ಪಾಕಿಸ್ತಾನದೊಂದಿಗೆ ನಮ್ಮ ನೈಜ ಗೆಲುವು ಹೇಗಿರಬೇಕು?

ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಬಲಿ ಪಡೆದ ಭಯೋತ್ಪಾದಕ ದಾಳಿ ನಡೆದು ನಾಲ್ಕು ದಿನಗಳಾಗುತ್ತಿವೆ.ಕೊಂದವರನ್ನು ಹಿಡಿಯಲಾಗಿಲ್ಲ. ಆದರೆ ದೇಶಾದ್ಯಂತ ದ್ವೇಷವನ್ನು ಪ್ರಚಾರ ಮಾಡಲಾಗಿದೆ.
ಸಾಮಾನ್ಯವಾಗಿ, ಭಯೋತ್ಪಾದಕ ದಾಳಿ ಇಡೀ ದೇಶವನ್ನು ಒಟ್ಟುಗೂಡಿಸಬೇಕು. ಇಂಥ ಹೊತ್ತಲ್ಲಿ ಎಂಥದೇ ಭಿನ್ನಾಭಿಪ್ರಾಯಗಳಿದ್ದರೂ ಮರೆತು ಎಲ್ಲರೂ ಒಗ್ಗೂಡಬೇಕು.ಆದರೆ ಇಲ್ಲಿ ಕಳೆದ ಮೂರು ದಿನಗಳಲ್ಲಿ ಏನೇನೋ ನಡೆಯುತ್ತಿದೆ.
ಮುಖ್ಯವಾಹಿನಿಯೊಂದಿಗೆ ಸೇರ ಬಯಸುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಅವರ ಮನೆಗಳಿಂದ ಹೊರಗೆಸೆದು ಥಳಿಸಲಾಗುತ್ತಿದೆ. ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಲಾಗಿದೆ.ಮುಸ್ಲಿಮರ ಮೇಲೆ ದಾಳಿ ಮಾಡಲಾಗಿದೆ.
ಕಾರಣವೆಂದರೆ ನಿಮ್ಮ ಧರ್ಮ ಯಾವುದು ಎಂದು ಕೇಳಿ ಭಯೋತ್ಪಾದಕರು ಕೊಂದರು ಎಂಬುದು.
ಭಯೋತ್ಪಾದಕರು ಬಯಸಿದ್ದು ಕೂಡ ಈ ವಿಭಜನೆಯನ್ನೇ.
ಕಾಶ್ಮೀರ ಬಹಿಷ್ಕಾರ ಚಳವಳಿ ಪ್ರಾರಂಭಿಸಲಾಗಿದೆ.
ನಮ್ಮ ದ್ವೇಷವನ್ನು ಸಮರ್ಥಿಸಿಕೊಳ್ಳಲು, ನಾವು ಭಯೋತ್ಪಾದಕರು ಏನು ಬಯಸಿದ್ದರೋ ಅದನ್ನು ಮಾಡುತ್ತಿದ್ದೇವೆ.
ಹಿಂದೂ-ಮುಸ್ಲಿಮ್ ಎಂಬುದನ್ನು ಮರೆತುಬಿಡಿ, ನಾವು ಏನು ಮಾಡುತ್ತಿದ್ದೇವೆ ಎಂದು ನೀರಜ್ ಚೋಪ್ರಾ ಬರೆದಿದ್ದಾರೆ. ನೀರಜ್ ಚೋಪ್ರಾ ನಮ್ಮ ದೇಶದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತರು. ಅವರ ವಿರುದ್ಧವೇ ಹರಿಹಾಯಲು ಅನೇಕರಿಗೆ ಅವಕಾಶ ಸಿಕ್ಕಿದೆ. ಏಕೆಂದರೆ ಪಾಕಿಸ್ತಾನಿ ಕ್ರೀಡಾಪಟುವಿನೊಂದಿಗಿನ ಅವರ ಸಂಬಂಧ ಉತ್ತಮವಾಗಿದೆ, ಆದ್ದರಿಂದ ನೀರಜ್ ಚೋಪ್ರಾ ಮೇಲೆ ಮುಗಿಬೀಳಲಾಗುತ್ತಿದೆ. ನಾವು ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದೇವೆ ಮತ್ತು ಹಾಗಾಗಿಯೇ ಭಯೋತ್ಪಾದಕರ ಯೋಜನೆ ಯಶಸ್ವಿಯಾಗಿರುವ ಹಾಗಿದೆ.
ಭಯೋತ್ಪಾದಕರು ಇಲ್ಲಿಯವರೆಗೆ ಹೇಗೆ ಬಂದರು? ಮೂರು ಹಂತದ ಭದ್ರತೆ ಎಲ್ಲಿ ವಿಫಲವಾಯಿತು ಎಂಬ ಪ್ರಶ್ನೆಗಳನ್ನು ಕೇಳುತ್ತಿಲ್ಲ. ಆದರೆ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಮುಸ್ಲಿಮರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಹಿಂದೆ ಭಯೋತ್ಪಾದಕ ದಾಳಿಯ ನಂತರ ಸಾಮಾನ್ಯವಾಗಿ ಕೇಳಲಾಗುತ್ತಿದ್ದ ಪ್ರಶ್ನೆಗಳನ್ನು ಈಗ ಸರಕಾರಕ್ಕೆ ನಾವು ಕೇಳುತ್ತಿಲ್ಲ.
ದಾಳಿ ಹೇಗೆ ನಡೆಯಿತು ಮತ್ತು ಪಾಕಿಸ್ತಾನಕ್ಕೆ ದೀರ್ಘಾವಧಿಯ ಪಾಠವನ್ನು ಹೇಗೆ ಕಲಿಸುವುದು ಎಂಬುದರ ಕುರಿತು ಯೋಚಿಸಬೇಕಿರುವ ಸಮಯ ಇದು. ಸಮಸ್ಯೆ ಏನೆಂದರೆ, ನಮ್ಮ ಸರಕಾರವನ್ನು ಸಮರ್ಥಿಸಿಕೊಳ್ಳುವುದು ರಾಷ್ಟ್ರೀಯತೆ ಎಂದು ನಾವು ಭಾವಿಸುತ್ತೇವೆ.
ಆದರೆ ಸರಕಾರವನ್ನೂ ಪ್ರಶ್ನಿಸಬೇಕಲ್ಲವೆ?
ಈ ದಾಳಿ ಹೇಗೆ ಮೊದಲು ಸಂಭವಿಸಿತು ಎಂದು ನಾವು ನಮ್ಮ ಸರಕಾರವನ್ನು ಪ್ರಶ್ನಿಸಬೇಕಲ್ಲವೆ?
ಇನ್ನು, ಇಲ್ಲಿ ಸರಕಾರ ತನಗೆ ಮಾಹಿತಿಯೇ ಇರಲಿಲ್ಲ, ಆ ಪ್ರದೇಶವನ್ನು ಮುಚ್ಚಲಾಗಿತ್ತು, ಆದರೆ ಸ್ಥಳೀಯ ಆಡಳಿತ ಅದನ್ನು ತೆರೆಯಿತು ಎನ್ನುತ್ತಿದೆ. ಅಂದರೆ, ಅಮಿತ್ ಶಾ ತಪ್ಪಿಲ್ಲ, ಗೃಹ ಸಚಿವಾಲಯ ತಪ್ಪಿಲ್ಲ. ಇದೆಲ್ಲವನ್ನೂ ಉಮರ್ ಅಬ್ದುಲ್ಲಾ ಮತ್ತು ಸ್ಥಳೀಯ ಜನರು ಮಾಡಿರಬೇಕು ಎನ್ನುವಂತಾಗಿದೆ.
ಈಗ ಮುಂದೇನು? ಯುದ್ಧ ನಡೆಯುತ್ತದೆಯೇ? ಕ್ಷಿಪಣಿಗಳು, ಎಫ್-16ಗಳು, ಮಿರಾಜ್, ಕ್ಲಸ್ಟರ್ ಬಾಂಬ್‌ಗಳನ್ನು ಹಾಕಲಾಗುತ್ತದೆಯೇ? ಅಥವಾ ಚೀನಾ ಅಮೆರಿಕವನ್ನು ನಿಭಾಯಿಸಿದ ರೀತಿಯ ಬೇರೆ ಮಾರ್ಗವಿದೆಯೇ? ಗುಂಡುಗಳಿಂದ ಅಥವಾ ಹಣದ ಬಲದಿಂದ ಯುದ್ಧವನ್ನು ಎದುರಿಸಬಹುದೇ?
ಪಾಕಿಸ್ತಾನದ ವಿರುದ್ಧ ಪ್ರತೀಕಾರವಾಗಿ, ಸಿಂಧೂ ಜಲ ಒಪ್ಪಂದದ ಅಮಾನತು ಸಾಕಷ್ಟು ವಿವಾದಾತ್ಮಕವಾಗಿದೆ.
ಮೊದಲು, ಇದು ಮಾಸ್ಟರ್‌ಸ್ಟ್ರೋಕ್ ಎಂಬಂತೆ ಕಾಣಿಸಿತ್ತು.ಆದರೆ ನಂತರ ಅದು ಮಾಸ್ಟರ್‌ಸ್ಟ್ರೋಕ್ ಅಲ್ಲ ಎಂದು ಅರ್ಥವಾಯಿತು.
ಏಕೆಂದರೆ ನೀರನ್ನು ಅಷ್ಟು ಸುಲಭವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಭೌಗೋಳಿಕತೆ ವಿಷಯ ಮಾತ್ರವಲ್ಲ, ಅಂತರ್‌ರಾಷ್ಟ್ರೀಯ ರಾಜಕೀಯವೂ ಇದೆ ಮತ್ತು ಮಾನವೀಯ ಕೋನವೂ ಇದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ಯುದ್ಧಗಳು ನಡೆದವು. ಆಗಲೂ ನಾವು ಸಿಂಧೂ ಜಲ ಒಪ್ಪಂದದ ವಿಷಯವನ್ನು ಮುಟ್ಟಲಿಲ್ಲ. ಪಾಕಿಸ್ತಾನವನ್ನು ಮಣಿಸಲು ಇರುವ ಇತರ ಮಾರ್ಗಗಳನ್ನು ನೋಡಬೇಕಿದೆ.
ಒಂದೊಮ್ಮೆ ಪಾಕಿಸ್ತಾನಕ್ಕೆ ನೀರನ್ನು ನಿಷೇಧಿಸಿದರೆ ಅಥವಾ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೆ ಅದಕ್ಕಾಗಿ ಸಂಪೂರ್ಣ ಅಣೆಕಟ್ಟು ನಿರ್ಮಿಸಬೇಕಾಗುತ್ತದೆ.
24 ಕೋಟಿ ಜನರ ನೀರಿನ ಅಗತ್ಯವನ್ನು ನೀವು ತಡೆಯಲು ಸಾಧ್ಯವಿಲ್ಲ. ಅವರು ನದಿಯ ಮೇಲ್ಭಾಗದವರು ಮತ್ತು ನಾವು ನದಿಯ ಕೆಳಭಾಗದವರು. ನಮ್ಮ ನೀರಿನ ಮೇಲೆ ಯಾವುದೇ ರೀತಿಯ ಅತಿಕ್ರಮಣ, ಅಮಾನತು ಅಥವಾ ನಿರ್ಬಂಧ ಸ್ವೀಕಾರಾರ್ಹವಲ್ಲ ಎಂದು ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನ ಯುದ್ಧ ಘೋಷಿಸುತ್ತದೆಯೋ ಇಲ್ಲವೋ ಬೇರೆ ಮಾತು. ನಮ್ಮ ಪಡೆಗಳು ಅದನ್ನು ನಿಭಾಯಿಸಬಲ್ಲವು. ಆದರೆ ನೀರು ನಿಲ್ಲಿಸುವುದು ವಾಸ್ತವದಲ್ಲಿ ಅಷ್ಟು ಸುಲಭವಲ್ಲ.
ಅದು ಈಗ ಹೊಂದಿರುವ ಮಾನವೀಯತೆ, ಸಹಾನುಭೂತಿ, ಅಂತರ್‌ರಾಷ್ಟ್ರೀಯ ಬೆಂಬಲದ ಮೇಲೆ ಪರಿಣಾಮ ಬೀರಬಹುದು.
ಅದಾದ ನಂತರ ವೀಸಾ ವಿನಾಯಿತಿ ರದ್ದು, ಪಾಕಿಸ್ತಾನಿ ನಾಗರಿಕರನ್ನು ವಾಪಸ್ ಕಳುಹಿಸುವುದು, ರಾಜತಾಂತ್ರಿಕ ಸಂಬಂಧಗಳನ್ನು ಕಡಿತ ಮಾಡುವುದು ದೊಡ್ಡ ಪರಿಣಾಮ ಬೀರದಿರಬಹುದು.
ನಮ್ಮ ರಣತಂತ್ರ ನಾಗರಿಕರನ್ನು ಗುರಿ ಮಾಡುವುದಕ್ಕಿಂತ ಹೆಚ್ಚಾಗಿ, ಪಾಕಿಸ್ತಾನ ಸರಕಾರದ ಮೇಲೆ ಹೆಚ್ಚು ಪರಿಣಾಮ ಬೀರುವಂತಿರಬೇಕು.
ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ. ಇದರಿಂದ ನಮ್ಮ ವಿಮಾನಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.
ವ್ಯಾಪಾರವನ್ನು ಸ್ಥಗಿತಗೊಳಿಸುವ ಮತ್ತು ರಾಜತಾಂತ್ರಿಕ ಸಂಬಂಧ ಕಡಿಮೆ ಮಾಡುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಹಾಗಾಗಿ, ಸಿಂಧೂ ಜಲ ಒಪ್ಪಂದದ ಈ ದೊಡ್ಡ ಘೋಷಣೆಯಿಂದ ಏನೂ ಆಗುವುದಿಲ್ಲ.
ಮತ್ತೊಂದೆಡೆ, ಸಾಮಾಜಿಕ ಮಾಧ್ಯಮದಲ್ಲಿ ಯುದ್ಧ ನಡೆಯುತ್ತಿದೆ. ಮಾಜಿ ಜನರಲ್‌ಗಳು ಮತ್ತು ಪೈಲಟ್‌ಗಳು ಪಾಕಿಸ್ತಾನವನ್ನು ನಕ್ಷೆಯಿಂದ ತೆಗೆದುಹಾಕಿ ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಬಾಲಿಶ ಕೃತ್ಯಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿನ ಅಬ್ಬರಗಳನ್ನು ನೋಡಿದರೆ, ಯುದ್ಧ ಈಗಾಗಲೇ ಪ್ರಾರಂಭವಾಗಿದೆ ಎನ್ನುವಂತಿದೆ.
ಹಾಗಾದರೆ ನಾವು ಏನು ಮಾಡಬಹುದು?
ಯುದ್ಧವನ್ನು ಹೇಗೆ ಮಾಡಬಹುದು ಎಂಬುದನ್ನು ಚೀನಾದಿಂದ ಕಲಿಯಬೇಕಿದೆ. ಚೀನಾ ಒಂದೇ ಒಂದು ಗುಂಡು ಹಾರಿಸದೆ ಅಮೆರಿಕದೊಂದಿಗೆ ಯುದ್ಧ ಮಾಡುತ್ತಿದೆ ಮತ್ತು ಗೆಲ್ಲುತ್ತಿದೆ. ಏಕೆಂದರೆ ಚೀನಾ ತನ್ನ ಆರ್ಥಿಕ ಶಕ್ತಿಯನ್ನು ಬಳಸಿಕೊಂಡು ಅಮೆರಿಕದ ಅಹಂಕಾರವನ್ನು ಮುರಿಯುತ್ತಿದೆ.
ಪಾಕಿಸ್ತಾನದೊಂದಿಗೆ ನಾವು ಅದೇ ರೀತಿ ಮಾಡಬಹುದೇ?
ಇದನ್ನು ಅರ್ಥಮಾಡಿಕೊಳ್ಳಲು, ಭಾರತದೊಂದಿಗೆ ಪಾಕಿಸ್ತಾನದ ಸಮಸ್ಯೆಯ ಬಗ್ಗೆ ಅರ್ಥಮಾಡಿಕೊಳ್ಳಬೇಕು.
ಕಾಶ್ಮೀರ ಮಾತ್ರ ಸಮಸ್ಯೆ ಎಂದು ಅನೇಕ ಜನರು ಭಾವಿಸುತ್ತಾರೆ. ಪಾಕಿಸ್ತಾನದ ಸಮಸ್ಯೆ ಕಾಶ್ಮೀರವಲ್ಲ. ಕಾಶ್ಮೀರ ಸಮಸ್ಯೆ ಬಗೆಹರಿದರೂ, ಕನಿಷ್ಠ ಪಕ್ಷ ಪಾಕಿಸ್ತಾನದ ಗಣ್ಯರಿಗೆ, ಸೈನ್ಯಕ್ಕೆ, ಐಎಸ್‌ಐಗೆ, ಅದು ಬಗೆಹರಿಯುವುದಿಲ್ಲ. ಕಾಶ್ಮೀರ ಶಾಂತಿಯುತ ಮತ್ತು ಸಮೃದ್ಧವಾಗಿರುವುದನ್ನು ಅದು ಎಂದಿಗೂ ಸಹಿಸುವುದಿಲ್ಲ.
ಪ್ರವಾಸಿಗರನ್ನು ಕೊಂದಿರುವುದು ಕಾಕತಾಳೀಯವಲ್ಲ. ಅದು ಚೆನ್ನಾಗಿ ಯೋಜಿಸಲಾದ ಕ್ರಮ. ಪ್ರವಾಸೋದ್ಯಮ ಅಲ್ಲಿನ ಎರಡನೇ ದೊಡ್ಡ ಆದಾಯ ಮೂಲವಾಗಿದೆ.
ಚೀನಾದ ಮಾದರಿಯನ್ನು ಅನುಸರಿಸಲು ಬಯಸಿದರೆ, ಅದರಿಂದ ಒಂದಷ್ಟು ಕಲಿಯಬೇಕಿದೆ.
ಇಂದು ಚೀನಾ ಜಗತ್ತನ್ನು ಆಳುತ್ತಿರುವುದು ತಾಂತ್ರಿಕವಾಗಿ ಮುಂದುವರಿದಿರುವುದರಿಂದ.
ಚೀನಾ ಇತರ ದೇಶಗಳೊಂದಿಗೆ ಮಾಡಿರುವಂತೆಯೇ, ಪಾಕಿಸ್ತಾನ ಸರಕಾರವನ್ನು ಇತರ ರೀತಿಯಲ್ಲಿ ಕಟ್ಟಿಹಾಕಬಹುದು.
ಬಾಂಬ್ ಇಲ್ಲದೆ ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವ ಮಾರ್ಗಗಳ ಬಗ್ಗೆ ನಾವು ಯೋಚಿಸಬೇಕು.
ಯುಎಸ್ ಮತ್ತು ಚೀನಾ ನಡುವೆ ದೊಡ್ಡ ಹೋರಾಟ ನಡೆದರೆ ಮತ್ತು ಚೀನಾ ಭಾರತದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸಿದರೆ, ಚೀನಾದೊಂದಿಗೆ ಭಾರತ ಮೈತ್ರಿ ಮಾಡಿಕೊಳ್ಳಬೇಕು ಮತ್ತು ಪಾಕಿಸ್ತಾನವು ಚೀನಾದಿಂದ ಪಡೆಯುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು. ಒಪ್ಪಂದವನ್ನು ಮುರಿಯದೆ ಸ್ಕ್ರೂಗಳನ್ನು ಬಿಗಿಗೊಳಿಸಬಹುದು.
ಹೋರಾಟ ಸರಕಾರದ ವಿರುದ್ಧ ನಡೆಯಬೇಕು.ಏಕೆಂದರೆ ಸರಕಾರ ತಪ್ಪು ಮಾಡುತ್ತಿದೆ ಎಂದು ನಾಗರಿಕರು ಅರ್ಥಮಾಡಿಕೊಂಡಿದ್ದಾರೆ.
ನಾವು ಚಲನಚಿತ್ರಗಳು, ಕ್ರೀಡೆಗಳನ್ನು ಮುಚ್ಚುವ ಬಗ್ಗೆ ಯೋಚಿಸುತ್ತಿದ್ದೇವೆ. ನಮ್ಮ ಒಲಿಂಪಿಯನ್‌ಗಳನ್ನು, ನಮ್ಮ ಬಾಲಿವುಡ್ ಜನರನ್ನು ನಿಂದಿಸುತ್ತಿದ್ದೇವೆ. ಇದು ಯಾವುದೇ ಒಳಿತನ್ನು ಮಾಡುವುದಿಲ್ಲ.
ಪಾಕಿಸ್ತಾನ ಸರಕಾರವನ್ನು ಸುತ್ತುವರಿಯಲು ಬಯಸಿದರೆ, ‘ವಿಶ್ವಗುರು’ ಸ್ಥಾನಮಾನವನ್ನು ತೋರಿಸಬೇಕು. ನಂತರ ಆರ್ಥಿಕ ಶಕ್ತಿಯನ್ನು ತೋರಿಸಬೇಕು. ನಂತರ ದೀರ್ಘಾವಧಿಯ ತಂತ್ರವನ್ನು ತೋರಿಸಬೇಕು.
ಇಲ್ಲದಿದ್ದರೆ, ಇಲ್ಲಿ ನಾವು ಅರಚಾಡುವುದು ಮತ್ತು ಅಲ್ಲಿ ಅವರು ಅರಚಾಡುವುದು ನಡೆಯುತ್ತಲೇ ಇರುತ್ತದೆ.
ಭಯೋತ್ಪಾದಕರನ್ನು ಹಿಡಿಯುವುದು ನಮಗೆ ಇನ್ನೂ ಸಾಧ್ಯವಾಗಿಲ್ಲ. ಈ ದಾಳಿಯನ್ನು ಪಾಕಿಸ್ತಾನ ಮಾಡಿದೆ ಎಂದು ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ನಾವು ಸಾಬೀತುಪಡಿಸಬೇಕಿದೆ.
ಕಾಶ್ಮೀರ ಒಂದು ದಿನ ತನ್ನದಾಗಲಿದೆ ಎಂದು ಪಾಕಿಸ್ತಾನ ಯೋಚಿಸುತ್ತಿದೆ. ಅದರ ಈ ಆಲೋಚನೆ ಬದಲಾಗ ಬೇಕೆಂದರೆ, ನಾವು ನಮ್ಮ ತಂತ್ರ ಮತ್ತು ವಿಧಾನವನ್ನು ಬದಲಾಯಿಸಿ ಕೊಳ್ಳಬೇಕಿದೆ.
ಆರ್ಥಿಕವಾಗಿ, ರಾಜತಾಂತ್ರಿಕವಾಗಿ, ವ್ಯೆಹಾತ್ಮಕವಾಗಿ ನಾವು ಪಾಕಿಸ್ತಾನವನ್ನು ನಿಯಂತ್ರಿಸಬೇಕು. ನಮ್ಮೊಂದಿಗೆ ಜಗಳ ಆರ್ಥಿಕವಾಗಿ, ರಾಜಕೀಯವಾಗಿ ದುಬಾರಿ ಆಗಲಿದೆ ಎಂಬುದನ್ನು ಅದಕ್ಕೆ ಮನಗಾಣಿಸಬೇಕು. ಅಲ್ಲೇ ಇರುವುದು ನಿಜವಾದ ಗೆಲುವು.