ಪೊರಕೆ ಮತ್ತೆ ದಿಲ್ಲಿ ಗದ್ದುಗೆ ಹಿಡಿಯುವುದೇ?
ದಿಲ್ಲಿಯ ಬಹಳಷ್ಟು ಕ್ಷೇತ್ರಗಳಲ್ಲಿ ಪೂರ್ವಾಂಚಲಿಗಳ ಪ್ರಾಬಲ್ಯವಿದೆ. ಏಳೆಂಟು ಕ್ಷೇತ್ರಗಳಲ್ಲಿ ಸಿಖ್ಖರು ಬಹುಸಂಖ್ಯಾತರು. ಬಾಲ್ಮೀಕಿಗಳು ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡದ ಜನರೂ ಗಣನೀಯ ಪ್ರಮಾಣದಲ್ಲಿದ್ದಾರೆ. ಕೆಲವೆಡೆ ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕಳೆದ ಎರಡು ದಶಕದಲ್ಲಿ ಮಧ್ಯಮ ವರ್ಗವೂ ಸೃಷ್ಟಿಯಾಗಿದೆ. ಈ ಸಮುದಾಯದ ಒಲವು- ನಿಲುವುಗಳೇ ಚುನಾವಣೆ ಫಲಿತಾಂಶವನ್ನು ನಿರ್ಧರಿಸಲಿದೆ. ಹೀಗಾಗಿ ಈ ವರ್ಗದ ಮತದಾರರನ್ನು ಸೆಳೆಯಲು ಕಾಂಗ್ರೆಸ್, ಎಎಪಿ ಮತ್ತು ಬಿಜೆಪಿ ಪ್ರಯತ್ನಿಸುತ್ತಿದೆ. ಅಲ್ಪ ಸಂಖ್ಯಾತ ಮುಸ್ಲಿಮರು ರಾಜಕೀಯ ಪರಿಸ್ಥಿತಿ ಅವಲೋಕಿಸಿ ತಮ್ಮ ಹಕ್ಕು ಚಲಾಯಿಸುವ ಸಾಧ್ಯತೆಯಿದೆ.;

ದಿಲ್ಲಿ ವಿಧಾನಸಭೆ ಚುನಾವಣೆಗೆ ಉಳಿದಿರುವುದು ಇನ್ನು ಮೂರು ದಿನ ಮಾತ್ರ. ಇವು ನಿರ್ಣಾಯಕ ದಿನಗಳೂ ಹೌದು. ಕಡೇ ಮೂರು ದಿನ ನಡೆಯುವ ‘ರಾಜಕೀಯ ಚದುರಂಗದಾಟ’ವೇ ಚುನಾವಣೆಯ ದಿಕ್ಕುದೆಸೆಯನ್ನು ಬದಲಿಸಿಬಿಡಬಹುದು. ಬೇಲಿ ಮೇಲೆ ಕೂತವರು ಮತ್ತು ಗೊಂದಲದಲ್ಲಿರುವ ಮತದಾರರ ಮನಸ್ಸನ್ನು ಎತ್ತ ಬೇಕಾದರೂ ವಾಲಿಸಬಹುದು.
ಹರ್ಯಾಣದಲ್ಲಿ ಗೆಲುವಿನ ರುಚಿ ನೋಡಿರುವ ಬಿಜೆಪಿ ದಿಲ್ಲಿಯ ಗದ್ದುಗೆ ಹಿಡಿಯಲು ಕಸರತ್ತು ನಡೆಸುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಆಮ್ ಆದ್ಮಿಗಳು ಹೋರಾಡುತ್ತಿದ್ದಾರೆ. ಕುಸಿದಿರುವ ನೆಲೆ ಮರು ಸ್ಥಾಪಿಸಲು ಕಾಂಗ್ರೆಸ್ ಹೆಣಗಾಡುತ್ತಿದೆ. ಈ ಮಧ್ಯೆ, ಜನ ಯಾವ ಪಕ್ಷದ ಕೈ ಹಿಡಿಯುವರು ಎಂಬ ಅಂಶ ಕುತೂಹಲ ಹುಟ್ಟಿಸಿದೆ. ಇವೆರಡೂ ಪಕ್ಷಗಳ ಜಿದ್ದಾಜಿದ್ದಿ ನಡುವೆ ಕಾಂಗ್ರೆಸ್ ಪರಿಸ್ಥಿತಿ ಏನಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿವೆ.
ಆಮ್ ಆದ್ಮಿ ಪಕ್ಷಕ್ಕೆ ಇದು ಸಂಕಷ್ಟದ ಕಾಲ. ಭ್ರಷ್ಟಾಚಾರರಹಿತ, ಸ್ವಚ್ಛ ಆಡಳಿತದ ಭರವಸೆ ಕೊಟ್ಟು 2012ರಲ್ಲಿ ಹುಟ್ಟಿದ ಈ ಪಕ್ಷ, ಭ್ರಷ್ಟಾಚಾರ ಆರೋಪದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಅಬಕಾರಿ ನೀತಿ ಅಕ್ರಮದ ಆರೋಪದಲ್ಲಿ ಬಂಧಿತರಾಗಿದ್ದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದು. ಈಗ ಮತದಾರರು ಅವರನ್ನು ಹೇಗೆ ನೋಡಬಹುದು ಎಂಬ ಪ್ರಶ್ನೆ ಎದ್ದಿದೆ.
ದಿಲ್ಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಮತದಾನ ನಡೆಯಲಿದೆ. 8ರಂದು ಫಲಿತಾಂಶ ಪ್ರಕಟವಾಗಲಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಚುನಾವಣೆ ಎದುರಿಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸ್ಥಳೀಯವಾಗಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಲ್ಲ. ಯಥಾ ಪ್ರಕಾರ ಪ್ರಧಾನಿ ಮೋದಿ ನಾಮಬಲದ ಮೇಲೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರನ್ನು ಅದು ನೆಚ್ಚಿಕೊಂಡಂತಿದೆ. ಅನಾರೋಗ್ಯದ ಕಾರಣ ರಾಹುಲ್ ಗಾಂಧಿ ಹೆಚ್ಚು ಪ್ರಚಾರ ನಡೆಸಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರಣಕ್ಕೆ ದಲಿತರು ಬೆಂಬಲಿಸಬಹುದು ಎಂದು ನಿರೀಕ್ಷಿಸಿದೆ. ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಎಲ್ಲ ಕಡೆಗಳಿಂದ ನಾಯಕರನ್ನು ಪ್ರಚಾರಕ್ಕೆ ಕರೆಸಿಕೊಂಡಿದೆ.
ಹದಿನಾಲ್ಕು ವರ್ಷಗಳ ಹಿಂದೆ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ ಎರಡು ಪಕ್ಷಗಳಿಗೆ ಲಾಭ ಮಾಡಿತು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಹಾಗೂ ರಾಜ್ಯದಲ್ಲಿ ಎಎಪಿಗೆ ಅನುಕೂಲವಾಯಿತು. ಎರಡೂ ಕಡೆ ಕಾಂಗ್ರೆಸ್‌ಗೆ ನಷ್ಟವಾಯಿತು. ಅಲ್ಲಿಂದ ‘ಕೈ’ ನಾಯಕರ ‘ವನವಾಸ’ ಆರಂಭವಾಗಿದ್ದು.
ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸಿಕ್ಕ ಜನ ಬೆಂಬಲ ನೋಡಿ ಕೇಜ್ರಿವಾಲ್ ಮತ್ತು ಅವರ ಗೆಳೆಯರು ರಾಜಕಾರಣಕ್ಕೆ ಪ್ರವೇಶಿಸುವ ತೀರ್ಮಾನ ಮಾಡಿದ್ದು. ಎಎಪಿ ಅಸ್ತಿತ್ವಕ್ಕೆ ಬಂದ ಬಳಿಕ 2013ರಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆದ್ದಿದ್ದು 28 ಸ್ಥಾನಗಳನ್ನು. ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 8 ಸ್ಥಾನಗಳು. ಬಿಜೆಪಿ 32 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದಕ್ಕೂ ಮುನ್ನ 43 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ಶೀಲಾ ದೀಕ್ಷಿತ್ ಅವರ ನೇತೃತ್ವದಲ್ಲಿ ಸರಕಾರ ನಡೆಸಿತ್ತು.
ಅನೇಕ ವರ್ಷ ಶೀಲಾ ದೀಕ್ಷಿತ್ ದಿಲ್ಲಿಯ ಮುಖ್ಯಮಂತ್ರಿ ಆಗಿದ್ದರು.
ಮೊದಲ ಪ್ರಯತ್ನದಲ್ಲೇ ಕೇಜ್ರಿವಾಲ್, ಕಾಂಗ್ರೆಸ್‌ನ ಬೇಷರತ್ ಬೆಂಬಲದಿಂದ ಮುಖ್ಯಮಂತ್ರಿ ಆದರೂ ಸರಕಾರ ಹೆಚ್ಚು ಕಾಲ ಬಾಳಲಿಲ್ಲ. 2014ರ ಫೆಬ್ರವರಿ ತಿಂಗಳಲ್ಲಿ ಕೇಜ್ರಿವಾಲ್ ರಾಜೀನಾಮೆ ಕೊಟ್ಟರು. 2015ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳಲ್ಲಿ ಗೆದ್ದು ಬೀಗಿತು. ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸಿಕ್ಕಿದ್ದು ಕೇವಲ ಮೂರು ಸ್ಥಾನ. 2020ರ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷ 62 ಸ್ಥಾನ ಪಡೆಯಿತು. ಬಿಜೆಪಿ 8 ಸ್ಥಾನ ಗೆದ್ದಿತು. ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್ ಸಂಪಾದನೆ ಶೂನ್ಯ. ಅಷ್ಟೇ ಅಲ್ಲ, ಅದರ ಶೇಕಡಾವಾರು ಮತ ಗಳಿಕೆಯೂ ಕಡಿಮೆ ಆಯಿತು.
2015 ಮತ್ತು 2020ರಲ್ಲಿ ಎಎಪಿ ಶೇ. 54.33, 53.57, ಬಿಜೆಪಿ ಶೇ. 32.2, 38.51 ಮತಗಳನ್ನು ಪಡೆಯಿತು. ಕಾಂಗ್ರೆಸ್ ಕ್ರಮವಾಗಿ ಶೇ. 9.7 ಮತ್ತು 4.26ರಷ್ಟು ಮಾತ್ರ ಮತ ಗಳಿಸಲು ಶಕ್ತವಾಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ. 56.85 ಮತಗಳನ್ನು ಪಡೆದು ಎಲ್ಲ 7 ಕ್ಷೇತ್ರಗಳನ್ನು ಬಾಚಿಕೊಂಡಿತು. 2ನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ಗೆ ಶೇ. 22.63 ಮತಗಳು ಬಂದರೂ ಒಂದೇ ಒಂದು ಕ್ಷೇತ್ರ ಗೆಲ್ಲಲು ಆಗಲಿಲ್ಲ. ಮೂರನೇ ಸ್ಥಾನದಲ್ಲಿದ್ದ ಎಎಪಿ ಶೇ. 18.2ರಷ್ಟು ಮತ ಪಡೆಯಿತು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡಿದ್ದ ಎಎಪಿ ಹಾಗೂ ಕಾಂಗ್ರೆಸ್ ಈಗ ಪರಸ್ಪರ ಎದುರಾಳಿ. ಬಿಜೆಪಿ ಮತ್ತು ಕಾಂಗ್ರೆಸ್, ಕೇಜ್ರಿವಾಲ್ ಅವರನ್ನೇ ಗುರಿಯಾಗಿ ಇಟ್ಟುಕೊಂಡು ಪ್ರಚಾರ ಮಾಡುತ್ತಿವೆ. ಕೇಜ್ರಿವಾಲ್ ಅವರೂ ಕಾಂಗ್ರೆಸ್ ಪಕ್ಷವನ್ನೇ ಟೀಕಿಸುತ್ತಿದ್ದಾರೆ. ‘‘ಮೋದಿ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಮೆದುವಾಗಿ ದ್ದಾರೆ’’ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
ಈ ಹಿಂದಿನ ಚುನಾವಣೆಗಳಲ್ಲಿ ‘ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಕೇಜ್ರಿವಾಲ್’ ಎಂಬ ಗುಪ್ತ ನಿಲುವನ್ನು ಆರೆಸ್ಸೆಸ್ ಹೊಂದಿತ್ತು. ಹೀಗಾಗಿಯೇ ಮೂರು ಸಲ ಕೇಜ್ರಿವಾಲ್ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಈ ಸಲವೂ ಸಂಘ ಪರಿವಾರದ ನಾಯಕರು ಒಳಗೊಳಗೇ ಎಎಪಿ ಬೆಂಬಲಿಸಿದರೆ ಕೇಜ್ರಿವಾಲ್ ಅಧಿಕಾರ ಹಿಡಿಯಬಹುದು ಎಂಬುದು ದಿಲ್ಲಿಯ ಕೆಲವು ಹಿರಿಯ ಪತ್ರಕರ್ತರ ಅಭಿಪ್ರಾಯ.
ವಿಧಾನಸಭೆಗೆ ಈ ಹಿಂದೆ ನಡೆದ ಚುನಾವಣೆ ವೇಳೆ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಆಗಿದ್ದ ಮನೀಷ್ ಸಿಸೋಡಿಯ ಮತ್ತು ಕೆಲ ಸಚಿವರು ಕಳಂಕಿತರಾಗಿರಲಿಲ್ಲ. ಈಗ ಭ್ರಷ್ಟಾಚಾರ ಆರೋಪ ಅಂಟಿಕೊಂಡಿದೆ. ಅಲ್ಲದೆ, 12 ವರ್ಷ ಸರಕಾರ ನಡೆಸಿದ ಎಎಪಿಗೆ ಆಡಳಿತ ವಿರೋಧಿ ಅಲೆ ಇದ್ದಂತಿದೆ. ಈ ಕಾರಣಕ್ಕೆ ಬಿಜೆಪಿ ಆಕ್ರಮಣಕಾರಿಯಾಗಿ ಹೊರಟಿದೆ. ಹೇಗಾದರೂ ಅಧಿಕಾರ ಹಿಡಿಯಲೇಬೇಕು ಎಂದು ಹಟ ತೊಟ್ಟಂತಿದೆ. ಕೇಜ್ರಿವಾಲ್ ಪಕ್ಷವನ್ನು ಮಣಿಸಲು ಎಲ್ಲ ತಂತ್ರಗಳನ್ನು ಮಾಡುತ್ತಿದೆ. ಬಿಜೆಪಿ ವೇಗಕ್ಕೆ ಕಡಿವಾಣ ಹಾಕಲು ಎಎಪಿ ಭರಪೂರ ಭರವಸೆಗಳನ್ನು ನೀಡಿದೆ. ಆದರೆ, ಜನರಿಗೆ ಕೊಟ್ಟಿರುವ ಭರವಸೆಗಳ ಜಾರಿ ಸಾಧ್ಯವೇ ಎಂಬುದು ಬೇರೆ ವಿಚಾರ. ದಿಲ್ಲಿಯ ಮತದಾರರು ಅದರಲ್ಲೂ ಮಹಿಳೆಯರು ಹಾಗೂ ಜುಗ್ಗಿ- ಜೋಪಡಿ ಜನ ಕೇಜ್ರಿವಾಲ್ ಅವರ ಮೇಲೆ ಅತಿಯಾದ ವಿಶ್ವಾಸ ಹೊಂದಿದ್ದಾರೆ. ಇದು ಮತಗಳಾಗಿ ಪರಿವರ್ತನೆಯಾದರೆ ಎಎಪಿ ಗೆಲುವು ನಿಶ್ಚಿತ.
‘‘ಕಳೆದ 12 ವರ್ಷದಲ್ಲಿ ತನಗಿರುವ ಸೀಮಿತ ಅಧಿಕಾರದಲ್ಲೇ ಎಎಪಿ ಸರಕಾರ ಒಳ್ಳೆಯ ಕೆಲಸ ಮಾಡಿದೆ. ಅದರಲ್ಲೂ ಶಿಕ್ಷಣ, ಆರೋಗ್ಯ, ಸಾರಿಗೆ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಜನರಿಗೆ ಉಚಿತ ವಿದ್ಯುತ್ ಕೊಡುತ್ತಿದೆ. ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭೌತಿಕವಾಗಿ ಅಷ್ಟೇ ಅಲ್ಲ, ಬೌದ್ಧಿಕವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯಾಗಿದೆ. ಎಲ್ಲೆಡೆ ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ದಿಲ್ಲಿ ಸರಕಾರದ ಅಧೀನದಲ್ಲಿರುವ ಆಸ್ಪತ್ರೆಗಳನ್ನು ಸುಧಾರಿಸಲಾಗಿದೆ. ಸಾರಿಗೆ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಇವು ಕೇಜ್ರಿವಾಲ್ ಅವರನ್ನು ಜನ ಹೆಚ್ಚು ನಂಬುವಂತೆ ಮಾಡಿವೆ’’ ಎಂದು ಸ್ಥಳೀಯರು ಹೇಳುತ್ತಾರೆ.
ಆದರೂ ದಿಲ್ಲಿಯ ಭಾಗಶಃ ಮತದಾರರು ಮೋದಿ ಅವರ ಮೇಲಿನ ವ್ಯಾಮೋಹ ಬಿಟ್ಟಿಲ್ಲ. 11 ವರ್ಷ ಕಳೆದರೂ ‘ಮೋದಿ ಮೋಡಿ’ಯಿಂದ ಹೊರ ಬಂದಿಲ್ಲ. ಮೋದಿಯವರ ಬಗ್ಗೆ, ಅವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತು ಆಡುತ್ತಾರೆ. ‘ದೇಶಕ್ಕೆ ಮೋದಿ, ರಾಜ್ಯಕ್ಕೆ ಕೇಜ್ರಿ’ ಎಂಬ ಅಭಿಪ್ರಾಯವನ್ನು ಅಲ್ಲಲ್ಲಿ ಮತದಾರರು ವ್ಯಕ್ತಪಡಿಸುತ್ತಿದ್ದಾರೆ.
ಪೂರ್ವಾಂಚಲ ಜನರ ಪ್ರಾಬಲ್ಯವಿರುವ ಕಡೆ ಎಎಪಿ ಜನಪ್ರಿಯತೆಗೆ ಕಡಿವಾಣ ಹಾಕಲು ಬಿಜೆಪಿ ಉತ್ತರ ಪ್ರದೇಶದಿಂದ ನಾಯಕರ ದಂಡನ್ನೇ ಪ್ರಚಾರಕ್ಕೆ ಕರೆಸಿದೆ. ದಿಲ್ಲಿಯಲ್ಲಿ ಕಳೆದುಹೋಗಿರುವ ನೆಲೆ ಕಂಡುಕೊಳ್ಳಲು ಕಾಂಗ್ರೆಸ್ ತೀವ್ರವಾಗಿ ಹೋರಾಡುತ್ತಿದೆ. ವಿಶೇಷವಾಗಿ ಮುಸ್ಲಿಮ್ ಪ್ರಾಬಲ್ಯವಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಒಂದೆರಡು ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಎಐಎಂಐಎಂ ಕಣದಲ್ಲಿದೆ. ಅಕಸ್ಮಾತ್ ಕಾಂಗ್ರೆಸ್ ಮತಗಳಿಕೆ ಪ್ರಮಾಣ ಹಿಂದಿನ ವಿಧಾನಸಭೆ ಚುನಾವಣೆಗಿಂತ ಹೆಚ್ಚಾದರೆ ಎಎಪಿಗೆ ಅಡ್ಡಿಯಾಗಬಹುದು ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.
ದಿಲ್ಲಿ ವಿಧಾನಸಭೆ ಚುನಾವಣೆ ಎಎಪಿ ಸರಕಾರದ ಮೇಲಿನ ಜನಮತ ಆಗಲಿದೆ. ಎಎಪಿ ಗೆದ್ದರೆ ಕೇಜ್ರಿವಾಲ್ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ. ಸೋತರೆ ಸಂಕಷ್ಟ ಎದುರಾಗಲಿದೆ. ಅಕಸ್ಮಾತ್ ಸರಳ ಬಹುಮತ ಬಂದರೆ ‘ಆಪರೇಷನ್ ಕಮಲ’ದ ಭೀತಿ ಎದುರಾಗಬಹುದು. 50 ಕ್ಷೇತ್ರಗಳ ಆಸುಪಾಸಿನಲ್ಲಿ ಗೆದ್ದರೆ ಸುಭದ್ರ ಸರಕಾರ ಕೊಡಬಹುದು. ಕಾಂಗ್ರೆಸ್ ಶೇಕಡಾವಾರು ಮತಗಳಿಕೆ ಹೆಚ್ಚಾದರೆ ಎಎಪಿ ದಾರಿಗೆ ಅಡ್ಡಿ ಆಗಬಹುದು ಎಂದು ಕೇಂದ್ರ ಸರಕಾರದ ನಿವೃತ್ತ ಅಧಿಕಾರಿ ಮುರಳೀಧರ ನಾಯಕ್ ಹೇಳುತ್ತಾರೆ.
ದಿಲ್ಲಿಯ ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಎಎಪಿ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ನಡೆಯುವಂತೆ ಕಾಣುತ್ತಿದೆ. ಕಡೇ ಗಳಿಗೆಯಲ್ಲಿ ನೆಲ ಕಚ್ಚಿರುವ ಕಾಂಗ್ರೆಸ್ ಮೈ ಕೊಡವಿ ಎದ್ದರೆ ತ್ರಿಕೋನ ಸ್ಪರ್ಧೆ ನಡೆಯಬಹುದು. ಆದರೆ ಸದ್ಯಕ್ಕಂತೂ ಚುನಾವಣೆಯಲ್ಲಿ ಹೀಗೇ ಆಗಬಹುದು ಎಂದು ಹೇಳುವುದು ಕಷ್ಟ.