ರಾಜ್ಯದಲ್ಲೂ ಪರಿಸರ ಮಾಲಿನ್ಯ ಬಿಗಡಾಯಿಸಲಿದೆಯೇ?
ಲಂಡನ್, ದಿಲ್ಲಿ, ಕರ್ನಾಟಕ ಮೂಲದ ವಿವಿಧ ತಜ್ಞರು 14 ವರ್ಷಗಳ ಕಾಲ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ‘ಕರ್ನಾಟಕದಲ್ಲಿ ಹವಾಮಾನ-ನಿರೋಧಕ ಅಭಿವೃದ್ಧಿಯತ್ತ ಪರಿವರ್ತನೆ’ ಎಂಬ ವರದಿಯಲ್ಲಿ ಜಾಗತಿಕವಾಗಿ ಏರುತ್ತಿರುವ ತಾಪಮಾನದಿಂದ ಮತ್ತು ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಭಾರತ ದೇಶ, ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಭಾರೀ ನಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ. ಮನುಷ್ಯರ ಆರೋಗ್ಯದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತಿದ್ದು ಜೀವವೈವಿಧ್ಯತೆ ನಶಿಸುತ್ತಿದೆ. ಕೃಷಿಯಲ್ಲಿ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ 68 ಪ್ರತಿಶತದಷ್ಟು ಕೃಷಿ ಭೂಮಿ ನೀರಿಲ್ಲದೆ, ಅಕಾಲಿಕ ಬರಗಳಿಂದ ನರಳಾಡುತ್ತಾ ಬಂಜರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ ಎಂದು ತಿಳಿಸುತ್ತದೆ.
ಮೊನ್ನೆ ದಿಲ್ಲಿಯಲ್ಲಿ ಬಾಂಗ್ಲಾದೇಶದ ಆಟಗಾರರು ಮಾಲಿನ್ಯ ಹೆಚ್ಚಾಗಿದ್ದ ಕಾರಣ ಅಭ್ಯಾಸ ಮಾಡಲು ಹೊರಬರಲಾಗದೆ ಹೊಟೇಲ್ ರೂಮ್‌ನಲ್ಲಿಯೇ ಕಾಲಕಳೆದಿರುವುದು ದೊಡ್ಡ ಸುದ್ದಿಯಾಗಿದೆ. ಕ್ರಿಕೆಟ್ ಭಾರತೀಯರ ನೆಚ್ಚಿನ ಆಟವಾಗಿದ್ದರಿಂದ ಈ ಸುದ್ದಿ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ವ್ಯಾಪಿಸಿತು. ಈ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ದಿಲ್ಲಿಯ ಆಕಪಕ್ಕದಲ್ಲಿರುವ ಕೃಷಿ ಭೂಮಿಯ ತ್ಯಾಜ್ಯಗಳನ್ನು ಅದರಲ್ಲೂ ಭತ್ತದ ತ್ಯಾಜ್ಯವನ್ನು ಸುಡುವುದರಿಂದ ದಟ್ಟವಾದ ಹೊಗೆ ದಿಲ್ಲಿಯನ್ನು ಆವರಿಸಿರುವುದಾಗಿದೆ.
ಹೀಗೆ ಈ ತ್ಯಾಜ್ಯಗಳನ್ನು ಸುಡುವ ಬದಲು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗುವಂತಹ ಹ್ಯೂಮಸ್ ಅನ್ನು ತಯಾರಿಸುವ ವಿಧಾನವನ್ನು ನಮ್ಮೆಲ್ಲ ರೈತರಿಗೆ ತಿಳಿಸಲೇಬೇಕಾಗಿದೆ. ಏಕೆಂದರೆ ಹ್ಯೂಮಸ್ ಇದ್ದಕಡೆ ಜೀವಾಣುಗಳು, ಸೂಕ್ಷ್ಮಜೀವಾಣುಗಳಂತಹ ಸಹಸ್ರಾರು ಜೀವಿಗಳು ಜೀವಿಸಲು ಯೋಗ್ಯವಾದ ವಾತಾವರಣ ಸೃಷ್ಟಿಯಾಗುವುದರ ಜೊತೆಜೊತೆಗೆ ಮರಗಿಡಗಳು ಅಥವಾ ನಾವು ಬೆಳೆಯುವ ಬೆಳೆಗಳಿಗೆ ಅವಶ್ಯವಿರುವ ಸಸ್ಯಪೋಷಕಾಂಶಗಳು ಒದಗುತ್ತವೆ. ಮಳೆ ನೀರನ್ನು ಹಿಡಿದಿಟ್ಟುಕೊಂಡು ಅಂತರ್ಜಲದ ವೃದ್ಧಿಗೂ ಸಹಕಾರಿಯಾಗುತ್ತದೆ. ಇಂತಹ ಅದ್ಭುತವಾದ ಹ್ಯೂಮಸ್ ಅನ್ನು ಸೃಷ್ಟಿಸಲು ಮರಗಿಡಗಳ ತ್ಯಾಜ್ಯಗಳಿಂದ ಮಾತ್ರವೇ ಸಾಧ್ಯವಾಗುವುದು. ಇದರಿಂದ ವಾಯುಮಾಲಿನ್ಯವನ್ನು ತಡೆಗಟ್ಟಬಹುದು ಹಾಗೂ ಪೌಷ್ಟಿಕ ಯುಕ್ತ ಆಹಾರವನ್ನು ಪಡೆಯಬಹುದು. ಇಂತಹ ಅದ್ಭುತ ಸಂಜೀವಿನಿಯನ್ನು ಬಿಟ್ಟು ರಾಸಾಯನಿಕ ಕೃಷಿಗೆ ಪ್ರೋತ್ಸಾಹಿಸುವ ಬರದಲ್ಲಿ ತ್ಯಾಜ್ಯಗಳನ್ನು ಸುಡುವ ಪರಿಪಾಠ ಹೇಳಿಕೊಟ್ಟು ತಾಪಮಾನ ಏರಿಕೆಗೆ ಹಾಗೂ ಹವಾಮಾನ ಬದಲಾವಣೆಗೆ ಕಾರಣವಾಗಿದೆ ನಮ್ಮ ಆಧುನಿಕ ಕೃಷಿ ಪದ್ಧತಿ.
ಹೀಗಿರುವಾಗಲೇ ದೀಪಾವಳಿ ಹಬ್ಬ ಹತ್ತಿರವಾಗುತ್ತಿದೆ. ನನಗೆ ದೀಪಾವಳಿ ಹಬ್ಬ ನೆನಪಾಗುವುದು ನಾಲ್ಕೈದು ದಿನದವರೆಗೆ ಧೂಳು, ಹೊಗೆ ತುಂಬುತ್ತಾ ನೂರಾರು ಜನರ ಪ್ರಾಣಹಾನಿಯನ್ನು ಮಾಡುತ್ತಿರುವ ದೃಶ್ಯಗಳಿಂದ. ತಾಪಮಾನ ಏರಿಕೆಗೆ ಕಾರಣವಾಗಿರುವ ಶಾಖವರ್ಧಕ ಅನಿಲಗಳ ಉತ್ಪಾದನೆಯಲ್ಲಿ ಪಟಾಕಿಗಳ ಪಾಲು ಪ್ರತಿವರ್ಷವೂ ಸರಿಸುಮಾರು 50-60 ಸಾವಿರ ಟನ್‌ನಷ್ಟು ಎಂದು ಅಂದಾಜಿಸಲಾಗುತ್ತಿದೆ. ಇದರಲ್ಲಿ ಪಟಾಕಿಗಳನ್ನು ತಯಾರಿಸಲು ಸಲ್ಫರ್, ಪಾಸ್ಪರಸ್, ಕಲ್ಲಿದ್ದಲು, ಕಬ್ಬಿಣ, ತಾಮ್ರ, ಪೊಟ್ಯಾಶಿಯಂ ನೈಟ್ರೇಟ್, ಸಲ್ಫರ್ ಡೈಆಕ್ಸೈಡ್‌ನಂತಹ ಹಲವಾರು ರಾಸಾಯನಿಕಗಳು ಒಳಗೊಂಡತೆ ಪೇಪರ್, ಬಣ್ಣ ಇತ್ಯಾದಿ ಒಳಗೊಂಡಿದೆ.
ಇನ್ನು ಈ ಪಟಾಕಿಗಳನ್ನು ತಯಾರಿಸಲು ಅವಶ್ಯವಿರುವ ಪದಾರ್ಥಗಳನ್ನು ಗಣಿಗಾರಿಕೆಯ ಮೂಲಕ ಹೊರತೆಗೆದು, ಕಾರ್ಖಾನೆಗಳಲ್ಲಿ ತಯಾರಿಸಿ, ವಿದ್ಯುತ್ ಬಳಸುವಾಗ ಬಿಡುಗಡೆ ಆಗುವ ಅನಿಲಗಳದ್ದು ಬೇರೆಯದೇ ಲೆಕ್ಕ ಇರುತ್ತದೆ. ಬಹಳ ಮುಖ್ಯವಾಗಿ ಈ ಪಟಾಕಿಗಳಿಂದ ವಿವಿಧ ಬಣ್ಣಗಳು ಹೊರಹೊಮ್ಮಲು, ಉದಾಹರಣೆಗೆ: ಪಿಂಕ್ ಬಣ್ಣ ಬರಲು ಲೀಥಿಯಮ್, ಕೇಸರಿ ಅಥವಾ ಹಳದಿ ಬಣ್ಣ ಬರಲು ಸೋಡಿಯಂ, ನೀಲಿ ಅಥವಾ ಹಸಿರು ಬಣ್ಣ ಬರಲು ಬೇರಿಯಂ ಮತ್ತು ತಾಮ್ರದ ಲವಣಗಳನ್ನು ಬಳಸಲಾಗುತ್ತದೆ. ಹೀಗೆ ಬಳಸುವ ವಿವಿಧ ಪದಾರ್ಥಗಳು ರಾಸಾಯನಿಕ ಕ್ರಿಯೆಗೆ ಒಳಪಟ್ಟು ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್‌ನಂತಹ ಅನಿಲಗಳು ಬಿಡುಗಡೆಯಾಗಿ ವಾತಾವರಣ ಸೇರುತ್ತವೆ. ಹಾಗೆಯೇ ಕೆಲವು ಪಟಾಕಿಗಳನ್ನು ಬಳಸಿದ ನಂತರ ತಾಮ್ರ, ಲವಣಗಳಂತಹವು ಸಂಪೂರ್ಣವಾಗಿ ಸುಟ್ಟು ಹೋಗಿರುವುದಿಲ್ಲ. ಇವು ಭೂಮಿಯನ್ನು, ನೀರನ್ನು ಸೇರಿ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತವೆ.
ಈಗಾಗಲೇ ಹೆಚ್ಚಾದ ತಾಪಮಾನದಿಂದ ಮತ್ತು ಹವಾಮಾನದಲ್ಲಾದ ಬದಲಾವಣೆಯಿಂದ ಮಣ್ಣು, ಗಾಳಿ, ನೀರು, ವಾತಾವರಣ ಎಲ್ಲವೂ ಬಿಸಿಯಾಗುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳು ಒಟ್ಟೊಟ್ಟಿಗೆ ಸಂಭವಿಸುತ್ತಿವೆ. ಸೈಕ್ಲೋನ್‌ಗಳ ಹಾವಳಿ ಹೆಚ್ಚಾಗಿದೆ. ಬಿಸಿ ಅಲೆಗಳ ಪ್ರಮಾಣ ಹೆಚ್ಚಾಗಿದೆ. ಕಾಡು ಬೆಂಕಿಗೆ ಆಹುತಿಯಾಗುತ್ತಿದೆ. ಸಮುದ್ರದಲ್ಲಿ ಆಮ್ಲೀಯತೆ ಹೆಚ್ಚಾಗಿದೆ. ಹಿಮಪರ್ವತಗಳು ಕರಗುತ್ತಿವೆ. ಇಷ್ಟು ಸಾಲದೆಂಬಂತೆ ಲಂಡನ್, ದಿಲ್ಲಿ, ಕರ್ನಾಟಕ ಮೂಲದ ವಿವಿಧ ತಜ್ಞರು 14 ವರ್ಷಗಳ ಕಾಲ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ‘ಕರ್ನಾಟಕದಲ್ಲಿ ಹವಾಮಾನ-ನಿರೋಧಕ ಅಭಿವೃದ್ಧಿಯತ್ತ ಪರಿವರ್ತನೆ’ ಎಂಬ ವರದಿಯಲ್ಲಿ ಜಾಗತಿಕವಾಗಿ ಏರುತ್ತಿರುವ ತಾಪಮಾನದಿಂದ ಮತ್ತು ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದ ಭಾರತ ದೇಶ, ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಭಾರೀ ನಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ. ಮನುಷ್ಯರ ಆರೋಗ್ಯದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತಿದ್ದು ಜೀವವೈವಿಧ್ಯತೆ ನಶಿಸುತ್ತಿದೆ. ಕೃಷಿಯಲ್ಲಿ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ 68 ಪ್ರತಿಶತದಷ್ಟು ಕೃಷಿ ಭೂಮಿ ನೀರಿಲ್ಲದೆ, ಅಕಾಲಿಕ ಬರಗಳಿಂದ ನರಳಾಡುತ್ತಾ ಬಂಜರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ ಎಂದು ತಿಳಿಸುತ್ತದೆ.
1970ರಿಂದ 2021ರ ವರೆಗೆ ಸುಮಾರು 11,718 ಹವಾಮಾನ ವೈಪರೀತ್ಯಗಳು ಸಂಭವಿಸಿವೆ ಎಂದು ವಿಶ್ವ ಸಂಸ್ಥೆಯ ಹವಾಮಾನ ವಿಭಾಗದಿಂದ ಪ್ರಕಟವಾದ ವರದಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಪ್ರತಿವರ್ಷವೂ ಸರಿಸುಮಾರು 70 ಲಕ್ಷ ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಅಲ್ಲದೆ ಪ್ರಪಂಚದಾದ್ಯಂತ ಸುಮಾರು 99 ಪ್ರತಿಶತದಷ್ಟು ಜನರು ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ತಿಳಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ವೈಪರೀತ್ಯಗಳು, ಅದರಿಂದಾಗುವ ಸಾವು-ನೋವುಗಳು ಹಿಂದೆಂದೂ ಕಾಣದ ರೀತಿಯಲ್ಲಿ ಇರುತ್ತವೆ ಎಂದು ಎಚ್ಚರಿಸಲಾಗುತ್ತಿದೆ. ಇಂತಹ ವಾತಾವರಣದಲ್ಲಿ ಮನುಷ್ಯರು ಎಂದೆಂದಿಗೂ ಈ ಭೂಮಿಯ ಮೇಲೆ ಜೀವಿಸಲು ಸಾಧ್ಯವೇ ಆಗುವುದಿಲ್ಲವೇನೋ? ಎನ್ನುವ ಆತಂಕ ವಿಜ್ಞಾನಿಗಳದ್ದು. ಇಂತಹ ಅದೆಷ್ಟೋ ಪ್ರಶ್ನೆಗಳಿಗೆ ಸರಕಾರ ಹಾಗೂ ಕೃಷಿ ಇಲಾಖೆಯವರೇ ಉತ್ತರವನ್ನು ತಿಳಿಸಬೇಕಾಗಿದೆ.