ಇಲ್ಲಿ ಪ್ರತಿರೋಧ ಎಂಬುದು ಅಪರಾಧ
ಅಸಮಾನತೆಯ ಕುರಿತಾದ ಆಕ್ರೋಶ ಮತ್ತು ಅಸಮಾಧಾನ ತಡೆಯಲು ಶೋಷಕ ವರ್ಗಗಳು, ಮನುವಾದಿ ಶಕ್ತಿಗಳು ಕೋಮುವಾದವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಈ ಹುನ್ನಾರವನ್ನು ವಿರೋಧಿಸುವವರನ್ನು ಸಲ್ಲದ ಆರೋಪ ಹೊರಿಸಿ ಹತ್ತಿಕ್ಕಲಾಗುತ್ತಿದೆ. ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಚರಿತ್ರೆಯಲ್ಲಿ ಸಿಡಿದೆದ್ದಿದ್ದ ಬಸವಣ್ಣನವರು, ಬಾಬಾಸಾಹೇಬರು, ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾ ಚೇತನಗಳು ಇಂದು ಬದುಕಿದ್ದರೆ, ಈ ವ್ಯವಸ್ಥೆ ಅವರನ್ನು ನಗರ ನಕ್ಸಲರೆಂದು ಕರೆದು ಒಳಗೆ ಹಾಕುತ್ತಿತ್ತು. ಇದಕ್ಕೆ ನಮ್ಮ ಕಣ್ಣ ಮುಂದಿನ ಉದಾಹರಣೆ, ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್‌ಯಾವುದೇ ಶೋಷಕ ವ್ಯವಸ್ಥೆ ತನ್ನ ಎದುರಿನ ಪ್ರತಿರೋಧವನ್ನು ಸಹಿಸುವುದಿಲ್ಲ.
ಕಳೆದ ಒಂಭತ್ತು ವರ್ಷಗಳು ಭಾರತದ ಕೆಲವರ ಪಾಲಿಗೆ ಸಂಭ್ರಮದ ಕಾಲವಾದರೆ, ಬಹುತೇಕ ಭಾರತಿಯರ ಪಾಲಿಗೆ ನರಕ ಯಾತನೆಯ ದಿನಗಳು. ಬಡತನ, ಬೆಲೆ ಏರಿಕೆ, ಅಸಮಾನತೆ ಹಿಂದೆ ಇರಲಿಲ್ಲ ಎಂದಲ್ಲ. ಆಗಲೂ, ಯಾವಾಗಲೂ ಇವು ಇದ್ದೇ ಇವೆ. ಸಮತೆಯ ಸಮಾಜದ ಕನಸು ಕನಸಾಗಿಯೇ ಉಳಿದಿದೆ.
ಆದರೆ 2014 ರಿಂದ ಭಾರತದಲ್ಲಿ ಹಸಿದವರು ಹಸಿವೆಯಾಗಿದೆ ಎಂದು ನರಳುವುದು, ನೊಂದವರು ತಮ್ಮ ನೋವನ್ನು ವ್ಯಕ್ತಪಡಿಸುವುದು ಮತ್ತು ಅಧಿಕಾರದಲ್ಲಿರುವ ಪಕ್ಷದ ಜೊತೆಗೆ ಭಿನ್ನಾಭಿಪ್ರಾಯ ಹೊಂದಿರುವವರು ಅದನ್ನು ಬಹಿರಂಗವಾಗಿ ಹೇಳುವುದು ಅಪರಾಧವೆಂದು ಪರಿಗಣಿಸಲಾಗಿದೆ. ಸರಕಾರವನ್ನು ಟೀಕಿಸುವುದು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಅನೇಕ ಬಾರಿ ಹೇಳಿದರೂ ಕೂಡ ಪ್ರಭುತ್ವದ ಸೂತ್ರ ಹಿಡಿದವರು ಭಿನ್ನಮತ ಹತ್ತಿಕ್ಕುತ್ತಲೇ ಬಂದರು.
ತಮ್ಮ ತಪ್ಪುಗಳನ್ನು ಬೆರಳೆತ್ತಿ ತೋರಿಸುವುದು ರಾಷ್ಟ್ರದ್ರೋಹ. ವಿರೋಧಿಗಳನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯುತ್ತ ಅವರ ಧ್ವನಿ ಅಡಗಿಸಲು ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಂಡರು. ಒಂದೇ ಒಂದು ತಪ್ಪುಮಾಡದವರನ್ನು ನಗರ ನಕ್ಸಲರೆಂದು ಕರೆದು ಸೆರೆಮನೆಗೆ ತಳ್ಳಿದರು. ಆನಂದ್ ತೆಲ್ತುಂಬ್ಡೆ ಅವರಂಥ ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕರನ್ನು ರಾಷ್ಟ್ರಕ್ಕೆ ಅಪಾಯ ಎಂದು ಕರೆದು ಕತ್ತಲ ಕೋಣೆಗೆ ಹಾಕಿದರು. ಕೋವಿಡ್ ಬಂದಾಗಲೂ ಇವರಿಗೆ ಚಿಕಿತ್ಸೆ ನೀಡಲಿಲ್ಲ.
ಚಿಕಿತ್ಸೆ ದೊರಕದೇ ಸ್ಟ್ಯಾನ್ ಸ್ವಾಮಿ ಜೈಲಿನಲ್ಲೇ ಕೊನೆಯುಸಿರೆಳೆದರು. ಜಗತ್ತಿನ ಹದಿನಾರು ವಿಶ್ವವಿದ್ಯಾನಿಲಯಗಳ ಸಂದರ್ಶನ ಪ್ರಾಧ್ಯಾಪಕರಾದ ಆನಂದ್ ತೆಲ್ತುಂಬ್ಡೆ ಅವರಿಗೂ ಕೋವಿಡ್ ಬಂದಿತ್ತು. ಅವರು ಹೇಗೋ ಬದುಕಿ ಉಳಿದರು. ಇವರು ಮಾತ್ರವಲ್ಲ ಇವರೊಂದಿಗೆ ವರವರರಾವ್ ಅವರಂಥ ಹೆಸರಾಂತ ಕವಿ, ಗೌತಮ್ ನವ್ಲಾಖಾ ಅವರಂಥ ಪತ್ರಕರ್ತ, ಸೇರಿದಂತೆ ಬೌದ್ಧಿಕ ಲೋಕದ ಅನೇಕರನ್ನು ಕತ್ತಲ ಕೋಣೆಗೆ ತಳ್ಳಿದರು. ಆನಂದ್ ತೆಲ್ತುಂಬ್ಡೆ ಬಾಬಾಸಾಹೇಬ ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಅವರನ್ನು ವಿವಾಹವಾದವರು. ಇಂಥವರಿಗೇ ಇಲ್ಲಿ ಸುರಕ್ಷತೆ ಇರಲಿಲ್ಲ.
ಈಗ ಜಾಮೀನು ಮೇಲೆ ಬಿಡುಗಡೆಯಾಗಿರುವ ಆನಂದ್ ತೆಲ್ತುಂಬ್ಡೆ ಅವರಿಗೆ ಕರ್ನಾಟಕದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಷ್ಟ್ರ ಮಟ್ಟದ ಬಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತು.ಈ ಪ್ರಶಸ್ತಿಯನ್ನು ಸ್ವೀಕರಿಸಲು ಕೂಡ ತೇಲ್ತುಂಬ್ಡೆ ಅವರಿಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪೊಲೀಸರ ಪರವಾನಿಗೆ ಪಡೆಯಬೇಕಾಗಿತ್ತು. ಯಾಕೆಂದರೆ ಜಾಮೀನು ಮೇಲೆ ಬಿಡುಗಡೆ ಮಾಡಲು ವಿಧಿಸಿದ ಷರತ್ತುಗಳಲ್ಲಿ ಮುಂಬೈನಿಂದ ಹೊರಗೆ ಹೋಗಲು ಅನುಮತಿ ಪಡೆಯಬೇಕಾಗಿತ್ತು. ಈ ಅನುಮತಿ ಪಡೆಯಲು ಪ್ರಭುತ್ವದ ಆಜ್ಞಾಧಾರಕರಾದ ಪೊಲೀಸರು ಎಷ್ಟು ಕಾಡಿದರೆಂದರೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಹಿಂದಿನ ದಿನ ಸಂಜೆಯ ವಿಮಾನಕ್ಕೂ ಬೆಂಗಳೂರಿಗೆ ಬರಲು ಅವರಿಗೆ ಆಗಲಿಲ್ಲ. ಕೊನೆಗೆ ವಕೀಲರ ಪ್ರಯತ್ನ ದಿಂದಾಗಿ ಬೆಳಗಿನ ಜಾವ 2 ಗಂಟೆಗೆ ಮುಂಬೈನಿಂದ ಬೆಂಗಳೂರಿಗೆ ಹೋಗುವ ವಿಮಾನ ಹತ್ತಿ ಅವರು ನಿದ್ದೆಗೆಟ್ಟು ಬಂದರು.
ಈ ಪರಿ ಕಾಡಲು ಆನಂದ್ ತೆಲ್ತುಂಬ್ಡೆ ಮಾಡಿರುವ ಅಪರಾಧವಾದರೂ ಏನು? ಅತ್ಯಂತ ಮೆದು ಮಾತಿನ ಆನಂದ್ ತೆಲ್ತುಂಬ್ಡೆ ಎಂದೂ ಧ್ವನಿ ಏರಿಸಿ ಮಾತಾಡಿದವರೂ ಅಲ್ಲ. ಆದರೂ ಅವರು ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಚರಿತ್ರೆ, ವೈಚಾರಿಕ ಯಾತ್ರೆಯ ಮೇಲೆ ಹೊಸ ಬೆಳಕು ಚೆಲ್ಲುವ ಅನೇಕ ಪುಸ್ತಕಗಳನ್ನು ಬರೆದರು.ಕಳೆದ ಶತಮಾನದಲ್ಲಿ ಅಂಟೋನಿಯಾ ಗ್ರಾಮ್ಶಿ
ಮಾರ್ಕ್ಸ್‌ವಾದಿ ಸಿದ್ಧಾಂತದ ಮೇಲೆ ಹೊಸ ಬೆಳಕು ಚೆಲ್ಲಿ ವ್ಯಾಖ್ಯಾನಿಸಿದಂತೆ ತೇಲ್ತುಂಬ್ಡೆ ಅವರು ಬಾಬಾ ಸಾಹೇಬರ ಸಿದ್ಧಾಂತದ ಸಮಕಾಲೀನ ಪ್ರಸ್ತುತತೆ ಬಗ್ಗೆ ಹೊಸ ವ್ಯಾಖ್ಯಾನ ನೀಡಿ ವಿಶ್ಲೇಷಣೆ ಮಾಡಿದವರು. ಅಸಮಾನತೆ ಮತ್ತು ಜಾತಿ ಪದ್ಧತಿಯ ಕ್ರೌರ್ಯವನ್ನು ವಿರೋಧಿಸಿದರು. ಕೋಮುವಾದಿ ಶಕ್ತಿಗಳಿಂದ ಹೈಜಾಕ್ ಆಗುತ್ತಿರುವ ಅಂಬೇಡ್ಕರ್ ಅವರನ್ನು ಕಾಪಾಡಬೇಕೆಂದು ಕಾಳಜಿ ವಹಿಸಿದವರು. ಗೋವಾ ಐಐಟಿ, ಭಾರತೀಯ ಪೆಟ್ರೋಲಿಯಂ ಕಂಪೆನಿಯ ಉನ್ನತ ಹುದ್ದೆಯಲ್ಲಿ ಇದ್ದರೂ ವ್ಯವಸ್ಥೆಯ ಜೊತೆಗೆ ಎಂದೂ ರಾಜಿ ಮಾಡಿಕೊಂಡವರಲ್ಲ.ಈ ರಾಜಿ ರಹಿತ ನಿಲುವೇ ಅವರ ಮೇಲೆ ಪ್ರಭುತ್ವದ ಕೆಂಗಣ್ಣಿಗೆ ಕಾರಣ.
ಈ ಫ್ಯಾಶಿಸ್ಟ್ಟ್ ಪ್ರಭುತ್ವದ ಕ್ರೌರ್ಯಕ್ಕೆ ಸಿಕ್ಕು ನರಳಿದ ಇನ್ನೊಬ್ಬ ವ್ಯಕ್ತಿ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಿ.ಎನ್.ಸಾಯಿಬಾಬಾ. ದೇಹದ ಶೇಕಡಾ ತೊಂಭತ್ತು ಭಾಗ ಅಂಗವಿಕಲರಾಗಿರುವ ಸಾಯಿಬಾಬಾ ಅವರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಯಿತು. ನಾಗಪುರ ಜೈಲಿನ ಅಂಡಾ ಸೆಲ್ ನಲ್ಲಿ ಹಾಕಿ ಹಿಂಸಿಸಲಾಯಿತು. ಮಾವೊವಾದಿಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿ ಅವರು ಮತ್ತು ಇತರ ಐವರನ್ನು ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಕೊಳೆ ಹಾಕಲಾಯಿತು. ಅವರನ್ನು ಮುಂಬೈ ಹೈಕೋರ್ಟ್ ಇತ್ತೀಚೆಗೆ ದೋಷ ಮುಕ್ತಗೊಳಿಸಿದೆ. ವಿಶ್ವ ಗುರುಗಳು ಅಧಿಕಾರಕ್ಕೆ ಬಂದ 2014 ರಲ್ಲಿ ಸಾಯಿಬಾಬಾ ಅವರನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಸಾಯಿಬಾಬಾ ಮತ್ತು ಇತರ ನಾಲ್ವರು ತಪ್ಪಿತಸ್ಥರು ಎಂದು ತೀರ್ಪು ನೀಡಿತು. ಆರೋಪಿಗಳ ಪೈಕಿ ಐವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಇವರ ಪೈಕಿ ಒಬ್ಬರು ಜೈಲಿನಲ್ಲಿ ಸಾವಿಗೀಡಾದರು. ಕೊನೆಗೆ ಮುಂಬೈ ಹೈಕೋರ್ಟ್ 2022ರಲ್ಲಿ ಇವರನ್ನು ದೋಷ ಮುಕ್ತ ಗೊಳಿಸಿತ್ತು. ಇದನ್ನು ಪ್ರಶ್ನಿಸಿ ಎನ್‌ಐಎ ಸುಪ್ರೀಂ ಕೋರ್ಟಿಗೆ ಹೋಗಿದ್ದರಿಂದ ಸುಪ್ರೀಂ ಕೋರ್ಟ್ ಸತ್ಯಾಸತ್ಯತೆಯ ಆಧಾರದಲ್ಲಿ ಹೊಸದಾಗಿ ವಿಚಾರಣೆ ನಡೆಸಲು ಸೂಚಿಸಿತ್ತು.
ಇದೀಗ ಮುಂಬೈ ಹೈಕೋರ್ಟ್ ಮತ್ತೆ ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡು ಸಾಯಿಬಾಬಾ ಮತ್ತಿತರರ ಮೇಲೆ ಪ್ರಾಸಿಕ್ಯೂಷನ್ ಹೊರಿಸಿದ ಆರೋಪಗಳನ್ನು ತಿರಸ್ಕರಿಸಿದೆ. ಆರೋಪಿಗಳ ಮೇಲೆ ಆರೋಪ ಸಾಬೀತುಪಡಿಸಲು ಮಹಾರಾಷ್ಟ್ರ ಸರಕಾರ ನೀಡಿರುವ ಸಾಕ್ಷ್ಯಾಧಾರಗಳು ನಂಬಲರ್ಹವಲ್ಲ ಎಂದು ಹೈಕೋರ್ಟ್ ಹೇಳಿದೆ. ಪ್ರಾಸಿಕ್ಯೂಷನ್ ಆರೋಪಿಸುವಂತೆ ಯಾವುದೇ ಭಯೋತ್ಪಾದಕ ಚಟುವಟಿಕೆ ಇಲ್ಲವೇ ಮಾವೊವಾದಿ ಸಂಘಟನೆಗಳ ಜೊತೆಗೆ ಇವರು ಸಂಬಂಧ ಹೊಂದಿ ರುವರೆಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಇವರ ಮೇಲೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ಕ್ರಮ ಕೈಗೊಳ್ಳಲು ನೀಡಿರುವ ಅನುಮತಿಯನ್ನು ಮಾನ್ಯ ಮಾಡುವುದಿಲ್ಲ ಎಂಬ ಹೈಕೋರ್ಟ್ ಆದೇಶ ಗಮನಾರ್ಹವಾಗಿದೆ.
ಬಡವರ ಪರ ಮಾತಾಡುವ, ದಲಿತ, ದಮನಿತ ವರ್ಗಗಳ ಪರ ಧ್ವನಿಯೆತ್ತುವ ಪ್ರೊಫೆಸರ್ ಸಾಯಿಬಾಬಾ ಪಾರ್ಶ್ವವಾಯು ಪೀಡಿತ ವ್ಯಕ್ತಿ. ಸದಾ ಗಾಲಿ ಕುರ್ಚಿಯ ಮೇಲೆ ಓಡಾಡುತ್ತಾರೆ. ಇಂಥವರು ಕುರ್ಚಿಯಿಂದ ಎದ್ದು ಬಂದು ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಾರೆ ಎಂಬುದು ದುರುದ್ದೇಶದ ಆರೋಪ. ಸರಕಾರದ ನಿಲುವುಗಳನ್ನು ಇವರು ವಿರೋಧಿಸುತ್ತಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಇಂಥ ಅಮಾನವೀಯ ಯಾತನೆಗೆ ಗುರಿಪಡಿಸಲಾಯಿತು.
ಪ್ರೊ .ಜಿ.ಎನ್.ಸಾಯಿಬಾಬಾ ಅವರು ಆಂಧ್ರಪ್ರದೇಶದ ಅಮಲಾಪುರಂ ನ ಬಡ ರೈತ ಕುಟುಂಬಕ್ಕೆ ಸೇರಿದವರು. ಚಿಕ್ಕಂದಿನಿಂದಲೇ ಪೋಲಿಯೊಗೆ ತುತ್ತಾಗಿ ಎರಡು ಕಾಲುಗಳನ್ನು ಕಳೆದುಕೊಂಡವರು. ಆದರೂ ಅಪಾರ ಪರಿಶ್ರಮದಿಂದ ವ್ಯಾಸಂಗ ಮುಂದುವರಿಸಿ ಹೈದರಾಬಾದ್ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ.ಎ. ಮಾಡಿದವರು. ನಂತರ ದಿಲ್ಲಿಯ ವಿಶ್ವವಿದ್ಯಾನಿಲಯದಲ್ಲೇ ಇಂಗ್ಲಿಷ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಪಾಠ ಮಾಡುತ್ತಿದ್ದರು. ಅವರ ಮೇಲೆ ತೆಲುಗು ಸಾಹಿತಿಗಳಾದ ಗರುಜಾಡ, ಶ್ರೀ ಶ್ರೀ, ಗದ್ದರ್, ವರವರರಾವ್ ಹಾಗೂ ಕೀನ್ಯಾದ ಕ್ರಾಂತಿಕಾರಿ ಲೇಖಕ ಗೂಗಿ ಥಿಯಾಂಗೋ ಮೊದಲಾದವರ ಪ್ರಭಾವವಿತ್ತು. ಹೀಗಾಗಿ ವಿಶ್ವವಿದ್ಯಾಲಯದ ಕೆಲಸದ ಜೊತೆಗೆ ದಲಿತ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇದು ಪ್ರಭುತ್ವದ ದೃಷ್ಟಿಯಲ್ಲಿ ಅಪರಾಧ ವಾಗಿದೆ.
ಫ್ಯಾಶಿಸ್ಟ್ಟ್ ಶಕ್ತಿಗಳ ಕೈವಶವಾದ ಭಾರತದ ಪ್ರಭುತ್ವ ಸಂವಿಧಾನಾತ್ಮಕ ವಾದ ಸಕಲಾಂಗಗಳನ್ನು ನಿಸ್ಸತ್ವಗೊಳಿಸಿರುವ ಪರಿಣಾಮವಾಗಿ ಕೇವಲ ತಾತ್ವಿಕ ಭಿನ್ನಾಭಿಪ್ರಾಯದ ಕಾರಣ ಮಾತ್ರಕ್ಕೆ ಆನಂದ್ ತೆಲ್ತುಂಬ್ಡೆ ಮತ್ತು ಸಾಯಿಬಾಬಾ ಅಂಥವರು ಬಲಿಪಶುಗಳಾಗಬೇಕಾಗಿ ಬಂದಿದೆ.ಉದಾಹರಣೆಗೆ ಮಹಾರಾಷ್ಟ್ರ ಸರಕಾರ ಸಾಯಿಬಾಬಾ ಪ್ರಕರಣದಲ್ಲಿ ಹಾಜರುಪಡಿಸಿದ ಸಾಕ್ಷ್ಯಾಧಾರಗಳು ಆರೋಪಗಳಿಗೆ ಪೂರಕವಾಗಿ ಇರಲಿಲ್ಲ.ಆಯ್ದ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಕಿರುಕುಳ ನೀಡಲೆಂದೇ ಈ ಮಸಲತ್ತು ನಡೆಸಿರುವುದು ಸ್ಪಷ್ಟವಾಗುತ್ತದೆ. ಕಾನೂನುಗಳು ಮಾನವೀಯ ವಾಗಿರಬೇಕೆಂದು ಹೇಳಲಾಗುತ್ತದೆ. ಆದರೆ ಕೆಟ್ಟವರು ಕಾನೂನಿನ ಮೇಲೆ ನಿಯಂತ್ರಣ ಸಾಧಿಸಿದರೆ ನ್ಯಾಯ ಮರೀಚಿಕೆಯಾಗುತ್ತದೆ. ಸಾಯಿಬಾಬಾ ಅವರ ಆಯುಷ್ಯದ ಅಮೂಲ್ಯ ಹತ್ತು ವರ್ಷಗಳು ಜೈಲಿನ ಯಮ ಯಾತನೆಯಲ್ಲಿ ಕಳೆದುಹೋಗಿವೆ. ಅದನ್ನು ತುಂಬಿ ಕೊಡಲು ಯಾರಿಂದಲೂ ಸಾಧ್ಯವಿಲ್ಲ.
ಬಾಬಾಸಾಹೇಬರು ಸಂವಿಧಾನ ರಚನೆಯ ನಂತರ ಒಂದು ಮಾತು ಹೇಳಿದ್ದರು. 1950 ಜನವರಿ 26ರಂದು ನಾವು ವೈರುಧ್ಯಗಳಿಂದ ಕೂಡಿರುವ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತೇವೆ. ಆದರೆ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಸಮಾನತೆ ಮುಂದುವರಿಯುತ್ತದೆ. ರಾಜಕೀಯದಲ್ಲಿ ಒಬ್ಬರಿಗೆ ಒಂದು ಓಟು ಮತ್ತು ಒಂದು ಓಟಿಗೆ ಒಂದು ಮೌಲ್ಯವನ್ನು ಪರಿಗಣಿಸಿರುತ್ತೇವೆ. ಆದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸಿರುತ್ತಿರುತ್ತೇವೆ. ಈ ವೈರುಧ್ಯಗಳಿಂದ ಕೂಡಿದ ಸಾಮಾಜಿಕ ಬದುಕನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ? ಎಷ್ಟು ಕಾಲ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಾನತೆಯನ್ನು ನಿರಾಕರಿಸಲು ಸಾಧ್ಯ? ಇದೇ ಬಗೆಯ ನಿರಾಕರಣೆಯನ್ನು ಮುಂದುವರಿಸುತ್ತಾ ಹೋದರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಎದುರಾಗುತ್ತದೆ. ಆದಷ್ಟು ಬೇಗ ಈ ವೈರುಧ್ಯಗಳಿಂದ ಹೊರಗೆ ಬರದಿದ್ದರೆ ಅಸಮಾನತೆಯಿಂದ ನೊಂದ ಜನರು ನಾವು ಕಷ್ಟ ಪಟ್ಟು ಕಟ್ಟಿರುವ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಫೋಟ ಮಾಡುತ್ತಾರೆ ಎಂದು ಬಾಬಾಸಾಹೇಬರು ಅಂದೇ ಹೇಳಿದ್ದರು. ಅದೀಗ ನಿಜವಾಗುತ್ತಿದೆ.
ಅಸಮಾನತೆಯ ಕುರಿತಾದ ಆಕ್ರೋಶ ಮತ್ತು ಅಸಮಾಧಾನ ತಡೆಯಲು ಶೋಷಕ ವರ್ಗಗಳು, ಮನುವಾದಿ ಶಕ್ತಿಗಳು ಕೋಮುವಾದವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಈ ಹುನ್ನಾರವನ್ನು ವಿರೋಧಿಸುವವರನ್ನು ಸಲ್ಲದ ಆರೋಪ ಹೊರಿಸಿ ಹತ್ತಿಕ್ಕಲಾಗುತ್ತಿದೆ.
ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಚರಿತ್ರೆಯಲ್ಲಿ ಸಿಡಿದೆದ್ದಿದ್ದ ಬಸವಣ್ಣನವರು, ಬಾಬಾಸಾಹೇಬರು, ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾ ಚೇತನಗಳು ಇಂದು ಬದುಕಿದ್ದರೆ, ಈ ವ್ಯವಸ್ಥೆ ಅವರನ್ನು ನಗರ ನಕ್ಸಲರೆಂದು ಕರೆದು ಒಳಗೆ ಹಾಕುತ್ತಿತ್ತು. ಇದಕ್ಕೆ ನಮ್ಮ ಕಣ್ಣ ಮುಂದಿನ ಉದಾಹರಣೆ, ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್‌ಯಾವುದೇ ಶೋಷಕ ವ್ಯವಸ್ಥೆ ತನ್ನ ಎದುರಿನ ಪ್ರತಿರೋಧವನ್ನು ಸಹಿಸುವುದಿಲ್ಲ.