ಸ್ವಾತಂತ್ರ್ಯದ ಕನವರಿಕೆಯಲ್ಲಿ ಭಾರತದ ಮಕ್ಕಳಾದ ನಾವು
ಭಾರತದ ಮಕ್ಕಳಾದ ನಮ್ಮಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಹಲವರು ಹೆತ್ತವರ ಕಾರಣದಿಂದಲೇ ಬೀದಿ ಪಾಲಾಗಿದ್ದಾರೆ. ನಾನಾ ಬಗೆಯ ಹಿಂಸೆಗಳಿಗೆ, ದೌರ್ಜನ್ಯಗಳಿಗೆ ಒಳಗಾಗಿದ್ದಾರೆ. ಮಿಗಿಲಾಗಿ ಇವು ದೌರ್ಜನ್ಯ, ಹಿಂಸೆ, ದಬ್ಬಾಳಿಕೆ, ನಾವು ಹಕ್ಕುಗಳಿಂದ ವಂಚಿತರಾಗಿದ್ದೇವೆ ಎಂಬ ಅರಿವೇ ಇಲ್ಲದೇ, ನಾವಿರುವುದೇ ಹೀಗೆ, ನಮ್ಮ ಬದುಕಿನ ರೀತಿಯೇ ಹೀಗೆ ಎಂದುಕೊಂಡುಬಿಟ್ಟಿದ್ದಾರೆ. ಏಕೆಂದರೆ ತಮ್ಮ ಹಕ್ಕಿನ ಬಗ್ಗೆ ಇರಬೇಕಾದ ತಿಳುವಳಿಕೆ ಇರಲಿ, ಪ್ರಾಥಮಿಕ ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ.
ಭಾರತದ ಮಕ್ಕಳಾದ ನಾವು ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎಂಬ ಮಾತನ್ನು ಕೇಳಿ ಕೇಳಿ ದಣಿದಿದ್ದೇವೆ. ನಮ್ಮನ್ನು ನಾಳೆಗೆ ಅಣಿಗೊಳಿಸಿ, ನಾಳಿನ ಪ್ರಜೆಗಳನ್ನಾಗಿ ಮಾಡುವ ಮುನ್ನ ಇಂದು ನಾವು ಉಸಿರಾಡುತ್ತಿದ್ದೇವೆ, ಬದುಕುತ್ತಿದ್ದೇವೆ ಮತ್ತು ಇಂದಿಂದೇ ಕಾಡುತ್ತಿರುವ ಕೇಡುಗಳಲ್ಲಿ ಪಾಡುಪಡುತ್ತಿದ್ದೇವೆ ಎಂಬುದನ್ನು ಹಿರಿಯರ ಗಮನಕ್ಕೆ ತರಬೇಕಿದೆ. ಮಕ್ಕಳಾದ ನಮ್ಮ ಬದುಕಿನ ಹಕ್ಕುಗಳನ್ನು ರಕ್ಷಿಸಬೇಕಾಗಿರುವ ಹಿರಿಯರು ತಮ್ಮ ಕರ್ತವ್ಯದಿಂದ ವಿಮುಖರಾಗಿದ್ದಾರೆ ಎಂಬುದರ ಕಡೆಗೆ ಪೋಷಕರ, ಶಿಕ್ಷಕರ, ಸಮಾಜದ, ಸರಕಾರದ ಕಿವಿಗಳಿಗೆ ನಮ್ಮ ಧ್ವನಿಯನ್ನು ತಲುಪಿಸಬೇಕಿದೆ.
ವಾಸ್ತವವಾಗಿ ಮಕ್ಕಳ ಹಕ್ಕಿನ ಬಗ್ಗೆ ಮಕ್ಕಳಾದ ನಮಗೆ ಅರಿವಿರುವುದಕ್ಕಿಂತ ಹಿರಿಯರಿಗೇ ಮೊದಲು ಅರಿವಿರಬೇಕಿರುವುದು. ನಮ್ಮ ಮೊದಲ ಸಂಬಂಧ ನಮ್ಮ ಹೆತ್ತವರು ಮತ್ತು ಕುಟುಂಬ. ಅವರು ಒದಗಿಸುವ ಅವಕಾಶದ ಆಧಾರದಲ್ಲಿ ನಮ್ಮ ಬಗ್ಗೆ ತಿಳುವಳಿಕೆ ನಮಗೆ ದಕ್ಕುತ್ತವೆ. ಇಲ್ಲದೇ ಹೋದರೆ, ಅವರ ನಿರ್ದೇಶನಗಳು, ಅವರು ಮಾಡು ಎನ್ನುವುದು, ಮಾಡಬೇಡ ಎನ್ನುವುದಷ್ಟೇ ನಮ್ಮ ಅರಿವಾಗಿಬಿಡುತ್ತದೆ. ಹಾಗಾಗಿ ಉಣ್ಣುವ, ಉಡುವ, ಆಡುವ, ದೊಡ್ಡವರ ಇಚ್ಛೆಯಂತೆ ಇರುವುದಷ್ಟೇ ನಮ್ಮ ತಿಳುವಳಿಕೆಯಾಗಿದ್ದು ಅದಕ್ಕಿಂತ ಮಿಗಿಲಾಗಿ ನಮಗೆಂದೇ ವಿಶ್ವಸಂಸ್ಥೆಯಲ್ಲಿ ಮತ್ತು ನಮ್ಮ ದೇಶದ ಸಂವಿಧಾನದಲ್ಲಿ ನಮ್ಮ ಕುರಿತಾಗಿ ಹಕ್ಕು ಮತ್ತು ಕರ್ತವ್ಯಗಳು ಇವೆ ಎಂಬುದೇ ನಮಗೆ ತಿಳಿಯದಂತಾಗುತ್ತದೆ. ನಮ್ಮಲ್ಲಿ ಎಷ್ಟೋ ಮಕ್ಕಳಿಗೆ ದೊಡ್ಡವರೆಂದರೆ ಇರುವುದೇ ಹೀಗೆ, ಮಕ್ಕಳೆಂದರೆ ಇರಬೇಕಾಗಿರುವುದೇ ಹೀಗೆ ಎನ್ನಿಸುವಷ್ಟರ ಮಟ್ಟಿಗೆ ಭಾರತದ ಮಕ್ಕಳಾದ ನಾವು ಹಿರಿಯರ ಸೆರೆಯಲ್ಲಿ ಪರಾವಲಂಬಿಗಳಾಗಿ ಸರಳುಗಳಾಚೆ ಆಕಾಶವಿದೆ ಎಂಬುದನ್ನೂ ಅರಿಯದವರಾಗಿದ್ದೇವೆ. ಈ ಬಗೆಯಲ್ಲಿ ನಾವು ಹಕ್ಕುಗಳಿಂದ ವಂಚಿತರಾಗಿದ್ದೇವೆ.
ಮಾನವ ಹಕ್ಕಿನ ಬಗ್ಗೆ ಮಾತಾಡುವಷ್ಟು ಮಕ್ಕಳ ಹಕ್ಕಿನ ಬಗ್ಗೆ ಮಾತಾಡದೇ ಇರುವುದು ನಿಜಕ್ಕೂ ಆಶ್ಚರ್ಯವೇ ಆಗಿದೆ. ಬಹುಶಃ ನಾವು ಆರ್ಥಿಕವಾಗಿ ಹೂಡಿಕೆ ಮಾಡಲಾಗದಿರುವುದೇ? ಮತ ಚಲಾಯಿಸುವವರು ನಾವಲ್ಲದಿರುವುದರಿಂದ ರಾಜಕಾರಣಿಗಳ ಗಮನ ಸೆಳೆಯಲು ಸಾಧ್ಯವಾಗಿಲ್ಲವೇ? ನಗರಾಯುಕ್ತರ ಕಚೇರಿಗಳ ಮುಂದೆ ದೊಡ್ಡ ಪ್ರಮಾಣದಲ್ಲಿ ಧರಣಿ ಕೂರಲು ಸಾಧ್ಯವಾಗುವುದಿಲ್ಲವೆಂದೇ? ಮೆರವಣಿಗೆ, ಪ್ರತಿಭಟನೆಗಳನ್ನು ಆಯೋಜಿಸಲಾಗುವುದಿಲ್ಲವೆಂದೇ? ಮಕ್ಕಳ ಹಕ್ಕುಗಳನ್ನು ರಕ್ಷಿಸುವುದರಲ್ಲಿ ಸಫಲವಾದರೆ ಮಾನವ ಹಕ್ಕುಗಳಿಗಾಗಿ ಹೋರಾಡುವ ಪ್ರಮೇಯವು ಬಾರದು ಎಂದು ಏಕೆ ನಮ್ಮ ಹಿರಿಯರು ಅರಿತಿಲ್ಲ ಎಂದೇ ಭಾರತದ ಮಕ್ಕಳಾದ ನಮ್ಮ ಪ್ರಶ್ನೆ.
ಮಾನವ ಹಕ್ಕುಗಳು ಉಲ್ಲಂಘನೆಯಾದಾಗ ಮಾತ್ರವೇ ಧ್ವನಿ ಎತ್ತುವಂತದ್ದಾಗಿದ್ದು, ನಮ್ಮ ಮಕ್ಕಳ ಹಕ್ಕುಗಳು ಧ್ವನಿ ಎತ್ತುವವರೆಗೂ ಕಾಯಬಾರದ್ದಾಗಿರುವುದು. ಮಕ್ಕಳ ಹಕ್ಕು ಎನ್ನುವುದನ್ನು ಹಿರಿಯರೇ ಕರ್ತವ್ಯವೆಂದು ಬಗೆದು ನಿಷ್ಠೆಯಿಂದ ಬದ್ಧವಾಗಬೇಕಾಗಿರುವಂತಹದ್ದು. ಹದಿನೆಂಟರ ಒಳಗಿರುವ ನಮ್ಮ ಹಕ್ಕುಗಳು ನಾವು ಯಾವುದೇ ರಾಷ್ಟ್ರ, ಜನಾಂಗ, ವರ್ಣ, ಲಿಂಗ, ಭಾಷೆ, ಧರ್ಮ, ಅಭಿಪ್ರಾಯ, ಮೂಲ, ಆರ್ಥಿಕ ಸ್ಥಿತಿಗತಿ, ಹುಟ್ಟಿನ ಮೂಲ, ಸಮಸ್ಯೆ, ವೈಕಲ್ಯ ಬೇರೆ ಇನ್ನಾವುದೇ ಗುರುತು ಲಕ್ಷಣಗಳಿದ್ದರೂ ಮಕ್ಕಳ ಹಕ್ಕಿನ ಪ್ರತಿಪಾದನೆಗೆ ಒಳಗಾಗುತ್ತೇವೆ. ಭಾರತದ ಮಕ್ಕಳಾದ ನಮಗೆ ವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಹಕ್ಕು, ಕೌಟುಂಬಿಕ ವಾತಾವರಣ, ಅಗತ್ಯ ವೈದ್ಯಕೀಯ ಸೌಲಭ್ಯ, ಕ್ಷೇಮಾಭ್ಯುದಯ ಸೌಕರ್ಯ, ಶಿಕ್ಷಣ, ವಿಶ್ರಾಂತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಕ್ಕುಗಳೆಲ್ಲಾ ಇರುವಾಗ ನಮ್ಮನ್ನು ನಾಳಿನ ಪ್ರಜೆಗಳು ಎಂದು ದೂಡುತ್ತಾ ನಮ್ಮನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ಯತ್ನಿಸಬೇಡಿ ಹಿರಿಯರೇ.
ಭಾರತದ ಮಕ್ಕಳಾದ ನಮಗೆ ಭಾರತದ ಸಂವಿಧಾನ ಮಕ್ಕಳ ಹಕ್ಕುಗಳು ಎಂದೇ ನ್ಯಾಯಬದ್ಧವಾಗಿ ನಿರ್ದೇಶಿಸಿದೆ. ಯಾವುದೇ ಭಾರತೀಯ ಮಹಿಳೆ ಮತ್ತು ಪುರುಷ ಹೊಂದಿರಬಹುದಾದ ಸಾಂವಿಧಾನಿಕ ಹಕ್ಕನ್ನು ಸ್ವಾಭಾವಿಕವಾಗಿ ನಮಗೆ ನೀಡಿದೆ.
ಸಮಾನತೆಯ ಹಕ್ಕು: ಆರ್ಟಿಕಲ್ 14ರ ಪ್ರಕಾರ ನ್ಯಾಯದ ಅಧೀನದಲ್ಲಿ ಮತ್ತು ನ್ಯಾಯಾಂಗದ ರಕ್ಷಣೆಯನ್ನು ಹೊಂದುವಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿದೆ. ಇದಕ್ಕೆ ಭಾರತದ ಮಕ್ಕಳಾದ ನಾವು ಹೊರತಲ್ಲ. ನಾವು ನಾಳಿನ ಪ್ರಜೆಗಳಲ್ಲ. ಇಂದಿನ ನಾಗರಿಕರು. ಮಕ್ಕಳನ್ನು ಇದರಿಂದ ಹೊರತುಪಡಿಸಿಲ್ಲ.
ತಾರತಮ್ಯದ ವಿರೋಧದ ಹಕ್ಕು: ಸಂವಿಧಾನದ ಆರ್ಟಿಕಲ್ 15ರ ಪ್ರಕಾರ ಜನಾಂಗ, ಜಾತಿಯೇ ಮೊದಲಾದ ಆಧಾರಗಳಿಂದ ನಾಗರಿಕರನ್ನು ತಾರತಮ್ಯ ಮಾಡುವಂತಿಲ್ಲ. ಅದೇ ಆರ್ಟಿಕಲ್ 15(1)ರ ಪ್ರಕಾರ ಯಾರೊಬ್ಬ ಪ್ರಜೆಯನ್ನೂ ಆತನ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಮೊದಲಾದ ಯಾವುದರ ಆಧಾರದಲ್ಲಿಯೂ ಕೂಡಾ ತಾರತಮ್ಯ ಮಾಡಕೂಡದು. ಅದೇ ಆರ್ಟಿಕಲ್ 15 (3)ರ ಪ್ರಕಾರ ಸರಕಾರವು ಯಾವುದೇ ವಿಶೇಷ ಅನುಕೂಲ ಮತ್ತು ಸೌಕರ್ಯಗಳನ್ನು ಮಹಿಳೆ ಮತ್ತು ಮಕ್ಕಳಿಗೆ ಒದಗಿಸುವುದನ್ನು ತಡೆಯಬಾರದು ಎಂದಿದೆ. ಆದರೆ ಬಹಳಷ್ಟು ಮನೆಯಲ್ಲಿಯೇ ಈ ಹಕ್ಕಿನ ಉಲ್ಲಂಘನೆಯಾಗುತ್ತಿದೆ. ಗಂಡುಮಗುವಿಗೆ ವಿಶೇಷ ಸ್ಥಾನ ಮತ್ತು ಹೆಣ್ಣುಮಕ್ಕಳನ್ನು ಕಡೆಗಣಿಸುವುದು ಇನ್ನೂ ಮುಂದುವರಿದಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ: ಆರ್ಟಿಕಲ್ 19(1)(ಎ) ಪ್ರಕಾರ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮಾತಾಡುವ ಮತ್ತು ಅಭಿವ್ಯಕ್ತಿಪಡಿಸುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಈ ಹಕ್ಕು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಭಾರತದ ಮಕ್ಕಳಾದ ನಾವು ಇದರಿಂದ ಹೊರತಲ್ಲ. ಮತ್ತೊಬ್ಬರಿಗೆ ಹಾನಿಯಾಗದ ಹೊರತು ನಮ್ಮ ಅಭಿಪ್ರಾಯ ಮತ್ತು ತಿಳುವಳಿಕೆಯನ್ನು ಅಭಿವ್ಯಕ್ತಪಡಿಸುವ ಸ್ವಾತಂತ್ರ್ಯ ನಮಗಿದೆ. ಆದರೆ ಸಾಮಾನ್ಯವಾಗಿ ಮನೆಯವರು ಚರ್ಚಿಸಿ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ನಮ್ಮನ್ನು ಪರಿಗಣಿಸುವುದೇ ಇಲ್ಲ. ಅವರ ಎಲ್ಲಾ ನಿರ್ಣಯಗಳನ್ನು ನಾವು ಒಪ್ಪಿಕೊಂಡು ನಡೆಯಬೇಕು ಎಂದೇ ಪೋಷಕರು ಮತ್ತು ಶಿಕ್ಷಕರು ಬಯಸುತ್ತಾರೆ. ನಾವು ಏನನ್ನು ಓದಬೇಕು ಎಂಬುದನ್ನೂ ಮನೆಯವರೇ ನಿರ್ಧರಿಸುತ್ತಾರೆ. ‘ಹೇಳಿದಷ್ಟು ಕೇಳು’ ನಾವು ನಿತ್ಯ ಕೇಳಬೇಕಾದ ವಾಕ್ಯ.
ಜೀವನದ ಹಕ್ಕು: ಆರ್ಟಿಕಲ್ 21ರ ಪ್ರಕಾರ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಮತ್ತು ಸುಭದ್ರವಾಗಿ ತನ್ನ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದ್ದಾನೆ. ನ್ಯಾಯಬದ್ಧವಾದ ಜೀವನಕ್ಕೆ ಹೊರತಾಗದೆ ಯಾರಾದರೂ ತಮ್ಮ ವ್ಯಕ್ತಿಗತ ಜೀವನವನ್ನು ನಡೆಸುವುದರಿಂದ ವಂಚಿತರಾಗದಂತೆ ಅವಕಾಶವಿರುವಂತೆ ಭಾರತದ ಮಕ್ಕಳಾದ ನಾವೂ ವ್ಯಕ್ತಿಗತವಾದ ಅಂದರೆ ಖಾಸಗಿತನದ ಹಕ್ಕುಗಳನ್ನು ಹೊಂದಿದ್ದೇವೆ. ಭಾರತದ ಮಕ್ಕಳಾದ ನಮಗೆ ಖಾಸಗಿತನವೆಂಬುದನ್ನೇ ಕೊಡಬಾರದೆಂಬುದು ನಮ್ಮ ಹಿರಿಯರ ಧೋರಣೆ. ಖಾಸಗಿತನವೆಂದ ಕೂಡಲೇ ಅಶ್ಲೀಲ ಮತ್ತು ಅನುಚಿತವಾದುದನ್ನೇ ಕಲ್ಪಿಸಿಕೊಳ್ಳುವ ನಮ್ಮ ಮನೆಯವರಿಗೆ ಮತ್ತು ಶಿಕ್ಷಕರಿಗೆ ಖಾಸಗಿತನದ ಪ್ರಾರಂಭಿಕ ಪಾಠಗಳು ಬೇಕಾಗಿವೆ.
ಆರೋಗ್ಯದ ಹಕ್ಕು: ಆರ್ಟಿಕಲ್ 21ರ ಪ್ರಕಾರ ಎಲ್ಲಾ ಪ್ರಜೆಗಳಂತೆ ಪ್ರತಿಯೊಂದು ಮಗುವೂ ಆರೋಗ್ಯಕರವಾದ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದೆ. ಹಿರಿಯರ ತಪ್ಪಿನಿಂದ ಭಾರತದ ಮಕ್ಕಳಾದ ನಮ್ಮಲ್ಲಿ ಅನೇಕರಿಗೆ ಎಚ್‌ಐವಿ ಸೋಂಕು ತಗಲಿದೆ. ಕುಡಿಯಲು ಯೋಗ್ಯವಾದ ನೀರಿನ ಕೊರತೆ ಇದೆ. ಸರಿಯಾದಂತಹ ಶೌಚಾಲಯಗಳಿಲ್ಲ. ಅಪೌಷ್ಟಿಕತೆ, ಇತರ ಪ್ರಧಾನ ವಿಷಯಗಳ ಜೊತೆಗೆ ನಮ್ಮ ವಿಷಯವನ್ನೂ ಸೇರಿಸಿಕೊಳ್ಳದೇ ಇರುವುದು; ಇವೆಲ್ಲಾ ನಮ್ಮ ಜೀವನದ ಸುಭದ್ರತೆಯನ್ನು ಕಾಡುತ್ತವೆ.
ಶಿಕ್ಷಣದ ಹಕ್ಕು: ಆರ್ಟಿಕಲ್ 21(ಎ) ಪ್ರಕಾರ ಭಾರತದ ಮಕ್ಕಳಾದ ನಾವು 6 ವಯಸ್ಸಿನಿಂದ 14ನೇ ವಯಸ್ಸಿನವರೆಗೂ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಪಡೆಯಲೇಬೇಕು. ಹಾಗೆಯೇ ಆರ್ಟಿಕಲ್ 45 ಹೇಳುವುದೇನೆಂದರೆ ಸರಕಾರವು ಆರು ವರ್ಷದ ಒಳಗಿನ ಮಕ್ಕಳಿಗೆ ಮಗುತನ ಜತನ ಮಾಡುವಂತಹ ಮತ್ತು ಅಗತ್ಯ ಶಿಕ್ಷಣವನ್ನು ನೀಡುವಂತಹ ಪ್ರಯತ್ನವನ್ನು ಮಾಡಬೇಕೆಂದು ಸೂಚಿಸುತ್ತದೆ.
ಮಾನವ ಸಾಗಣೆ ಮತ್ತು ಜೀತದಿಂದ ಭದ್ರತೆಯ ಹಕ್ಕು: ಆರ್ಟಿಕಲ್ 23 ಹೇಳುವುದೇನೆಂದರೆ ಮಕ್ಕಳನ್ನೂ ಸೇರಿದಂತೆ ಪ್ರತಿಯೊಬ್ಬ ನಾಗರಿಕನನ್ನೂ ಮಾನವ ಸಾಗಣೆ ಅಥವಾ ಅಪಹರಣದಿಂದ, ಭಿಕ್ಷೆ ಬೇಡುವುದರಿಂದ ಮತ್ತು ಜೀತದಿಂದ ಮುಕ್ತಗೊಳಿಸುವಂತ ಹಕ್ಕಿದೆ. ಅದರ ವಿರುದ್ಧವಾಗಿ ರಕ್ಷಣೆಯನ್ನು ನೀಡುವ ಕರ್ತವ್ಯವಿದೆ. ಆದರೆ ಈಗಲೂ ಭಾರತದ ರಸ್ತೆಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ದೃಶ್ಯಗಳು ಧಾರಾಳವಾಗಿ ಕಾಣುತ್ತವೆ.
ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆ: ಭಾರತದ ಮಕ್ಕಳಾದ ನಮ್ಮನ್ನು ಆರ್ಟಿಕಲ್ 24ರಂತೆ ಮತ್ತು 39(ಇ) ಪ್ರಕಾರ ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಅಥವಾ ಯಾವುದೇ ರೀತಿಯ ಸುಭದ್ರತೆ ಇಲ್ಲದ ಪರಿಸರದಲ್ಲಿ ದುಡಿಸಬಾರದು. ವಯಸ್ಸಿಗೆ, ದೇಹಬಲಕ್ಕೆ ಹೊಂದದ ಯಾವುದೇ ಕೆಲಸವನ್ನು, ಯಾವುದೇ ರೀತಿಯ ಆರ್ಥಿಕ ಅಗತ್ಯವಿದ್ದರೂ ಕೂಡಾ ದುಡಿಯಲು ಒತ್ತಾಯಿಸಬಾರದು.
ಸಮಾನ ಅವಕಾಶಗಳ ಮತ್ತು ಸೌಲಭ್ಯಗಳ ಹಕ್ಕು: ಭಾರತದ ಮಕ್ಕಳಾದ ನಮಗೆ ಆರೋಗ್ಯಕರವಾದ ರೀತಿಯಲ್ಲಿ ಮತ್ತು ಉತ್ತಮ ಪರಿಸರದಲ್ಲಿ ಸ್ವತಂತ್ರವಾಗಿಯೂ ಹಾಗೂ ಘನತೆಯಿಂದಲೂ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ಆರ್ಟಿಕಲ್ 39(ಎಫ್) ಪ್ರತಿಪಾದಿಸುತ್ತದೆ. ಮಕ್ಕಳೊಂದಿಗೆ ಯಾವುದೇ ರೀತಿಯಲ್ಲಿ ಕೆಡುಕಾಗಿ ನಡೆದುಕೊಳ್ಳುವುದು, ಅಪಮಾನಿಸುವುದು, ನೈತಿಕವಾಗಿ ಅಥವಾ ಅವರ ವಸ್ತುಗಳನ್ನು ಕಸಿದುಕೊಳ್ಳುವುದನ್ನು ಮಾಡಬಾರದು.
ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ಬಗೆಯ ದೌರ್ಜನ್ಯಗಳ ವಿರುದ್ಧದ ಹಕ್ಕು: ಜಾತಿ, ವರ್ಗ ಮೊದಲಾದ ಆಧಾರದಲ್ಲಿ ದುರ್ಬಲ ಸಮೂಹದಲ್ಲಿ ಗುರುತಿಸಲ್ಪಟ್ಟ ಭಾರತದ ಮಕ್ಕಳಾದ ನಮಗೆ ಯಾವುದೇ ರೀತಿಯಲ್ಲಿ ಸಾಮಾಜಿಕ ಅನ್ಯಾಯ ಮತ್ತು ತಾರತಮ್ಯವಾಗಕೂಡದು. ನಮ್ಮನ್ನು ಸಾಮಾಜಿಕವಾಗಿ ತಾರತಮ್ಯಕ್ಕೆ ಮತ್ತು ದೌರ್ಜನ್ಯಕ್ಕೆ ಒಳಮಾಡಬಾರದು. ಹೀಗಿದ್ದರೂ ನಮ್ಮ ದೇಶದಲ್ಲಿ ದಲಿತ ಮಕ್ಕಳನ್ನು ಶೌಚಾಲಯವನ್ನು ಶುದ್ಧಗೊಳಿಸುವ ಕೆಲಸಕ್ಕೆ ಒತ್ತಾಯಿಸುವಂತಹ ಪ್ರಕರಣಗಳು ನಡೆಯುತ್ತಿವೆ. ದೇವಸ್ಥಾನದೊಳಗೆ ಪ್ರವೇಶಿಸುವ ಬಾಲಕನನ್ನು ಸಾಯಬಡಿಯುವ ಜನರಿದ್ದಾರೆ.
ಹುಟ್ಟಿನ ಗುರುತು ಮತ್ತು ದಾಖಲಾತಿಯ ಹಕ್ಕು: ಭಾರತದ ಮಕ್ಕಳಾದ ನಮ್ಮಲ್ಲಿ ಪ್ರತಿಯೊಂದು ಮಗುವಿಗೂ ದೇಶದ ಪ್ರಜೆಯಾಗಿ ಗುರುತಿಸಿಕೊಳ್ಳುವ ಹಕ್ಕು ಮತ್ತು ಹುಟ್ಟಿನ ದಾಖಲಾತಿಯ ಹಕ್ಕಿದೆ. ಆದರೆ ಹೆಚ್ಚೂಕಡಿಮೆ ಶೇ. 41 ಮಾತ್ರ ದಾಖಲಾಗುತ್ತವೆ. ನಮ್ಮ ಗುರುತನ್ನು ಹೊಂದುವುದು ಮೂಲಭೂತ ಮಾನವ ಹಕ್ಕಾಗಿದೆ. ಪ್ರತಿಯೊಬ್ಬ ನಾಗರಿಕನೂ ಈ ಗುರುತನ್ನು ಹೊಂದಿದ್ದು ತನ್ನ ಹಕ್ಕನ್ನು ಹೊಂದುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಕುಟುಂಬದ ಹೆಸರು, ಮನೆತನದ ಹೆಸರು, ಹುಟ್ಟಿನ ದಿನಾಂಕ, ಲಿಂಗ, ರಾಷ್ಟ್ರೀಯತೆಯೇ ಮೊದಲಾದ ಗುರುತುಗಳನ್ನು ಹೊಂದಲು ಖಂಡಿತವಾಗಿಯೂ ಪ್ರತಿಯೊಂದು ಮಗುವಿನ ಗುರುತನ್ನೂ ನೋಂದಾಯಿಸಬೇಕು. ಆದರೆ ಎಲ್ಲೆಲ್ಲಿಯೋ ಕೆಲಸ ಮಾಡುತ್ತಿರುವ ಮಕ್ಕಳನ್ನು, ಅಲೆದಾಡುತ್ತಿರುವವರನ್ನು ಗಮನಿಸಿ ನೋಡಿ. ಅವರ ಹುಟ್ಟಿನ ದಿನಾಂಕವೂ ಅವರಿಗೆ ಗೊತ್ತಿರುವುದಿಲ್ಲ.
ಭಾರತದ ಮಕ್ಕಳಾದ ನಾವು ಈಗಲೂ ಮತ್ತು ಬೆಳೆದು ವಯಸ್ಕರಾದಂತೆ ವ್ಯಕ್ತಿಗತವಾಗಿ ಮತ್ತು ಸಮಾಜಕ್ಕೆ ಆಸ್ತಿಯಾಗುವಂತಹ ಅನೇಕಾನೇಕ ಸಾಧ್ಯತೆ ಹಾಗೂ ಸಾಮರ್ಥ್ಯಗಳು ಇದ್ದರೂ ಹಿರಿಯರು ತಮ್ಮ ತಿಳುವಳಿಕೆಯ ಮತ್ತು ದೌರ್ಬಲ್ಯದ ಕಾರಣಗಳಿಂದ ನಮ್ಮನ್ನೂ ತಮ್ಮ ಕೂಪದಲ್ಲಿಯೇ ಎಳೆದುಕೊಳ್ಳುತ್ತಾರೆ. ಹಾಗಾಗಿ ನಮ್ಮಲ್ಲಿನ ಎಷ್ಟೋ ಜನರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯಗಳು ಕುಂಠಿತವಾಗುವುದು, ಕೆಲವೊಮ್ಮೆ ಬೆಳಕಿಗೇ ಬರದಿರುವುದು.
ಇನ್ನು ಭಾರತದ ಹೆಣ್ಣು ಮಕ್ಕಳಲ್ಲಂತೂ ಸಣ್ಣ ವಯಸ್ಸಿನಲ್ಲೇ ಮದುವೆ ಮಾಡುವ ಮೂಲಕ ಅವರ ಎಲ್ಲಾ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಪೋಷಕರು ತಮ್ಮ ಇಚ್ಛೆಗನುಸಾರವಾಗಿ ಚಿವುಟಿ, ಯಾರೋ ಒಬ್ಬರ ಮನೆಯಲ್ಲಿ ಗೃಹವಾರ್ತೆ ನೋಡಿಕೊಳ್ಳುವಷ್ಟರ ಮಟ್ಟಿಗೆ ಸೀಮಿತಗೊಳಿಸುವುದಲ್ಲದೆ, ತನ್ನ ಆಸಕ್ತಿ ಮತ್ತು ಅಭಿರುಚಿಯ ಶಿಕ್ಷಣ ಮತ್ತು ಕೆರಿಯರನ್ನು ಶೋಧಿಸಿಕೊಳ್ಳುವ ಸಮಯದಲ್ಲಿ ಮಕ್ಕಳನ್ನು ಹೆರುವ ಹಾಗೂ ಅವುಗಳನ್ನು ನೋಡಿಕೊಳ್ಳುವ, ಮನೆಯನ್ನು ನಿರ್ವಹಿಸುವ ಜವಾಬ್ದಾರಿಗೆ ತಳ್ಳಲ್ಪಡುತ್ತಿದ್ದಾರೆ. ಇದು ಆರ್ಟಿಕಲ್ 21 ಮತ್ತು 45ರ ಉಲ್ಲಂಘನೆ. ಇತ್ತೀಚಿನ ವರದಿಯಂತೆ ದೇಶದಲ್ಲಿ 24 ಮಿಲಿಯನ್ ಬಾಲಕಿಯರು ಮದುವೆ ಹೆಣ್ಣುಗಳಾಗಿದ್ದಾರೆ ಮತ್ತು ವಿಶ್ವದ ಮಟ್ಟಿಗೆ ಪರಿಗಣಿಸುವುದಾದರೆ 60 ಮಿಲಿಯನ್ ಬಾಲ್ಯವಿವಾಹಗಳು ಭಾರತದಲ್ಲಿ ಆಗುತ್ತವೆ.
ಭಾರತದ ಮಕ್ಕಳಾದ ನಾವು ನಾಳಿನ ಪ್ರಜೆಗಳಲ್ಲ. ಇಂದೂ, ಈಗಲೂ ದೇಶದ ನಾಗರಿಕ ಹಕ್ಕನ್ನು ಹೊಂದಿದ್ದೇವೆ. ಸ್ವಾತಂತ್ರ್ಯ ಪೂರ್ವದ ನುಡಿಗಟ್ಟುಗಳಿಂದ ಸ್ವತಂತ್ರ ಭಾರತದ ಪ್ರಜೆಗಳಾದ ನಮ್ಮನ್ನು ಕಟ್ಟಿ ಹಾಕಬೇಡಿ. ನಾವು ನಮ್ಮ ಮಗುತನವನ್ನು ದಾಟಿ ಕೆಲವೇ ವರ್ಷಗಳಲ್ಲಿ ಶಾರೀರಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿ ನಿಲ್ಲುತ್ತೇವೆ. ಭಾರತದ ಮಕ್ಕಳಾದ ನಾವು ಇಂದಿನ ಮತ್ತು ನಾಳಿನ ಭರವಸೆಗಳು ಎಂಬುದರ ಬಗ್ಗೆ ಸ್ಪಷ್ಟತೆ ತಮಗೊದಗಲಿ ಎಂಬುದೇ ನಮ್ಮ ಹಾರೈಕೆ.