ದೇಶದ ಆರ್ಥಿಕ ದುಸ್ಥಿತಿಯ ಬಗ್ಗೆ ವಿತ್ತ ಸಚಿವೆಗೇಕೆ ಕಳವಳವಾಗುತ್ತಿಲ್ಲ?
ಬೆಲೆಯೇರಿಕೆಯಂತೂ ನಿಲ್ಲುತ್ತಲೇ ಇಲ್ಲ. ಆಹಾರ ಬೆಲೆ ಏರಿಕೆಯಿಂದಾಗಿ ಸೆಪ್ಟಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ ಒಂಭತ್ತು ತಿಂಗಳುಗಳಲ್ಲೇ ಗರಿಷ್ಠ ಮಟ್ಟ ಮುಟ್ಟಿತ್ತು. ಆದರೆ ವಿತ್ತ ಸಚಿವೆಗೆ ಇದು ಅರ್ಥವಾಗುತ್ತಲೇ ಇಲ್ಲ. ಇಂಥದ್ದರ ಬಗ್ಗೆ ಕೇಳುವ ಪ್ರಶ್ನೆಗಳು ನಿರ್ಮಲಾ ಸೀತಾರಾಮನ್ ಅವರಿಗೆ ಅಪಥ್ಯವಾಗುತ್ತವೆ. ಸಿಟ್ಟು ತರಿಸುತ್ತವೆ. ಮಂಬರುವ ವರ್ಷಗಳಲ್ಲಿ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎನ್ನುವುದು ಗೊತ್ತಿರುವುದರಿಂದಲೇ ನಿರ್ಮಲಾ ಸೀತಾರಾಮನ್ ಹೀಗೆ ಸಿಟ್ಟು ಮಾಡಿಕೊಳ್ಳುತ್ತಾರೆಯೇ?
ಕಳೆದ ತಿಂಗಳು ಸೆನ್ಸೆಕ್ಸ್ ಶೇ.7ರಷ್ಟು ಕುಸಿದಿದ್ದು, ಹೂಡಿಕೆದಾರರು ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ. ಅಕ್ಟೋಬರ್ ತಿಂಗಳೊಂದರಲ್ಲೇ ವಿದೇಶಿ ಹೂಡಿಕೆದಾರರು ನಮ್ಮ ಮಾರುಕಟ್ಟೆಯಿಂದ 12 ಬಿಲಿಯನ್ ಡಾಲರ್‌ಗೂ ಹೆಚ್ಚನ್ನು ಹಿಂದೆಗೆದುಕೊಂಡಿದ್ದಾರೆ. ಇದರೊಂದಿಗೆ, 2020ರ ಮಾರ್ಚ್‌ನಲ್ಲಿ ಕೋವಿಡ್ ದುಸ್ಥಿತಿ ಹೊತ್ತಿನ ಹಿಂದೆಗೆತದ ನಂತರ ಅತಿ ದೊಡ್ಡ ಪ್ರಮಾಣದ ವಿದೇಶಿ ಬಂಡವಾಳ ಹೊರಹೋದಂತಾಗಿದೆ.
ಆದರೆ ಯಾರೂ ಇದರ ಬಗ್ಗೆ ಹೆಚ್ಚು ಮಾತಾಡುತ್ತಿಲ್ಲ.
ಕಳೆದ ವರ್ಷದಿಂದ ದಲಾಲ್ ಸ್ಟ್ರೀಟ್‌ನಲ್ಲಿ ಏನು ಹವಾ ಇದೆಯೋ ಅದಕ್ಕೂ ವಾಸ್ತವಕ್ಕೂ ಹೊಂದಿಕೆಯಾಗುತ್ತಿಲ್ಲ. ಉದ್ಯೋಗಗಳಿಲ್ಲ, ಉದ್ಯಮಗಳಿಲ್ಲ, ವಿದೇಶಿ ನೇರ ಬಂಡವಾಳ ಇಲ್ಲ, ಜಿಎಸ್‌ಟಿ ಸಂಗ್ರಹ ಆಮೆಗತಿಯಲ್ಲಿದೆ, ಜಿಡಿಪಿ ಬೆಳವಣಿಗೆ ಮಂದವಾಗಿದೆ. ವಾಹನಗಳ ಮಾರಾಟ ತಗ್ಗಿದೆ. ಆದರೆ ಷೇರು ಮಾರುಕಟ್ಟೆ ಮಾತ್ರ ರಾಕೆಟ್‌ನಂತೆ ಏರುತ್ತಿದೆ. ಮುಂದೆಯೂ ಕೆಲ ವಾರಗಳವರೆಗೆ ಏರುಗತಿಯಲ್ಲೇ ಇದ್ದರೂ ಇರಬಹುದು. ಆದರೆ ಪ್ರಧಾನವಾಗಿ ದೇಶದ ಆರ್ಥಿಕ ಸ್ಥಿತಿ ಏನಿದೆಯೋ ಆ ವಾಸ್ತವ ಇಷ್ಟು ಬೇಗ ಬದಲಾಗಲಾರದು.
ನಮ್ಮಲ್ಲಿ ಏನು ಬೇಕೋ ಎಲ್ಲವೂ ಇದೆ. ಸ್ಥಿರ ಸರಕಾರ, ದೊಡ್ಡ ಮಾರುಕಟ್ಟೆ, ಯುವ ಜನತೆ -ಹೀಗೆ ಶಕ್ತಿಶಾಲಿ ಆರ್ಥಿಕತೆಯಾಗುವುದಕ್ಕೆ ಬೇಕಾದ್ದೆಲ್ಲ ಇದೆ. ಆದರೂ ಏನೋ ಸರಿಯಿಲ್ಲ ಎಂಬುದನ್ನು ವಿದೇಶಿ ಹೂಡಿಕೆದಾರರು ಗಮನಿಸಿರುವ ಹಾಗಿದೆ.
ಎಲ್ಲೋ ಏನೋ ಯಡವಟ್ಟಾಗಿರುವಂತಿದೆ.
ಇಷ್ಟಾಗಿಯೂ ನಮ್ಮ ಮಾರುಕಟ್ಟೆಯ ಮೇಲೆ ಅದು ಇಷ್ಟು ತಿಂಗಳುಗಳಿಂದ ಪರಿಣಾಮ ಬೀರಿಲ್ಲ ಎಂದಾದರೆ, ಅದಕ್ಕೆ ಕಾರಣ ದೇಶೀಯ ಹೂಡಿಕೆದಾರರು ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿರುವುದು.
ಅಕ್ಟೋಬರ್‌ನಲ್ಲಿ ರೂ. 98,000 ಕೋಟಿ ವಿದೇಶಿ ಹೂಡಿಕೆ ಹಿಂದೆಗೆತವಾಗಿದೆ. ಅದೇ ಸಮಯದಲ್ಲಿ ದೇಶಿ ಹೂಡಿಕೆದಾರರು ರೂ. 93,000 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ.
ಈ ಹಂತದಲ್ಲಿ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳೆಂದರೆ, ದೇಶಿ ಹೂಡಿಕೆದಾರರು ಎಲ್ಲಿಯವರೆಗೆ ಮಾರುಕಟ್ಟೆಗೆ ಬಲವಾಗಿ ನಿಲ್ಲಬಲ್ಲರು? ವಿದೇಶಿ ಹೂಡಿಕೆದಾರರು ಹೊರಟು ಹೋಗುವುದರಿಂದ ಮಾರುಕಟ್ಟೆ ಅನುಭವಿಸುವ ಆಘಾತಕ್ಕೆ ಎಲ್ಲಿಯವರೆಗೆ ಅವರು ಮದ್ದಾಗಬಲ್ಲರು? ಎಲ್ಲಿಯವರೆಗೆ ಅವರನ್ನು ಶಾಕ್ ಅಬ್ಸಾರ್ಬರ್‌ಗಳು ಎಂದು ಸರಕಾರ ಬಳಸಿಕೊಳ್ಳಲು ಸಾಧ್ಯ? ನಿಜವಾಗಿಯೂ ನಮ್ಮ ಆರ್ಥಿಕತೆ ಉತ್ತಮವಾಗಿದೆಯೆ? ವಿದೇಶಿ ಹೂಡಿಕೆದಾರರೇ ಬೇಕಿಲ್ಲ ಎನ್ನುವಂಥ ಸ್ಥಿತಿಯಲ್ಲಿ ನಾವಿದ್ದೇವೆಯೆ? ಮುಂಬರುವ ತಿಂಗಳುಗಳಲ್ಲಿ ಹೆಚ್ಚುವಂತೆ ಕಾಣುತ್ತಿರುವ ಈ ನಿಧಾನ ಗತಿಗೆ ಕಾರಣಗಳೇನು?
ಬೇರೆ ಬೇರೆ ಪ್ರಮುಖ ಸಿಇಒಗಳು ಹೇಳುತ್ತಿರುವ ಪ್ರಕಾರ, ದೇಶದ ಮಧ್ಯಮ ವರ್ಗದವರಲ್ಲಿ ಕೊಳ್ಳುವ ಬಲ ಇಲ್ಲವಾಗಿದ್ದು, ಬೇಡಿಕೆ ಕುಸಿಯುತ್ತಿದೆ. ಆದರೆ ಮೋದಿ ಸರಕಾರ ಹೇಳೋದು ಮಾತ್ರ ಬೇರೇನೇ.
ಶೇ.8ಕ್ಕಿಂತ ಹೆಚ್ಚು ಜಿಡಿಪಿ ಬೆಳವಣಿಗೆ ನಿರೀಕ್ಷಿಸುತ್ತಿದ್ದು, ನಮ್ಮದು 5 ಟ್ರಿಲಿಯನ್ ಆರ್ಥಿಕತೆ ಆಗಿಯೇ ಆಗಲಿದೆ ಎಂದು ಸರಕಾರ ಹೇಳುತ್ತಿದೆ.ತೆರಿಗೆ ಸಂಗ್ರಹ ಹೆಚ್ಚುತ್ತಿದೆ ಎಂದೂ ಸರಕಾರ ಹೇಳುತ್ತಿದೆ. ಆದರೆ ಕಾರ್ಪೊರೇಟ್‌ಗಳಿಗಿಂತಲೂ ಮಧ್ಯಮ ವರ್ಗದವರು ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ ಎನ್ನುವ ಅಂಶದ ಬಗ್ಗೆ ಮೋದಿ ಸರಕಾರ ಒತ್ತು ನೀಡುತ್ತಲೇ ಇಲ್ಲ.
ವೇತನ ಪಡೆಯುವ ವರ್ಗದವರು ಜನಸಂಖ್ಯೆಯ ಶೇ.2ರಷ್ಟಿದ್ದು, ಕಾರ್ಪೊರೇಟ್‌ನವರಿಗಿಂತಲೂ ಹೆಚ್ಚು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಇಂಥದೊಂದು ವ್ಯವಸ್ಥೆ ಹೆಚ್ಚು ಕಾಲ ನಡೆಯಲಾರದು.
ಒಂದು ಕಡೆ ಸರಕಾರ 5 ಟ್ರಿಲಿಯನ್, 10 ಟ್ರಿಲಿಯನ್ ಡಾಲರ್ ಜಿಡಿಪಿಯ ಮಾತನಾಡುತ್ತಿದ್ದರೆ, ಇನ್ನೊಂದೆಡೆ ದೇಶದ ಬಡವರ ಸ್ಥಿತಿ ಶೋಚನೀಯವಾಗಿದೆ. ಎಷ್ಟೋ ಸಲ ಆಸ್ಪತ್ರೆಗೆ ದುಡ್ಡು ಸುರಿಯು ವುದರಲ್ಲಿಯೇ ಬಡವರ ಬಜೆಟ್ ಅಲ್ಲೋಲಕಲ್ಲೋಲವಾಗಿಬಿಡುತ್ತಿದೆ.
ಕೋವಿಡ್ ನಂತರ ಶಾಲಾ ಫೀಸ್ ಅಂತೂ ಶೇ.30ರಷ್ಟು ಹೆಚ್ಚಾಗಿದೆ. ನಾಳೆಗಾಗಿ ಏನಾದರೂ ಉಳಿಸಿಡುವ ಸ್ಥಿತಿಯಲ್ಲಂತೂ ಜನರಿಲ್ಲ.
ಯುವಜನರಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವೆಂಬುದು ಕೈಗೆಟುಕದ ಕನಸಾಗಿ ಬಿಟ್ಟಿದೆ. ಸಾಲಸೋಲ ಮಾಡಿ ಲಕ್ಷಗಟ್ಟಲೆ ಹಣ ಕೊಟ್ಟು ಖಾಸಗಿ ಕಾಲೇಜುಗಳಿಗೆ ಸೇರಿದರೂ ಅಲ್ಲಿನ ಶಿಕ್ಷಣದ ಗುಣಮಟ್ಟ ತೀರಾ ಕೆಟ್ಟದಾಗಿದೆ. ಅಲ್ಲಿ ಕಲಿತು ಒಳ್ಳೆಯ ಉದ್ಯೋಗ ಪಡೆಯುವ ಕನಸು ಕನಸಾಗಿಯೇ ಉಳಿಯುತ್ತಿದೆ.
ಈ ವರ್ಷದ ಜುಲೈ-ಸೆಪ್ಟಂಬರ್ ವಿಚಾರವಾಗಿ ಹೇಳುವುದಾದರೆ, ಗೃಹ ಮಾರಾಟ ಪ್ರಮಾಣ ಶೇ.13ರಷ್ಟು ಕುಸಿದಿದೆ. ಆಗಸ್ಟ್‌ನಲ್ಲಿ ರೂ. 77,000 ಕೋಟಿಯಷ್ಟು ಮೌಲ್ಯದ ವಾಹನಗಳು ಮಾರಾಟವಾಗದೆ ನಿಂತಿವೆ. ಇದು ಬಹಳ ಕಳವಳಕಾರಿ ವಿಷಯ. ಆದರೆ ಬೇಡದ ಕಂತೆ ಪುರಾಣ ಹೇಳಿಕೊಂಡಿರುವ ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾತ್ರ ಇದರ ಚಿಂತೆಯೇ ಇರುವಂತಿಲ್ಲ.
ಬೆಲೆಯೇರಿಕೆಯಂತೂ ನಿಲ್ಲುತ್ತಲೇ ಇಲ್ಲ. ಆಹಾರ ಬೆಲೆ ಏರಿಕೆಯಿಂದಾಗಿ ಸೆಪ್ಟಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಕಳೆದ ಒಂಭತ್ತು ತಿಂಗಳುಗಳಲ್ಲೇ ಗರಿಷ್ಠ ಮಟ್ಟ ಮುಟ್ಟಿತ್ತು. ಆದರೆ ವಿತ್ತ ಸಚಿವೆಗೆ ಇದು ಅರ್ಥವಾಗುತ್ತಲೇ ಇಲ್ಲ.
ಇವರ ರಾಜಕೀಯ ಏನಾದರೂ ಇರಲಿ, ಆದರೆ ದೇಶದ ಆರ್ಥಿಕತೆ ವಿಚಾರದಲ್ಲಿ ಕಿಂಚಿತ್ ಗಾಂಭೀರ್ಯವಾದರೂ ಬೇಡವೇ?
ಇಂಥದ್ದರ ಬಗ್ಗೆ ಕೇಳುವ ಪ್ರಶ್ನೆಗಳು ನಿರ್ಮಲಾ ಸೀತಾರಾಮನ್ ಅವರಿಗೆ ಅಪಥ್ಯವಾಗುತ್ತವೆ. ಸಿಟ್ಟು ತರಿಸುತ್ತವೆ. ಮಂಬರುವ ವರ್ಷಗಳಲ್ಲಿ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎನ್ನುವುದು ಗೊತ್ತಿರುವುದರಿಂದಲೇ ನಿರ್ಮಲಾ ಸೀತಾರಾಮನ್ ಹೀಗೆ ಸಿಟ್ಟು ಮಾಡಿಕೊಳ್ಳುತ್ತಾರೆಯೇ?
ಸರಕಾರ ಆತುರಗೇಡಿಯಂತೆ ಯಾವುದೇ ಯೋಜನೆ ಇಲ್ಲದೆ ಜಿಎಸ್‌ಟಿ ಅನುಷ್ಠಾನ ಮಾಡಿದ್ದರ ಪರಿಣಾಮವಾಗಿ ಸಣ್ಣ ಉದ್ಯಮಗಳು ಪೆಟ್ಟು ತಿಂದವು. ಸಣ್ಣ ಉದ್ಯಮಗಳ ಪಾಲಿಗೆ ಇಂದು ಜಿಎಸ್‌ಟಿ ಎನ್ನುವುದೇ ಒಂದು ಹೊರೆಯಾಗಿದೆ. ಆದರೆ, ನಿರ್ಮಲಾ ಸೀತಾರಾಮನ್ ಅದನ್ನು ದೇಶದ ಕಾನೂನು ಎನ್ನುತ್ತಾರೆ. ಜಿಎಸ್‌ಟಿ ಬಗ್ಗೆ ಕೇಳಿದರೆ, ಟೀಕಿಸಿದರೆ ಅದು ದೇಶವಿರೋಧಿ ನಡೆಯಾಗುತ್ತದೆಯೆ?
ತಮಿಳುನಾಡಿನಲ್ಲಿ ಅನ್ನಪೂರ್ಣ ಹೊಟೇಲ್ ಮಾಲಕರು ನಿರ್ಮಲಾ ಸೀತಾರಾಮನ್ ಎದುರಲ್ಲಿಯೇ ಜಿಎಸ್‌ಟಿ ಬಗ್ಗೆ ತಮಾಷೆಯಾಗಿಯೇ ಕಟು ಸತ್ಯವೊಂದನ್ನು ಹೇಳಿದ್ದರು. ಜಿಎಸ್‌ಟಿ ಕಾರಣದಿಂದಾಗಿ ಯಾವುದರ ಬೆಲೆ ಎಷ್ಟು ಎನ್ನುವುದೇ ಗೊಂದಲಮಯವಾಗಿರುವುದರ ಬಗ್ಗೆ ಅವರ ಟೀಕೆ ಇತ್ತು. ಆದರೆ ಅವರು ಬಹಳ ಸರಳವಾಗಿ ಹೇಳಿದ ಸತ್ಯಕ್ಕೆ, ಅದೂ ಬಹಿರಂಗ ಸಭೆಯಲ್ಲಿ ಹೇಳಿದ್ದಕ್ಕೆ ನಿರ್ಮಲಾ ಸೀತಾರಾಮನ್ ಕೆಂಡಾಮಂಡಲವಾಗಿದ್ದರು. ಕಡೆಗೆ ಆ ಹೊಟೇಲ್ ಮಾಲಕರು ಸತ್ಯ ಹೇಳಿದ ತಪ್ಪಿಗೆ ಕ್ಷಮೆ ಕೇಳಬೇಕಾಯಿತು.
ನಿರ್ಮಲಾ ಸೀತಾರಾಮನ್ ತಮ್ಮ ಕೋಪ ತಾಪದ ಮೂಲಕ ಸತ್ಯ ಹೇಳುವವರ ಬಾಯ್ಮುಚ್ಚಿಸಲು ಎಷ್ಟೇ ನೋಡಿದರೂ, ಕೆಂಡದಂತಿರುವ ಮಾರುಕಟ್ಟೆಯ ಸತ್ಯಗಳನ್ನು ಅವರು ಅಡಗಿಸಲು ಸಾಧ್ಯವಿಲ್ಲ.
ಸರಕಾರವೀಗ ಅಧಿಕೃತ ಜಿಎಸ್‌ಟಿ ಡೇಟಾ ಬಿಡುಗಡೆ ಮಾಡುವುದನ್ನೇ ನಿಲ್ಲಿಸಿಬಿಟ್ಟಿದೆ. ಯಾಕೆ ಎಂಬುದು ಅರ್ಥವಾಗದೇ ಇರುವಂಥದ್ದೇನೂ ಅಲ್ಲ.
ಸೆಪ್ಟಂಬರ್‌ನಲ್ಲಿನ ಜಿಎಸ್‌ಟಿ ದರ ನೋಡಿದರೆ, 40 ತಿಂಗಳುಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಮ್ಮ ಆರ್ಥಿಕತೆಯ ಬೆಳವಣಿಗೆ ವೇಗ ಕಳೆದುಕೊಂಡಿದೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ.
ದೇಶದ ಆರ್ಥಿಕತೆ ಬೆಳೆಯುತ್ತಿದೆ ಎನ್ನುವುದೇ ಹೌದಾದರೆ, ರೂಪಾಯಿ ಮೌಲ್ಯದಲ್ಲಿ ಏರಿಕೆ ಕಾಣಬೇಕಿತ್ತು. ಮೋದಿ ಕಾಲದಲ್ಲಿ ಹಾಗಾಯಿತು, ಹೀಗಾಯಿತು ಎಂದೆಲ್ಲ ಹೇಳಿಕೊಂಡೇ ಬರಲಾಯಿತು. ಈಗ ನೋಡಿದರೆ ಡಾಲರ್‌ಗೆ 84 ರೂ. ಆಗಿದ್ದು, ಇದು ಕೂಡ ಇತಿಹಾಸದಲ್ಲೇ ದಾಖಲೆ ಕನಿಷ್ಠ ಮಟ್ಟ. ರೂಪಾಯಿ ಮೌಲ್ಯ ಕುಸಿತ ತಪ್ಪಿಸಲು ಆರ್‌ಬಿಐ ಮತ್ತೆ ಮತ್ತೆ ಸಾಹಸ ಮಾಡುತ್ತಲೇ ಇದೆ. ಆದರೆ ನಿರ್ಮಲಾ ಸೀತಾರಾಮನ್ ಪ್ರಕಾರ, ಇದು ರೂಪಾಯಿಯ ಸಮಸ್ಯೆ ಅಲ್ಲ. ಡಾಲರ್ ಹೆಚ್ಚು ಪ್ರಬಲವಾಗುತ್ತಿರುವುದು.
ಆದರೆ ಪೌಂಡ್ ಮುಂದೆ ರೂಪಾಯಿಯನ್ನು ಹಿಡಿದು ನೋಡಿದರೂ ಅದೇ ಕಥೆಯೆಂದು ಅವರಿಗೆ ಅರ್ಥವಾಗಿಲ್ಲವೇ?.
ಈಗ ಒಂದು ಪೌಂಡ್‌ಗೆ 105 ರೂ.
ಆರ್ಥಿಕತೆ ಸೂಚಕಗಳಲ್ಲಿ ಒಂದಾದ ಉತ್ಪಾದನಾ ವಲಯದ ಪಿಎಂಐ(ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್) ಸೆಪ್ಟಂಬರ್ ತಿಂಗಳಿನಲ್ಲಿ 8 ತಿಂಗಳಲ್ಲೇ ಕಡಿಮೆ ಮಟ್ಟ ಮುಟ್ಟಿತ್ತು. ಮಾರುಕಟ್ಟೆಯಲ್ಲಿನ ಬೇಡಿಕೆ ಕುಸಿತ ಇದಕ್ಕೆ ಕಾರಣ. ಬೇಡಿಕೆಯೇ ಇಲ್ಲವೆಂದಾದರೆ ಉತ್ಪಾದನೆಯ ಅಗತ್ಯವಾದರೂ ಏನು?
ಆದರೆ ಇಲ್ಲೂ ನಿರ್ಮಲಾ ಸೀತಾರಾಮನ್ ತರ್ಕವೇ ಬೇರೆ. ಅವರ ಪ್ರಕಾರ, ಅದು ಬೇಡಿಕೆಯ ಸಮಸ್ಯೆಯಲ್ಲ, ಪೂರೈಕೆಯಲ್ಲಿನ ಸಮಸ್ಯೆ.
ಉದ್ಯಮಿಗಳು ಸೋಮಾರಿಗಳಾಗಿದ್ದಾರಂತೆ, ಹೊಸದೇನನ್ನೂ ಮಾಡುತ್ತಿಲ್ಲವಂತೆ,
ಹಣ ಹೂಡುತ್ತಿಲ್ಲವಂತೆ, ಫ್ಯಾಕ್ಟರಿಗಳನ್ನು ಕಟ್ಟುತ್ತಿಲ್ಲವಂತೆ.
ಅವರು ಹೇಳುವುದು ನೋಡಿದರೆ, ದೇಶೀ ಉದ್ಯಮಿಗಳು ತಯಾರಿಲ್ಲ, ಆದರೆ ವಿದೇಶಿ ಉದ್ಯಮಿಗಳು ಫ್ಯಾಕ್ಟರಿ ತೆರೆಯಲು ಕ್ಯೂನಲ್ಲಿ ನಿಂತಿದ್ದಾರೆ ಎನ್ನುವ ಹಾಗಿದೆ.
ಆದರೆ, ಕಳೆದ ವರ್ಷದ ವಿದೇಶಿ ನೇರ ಹೂಡಿಕೆ 10.5 ಬಿಲಿಯನ್ ಡಾಲರ್ ಇತ್ತು. 2007ರಿಂದ ಈವರೆಗಿನ ಹೂಡಿಕೆಯಲ್ಲೇ ಅತಿ ಕಡಿಮೆ. 16 ವರ್ಷಗಳಲ್ಲೇ ಕನಿಷ್ಠ ಮಟ್ಟ. ಇದರ ಬಗ್ಗೆಲ್ಲ ಸಂಸತ್ತಿನಲ್ಲಿ ಪ್ರಶ್ನೆಯೆತ್ತಿದರೆ, ನಮ್ಮ ಆರ್ಥಿಕತೆ ವೇಗವಾಗಿಯೇ ಬೆಳೆಯುತ್ತಿದೆ, ಆದರೆ ಇಲ್ಲೇ ಕೆಲವರಿಗೆ ಅದರ ಬಗ್ಗೆ ಹೊಟ್ಟೆಕಿಚ್ಚು ಎಂದು ರಾಜಕೀಯ ಹೇಳಿಕೆ ಕೊಟ್ಟುಬಿಡುತ್ತಾರೆ ನಿರ್ಮಲಾ ಸೀತಾರಾಮನ್.
ಬಂಡವಾಳ ಬಹಳ ಅಗತ್ಯ. ಎಲ್ಲಿ ಹೆಚ್ಚು ಬಂಡವಾಳ ತೊಡಗಿಸಬೇಕಿದೆ ಎನ್ನುವ ಚರ್ಚೆಗಳಾಗಬೇಕು. ನಿರುದ್ಯೋಗ ಈ ದೇಶದ ಅತಿ ದೊಡ್ಡ ಸಮಸ್ಯೆಯಾಗಿದೆ. ಭಾರತದ ಸುಶಿಕ್ಷಿತ ಯುವಕರು ನಿರುದ್ಯೋಗಿಗಳಾಗಿರುವ ಸ್ಥಿತಿಯೇ ಹೆಚ್ಚು ಎಂಬುದನ್ನು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ)ಯ ವರದಿಗಳು ಹೇಳುತ್ತಿವೆ. ಯಾಕೆಂದರೆ ದೇಶದಲ್ಲಿ ಉದ್ಯೋಗಗಳೇ ಇಲ್ಲ.
ವಾರ್ಷಿಕ ಶೇ.7ರ ಜಿಡಿಪಿ ಬೆಳವಣಿಗೆ ದರವಿದ್ದರೆ ಸಾಲ ತೀರಿಸುವುದೇ ಸಾಧ್ಯವಿಲ್ಲ ಎಂದು ಸಿಟಿ ಗ್ರೂಪ್ ವರದಿ ಹೇಳುತ್ತಿದೆ.
ವಿಶ್ವಸಂಸ್ಥೆ ವರದಿ ಪ್ರಕಾರ, ದೇಶದ ಬಹುಪಾಲು ಜನ ತೀವ್ರ ಬಡತನದಲ್ಲಿದ್ದಾರೆ. ಹಾಗಾಗಿಯೇ, ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎನ್ನುವ ಬಿಜೆಪಿ ಸರಕಾರವೇ 80 ಕೋಟಿ ಜನರಿಗೆ ಉಚಿತ ಪಡಿತರ ಕೊಡುತ್ತಿದೆ.
ಬಡತನದಲ್ಲಿ ಭಾರತದ ನಂತರ ಪಾಕಿಸ್ತಾನ, ಇಥಿಯೋಪಿಯಾ, ನೈಜೀರಿಯಾದಂತಹ ದೇಶಗಳು ಬರುತ್ತವೆ. ನಾವು ಆ ದೇಶಗಳ ಜೊತೆಗೆ ನಿಲ್ಲುವಷ್ಟು ದುರವಸ್ಥೆಗೆ ಮುಟ್ಟಬೇಕೆ?
ನಿರ್ಮಲಾ ಸೀತಾರಾಮನ್ ಅಂತೂ ತಪ್ಪು ತನ್ನದಲ್ಲ ಎಂದು, ಹಿಂದಿನ ಸರಕಾರಗಳ ತಲೆಗೆ ಕಟ್ಟಿಬಿಡುತ್ತಾರೆ. ತೆರಿಗೆಯನ್ನು ಏರಿಸುತ್ತಲೇ ಇದ್ದಾರೆ.ಎಷ್ಟರ ಮಟ್ಟಿಗೆಂದರೆ, ಅವರನ್ನು ‘ವಿತ್ತ ಸಚಿವೆ’ ಎನ್ನುವುದಕ್ಕಿಂತ ಹೆಚ್ಚಾಗಿ ‘ತೆರಿಗೆ ಮಂತ್ರಿ’ ಎಂದೇ ಸೋಷಿಯಲ್ ಮೀಡಿಯಾಗಳು ಗೇಲಿ ಮಾಡುವ ಹಾಗಾಗಿದೆ.
ಶೇ.6 ಅಥವಾ ಶೇ.7ರ ಜಿಡಿಪಿ ಬೆಳವಣಿಗೆ ಈ ದೇಶಕ್ಕೆ ಏನೇನೂ ಸಾಲದು ಎನ್ನುವುದನ್ನು ಪರಿಣಿತರು ಹೇಳುತ್ತಲೇ ಇದ್ದಾರೆ. ಸರಕಾರ ಮಾತ್ರ ಮುಚ್ಚುಮರೆಯ ರಾಜಕಾರಣ ಮಾಡುತ್ತ ಹೊರಟಿದೆ. ಆದರೆ ಎಲ್ಲಿಯವರೆಗೆ ಈ ಆಟ ನಡೆದೀತು?