ನಾಡನ್ನು ಬೌದ್ಧಿಕವಾಗಿ ಕಟ್ಟುತ್ತಿರುವವರು ಯಾರು?
ಇದೊಂದು ‘ಬೌದ್ಧಿಕತೆ’ಗೆ ತೀರಾ ಸೀಮಿತ ಚೌಕಟ್ಟನ್ನು ಆರೋಪಿಸಿ ನೀಡಿದ ಹೇಳಿಕೆಯಾಗಿದೆ ಅಥವಾ ಪ್ರಾಧ್ಯಾಪಕರು ಮಾತ್ರ ಬೌದ್ಧಿಕತೆಯ ಯಜಮಾನರು ಎನ್ನುವ ಕಲ್ಪಿತ ಸತ್ಯವನ್ನು ಆಧಾರವಾಗಿಟ್ಟುಕೊಂಡು ಎದುರಾಳಿಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರನ್ನು ಮುನ್ನೆಲೆಗೆ ತರುವ ಪ್ರಯತ್ನದಂತೆ ಕಾಣುತ್ತದೆ. ಗೆಳೆಯ ಎತ್ತಿದ ಈ ಪ್ರಶ್ನೆಗೆ ಅನೇಕರು ಹಲಬಗೆಯ ಸಮರ್ಥನೆಗಳನ್ನು ಭಿನ್ನಮತಗಳನ್ನು ವ್ಯಕ್ತಪಡಿಸಿದ್ದಾರೆ. ತಳಪಾಯವೇ ಇಲ್ಲದ, ಒಂದು ತಾರ್ಕಿಕ ಆಳವಿಲ್ಲದ ಇಂತಹ ಹೇಳಿಕೆಗಳು ಇಂದಿನ ಸೋಷಿಯಲ್ ಮೀಡಿಯಾ Instant ಬೌದ್ಧಿಕತೆಯ ಅವಸರದ ಉತ್ಪನ್ನಗಳಂತೆ ಕಾಣುತ್ತದೆ.
ಗೆಳೆಯ ಕವಿ, ಪ್ರಾಥಮಿಕ ಶಾಲೆಯ ಶಿಕ್ಷಕರೂ ಆದ ವೀರಣ್ಣ ಮಡಿವಾಳರ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ‘ಈ ನಾಡನ್ನು ಬೌದ್ಧಿಕವಾಗಿ ಕಟ್ಟುತ್ತಿರುವವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಪ್ರಾಧ್ಯಾಪಕರಲ್ಲ’ ಎಂದಿದ್ದಾರೆ. ಇದೊಂದು ‘ಬೌದ್ಧಿಕತೆ’ಗೆ ತೀರಾ ಸೀಮಿತ ಚೌಕಟ್ಟನ್ನು ಆರೋಪಿಸಿ ನೀಡಿದ ಹೇಳಿಕೆಯಾಗಿದೆ ಅಥವಾ ಪ್ರಾಧ್ಯಾಪಕರು ಮಾತ್ರ ಬೌದ್ಧಿಕತೆಯ ಯಜಮಾನರು ಎನ್ನುವ ಕಲ್ಪಿತ ಸತ್ಯವನ್ನು ಆಧಾರವಾಗಿಟ್ಟುಕೊಂಡು ಎದುರಾಳಿಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರನ್ನು ಮುನ್ನೆಲೆಗೆ ತರುವ ಪ್ರಯತ್ನದಂತೆ ಕಾಣುತ್ತದೆ. ಗೆಳೆಯ ಎತ್ತಿದ ಈ ಪ್ರಶ್ನೆಗೆ ಅನೇಕರು ಹಲಬಗೆಯ ಸಮರ್ಥನೆಗಳನ್ನು ಭಿನ್ನಮತಗಳನ್ನು ವ್ಯಕ್ತಪಡಿಸಿದ್ದಾರೆ. ತಳಪಾಯವೇ ಇಲ್ಲದ, ಒಂದು ತಾರ್ಕಿಕ ಆಳವಿಲ್ಲದ ಇಂತಹ ಹೇಳಿಕೆಗಳು ಇಂದಿನ ಸೋಷಿಯಲ್ ಮೀಡಿಯಾ Instant ಬೌದ್ಧಿಕತೆಯ ಅವಸರದ ಉತ್ಪನ್ನಗಳಂತೆ ಕಾಣುತ್ತದೆ.
ಈ ಎಲ್ಲಾ ಪರ-ವಿರೋಧಗಳನ್ನು ಗಮನಿಸಿದ ಮೇಲೆ ಒಂದು ನಾಡನ್ನು ಬೌದ್ಧಿಕವಾಗಿ ಕಟ್ಟುವುದು ಎಂದರೆ, ಇಟ್ಟಿಗೆ-ಸಿಮೆಂಟು-ಕಬ್ಬಿಣ-ಕಲ್ಲು ಗಳಿಂದ ಮನೆ ಕಟ್ಟಿದಂತೆಯೇ? ಒಂದು ಅಮೂರ್ತ ಸಂಗತಿಯನ್ನು ಮೂರ್ತಗೊಳಿಸಿ ಯಾರಿಗೋ ಕಟ್ಟಿಹಾಕುವ ಈ ಕ್ರಮವೇ ದೋಷಪೂರಿತವಾದುದು. ಬೌದ್ಧಿಕತೆ ಎನ್ನುವುದು ಯಾರೋ ರೆಡಿಮೇಡ್ ಬಟ್ಟೆ ತರ ತಂದು ತೊಡಿಸುವುದಲ್ಲ. ಅದೊಂದು ನಿರಂತರ ಆಗುವಿಕೆಯ, ಮಾಗುವಿಕೆಯ ಪ್ರಕ್ರಿಯೆ. ಮನುಷ್ಯ ಸಾಯುವ ತನಕ ಆಗುತ್ತಲೇ ಇರುವ ಪ್ರಾಸಸ್. ‘ಮನೆಯೇ ಮೊದಲ ಪಾಠ ಶಾಲೆ’ ಎನ್ನುವಂತೆ ಅವ್ವನ ಮಮತೆಯ ಮಾತುಗಳಿಂದ ಶುರುವಾದದ್ದು ಹಂತ ಹಂತವಾಗಿ ಬೆಳೆಯುತ್ತಲೇ ಹೋಗುತ್ತದೆ. ಹಾಗಾಗಿ ಬೌದ್ಧಿಕತೆ ಎನ್ನುವುದು ಬದುಕಿನ ಆರಂಭದಿಂದ ಮುಗಿಯುವ ತನಕ ಅಸಂಖ್ಯಾತ ತಿಳಿವಿನ-ಅರಿವಿನ ಎಳೆಗಳು/ನೂಲುಗಳು ಸೇರುತ್ತಾ ಹಾಸುಹೊಕ್ಕಾಗಿ ನೇಯುತ್ತಲೇ ಇರುವ ಮತ್ತು ನೇಯುವಿಕೆ ಎಂದೂ ಮುಗಿಯದ ಬಟ್ಟೆಯ ಹಾಗೆ.
ಮನೆ ಪರಿಸರ, ಬದುಕುತ್ತಿರುವ ವಾತಾವರಣ, ಬಾಲ್ಯದಲ್ಲಿ ಪ್ರಭಾವಿಸಿದ ಸಂಗತಿಗಳು, ಪ್ರಾಥಮಿಕ ಶಾಲೆಯಿಂದ ಅಕ್ಷರ ಕಲಿಯುವಾಗ ಅಕ್ಷರಗಳನ್ನು ಕಲಿಸಲು ‘ಅ’ ಎಂದರೆ ‘ಅರಮನೆ’ , ‘ಆ’ ಎಂದರೆ ‘ಆನೆ’ ಎನ್ನುವುದರಿಂದ ಶುರುವಾದ ಕಲಿಕೆ, ಈ ಕಲಿಕೆಯ ಹಂತದಲ್ಲೇ ಕೆಲವು ಸಂಗತಿಗಳ ಪ್ರಮಾಣಗಳನ್ನು ಮನಪಟಲದಲ್ಲಿ ಹಚ್ಚೊತ್ತುವ ಮೂಲಕ ಶುರುವಾಗುತ್ತದೆ. ಕಲಿತದ್ದು..ಕಲಿಯುತ್ತಲೇ ಹೋದಂತೆ ಹೊಸ ಹೊಸ ಕಲಿಕೆಗಳು ಹಳೆಯದನ್ನು ವಿಸರ್ಜಿಸುತ್ತಾ (ಡಿಲೀಟ್ ಮಾಡುತ್ತಾ) ಹೋಗುತ್ತವೆ. ಪ್ರಾಥಮಿಕದಲ್ಲಿ ಕಲಿತದ್ದು ಪ್ರೌಢಶಾಲೆಯಲ್ಲಿ ಕರೆಕ್ಟ್ ಆಗಬಹುದು, ಪಿಯುನಲ್ಲಿ ಬದಲಾಗಬಹುದು, ಪದವಿ ಸ್ನಾತಕೋತ್ತರ ಪದವಿ, ಪಿಎಚ್.ಡಿ ಸಂಶೋಧನೆ ಹೀಗೆ ಹಿಂದೆ ಕಲಿತದ್ದನ್ನು ತಿದ್ದಿಕೊಳ್ಳುತ್ತಲೇ ಹೊಸದನ್ನು ಕಲಿಯುತ್ತಾ ಬೌದ್ಧಿಕತೆ ಬೆಳೆಯುತ್ತಾ ಹೋಗುತ್ತದೆ. ಇದರಲ್ಲಿ ಯಾರ ಪಾಲು ಎಷ್ಟು ಎಂದು ಅಳತೆ ಮಾಡುವ ಮಾಪನವನ್ನು ಇನ್ನೂ ಶೋಧಿಸಲಾಗಿಲ್ಲ. ಅದರಲ್ಲಿ ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಮೂಲಭೂತವಾದಕ್ಕೆ ಪೂರಕವಾದ ಜೀವ ವಿರೋಧಿ ಬೌದ್ಧಿಕತೆಯೂ ಇದೆ. ಅಂತೆಯೇ ಮನುಷ್ಯಪರವಾದ ಸಮತೆಯ ಆಶಯದ ಈ ಹೊತ್ತಿನಲ್ಲಿ ಹೇಳುವುದಾದರೆ ಸಂವಿಧಾನದ ಪರವಾದ ಜೀವಪರ ಬೌದ್ಧಿಕತೆಯೂ ಇದೆ. ನಾವು ಸಾಮಾನ್ಯವಾಗಿ ಜೀವಪರವಾದದ್ದನ್ನು ಬೌದ್ಧಿಕತೆಯ ವ್ಯಾಪ್ತಿಯಲ್ಲಿ ತಂದು, ಜೀವ ವಿರೋಧಿಯಾದುದನ್ನು ಬೌದ್ಧಿಕತೆಯ ಚೌಕಟ್ಟಿನಿಂದ ಹೊರಗಿಡುತ್ತೇವೆ. ಇದು ಭಾಗಶಃ ಸರಿಯಾಗಿದೆ.
ಕಳೆದ ವರ್ಷ ಯೋಚಿಸುತ್ತಿದ್ದ ನನ್ನ ಯೋಚನೆಯ ಕ್ರಮ ಇಂದು ಬದಲಾಗಿದೆ. ಮುಂದೆಯೂ ಬದಲಾಗುತ್ತಲೇ ಇರುತ್ತದೆ. ಕಾಲ ಕಾಲಕ್ಕೆ ಇದನ್ನು ಪ್ರಭಾವಿಸುವ ಸಂಗತಿಗಳು ನೂರಾರು. ಈಗ ಅಂಬೇಡ್ಕರ್ ಅವರ ಬರಹಗಳಿಂದ ಕಲಿಯುತ್ತಿರುವೆ, ಹರಾರಿಯಿಂದಲೂ, ಚಾಮಸ್ಕಿ ಅವರಿಂದಲೂ, ಕಲಿಯುತ್ತಿರುವೆ. ಹಿಂದೆ ದೇವಿಪ್ರಸಾದ್ ಚಟ್ಟೋಪಾಧ್ಯಾಯರಿಂದಲೂ, ಡಿ.ಡಿ.ಕೋಸಾಂಬಿ ಅವರಿಂದಲೂ, ಇರ್ಫಾನ್ ಹಬೀಬ್‌ರಿಂದಲೂ, ಶಂಬಾ ಜೋಶಿ, ಸಿಮೊನ್ ದ ಬುವಾ, ಕಾರ್ಲ್ ಮಾರ್ಕ್ಸ್, ಏಂಗೇಲ್ಸ್, ಪ್ರಾಯ್ಡ್ ಹೀಗೆ ಅನೇಕರಿಂದಲೂ ಕಲಿತಿರುವೆ. ಮುಂದುವರಿದು ಜನಪದ ಹಾಡುಗಾರರಿಂದ ಕಲಿಯುತ್ತಿರುವೆ,
ಯಾವುದೋ ಒಂದು ಕಿರುಚಿತ್ರ, ಯಾವುದೋ ದೇಶದ ಸಿನೆಮಾ, ಯೂಟ್ಯೂಬ್‌ನ ಯಾವುದೋ ಭಾಷಣದ ತುಣುಕು, ಅಂತರ್ಜಾಲದಲ್ಲಿ ಆಕಸ್ಮಿಕವಾಗಿ ದಕ್ಕುವ ಯಾವುದೋ ಒಂದು ಪೇಂಟಿಂಗ್, ಯಾರೋ ಒಬ್ಬ ಕಲಾವಿದೆಯ ಮಾತು ಹೀಗೆ ಅಸಂಖ್ಯಾತ ಅರಿವಿನ ಮೂಲಗಳು ನನ್ನನ್ನೂ, ಜನರನ್ನು ಮತ್ತು ಒಂದು ನಾಡಿನ ಬೌದ್ಧಿಕತೆಯನ್ನು ರೂಪಿಸುತ್ತಿರುತ್ತವೆ. ಕನ್ನಡ ಬಲ್ಲವರಿಗೆ ಬಾದಾಮಿಯ ಕಪ್ಪೆಅರಭಟ್ಟನ ಶಾಸನದಿಂದ, ಕವಿರಾಜ ಮಾರ್ಗಕಾರನಿಂದ ಮೊದಲುಗೊಂಡು ಶಿವಕೋಟ್ಯಾಚಾರ್ಯ, ಪಂಪ, ರನ್ನ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಸೂಳೆ ಸಂಕವ್ವ ಮೊದಲುಗೊಂಡ ವಚನಕಾರರು, ದಾಸರು, ತತ್ವಪದಕಾರರು, ಭಜನೆಗಳು, ಜನಪದ ಕವಿ ರಚನೆಗಳಿಂದಲೂ ಕಲಿಯುವಿಕೆ ಸಾಧ್ಯವಾಗುತ್ತಿರುತ್ತದೆ.
ಒಂದೊಂದು ಕಾಲಕ್ಕೆ ಒಂದೊಂದು ಪ್ರಭಾವಿ ವಿದ್ಯಮಾನಗಳು ಆಯಾ ಕಾಲದ ಜನರ ಬೌದ್ಧಿಕತೆಯನ್ನು ರೂಪಿಸಲು ಪ್ರೇರಣೆ ಆಗಿವೆ. ಒಂದು ಕಾಲಕ್ಕೆ ವಚನಕಾರರು, ಒಂದು ಕಾಲಕ್ಕೆ ತತ್ವಪದಕಾರರು, ಆಧುನಿಕ ಕಾಲದಲ್ಲಿ ಕುವೆಂಪು, ತೇಜಸ್ವಿ, ಲಂಕೇಶ್, ಅನಂತಮೂರ್ತಿ, ದೇವನೂರು, ಸಿದ್ದಲಿಂಗಯ್ಯ, ನಂಜುಂಡಸ್ವಾಮಿ, ಬರಗೂರು ರಾಮಚಂದ್ರಪ್ಪ, ಶಂಕರಬಟ್, ಕೆ.ವಿ. ನಾರಾಯಣ, ರಹಮತ್ ತರೀಕೆರೆ, ನಟರಾಜ ಬೂದಾಳ, ನಟರಾಜ ಹುಳಿಯಾರ್, ಎಚ್.ಎಸ್. ಶ್ರೀಮತಿ, ಕೆ. ನೀಲಾ, ಮೀನಾಕ್ಷಿ ಬಾಳಿ, ಸಾರಾ ಅಬೂಬಕರ್, ನಾ. ಡಿಸೋಜ, ದಿನೇಶ ಅಮಿನ್‌ಮಟ್ಟು, ನಾಗೇಶ ಹೆಗಡೆ, ಪುರುಷೋತ್ತಮ ಬಿಳಿಮಲೆ, ಟಿ.ಆರ್. ಚಂದ್ರಶೇಖರ್, ಬಿ. ಶ್ರೀಪಾದ, ಚಂದ್ರಪೂಜಾರಿ, ಶಿವಸುಂದರ್ ಮೊದಲುಗೊಂಡು ಈಚೆಗೆ ಕನ್ನಡದ ಅರಿವನ್ನು ಭಿನ್ನವಾಗಿ ವಿಸ್ತರಿಸುತ್ತಿರುವ ವೆಂಕಟೇಶಯ್ಯ ನೆಲ್ಲುಕುಂಟೆಯವರ ತನಕ (ತಕ್ಷಣಕ್ಕೆ ನೆನಪಾದವರ ಅಪೂರ್ಣ ಪಟ್ಟಿ) ಹೀಗೆ ಹಲವರ ಪ್ರಭಾವಗಳು ಬಹುರೂಪಿಯಾಗಿವೆ. ಕಾಲ ಕಾಲಕ್ಕೆ ಜವಾಬ್ದಾರಿಯುತ ಮಾಧ್ಯಮಗಳೂ ಜನರ ಬೌದ್ಧಿಕತೆಯನ್ನು ರೂಪಿಸಿವೆ. ಕರ್ನಾಟಕ ಸಂದರ್ಭದಲ್ಲಿ ‘ಲಂಕೇಶ್ ಪತ್ರಿಕೆ’ ಒಂದು ವಿಶ್ವವಿದ್ಯಾಲಯದಂತೆ ಜನರ ತಿಳಿವನ್ನು ತಿದ್ದಿವೆ. ‘ಪ್ರಜಾವಾಣಿ’ಯಂತಹ ಪತ್ರಿಕೆಯೂ ಕಾಲ ಕಾಲಕ್ಕೆ ಜನರ ತಿಳಿವನ್ನು ತಿದ್ದುತ್ತಾ ಬಂದಿವೆ. ಈ ಕಾಲದಲ್ಲಿTheWire, Scroll.in, AltNews, DH, The Hindu ಕನ್ನಡದಲ್ಲಿ TheFile, Eedina, ‘ನ್ಯಾಯಪಥ’, ‘ವಾರ್ತಾಭಾರತಿ’ ಇಂತಹ ಕೆಲವಾದರೂ ಕರಪ್ಟ್ ಆಗದ ಮಾಧ್ಯಮಗಳು ದೇಶದ, ನಾಡಿನ ಜನರ ಬೌದ್ಧಿಕತೆಯನ್ನು ರೂಪಿಸುತ್ತಿವೆ. ಕಾಲ ಕಾಲಕ್ಕೆ ತಲೆ ಎತ್ತುತ್ತಿರುವ ಹಲವು ಬಗೆಯ ಎಡಪಂಥೀಯ ಹೋರಾಟಗಳು, ದಲಿತ, ಮಹಿಳಾ, ಯುವ, ಅಸಂಘಟಿತ ವಲಯಗಳು ಮೊದಲಾದ ಸಂಘಟನೆಗಳ ಚಳವಳಿಗಳೂ ಈ ನಾಡಿನ ಬೌದ್ಧಿಕತೆಯನ್ನು ರೂಪಿಸುತ್ತಿವೆ.
ನಾಡಿನ ಬೌದ್ಧಿಕತೆಯನ್ನು ರೂಪಿಸುವವರು ಯಾವುದೋ ಒಂದು ಸಂಸ್ಥೆಯಲ್ಲಿ(Institution) ಒಟ್ಟಾಗಿ ಕೆಲಸ ಮಾಡುತ್ತಿರುವವರಲ್ಲ ಎಲ್ಲಾ ಸಂಸ್ಥೆಗಳಲ್ಲಿಯೂ, ಸಂಸ್ಥೆಗಳಾಚೆಯೂ ಅಲ್ಲೊಬ್ಬರು ಇಲ್ಲೊಬ್ಬರು ಪ್ರಜ್ಞಾವಂತಿಕೆಯಿಂದ, ಬದ್ಧತೆಯಿಂದ ತಿಳಿವನ್ನು ತಿದ್ದುವವರು ಇರಬಹುದಷ್ಟೆ. ಹಾಗೆ ನೋಡಿದರೆ ಇಂದು ಈ ಹೊತ್ತು ಬದ್ಧತೆಯ ಪ್ರಜ್ಞಾವಂತರು ಬೆರಳೆಣಿಕೆಯಲ್ಲಿ ವಿಶ್ವವಿದ್ಯಾನಿಲಯಗಳ/ಪದವಿ ಕಾಲೇಜುಗಳಲ್ಲಿದ್ದರೆ, ಬಹುಪಾಲು ಹೊರಗಿದ್ದಾರೆ. ಯಾರೋ ಬೆರಳೆಣಿಕೆಯ ಶಿಕ್ಷಕ ಶಿಕ್ಷಕಿಯರು, ಪ್ರಾಧ್ಯಾಪಕ, ಪ್ರಾಧ್ಯಾಪಕಿಯರು, ಪತ್ರಕರ್ತ/ಪತ್ರಕರ್ತೆಯರು ನಾಡಿನ ಬೌದ್ಧಿಕತೆಯನ್ನು ಕಟ್ಟಲು ಯಾವ ನಿರೀಕ್ಷೆಗಳೂ ಇಲ್ಲದಂತೆ ಶ್ರಮಿಸುತ್ತಿದ್ದಾರೆ. ಶಿವಸುಂದರ್ ಅಂತಹವರು ನಿರಂತರವಾಗಿ ಜನಸಾಮಾನ್ಯರ ಜೀವಪರ ಬೌದ್ಧಿಕತೆಯನ್ನು ರೂಪಿಸಲು ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿದಾಗ ಬೌದ್ಧಿಕತೆಯನ್ನು ಈ ಹೊತ್ತು ಸಂವಿಧಾನದ ಆಶಯಗಳು ಹೆಚ್ಚು ಪ್ರಭಾವಿಸುತ್ತಿವೆ. ಹಾಗಾಗಿ ಈ ನಾಡಿನ ಜನರನ್ನು ಜೀವಪರವಾದ ಬೌದ್ಧಿಕತೆ ಕಡೆ ಕಟ್ಟುತ್ತಿರುವುದು ಯಾರೋ ಒಬ್ಬರಲ್ಲ, ಯಾವುದೋ ಒಂದು ಸಂಸ್ಥೆಯಲ್ಲ. ಬದಲಾಗಿ ಅಸಂಖ್ಯಾತ ಬೇರೆ ಬೇರೆ ಮೂಲಗಳ ಪ್ರಭಾವಗಳು. ಬಿಡಿಬಿಡಿಯಾದ ಹಲವು ನೆಲೆಗಳ ಪ್ರಯತ್ನಗಳು.
ಆದಾಗ್ಯೂ ಕನ್ನಡದ ವಿದ್ವತ್ತು, ತಿಳಿವು ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ಇರುವಲ್ಲಿಯೇ ಗಿರಕಿ ಹೊಡೆಯುತ್ತಿರುವಂತೆ ಕಾಣುತ್ತಿದೆ. ಒಂದರ್ಥದಲ್ಲಿ ಕನ್ನಡದ ವಿದ್ವತ್ತು ಈಗ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಉಸಿರುಕಟ್ಟಿದಂತಿದೆ. ಕನ್ನಡ ವಿವೇಕವನ್ನು ವಿಸ್ತರಿಸುವ ಜಗತ್ತಿನ ಸಮಕಾಲೀನ ಅರಿವಿನ ಜತೆ ಒಂದು ಮುಖಾಮುಖಿಯೇ ಸಾಧ್ಯವಾಗುತ್ತಿಲ್ಲ. ಕನ್ನಡ ವಿದ್ವತ್ತಿನ ದೊಡ್ಡ ಜಿಗಿತ ಸಾಧ್ಯವಾಗುತ್ತಿಲ್ಲ. ಕನ್ನಡ ನೆಲದ ಕೃತಿಗಳಿಗಿಂತ ಜಗತ್ತಿನ/ಭಾರತೀಯ ಬೇರೆ ಬೇರೇ ಭಾಷೆಗಳ ಭಾಷಾಂತರದ ಕೃತಿಗಳು ಈ ಕಾಲದಲ್ಲಿ ಹೆಚ್ಚುತ್ತಿರುವುದು ಸಾಂಕೇತಿಕವಾಗಿದೆ. ಕೆಲವು ಹಿರಿಯ ಚಿಂತಕರು ಆತ್ಮಕಥೆಗಳನ್ನು ಬರೆದು, ಇದು ನನ್ನ ಕೊನೆಯ ಅಧ್ಯಾಯ ಎಂದಂತಿದೆ. ಮತ್ತೆ ಕೆಲವರು ಆತ್ಮಕಥನಗಳ ರಚನೆಯಲ್ಲಿ ತೊಡಗಿದ್ದಾರೆ. ಒಂದು ಕಾಲಘಟ್ಟ ಆಕಸ್ಮಿಕವಾಗಿ ಮುನ್ನೆಲೆಗೆ ತಂದ ‘ವ್ಯಕ್ತಿ’ ನೆಲೆಯ ಹೋರಾಟಗಾರರನ್ನು ಮಹಾಸಂಗ್ರಾಮಿ ಎಂದು ಬಿರುದು ನೀಡಿ ಶರಾ ಬರೆಯುತ್ತಿದ್ದಾರೆ. ಒಂದು ಜನಾಂಗವನ್ನು ಎಚ್ಚರಿಸಿ ಕರ್ನಾಟಕದ ಅರಿವನ್ನು ಪಲ್ಲಟಗೊಳಿಸಿದ ಸಾಮುದಾಯಿಕ ನೆಲೆಯ ಅಸಂಖ್ಯ ದಲಿತ ಹೋರಾಟಗಾರರು ‘ಮಹಾಸಂಗ್ರಾಮಿ’ಯ ವ್ಯಾಪ್ತಿ ಪ್ರದೇಶದ ಹೊರಗಿದ್ದಂತೆ ಕಾಣುತ್ತಿದೆ. ಈಚಿನ ಕೆಲವು ಸೆಮಿನಾರ್‌ಗಳನ್ನು ನಾನು ಗಮನಿಸಿದಂತೆ ಒಂದು ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡದೆ, ಆಯಾ ವಿಷಯದ ಬಗ್ಗೆ ಸೂಕ್ಷ್ಮವಾದ ಚಿಂತನೆಯನ್ನೂ ಮಾಡದೆ ಬೀಸುಹೇಳಿಕೆ ಕೊಡುವವರ ಸಂಖ್ಯೆಯೇ ಹೆಚ್ಚಾಗಿದೆ.
ಇನ್ನು ಬಹುಪಾಲು ಹೊಸತಲೆಮಾರು ‘ಬರೆಯುವುದು’ ಮಾತ್ರ ನಮ್ಮ ಕರ್ತವ್ಯ ನಾನು ಬರೆದದ್ದನ್ನು ಇತರರು ಓದುವುದು ಅವರ ಹೊಣೆಗಾರಿಕೆ ಎಂದು ಭಾವಿಸಿದಂತಿದೆ. ಹಾಗಾಗಿ ಬರೆಯುವವರು ಸಾಹಿತ್ಯ ಪರಂಪರೆಯ ಮಹತ್ವದ ಕೃತಿ ಲೇಖಕ ಲೇಖಕಿಯರನ್ನು ಓದದೆ, ಕೊನೆಗೆ ತನ್ನ ಜತೆಯಲ್ಲೇ ಬರೆಯುವ ಸಹ ಬರಹಗಾರ/ಗಾರ್ತಿಯರನ್ನೂ ಓದದೆ, ಚಳವಳಿಗಳ ಸಂಗಾತಿಗಳ ಸಖ್ಯಕ್ಕೂ ಬರದೆ ಬರಡಾಗಿದ್ದಾರೆ. ಪ್ರಶಸ್ತಿಗಳ ಹೊಗಳಿಕೆಯ ಹಿಂದೆ ಬಿದ್ದು ಒಣ ಮರದಂತಾಗಿದ್ದಾರೆ. ಕೆಲ ಹಿರಿಯರೂ ತಮ್ಮನ್ನು ಓಲೈಸುವ ಗುಂಪುಗಳ ಅಧಿನಾಯಕ-ನಾಯಕಿಯರಾಗಿ ರೂಪಾಂತರಗೊಂಡಿದ್ದಾರೆ.
ಬಹುಶಃ ಕನ್ನಡದಲ್ಲಿ ಈಗ ಬೌದ್ಧಿಕತೆ ಬಗ್ಗೆ ಚರ್ಚಿಸುವು ದಿದ್ದರೆ, ಬೂಸಾ ಬೌದ್ಧಿಕತೆ ಹೇಗೆ ಹೆಚ್ಚಾಗುತ್ತಿದೆ ಎಂದು ಚರ್ಚಿಸಬೇಕಿದೆ, ಕನ್ನಡದಲ್ಲಿ ಪಾತಾಳಕ್ಕೆ ಕುಸಿಯುತ್ತಿರುವ ಬೌದ್ಧಿಕತೆಯನ್ನು ಮೇಲೆತ್ತುವ ದಾರಿಗಳಾವುವು ಎಂದು ಗಂಭೀರವಾಗಿ ಹುಡುಕಬೇಕಿದೆ. ವಿಮರ್ಶೆಯೇ ಇಲ್ಲದ ನಿರುಪದ್ರವಿ ಬರಹಗಳು ಕನ್ನಡದ ವಿಮರ್ಶೆಯ ವಿವೇಕವನ್ನು ಹೇಗೆ ಕುಬ್ಜಗೊಳಿಸುತ್ತಿವೆ ಎನ್ನುವುದರ ಬಗ್ಗೆ ಗಂಭೀರ ಚರ್ಚೆ ವಾಗ್ವಾದಗಳು ನಡೆಯಬೇಕಾಗಿದೆ. ಬರಹಕ್ಕೆ ಪ್ರವೇಶ ಪಡೆಯುವ ಹೊಸಬರಿಗೆ ನಿರಂತರವಾಗಿ ವೈಚಾರಿಕ ಅರಿವನ್ನು/ ಸಾಂವಿಧಾನಿಕ ತಿಳಿವನ್ನು ಕಸಿ ಮಾಡುವ ಕಮ್ಮಟಗಳನ್ನು ನಡೆಸಬೇಕಾಗಿದೆ.