ಸಿರವಾರ: ಸಿಡಿಲು ಆಲಿಕಲ್ಲು ಮಳೆಗೆ ವ್ಯಕ್ತಿ ಬಲಿ

ರಾಯಚೂರು: ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು, ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದ್ದು ನಾನಾ ಅವಾಂತರ ಸೃಷ್ಟಿಸಿದೆ. ಸಿರವಾರ ತಾಲೂಕಿನ ಕೆ.ಗುಡದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.
55 ವರ್ಷದ ಸಾಯಣ್ಣ ಎಂಬವರು ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಅಮವಾಸ್ಯೆ ಹಿನ್ನೆಲೆ ತಾಯಿ ಹಾಗೂ ಪುತ್ರ ಜಮೀನಿನಲ್ಲಿನ ತಾಯಮ್ಮ ಗುಡಿಗೆ ಪೂಜೆ ಸಲ್ಲಿಸಲು ಹೋಗಿದ್ದ ವೇಳೆ ಸಿಡಿಲು ಬಡಿದಿದೆ.
ಸಿಡಿಲಿನ ಆಘಾತಕ್ಕೆ ಸಾಯಣ್ಣ ಗುಡಿಯಲ್ಲೇ ಸಾವನ್ನಪ್ಪಿದ್ದಾರೆ. ತಾಯಿ 70 ವರ್ಷದ ಲಕ್ಷ್ಮಮ್ಮಗೆ ಗಂಭೀರವಾಗಿ ಗಾಯಗೊಂಡಿದ್ದು, ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸಿರವಾರ , ಮಾನ್ವಿ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದ ಪರಿಣಾಮ ಭತ್ತ, ಮೆಣಸಿನಕಾಯಿ ಬೆಳೆ ಹಾಳಾಗಿದೆ. ಅಕಾಲಿಕ ಮಳೆಯಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.