ಓ ಮೆಣಸೇ...!

Update: 2024-03-04 10:21 GMT
Editor : Naufal | By : ಪಿ. ಎ. ರೈ

ನಾವು ವಿಶ್ವದ ಬೃಹತ್ ಧಾನ್ಯ ಸಂಗ್ರಹ ಯೋಜನೆಗೆ ಚಾಲನೆ ನೀಡಿದ್ದೇವೆ - ನರೇಂದ್ರ ಮೊದಿ, ಪ್ರಧಾನಿ

► ಸಂಗ್ರಹಾಲಯದ ಚಾವಿಯನ್ನು ಅದಾನಿಯ ಕೈಗೆ ವರ್ಗಾಯಿಸುವ ದಿನ ದೇಶದೆಲ್ಲೆಡೆ ಹಬ್ಬ ಆಚರಿಸಲು ಆದೇಶಿಸಿ.

ಮನುಷ್ಯತ್ವವೇ ನನ್ನ ಜಾತಿ - ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ

► ಹೀಗೆಲ್ಲಾ ಸ್ಪಷ್ಟೀಕರಣ ನೀಡುವ ಅಗತ್ಯ ನಿಮಗೆ ಪದೇ ಪದೇ ತಲೆದೋರುವುದೇಕೆ?

‘ಸಂವಿಧಾನ ಉಳಿಸಿ’ ರಾಷ್ಟ್ರೀಯ ಚಳವಳಿಯಾಗಲಿ - ಡಾ. ಎಚ್.ಸಿ. ಮಹದೇವಪ್ಪ, ಸಚಿವ

► ರಾಜಕೀಯ ಅಜೇಂಡಾವನ್ನು ಬದಿಗಿಟ್ಟು ನಡೆಸಬೇಕಾದ ಚಳವಳಿ ಅದು.

ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ - ಸಿ.ಟಿ.ರವಿ, ಮಾಜಿ ಸಚಿವ

► ಇರುವುದು ಛಿದ್ರ ತುಂಡುಗಳು ಮಾತ್ರ.

ವೈಯಕ್ತಿಕ ಆಕಾಂಕ್ಷೆಗಳು ಕಡಿಮೆಯಾಗಿ ಸಾಮಾಜಿಕ ಚಿಂತನೆ ಹೆಚ್ಚಾದಾಗ ವ್ಯಕ್ತಿ ಶ್ರೇಷ್ಠನಾಗಲು ಸಾಧ್ಯ - ರಾಘವೇಂದ್ರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

► ಉಪದೇಶಕರು ಪ್ರಾಮಾಣಿಕರಾಗಿದ್ದಾಗ ಉಪದೇಶಗಳು ಪರಿಣಾಮಕಾರಿಯಾಗುತ್ತವೆ.

ವ್ಯಕ್ತಿಗೆ ಮಾನ ಎಷ್ಟು ಮುಖ್ಯವೋ ರಾಜಕೀಯ ಪಕ್ಷಗಳಿಗೂ ಅಷ್ಟೇ ಮುಖ್ಯ - ಹೈಕೋರ್ಟ್

► ಸದ್ಯ ಕೋರ್ಟ್ಗಳ ಮಾನದ ಬಗ್ಗೆಯೇ ಜನರಲ್ಲಿ ವ್ಯಾಪಕ ಆಶಂಕೆಗಳಿವೆ.

ಕಾಂಗ್ರೆಸ್ ಸೇರುವವರು ಬೇಗ ಅರ್ಜಿ ಹಾಕಿಕೊಳ್ಳಿ, ಸುಮ್ಮನೆ ಟೈಂ ವೇಸ್ಟ್ ಮಾಡಬೇಡಿ - ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

► ಕಾಂಗ್ರೆಸ್ ಬಿಟ್ಟು ಹೋಗ ಬಯಸುವವರಿಗೂ ಇಂತಹದೇ ತುರ್ತು ನೋಟಿಸ್ ಕೊಟ್ಟು ಬಿಡಿ. ಪಕ್ಷ ಶುದ್ಧವಾಗಲಿ.

ಕಾಂಗ್ರೆಸ್ ಪಕ್ಷವು ರಾಜಕಾರಣವನ್ನು ಧರ್ಮದ ಜೊತೆಗೆ ಬೆರೆಸುವುದಿಲ್ಲ - ರಾಮಲಿಂಗಾರೆಡ್ಡಿ, ಸಚಿವ

► ಬೆರೆಸುವುದನ್ನು ವಿರೋಧಿಸಿದ ದಾಖಲೆಯೂ ಇಲ್ಲ.

ಕಾಂಗ್ರೆಸ್-ಆಪ್ ಪಕ್ಷ ಮೈತ್ರಿಯಿಂದ ಅವರ ನರಕದ ಹಾದಿ ಸುಗಮವಾಗಿದೆ - ಹರ್ದೀಪ್ಸಿಂಗ್ ಪುರಿ, ಕೇಂದ್ರ ಸಚಿವ

► ನರಕಕ್ಕೆ ಹೋಗುವುದು ಅವರಾಗಿದ್ದರೆ ನೀವೇಕೆ ಇಷ್ಟು ನರ್ವಸ್ ಆಗ್ತಿದ್ದೀರಿ?

ಯಾರೇ ಆದರೂ ಮತೀಯ ವಿಚಾರ, ರಾಜಕೀಯವನ್ನು ಶಾಲಾ ಗೇಟಿನಿಂದ ಹೊರಗೆ ಬಿಟ್ಟು ಬರಬೇಕು - ಭರತ್ ಶೆಟ್ಟಿ, ಶಾಸಕ

► ಜೆರೋಸಾ ಶಾಲೆಗೆ ನುಗ್ಗುವಾಗ ಗೂಂಡಾಗಿರಿಯನ್ನು ಮಾತ್ರ ಗೇಟಿನೊಳಗೆ ಕೊಂಡೊಯ್ದವರು ಯಾರು?

ಬಿಜೆಪಿಯೊಂದಿಗೆ ಮೈತ್ರಿ ನಮಗೆ ಹೆಚ್ಚಿನ ಬಲ ತಂದಿದೆ - ಕುಮಾರಸ್ವಾಮಿ, ಮಾಜಿ ಸಿಎಂ

► ದೀರ್ಘ ಕಾಲದ ಗುಪ್ತ ಮೈತ್ರಿಯಿಂದ ರೋಸಿಹೋಗಿದ್ದವರು ಇದೀಗ ಬಹಿರಂಗ ಮೈತ್ರಿ ಕಂಡು ವಾಂತಿ ಮಾಡಿ ನಿಟ್ಟುಸಿರು ಬಿಡುತ್ತಿದ್ದಾರೆ.

ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ, ಖಾಲಿಸ್ತಾನಿ ಉಗ್ರರು - ಅನಂತಕುಮಾರ್ ಹೆಗಡೆ, ಸಂಸದ

► ಯಾವುದೇ ಪ್ರತಿರೋಧವನ್ನೆದುರಿಸದೆ ಅರುಣಾಚಲ ಪ್ರದೇಶದ ಒಂದು ದೊಡ್ಡ ಭಾಗವನ್ನು ಆಕ್ರಮಿಸಿಕೊಂಡಿರುವ ಚೀನಾದ ಸೈನಿಕರು ಮಾತ್ರ ನಿಮ್ಮ ದೃಷ್ಟಿಯಲ್ಲಿ ದೇಶಭಕ್ತರೇ?

ಕಾಂಗ್ರೆಸ್ ಕೇಂದ್ರದ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿದೆ - ಜಗದೀಶ್ ಶೆಟ್ಟರ್, ಮಾಜಿ ಸಿಎಂ

► ಯಾರ ವಿರುದ್ಧವೇ ಇರಲಿ, ಅಪಪ್ರಚಾರ ನಿಮ್ಮದೇ ಜನ್ಮ ಸಿದ್ಧ ಹಕ್ಕು.

ನನ್ನ ಉತ್ತರಾಧಿಕಾರಿಯಾಗಿ ನಾನು ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ - ಶ್ರೀನಿವಾಸ ಪ್ರಸಾದ್, ಸಂಸದ

► ಉತ್ತರಾಧಿಕಾರಿ ಯಾರಾದರೇನಂತೆ? ಎಂಭತ್ತರ ಆಸುಪಾಸಿನವರು ನಿವೃತ್ತರಾಗುತ್ತಾರೆ ಎಂಬುದೇ ಒಂದು ಶುಭಸುದ್ದಿ.


ಜ್ಞಾನಿಗಳು ಸದಾ ತೃಪ್ತರಾಗಿರುತ್ತಾರೆ - ರವಿಶಂಕರ್ ಗುರೂಜಿ, ಆರ್ಟ್ಸ್ ಆಫ್ ಲಿವಿಂಗ್ ಸಂಸ್ಥಾಪಕ

► ಮೋದಿ ಮತ್ತವರ ಪಕ್ಷದವರನ್ನು ಮೆಚ್ಚಿಸಲು ನೀವು ಸದಾ ಚಡಪಡಿಸುವುದನ್ನು ಕಂಡರೆ ನಿಮಗೆ ಒಂದಿಷ್ಟು ಜ್ಞಾನದ ಅಗತ್ಯ ಇದೆ ಎಂಬುದು ಖಚಿತವಾಗುತ್ತದೆ.

ಗ್ಯಾರಂಟಿಗಳಿಂದಾಗಿ ರಾಜ್ಯ ಸರಕಾರದ ಬಳಿ ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ- ಅಲ್ಲಮ ಪ್ರಭು ಪಾಟೀಲ್, ಕಾಂಗ್ರೆಸ್ ಶಾಸಕ

► ಒಂದು ಪಕ್ಷದ ಬಳಿ ನಿಮ್ಮಂತಹ ಜನವಿರೋಧಿ ಶಾಸಕರಿದ್ದರೆ ಆ ಪಕ್ಷಕ್ಕೆ ಶತ್ರುಗಳ ಅಗತ್ಯವಿರುವುದಿಲ್ಲ.

ಜಾತಿವಾರು ಜನಗಣತಿ ವರದಿ ಸೋರಿಕೆ ಆಗಿಲ್ಲ- ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

► ನಿಮ್ಮ ಸರಕಾರ ಅದನ್ನು ಇಷ್ಟು ದೀರ್ಘ ಕಾಲ ಅಷ್ಟೊಂದು ಜೋಪಾನವಾಗಿ ಗುಟ್ಟಾಗಿಟ್ಟಿರುವುದು ಯಾರ ಹಿತ ಕಾಪಾಡುವುದಕ್ಕೆ?

ಕೋವಿಡ್ ನಂತರ ಹೆಚ್ಚುತ್ತಿರುವ ಯುವ ಜನರ ಸಾವಿನ ಸಂಶೋಧನೆ ಅಗತ್ಯ- ಆರಗ ಜ್ಞಾನೇಂದ್ರ, ಮಾಜಿ ಸಚಿವ

► ಸಂಶೋಧನೆಯ ಕೆಲಸವನ್ನು ಬಾಬಾ ರಾಮ್ ದೇವ್ ಅವರಿಗೆ ವಹಿಸಿಕೊಟ್ಟು ಪತಂಜಲಿಯ ಮೂಲಕ ಹೊಸ ಔಷಧಿಯನ್ನು ಮಾರುಕಟ್ಟೆಗಿಳಿಸುವ ಆಲೋಚನೆಯೇ?

ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಬೇಕು - ಎನ್. ರವಿಕುಮಾರ್, ವಿ.ಪ. ಸದಸ್ಯ

►ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯನ್ನು ನಿಮ್ಮ ಪಕ್ಷದವರು ಪ್ರಸ್ತಾಪಿಸಿದಷ್ಟು ಬಾರಿ ಸಾಕ್ಷಾತ್ ಪಾಕಿಸ್ತಾನದವರು ಕೂಡಾ ಪ್ರಸ್ತಾಪಿಸಿರಲಿಕ್ಕಿಲ್ಲ.

ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಮತಪತ್ರ ವಿಧಾನವನ್ನು ಅನುಸರಿಸಿದರೆ ತಂತ್ರಜ್ಞಾನವನ್ನು ವಿರೋಧಿಸಿದಂತೆ - ಪ್ರಶಾಂತ್ ಭೂಷಣ್, ಹಿರಿಯ ನ್ಯಾಯವಾದಿ

► ತಂತ್ರ ಜ್ಞಾನ ಹೊಸತೋ ಹಳತೋ ಎಂಬುದಕ್ಕಿಂತ, ಅದು ಎಷ್ಟು ವಿಶ್ವಾಸಾರ್ಹ ಎಂಬುದು ಮುಖ್ಯ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಪಿ. ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!