ಕೊರಗಜ್ಜನ ಮಣ್ಣಿನಲ್ಲಿ ಚರ್ಚೆಯಾಗಬೇಕಿರುವುದು ಕಾಗೋಡು ತಿಮ್ಮಪ್ಪನವರ ಭಾಷಣ; ಸೂಲಿಬೆಲೆಯದ್ದಲ್ಲ!

2000ನೇ ಇಸವಿಯಲ್ಲಿ ಡಾ. ಮುಹಮ್ಮದ್ ಪೀರ್ ವರದಿ ಆಧಾರದಲ್ಲೇ ‘ಕೊರಗರ ಅಜಲು ಪದ್ಧತಿ ನಿಷೇಧ ಕಾಯ್ದೆ-2000’ಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಅಲ್ಪಸ್ವಲ್ಪ ಭೂಮಿಯೂ, ಘನತೆಯ ಬದುಕೂ ಸಿಕ್ಕಿತ್ತು. ಆ ಬಳಿಕ ಡಾ. ವಹೀದಾ ಬಾನು ಮತ್ತು ಡಾ. ಮುಹಮ್ಮದ್ ಗುತ್ತಿಗಾರ್ ವರದಿಗಳೂ ಕೂಡಾ ಕೊರಗರಿಗೆ ಘನತೆಯ ಬದುಕು ನೀಡುವಲ್ಲಿ ಸಫಲವಾದವು. ಈಗಲೂ ಸರಕಾರಗಳು ಡಾ. ಮುಹಮ್ಮದ್ ಪೀರ್, ಡಾ. ವಹೀದಾ ಬಾನು, ಡಾ. ಮುಹಮ್ಮದ್ ಗುತ್ತಿಗಾರ್ ವರದಿಯಂತೆಯೇ ಕೊರಗರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಹಾಗಾಗಿ, ಕೊರಗಜ್ಜನ ಮಣ್ಣಿನಲ್ಲಿ ಚಕ್ರವರ್ತಿ ಸೂಲಿಬೆಲೆಯ ಭಾಷಣ ಚರ್ಚೆಯಾಗಬಾರದು. ಚರ್ಚೆಯಾಗಬೇಕಾಗಿರುವುದು ಡಾ. ಮುಹಮ್ಮದ್ ಪೀರ್ ವರದಿಯ ಬಳಿಕ ಕರ್ನಾಟಕದ ವಿಧಾನಸಭೆಯಲ್ಲಿ ‘ಕೊರಗರ ಅಜಲು ಪದ್ಧತಿ ನಿಷೇಧ ಕಾಯ್ದೆ-2000’ಯನ್ನು ಮಂಡಿಸಿದ ಅಂದಿನ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪನವರ ಭಾಷಣ.!;

Update: 2025-03-13 10:24 IST
ಕೊರಗಜ್ಜನ ಮಣ್ಣಿನಲ್ಲಿ ಚರ್ಚೆಯಾಗಬೇಕಿರುವುದು ಕಾಗೋಡು ತಿಮ್ಮಪ್ಪನವರ ಭಾಷಣ; ಸೂಲಿಬೆಲೆಯದ್ದಲ್ಲ!
  • whatsapp icon

ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಕೋಮುಪ್ರಚೋದಕ ಭಾಷಣ ಮಾಡಿದ್ದಾರೆ. ಕೊರಗಜ್ಜನ ಮೂಲ ಕರಾವಳಿಯ ಕೊರಗರು ಎಂಬ ಅತಿ ಸೂಕ್ಷ್ಮ ವಿಶೇಷ ಬುಡಕಟ್ಟು ಸಮುದಾಯ. ಈ ಸಮುದಾಯವು ಶತಶತಮಾನಗಳಿಂದ ಅಜಲು ಪದ್ಧತಿ, ಪನಿಕುಲ್ಲುನು, ಎಂಜಲೆಲೆ ಊಟ, ಅಸ್ಪಶ್ಯತೆ, ಅಸಮಾನತೆಯಿಂದ ನಲುಗಿ ಈ ಅಳಿವಿನಂಚಿನಲ್ಲಿರುವ ಸಮುದಾಯವಾಗಿದೆ. ಅಪೌಷ್ಟಿಕತೆ, ರಕ್ತಹೀನತೆಯಿಂದಾಗಿ ಹುಟ್ಟುತ್ತಲೇ ಸಾಯುತ್ತಿರುವ ಸಮುದಾಯದ ಕ್ರಾಂತಿಕಾರಿ ದೈವದ ನಡೆಯಲ್ಲಿ ‘ಹಿಂದುತ್ವಕ್ಕಾಗಿ ಮಕ್ಕಳನ್ನು ಹುಟ್ಟಿಸಿ’ ಎಂದು ಅಮಾನವೀಯ ಭಾಷಣವನ್ನು ಸೂಲಿಬೆಲೆ ಮಾಡುತ್ತಾರೆ.

ಕೊರಗಜ್ಜನ ನಡೆಯಲ್ಲಿ ಸೂಲಿಬೆಲೆಯವರು ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಾರೆ. ಆದರೆ, ಇವತ್ತು ಕೊರಗಜ್ಜನ ಮೂಲದವರಾಗಿರುವ ಕೊರಗರು ಅಳಿಯದೆ ಉಳಿದಿದ್ದೇ ಮುಸ್ಲಿಮ್ ಅಧ್ಯಯನಕಾರರಿಂದ ಎಂಬುದು ವಾಸ್ತವ. ಕೊರಗ ಸಮುದಾಯದ ಬಗೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಮುಹಮ್ಮದ್ ಪೀರ್ ಅವರು 1994ರಲ್ಲಿ ಸರಕಾರಕ್ಕೆ ವರದಿ ನೀಡಿದ್ದರು. ಈ ವರದಿಯ ಆಧಾರದಲ್ಲಿ ಕೊರಗರಿಗೆ ಭೂಮಿ ನೀಡಬೇಕು ಎಂದು ಕೊರಗ ಸಂಘಟನೆಗಳು ಚಳವಳಿ ಆರಂಭಿಸಿದರು. 2000ನೇ ಇಸವಿಯಲ್ಲಿ ಡಾ. ಮುಹಮ್ಮದ್ ಪೀರ್ ವರದಿ ಆಧಾರದಲ್ಲೇ ‘ಕೊರಗರ ಅಜಲು ಪದ್ಧತಿ ನಿಷೇಧ ಕಾಯ್ದೆ-2000’ಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಅಲ್ಪಸ್ವಲ್ಪ ಭೂಮಿಯೂ, ಘನತೆಯ ಬದುಕೂ ಸಿಕ್ಕಿತ್ತು. ಆ ಬಳಿಕ ಡಾ. ವಹೀದಾ ಬಾನು ಮತ್ತು ಡಾ. ಮುಹಮ್ಮದ್ ಗುತ್ತಿಗಾರ್ ವರದಿಗಳೂ ಕೂಡಾ ಕೊರಗರಿಗೆ ಘನತೆಯ ಬದುಕು ನೀಡುವಲ್ಲಿ ಸಫಲವಾದವು. ಈಗಲೂ ಸರಕಾರಗಳು ಡಾ. ಮುಹಮ್ಮದ್ ಪೀರ್, ಡಾ. ವಹೀದಾ ಬಾನು, ಡಾ. ಮುಹಮ್ಮದ್ ಗುತ್ತಿಗಾರ್ ವರದಿಯಂತೆಯೇ ಕೊರಗರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ನಿರ್ಧರಿಸಿ ಯೋಜನೆಗಳನ್ನು ರೂಪಿಸುತ್ತಿದೆ.

ಹಾಗಾಗಿ, ಕೊರಗಜ್ಜನ ಮಣ್ಣಿನಲ್ಲಿ ಚಕ್ರವರ್ತಿ ಸೂಲಿಬೆಲೆಯ ಭಾಷಣ ಚರ್ಚೆಯಾಗಬಾರದು. ಚರ್ಚೆಯಾಗಬೇಕಾಗಿರುವುದು ಡಾ. ಮುಹಮ್ಮದ್ ಪೀರ್ ವರದಿಯ ಬಳಿಕ ಕರ್ನಾಟಕದ ವಿಧಾನಸಭೆಯಲ್ಲಿ ‘ಕೊರಗರ ಅಜಲು ಪದ್ಧತಿ ನಿಷೇಧ ಕಾಯ್ದೆ-2000’ಯನ್ನು ಮಂಡಿಸಿದ ಅಂದಿನ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪನವರ ಭಾಷಣ.! 8 ನವೆಂಬರ್ 2000ದಂದು ಕಾಗೋಡು ತಿಮ್ಮಪ್ಪನವರು, ಕೊರಗಜ್ಜನ ಸಂಸಾರವಾಗಿರುವ ಕೊರಗರ ಬಗ್ಗೆ ವಿಧಾನಸಭೆಯಲ್ಲಿ ಮಾಡಿದ ಅಭೂತಪೂರ್ವ ಭಾಷಣದ ಯಥಾವತ್ತಿನ ಸರಳ ರೂಪ ಇಲ್ಲಿದೆ:

ಅಧ್ಯಕ್ಷರು: ಸಮಾಜ ಕಲ್ಯಾಣ ಇಲಾಖಾ ಸಚಿವರು ವಿಧೇಯಕವನ್ನು ಸೂಚಿಸುವುದು.

ಕಾಗೋಡು ತಿಮ್ಮಪ್ಪ (ಸಮಾಜ ಕಲ್ಯಾಣ ಸಚಿವರು): ಅಧ್ಯಕ್ಷರೇ, ಕರ್ನಾಟಕ ಕೊರಗರ ಅಜಲು ಪದ್ಧತಿ ನಿಷೇಧ ವಿಧೇಯಕ 2000ವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

‘ಪ್ರಸ್ತಾವವನ್ನು ಮಂಡಿಸಲಾಯಿತು’

ಕಾಗೋಡು ತಿಮ್ಮಪ್ಪ(ಸಮಾಜ ಕಲ್ಯಾಣ ಸಚಿವರು): ಅಧ್ಯಕ್ಷರೇ, ಅಜಲು ಪದ್ಧತಿಯೆಂಬ ಒಂದು ವ್ಯವಸ್ಥೆ ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಇದೆ. ಆದಿವಾಸಿಗಳ ಬುಡಕಟ್ಟಿಗೆ ಸೇರಿದ ಪರಿಶಿಷ್ಟ ವರ್ಗದ ಕೊರಗ ಜನಾಂಗದವರು ಈ ಅಜಲು ಪದ್ಧತಿಯನ್ನು ಅನುಸರಿಸುತ್ತಾರೆ. ಇಷ್ಟು ನಾಗರಿಕತೆ ಬೆಳೆದರೂ ಕೂಡ ಇಂತಹ ಒಂದು ಅನಿಷ್ಟ ಪದ್ಧತಿ ಅಲ್ಲಿ ಇನ್ನೂ ಜೀವಂತವಾಗಿದೆ. ಇದನ್ನು ತೆಗೆದು ಹಾಕಬೇಕು ಎನ್ನುವ ಒತ್ತಾಯವನ್ನು ಈ ಭಾಗದ ವಿದ್ಯಾವಂತರು ಮತ್ತು ವಿಚಾರವಂತರು ಆಗಿಂದಾಗ ಮಾಡುತ್ತಿದ್ದಾರೆ. ಅಜಲು ಪದ್ಧತಿ ನಿರ್ಮೂಲನೆಗೆ ಇಂದು ಕೆಲವು ವಿದ್ಯಾವಂತರು ಮತ್ತು ವಿಚಾರವಂತರು ಅಲ್ಲಿಯ ಜನರಿಗೆ ತಿಳಿ ಹೇಳುತ್ತಿದ್ದಾರೆ. ಇದರ ಜೊತೆಗೆ ಈಗ ಸುಗ್ರೀವಾಜ್ಞೆ ಮುಖಾಂತರ ಈ ಅಜಲು ಪದ್ಧತಿಯನ್ನು ಕೊನೆಗಾಣಿಸುವ ಸಲುವಾಗಿ ಈ ಮಸೂದೆಯನ್ನು ತಂದಿದ್ದೇವೆ. ಅಜಲು ಪದ್ಧತಿಯು ವಿಶೇಷವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಕೆಲವರು ಅನುಸರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಪೂಜಾದಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅಂತಹ ಕ್ರಮಗಳನ್ನು ಕೊರಗ ಜನಾಂಗದವರು ಮಾಡಬೇಕು. ಕೆಲವರು ಬಲಿ ಪೂಜೆಯನ್ನು ಮಾಡುತ್ತಾರೆ. ಪೂಜೆಗೆ ಇಟ್ಟ ನೈವೇದ್ಯದ ಅನ್ನದ ಜೊತೆಗೆ ಕೆಲವು ಕೂದಲುಗಳನ್ನು ಮತ್ತು ಉಗುರುಗಳನ್ನು ಬೆರೆಸಿರುತ್ತಾರೆ. ಈ ರೀತಿ ಕೂದಲು ಮತ್ತು ಉಗುರು ಬೆರೆಸಿದ ಅನ್ನವನ್ನು ಕೊರಗರು ತಿನ್ನಬೇಕು.

ಅದೇ ರೀತಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಓಡಿಸುವುದು ತಮಗೆಲ್ಲರಿಗೂ ತಿಳಿದೇ ಇದೆ. ಕೋಣಗಳು ಓಡುವ ಕೆಸರಿನ ಜಾಗದಲ್ಲಿ ಯಾರಾದರೂ ಶತ್ರುಗಳು ಗೂಟ ಇಟ್ಟು ಮೋಸ ಮಾಡುವ ಸಂದರ್ಭ ಬರಬಹುದೆನ್ನುವ ಕಾರಣದಿಂದ, ಕೋಣ ಓಡುವ ಮೊದಲು ಕೊರಗರು ಓಡಬೇಕಾದ ಪದ್ಧತಿ ಇದೆ. ಈ ರೀತಿಯಲ್ಲಿ ಕೊರಗರು ಕೋಣಗಳಂತೆ ಓಡುವ ಸಂದರ್ಭದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಗೆ ಸಿಲುಕುವ ಸಂದರ್ಭಗಳಿರುತ್ತವೆ. ಇಂಥ ಅನಿಷ್ಟ ಪದ್ಧತಿ ಕರಾವಳಿ ಭಾಗದಲ್ಲಿ ಜಾರಿಯಲ್ಲಿವೆ. ಆಧುನಿಕ ಕಾಲದಲ್ಲಿಯೂ ಇಂಥ ಪದ್ಧತಿಯನ್ನು ಉಳಿಸಿಕೊಂಡು ಬರುವುದು ಯಾವ ರೀತಿಯಲ್ಲೂ ನ್ಯಾಯವಾದುದಲ್ಲ. ಆದರೆ ಸಮಾಜದ ಕುರುಡುತನ, ಅಜ್ಞಾನ, ಅನಕ್ಷರತೆಯ ಕಾರಣದಿಂದ ಇವತ್ತಿಗೂ ಅಜಲು ಪದ್ಧತಿ ಜೀವಂತವಾಗಿ ಉಳಿದುಕೊಂಡು ಬಂದಿದೆ. ಕೆಲವು ಮೇಲ್ವರ್ಗದ ಜನರೂ ಕೂಡ ದೇವರ ಹೆಸರಿನಲ್ಲಿ, ಧಾರ್ಮಿಕತೆಯ ಹೆಸರಿನಲ್ಲಿ ಅಜಲು ಪದ್ಧತಿಗೆ ಪುರಸ್ಕಾರ ಕೊಡುತ್ತಿದ್ದಾರೆಯೇ ವಿನಃ ಇದನ್ನು ನಿಲ್ಲಿಸುವುದಕ್ಕೆ ಪ್ರೋತ್ಸಾಹವನ್ನು ಕೊಡುತ್ತಿಲ್ಲ. ಮೇಲ್ವರ್ಗದ ಜನರು ತಮ್ಮ ಧಾರ್ಮಿಕತೆಯ ಹೆಸರಿನಲ್ಲಿ ಇಂಥ ಅನಿಷ್ಠ ಪದ್ಧತಿಗೆ ಕೊರಗರನ್ನು ಬಳಸಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿಯೇ ಇಂದು ಮಸೂದೆಯನ್ನು ತರಲಾಗಿದೆ.

ಈ ಕಾಯ್ದೆಯೊಂದರಿಂದಲೇ ಎಲ್ಲವೂ ಸರಿಯಾಗುತ್ತದೆ ಎಂದಲ್ಲ. ಸಮಾಜದಲ್ಲಿರುವ ಇಂತಹ ದೋಷಗಳನ್ನು ಮುಕ್ತಾಯ ಮಾಡುವ ಕೆಲಸಕ್ಕೆ ಇನ್ನಷ್ಟು ವ್ಯಾಪಕವಾದ ಚಿಂತನೆಯನ್ನು ಮಾಡಬೇಕಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಹುಟ್ಟಿನಿಂದ ನಾವು ಶೂದ್ರರಾಗಿ ಹುಟ್ಟಿ ಬಿಟ್ಟಿದ್ದೇವೆ. ಮೂಢನಂಬಿಕೆ ಅನಿಷ್ಟ ಪದ್ಧತಿಗಳು ಶೂದ್ರರಲ್ಲಿ ಹೆಚ್ಚಾಗಿ ಕಂಡು ಬರುವುದನ್ನು ನೋಡಿದ್ದೇವೆ. ಹೋರಾಟಗಳನ್ನು ಮಾಡುತ್ತಾ ಬಂದರೂ ಕೂಡ ಈ ನಿಟ್ಟಿನಲ್ಲಿ ನಡೆದ ಹೋರಾಟಗಳು ಬಹಳ ಕಡಿಮೆ. ನಾವೆಲ್ಲರೂ ಸೇರಿ ಅನಿವಾರ್ಯವಾಗಿ ಸಾಮಾಜಿಕ ಪರಿವರ್ತನೆಯನ್ನು ಮಾಡಬೇಕಾದರೆ ಹೋರಾಟವನ್ನು ಮಾಡಲೇಬೇಕು.

ಅಸ್ಪಶ್ಯತೆ, ಅಸಮಾನತೆಯ ಪದ್ಧತಿಗಳು ನಮ್ಮ ನಿಮ್ಮ ಅನೇಕ ಊರುಗಳಲ್ಲಿ ಇದೆ. ಅನೇಕ ಸಾರಿ ಕಠಿಣ ಕ್ರಮಗಳನ್ನು ಕೈಗೊಳ್ಳುವಾಗ ವಿರೋಧಕ್ಕೂ ಒಳಗಾದ ಅನೇಕ ಸಂದರ್ಭಗಳು ಕೂಡ ಉಂಟು. ನಾವು ದೊಡ್ಡ ದೊಡ್ಡ ಹೋರಾಟಗಳನ್ನು ಮಾಡಿದ್ದೇವೆ. ಆದರೆ ನಾನು ಬೆತ್ತಲೆಸೇವೆಯ ಪದ್ಧತಿಯ ವಿರುದ್ಧ ಹೋರಾಟ ಮಾಡುವುದಕ್ಕೆ ಹೋಗಲಿಲ್ಲ. ನಮಗಿದ್ದಂತಹ ಗುರಿ ಭೂ ಒಡೆತನ ದಾಸ್ಯದಿಂದ ಹೊರಗೆ ಬರಬೇಕೆನ್ನುವುದು ಆಗಿತ್ತು. ಗೋಪಾಲಗೌಡರಂತಹವರು ಈ ನೆಲದಲ್ಲಿ ಹೋರಾಟ ಮಾಡುತ್ತಾ ಹೋರಾಟದ ಮತ್ತು ಪರಿವರ್ತನೆಯ ಮಾತುಗಳನ್ನು ಹೇಳಿದ್ದರು. ಆದರೆ ಬೆತ್ತಲೆ ಸೇವೆಯ ವಿರುದ್ಧದ ಹೋರಾಟಕ್ಕೆ ಕೈ ಹಾಕಿದರೆ ನಮ್ಮ ಭೂಮಿಯ ಹೋರಾಟಕ್ಕೆ ಅಡಚಣೆ ಉಂಟಾಗಬಹುದು ಎಂಬ ಅಂಜಿಕೆಯು ಕೂಡ ನಮಗಿತ್ತು. ಇದು ನಮ್ಮಿಂದ ಆಗಿರುವ ಲೋಪ ಎಂದು ನಾನು ಅನೇಕ ಸಾರಿ ಒಪ್ಪಿಕೊಂಡಿದ್ದೇನೆ. ನಾವು ಹಲವಾರು ಹೋರಾಟ ಮಾಡಿದರೂ ಕೂಡ ನಮ್ಮಿಂದ ಬೆತ್ತಲೆ ಸೇವೆಯಂತಹ ಅನಿಷ್ಠ ಪದ್ಧತಿಯನ್ನು ನಿರ್ಮೂಲನ ಮಾಡುವುದಕ್ಕೆ ಹೋರಾಟ ಮಾಡಲಾಗಲಿಲ್ಲವಲ್ಲ ಎನ್ನುವ ಆತಂಕ ಈಗಲೂ ಕೂಡ ನನ್ನನ್ನು ಬಾಧಿಸುತ್ತಿದೆ. ಅದರಿಂದ, ಕೆಲವು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಕಾಲ. ನಾವೆಲ್ಲರೂ ಒಂದು ಕಡೆ ಕುಳಿತುಕೊಂಡು ಇಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನ ಮಾಡುವುದಕ್ಕೆ ಆಲೋಚನೆಯನ್ನು ಮಾಡಿ ಒಂದು ಕಾನೂನನ್ನು ತರುವ ಅಗತ್ಯವಿದೆ.

ಉಡುಪಿಯಲ್ಲಿ ಕೊರಗರು ಭೂಮಿಗಾಗಿ ಹೋರಾಟ ಮಾಡಿದ್ದಾರೆ. ಕೊರಗ ಜನಾಂಗದವರು ಭೂಮಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಅವರ ಮೇಲೆ ಪೊಲೀಸರು ಮೊಕದ್ದಮೆ ಹಾಕಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದನ್ನು ಗೃಹಮಂತ್ರಿಗಳ ಗಮನಕ್ಕೂ ತಂದು ಅವರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು ನಾವು ಈಗಾಗಲೇ ವಕಾಲತ್ತನ್ನು ಹಾಕಿದ್ದೇವೆ. ನಾನು ಅಲ್ಲಿಗೆ ಹೋದಾಗ ಜಿಲ್ಲಾಧಿಕಾರಿಗಳನ್ನು ಕರೆದು ಅವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ಹೇಳಿದ್ದೇನೆ. ಕೊರಗರಲ್ಲಿ ಇವತ್ತು ಪ್ರಜ್ಞೆ ಬಂದಿರುವುದರಿಂದ ನಮಗೂ ಭೂಮಿ ಬೇಕು ಎಂದು ಹೇಳುವ ಬಾಯಿ ಬಂದಿದೆ. ಶತಶತಮಾನಗಳಿಂದ ಬಾಯಿಮುಚ್ಚಿಕೊಂಡಿದ್ದ ಕೊರಗರು ಭೂಮಿ ಕೇಳುತ್ತಿದ್ದಾರೆ ಎಂದರೆ ಕೊರಗರ ಈ ಧ್ವನಿಯನ್ನು ನಾವು ಗೌರವಿಸಬೇಕು.

ನನಗೆ ಈ ಸಂದರ್ಭದಲ್ಲಿ ಕರಾವಳಿಯ ಶಾಸಕ ಮಿತ್ರರು ಕಡತ ಸಹಾಯವನ್ನು ಮಾಡಬೇಕು. ಯಾವ ಯಾವ ಗ್ರಾಮದಲ್ಲಿ ಕಂದಾಯ ಇಲಾಖೆಯ ಭೂಮಿ ಸಾಗುವಳಿಗೆ ಸಿಗುತ್ತದೆ ಎಂಬುದನ್ನು ಪಟ್ಟಿ ಮಾಡಿದರೆ, ಅದನ್ನು ತರಿಸಿಕೊಂಡು ಸರಕಾರದ ಮಟ್ಟದಲ್ಲಿ ಅವರಿಗೆ ಭೂಮಿಯನ್ನು ಕೊಡುವಂತಹ ಕೆಲಸ ಮಾಡಬೇಕಾಗುತ್ತದೆ. ಕೊರಗರಿಗಾಗಿ ಹೋರಾಡುವ ಸಂಘಸಂಸ್ಥೆಗಳು ಹಾಗೂ ಕಾರ್ಯಕರ್ತರು ಸೇರಿ ಮಾಡಬೇಕಾದ ಒಂದೇ ಒಂದು ಕೆಲಸವೆಂದರೆ, ಎಲ್ಲೆಲ್ಲಿ ಯಾವ ಯಾವ ಗ್ರಾಮಗಳಲ್ಲಿ ಸಾಗುವಳಿಗೆ ಭೂಮಿ ಸಿಗುತ್ತದೆ ಎನ್ನುವ ಬಗ್ಗೆ ಪಟ್ಟಿ ಮಾಡಿ ಆ ಪಟ್ಟಿಯನ್ನು ನನಗೆ ಕಳುಹಿಸಿಕೊಡಿ. ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆೆ. ಆದುದರಿಂದ ಕರಾವಳಿ ಭಾಗದ ಶಾಸಕ ಮಿತ್ರರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಭೂಮಿಯ ಪಟ್ಟಿ ಮಾಡಿ ಸರಕಾರಕ್ಕೆ ತಂದು ಕೊಡಲೇ ಬೇಕು. ಗೋಮಾಳ ಅಥವಾ ಬೇರೆ ಸರಕಾರಿ ಜಮೀನನ್ನು ಸಾಗುವಳಿಗೆ ಕೊಡುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಅಧಿಕಾರವಿಲ್ಲ. ಇದೊಂದು ಹೋರಾಟವೆಂದು ತಿಳಿದುಕೊಂಡು ಕೆಲಸವನ್ನು ಮಾಡಿದರೆ ಕೊರಗ ಸಮುದಾಯದ ಕೆಲವು ಜನಕ್ಕಾದರೂ ಭೂಮಿಯನ್ನು ಕೊಡುವುದಕ್ಕಾಗುತ್ತದೆ. ನಾವು ಬೇರೆ ಕಡೆ 60 ಸಾವಿರದಂತೆ ಭೂಮಿಯನ್ನು ಖರೀದಿ ಮಾಡುತ್ತೇವೆ. ಆದರೆ ಕೊರಗ ಜನಾಂಗಕ್ಕೆ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಿದ್ದೇವೆ. ಏಕೆಂದರೆ ದಕ್ಷಿಣ ಕನ್ನಡ ಭಾಗದಲ್ಲಿ ಭೂಮಿ ಸಿಗುವುದಿಲ್ಲ. ಬೆಲೆ ಜಾಸ್ತಿ ಇದೆ. ಆಟೋರಿಕ್ಷಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ತರಬೇತಿ ಕೊಡಲು ವ್ಯವಸ್ಥೆಯನ್ನು ಕೂಡ ಮಾಡಿದ್ದೇವೆ. ಅವರಿಗೆ ಇನ್ನು 10 ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸಿ ಕೇಂದ್ರ ಸರಕಾರಕ್ಕೆ ಕಳುಹಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಸೇರಿ ಕೊರಗ ಸಮುದಾಯದ ಜನರನ್ನು ಮೇಲೆತ್ತುವಂತಹ ಕೆಲಸವನ್ನು ಇವತ್ತು ಮಾಡಬೇಕಾಗಿದೆ.

ಕೊರಗ ಸಮಾಜ ಇನ್ನು ಕೂಡ ಅತ್ಯಂತ ಹೀನಸ್ಥಿತಿಯಲ್ಲಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಅಜಲು ನಿಷೇಧ ಕಾನೂನನ್ನು ಇನ್ನಷ್ಟು ಉಗ್ರವಾದ ರೂಪದಲ್ಲಿ ತರಬೇಕು ಎಂದು ನನಗೆ ಆಸಕ್ತಿ ಇತ್ತು. ಆದರೂ ಕೆಲವು ಭಾಗಗಳನ್ನು ಬಿಟ್ಟಿದ್ದೇನೆ. ಅಸ್ಪಶ್ಯತೆ, ಅಜಲಿಗೆ ಸೀಮಿತವಾಗಿ ಅಪರಾಧಗಳನ್ನು ಉಲ್ಲೇಖಿಸಲಾಗಿದೆ. ಇನ್ನು ಮುಂದೆ ಯಾರಾದರೂ ಅಜಲು ಪದ್ಧತಿಗೆ ಪ್ರೋತ್ಸಾಹ ಕೊಟ್ಟರೆ ಅಥವಾ ಕೊರಗರು ಕೂಡ ಸ್ವಯಂಪ್ರೇರಣೆಯಿಂದ ಪದ್ಧತಿಯ ಆಚರಣೆ ಮಾಡಿದರೂ ಅವರಿಗೆ ಶಿಕ್ಷೆ ವಿಧಿಸಲಾಗುವುದು. ಅಜಲು ಪದ್ಧತಿಯ ಆಚರಣೆಗೆ ಐದು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದಾಗಿದೆ ಅಥವಾ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಬಹುದಾಗಿದೆ. ಈ ಕಾನೂನನ್ನು ಸರಿಯಾಗಿ ಜಾರಿಗೆ ತರಬೇಕು. ಇಲ್ಲದೇ ಇದ್ದರೆ ಸಮಾಜದಲ್ಲಿ ಯಾರದ್ದೋ ಒಳಿತಾಗಿಯೇ ಇವರೆಲ್ಲ ಹುಟ್ಟಿದ್ದಾರೇನೋ ಎನ್ನುವ ಭಾವನೆ ಬರುತ್ತದೆ. ಇನ್ನೊಬ್ಬರ ಮನೆಯ ಆಚರಣೆಗಳಿಗೆ ಕೊರಗರನ್ನೇ ಯಾಕೆ ಗುರಿಯಾಗಿಸಬೇಕು? ಬೇರೆಯವರು ಯಾತಕ್ಕೆ ಅಂತಹ ಆಚರಣೆಯಲ್ಲಿ ಭಾಗಿಯಾಗಬಾರದು? ಯಾವುದಾದರೂ ವರ್ಗದ ಕಾರ್ಯಕ್ರಮಗಳಿಗೆ ಅಡ್ಡಿ ಮಾಡಲೆಂದೇ ಇಂತಹ ಮಸೂದೆಯನ್ನು ತಂದಿದ್ದಾರೆ ಎಂದು ಭಾವಿಸಿದರೆ ಅದು ವಿತಂಡವಾದ ಅಷ್ಟೆ.

ಒಟ್ಟಾರೆ ಇದೊಂದು ಸಣ್ಣ ವಿಧೇಯಕವಾದರೂ ಸಮಾಜದ ಮೇಲೆ ಅಗಾಧ ಪರಿಣಾಮ ಬೀರುವ, ಶೋಷಿತ ವರ್ಗದ ಪರವಾಗಿನ ವಿಧೇಯಕ. ಈ ವಿಧೇಯಕ ಯಾವತ್ತೋ ಸದನದಲ್ಲಿ ಅಂಗೀಕಾರವಾಗಬೇಕಿತ್ತು. ತಡವಾಗಿಯಾದರೂ ಇಂತಹದ್ದೊಂದು ಮಸೂದೆಯನ್ನು ಮಂಡಿಸಿದ್ದೇವೆ. ನಾನು ಮಂಡಿಸಿರುವ ಕರ್ನಾಟಕ ಕೊರಗರ ಅಜಲು ಪದ್ಧತಿ ನಿಷೇಧ ವಿಧೇಯಕ 2000ಕ್ಕೆ ಎಲ್ಲಾ ಸದಸ್ಯರು ಕೂಡ ಹೃತ್ಪೂರ್ವಕವಾದ ಬೆಂಬಲವನ್ನು ನೀಡಿದ್ದೀರಿ. ಈ ಸಂದರ್ಭದಲ್ಲಿ ವಿಧಾನಸಭೆಯ ಸದಸ್ಯರು ನೀಡಿರುವ ಎಲ್ಲಾ ಸಲಹೆಗಳನ್ನು ಪರಿಗಣಿಸುತ್ತೇವೆ. ಕೊರಗ ಜನಾಂಗದವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಸುರತ್ಕಲ್ ಕ್ಷೇತ್ರದಲ್ಲಿ ಒಂದು ಒಳ್ಳೆಯ ವಿದ್ಯಾರ್ಥಿ ನಿಲಯವನ್ನು ಸ್ಥಾಪನೆ ಮಾಡಿದ್ದೇವೆ. ಕೊರಗ ಸಮುದಾಯದ ಮಕ್ಕಳಿಗೆ ಎಲ್ಲಿ ಅಗತ್ಯವಿದೆಯೋ ಅಂತಹ ಕಡೆ ನಾವು ವಿದ್ಯಾಭ್ಯಾಸಕ್ಕೆ ಬೇಕಾದಂತಹ ಸವಲತ್ತುಗಳನ್ನು ಕೊಟ್ಟು ವಿದ್ಯಾರ್ಥಿ ನಿಲಯವನ್ನು ತೆರೆಯುವುದಕ್ಕೆ ಯಾವ ತೊಂದರೆ ಇಲ್ಲ. ತಮ್ಮೆಲ್ಲರ ಸಹಕಾರವನ್ನು ಈ ದಿಸೆಯಲ್ಲಿ ಬಯಸುತ್ತಾ ‘ಕರ್ನಾಟಕ ಕೊರಗರ ಅಜಲು ಪದ್ಧತಿ ನಿಷೇಧ ವಿಧೇಯಕ 2000’ವನ್ನು ತಾವು ಸರ್ವಾನುಮತದಿಂದ ಅಂಗೀಕಾರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನವೀನ್ ಸೂರಿಂಜೆ

contributor

Similar News