ರಾಯಚೂರು | ಫೆ.10 ರಿಂದ ಕೇಂದ್ರ, ರಾಜ್ಯ ಸರಕಾರಗಳ ಭೂ ನೀತಿ ಖಂಡಿಸಿ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ
ರಾಯಚೂರು : ಕೇಂದ್ರ, ರಾಜ್ಯ ಸರಕಾರಗಳ ಭೂ ನೀತಿಗಳನ್ನು ಖಂಡಿಸಿ ಫೆ.10ರಿಂದ ವಿಧಾನ ಸೌಧದ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಹತ್ತು ಸಾವಿರ ಕ್ಕೂ ಹೆಚ್ಚು ರೈತರು, ಕಾರ್ಮಿಕರು, ಭೂ ಹಕ್ಕುಗಳಿಂದ ವಂಚಿತರಾದವರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರಕಾರಿ, ಅರಣ್ಯ ಇಲಾಖೆಯ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತ ಈಗ ಹಕ್ಕು ಪತ್ರಕ್ಕಾಗಿ ಆಗ್ರಹಿಸುತ್ತಿರುವ ರೈತರಿಗೆ ಭೂಮಿ ನೀಡಲು ಮೀನ ಮೇಷ ಎಣಿಸುತ್ತಿರುವ ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಎಕರೆ ಭೂಮಿಯನ್ನು ಕೊಡುವುದಕ್ಕೆ ಮುಂದಾಗಿರುವುದು ಬಹುರಾಷ್ಟ್ರೀಯ ಕಂಪನಿಯ ಕೃಷಿಯತ್ತ ಗಮನಹರಿಸಿದಂತೆ ಕಾಣುತ್ತಿರುವುದನ್ನು ಗಮನಿಸಬಹುದಾಗಿದೆ. ಇದನ್ನು ನಾವು ವಿರೋಧಿಸಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡಲು ಉದ್ದೇಶಿಸಿರುವ ಭೂಮಿಯನ್ನು ಭೂ ಹೀನರಿಗೆ ನೀಡಬೇಕು ಎಂದರು.
ಈಗಾಗಲೇ ಸಾಗುವಳಿ ಮಾಡುತ್ತಿರುವವರ ವಿಚಾರದಲ್ಲಿ ಅಕ್ರಮ- ಸಕ್ರಮ ಸಮಿತಿ ರಚಿಸಿ ಸಭೆಗಳನ್ನು ಮಾಡಿ ಕಂದಾಯ ಇಲಾಖೆಯಿಂದ ಸರ್ವೆ ಮಾಡಿಸಿ ಕಾನೂನಾತ್ಮಕವಾಗಿ ಭೂ ಹಂಚುವ ಕ್ರಿಯೆಗೆ ಚಾಲನೆ ನೀಡಬೇಕು. ಬಗರಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಅದು ಅಲ್ಲದೆ ಸರಕಾರಿ ಯೋಜನೆಗಳಿಗೆ ಕೃಷಿಕರಿಂದ ಒತ್ತಾಯಪೂರ್ವಕವಾಗಿ ಭೂಮಿಯನ್ನು ಕಿತ್ತುಕೊಳ್ಳುವ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದು ಅವರ ಆತಂಕವನ್ನು ದೂರ ಮಾಡಿ ಭೂಮಿ ಪಡೆದು ಅಭಿವೃದ್ಧಿ ಪೂರಕ ಕೆಲಸ ಮಾಡಬೇಕೆನ್ನುವುದನ್ನು ನಮ್ಮ ಹಕ್ಕೊತ್ತಾಯ ಈ ವಿಚಾರವನ್ನು ಇಟ್ಟುಕೊಂಡು ಈಗ ಬೆಂಗಳೂರಿನ ವಿಧಾನಸೌಧದ ಎದುರು ಫೆ.10ರಿಂದ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಜಿ.ವಿರೇಶ, ನರಸಣ್ಣ ನಾಯಕ, ಕರಿಯಪ್ಪ ಹಚ್ಚೊಳ್ಳಿ ಇದ್ದರು.