ರಾಯಚೂರು | ಕುಡಿಯುವ ನೀರಿನ ಸಮಸ್ಯೆ : ಅಧಿಕಾರಿಗಳಿಗೆ ಗ್ರಾಮಸ್ಥರಿಂದ ತರಾಟೆ

ರಾಯಚೂರು : ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಕಾರಣ ವೀಕ್ಷಣೆಗೆ ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬೆಂಚಮರಡಿ ಗ್ರಾಮದಲ್ಲಿ ಇಂದು ನಡೆದಿದೆ.
ಎರಡು ತಿಂಗಳಿಂದ ಗೋಗರೆದರೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ನರೇಗಾ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನರೇಗಾ ಕಾಮಗಾರಿ ಸ್ಥಳದಲ್ಲಿ ನೆರಳಿನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಮಹಿಳೆಯರು, ಹಿರಿಯರು ಸುಡು ಬಿಸಿಲಿಗೆ ಬಳಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ನರೇಗಾ ಯೋಜನೆಯ ನಿರ್ದೇಶಕ ಶರಣಬಸಪ್ಪ, ಮಸ್ಕಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ಯಾದವ, ಪಿಡಿಓ ಕೃಷ್ಣ ಹನುಗುಂದ ಮತ್ತು ಕೇಂದ್ರ ತಂಡದ ಅಧಿಕಾರಿ ಪಿ.ಶಿವಶಂಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮಸ್ಥರು ಪೊಲೀಸರ ವಶಕ್ಕೆ :
ಜಿಲ್ಲಾ ಪಂಚಾಯತ್ ನರೇಗಾ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದು, ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಗ್ರಾಮದಲ್ಲಿನ ಪರಿಸ್ಥಿತಿ ಕಂಡು ತನಿಖೆಗೆ ಆಗಮಿಸಿದ ತಂಡ ವಾಪಸ್ ತೆರಳಿದ್ದಾರೆ.