ರಾಯಚೂರು: ನಿಧಿಗಾಗಿ ಅರ್ಚಕನಿಂದಲೇ ದೇವಸ್ಥಾನದ ಕಟ್ಟೆ ಧ್ವಂಸ ಆರೋಪ; ಬಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದ

ರಾಯಚೂರು: ನಗರದ ಗಂಗಾನಿವಾಸ ಬಡಾವಣೆ ವ್ಯಾಪ್ತಿಯ ಬೆಟ್ಟದಗೇರಿಯ ಪುರಾತನ ದೇವಾಲಯದ ಕಟ್ಟೆಯನ್ನು ನಿಧಿಯ ಆಸೆಗಾಗಿ ಪೂಜಾರಿಯೇ ಧ್ವಂಸಗೊಳಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದು ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ದೇವಾಲಯದ ಅರ್ಚಕ ಶಕ್ತಿ ಸಿಂಗ್ ಶನಿವಾರ ರಾತ್ರಿ ಬೆಟ್ಟದ ಮೇಲೆ ಇರುವ ಕೋದಂಡರಾಮ ದೇವಸ್ಥಾನದ ಕಟ್ಟೆ ಒಡೆದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ, ಈ ಕುರಿತು ಪೊಲೀಸರು ವಿಚಾರಣೆ ಮಾಡಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಬಜರಂಗದಳದ ಕಾರ್ಯಕರ್ತರು ಹಾಗೂ ಅರ್ಚಕನ ಮಧ್ಯೆ ಮುಸುಕಿನ ಗುದ್ದಾಟ: ಅರ್ಚಕ ಶಕ್ತಿಸಿಂಗ್ ಅವರ ನಿರ್ವಹಣೆಯ ಬಗ್ಗೆ ಕೆಲ ಸ್ಥಳೀಯರಿಗೆ ಹಲವು ದಿನಗಳಿಂದ ವೈಮನಸ್ಸು ಉಂಟಾಗಿದ್ದು, ಅವರನ್ನು ಬದಲಾಯಿಸಲು ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಶಕ್ತಿಸಿಂಗ್ ದೇವಸ್ಥಾನದ ಕಟ್ಟೆಯ ಬಂಡೆ ಒಡೆದು ಗಣೇಶ ಮೂರ್ತಿ ಕೂರಿಸಲು ಯೋಚಿಸಿದ್ದ. ಇದನ್ನೇ ನೆಪವಾಗಿಸಿಕೊಂಡು ನಿಧಿಗಾಗಿ ದೇವಸ್ಥಾನ ಧ್ವಂಸಗೊಳಿಸಲು ಯತ್ನಿಸುತ್ತಿದ್ದಾನೆ ಎಂದು ಬಜರಂಗದಳದ ಕಾರ್ಯಕರ್ತರು ಹಾಗೂ ಕೆಲ ಸ್ಥಳೀಯ ಯುವಕರು ಆರೋಪಿಸಿದ್ದಾರೆ. ವಿಚಾರಣೆ ವೇಳೆ ಶಕ್ತಿಸಿಂಗ್ ಹಾಗೂ ಆತನ ಕುಟುಂಬದವರು ವಿಷಯ ತಿಳಿಸಿದ್ದಾರೆ. ನಿಧಿಗಾಗಿ ದೇವಸ್ಥಾನ ಧ್ವಂಸಗೊಳಿಸಲಾಗಿದೆ ಎಂದು ಅರ್ಚಕನ ವಿರುದ್ಧ ಸ್ಥಳೀಯರು ಪ್ರಕರಣ ದಾಖಲಿಸದೇ ಕೇವಲ ಮೌಖಿಕವಾಗಿ ಆರೋಪಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.