ಮೋದಿ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ: ಮಾಜಿ ಸಂಸದ ಎಂ.ಉಗ್ರಪ್ಪ

Update: 2025-04-27 14:55 IST
ಮೋದಿ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ: ಮಾಜಿ ಸಂಸದ ಎಂ.ಉಗ್ರಪ್ಪ
  • whatsapp icon

ರಾಯಚೂರು: ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ, ಬೇಹುಗಾರಿಕೆ, ಭದ್ರತೆ ವೈಫಲ್ಯದಿಂದ ಪುಲ್ವಾಮಾ, ಪಹಲ್ಗಾಮ ನಲ್ಲಿ ಉಗ್ರರ ದಾಳಿಯಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ನೈತಿಕೆ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಎಂ.ಉಗ್ರಪ್ಪ ಒತ್ತಾಯಿಸಿದರು.

ಅವರಿಂದು ರಾಯಚೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಪುಲ್ವಾಮಾ ದಾಳಿಯಲ್ಲಿ ಕಾಶ್ಮೀರಕ್ಕೆ 200 ಕೆ.ಜಿಯ ಆರ್ ಡಿಎಕ್ಸ್ ಹೇಗೆ ಬಂತು ಅಂತ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ಇದುವರೆಗೆ ಹೇಳಿಲ್ಲ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಅನೇಕ ದಾಳಿಯಾಗಿವೆ. ಅನೇಕ ಸೈನಿಕರು, ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಅನೇಕರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಸಂವಿಧಾನದ 21 ನೇ ಅನುಚ್ಛೇದದ ಪ್ರಕಾರ ದೇಶದ ನಾಗರಿಕರ ರಕ್ಷಣೆ, ಸ್ವಾತಂತ್ರ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಇದನ್ನು ನಿರ್ವಹಣೆ ಮಾಡುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಮನ ಹೆಸರಿನಲ್ಲಿ ಆಡಳಿತ ನಡೆಸುವ ಪ್ರಧಾನಿ‌ಮೋದಿ ಅವರು ರಾಮನ ಆದರ್ಶ ಪಾಲಿಸುತ್ತಿಲ್ಲ. ಸಬ್ ಕಾ ಸಾತ್, ಸಬ್ ಕಾ‌ ವಿಕಾಸ್, ಅಚ್ಚೇ  ದಿನ್ ಬರಲಿದೆ ಎಂದು ಅಧಿಕಾರಕ್ಕೆ ಬಂದು ಏನು ಮಾಡುತ್ತಿದ್ದಾರೆ. ಇದೇನಾ ಅಚ್ಛೇ ದಿನ್?  ಯಾವ ದೇಶದ, ರಾಜ್ಯದ ಬೇಹುಗಾರಿಕೆ, ಭದ್ರತೆ ಕಾಪಾಡುವ ಇಲಾಖೆ ವೈಫಲ್ಯವಾದರೆ ದೇಶದಲ್ಲಿ ಅಶಾಂತಿ ಸೃಷ್ಠಿಯಾಗಿ ದೇಶದ ನೆಮ್ಮದಿ‌‌ ಹಾಳಾಗಿ ಅರಾಜಕತೆ ಸೃಷ್ಠಿಯಾಗುತ್ತೆ ಅಂತ‌  700 ವರ್ಷಗಳ‌ ಹಿಂದೆ ರಾಮಾಯಣದಲ್ಲಿ ರಾಮ ಹೇಳಿದ್ದನ್ನು ನೆನಪಿಸಿಕೊಳ್ಳಬೇಕು ಎಂದರು.

ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಸಲ್ಲದು. ದೇಶದ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಯಾವುದೇ ನಿರ್ಧಾರ ಕೈಗೊಂಡಿದ್ದರೆ ಸಹಕಾರ ನೀಡಲಿದೆ. ಆದರೆ ಸೈನಿಕರ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.

ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ದುಬೈ ಪ್ರವಾಸ ರದ್ದುಗೊಳಿಸಿದ ಪ್ರಧಾನಿ ಬಿಹಾರದ ಚುನಾವಣಾ ಪ್ರಚಾರಕ್ಕೆ ತೆರಳಿ ಸಂತ್ರಸ್ಥರ ಸಾವಿನ ಕುರಿತು ಪ್ರತಿಕಾರದ ಹೇಳಿಕೆ ನೀಡಿ ರಾಜಕೀಯ ಲಾಭ ಪಡೆಯಲು ಯತ್ನಿಸಿರುವುದು ಮತ್ತು ಸರ್ವ ಪಕ್ಷಗಳ ಸಭೆಗೆ ಗೈರಾಗಿದ್ದು ಖಂಡನೀಯ ಎಂದರು.

ಉಗ್ರವಾದಿಗಳಿಗೆ ಧರ್ಮವಿಲ್ಲ. ಪಹಲ್ಗಾಮ ದಾಳಿಯನ್ನು ಎಲ್ಲರೂ ಖಂಡಿಸಿದ್ದಾರೆ. ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನು ಕೊಂದವರು ಯಾರು, ಅವರೆಲ್ಲರೂ ಮುಸ್ಲಿಮರಾ? ಎಂದು ಪ್ರಶ್ನಿಸಿದರು.

ಜಾತಿ ಜನಗಣತಿ ಸಮೀಕ್ಷೆ ಸುಳ್ಳು ಅಂತ ಹೇಳ್ತಾ ಇದ್ದಾರೆ ಎಂಬ ಪ್ರಶ್ನೆಗೆ‌ ಉತ್ತರಿಸಿದ ಉಗ್ರಪ್ಪ ಅವರು,  ಜಾತಿಗಣತಿಯಿಂದ ಯಾರಿಗೂ ಬಹುದೊಡ್ಡ ನಷ್ಟವಿಲ್ಲ. ನಾನು ವರದಿ ಪಡೆಯಲು ಯತ್ನಿಸಿದರೂ ನನಗೆ ಸಿಕ್ಕಿಲ್ಲ. ಪರ, ವಿರೋಧವಾಗಿ ಮಾತನಾಡುವವರು ಒಮ್ಮೆ ಓದಿದ ಬಳಿಕವೇ ಪ್ರಶ್ನೆ ಮಾಡಬೇಕು. 54 ಮಾನದಂಡಗಳ ಮೇಲೆ ಸಮೀಕ್ಷೆ ನಡೆದಿದೆ. ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಆಧಾರದ ಮೇಲೆ ವರದಿ ತಯಾರಿಯಾಗಿದೆ. ಈ ಹಂತದಲ್ಲಿ ಪರ ವಿರೋಧ ಯಾರು ಮಾಡಬಾರದು. ಕರ್ನಾಟಕ ಶಾಂತಿಯ ತೋಟ, ಸರ್ವ ಧರ್ಮ ಸಮಾನತೆ ಕಾಪಾಡಿಕೊಂಡು ಬಂದಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ವರದಿ ಪ್ರಕಟಿಸಿ ಎರಡು ಸದನದಲ್ಲಿ ಚರ್ಚೆ ಮಾಡಬೇಕು. ಯಾವ ವರ್ಗಕ್ಕೂ ಬಹುದೊಡ್ಡ ಅನ್ಯಾಯ, ಬಹುದೊಡ್ಡ ಲಾಭ ಆಗಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಸಂಚಾಲಕ ಡಾ.ರಜಾಕ್ ಉಸ್ತಾದ್, ಮಹಿಳಾ ಮುಖಂಡೆ ಶ್ರೀದೇವಿ,ಮಂಜುಳಾ ಅಮರೇಶ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News