ಎಂಎಸ್‌ಪಿ ಜಾರಿಯಾದರೆ ಸರಕಾರ ದಿವಾಳಿಯಾಗಿಬಿಡುತ್ತದೆಯೇ?
ಎಂಎಸ್‌ಪಿಯನ್ನು ಸರಿಯಾಗಿ ಜಾರಿಗೊಳಿಸಿದರೆ ಅದರಿಂದ ಹಲವು ಅನುಕೂಲಗಳಿವೆ. ಸರಕಾರ ಹೆಚ್ಚು ಬಂಡವಾಳ ಹೂಡುತ್ತದೆ. ಹೂಡಿಕೆ ಹೆಚ್ಚುತ್ತದೆ. ಬೆಲೆಗಳು ಸ್ಥಿರವಾಗುತ್ತದೆ. ಎಂಎಸ್‌ಪಿಯಿಂದ ರೈತರಿಗಿಂತ ಆರ್ಥಿಕತೆಗೆ ಹೆಚ್ಚು ಅನುಕೂಲವಾಗುತ್ತದೆ. ಹಾಗಾಗಿ ಸರಕಾರ ಇದನ್ನು ಐದು ವರ್ಷಕ್ಕೆ, ಕೆಲವು ಬೆಳೆಗಳಿಗೆ ಹೀಗೆಲ್ಲಾ ಸೀಮಿತವಾಗಿ ಯೋಚಿಸದೆ ಇದನ್ನೊಂದು ಆರ್ಥಿಕ ಸ್ಥಿರತೆಯ ಕಡೆಗಿನ ಪರಿಣಾಮಕಾರಿ ಕ್ರಮವಾಗಿ ಯೋಚಿಸಬೇಕು. ರೈತರು ಇದಕ್ಕಾಗಿ ಒತ್ತಾಯಿಸುವ ಮೂಲಕ ಕೃಷಿ ಆರ್ಥಿಕತೆಯ ಬಗ್ಗೆ ಯೋಚಿಸುವಂತೆ ಮಾಡಿದ್ದಾರೆ.
ರೈತರು ಚಳವಳಿ ಮಾಡುತ್ತಿದ್ದಾರೆ. ಎಂಎಸ್‌ಪಿಗೆ ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಕಾನೂನು ಖಾತರಿ ಬೇಕು ಅಂತಿದ್ದಾರೆ. ಎಂಎಸ್‌ಪಿ ಅಂದರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ 1960ರಲ್ಲಿ ಪ್ರಾರಂಭವಾಯಿತು. ರೈತರ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಯುಪಿಎ ಸರಕಾರ ಎಂ.ಎಸ್. ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕೃಷಿ ಆಯೋಗವನ್ನು ರಚಿಸಿತ್ತು. ಅದು ಐದು ವರದಿಗಳನ್ನು ಸರಕಾರಕ್ಕೆ ಸಲ್ಲಿಸಿತ್ತು.
ಅದರಲ್ಲಿ ಎಂಎಸ್‌ಪಿಯನ್ನು ನಿಗದಿಪಡಿಸುವುದಕ್ಕೆ ಸಮಗ್ರ ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕೆಂಬ ಉಲ್ಲೇಖ ಬರುತ್ತದೆ. ಎಂಎಸ್‌ಪಿ ಲೆಕ್ಕಾಚಾರ ಮಾಡುವಾಗ ಸಮಗ್ರ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಮೊದಲ ಬಾರಿಗೆ ಪ್ರಸ್ತಾಪನೆಗೆ ಬರುವುದು ಅಭಿಜಿತ್ ಸೇನ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾದ ಲಾಂಗ್‌ಟೈಮ್ ಗ್ರೈನ್ ಪಾಲಿಸಿ ವರದಿಯಲ್ಲಿ. ಸಮಗ್ರ ವೆಚ್ಚ ಅನ್ನುವಾಗ ಅದರಲ್ಲಿ ಉಳುಮೆ, ಬಿತ್ತನೆ, ಬೀಜ, ಗೊಬ್ಬರದ ವೆಚ್ಚ, ರೈತರ ಹಾಗೂ ಕುಟುಂಬದ ಸದಸ್ಯರ ದುಡಿಮೆ ಮತ್ತು ಭೂಮಿಯ ಗೇಣಿಯೂ ಸೇರಿರುತ್ತದೆ. ಇದನ್ನು ಸಿ2 ಎಂದು ಕರೆಯಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಶೇ. 50 ಅನ್ನು ಸೇರಿಸಿ ಎಂಎಸ್‌ಪಿಯನ್ನು ಲೆಕ್ಕ ಹಾಕಬೇಕೆಂದು ಅಭಿಜಿತ್ ಸೇನ್ ವರದಿಯಲ್ಲಿ ಸಲಹೆ ನೀಡ ಲಾಗಿದೆ. ಇದನ್ನೇ ಸ್ವಾಮಿನಾಥನ್ ವರದಿಯೂ ಪುನರುಚ್ಚರಿಸಿದೆ. ವಾಜಪೇಯಿ ಸರಕಾರ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು.
ಪ್ರತಿ ಸರಕಾರವೂ ವಿವಿಧ ಬೆಳೆಗಳಿಗೆ ಎಂಎಸ್‌ಪಿಯನ್ನು ಪ್ರತಿವರ್ಷ ಗೆಜೆಟ್ಟಿನಲ್ಲಿ ಪ್ರಕಟಿಸುತ್ತದೆ. ಆದರೆ ಸರಕಾರ ಅದನ್ನು ಜಾರಿಗೊಳಿಸಬೇಕಾಗಿಲ್ಲ, ಅದನ್ನು ಜಾರಿಗೊಳಿಸುತ್ತಲೂ ಇಲ್ಲ. ಸರಕಾರಕ್ಕೆ ಅದು ಕಡ್ಡಾಯವಾಗಿಲ್ಲ. ಹಾಗಾಗಿ ರೈತರು ಅದಕ್ಕೆ ಕಾನೂನಿನ ಖಾತರಿ ನೀಡಿ ಅಂತ ಒತ್ತಾಯಿಸುತ್ತಿದ್ದಾರೆ. ಕಾನೂನಿನ ಬಲ ಇದ್ದರೆ ಅದನ್ನು ಜಾರಿಗೆ ತರುವುದು ಸರಕಾರಕ್ಕೆ ಕಡ್ಡಾಯವಾಗುತ್ತದೆ. ನೀವು ಹೇಳಿದ್ದನ್ನು ಜಾರಿಗೊಳಿಸಿ ಅನ್ನುವುದು ರೈತರ ಸರಳವಾದ ಬೇಡಿಕೆ.
ಈಗ ರೈತರ ಬೇಡಿಕೆಯ ವಿರುದ್ಧ ಹಲವರು ತರಾವರಿ ವಾದವನ್ನು ಮಂಡಿಸುತ್ತಿದ್ದಾರೆ. ಅದು ಜಾರಿಗೆ ತರುವುದಕ್ಕೆ 10 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಅದನ್ನು ಒಪ್ಪಿಕೊಂಡು ಬಿಟ್ಟರೆ ಸರಕಾರ ದಿವಾಳಿಯಾಗಿಬಿಡುತ್ತದೆ. ಸರಕಾರಕ್ಕೆ ಆರೋಗ್ಯ, ಶಿಕ್ಷಣ, ಕೊನೆಗೆ ರೈತರ ನೆರವಿಗೂ ಹಣವಿರುವುದಿಲ್ಲ. ಇತ್ಯಾದಿ, ಇತ್ಯಾದಿ ವಾದಗಳನ್ನು ಮುಂದಿಟ್ಟು ರೈತರು ಕೇಳಬಾರದ್ದನ್ನು ಕೇಳುತ್ತಿದ್ದಾರೆ ಅನ್ನುವಂತೆ ಚಿತ್ರಿಸಲಾಗುತ್ತಿದೆ.
ಈ ಬಗ್ಗೆ ಅಧ್ಯಯನ ಮಾಡಿರುವ ಹಾಗೂ ಅಭಿಜಿತ್ ಸೇನ್ ಅವರ ಶಿಷ್ಯರೂ ಆದ ಹಿಮಾಂಶು ಅವರ ಪ್ರತಿಕ್ರಿಯೆ ಈ ಕುರಿತು ಆಸಕ್ತಿ ಇರುವವರಿಗೆ ಎಂಎಸ್‌ಪಿಗೆ ಸಂಬಂಧಿಸಿದಂತೆ ಒಂದಿಷ್ಟು ಒಳನೋಟಗಳನ್ನು ನೀಡುತ್ತದೆ. ಮೊದಲಿಗೆ ಎಂಎಸ್‌ಪಿ ರೈತರಿಗೆ ನೀಡುತ್ತಿರುವ ನೆರವು ಅನ್ನುವ ದೃಷ್ಟಿಯಿಂದಷ್ಟೇ ನೋಡಬಾರದು. ಅದನ್ನು ಕೃಷಿ ಬೆಲೆಯನ್ನು ಸ್ಥಿರವಾಗಿಡುವ ಒಂದು ಸಾಧನವನ್ನಾಗಿ ನೋಡಬೇಕು. ಎಂಎಸ್‌ಪಿ ಬಗ್ಗೆ ಮಾತನಾಡುವಾಗ ಮೊದಲಿಗೆ ನಾವು ಎರಡು ಸಾಧ್ಯತೆಯ ಬಗ್ಗೆ ಯೋಚಿಸೋಣ. ಒಂದು ಮಾರುಕಟ್ಟೆಯ ಬೆಲೆ ಎಂಎಸ್‌ಪಿಗಿಂತ ಹೆಚ್ಚಿರಬಹುದು. ಅಥವಾ ಕಡಿಮೆಯಿರಬಹುದು. ಮಾರುಕಟ್ಟೆಯ ಬೆಲೆಯೇ ಹೆಚ್ಚಿದ್ದಾಗ ರೈತರು ತಾವು ಬೆಳೆದದ್ದನ್ನು ಮಾರುಕಟ್ಟೆಯಲ್ಲಿ ಮಾರುತ್ತಾರೆ. ಆಗ ಸರಕಾರದ ಮಧ್ಯಪ್ರವೇಶದ ಅವಶ್ಯಕತೆಯಿರುವುದಿಲ್ಲ. ಎರಡನೆಯ ಸಾಧ್ಯತೆ ಅಂದರೆ ಮಾರುಕಟ್ಟೆ ಬೆಲೆ ಎಂಎಸ್‌ಪಿಗಿಂತ ಕಡಿಮೆಯಾಗುವುದು. ಮಾರುಕಟ್ಟೆಯಲ್ಲಿ ಅವಶ್ಯಕತೆಯಿರುವುದಕ್ಕಿಂತ ರೈತರು ಹೆಚ್ಚಿಗೆ ಬೆಳೆದಿದ್ದಾಗ ಬೇಡಿಕೆಗಿಂತ ಪೂರೈಕೆ ಹೆಚ್ಚಿದ್ದಾಗ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತದೆ. ಉದಾಹರಣೆಗೆ 20,000 ಲಕ್ಷ ಕ್ವಿಂಟಾಲ್ ಬೇಡಿಕೆ ಇದ್ದಾಗ 2,50,000 ಲಕ್ಷ ಕ್ವಿಂಟಾಲ್ ಬೆಳೆದರೆ ಸ್ವಾಭಾವಿಕವಾಗಿಯೇ ಬೆಲೆ ಕುಸಿಯುತ್ತದೆ. ಇಂತಹ ಸಮಯದಲ್ಲಿ ಸರಕಾರ ರೈತರ ನೆರವಿಗೆ ಬರಬೇಕು. ಆದರೆ ಕೆಲವರು ಹೇಳುತ್ತಿರುವಂತೆ ಸರಕಾರ ಇಡೀ 2,50,000 ಲಕ್ಷ ಕ್ವಿಂಟಾಲ್ ಕೊಳ್ಳಬೇಕಾಗುವುದಿಲ್ಲ. ಹೆಚ್ಚುವರಿ ಪೂರೈಕೆಯನ್ನು ಕೊಂಡರೆ ಸಾಕು. ಈ ಉದಾಹರಣೆಯಲ್ಲಿ 60,000-70,000 ಲಕ್ಷ ಟನ್ ಕೊಂಡರೆ ಸಾಕು. ಆಗ ಮಾರುಕಟ್ಟೆಯಲ್ಲಿ ಕೊರತೆಯುಂಟಾಗುತ್ತದೆ. ಬೆಲೆ ಏರುತ್ತದೆ. ಸರಕಾರ ಕೊಳ್ಳುವುದನ್ನು ನಿಲ್ಲಿಸಬಹುದು. ರೈತರು ಮಾರುಕಟ್ಟೆಯಲ್ಲಿ ಮಾರಿಕೊಳ್ಳುತ್ತಾರೆ. ಇದು ಎಂಎಸ್‌ಪಿ ಕೆಲಸ ಮಾಡಬೇಕಾದ ಕ್ರಮ. ಕೃಷಿ ಬೆಲೆ ಸ್ಥಿರತೆಯನ್ನು ಸಾಧಿಸುವುದಕ್ಕೆ ಇದೊಂದು ಕ್ರಮ.
ಎಂಎಸ್‌ಪಿಯಿಂದ ಬೆಲೆ ಸ್ಥಿರತೆಯೊಂದಿಗೆ ಬೆಲೆಯ ವೈವಿಧ್ಯತೆಯೂ ಸಾಧ್ಯವಾಗುತ್ತದೆ. ಈಗ ಸದ್ಯಕ್ಕೆ ಸರಕಾರ ಅಕ್ಕಿ ಹಾಗೂ ಗೋಧಿಗೆ ಮಾತ್ರ ಎಂಎಸ್‌ಪಿ ಸೌಲಭ್ಯ ನೀಡುತ್ತಿದೆ. ಹಾಗಾಗಿ ಅದನ್ನು ಬೆಳೆಯುತ್ತಿರುವ ಶೇ. 10ಕ್ಕಿಂತ ಕಡಿಮೆ ಜನ ಮಾತ್ರ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲವು ರಾಜ್ಯಗಳ ರೈತರಿಗೆ ಮಾತ್ರ ಅದರ ಅನುಕೂಲವಾಗುತ್ತಿದೆ. ಅದನ್ನು ಉಳಿದ 21 ಬೆಳೆಗಳಿಗೂ ವಿಸ್ತರಿಸಿದರೆ ಹೆಚ್ಚಿನ ಜನಕ್ಕೆ ಎಂಎಸ್‌ಪಿ ವ್ಯವಸ್ಥೆಯನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಬೇರೆ ಬೆಳೆಗಳನ್ನೂ ಉತ್ತೇಜಿಸುವುದಕ್ಕೆ ಸಾಧ್ಯವಾಗುತ್ತದೆ. ಪಂಜಾಬಿನ ರೈತ ಕೇವಲ ಅಕ್ಕಿ ಬೆಳೆದು ಪರಿಸರವನ್ನು ನಾಶ ಮಾಡುವ ಅವಶ್ಯಕತೆ ಇಲ್ಲ. ಬೇರೆ ಬೆಳೆಗಳಿಗೆ ಉತ್ತೇಜನ ನೀಡಿದರೆ, ಬೆಳೆದ ಪದಾರ್ಥಗಳನ್ನು ಕೊಳ್ಳುವ ಖಾತರಿಯನ್ನು ಸರಕಾರ ಕೊಟ್ಟರೆ ಅವುಗಳನ್ನು ರೈತರು ಖಂಡಿತಾ ಬೆಳೆಯುತ್ತಾರೆ. ಉದಾಹರಣೆಗೆ ಎಣ್ಣೆ ಕಾಳುಗಳು ಬೆಳೆಯುವುದು ಲಾಭದಾಯಕವಾಗಿ ಕಂಡರೆ ರೈತರು ಅದನ್ನು ಬೆಳೆಯುತ್ತಾರೆ. ನಾವು ಶೇ. 20 ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಶೇ. 70 ಹೆಚ್ಚು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅದು ಕೂಡ ವಿಪರೀತ ಬೆಲೆ ಕೊಟ್ಟು. ಅವುಗಳನ್ನು ಬೆಳೆಯಲು ನಮ್ಮಲ್ಲೇ ಪ್ರೋತ್ಸಾಹಿಸಿದರೆ ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ವಿದೇಶಿ ವಿನಿಮಯ ಉಳಿಯುತ್ತದೆ. ಒಟ್ಟಾರೆಯಾಗಿ ಆರ್ಥಿಕತೆಗೆ ಅನುಕೂಲವಾಗುತ್ತದೆ. ರಾಜ್ಯಗಳ ನಡುವಿನ ಅಸಮತೋಲನವನ್ನು ತಪ್ಪಿಸುವ ದೃಷ್ಟಿಯಿಂದಲೂ ಇದು ಆಗಬೇಕು. ರೈತರು ಬೇರೆ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದಕ್ಕೆ ಎಂಎಸ್‌ಪಿ ವ್ಯವಸ್ಥೆಯನ್ನು ಸರಕಾರ ಬಳಸಿಕೊಳ್ಳಬೇಕು.
ಎಂಎಸ್‌ಪಿಯನ್ನು ಜಾರಿಗೊಳಿಸುವುದು ತುಂಬಾ ದುಬಾರಿ ಕಾರ್ಯಕ್ರಮ ಅನ್ನುವ ರೀತಿ ಬಿಂಬಿಸಲಾಗುತ್ತಿದೆ. 10 ಲಕ್ಷ ಕೋಟಿ ರೂ. ಬೇಕು ಎಂದು ಒಂದು ಪತ್ರಿಕೆ ದೊಡ್ಡದಾಗಿ ವರದಿ ಮಾಡಿದೆ. ಇದು ಅತ್ಯಂತ ಉತ್ಪ್ರೇಕ್ಷಿತ ಲೆಕ್ಕಾಚಾರ. ಸರಳವಾಗಿ ಲೆಕ್ಕ ಹಾಕೋಣ. ಈಗ ಭತ್ತಕ್ಕೆ ಕ್ವಿಂಟಾಲಿಗೆ ಮಾರುಕಟ್ಟೆ ಬೆಲೆ 2,800 ರೂ. ಇದೆ ಅಂತ ಭಾವಿಸಿಕೊಳ್ಳೋಣ. ಅದಕ್ಕೆ ಎಂಎಸ್‌ಪಿ 3,000 ರೂ. ಎಂದು ನಿಗದಿಯಾಗಿದೆ ಅಂತ ಭಾವಿಸಿಕೊಳ್ಳೋಣ. ಎಂಎಸ್‌ಪಿ ದರದಲ್ಲಿ ಕೊಳ್ಳುವ ಮೂಲಕ ಸರಕಾರ ಕಳೆದು ಕೊಳ್ಳುತ್ತಿರುವುದು 3,000 ರೂ. ಅಲ್ಲ. ಕೇವಲ 200 ರೂ. ಮಾತ್ರ. 2,800 ರೂ. ಬೆಲೆಯ ಭತ್ತ ಅದರ ಬಳಿಯೇ ಇರುತ್ತದೆ. ಸರಕಾರ ಅದನ್ನು ಮಾರಿಕೊಳ್ಳಬಹುದು. ಜೊತೆಗೆ ರೈತರು ಬೆಳೆದದ್ದೆಲ್ಲಾ ಮಾರುಕಟ್ಟೆಗೆ ಬರುವುದೂ ಇಲ್ಲ. ಒಂದು ಪಕ್ಷ ಎಲ್ಲವನ್ನೂ ಕೊಳ್ಳಬೇಕಾಗಿ ಬಂದರೂ ಯಾವ ಲೆಕ್ಕಾಚಾರದಲ್ಲೂ ಅದು ರೂ. 10 ಲಕ್ಷ ಕೋಟಿಯಾಗುವುದಕ್ಕೆ ಸಾಧ್ಯವಿಲ್ಲ.
ಇನ್ನೂ ಒಂದು ರೀತಿ ನೋಡೋಣ. ಈ ಸರಕಾರ ಕಳೆದ ಎರಡು ವರ್ಷ 80 ಕೋಟಿ ಜನಕ್ಕೆ ಗೋಧಿ ಹಾಗೂ ಅಕ್ಕಿಯನ್ನು ಪುಕ್ಕಟೆಯಾಗಿ ನೀಡುತ್ತಿತ್ತು. ಆಹಾರ ಸಬ್ಸಿಡಿಗಾಗಿ ನೀಡಿದ್ದು 5 ಲಕ್ಷ ಕೋಟಿ ರೂ. ಇಲ್ಲಿ ಇನ್ನೂ ಒಂದು ಸುಳ್ಳು ಪ್ರಚಾರದಲ್ಲಿದೆ. ಜನರಿಗೆ ಪುಕ್ಕಟ್ಟೆಯಾಗಿ ಗೋಧಿ ಹಾಗೂ ಅಕ್ಕಿಯನ್ನು ನೀಡಿದ್ದನ್ನು ರೈತರಿಗೆ ನೀಡಿದ ಸಬ್ಸಿಡಿಯಾಗಿ ಬಿಂಬಿಸಲಾಗುತ್ತಿದೆ. ಸರಕಾರ ತಾನೇ ನಿರ್ಧರಿಸಿದ ಅದೂ ಕನಿಷ್ಠ ಬೆಲೆಗೆ ರೈತರು ಬೆಳೆದದ್ದನ್ನು ಕೊಂಡು ಗ್ರಾಹಕರಿಗೆ ಪುಕ್ಕಟೆಯಾಗಿ ನೀಡಲಾಯಿತು. ಪುಕ್ಕಟೆಯಾಗಿ ನೀಡಿದ್ದೂ ಜನರಿಗೆ. ಅದು ಜನರ ಪೌಷ್ಟಿಕಾಂಶ ನೀಗಿಸುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮ. ಅದು ತಪ್ಪಲ್ಲ. ಆದರೆ ಅದು ಗ್ರಾಹಕರಿಗೆ ನೀಡಿದ ಸಬ್ಸಿಡಿಯೇ ಹೊರತು ರೈತರಿಗಲ್ಲ. ಸರಕಾರವೇನಾದರೂ ಹೆಚ್ಚಿನ ಹಣಕೊಟ್ಟು ರೈತರಿಂದ ಕೊಂಡಿದ್ದರೆ ಅಥವಾ ಗೊಬ್ಬರ ಇತ್ಯಾದಿಗಳನ್ನು ಪುಕ್ಕಟೆ ನೀಡಿದ್ದರೆ ಅದನ್ನು ಸಬ್ಸಿಡಿ ಅನ್ನಬಹುದು. ಇರಲಿ, ಜನರಿಗೆ 5 ಲಕ್ಷ ಕೋಟಿ ರೂ. ಹಂಚಿದ್ದರಿಂದ ಸರಕಾರ ದಿವಾಳಿಯಾಗಲಿಲ್ಲ. ಈಗ ಖಂಡಿತಾ ಖರ್ಚು ರೂ. 5 ಲಕ್ಷ ಕೋಟಿಯಾಗುವುದಕ್ಕೆ ಸಾಧ್ಯವೇ ಇಲ್ಲ.
ಜೊತೆಗೆ ಸರಕಾರವೇ ಸಿ2+ಶೇ.50ನ್ನೇ ಕೊಡುತ್ತಿದ್ದೇವೆ ಅಂತ ಹೇಳಿಕೊಳ್ಳುತ್ತಿದೆ. ಅದು ನಿಜವಾದರೆ ಎಲ್ಲರೂ ವಾದಿಸುತ್ತಿರುವಂತೆ ಹಣದುಬ್ಬರವೇಕೆ ದುಪ್ಪಟ್ಟಾಗಿಲ್ಲ. ಆಗಿರುವ ಶೇ.2 ಹೆಚ್ಚಳಕ್ಕೆ ಎಂಎಸ್‌ಪಿಯನ್ನೇ ದೂಷಿಸುವುದಕ್ಕೆ ಸಾಧ್ಯವಿಲ್ಲ.
ಇನ್ನು ಕೆಲವರ ಪ್ರಕಾರ ಶೇ. 50 ಹೆಚ್ಚುವರಿ ತುಂಬಾ ಆಯಿತು. ಯಾವ ಕೈಗಾರಿಕೆಯಲ್ಲೂ ಶೇ. 50 ಲಾಭದ ಖಾತರಿ ಕೊಡುವುದಕ್ಕೆ ಆಗುವುದಿಲ್ಲ. ಅದು 50 ಇರಬೇಕೋ, ಹೆಚ್ಚಿರಬೇಕೋ, ಕಡಿಮೆಯಾಗಬೇಕೋ ಅನ್ನುವುದು ಬೇರೆ ಪ್ರಶ್ನೆ. ಒಂದಂತೂ ನಿಜ ರೈತರಿಗೆ ಕೃಷಿಯಲ್ಲಿ ಮುಂದುವರಿಯುವುದಕ್ಕೆ ಬೇಕಾದಷ್ಟು ಲಾಭ ಸಿಗಬೇಕು. ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೆಲವೊಮ್ಮೆ ಇನ್ನೂ ಹೆಚ್ಚು ಕೊಡಬೇಕಾಗಬಹುದು. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಎಂಎಸ್‌ಪಿಯ ಮೇಲೆ ಬೋನಸನ್ನು ಘೋಷಿಸಿದ್ದರು.
ಕೃಷಿ ಸಂಪೂರ್ಣ ಬೇರೆಯದೇ ಆದ ವಿಷಯ. ಜಗತ್ತಿನಾದ್ಯಂತ ಕೃಷಿಗೆ ವಿಪರೀತ ಸಬ್ಸಿಡಿ ನೀಡಲಾಗುತ್ತದೆ. ಯುರೋಪಿಯನ್ ಯೂನಿಯನ್ 500 ಬಿಲಿಯನ್ ಸಬ್ಸಿಡಿ ನೀಡುತ್ತದೆ. ಅಲ್ಲಿ 2008ರ ಹಣಕಾಸು ಬಿಕ್ಕಟ್ಟಿನಲ್ಲಿ ಎಲ್ಲಾ ಸಬ್ಸಿಡಿಗಳನ್ನು ಉಳಿತಾಯದ ಹೆಸರಿನಲ್ಲಿ ಕಡಿತ ಮಾಡಿದರು. ಕೃಷಿ ಸಬ್ಸಿಡಿಯನ್ನು ಮುಟ್ಟಲಿಲ್ಲ. ಕೃಷಿಗೆ ಎಲ್ಲಾ ಕಡೆ ವಿಪರೀತ ಸಬ್ಸಿಡಿ ನೀಡಲಾಗುತ್ತಿದೆ. ಅಂತಹ ಕೃಷಿ ವ್ಯವಸ್ಥೆಯೊಂದಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ನಮ್ಮಲ್ಲಿಯ ಶೇ. 80 ಸಣ್ಣ ರೈತರು. ಕೃಷಿಯಲ್ಲೇ ಮುಂದುವರಿಯುವಷ್ಟು ಅವರಿಗೆ ಲಾಭ ಬರಬೇಕು. ಕೃಷಿ ಉತ್ಪಾದನೆ ಹೆಚ್ಚಬೇಕಾದರೆ, ಕೃಷಿಯಲ್ಲಿ ಹೂಡಿಕೆ ಹೆಚ್ಚಬೇಕಾದರೆ ಅದಕ್ಕೆ ಉತ್ತೇಜನ ನೀಡಬೇಕು. ಅದು ಶೇ. 50 ಇರಬೇಕೆಂದೇನೂ ಇಲ್ಲ. ಶೇ. 60 ಆಗಬಹುದು, ಹೆಚ್ಚೂ ಆಗಬಹುದು ಕಡಿಮೆಯೂ ಆಗಬಹುದು. ಖಾದ್ಯ ತೈಲದ ವಿಷಯದಲ್ಲಿ ನೀವು ಹೆಚ್ಚಿನ ಉತ್ತೇಜನ ನೀಡಬೇಕಾಗಬಹುದು.
ಕೈಗಾರಿಕಾ ಉತ್ಪಾದನೆ ನಮ್ಮಲ್ಲಿ ಹೆಚ್ಚಲಿ, ಕೆಲವು ನಿರ್ದಿಷ್ಟ ಕೈಗಾರಿಕೆಗಳು ನಮ್ಮಲ್ಲಿ ಸ್ಥಾಪಿತವಾಗಲಿ ಅನ್ನುವ ಉದ್ದೇಶಕ್ಕೆ ಸರಕಾರ ಪಿಎಲ್‌ಐ ಯೋಜನೆ ತಂದಿದೆ. ಕೃಷಿಯಲ್ಲೂ ಅದೇ ಕೆಲಸವನ್ನು ಮಾಡಬಹುದಲ್ಲವೇ?.
ಎಂಎಸ್‌ಪಿಯನ್ನು ಸರಿಯಾಗಿ ಜಾರಿಗೊಳಿಸಿದರೆ ಅದರಿಂದ ಹಲವು ಅನುಕೂಲಗಳಿವೆ. ಸರಕಾರ ಹೆಚ್ಚು ಬಂಡವಾಳ ಹೂಡುತ್ತದೆ. ಹೂಡಿಕೆ ಹೆಚ್ಚುತ್ತದೆ. ಬೆಲೆಗಳು ಸ್ಥಿರವಾಗುತ್ತದೆ. ಎಂಎಸ್‌ಪಿಯಿಂದ ರೈತರಿಗಿಂತ ಆರ್ಥಿಕತೆಗೆ ಹೆಚ್ಚು ಅನುಕೂಲವಾಗುತ್ತದೆ. ಹಾಗಾಗಿ ಸರಕಾರ ಇದನ್ನು ಐದು ವರ್ಷಕ್ಕೆ, ಕೆಲವು ಬೆಳೆಗಳಿಗೆ ಹೀಗೆಲ್ಲಾ ಸೀಮಿತವಾಗಿ ಯೋಚಿಸದೆ ಇದನ್ನೊಂದು ಆರ್ಥಿಕ ಸ್ಥಿರತೆಯ ಕಡೆಗಿನ ಪರಿಣಾಮಕಾರಿ ಕ್ರಮವಾಗಿ ಯೋಚಿಸಬೇಕು. ರೈತರು ಇದಕ್ಕಾಗಿ ಒತ್ತಾಯಿಸುವ ಮೂಲಕ ಕೃಷಿ ಆರ್ಥಿಕತೆಯ ಬಗ್ಗೆ ಯೋಚಿಸುವಂತೆ ಮಾಡಿದ್ದಾರೆ.