ಜಾತಿ ಜನಗಣತಿ ಅವೈಜ್ಞಾನಿಕವೆಂದೇಕೆ ಬೀಳುಗಳೆವರು?

ರಾಷ್ಟ್ರೀಯ ಜನಗಣತಿ ಆಯೋಗ ಯಾವ ಮಾದರಿಯಲ್ಲಿ ಮಾಡುತ್ತದೆಯೋ ಅದೇ ಮಾದರಿಯಲ್ಲಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟೀಕರಣ ನೀಡಿದೆ. ಹಾಗಾದರೆ ವಿರೋಧಿಸುವವರು ಆ ಮಾದರಿಯನ್ನಾದರೂ ತಿಳಿದುಕೊಳ್ಳಬೇಕಲ್ಲವೇ? ಅದೂ ಅಲ್ಲದೆ, ಅವರ ಜಾತಿ ಸಂಖ್ಯೆ ಕಡಿಮೆಯಾಗಿದೆ, ಹಾಗೆ ಕಡಿಮೆಯಾಗಲೂ ಕಾರಣವೇನಿರಬಹುದು ಎಂದು ತಿಳಿಯಲು ಪ್ರಯತ್ನ ಮಾಡದೆ, ಈ ಸಮೀಕ್ಷೆ ವೈಜ್ಞಾನಿಕವಲ್ಲ ಎಂದು ಯಾವುದೇ ಸರಿಯಾದ ಪುರಾವೆ ಇಲ್ಲದೆ ಹೇಳುವುದು ಅವರ ಘನತೆಗೆ ತಕ್ಕದ್ದಲ್ಲ!;

Update: 2025-04-30 12:03 IST
ಜಾತಿ ಜನಗಣತಿ ಅವೈಜ್ಞಾನಿಕವೆಂದೇಕೆ ಬೀಳುಗಳೆವರು?

ಸಾಂದರ್ಭಿಕ ಚಿತ್ರ

  • whatsapp icon

ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಜಾತಿ ಜನಗಣತಿ ಅಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದು 10 ವರ್ಷಗಳು ತುಂಬುತ್ತಿವೆ. ಈ ಸಮೀಕ್ಷೆಯನ್ನು ಕರ್ನಾಟಕ ಸರಕಾರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸಿದೆ. ಆಯೋಗವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ, 1995 ಕಲಂ 9(2) ಅಡಿಯಲ್ಲಿ ನಡೆಸಿದೆ. ಬಿಜೆಪಿಯವರು ಆಪಾದಿಸುವಂತೆ, ಇದು ಜನಗಣತಿ ಅಲ್ಲ. ಜನಗಣತಿಯನ್ನು ರಾಷ್ಟ್ರವು ಪ್ರತೀ 10 ವರ್ಷಕ್ಕೊಮ್ಮೆ 1948ರ ಜನಗಣತಿ ಕಾಯ್ದೆ ಪ್ರಕಾರ ನಡೆಸುವ ಅಧಿಕಾರ ಹೊಂದಿದೆ. ಆದರೆ, ಜಾತಿಯನ್ನು ಹೊರತುಪಡಿಸಿ, ಜನಗಣತಿಯನ್ನಷ್ಟೇ ಅದು ಮಾಡುತ್ತಾ ಬರುತ್ತಿದೆ. ಜನಗಣತಿ ನಡೆಸುವ ಅಧಿಕಾರ ಖಂಡಿತ ರಾಜ್ಯಗಳಿ ಗಾಗಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗಾಗಲಿ ಇಲ್ಲ. ಸಮೀಕ್ಷೆಗೂ ಜನಗಣತಿಗೂ ಇರುವ ವ್ಯತ್ಯಾಸವನ್ನು ಅರಿಯದೆ ಆರೋಪಿಸುವವರು ಅರ್ಥಮಾಡಿಕೊಳ್ಳಬೇಕು. ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎಂಬ ಜಾಯಮಾನದ ಬಿಜೆಪಿ ತಲೆಯಾಳುಗಳು ತಲೆಬುಡ ಯಾವುದೊಂದನ್ನೂ ತಿಳಿಯದೆ ಇಂಥ ಹಸಿಹಸಿ ಸುಳ್ಳುಗಳನ್ನು ಒದರುತ್ತಲೇ ಬರುತ್ತಿದ್ದಾರೆ.

ಈ ಜಾತಿ- ಜನಗಣತಿ ಕಾರ್ಯ ಮಾಡಿದ್ದು ಎಚ್. ಕಾಂತರಾಜು ಆಯೋಗ. ಆಯೋಗ ಜಾತಿ-ಜನಗಣತಿಯ ದತ್ತಾಂಶಗಳನ್ನು ಸರಕಾರಕ್ಕೆ ಸಲ್ಲಿಸುವಷ್ಟರಲ್ಲಿ, 2018ರ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಚುನಾವಣಾ ಆಯೋಗ ಚುನಾವಣಾ ದಿನಾಂಕಗಳನ್ನು ಘೋಷಿಸಿತು. ಅಲ್ಲಿಗೆ ಸರಕಾರಕ್ಕೆ ದತ್ತಾಂಶಗಳನ್ನು ಸಲ್ಲಿಸುವ ಕಾರ್ಯ, ನೀತಿ ಸಂಹಿತೆಯಿಂದಾಗಿ ನನೆಗುದಿಗೆ ಬಿದ್ದಿತು. ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ವಂತ ಬಲದಿಂದ ಅಧಿಕಾರ ಗಳಿಸುವಷ್ಟು ಸ್ಥಾನಗಳು ಬರಲಿಲ್ಲವಾದ್ದರಿಂದ, ಕಾಂಗ್ರೆಸ್ ಮತ್ತು ಜನತಾದಳ ಒಟ್ಟುಗೂಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದರೊಡನೆ ಸರಕಾರ ರಚನೆಯಾಯಿತು. ಸುಮಾರು 14 ತಿಂಗಳ ಕಾಲ ಕುಮಾರಸ್ವಾಮಿಯವರೇ ಅಧಿಕಾರದಲ್ಲಿ ಮುಂದುವರಿದರು. ಆ ಸಮಯದಲ್ಲಿ ಜಾತಿ- ಜನಗಣತಿಯ ದತ್ತಾಂಶಗಳನ್ನು ಸರಕಾರಕ್ಕೆ ಸಲ್ಲಿಸಲು ಆಯೋಗ ವ್ಯರ್ಥ ಪ್ರಯತ್ನ ನಡೆಸಿತು. ಅದೇ ಸಮಯಕ್ಕೆ ಯಡಿಯೂರಪ್ಪನವರ ‘ಮಾಯಾಜಾಲ’ದಿಂದ ಸಮ್ಮಿಶ್ರ ಸರಕಾರದ ಅಧಿಪತಿ ಕುಮಾರಸ್ವಾಮಿಯವರು ಪದಚ್ಯುತಗೊಂಡರು. ತತ್ಫಲವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಗಾದಿಗೆ ಏರುವಲ್ಲಿ ಸಫಲರಾದರು. ಏರಿದ ಮರುಗಳಿಗೆಯಲ್ಲೇ ಅವರು ಸಮ್ಮಿಶ್ರ ಅಥವಾ ಕಾಂಗ್ರೆಸ್ ಸರಕಾರ ನೇಮಕ ಮಾಡಿದ್ದ ನಿಗಮ, ಮಂಡಳಿ ಮತ್ತು ಆಯೋಗಗಳ ಪದಾಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಧಿಕಾರದಿಂದ ಕಿತ್ತೊಗೆದರು. ಹಿಂದುಳಿದ ವರ್ಗಗಳ ಆಯೋಗವು ಅದಕ್ಕೆ ಹೊರತಾಗಲಿಲ್ಲ.

ಕೆಲ ಕಾಲದ ನಂತರ, ಜಯಪ್ರಕಾಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ಮುಖ್ಯಮಂತ್ರಿ ರಚಿಸಿದರು. ಹಾಗೂ ಹೀಗೂ ಜಯಪ್ರಕಾಶ್ ಹೆಗ್ಡೆಯವರ ಆಯೋಗ ಮೂರು ವರ್ಷ ತುಂಬಿಸಿತು. ಅಷ್ಟರಲ್ಲಿ 2023ರ ಚುನಾವಣೆ ನಡೆದು ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿಗಳ ಕೃಪಾಕಟಾಕ್ಷದಿಂದ ಹೆಗ್ಡೆ ಆಯೋಗ ಹಿಂದುಳಿದ ವರ್ಗಗಳ ಹೊಸ ಪಟ್ಟಿಗಾಗಿ ಜಾತಿಗಳ ಮರುವರ್ಗೀಕರಣ ಮಾಡಿ, ಆ ಪಟ್ಟಿಯ ಜೊತೆಯಲ್ಲಿ ಕಾಂತರಾಜು ಆಯೋಗ ನಡೆಸಿದ್ದ ಸಮೀಕ್ಷೆಯ ದತ್ತಾಂಶ ಗಳನ್ನು ಒಟ್ಟು ಮಾಡಿ 2024ರ ಫೆಬ್ರವರಿ ತಿಂಗಳಿನಲ್ಲಿ ಸರಕಾರಕ್ಕೆ ಸಲ್ಲಿಸಿತು.

ಸರಕಾರ, ದತ್ತಾಂಶ ಮತ್ತು ಮರುವರ್ಗೀಕರಣ ಮಾಡಿರುವ ಹಿಂದುಳಿದ ವರ್ಗಗಳ ಪಟ್ಟಿಯ ಬಗ್ಗೆ ಒಂದು ವರ್ಷಗಳ ಕಾಲ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದೇ ತಿಂಗಳು 11ನೇ ತಾರೀಕು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮರುವರ್ಗೀಕರಣ ಮಾಡಿರುವ ಹಿಂದುಳಿದವರ ಪಟ್ಟಿಯ (ವರದಿ)ಯನ್ನಷ್ಟೇ ಮಂಡಿಸಿದೆ. ಏಕೋ ಏನೋ ಸಮೀಕ್ಷೆಯ ದತ್ತಾಂಶಗಳನ್ನು ಮಾಧ್ಯಮಗಳ ವರದಿಗಳಲ್ಲಿ ಗಮನಿಸಿದರೆ, ಮಂಡಿಸಿರುವ ಹಾಗೆ ಕಂಡು ಬರುತ್ತಿಲ್ಲ. ದಿನಾಂಕ 11ರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಎಲ್ಲ ಮಂತ್ರಿ ಮಹೋದಯರಿಗೆ ಮರುವರ್ಗೀಕರಣದ ಪಟ್ಟಿಯನ್ನು ಮಾತ್ರ ಕೊಟ್ಟಿರುವ ಹಾಗೆ ಮಾಧ್ಯಮಗಳು ವರದಿ ಮಾಡಿವೆ. ಮರುದಿನದಿಂದಲೇ ಮರುವರ್ಗೀಕರಣ ಮಾಡಿರುವ ಜಾತಿಗಳು ಮತ್ತು ಅವುಗಳ ಜನಸಂಖ್ಯೆಯ ವಿವರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹೀಗೆ ಹರಿದಾಡುತ್ತಿರುವ ಜಾತಿಗಳು ಮತ್ತು ಅವುಗಳ ಜನಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು, ಕೆಲವು ಜಾತಿಗಳ ಮುಖಂಡರು ತಮ್ಮ ಮನೋ ಇಂಗಿತವನ್ನು ಮಾಧ್ಯಮಗಳ ಮುಂದೆ ಹರಿ ಬಿಡುತ್ತಿದ್ದಾರೆ. ಹೀಗೆಯೇ, ಜಾತಿ ಜನಗಣತಿಯ ಸಮೀಕ್ಷೆಯ ಸಂದರ್ಭದಲ್ಲೂ, ದೃಶ್ಯ ಮಾಧ್ಯಮಗಳು ಅಂಕಿ ಅಂಶಗಳು ‘ಲೀಕಾಗಿವೆ’ ಎಂದು ಬೊಬ್ಬೆ ಹೊಡೆದದ್ದುಂಟು. ಅವುಗಳನ್ನು ನಂಬಿಕೊಂಡು, ಇದು ವೈಜ್ಞಾನಿಕ ವರದಿಯಲ್ಲ ಎಂದು ಕೆಲವರು ಆರೋಪಿಸಿದ್ದೂ ಉಂಟು. ಅವರಲ್ಲಿ ಲಿಂಗಾಯತ ಮತ್ತು ಒಕ್ಕಲಿಗರೇ ಪ್ರಮುಖರು ಎಂಬುದನ್ನು ಮತ್ತೆ ಇಲ್ಲಿ ಹೇಳಬೇಕಾಗಿಲ್ಲ. ಆಯೋಗ ವೈಜ್ಞಾನಿಕವಾಗಿ ಮಾಡಿರುವುದಾಗಿ ಹೇಳಿಕೊಂಡಿದೆ. ಅದಕ್ಕೆ ಕಾರಣ ಭಾರತ ಸರಕಾರ ಪ್ರತೀ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡುವ ರೀತಿಯಲ್ಲೇ ಕ್ರಮ ಅನುಸರಿಸಲಾಗಿದೆ ಎಂದು. ವೈಜ್ಞಾನಿಕವಲ್ಲ ಎಂದು ಹೇಳುವ ಜನ ಆ ಪದದ ವಿವರಣೆ ಮತ್ತು ದಾಖಲೆಗಳನ್ನು ಕೊಡಬೇಕಾಗಿದೆ. ಆದರೆ ಇದುವರೆಗೂ ಹಾಗೆ ಮಾಡಿರುವುದಿಲ್ಲ.

ಮತ್ತೆ 17ರಂದು ನಡೆದ ವಿಶೇಷ ಸಚಿವ ಸಂಪುಟದಲ್ಲಿ, ವಿಷಯ ಚರ್ಚಿತವಾಗಿ, ಯಾವುದೇ ತೀರ್ಮಾನವಾಗದೆ ಅನಿರ್ದಿಷ್ಟ ಕಾಲ ಮುಂದೆ ಹೋಗಿರುವುದನ್ನು ಮಾಧ್ಯಮದ ಮೂಲಕ ಸಾರ್ವಜನಿಕರು ತಿಳಿದುಕೊಂಡಿದ್ದಾರೆ. ಕೆಲವು ಮಾಧ್ಯಮಗಳ ಪ್ರಕಾರ, ಮುಖ್ಯಮಂತ್ರಿಗಳು ವರದಿಯನ್ನು ವಿರೋಧಿಸಿದ ಸಚಿವರುಗಳಿಗೆ ತಮ್ಮ ತಮ್ಮ ವಿರೋಧವನ್ನು ಬರಹದ ರೂಪದಲ್ಲಿ ಕೊಡಲು ಹೇಳಿದ್ದಾರೆ. ಅಂದಿನ ಸಚಿವ ಸಂಪುಟದ ಸಭೆ ಮುಂದೆ ಹೋಗಿದೆ.

ಜಯಪ್ರಕಾಶ್ ಹೆಗ್ಡೆ ಆಯೋಗ ಹಿಂದುಳಿದ ವರ್ಗಗಳ ಮರುವರ್ಗೀಕರಣ ಮಾಡಿರುವ ಯಾದಿಯನ್ನಷ್ಟೇ ಮಂಡಿಸಿರುವ ವರದಿಯಲ್ಲಿ ಲೇಖಿಸಿರುವ ಜಾತಿಗಳ ಮಾಹಿತಿಗಳನ್ನಷ್ಟೇ ಮುಂದಿಟ್ಟುಕೊಂಡು, ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಎಂದು ಹೇಳುವುದರೊಡನೆ ಕೆಲವರು ದತ್ತಾಂಶಕ್ಕೆ ಗರ ಬಡಿದಿದೆ ಎಂದು ಸುದ್ದಿ ಮಾಡುತ್ತಿರುವುದು ಕಂಪನವನ್ನೇ ಉಂಟು ಮಾಡಿದೆ.

ರಾಷ್ಟ್ರೀಯ ಜನಗಣತಿ ಆಯೋಗ ಯಾವ ಮಾದರಿಯಲ್ಲಿ ಮಾಡುತ್ತದೆಯೋ ಅದೇ ಮಾದರಿಯಲ್ಲಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟೀಕರಣ ನೀಡಿದೆ. ಹಾಗಾದರೆ ವಿರೋಧಿಸುವವರು ಆ ಮಾದರಿಯನ್ನಾದರೂ ತಿಳಿದುಕೊಳ್ಳಬೇಕಲ್ಲವೇ? ಅದೂ ಅಲ್ಲದೆ, ಅವರ ಜಾತಿ ಸಂಖ್ಯೆ ಕಡಿಮೆಯಾಗಿದೆ, ಹಾಗೆ ಕಡಿಮೆಯಾಗಲೂ ಕಾರಣವೇನಿರಬಹುದು ಎಂದು ತಿಳಿಯಲು ಪ್ರಯತ್ನ ಮಾಡದೆ, ಈ ಸಮೀಕ್ಷೆ ವೈಜ್ಞಾನಿಕವಲ್ಲ ಎಂದು ಯಾವುದೇ ಸರಿಯಾದ ಪುರಾವೆ ಇಲ್ಲದೆ ಹೇಳುವುದು ಅವರ ಘನತೆಗೆ ತಕ್ಕದ್ದಲ್ಲ! ಆಯೋಗ ಹೇಳಿರುವ ರೀತಿಯಲ್ಲಿ ಅವರು ಅನುಸರಿಸುವ ಮಾದರಿ ಎಂಥದು ಎಂಬುದರ ಬಗ್ಗೆ ಪರಿಶೀಲಿಸಿದರೆ ಯಾವುದು ಸತ್ಯ ಯಾವುದು ಮಿಥ್ಯೆ ಎಂಬುದನ್ನು ತಿಳಿಯಲು ಸಾಧ್ಯವಿದೆ.

ಜನಗಣತಿ ಕಾರ್ಯವಿಧಾನ

ಆಯೋಗವು ಮೊದಲಿಗೆ ‘ಬ್ಲಾಕ್’ ರಚನೆಗಾಗಿ 2011ರಲ್ಲಿ ರಾಷ್ಟ್ರೀಯ ಜನಗಣತಿಗಾಗಿ ತಯಾರಿಸಲಾದ ಬ್ಲಾಕ್ ಲೇಔಟ್ ನಕ್ಷೆಯನ್ನು ಉಪಯೋಗಿಸಿಕೊಂಡಿದೆ ಮತ್ತು ಅದನ್ನು ಪರಿಷ್ಕೃತಗೊಳಿಸಲಾಗಿದೆ. ಈ ಪರಿಷ್ಕೃತ ಬ್ಲಾಕ್ ಲೇಔಟ್ ನಕ್ಷೆಯನ್ನು ಪ್ರತೀ ಗಣತಿದಾರರಿಗೆ ಸಂಬಂಧಿಸಿದ ಚಾರ್ಜ್ ಅಧಿಕಾರಿಗಳು ನೀಡುತ್ತಾರೆ. ಇದು ಗಣತಿದಾರರಿಗೆ ವಹಿಸಲ್ಪಟ್ಟಿರುವ ಪ್ರದೇಶದ ಬಗ್ಗೆ ಮಾಹಿತಿ ನೀಡುವುದಲ್ಲದೆ ಗಣತಿಯನ್ನು ನಿರ್ವಹಿಸುವ ಮೊದಲು ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಮಾಡುವಲ್ಲಿ ಸಹಕಾರಿಯಾಗುತ್ತದೆ. ಬ್ಲಾಕ್‌ನಲ್ಲಿರುವ ಮುಖ್ಯ ಗುರುತುಗಳನ್ನು ( ಲ್ಯಾಂಡ್ ಮಾರ್ಕ್) ಮತ್ತು ಚೆಕ್ ಬಂದಿಗಳನ್ನೊಳಗೊಂಡ ಲೇಔಟ್ ನಕ್ಷೆಯಲ್ಲಿ ತೋರಿಸಲಾಗಿರುತ್ತದೆ.

ಬ್ಲಾಕ್‌ನ ಯಾವುದೇ ಕಟ್ಟಡವನ್ನು ತಪ್ಪದಂತೆ ದಾಖಲಿಸುವುದು ಮತ್ತು ವ್ಯಾಪ್ತಿಯಲ್ಲಿ ಬರುವ ತೋಟದ ಮನೆಗಳನ್ನು ಸಹ ಸಮೀಕ್ಷೆಗೆ ಒಳಪಡಿಸುವುದು, ಗ್ರಾಮೀಣ ಪ್ರದೇಶವಾಗಿದ್ದಲ್ಲಿ ಅಲ್ಲಿಯ ಗ್ರಾಮ ಲೆಕ್ಕಿಗರ ಅಥವಾ ವಹಿಸಿದ ಬ್ಲಾಕ್ ನಗರ ಪ್ರದೇಶವಾಗಿದ್ದಲ್ಲಿ ಸಂಬಂಧಪಟ್ಟ ಬಿಲ್ ಕಲೆಕ್ಟರ್‌ರವರ ಸಹಕಾರ ಪಡೆದು ಬ್ಲಾಕ್‌ನ ಸರದ್ದುಗಳನ್ನು ಪರಿಚಯ ಮಾಡಿಕೊಳ್ಳಲು ಗಣತಿದಾರರಿಗೆ ಸೂಚಿಸಲಾಗಿತ್ತು.

ಗಣತಿದಾರರು ಹೀಗೆ ತಮಗೆ ವಹಿಸಲಾದ ಬ್ಲಾಕ್‌ನಲ್ಲಿರುವ ಯಾರಾದರೂ ಹಿರಿಯರು ಇಲ್ಲವೇ ಸದರಿ ಪ್ರದೇಶದ ಪರಿಚಯವನ್ನು ಹೊಂದಿರುವ ಸ್ಥಳೀಯರನ್ನು ಸಂಪರ್ಕಿಸಿ ಒದಗಿಸಲಾದ ಲೇಔಟ್ ನಕ್ಷೆಯಲ್ಲಿ ತೋರಿಸಿರುವ ಎಲ್ಲಾ ದಿಕ್ಕುಗಳ ಸರಹದ್ದು, ರಸ್ತೆ, ಪ್ರಮುಖ ಕಟ್ಟಡ ಇತ್ಯಾದಿಗಳು ಸದರಿ ಬ್ಲಾಕ್‌ಗೆ ಹೊಂದುತ್ತವೆಯೇ ಎಂಬುದನ್ನು ದೃಢ ಪಡಿಸಿಕೊಳ್ಳುತ್ತಾರೆ.

ಗಣತಿದಾರರಿಗೆ ಕೆಲವು ಪ್ರಾಮುಖ್ಯತೆ ಪಡೆದ ವಿಷಯಗಳನ್ನಲ್ಲದೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ಅವರು ವಹಿಸುವ ಪಾತ್ರ ಮತ್ತು ಜವಾಬ್ದಾರಿಗಳನ್ನು ಕೂಡ ತಿಳಿಹೇಳಲಾಗಿದೆ. ಗಣತಿದಾರರ ಕಾರ್ಯಭಾರವೇನು ಸಮೀಕ್ಷಾ ಪೂರ್ವದ ಕರ್ತವ್ಯಗಳೇನು ಮತ್ತು ಎರಡು ಸುತ್ತು ತರಬೇತಿ ನೀಡುವುದೇ ಅಲ್ಲದೆ, 14 ಸಮೀಕ್ಷಾ ಸಮಯದಲ್ಲಿನ ಕರ್ತವ್ಯಗಳನ್ನು ಹೇಳುವುದರ ಜೊತೆಗೆ ಸಮೀಕ್ಷಾ ನಂತರದ ಮೂರು ಕರ್ತವ್ಯಗಳನ್ನು ಸಹ ತಿಳಿ ಹೇಳಲಾಗಿತ್ತು. ಇದು ಗಣತಿದಾರರಿಗೆ ಸಂಬಂಧಿಸಿದ ಕರ್ತವ್ಯ ಮತ್ತು ಜವಾಬ್ದಾರಿಗಳಾಗಿದ್ದವು.

ಜಾತಿ ಉಪಜಾತಿಗಳ ಪಟ್ಟಿ

ಇದು ಸಮೀಕ್ಷೆಯಲ್ಲಿ ಅತಿ ಪ್ರಾಮುಖ್ಯತೆ ಪಡೆದ ಒಂದು ಭಾಗವಾಗಿದೆ. ಇದನ್ನು ತಯಾರಿಸಲು, ಅನೇಕ ರೀತಿಯಲ್ಲಿ ಸಮೀಕ್ಷೆಗಾಗಿಯೇ ಸಲಹೆ ನೀಡಲು ರಚಿಸಲಾದ ತಜ್ಞರ ಸಮಿತಿಯಿಂದ ಪೂರಕ ಸಲಹೆಗಳನ್ನು ಪಡೆದುಕೊಂಡಿದೆ ಆಯೋಗ. ಅದರ ಪ್ರಕಾರ, ಸರಕಾರದ ಮಟ್ಟದಲ್ಲಿ, ಕರ್ನಾಟಕದಾದ್ಯಂತ ಪಟ್ಟಿ ಮಾಡಿ ಇಟ್ಟಿರುವ ಜಾತಿ ಮತ್ತು ಉಪಜಾತಿಗಳನ್ನು ಪತ್ರಿಕೆಗಳಲ್ಲಿ ಒಂದಲ್ಲ ಎರಡು ಬಾರಿ ಜಾಹೀರಾತು ನೀಡಲಾಗಿತ್ತು. ಜಾಹೀರಾತು ನೀಡುವ ಉದ್ದೇಶವೆಂದರೆ ಪಟ್ಟಿಯಲ್ಲಿ ಒಳಗೊಳ್ಳದ ಯಾವುದಾದರೂ ಜಾತಿ ಅಥವಾ ಉಪಜಾತಿ ಬಿಟ್ಟು ಹೋಗಿದ್ದಲ್ಲಿ ಬಿಟ್ಟು ಹೋಗಿರುವ ಜಾತಿಗೆ ಸೇರಿದವರು, ಜಿಲ್ಲಾಮಟ್ಟದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗಾಗಲಿ ಅಥವಾ ಆಯೋಗದ ಕಚೇರಿಗಾಗಲಿ ಕೊಡುವುದರ ಮೂಲಕ ದಾಖಲಿಸಿಕೊಳ್ಳಲು ಸೂಚಿಸಲಾಗಿತ್ತು. ಈ ಜಾಹೀರಾತುಗಳನ್ನು ಅನುಸರಿಸಿ ಹಲವಾರು ಜಾತಿಗೆ ಸಂಬಂಧಿಸಿದ ಸಂಘ-ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಂಡಿವೆ. ಹಾಗೆ ಸ್ವೀಕೃತವಾದಂತಹ ಅರ್ಜಿಗಳೆಲ್ಲವನ್ನೂ ಕ್ರೋಢೀಕರಿಸಿ, 1,351 ಜಾತಿ ಉಪಜಾತಿಗಳನ್ನು, ಕ್ರಮಾಂಕವಾಗಿ ಕೈಪಿಡಿಯಲ್ಲಿ ಅಳವಡಿಸಲಾಗಿತ್ತು. ಇದು ಅಲ್ಲದೆ, ಯಾವುದೇ ಜಾತಿ, ಪಟ್ಟಿಯಲ್ಲಿ ದಾಖಲಾಗದಿದ್ದರೂ, ಅಂಥ ಜಾತಿಯನ್ನು ಕೈಬರಹದ ಮೂಲಕ ಗಣತಿದಾರರು ಬರೆದುಕೊಂಡು ಮಿಕ್ಕೆಲ್ಲ ಅಂಶಗಳನ್ನು ಸಂಗ್ರಹಿಸಲು ಸಹ ಸೂಚನೆ ನೀಡಲಾಗಿತ್ತು. ಈ ಕಾರ್ಯಗಳೆಲ್ಲವನ್ನೂ, ತಾಂತ್ರಿಕವಾಗಿ ನಿಭಾಯಿಸಲು ಬಿಇಎಲ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅವರು ಇದಕ್ಕಾಗಿ ಸಾಫ್ಟ್ ವೇರ್ ತಯಾರಿಸಿದ್ದರು. ಜಾತಿ ಉಪಜಾತಿಗಳಿಗೆಲ್ಲಕ್ಕೂ ಕೋಡ್ ನಂಬರ್ ಕೊಡಲಾಗಿತ್ತು. ಗಣತಿದಾರರು ನಮೂನೆ 3ರಲ್ಲಿರುವ ಎಲ್ಲಾ 55 ಕಾಲಂಗಳನ್ನು ತುಂಬಿದ ನಂತರ, ಮನೆಯ ಮಾಲಕ ಅಥವಾ ಪ್ರಾಪ್ತ ವಯಸ್ಸಿನ ಮನೆಯ ಪ್ರತಿನಿಧಿಯಿಂದ ನಮೂನೆಗೆ ಸಹಿ ಪಡೆದುಕೊಂಡು ತಾವೂ ಸಹಿ ಮಾಡಿ, ಮೇಲ್ವಿಚಾರಕರಿಂದಲೂ ಸಹಿ ಮಾಡಿಸಬೇಕಾಗಿತ್ತು. ಕೊನೆಯಲ್ಲಿ ಗಣತಿದಾರರು ಗೋಷ್ವಾರೆ ನಮೂನೆ 4 (ಎ)ಮತ್ತು 4(ಬಿ)ಗಳನ್ನು ತುಂಬಬೇಕಾಗಿತ್ತು. ಈ ವಿವರವು ಸಮೀಕ್ಷೆ ಗಾತ್ರ ಹಾಗೂ ಪ್ರತಿಯೊಂದು ಹಂತಗಳನ್ನು ವ್ಯಕ್ತಪಡಿಸುವಂತಹ ಮಹತ್ವದ ಗೋಷ್ವಾರೆಯಾಗಿರುವುದರಿಂದ ಇದನ್ನು ಚಾಚು ತಪ್ಪದೆ ಗಣತಿದಾರರು ನಿಗದಿತ ಕಾಲಾವಕಾಶದೊಳಗೆ ಸಲ್ಲಿಸುವುದು ಅತಿ ಮುಖ್ಯವಾದ ಅಂಶವಾಗಿತ್ತು.

ಈ ಎಲ್ಲಾ ಕೆಲಸಗಳನ್ನು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯೂ, ಉಪ ವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿಯೂ ಮತ್ತು ತಾಲೂಕು ಮಟ್ಟದಲ್ಲಿ ತಹಶೀಲ್ದಾರರೂ ಉಸ್ತುವಾರಿ ಮಾಡುವುದರ ಮೂಲಕ ನೋಡಿಕೊಂಡಿದ್ದರು. ಬೆಂಗಳೂರಿನ ಬಿಬಿಎಂಪಿಯಲ್ಲಿ ಮಾತ್ರ ಆಯುಕ್ತರು ಮತ್ತು ಉಪ ಆಯುಕ್ತರುಗಳ ಹೊಣೆಯಾಗಿತ್ತು. ಇವರೆಲ್ಲರಿಗೂ ಮುಖ್ಯಮಂತ್ರಿಗಳು ಎರಡು ಬಾರಿ ವರ್ಚುವಲ್ ಮೀಟಿಂಗ್ ಸಹ ಮಾಡಿ ತಿಳುವಳಿಕೆ ನೀಡಿದ್ದರು.

ಗಣತಿದಾರರಿಗೆ ಇದು ಹೊರೆಯ ಕೆಲಸವಾಗಿರಲಿಲ್ಲ. ಪ್ರತಿಯೊಬ್ಬ ಗಣತಿದಾರರಿಗೆ 150ರಿಂದ 200 ಮನೆಗಳನ್ನಷ್ಟೇ ಗಣತಿ ಮಾಡಲು ಕೇಳಲಾಗಿತ್ತು. ಹೇಳಿದ ರೀತಿಯಲ್ಲಿ ಗಣತಿ ಕಾರ್ಯ ಎಲ್ಲವೂ ಮುಗಿದ ನಂತರ ಕೊನೆಯಲ್ಲಿ ತಮ್ಮ ತಮ್ಮ ಬ್ಲಾಕ್‌ನಲ್ಲಿ ಬಿಟ್ಟುಹೋದ ಮನೆಗಳನ್ನು ಪರಿಶೀಲಿಸುವ ಹೊಣೆಗಾರಿಕೆ ಅವರದೇ ಆಗಿತ್ತು.

ಮನೆಗಳು ಗಣತಿ ಕಾರ್ಯದಿಂದ ಬಿಟ್ಟು ಹೋಗಿವೆ ಎಂಬ ಒಂದು ಪ್ರಮುಖವಾದ ಸುದ್ದಿ ಎಲ್ಲೆಡೆ ಹರಡಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ- ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಕೂಲಿ ಅರಸಿ ಗೂಳೆ ಹೋದವರು ಮತ್ತು ಪತಿ-ಪತ್ನಿಯರು ಜೊತೆಗೂಡಿ ಹಗಲೆಲ್ಲಾ ದುಡಿಯಲು ಹೊರಗೆ ಹೋಗಿರುವುದು. ಇದಲ್ಲದೆ ಬೆಂಗಳೂರು ಮಹಾನಗರದಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಗೇಟೆಡ್ ಕಮ್ಯುನಿಟಿ ಮನೆಗಳು ಮತ್ತು ಐಷಾರಾಮಿ ಮನೆಗಳಿರುವ ಮೊಹಲ್ಲಾಗಳಲ್ಲಿ, ನಿವಾಸಿಗಳೇ ಅಸಹಕಾರ ತೋರಿರುವುದು. ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಗಣತಿದಾರರ ಜೋಬದ್ರಗೇಡಿತನದಿಂದ ಲೋಪವಾಗಿರುವುದನ್ನು ಒಪ್ಪಿಕೊಳ್ಳದಿರಲು ಹೇಗೆ ಸಾಧ್ಯ? ಗಣತಿ ಕೆಲಸಗಳನ್ನು ಮಾಡಿದವರು ಶಿಕ್ಷಕರು. ಕರ್ನಾಟಕದ ಶಿಕ್ಷಕರೆಲ್ಲರೂ ವಿವಿಧ ಜಾತಿಗಳಿಗೆ ಸೇರಿದವರಾಗಿರುತ್ತಾರೆ ಎಂಬುದನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ? ಈ ಕೆಲಸಗಳು ಅಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು 2015ರ ಎಪ್ರಿಲ್ 15ರಿಂದ ಮೇ 15ರವರೆಗೆ ನಡೆಯಿತು, ಕೊನೆಯಲ್ಲಿ ಕೋರಿಕೆ ಮೇರೆಗೆ, ಎರಡು ವಾರಗಳ ಕಾಲ ವಿಸ್ತರಿಸಲಾಯಿತು.

ಇಷ್ಟಾದರೂ, ಬೆಂಗಳೂರು ನಗರದಲ್ಲಿ ಶೇ. 85ರಷ್ಟೇ ಗಣತಿ ಆಗಿರುವುದನ್ನು ವಿಷಾದದಿಂದ ಹೇಳಲೇಬೇಕಾಗಿದೆ. ಆದರೆ ಉಳಿದ ಎಲ್ಲಾ ಕಡೆ ಶೇ. 98 ರಿಂದ ಶೇ. 100ರವರೆಗೂ ಆಗಿರುವುದಕ್ಕೆ ದಾಖಲೆ ಇದೆ. ಏನೇ ಆಗಲಿ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ, ಪತ್ರಿಕೆಗಳಲ್ಲಿ ವರದಿಯಾದಂತೆ ಶೇ. 94.5ರಷ್ಟು ಗಣತಿ ಕಾರ್ಯ ಆಗಿದೆ. ಅಂದರೆ, 5 ಕೋಟಿ 98 ಲಕ್ಷ ಜನಸಂಖ್ಯೆ ಕವರ್ ಆಗಿದೆ. ಅದರಲ್ಲಿ 5 ಲಕ್ಷಕ್ಕೂ ಹೆಚ್ಚು ಜಾತಿಯನ್ನೇ ಹೇಳಿಕೊಳ್ಳದವರೂ ಇದ್ದಾರೆ. ಕುಟುಂಬಗಳ ಸಂಖ್ಯೆ ಮಾತ್ರ, ರಾಷ್ಟ್ರೀಯ ಜನಗಣತಿ 2011ರಲ್ಲಿ ಎಣಿಸಿದ್ದ 1 ಕೋಟಿ 33 ಲಕ್ಷಕ್ಕಿಂತ 2 ಲಕ್ಷ ಹೆಚ್ಚಿದೆ. ಈಗ ಒಂದು ಸರಳ ಗಣಿತ ಸೂತ್ರವನ್ನು ಮುಂದಿಡುತ್ತಿದ್ದೇನೆ. ಆಯೋಗ ಒಟ್ಟು 5 ಕೋಟಿ 98 ಲಕ್ಷ ಜನಸಂಖ್ಯೆಯನ್ನು 2015 ಎಪ್ರಿಲ್-ಮೇ ತಿಂಗಳಲ್ಲಿ ಸಮೀಕ್ಷೆ ಮಾಡಿದ್ದರೆ, ರಾಷ್ಟ್ರೀಯ ಜನಗಣತಿ 2011ರಲ್ಲಿ ಆಗಿದೆ. ಆ ಗಣತಿಯಲ್ಲಿ ಬಂದ ಜನಸಂಖ್ಯೆ 6 ಕೋಟಿ 10 ಲಕ್ಷ. ಆಯೋಗ ಮಾಡಿದ ಸಮೀಕ್ಷೆಗೂ ರಾಷ್ಟ್ರೀಯ ಜನಗಣತಿ ನಡುವೆ ಇರುವ ಅಂತರ ಸುಮಾರು ಮೂರೂವರೆ ವರ್ಷಗಳು. ರಾಷ್ಟ್ರೀಯ ಮಾನದಂಡದಂತೆ 2015ರಲ್ಲಿ, ಪ್ರತೀ ವರ್ಷದ ಜನಸಂಖ್ಯೆಯ ಕರ್ನಾಟಕದ ಬೆಳವಣಿಗೆಯ ದರ ಶೇ. 9.9. ಆರು ಕೋಟಿ 10 ಲಕ್ಷವನ್ನು, ಶೇ. 1ರಂತೆ ಮೂರೂವರೆ ವರ್ಷಗಳಿಗೆ ಲೆಕ್ಕ ಹಾಕಿದರೆ ಬರುವ ಜನಸಂಖ್ಯೆ ಬೆಳವಣಿಗೆ ಒಟ್ಟು 21 ಲಕ್ಷದ 35 ಸಾವಿರ. ಈ ಬೆಳವಣಿಗೆ ದರವನ್ನು 2011ರಲ್ಲಿ ಎಣಿಸಿದ ಜನಸಂಖ್ಯೆಗೆ ಸೇರಿಸಿದರೆ ಬರುವ ಒಟ್ಟು ಜನಸಂಖ್ಯೆ 6 ಕೋಟಿ 31 ಲಕ್ಷದ 35 ಸಾವಿರ. ಅಲ್ಲಿಗೆ ಆಯೋಗ 33 ಲಕ್ಷದ 35 ಸಾವಿರ ಜನಸಂಖ್ಯೆಯನ್ನು ಎಣಿಸಲು ಸಾಧ್ಯವಾಗಿಲ್ಲ ಎಂಬುದು ತಿಳಿದಂತಾಯಿತು.

ಗಣತಿದಾರರು ಪ್ರತಿದಿನ ಸಹಿ ಹಾಕಿದ ನಮೂನೆಗಳನ್ನು ಬಿಇಎಲ್ ಸಂಸ್ಥೆಯವರು ಏರ್ಪಡಿಸಿದ್ದ ಡೇಟಾ ಎಂಟ್ರಿ ಆಪರೇಟರ್‌ಗಳಿದ್ದ ಕೊಠಡಿಗೆ, ಉಸ್ತುವಾರಿಗಳು ಅಥವಾ ಚಾರ್ಜ್ ಅಧಿಕಾರಿಗಳ ಮೂಲಕ ತಲುಪಿಸುತ್ತಿದ್ದರು. ಡೇಟಾ ಎಂಟ್ರಿ ಆಪರೇಟರ್‌ಗಳು ಅವುಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದರು. ಹೀಗೆ ಡಿಜಿಟಲೀಕರಣಗೊಳಿಸಿದ ಎಲ್ಲಾ ನಮೂನೆಗಳು ಈಗಲೂ ದೊರೆಯುತ್ತವೆ. ಜೊತೆಗೆ ಹಾರ್ಡ್ ಪ್ರತಿಗಳನ್ನೂ ಜತನವಾಗಿ ಇಡಲಾಗಿದೆ.

ಹೀಗೆ ಗಣತಿಕಾರ್ಯ ಪೂರ್ಣಗೊಂಡ ನಂತರ, ಅದುವರೆಗೆ ನಡೆದ ಎಲ್ಲಾ ವಿದ್ಯಮಾನಗಳನ್ನು, ಬಿಇಎಲ್ ಸಂಸ್ಥೆಯವರು ಆಯೋಗದವರೊಡಗೂಡಿ, ತಜ್ಞರ ಸಮಿತಿಯ ಮುಂದೆ ಸಾದರಪಡಿಸಿದರು. ತಜ್ಞರ ಸಮಿತಿ, ಅನುಸರಿಸಿದ ಕ್ರಮಗಳೆಲ್ಲವನ್ನು ಗಮನಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲು ಅನುಮತಿಸಿದರು.

ಸಾಫ್ಟ್ ಕಾಪಿಯಲ್ಲಿದ್ದ ಎಲ್ಲಾ ದತ್ತಾಂಶಗಳನ್ನು ಡಿ-ಕೋಡಿಂಗ್ ಮಾಡುವುದರ ಮೂಲಕ, ಅದಕ್ಕಾಗಿ ಸಿದ್ಧಪಡಿಸಿದ್ದ ನಮೂನೆಗೆ ಪರಿವರ್ತಿಸಲಾಯಿತು. ಹೀಗೆ ಪರಿವರ್ತಿಸಲಾದ ಸಂಗ್ರಹಿಸಿರುವ ಎಲ್ಲಾ ಕಾಲಂಗಳ ಮಾಹಿತಿಗಳನ್ನು ರಾಜ್ಯಮಟ್ಟದ, ಜಿಲ್ಲಾಮಟ್ಟದ, ತಾಲೂಕು ಮಟ್ಟದ, ಗ್ರಾಮ ಹಾಗೂ ವಾರ್ಡ್ ಮಟ್ಟದ ದತ್ತಾಂಶಗಳನ್ನು ಬೇರ್ಪಡಿಸಿ, ಅವುಗಳೆಲ್ಲವನ್ನು ಸರಕಾರಿ ಮುದ್ರಣಾಲಯದಲ್ಲಿ, ಮುದ್ರಿಸಲಾಗಿದೆ. ಮುದ್ರಿಸಲಾಗಿರುವ ದತ್ತಾಂಶಗಳು ಅನೇಕ ಸಂಪುಟಗಳಲ್ಲಿವೆ. ದತ್ತಾಂಶಗಳನ್ನು ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಕೊನೆಯದಾಗಿ ಐಐಎಂ ಸಂಸ್ಥೆಯವರು ಒಂದು ವಾರಗಳ ಕಾಲ ಸಮೀಕ್ಷೆ ನಡೆಸಿರುವ ಕಾರ್ಯವಿಧಾನವನ್ನು ಪರಿಶೀಲಿಸಿ, ಕಾರ್ಯವಿಧಾನ ವೈಜ್ಞಾನಿಕವಾಗಿದೆ ಎಂದು ಸರ್ಟಿಫಿಕೇಟ್ ನೀಡಿರುವರು.

ಆಯೋಗ ಅನುಸರಿಸಿರುವ ಈ ಕ್ರಮದಲ್ಲಿ ಯಾವುದು ಅವೈಜ್ಞಾನಿಕ ಎಂಬುದನ್ನು ಆರೋಪಿಸುವವರು ಹೇಳಬೇಕು, ಇಲ್ಲವಾದರೆ ನಾನು ತರಬೇತಿ ಪಡೆದಂತೆ ಅಥವಾ ಕೈಪಿಡಿಯಲ್ಲಿ ಹೇಳಿದಂತೆ ಮಾಹಿತಿ ಸಂಗ್ರಹಿಸಿಲ್ಲ ಎಂಬುದನ್ನಾದರೂ ಯಾರಾದರೂ ಗಣತಿದಾರರು ಮುಂದೆ ಬಂದು ಹೇಳಬೇಕಾಗಿದೆ. ಇವುಗಳ ಹೊರತಾಗಿ ಅವೈಜ್ಞಾನಿಕ ಎಂಬುದಕ್ಕೆ ಅರ್ಥವೇ ಇಲ್ಲ.

ಇನ್ನು ಕೆಲವು ಜಾತಿಗಳ ಮುಖಂಡರು ಅವರುಗಳ ಜಾತಿಯ ಜನಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ ಎಂದು ಆರೋಪ (ಮಿಥ್ಯಾ)ಮಾಡುತ್ತಿದ್ದಾರೆ. ಮುಖ್ಯವಾಗಿ, ಅವೈಜ್ಞಾನಿಕವೆಂದು ಮೊದಲು ಕಂಡ ದಾವಣಗೆರೆಯ ಹಿರಿಯವರ ಒಂದೇ ಮನೆಯಲ್ಲಿ ಮೂರು ಮಂದಿ ಜನಪ್ರತಿನಿಧಿಗಳಿದ್ದಾರೆ. ಆ ಭಾಗದಲ್ಲಿ ಬೇರೆ ಯಾವ ಸಮುದಾಯದವರು ಇಲ್ಲವೇ ಪಕ್ಷಕ್ಕೆ? ಇದಕ್ಕಾದರೂ ಅವರು ಪಕ್ಷ ನಿಷ್ಠೆ ಹೊಂದಿರಬೇಕು. ಆಯೋಗದಲ್ಲಿ ಕಂಡು ಬಂದ ಜನಸಂಖ್ಯೆಯನ್ನು ತಮ್ಮಲ್ಲಿರುವ ಯಾವ ಜನಸಂಖ್ಯೆಗೆ ಹೋಲಿಕೆ ಮಾಡಿ ಆ ರೀತಿ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಲಿಂಗಾಯತ ಸಮಾಜದ ಒಬ್ಬ ಪೂಜ್ಯರು ಹೇಳುವಂತೆ ಆ ಜಾತಿಯ ಜನಸಂಖ್ಯೆ 1 ಕೋಟಿ 50 ಲಕ್ಷ ಮತ್ತು ಮಹಾಸಭಾದ ಒಬ್ಬ ನಿವೃತ್ತ ಹಿರಿಯ ಅಧಿಕಾರಿ ಹೇಳುವಂತೆ, 1 ಕೋಟಿ 35 ಲಕ್ಷ, ಮತ್ತೊಬ್ಬ ಸಚಿವರು ಹೇಳುವಂತೆ ಅದು 1 ಕೋಟಿ ಇರುತ್ತದೆ. ಅವರಲ್ಲಿಯೇ ಹೀಗೆ ಭಿನ್ನಾಭಿಪ್ರಾಯಗಳು ಹೊರ ಬಿದ್ದಿವೆ. ಸರಕಾರ ಯಾವುದನ್ನು ನಂಬಬೇಕು?

ನನಗೆ ತಿಳಿದು ಬಂದಂತೆ, ಲಿಂಗಾಯತ ಸಮುದಾಯ ದಲ್ಲಿ ಸಂಖ್ಯೆ ಕಡಿಮೆ ಆಗಿದೆ ಎಂಬುದು ನಿಜವಾದರೂ ಯಾವ ಮಟ್ಟದಲ್ಲಿ ಕಡಿಮೆಯಾಗಿದೆ ಎಂಬುದು ಮಾತ್ರ ಖಚಿತವಾಗಿ ಯಾರೂ ಹೇಳಲು ಸಾಧ್ಯವಿಲ್ಲ. ಎಣಿಕೆ ಸಂದರ್ಭದಲ್ಲಿ ಕೆಲವು ಸಣ್ಣ ಸಣ್ಣ ಲೋಪಗಳು ನಡೆದಿವೆ ಎಂಬುದು ಕೂಡಾ ತಿಳಿದು ಬಂದಿದೆ. ಲಿಂಗಾಯತ ಸಮಾಜದಲ್ಲಿ, ಗುರುತಿಸಿಕೊಂಡಿರುವ ಅನೇಕ ಉಪ ಪಂಗಡಗಳಾದ, ಉದಾಹರಣೆಗೆ- ಗಾಣಿಗ ಲಿಂಗಾಯತ, ಅಗಸ- ಮಡಿವಾಳ ಲಿಂಗಾಯತ, ಹಡಪದ ಲಿಂಗಾಯತ, ದೇವಾಂಗ-ನೇಕಾರ ಲಿಂಗಾಯತ ಹೀಗೆ ಇನ್ನೂ ಮುಂತಾದವು ತಮ್ಮ ಮೂಲ ಜಾತಿಯಾದ ಗಾಣಿಗ, ಅಗಸ, ಮಡಿವಾಳ, ಹಡಪದ, ದೇವಾಂಗ ಮತ್ತು ನೇಕಾರ ಜಾತಿಗಳಿಗೇ ಮೊರೆ ಹೋಗಿದ್ದಾರೆ. ಸಾದರ ಲಿಂಗಾಯತರು, ಪ್ರಸ್ತುತ ಹಿಂದುಳಿದ ವರ್ಗಗಳ 2 ಎ ಪಟ್ಟಿಯಲ್ಲಿರುವ ‘ಹಿಂದೂ ಸಾದರು’ ಎಂದು ಬರೆಸಿಕೊಂಡಿದ್ದಾರೆ. ಲಿಂಗಾಯತರಲ್ಲಿ ಪ್ರಮುಖವಾಗಿ ಬರುವ ಪಂಚಮಸಾಲಿಗಳಲ್ಲಿ ಕೆಲವರು ಪಂಚಮಸಾಲಿ ಎಂದು ದಾಖಲಿಸದೆ, ಲಿಂಗಾಯತ ವೀರಶೈವ ಅಥವಾ ವೀರಶೈವ ಲಿಂಗಾಯತರೆಂದು ಬರೆಸಿಕೊಂಡಿರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಲಿಂಗಾಯತ ಜಂಗಮರಲ್ಲಿ ಕೆಲವರು ಈಗಾಗಲೇ ಪರಿಶಿಷ್ಟ ಜಾತಿ ದೃಢೀಕರಣ ಪತ್ರ ಪಡೆದಿದ್ದಾರೆ ಎಂಬುದು ನ್ಯಾಯಾಲಯ ಮತ್ತು ಮಾಧ್ಯಮಗಳಿಂದ ಬಹಿರಂಗಗೊಂಡಿದೆ. ಅವರು ತಾವು ಬೇಡುವ ಜಂಗಮರೆಂದು ಹೇಳಿಕೊಂಡು ‘ಬೇಡ ಜಂಗಮ’ ಎಂದು ಬರೆಸಿಕೊಂಡಿರುವಂತಿದೆ. ಈ ಅಂಶಗಳೆಲ್ಲವನ್ನೂ ಆ ಸಮಾಜದವರು ಪರಿಶೀಲನೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡು ಆರೋಪಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳಿತು.

ಲಿಂಗಾಯತ ಸಮಾಜ ಒಂದೇ ಅಲ್ಲ, ಒಕ್ಕಲಿಗ, ಉಪ್ಪಾರ, ತಿಗಳ, ಗಾಣಿಗ, ದೇವಾಂಗ, ನೇಕಾರ, ವಿಪ್ರ, ಕಮ್ಮ ನಾಯ್ಡು ಇನ್ನೂ ಮುಂತಾದ ಜಾತಿಗಳು ತಮ್ಮ ಜಾತಿಗಳ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಮುಖ್ಯವಾಗಿ ಮರಸು ಒಕ್ಕಲಿಗ ಮತ್ತು ದಾಸ ಒಕ್ಕಲಿಗರು ಬಹುತೇಕ ‘ಒಕ್ಕಲಿಗ’ ಎಂದೇ ಬರೆಸಿಕೊಂಡಿರುವ ಸಂಭವ ಇಲ್ಲದಿಲ್ಲ.

ಇಲ್ಲಿ ವಾಸ್ತವವಾಗಿ ಒಂದು ಅಂಶವನ್ನು ಹೇಳಲೇಬೇಕಾಗಿದೆ, ಅದು ಮುಸ್ಲಿಮರಿಗೆ ಸಂಬಂಧಪಟ್ಟ ವಿಷಯ. 2011ರ ಜನಗಣತಿಯ ಪ್ರಕಾರ ಮುಸ್ಲಿಮರ ಜನಸಂಖ್ಯೆ 78 ಲಕ್ಷದ 93 ಸಾವಿರ (ಶೇ. 12.93). ಆದರೆ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಅವರ ಜನಸಂಖ್ಯೆ 76 ಲಕ್ಷ. ಹೀಗೆ ಖಚಿತವಾಗಿ ಗೊತ್ತಿದ್ದರೂ ಆ ಸಮುದಾಯದವರು ಮಾತ್ರ ಯಾರೂ ತುಟಿ ಬಿಚ್ಚಿಲ್ಲ.

ಪತ್ರಿಕೆಯೊಂದರ ವರದಿಯಂತೆ 1984ರಲ್ಲಿ ಟಿ. ವೆಂಕಟಸ್ವಾಮಿ ಆಯೋಗ ಗಣತಿ ಮಾಡಿರುವುದನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಆದರೆ ಆ ಆಯೋಗ ಸಮಗ್ರ ಜಾತಿ ಜನಗಣತಿ ಮಾಡಿರಲಿಲ್ಲ ಎಂಬುದು ತಿಳಿದಿರಲಿ. ಹಾಗೆಯೇ ಮಾಜಿ ಮುಖ್ಯಮಂತ್ರಿ ಒಬ್ಬರು ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ವರದಿಯಲ್ಲಿ ಲಿಂಗಾಯತರನ್ನು ಹೆಚ್ಚು ತೋರಿಸಲಾಗಿದೆ ಎಂದು ಹೇಳಿರುವರು. ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಅವರು ಕೂಡ ಜಾತಿ ಮರುವರ್ಗೀಕರಣಕ್ಕಾಗಿ ಟಿ.ವೆಂಕಟಸ್ವಾಮಿ ಸಂಗ್ರಹಿಸಿದ ಅಂಕಿ ಅಂಶಗಳನ್ನೇ ಬಳಸಿರುವರು. ಈ ಆರೋಪಗಳೆಲ್ಲ ಅವರು ಹೊಂದಿರುವ ರಾಜಕೀಯ ಸ್ಥಾನಗಳಿಗೆ ಎಲ್ಲಿ ಕುಂದು ಬರುತ್ತದೋ ಎಂಬ ಶಂಕೆ ಇರಬಹುದು ಎಂಬುದು ಯಾವುದೇ ಪ್ರಜ್ಞಾವಂತನಿಗೆ ನಿಲುಕದ ವಿಷಯವೇನಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎನ್. ಲಿಂಗಪ್ಪ

contributor

Similar News