ಅಸಂಘಟಿತ ಮುಸ್ಲಿಮ್-ದಲಿತ ಮಹಿಳೆಯರನ್ನು ಸಂಘಟಿಸಿದ ಜಬೀನಾ ಖಾನುಂ
ಮಹಿಳೆಯರಿಲ್ಲದ ಯಾವ ಸಂಘಟನೆಯೂ ಬಹಳ ಕಾಲ ಮುಂದುವರಿಯುವುದಿಲ್ಲ ಎನ್ನುವುದು ಜಬೀನಾರ ನಂಬಿಕೆ. ನಿರಂತರ ಮಹಿಳೆಯರ ಪರವಾಗಿ ದುಡಿಯುವ ಗಟ್ಟಿಗಿತ್ತಿಯಾಗಿ ಅವರು ಹೊರ ಹೊಮ್ಮಿದ್ದಾರೆ.
ಮನೆಮಂದಿಯೆಲ್ಲಾ ಅಸಂಘಟಿತ ಕಾರ್ಮಿಕರು, ಅಪ್ಪ ಆಟೋ ಓಡಿಸುತ್ತಾರೆ, ತಮ್ಮ ಕಟ್ಟಡ ಕೆಲಸ ಮಾಡುತ್ತಾರೆ, ಅಮ್ಮ ಬೀಡಿ ಕಟ್ಟುತ್ತಾರೆ, ಅಣ್ಣ ವರ್ಕ್‌ಶಾಪ್ ಕೆಲಸ ಹೀಗೆ ಅಸಂಘಟಿಕ ವಲಯದ ಎಲ್ಲಾ ಕೆಲಸಗಳಲ್ಲಿ ದುಡಿಯುವ ದಾವಣಗೆರೆಯ ಮೆಹಬೂಬ್ ನಗರದ ಪುಟ್ಟ ಮನೆಯ ಹುಡುಗಿಯೊಬ್ಬಳು ಇದೇ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ, ಹೋರಾಟಕ್ಕಿಳಿಸಿ ಆರ್ಥಿಕ ವಾಗಿ ಸ್ವಾವಲಂಬನೆಗಾಗಿ ದುಡಿಯುತ್ತಿರುವುದು ಅಚ್ಚರಿಯಾದರೂ ಸತ್ಯ. ಆ ಹುಡುಗಿಯೇ 38 ವರ್ಷದ ಜಬೀನಾ ಖಾನುಂ
ಶಾಲೆಯಲ್ಲಿ ಯಾರಾದರೂ ಭಾಷಣ ಮಾಡುವಾಗ ತಾನೂ ಹಾಗೆ ಮಾತಾಡಬೇಕೆಂದು ಕನಸು ಕಾಣುತ್ತಿದ್ದ ಜಬೀನಾ ತಾನು ಚೈಲ್ಡ್ ಲೇಬರ್ ಆಗಿರುವಾಗಲೇ, ಚೈಲ್ಡ್ ಲೇಬರ್ ಮಕ್ಕಳಿಗೆ ಎಸ್.ಎಸ್. ಮಲ್ಲಿಕಾರ್ಜುನ ನಗರದಲ್ಲಿ 2000 ಇಸವಿಯಲ್ಲಿ ಶಾಲೆ ನಡೆಸುತ್ತಾಳೆ. ಆಗತಾನೆ ಶುರುವಾಗಿದ್ದ ಆಶ್ರಯ ಕಾಲನಿಯಲ್ಲಿ ಅನೇಕ ಸಮಸ್ಯೆಗಳಿದ್ದವು. ಕುಡಿಯುವ ನೀರಿನ ಕಾರಣದಿಂದಾಗಿ ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ಆ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಯೂನಿಸೆಫ್ ಸಂಘಟನೆ ಇತ್ತು. ಇದರ ಅಡಿಯಲ್ಲಿ ಸೇತುಬಂಧ ಎಂಬ ಶಾಲೆಗಳನ್ನು ತೆರೆದಿದ್ದರು. ಜಬೀನಾ ಈ ಶಾಲೆಯಲ್ಲಿ ಕಲಿಸುತ್ತಿದ್ದಳು. ಈ ಶಾಲೆಗೆ ಮಕ್ಕಳು ಬರಬೇಕೆಂದರೆ ಅವರ ತಂದೆ ತಾಯಂದಿರನ್ನು ಒಗ್ಗಟ್ಟಾಗಿಸಬೇಕು ಎನ್ನುವ ಯೋಚನೆ ಹೊಳೆಯುತ್ತದೆ. ಈ ಸಂದರ್ಭದಲ್ಲಿ ಹೆಣ್ಣಮಕ್ಕಳನ್ನು ಯಾಕೆ ಸಂಘಟಿಸಬಾರದು ಎನ್ನುವ ವಿಷಯ ಹೊಳೆಯುತ್ತದೆ. ಹೀಗೆ ಚಿಕ್ಕ ಚಿಕ್ಕ ಸಂಘಟನೆ ಕಟ್ಟಲು ಶುರುಮಾಡುತ್ತಾರೆ. ಹೀಗೆ ಹೋರಾಟ ಕಟ್ಟುವ ಸಂದರ್ಭದಲ್ಲಿ ಸ್ನೇಹಿತ ಕರಿಬಸಪ್ಪ ಅವರು ಪ್ರೇರಣೆಯಾಗುತ್ತಾರೆ. ಮೂಲತಃ ಹಾವೇರಿಯ ಕರಿಬಸಪ್ಪ ಮತ್ತು ಜಬೀನಾ ಯೂನಿಸೆಫ್‌ನಲ್ಲಿ ಕೆಲಸ ಮಾಡುತ್ತಲೇ ಮಹಿಳಾ ಸಂಘಟನೆ ಕಟ್ಟುವುದಕ್ಕೆ ಶರುಮಾಡುತ್ತಾರೆ. ಹೀಗೆ ಜಬೀನಾ 17 ವರ್ಷದವಳಿದ್ದಾಗಲೆ ಮಹಿಳಾ ಸಂಘಟನೆ ಆರಂಭಿಸುತ್ತಾರೆ.
ಮುಸ್ಲಿಮ್ ಸಮುದಾಯದಲ್ಲಿ ಹುಡುಗಿಯೊಬ್ಬಳು ಕುಟುಂಬದ ಹೊರಗೆ ಹೋಗಿ ಸಂಘಟನೆ ಕಟ್ಟುವುದು ಬಹಳ ಕಷ್ಟವಾಗಿತ್ತು. ಮೊದಲಿಗೆ ಜಬೀನಾಗೂ ತೊಡಕುಗಳು ಬಂದವು. ಈ ತೊಡಕುಗಳು ಜಬೀನಾ ಅವರಲ್ಲಿ ಸಂಘಟನೆ ಕಟ್ಟಲೇಬೇಕು ಎನ್ನುವ ಹಟವಾಗಿ ಪರಿವರ್ತನೆ ಆಗುತ್ತದೆ. ಜಬೀನಾ ಬೀಡಿ ಕಾರ್ಮಿಕಳು. ವಾರಕ್ಕೆ ಹತ್ತರಿಂದ ಹನ್ನೆರಡು ಸಾವಿರ ಬೀಡಿ ಕಟ್ಟುತ್ತಿದ್ದರು. ಆಗ ಜಬೀನಾಗೂ ಬೀಡಿ ಕಾರ್ಮಿಕರಿಗೆ ಕನಿಷ್ಠ ಎಷ್ಟು ಕೂಲಿ ಇದೆ, ಕಾರ್ಮಿಕರಿಗೆ ಇರುವ ಹಕ್ಕುಗಳೇನು? ಯಾವುದೂ ಗೊತ್ತಿರಲಿಲ್ಲ. ಹಾಗಾಗಿ ಎಲ್ಲವನ್ನು ತಿಳಿದುಕೊಳ್ಳತೊಡಗುತ್ತಾರೆ. ಜತೆಗೆ ಬೀಡಿ ಕಾರ್ಮಿಕ ಮಹಿಳೆಯರ ಜತೆ ಹೆಚ್ಚೆಚ್ಚು ಚರ್ಚೆ ಶುರುಮಾಡುತ್ತಾರೆ. ಕನಿಷ್ಠ ವೇತನದಲ್ಲಿ ಮೋಸ, ವೇಸ್ಟ್ ಬೀಡಿ ಎಂದು ಹೆಚ್ಚುವರಿ ಬೀಡಿಗಳನ್ನು ತೆಗೆದುಕೊಳ್ಳುವುದು, ಅರ್ಧ ಕೆಜಿ ಎಲೆ, 200 ಗ್ರಾಂ ತಂಬಾಕು ಕೊಟ್ಟರೆ 700ರಷ್ಟು ಬೀಡಿ ಆಗುತ್ತೆ. ಆದರೆ 1,150 ಬೀಡಿ ಕೊಡಬೇಕು ಎಂದು ಗುತ್ತಿಗೆದಾರ ಬೇಡಿಕೆ ಇಡುತ್ತಿದ್ದರು. ಇದೆಲ್ಲವನ್ನು ಅರಿತ ಜಬೀನಾ ಬೀಡಿ ಕಾರ್ಮಿಕರನ್ನು ಸಂಘಟಿಸಲು ಶುರುಮಾಡುತ್ತಾರೆ.
ಗುತ್ತಿಗೆದಾರನೇ ಗರುತಿನ ಚೀಟಿ ಕೊಡಬೇಕು, ಪ್ರಾವಿಡೆಂಟ್ ಫಂಡ್ (ಪಿಎಫ್) ಕಟ್ಟಬೇಕು, ಗ್ರಾಚ್ಯುಟಿ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ಕೊಡಬೇಕು. ಆದರೆ ವಾಸ್ತವದಲ್ಲಿ ಈ ಎಲ್ಲಾ ಸೌಲಭ್ಯಗಳಿಂದ ವಂಚಿತರನ್ನಾಗಿಸಲಾಗಿತ್ತು. ಕನಿಷ್ಠ ವೇತನವನ್ನೂ ಕೊಡದೆ ಮೋಸ ಮಾಡಿ ಬೀಡಿ ಕಾರ್ಮಿಕರನ್ನು ದುಡಿಸುತ್ತಿದ್ದರು. ಸ್ವತಃ ಬೀಡಿ ಕಾರ್ಮಿಕಳಾಗಿದ್ದ ಜಬೀನಾಗೆ ಈ ಕಾರ್ಮಿಕರ ಸಮಸ್ಯೆಗಳು ಬೇಗ ಅರ್ಥವಾಗುತ್ತವೆ. ಹಾಗಾಗಿ ಬೀಡಿ ಕಾರ್ಮಿಕ ಮಹಿಳೆಯರ ಶೋಷಣೆಯನ್ನು ನಿಲ್ಲಿಸಬೇಕೆಂದು ನಿರ್ಧರಿಸುತ್ತಾರೆ. ನಿರಂತರ ಸಭೆಗಳನ್ನು ಮಾಡಿದ ಪರಿಣಾಮ ನೂರು ಜನ ಮಹಿಳೆಯರು ಜಬೀನ ಅವರ ಜತೆ ಬರುತ್ತಾರೆ.
ಆಗ ಸಂಘಟಿತರಾಗಿ ಸರಕಾರಕ್ಕೆ ಕನಿಷ್ಠ ವೇತನದ ಬೇಡಿಕೆ ಇಡುತ್ತಾರೆ. 2013ರಲ್ಲಿ ಬೀಡಿ ಕಾರ್ಮಿಕರಿಗೆ ಇದ್ದ ಕನಿಷ್ಠ ವೇತನ 150 ರೂ. 78 ಪೈಸೆ. ಆಗ ಬೀಡಿ ಕಾರ್ಮಿಕರಿಗೆ ಸಿಗುತ್ತಾ ಇದ್ದದ್ದು ಕೇವಲ 90 ರೂಪಾಯಿ. 1,000 ಬೀಡಿ ಕಟ್ಟಿದರೆ, ಮಧ್ಯವರ್ತಿಯ ಜೇಬಿಗೆ 60 ರೂ. ಸೇರುತ್ತಿತ್ತು. ಆಗ ಮಹಿಳೆಯರಿಗೆ ಒಂದು ಬೀಡಿಗೆ ಎಷ್ಟು? ಒಂದು ಕಟ್ಟಿಗೆ ಎಷ್ಟು? ನಾವು ಕಟ್ಟಿದರೆ ನಮಗೆ ಎಷ್ಟು ಸಿಗುತ್ತದೆೆ, ಗುತ್ತಿಗೆದಾರನಿಗೆ ಎಷ್ಟು ಸಿಗುತ್ತದೆ, ಮಾಲಕನಿಗೆ ಎಷ್ಟು ಲಾಭ ಆಗುತ್ತದೆ ಎನ್ನುವುದನ್ನು ಚರ್ಚೆ ಮಾಡಿ ಮಹಿಳೆಯರಿಗೆ ಗೋಡೆ ಮೇಲೆ ಬರೆದು ಮಕ್ಕಳಿಗೆ ಪಾಠ ಮಾಡುವಂತೆ ಕಾರ್ಮಿಕರಿಗೆ ಅರ್ಥ ಮಾಡಿಸುತ್ತಾರೆ. ಬೀಡಿ ಕಂಪೆನಿ ಮಾಲಕ ಅಂದರೆ ದೇವರು, ಮನೆ ಬಾಗಿಲಿಗೆ ಬೀಡಿ ಎಲೆ ತಂಬಾಕು ತಂದುಕೊಡುವ ಮಧ್ಯವರ್ತಿಯೂ ನಮ್ಮ ಪಾಲಿನ ದೇವರು ಎಂದೆಲ್ಲಾ ನಂಬಿದ್ದವರಿಗೆ ಇವರೆಲ್ಲಾ ಮೋಸ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ.
ಆಗ ಕನಿಷ್ಠ ವೇತನ ಸಿಗಬೇಕೆಂದರೆ ಕಾರ್ಮಿಕ ಇಲಾಖೆಯ ಮೇಲೆ ಒತ್ತಡ ಹಾಕಬೇಕೆಂದು 2014ರಲ್ಲಿ ಇಲಾಖೆಗೆ ಮನವಿ ಮಾಡುತ್ತಾರೆ. ಆಗ ಲೇಬರ್ ಡಿಪಾರ್ಟ್‌ಮೆಂಟ್ ಸಂಧಾನ ಸಭೆ ಕರೆಯುತ್ತಾರೆ. ಬೀಡಿ ಕಾರ್ಮಿಕ ಮಹಿಳೆಯರು ಮೊದಲಬಾರಿಗೆ ಲೇಬರ್ ಡಿಪಾರ್ಟ್‌ಮೆಂಟ್‌ಗೆ ಕಾಲಿಡುತ್ತಾರೆ. ಗುತ್ತಿಗೆದಾರರಿಗಿದ್ದ ಧೈರ್ಯ ಏನಂದರೆ ಮಹಿಳೆಯರು ಸಂಘಟಿತರಾಗುತ್ತಾರಾ? ಅವರು ನಮ್ಮೆದುರು ಮಾತನಾಡುತ್ತಾರಾ? ಇದೆಲ್ಲಾ ಅಸಾಧ್ಯ ಎಂದು ನಂಬಿದ್ದರು. ಸಭೆಯಲ್ಲಿ ಗುತ್ತಿಗೆದಾರರು ‘‘ಟೈಂ ಪಾಸಿಗೆ ಸರ್ ಇವರು ಬೀಡಿ ಕಟ್ಟೋದು. ಅದೇನು ಬಾಳ ಕೆಲಸ ಅಲ್ಲ, ಬಿಡುವಿನ ಸಮಯದಲ್ಲಿ ಒಂದಷ್ಟು ಮಾಡ್ತಾರೆ’’ ಎಂದು ಹೇಳುತ್ತಾರೆ.
ಆಗ ಒಬ್ಬ ಮಹಿಳೆ ಎದ್ದು ನಿಂತು ‘‘ನಾವು ಟೈಂ ಪಾಸಿಗೆ ಬೀಡಿ ಕಟ್ತೀವಾ? ವಾರಕ್ಕೆ 12,000 ಬೀಡಿ ಕಟ್ಟೋದು ನಿನಗೆ ಟೈಂ ಪಾಸ್ ಅಂತ ಕಾಣುತ್ತಾ? ಅದರಲ್ಲಿ ನನ್ನ ಬದುಕಿದೆ, ಅದರಲ್ಲಿ ನಮ್ಮ ಮಕ್ಕಳ ಭವಿಷ್ಯ ಇದೆ, ಅದರಲ್ಲಿ ನಮ್ಮ ಕುಟುಂಬದ ಜವಾಬ್ದಾರಿ ಇದೆ, ಬೀಡಿ ಕಟ್ಟಿದರೇನೆ ನಮ್ಮ ಮನೇಲಿ ಒಲೆ ಉರಿಯುತ್ತೆ. ಇದು ನಿನಗೆ ಟೈಂ ಪಾಸಾ?’’ ಎಂದು ಉತ್ತರಿಸುತ್ತಾಳೆ. ಈ ಮಾತು ಕೇಳಿ ಒಬ್ಬ ಗುತ್ತಿಗೆದಾರ ದನಿ ಎತ್ತರಿಸಿ ‘‘ಏಯ್ ಕೂತ್ಕೊಳ್ಳಮ್ಮಾ’’ ಎಂದು ಗದರಿಸುತ್ತಾನೆ. ಆಗ ಎಲ್ಲಾ ಮಹಿಳೆಯರು ಒಟ್ಟಾಗಿ ಆ ಮನುಷ್ಯನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಮಹಿಳೆಗೆ ಮೊದಲಿಗೆ ಮರ್ಯಾದೆ ಕೊಡುವುದನ್ನು ಕಲಿ ಎಂದು ಹೇಳುತ್ತಾರೆ. ಅಲ್ಲಿಂದ ಈ ತನಕ ಆ ವ್ಯಕ್ತಿ ಕೈಮುಗಿದು ಗೌರವಿಸುತ್ತಾನೆ. ಎಲ್ಲಿ ಜಾಗ ಸಿಕ್ಕರೂ ಮಹಿಳೆಯರನ್ನು ಕೂರಿಸಿ ಸಭೆ ಮಾಡುತ್ತಾರೆ. ಮೊದಲಿಗೆ ಮಹಿಳೆಯರ ಗೌರವಕ್ಕೆ ಧಕ್ಕೆಯಾದರೆ ನಾವು ಸುಮ್ಮನಿರಬಾರದು ಎಂಬುದನ್ನು ಮನವರಿಕೆ ಮಾಡುತ್ತಾರೆ.
ಲೇಬರ್ ಡಿಪಾರ್ಟಮೆಂಟ್‌ಗೆ ‘‘ನಮ್ಮ ಹೆಣ್ಣುಮಕ್ಕಳು ಟೈಂ ಪಾಸ್ ಮಾಡೋಕೆ ಬೀಡಿ ಕಟ್ತಾರಾ, ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರಾ ಈ ಬಗ್ಗೆ ಸರ್ವೇ ಮಾಡಿ’’ ಎನ್ನುತ್ತಾರೆ. ಈ ಪ್ರಕಾರ 592 ಕುಟುಂಬಗಳ ಸಮೀಕ್ಷೆ ಆಗುತ್ತದೆ. ಪ್ರತೀ ಮಹಿಳೆ ವಾರಕ್ಕೆ 8,000, 9,000, 12,000 ಬೀಡಿ ಕಟ್ಟುವುದು ತಿಳಿಯುತ್ತದೆ. ಇದರಿಂದ 90 ರೂ. ಸಿಗುತ್ತಾ ಇದ್ದ ಕೂಲಿ 140 ರೂ. ಆಗುತ್ತದೆ. ಅಂದರೆ ಹೋರಾಟದಿಂದ ಒಂದೇ ಸಲಕ್ಕೆ 50 ರೂ. ಹೆಚ್ಚಾಯಿತು. ವರ್ಷಕ್ಕೆ ಐದೋ ಹತ್ತೋ ಏರಿಸುವ ಏಜಂಟರಿರುವಾಗ ಹೀಗೆ ಒಮ್ಮೆಗೇ 50 ರೂ. ಹೆಚ್ಚಳವಾದುದಕ್ಕೆ ಸಂಘಟನೆ ಕಾರಣ ಎನ್ನುವ ವಿಶ್ವಾಸ ಕಾರ್ಮಿಕರಲ್ಲಿ ಮೂಡುತ್ತದೆ.
ಇದರಿಂದಾಗಿ ನೂರು ಜನ ಮಹಿಳೆಯರ ಸಂಘದ ಸದಸ್ಯರು ಮುನ್ನೂರು-ನಾಲ್ಕುನೂರು ಜನರಾಗುತ್ತಾರೆ. ಇದರ ಜತೆ ಗುರುತಿನ ಚೀಟಿ ಸಿಗಬೇಕು. ಗುರುತಿನ ಚೀಟಿ ಸಿಕ್ಕರೆ, ಪಿಎಫ್ (ಪ್ರಾವಿಡಂಟ್ ಫಂಡ್) ಸಿಗುತ್ತದೆ. ಪಿಎಫ್ ಸಿಕ್ಕರೆ ಮುಂದೆ ಗ್ರಾಚ್ಯುಟಿ ಸಿಗುತ್ತದೆ, ಮುಂದೆ ಪಿಂಚಣಿ ಸಿಗುತ್ತದೆ. ಆಗ ಸಂಘದವರು ದಾವಣಗೆರೆ ಲೇಬರ್ ಡಿಪಾರ್ಟಮೆಂಟ್‌ನವರಿಗೆ ಎಷ್ಟು ಜನ ಕಾರ್ಮಿಕರಿಗೆ ಪಿಎಫ್ ಬುಕ್ ಸಿಕ್ಕಿದೆ ಮಾಹಿತಿ ಕೊಡಿ ಎಂದು ಮನವಿ ಮಾಡುತ್ತಾರೆ. ಮಾಹಿತಿ ಕೊಟ್ಟಾಗ ಈ ಗುರುತಿನ ಚೀಟಿಯಲ್ಲಿ ಅರ್ಧಕ್ಕರ್ಧ ಜನರು ಪುರುಷರಿರುತ್ತಾರೆ. ಅಂದರೆ ಮಹಿಳೆ ಬೀಡಿ ಕಟ್ಟುತ್ತಿದ್ದರೆ, ಅವರ ಮನೆಯಲ್ಲಿರುವ ಗಂಡಸರ ಹೆಸರಲ್ಲಿ ಗುರುತಿನ ಚೀಟಿಗಳಿವೆ. ಆಗ ಐಡೆಂಟಿಟಿ ಕಾರ್ಡಿನಲ್ಲಿ ಗಂಡಸರ ಹೆಸರಿರುವ ಕಾರಣದಿಂದ ಗಂಡಸರನ್ನೆಲ್ಲಾ ಕರೆದು ಬೀಡಿ ಕಟ್ಟಿಸಿ ಎಂದು ಸಂಘದವರು ಮನವಿ ಮಾಡುತ್ತಾರೆ. ಯೂನಿಯನ್ ಮಹಿಳೆಯರ ಮುಂದೆ ಬೀಡಿ ಕಟ್ಟಿಸಬೇಕು. ಯಾರು ಬೀಡಿ ಕಟ್ಟುವುದಿಲ್ಲವೋ ಅವತ್ತೆ ಅವರ ಹೆಸರು ತೆಗೆದು ಮಹಿಳೆಯರ ಹೆಸರಲ್ಲಿ ಪುಸ್ತಕ ಕೊಡಬೇಕು ಎನ್ನುತ್ತಾರೆ. ಈ ಬೆಳವಣಿಗೆಗೆ ಬೆದರಿ ಬೀಡಿ ಕಂಪೆನಿಗಳ ಗುತ್ತಿಗೆದಾರರು ಜಬೀನಾ ಅವರಿಗೆ ಆಮಿಷ ಒಡ್ಡುತ್ತಾರೆ. ಇದಾವುದಕ್ಕೂ ಜಗ್ಗದ ಅವರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿಯುತ್ತಾರೆ.
ತನಗೆ ಬರುವ ಎಲ್ಲಾ ಆಮಿಷಗಳನ್ನು ಜಬೀನಾ ತನ್ನ ಸಂಘಟನೆಯ ಮಹಿಳೆಯರೊಂದಿಗೆ ಚರ್ಚೆ ಮಾಡುತ್ತಾರೆ. ಇದರಿಂದಾಗಿ ಜಬೀನಾ ಸಂಘಟನೆಯ ಮಹಿಳೆಯರ ವಿಶ್ವಾಸ ಗಳಿಸುತ್ತಾರೆ. ಎಲ್ಲಿಗೆ ಕಾರ್ಮಿಕರನ್ನು ಕರೆದರೂ ಯಾವ ಭಿಡೆ ಇಲ್ಲದೆ ಜಬೀನಾ ಜತೆ ಬರುತ್ತಾರೆ. ಮಹಿಳೆಯರನ್ನು ಪ್ರಶ್ನೆ ಮಾಡುವಂತೆ ಮಾಡುತ್ತಾರೆ. ಮುಂದೆ ಸರಕಾರಿ ಶಾಲೆ, ನ್ಯಾಯಬೆಲೆ ಅಂಗಡಿ, ಆಸ್ಪತ್ರೆ ಎಲ್ಲಾ ಕಡೆಯೂ ಮಹಿಳೆಯರು ಪ್ರಶ್ನೆ ಮಾಡುವಂತಾಗಿದ್ದಾರೆ.
ಈ ಬೆಳವಣಿಗೆ ಗಮನಿಸಿ ಎಲ್ಲಾ ಬೀಡಿ ಕಂಪೆನಿಗಳ ಏಜೆಂಟರು ಸೇರಿಕೊಂಡು ಒಂದು ಸಂಚನ್ನು ಮಾಡುತ್ತಾರೆ. ಕೆಲವು ಮಹಿಳೆಯ ರನ್ನು ಜಬೀನಾ ವಿರುದ್ಧ ತಿರುಗಿ ಬೀಳುವಂತೆ ಮಾಡುತ್ತಾರೆ. ಎಲ್ಲರೂ ಒಟ್ಟಾಗಿ ಈ ವ್ಯವಸ್ಥಿತ ಸಂಚಿನ ವಿರುದ್ಧ ಮಹಿಳೆಯರಿಗೆ ಮನವರಿಕೆ ಮಾಡಲು ಕಂಪೆನಿಯ ಮೋಸದ ಬಗ್ಗೆ, ಯೂನಿಯನ್ ಕೆಲಸಗಳ ಬಗ್ಗೆ ವಿವರವಾಗಿ ಬರೆದ ಐದು ಸಾವಿರ ಪಾಂಪ್ಲೆಟ್‌ಗಳನ್ನು ಮನೆ ಮನೆಗೂ ಹಂಚುತ್ತಾರೆ. ಜಬೀನಾ ಮನೆಯಿಂದ ಲೇಬರ್ ಡಿಪಾರ್ಟಮೆಂಟ್ ತನಕ ಮಹಿಳೆಯರ ಬೃಹತ್ ರ್ಯಾಲಿ ಹೊರಡುತ್ತಾರೆ. ಆ ದಿನ ಮಹಿಳೆಯರ ಹೋರಾಟದ ಜತೆ ಅವರ ಮನೆಯ ಗಂಡಸರು ಕೆಲಸಕ್ಕೆ ರಜೆ ಹಾಕಿ ರ್ಯಾಲಿಗೆ ಜೊತೆಯಾದರು. ಇದರಿಂದ ಜಬೀನಾ ಮೇಲೆ ದಾಳಿ ಮಾಡಲು ಬಂದಿದ್ದ ಮಹಿಳೆಯರೇ ಕ್ಷಮೆ ಕೇಳಿ ಸಂಘಟನೆಯ ಸದಸ್ಯರಾಗಿದ್ದಾರೆ.
ಹೀಗೆ ಬೀಡಿ ಕಟ್ಟುವ ಮಹಿಳೆಯರಿಗೆ ಯೂನಿಯನ್ ಆದ ಮೇಲೆ, ಬೇರೆ ಬೇರೆ ಕೆಲಸಗಳನ್ನು ಮಾಡುವ ಮಹಿಳೆಯರನ್ನೂ ಒಳಗೊಳ್ಳುವ ಬಗ್ಗೆ ಸಂಘಟನೆಯಲ್ಲಿ ಮಾತುಕತೆಗಳಾಗುತ್ತವೆ. 2020ರಲ್ಲಿ ದಲಿತ-ಮುಸ್ಲಿಮ್ ಮಹಿಳಾ ಒಕ್ಕೂಟದ ನೆಲೆಯಲ್ಲಿ ದಲಿತ ಕೆಳಜಾತಿಗಳ ಮಹಿಳೆಯರನ್ನು ಒಳಗೊಳ್ಳುವ ಕೆಲಸ ಶುರುಮಾಡುತ್ತಾರೆ. ಮುಂದೆ ಬೇರೆ ಯಾವುದೇ ಮಹಿಳೆಯರಿಗೆ ಅತ್ಯಾಚಾರ, ಹಿಂಸೆ ಶೋಷಣೆಗಳಾದಾಗ ತಮ್ಮ ಸಂಘಟನೆ ಧ್ವನಿ ಆಗಬೇಕೆಂಬ ಅರಿವು ಮೂಡುತ್ತದೆ. ದಿಲ್ಲಿಯ ರೈತ ಹೋರಾಟಕ್ಕೆ ಸಂಘಟನೆಯ ನೂರಾರು ಮಹಿಳೆಯರು ಬೆಂಬಲಿಸಿ ಪ್ರತಿಭಟಿಸುತ್ತಾರೆ. ಎನ್‌ಆರ್‌ಸಿ-ಸಿಎಎ ಹೋರಾಟ ಶುರುವಾದಾಗ ಇವರ ಸಂಘಟನೆ 48 ದಿನಗಳ ಕಾಲ ದಾವಣಗೆರೆಯಲ್ಲಿ ಇದನ್ನು ವಿರೋಧಿಸಿ ಶಾಹಿನ್‌ಬಾಗ್ ಮಾದರಿಯಲ್ಲಿ ಸತ್ಯಾಗ್ರಹ ಮಾಡುತ್ತದೆ. ಮುಂದೆ 2023ರಲ್ಲಿ ‘ದಲಿತ-ಮುಸ್ಲಿಮ್ ಮಹಿಳಾ ಒಕ್ಕೂಟ’ ಎಂದು ಮರುನಾಮಕರಣ ಮಾಡುತ್ತಾರೆ. ಇದೀಗ ‘ನೆರಳು’ ಬೀಡಿ ಕಾರ್ಮಿಕ ಮಹಿಳೆಯರ ಸಂಘಟನೆಯಲ್ಲಿ 1,300 ರಷ್ಟು ಸದಸ್ಯತ್ವ ಪಡೆದಿದ್ದಾರೆ. 700 ಮಹಿಳೆಯರು ದಲಿತ-ಮುಸ್ಲಿಮ್ ಮಹಿಳಾ ಒಕ್ಕೂಟದಲ್ಲಿದ್ದಾರೆ.
ಮುಂದೆ ಹೋರಾಟ, ಪ್ರತಿಭಟನೆಯ ಜತೆಗೆ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ನೆಲೆಯಲ್ಲಿ ಚಿಕ್ಕ ಚಿಕ್ಕ ಮಹಿಳಾ ಸ್ವಸಹಾಯ ಸಂಘಗಳನ್ನು ಕಟ್ಟುತ್ತಾರೆ. ಇದನ್ನು ಮುಂದುವರಿಸಿ ದೊಡ್ಡದಾದ ಆರ್ಥಿಕ ವ್ಯವಹಾರಕ್ಕಾಗಿ ನಮ್ಮದೇ ಆದ ಬ್ಯಾಂಕ್ ಸ್ಥಾಪಿಸಬೇಕು ಎನ್ನುವ ನಿಲುವಿಗೆ ಬರುತ್ತಾರೆ. ಸೌಹಾರ್ದ ಕಾಯ್ದೆ ಅಡಿಯಲ್ಲಿ 2019 ಡಿಸೆಂಬರ್ 7ರಂದು ದುಡಿಯುವ ಮಹಿಳೆಯರೇ ತಮಗಾಗಿ ‘ಮೆಹನತ್ ಮುಸ್ಲಿಂ ಅಲ್ಪಸಂಖ್ಯಾತರ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್’ ಶುರುಮಾಡುತ್ತಾರೆ. ಈಗ 709 ಜನ ಶೇರುದಾರರಿದ್ದಾರೆ. ಸುಮಾರು ಒಂದು ರೂ. ಕೋಟಿಯಷ್ಟು ವ್ಯವಹಾರ ನಡೆಯುತ್ತಿದೆ. ಬ್ಯಾಂಕ್‌ನಿಂದ ಸಿಗುವ ಹಣ ಹೊರೆಯಾಗದಂತೆ 1.80 ರೂ. ಬಡ್ಡಿ ದರದಲ್ಲಿ ಕನಿಷ್ಠ 50 ಸಾವಿರ ರೂ. ಸಾಲ ಕೊಡುತ್ತಾರೆ. ಸಾಲ ಪಡೆದ ಮಹಿಳೆ ವಾರಕ್ಕೆ 850 ರೂ.ನಂತೆ ಮರುಪಾವತಿ ಮಾಡುತ್ತಾರೆ. ಕೇವಲ ಆಧಾರ್ ಕಾರ್ಡ್ ಇದ್ದರೂ ಸಾಲ ಕೊಡುತ್ತಾರೆ. ಈಗ ಬ್ಯಾಂಕಿಗೆ ಐದು ವರ್ಷವಾಗಿದೆ.
ಮುಂದಿನ ದಿನಗಳಲ್ಲಿ ಬ್ಯಾಂಕ್ ಉತ್ತಮ ಸ್ಥಿತಿಗೆ ಹೋಗಿ ಆರ್ಥಿಕವಾಗಿ ಸಬಲವಾದರೆ ಮುಂದೆ ಸಾವಿತ್ರಿಬಾಯಿ ಫುಲೆ-ಪಾತಿಮಾ ಶೇಕ್ ಶಾಲೆ ತೆರೆಯಬೇಕೆಂಬ ಕನಸು ಜಬೀನಾ ಮತ್ತವರ ಯೂನಿಯನ್ ಸದಸ್ಯರ ಕನಸಾಗಿದೆ. ಇದರಿಂದಾಗಿ ಕೆಲವರು ಸಣ್ಣಪುಟ್ಟ ವ್ಯಾಪಾರವನ್ನು ಶುರುಮಾಡಿದ್ದಾರೆ. ಕೆಲವರು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದಾರೆ. ಹೀಗೆ ಸಾಲ ಪಡೆದು ಮಕ್ಕಳನ್ನು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್ ಮುಂತಾದ ಕೋರ್ಸ್‌ಗಳಲ್ಲಿ ಓದಿಸುತ್ತಿದ್ದಾರೆ. 20 ವರ್ಷದ ಜಬೀನಾ ಅವರ ಚಳವಳಿಯಲ್ಲಿ ಮುಖ್ಯವಾಗಿ ಮಹಿಳೆಯರು ಸಂಘಟಿತರಾಗಿದ್ದಾರೆ. ಪ್ರತಿಯೊಂದನ್ನೂ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ. ‘‘ಪಕ್ಕದ ಮನೆಯಲ್ಲಿ ಗಂಡ ಹೆಂಡತಿಗೆ ಹೊಡೆಯುತ್ತಿದ್ದರೆ ನಮ್ಮ ಯೂನಿಯನ್ ಮಹಿಳೆಯರು ಮಧ್ಯ ಪ್ರವೇಶಿಸಿ ಪ್ರಶ್ನಿಸುತ್ತಿದ್ದಾರೆ ಇದೇ ದೊಡ್ಡ ಬದಲಾವಣೆ’’ ಎಂದು ಜಬೀನಾ ಹೇಳುತ್ತಾರೆ. ಅಸಂಘಟಿತ ವಲಯದಲ್ಲಿ ದುಡಿಯುವ ಜನರೇ ಹೆಚ್ಚಿರುವ ಹಳೆಯ ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಷಾ ನಗರ, ಶಿವಾಜಿ ನಗರ, ಮೆಹಬೂಬ್ ನಗರ, ಎಸ್.ಎಸ್. ಮಲ್ಲಿಕಾರ್ಜುನ ನಗರದ ‘ಎ’ ಮತ್ತು ‘ಬಿ ಬ್ಲಾಕ್, ಮುಸ್ತಫಾ ನಗರ, ಬೀಡಿ ಕಾರ್ಮಿಕರ ಕಾಲನಿ, ಸಿದ್ರಾಮೇಶ್ವರ ನಗರ, ಕಾರ್ಲ್‌ಮಾರ್ಕ್ಸ್ ನಗರ, ಶಾಸ್ತ್ರಿ ಲೇಔಟ್ ಒಳಗೊಂಡಂತೆ 38 ಸ್ಲಮ್ಮುಗಳು, ಪಕ್ಕದ ಹಳ್ಳಿಗಳಾದ ಆವರಗೊಳ್ಳ, ತುಳುಚಘಟ್ಟ, ದೊಡ್ಡಬಾತಿ, ತೋಳುಣಸೆ, ದೇವರಹಟ್ಟಿ ಮೊದಲಾದ 20 ಹಳ್ಳಿಗಳಲ್ಲಿ ಸಂಘಟನೆಯ ಕಾರ್ಯ ಮಾಡತೊಡಗಿದ್ದಾರೆ.
1992ರ ದಾವಣಗೆರೆಯ ಕೋಮುಗಲಭೆಯ ನಂತರ ಹಿಂದೂ-ಮುಸ್ಲಿಮ್ ಎಂದು ಪ್ರತ್ಯೇಕತೆ ಹೆಚ್ಚಾಗಿತ್ತು. ಮುಸ್ಲಿಮರು ಅಭದ್ರತೆಯಿಂದ ಒಂದು ಕಡೆ ಸೇರತೊಡಗಿದ್ದರು. ಹೀಗಿರುವಾಗ ಜಬೀನಾ ಅವರು ತಮ್ಮ ಚಳವಳಿಯ ಮುಖೇನ ಹೀಗೆ ಪ್ರತ್ಯೇಕವಾದ ಹಿಂದೂ-ಮುಸ್ಲಿಮ್ ಜನರನ್ನು ಬೆಸೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಯೂನಿಯನ್ ಮಹಿಳೆಯರು ಈ ಬಾರಿ ಲೋಕಸಭಾ ವಿಧಾನಸಭಾ ಚುನಾವಣೆಯಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದರ ಫಲವಾಗಿ ನಾಲ್ಕುಬಾರಿ ಗೆದ್ದ ಲೋಕಸಭಾ ಸದಸ್ಯರು ಇದೀಗ ಬದಲಾಗಿದ್ದಾರೆ. ಯೂನಿಯನ್ ಮಹಿಳೆಯರ ಒಗ್ಗಟ್ಟಿನ ಪ್ರಚಾರದ ಕೆಲಸವೂ ಇದರ ಹಿಂದಿದೆ ಎನ್ನುವುದು ಜಬೀನಾ ಅವರ ಅಭಿಪ್ರಾಯ.
ಈ ತರಹದ ಬದಲಾವಣೆಗಳಿಂದ ಯಾರು ಆರಂಭಕ್ಕೆ ಜಬೀನಾ ಅವರನ್ನು ಅವಮಾನ ಮಾಡಿದ್ದರೋ ಅಂಥವರೇ ಈಗ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಾರ್ಮಿಕ ಹೋರಾಟದ ಗಂಡಸರ ಚರಿತ್ರೆ ಇರುವ ದಾವಣಗೆರೆಯಲ್ಲಿ ಜಬೀನಾ ಅವರು ಒಬ್ಬ ಮಹಿಳಾ ಹೋರಾಟಗಾರ್ತಿಯನ್ನು ಕಾಣಿಸಿದ್ದಾರೆ. ಮೊದ ಮೊದಲು ಇತರ ಎಡಪಂಥದ ಬೇರೆ ಬೇರೆ ಪ್ರಗತಿಪರ ಗಂಡಸರ ನಾಯಕತ್ವದ ಸಂಘಟನೆಗಳು ಜಂಟಿ ಹೋರಾಟಗಳಲ್ಲಿ ಜಬೀನಾ ಅವರ ಸಂಘಟನೆಯನ್ನು ಪರಿಗಣಿಸುತ್ತಿರಲಿಲ್ಲ. ಇದೀಗ ಜಬೀನಾ ಅವರ ಸಂಘಟನೆಯ ಯೂನಿಯನ್‌ನ್ನು ಎಲ್ಲಾ ಪ್ರಗತಿಪರ ಸಂಘಟನೆಗಳು ಜಂಟಿ ಹೋರಾಟಕ್ಕೆ ಆಹ್ವಾನಿಸುತ್ತಿವೆ. ಜಬೀನಾ ಅವರು ಸಂಘಟಿಸಿದ ಹೋರಾಟಕ್ಕೂ ಬೇರೆ ಬೇರೆ ಸಂಘಟನೆಯವರು ಜತೆಯಾಗುತ್ತಿದ್ದಾರೆ. ಮಹಿಳೆಯರಿಲ್ಲದ ಯಾವ ಸಂಘಟನೆಯೂ ಬಹಳ ಕಾಲ ಮುಂದುವರಿಯುವುದಿಲ್ಲ ಎನ್ನುವುದು ಜಬೀನಾರ ನಂಬಿಕೆ. ಹಾಗೆಯೇ ಸಂಘಟನೆಗೆ ಬಲ ತುಂಬಿದ ಎಲ್ಲಾ ಮಹಿಳೆ ಯರನ್ನೂ, ಎಲ್ಲಾ ಹೋರಾಟಗಳ ಜತೆಗಿರುವ ಕರಿಬಸಪ್ಪ ಅವರನ್ನು ನೆನೆಯುತ್ತಾರೆ. ಜಬೀನಾ ನಿರಂತರ ಮಹಿಳೆಯರ ಪರವಾಗಿ ದುಡಿಯುವ ಗಟ್ಟಿಗಿತ್ತಿಯಾಗಿ ಹೊರ ಹೊಮ್ಮಿದ್ದಾರೆ. ಜಬೀನಾ ಅವರ ಹೋರಾಟದ ಹೆಜ್ಜೆಗಳು ಮತ್ತಷ್ಟು ಗಟ್ಟಿಯಾಗಲಿ.