ದೇವದುರ್ಗ ಟೋಲ್ ಬೂತ್ ಧ್ವಂಸ; ಶಾಸಕಿಯ ಪುತ್ರ, ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು

ರಾಯಚೂರು: ದೇವದುರ್ಗ ತಾಲೂಕಿನ ಕಾಕರಗಲ್ ಬಳಿ ಟೋಲ್ ಗೇಟ್ ಕೇಂದ್ರದಿಂದ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಅವರ ಪುತ್ರ ಸಂತೋಷ್ ನಾಯಕ ಹಾಗೂ ಬೆಂಬಲಿಗರು ಸೇರಿ ಟೋಲ್ ಬೂತ್‌ನಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ ಶುಕ್ರವಾರ ಘಟನೆ ನಡೆದಿದೆ.
ಕಲ್ಮಲಾ -ತಿಂಥಿಣಿ ಬ್ರಿಡ್ಜ್ ಹೆದ್ದಾರಿಗೆ ನಿರ್ಮಿಸಿರುವ ಕಾಕರಗಲ್ ಟೋಲ್ ಗೇಟ್ ತೆರವುಗೊಳಿಸಲು ಪ್ರಕ್ರಿಯೆ ನಡೆದರೂ, ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ಆಕ್ರೋಶಗೊಂಡ ಸಂತೋಷ್ ನಾಯಕ ಹಾಗೂ ಸುಮಾರು ಮೂವತ್ತು ಜನ ಬೆಂಬಲಿಗರು ಸೇರಿ ಹಣ ವಸೂಲಿ ಮಾಡುತ್ತಿದ್ದುದನ್ನು ಖಂಡಿಸಿ ಟೋಲ್ ಬೂತ್‌ನಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಗಲಾಟೆ ವೇಳೆ ಸುಮಾರು 19 ಲಕ್ಷ ಮೌಲ್ಯದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿ ಟೋಲ್ ಅಧಿಕಾರಿ ನವೀನ್ ಕುಮಾರ್ ನೀಡಿದ ದೂರಿನ ಅನ್ವಯ ಸಂತೋಷ ನಾಯಕ್ ಸೇರಿದಂತೆ 14 ಜನರ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೇವದುರ್ಗ ತಾಲೂಕಿನಲ್ಲಿ ಎರಡು ಟೋಲ್ ಗೇಟ್‌ಗಳನ್ನು ಆರಂಭಿಸಿದೆ. ಕಲ್ಮಲಾ ಗ್ರಾಮದಿಂದ ತಿಂಥಿಣಿ ಬ್ರಿಡ್ಜ್ ವರೆಗೂ ಎರಡು ಟೋಲ್ ಗಳನ್ನು ನಿರ್ಮಿಸಲಾಗಿದೆ. ಒಂದು ಕಾಕರಗಲ್ ಗ್ರಾಮ ಹಾಗೂ ಜಾಲಹಳ್ಳಿ ಗ್ರಾಮದ ಬಳಿ ಸ್ಥಾಪಿಸಲಾಗಿದೆ.
ಅವೈಜ್ಞಾನಿಕ ಟೋಲ್ ವಿರುದ್ಧ ಈ ಟೋಲ್ ಗೇಟ್‌ಗಳಿಂದ ಹಣ ಸಂಗ್ರಹಿಸುವುದರ ವಿರುದ್ಧ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ರೈತರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದರು.