಸ್ಪಶ್ಯರನ್ನು ಹಿಂದೂಗಳಿಂದ ಕ್ರಿಶ್ಚಿಯನ್, ಮುಸ್ಲಿಮರು ಅಥವಾ ಇತರ ಯಾವುದೇ ಮತಶ್ರದ್ಧೆಗೆ ನಡೆಯುವ ಮತಾಂತರವನ್ನು ತಡೆಯಲು ಅವರಿಗೆ ನೈತಿಕ ಬೆಂಬಲ ಸಿಗಲಿಲ್ಲ. ಸೆಪ್ಟಂಬರ್ 1936ರಲ್ಲಿ ‘ಹರಿಜನ’ ಪತ್ರಿಕೆಯಲ್ಲಿ ಬರೆಯುತ್ತಾ ‘ಅಸ್ಪಶ್ಯರನ್ನು ತಮ್ಮ ತೆಕ್ಕೆಗೆ ಸೆಳೆಯುವ ಪ್ರಯತ್ನದಲ್ಲಿ ವಿವಿಧ ಧರ್ಮಗಳ ನಾಯಕರು ಪರಸ್ಪರ ಸ್ಪರ್ಧಿಸುವುದನ್ನು ನಿಲ್ಲಿಸಿದರೆ ದೇಶಕ್ಕೆ ಒಳ್ಳೆಯದು’ ಎಂದು ಅವರು ಘೋಷಿಸಿದರು. ನೈತಿಕ ಶಿಕ್ಷಣ, ಉಪದೇಶ ಮತ್ತು ಶಾಂತಿಯುತ ಹೋರಾಟವು ಸಮಸ್ಯೆಯ ವಿರುದ್ಧ ಹೋರಾಡುವ ಸಾಧನಗಳಾಗಬೇಕೆಂದು ಗಾಂಧೀಜಿ ಬೋಧಿಸಿದರು. ಅಸ್ಪಶ್ಯರ ಉಗ್ರತ್ವ ಮತ್ತು ಮೇಲ್ಜಾತಿಗಳ ನಡುವಿನ ವೈರತ್ವ ಮತ್ತು ಅಸಮಾಧಾನದ ಅಪಾಯಗಳಿಂದ ತುಂಬಿತ್ತು. ರಾಜಕೀಯವಾಗಿ ಅವರು ಶೋಷಣೆಗೆ ಒಳಗಾದ ವರ್ಗಗಳ ಚುನಾಯಿತ ಸದಸ್ಯರಿಂದ ಶಾಸನಬದ್ಧ ಸಹ-ಸದಸ್ಯನ ಆಯ್ಕೆಯನ್ನು ಒದಗಿಸುತ್ತಾರೆ ಮತ್ತು ಇಷ್ಟವಿಲ್ಲದಿದ್ದರೂ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಥಾನಗಳ ಮೀಸಲಾತಿಯನ್ನು ನೀಡುತ್ತಾರೆ. ಆದರೂ ಅಸ್ಪಶ್ಯರಿಗೆ ಪ್ರತ್ಯೇಕ ಮತದಾನ ನೀಡುವುದು ಸಮಾಜದಲ್ಲಿ ವಿಭಜನೆಯನ್ನು ಉಂಟುಮಾಡುತ್ತದೆ ಎಂದು ಅವರು ಭಯಪಟ್ಟರು. ಈ ಒಡಕನ್ನು ತಪ್ಪಿಸಲು ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು.

ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅಸ್ಪಶ್ಯತೆ ನಿವಾರಣೆಯ ಕಾರ್ಯದಲ್ಲಿ ಅವರ ಪಾತ್ರಗಳು ಪೂರಕವಾಗಿವೆ. ಅಸ್ಪಶ್ಯತೆ ನಿವಾರಣೆಯನ್ನು ಸ್ವಾತಂತ್ರ್ಯದ ಹೋರಾಟದೊಂದಿಗೆ ಸಂಯೋಜಿಸುವುದು ಮತ್ತು ಅಸ್ಪಶ್ಯತೆಯು ದೇವರ ಇಚ್ಛೆಯಲ್ಲ, ಆದರೆ ಮನುಷ್ಯ ಸೃಷ್ಟಿ ಎಂದು ಮೇಲ್ಜಾತಿ ಹಿಂದೂಗಳಿಗೆ ಮನವರಿಕೆ ಮಾಡುವುದು ಗಾಂಧೀಜಿಯ ಶ್ರೇಷ್ಠ ಸಾಧನೆಗಳು. ಆದ್ದರಿಂದ ಇತರ ಯಾವುದೇ ಸಾಮಾಜಿಕ ಅಸಮರ್ಪಕತೆಯಂತೆಯೇ ಅದನ್ನು ನಿರ್ಮೂಲನೆ ಮಾಡಬೇಕಾಗಿತ್ತು. ಅಂಬೇಡ್ಕರ್ ಅವರು ಗಾಂಧೀಜಿಗೆ ತುಂಬಾ ಸುಧಾರಣಾವಾದಿಯಾಗಿ ಕಂಡಿದ್ದರು. ಆದರೆ ಅಂಬೇಡ್ಕರ್ ಅವರಿಗೆ ಗಾಂಧೀಜಿ ಸಾಕಷ್ಟು ಸುಧಾರಣಾವಾದಿಯಾಗಿ ಕಾಣಲು ಸಾಧ್ಯವಾಗದಿದ್ದರೂ, ಈ ಇಬ್ಬರು ಮಹಾನ್ ನಾಯಕರ ಕೊಡುಗೆಯು ಅವರು ವಾಸಿಸುತ್ತಿದ್ದ ಸಾಮಾಜಿಕ- ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕ ಪರಿಸರದ ವಿರುದ್ಧವಾಗಿ ನೋಡಿದಾಗ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಮೀಸಲಾತಿಯ ಪರಿಕಲ್ಪನೆ ಮತ್ತು ಶೋಷಿತ ವರ್ಗಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಂಬೇಡ್ಕರ್ ಅವರಿಗೆ ಅಸ್ಪಶ್ಯತೆಯ ಅನುಭವ ಕಾರಣವಾಗಿದೆ. ಈ ಎಲ್ಲಾ ಸಮುದಾಯಗಳನ್ನು ಸಮಾನತೆಯ ಮಟ್ಟಕ್ಕೆ ತರಬೇಕಾದರೆ ಸಮಾನತೆ ತತ್ವವನ್ನು ಅಳವಡಿಸಿಕೊಳ್ಳುವುದು ಮತ್ತು ಆ ಮಟ್ಟಕ್ಕಿಂತ ಕೆಳಗಿರುವವರಿಗೆ ವಿಶೇಷ ಕೃಪೆ ತೋರುವುದೊಂದೇ ಪರಿಹಾರ ಎಂದವರು ಹೇಳಿದ್ದರು.

ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಅಸ್ಪಶ್ಯತೆ ಎಂಬ ಕ್ರೂರ ಸ್ಥಿತಿ ಜಿಜ್ಞಾಸೆಗೆ ಒಳಗೊಂಡಿದ್ದು ಸತ್ಯ. ಆದರೆ, ಗಾಂಧೀಜಿ ಅವರ ಜೀವಿತ ಅವಧಿಯಲ್ಲಿಯೇ ಕೊಲ್ಹಾಪುರದ ಸಾಹು ಮಹಾರಾಜ್ ಮತ್ತು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಆದರೆ ಗಾಂಧೀಜಿ ಯಾವತ್ತೂ ಅವರ ಬರಹ ಮತ್ತು ಭಾಷಣಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಬಗ್ಗೆ ದಾಖಲಿಸಿರುವುದು ನನ್ನ ಅರಿವಿಗೆ ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News