ಓ ಮೆಣಸೇ...

Update: 2023-07-02 18:44 GMT

ಮಂದಿರ ಕೆಡವಿ ಮಸೀದಿ ಕಟ್ಟಿದರೆ ಮುಂದೊಂದು ದಿನ ಆ ಮಸೀದಿ ಕೆಡವಿ ದೇಗುಲ ಕಟ್ಟುತ್ತೇವೆ -ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ

ರಾಜಕೀಯದಲ್ಲಿ ದೀವಾಳಿಯಾದ ಬಳಿಕ ನೀವೀಗ ಕಟ್ಟಡ ಕಟ್ಟುವ ಮತ್ತು ಬೀಳಿಸುವ ಧಂದೆ ಆರಂಭಿಸಿದ್ದೀರಾ?

ರಾಜ್ಯ ಸರಕಾರದ ಉಚಿತ ಕೊಡುಗೆಗಳ ಬ್ರಹ್ಮಾಸ್ತ್ರ ನಮ್ಮ ಕೈಯಲ್ಲಿದೆ -ಆರ್. ಅಶೋಕ್, ಮಾಜಿ ಸಚಿವ

ಹಾಗೆ ಕೈಯಲ್ಲಿರುವ ಬ್ರಹ್ಮಾಸ್ತ್ರವನ್ನು ಬಹುಕಾಲ ಬಳಸದೆ ಇಟ್ಟುಕೊಂಡರೆ ಅದು ನಿಮ್ಮ ವಿರುದ್ಧವೇ ಸಿಡಿದು ಬೀಳುತ್ತದೆ.

ನವ ಭಾರತ ಸಂಕಲ್ಪದಲ್ಲಿ ಗೊಂದಲಕ್ಕೆ ಅವಕಾಶವಿಲ್ಲ -ನರೇಂದ್ರ ಮೋದಿ, ಪ್ರಧಾನಿ

ಮತ್ತೇಕೆ ರಾವಣನ ಕಾಲದ ಭಾರತ ನಿರ್ಮಿಸಲು ಹೊರಟಿದ್ದೀರಿ?

ವಿಧಾನಪರಿಷತ್ತಿಗೆ ಆಯ್ಕೆಯಾಗುವ ಮೂಲಕ ನನ್ನ ರಾಜಕೀಯ ಜೀವನದ ಹೊಸ ಮನ್ವಂತರ ಆರಂಭವಾದಂತಾಗಿದೆ -ಜಗದೀಶ್ ಶೆಟ್ಟರ್, ಮಾಜಿ ಸಿಎಂ

ವೃದ್ಧಾಪ್ಯದ ಮನ್ವಂತರ ರಾಜಕೀಯ ವಿಶ್ರಾಂತಿಯ ರೂಪದಲ್ಲಿರುವುದು ಒಳ್ಳೆಯದು.

ವೀರಶೈವ ಲಿಂಗಾಯತರೆಲ್ಲ ಶೂದ್ರರು -ಪ್ರಭಾಕರ ಕೋರೆ, ವೀರಶೈವ ಲಿಂಗಾಯತ ಮಹಾಸಭೆಯ ಉಪಾಧ್ಯಕ್ಷ

ಶೂದ್ರರ ಸರಕಾರ ಬಂದಾಗ ಪ್ರಕಟವಾಗಿರುವ ಈ ಹೇಳಿಕೆ, ಸರಕಾರ ಬದಲಾದಾಗ ಬದಲಾಗಬಾರದು.

ಈಗಿನ ಕಾಂಗ್ರೆಸ್ ಸರಕಾರದಲ್ಲಿ ಅಧಿಕಾರಿಗಳೇ ದಲ್ಲಾಳಿಗಳು -ಮುನಿರತ್ನ, ಶಾಸಕ

ಅಂದರೆ ದಲ್ಲಾಳಿಗಳ ಪಾತ್ರದಲ್ಲಿದ್ದ ಫುಡಾರಿಗಳು ನಿರುದ್ಯೋಗಿಗಳಾಗಿದ್ದಾರೆಯೇ?

ಡಿಸಿಎಂ ಡಿಕೆಶಿಗೂ, ಬೆಂಗಳೂರಿಗೂ ಏನು ಸಂಬಂಧ ಗೊತ್ತಾಗುತ್ತಿಲ್ಲ -ಅಶ್ವತ್ಥ ನಾರಾಯಣ, ಮಾಜಿ ಸಚಿವ

ಅವರೇನು ಬಿಹಾರದಿಂದ ಬಂದವರೇನು?

ಬಿಜೆಪಿ ನನಗೆ ಎಕ್ಸ್‌ಪೀರಿಯನ್ಸ್, ಎಕ್ಸ್‌ಪೋಸ್ ಎರಡಕ್ಕೂ ಅವಕಾಶ ಮಾಡಿಕೊಟ್ಟಿದೆ -ಸಿ.ಟಿ.ರವಿ, ಮಾಜಿ ಶಾಸಕ

ಬೇರಾವುದೇ ಪಕ್ಷ ಈ ರೀತಿ ಸಾರ್ವಜನಿಕವಾಗಿ ಬಟ್ಟೆ ಕಳಚಿಕೊಂಡು ಮೈಪರಚಿಕೊಳ್ಳುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ.

ಬ್ರಾಹ್ಮಣ ಸಮುದಾಯಕ್ಕೆ ಭಗವಂತ ಪ್ರತಿಭೆ ನೀಡಿದ್ದರೂ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ -ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ

ಕೆಲವರು ದೇವರು ತಮಗೆ ಕೊಟ್ಟ ಪ್ರತಿಭೆಯನ್ನು ಇತರ ಜಾತಿಗಳ ಜನರ ಪ್ರತಿಭೆಯನ್ನು ಹತ್ತಿಕ್ಕಲಿಕ್ಕಾಗಿ ಧಾರಾಳ ಬಳಸಿಕೊಂಡಿದ್ದಾರೆ.

ಪ್ರಧಾನಿ ಮೋದಿಯ ಭಯದಿಂದ ಹಾವು-ಮುಂಗುಸಿಯಂತಿರುವ ವಿರೋಧ ಪಕ್ಷಗಳು ಈಗ ಒಂದಾಗಿವೆ -ಕೇಶವ ಪ್ರಸಾದ್ ವೌರ್ಯ, ಉ.ಪ್ರ. ಡಿಸಿಎಂ

ಅಜ್ಞಾನಿಗಳ ಭಯ ಜ್ಞಾನಿಗಳನ್ನು ಒಂದುಗೂಡಿಸುತ್ತದೆ.

ಬಿಜೆಪಿಯಲ್ಲಿ ದಲಿತರು ರಾಜ್ಯಾಧ್ಯಕ್ಷ ಆಗಬಾರದೇ? -ರಮೇಶ್ ಜಿಗಜಿಣಗಿ, ಸಂಸದ

ವಿಪ್ರೋದ್ಧಾರಕ್ಕೆಂದೇ ಕಟ್ಟಲಾದ ಪಕ್ಷದಲ್ಲಿ, ಗೌರವ ಬೇಕಿಲ್ಲದ ಶೂದ್ರರು ಮತ್ತು ದಲಿತರು ಯಾವುದೇ ಆಲಂಕಾರಿಕ ಹುದ್ದೆಯನ್ನು ಖಂಡಿತ ಪಡೆಯಬಹುದು.

ಬಿಜೆಯಲ್ಲಿ ಅಶಿಸ್ತು ಬರಲು ಮೂಲ ಕಾರಣ ವಲಸಿಗರು -ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ

ಪಕ್ಷ ಕೊಳೆಯುವುದಕ್ಕೆ ಹಳೆಯ ಮುದಿ ತಲೆಗಳು ಕಾರಣ.

ಆರು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ 26,000 ಬಾಂಬ್ ದಾಳಿ ನಡೆಸಿರುವ ಬರಾಕ್ ಒಬಾಮಾ ಈಗ ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

ಅವರು ಅಲ್ಪ ಸಂಖ್ಯಾತರ ಮೇಲೆ ಆಕ್ರಮಣ ನಡೆಸಿದ ದಾಖಲೆ ಇಲ್ಲವಾದ್ದರಿಂದ ನಿಮ್ಮ ವಾದವೆಲ್ಲಾ ಠುಸ್ ಆಗಿ ಬಿಟ್ಟಿದೆ.

ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ಕಂಡಿಲ್ಲ -ಸಿದ್ದರಾಮಯ್ಯ, ಸಿಎಂ

75 ವರ್ಷಗಳಿಂದ ರಾಜಕೀಯ ದಲ್ಲಿರುವವರು ಕೂಡಾ ಆ ಮಹಾಶಯರ ಕುರಿತು ಇದೇ ಮಾತನ್ನು ಹೇಳುತ್ತಿದ್ದಾರಲ್ಲಾ!

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಹೊಣೆಯನ್ನು ನಾನೇ ಹೊತ್ತಿದ್ದೇನೆ -ನಳಿನ್ ಕುಮಾರ್ ಕಟೀಲು, ಸಂಸದ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಭವಿಸಲಿರುವ ಹೀನಾಯ ಸೋಲಿಗೂ ಈಗಲೇ ಮುಂಗಡವಾಗಿ ಹೊಣೆ ಹೊತ್ತುಕೊಳ್ಳುವುದು ಒಳ್ಳೆಯದು.

ಬಿಹಾರದ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಹುದ್ದೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ -ಶರದ್ ಪವಾರ್, ಎನ್‌ಸಿಪಿ ಅಧ್ಯಕ್ಷ

ಆದ್ದರಿಂದಲೇ ಮಾರಾಮಾರಿ ಇಲ್ಲದೆ ಸಭೆ ಮುಕ್ತಾಯಗೊಂಡಿದೆ.

ಕಾಂಗ್ರೆಸ್ ಪಕ್ಷ ಮಾತ್ರ ಪ್ರತಿಪಕ್ಷ ಏಕತೆಯ ಸಾರಥ್ಯ ವಹಿಸಬಲ್ಲದು -ದೇವೇಗೌಡ, ಮಾಜಿ ಪ್ರಧಾನಿ

ನೀವು ಲೋಕಸಭಾ ಚುನಾವಣೆಯ ನಂತರದ ಸನ್ನಿವೇಶದ ಕುರಿತು ಮಾತನಾಡುತ್ತಿಲ್ಲ ತಾನೇ?

ಮೋದಿ ಸರಕಾರವು ದೇಶದಿಂದ ಡ್ರಗ್ಸ್ ಪಿಡುಗನ್ನು ಬೇರು ಸಹಿತ ಕಿತ್ತೊಗೆಯಲಿದೆ -ಅಮಿತ್ ಶಾ, ಕೇಂದ್ರ ಸಚಿವ

ಮೋದಿ ಸರಕಾರವು, ತಾನೇ ಬಿತ್ತಿ ಬೆಳೆಸಿರುವ 'ಕೋಮುದ್ವೇಷ' ಎಂಬ ಪರಮ ಅಪಾಯಕಾರಿ ಅಮಲನ್ನು ಕೊನೆಗೊಳಿಸಿದರೂ ದೇಶಕ್ಕೆ ತುಂಬಾ ಉಪಕಾರವಾದೀತು.

ಬಸವರಾಜ ಬೊಮ್ಮಾಯಿಯವರೇ, ಡಿಸಿಎಂ ಡಿಕೆಶಿಯವರು ಮನೆಗೆ ಬಂದರೆ ಒಳಗೆ ಸೇರಿಸಿಕೊಳ್ಳಬೇಡಿ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಅದಕ್ಕಾಗಿ ಬೊಮ್ಮಾಯಿವರೇ ಡಿಕೆಶಿ ಮನೆಗೆ ಹೋಗಲು ನಿರ್ಧರಿಸಿದ್ದಾರಂತೆ.

ಶುದ್ಧ ಸಾತ್ವಿಕ ಪ್ರೇಮವೇ ಸಮಾಜ ಸಂಘಟನೆಗೆ ಸ್ವಾಭಾವಿಕ ಆಧಾರ -ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ

ಆದುದರಿಂದ ಅಂತಹ ಪ್ರೇಮಗಳನ್ನು ಭಂಗ ಗೊಳಿಸಿ ಸಮಾಜ ಸಂಘಟನೆಯನ್ನು ಒಡೆಯಬೇಕೆ ? ಕೇಂದ್ರದಿಂದ ನಮಗೆ ಅಕ್ಕಿ ಸಿಗದೇ ಇರುವುದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ -ರಾಮಲಿಂಗಾರೆಡ್ಡಿ, ಸಚಿವ

ಅಕ್ಕಿಗೆ ಬೆರೆಸಲು ಕಲ್ಲುಗಳನ್ನು ಪೂರೈಸಲು ಕೇಂದ್ರವನ್ನು ರಾಜ್ಯ ಬಿಜೆಪಿ ಒತ್ತಾಯಿಸಿದೆಯಂತೆ.

ಕೆ.ಎಸ್. ಈಶ್ವರಪ್ಪರನ್ನು ಕೆಪಿಸಿಸಿಗೆ ಕಳುಹಿಸಿಕೊಟ್ಟರೆ ಅವರಿಗೆ ನಾವು ಶಿಸ್ತು ಕಲಿಸುತ್ತೇವೆ -ಕೆ.ಜೆ.ಜಾರ್ಜ್, ಸಚಿವ

ಒಟ್ಟಿನಲ್ಲಿ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಿ ಎಂದಾಯಿತು.

ಭಾರತದಲ್ಲಿ ವಿರೋಧ ಪಕ್ಷಗಳು ಅಹಿಂಸಾ ಮಾರ್ಗದಲ್ಲಿ ಮತಪೆಟ್ಟಿಗೆಯ ಮೂಲಕ ಮೋದಿ ಸರಕಾರವನ್ನು ಕಿತ್ತೊಗೆಯಲಿದೆ -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮಾಜಿ ಸಿಎಂ

ಆ ಮಾರ್ಗವನ್ನು ಹಿಂದೆ ಅಧಿಕಾರದಲ್ಲಿದ್ದಾಗ ನೀವು ಮುಚ್ಚಿ ಬಿಟ್ಟಿದ್ದೀರಲ್ಲ ?

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!