ರಾಯಚೂರು | ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯುವವರೆಗೆ ಹೋರಾಟ : ಶೇಖ್ ಬಾಬಾ ಹುಸೇನ್

ರಾಯಚೂರು : ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಸರ್ಕಾರ ಈ ಕಾಯ್ದೆ ವಾಪಸ್ ಪಡೆಯವವರೆಗೂ ಹೋರಾಟ ನಡೆಸಲಾಗುವುದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಶೇಖ್ ಬಾಬಾ ಹುಸೇನ್ ಹೇಳಿದರು.
ಅವರು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, 'ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪವಾಗಿದೆ'. ಈ ಅಸಂವಿಧಾನಿಕ ತಿದ್ದುಪಡಿಯ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೇಂದ್ರ ಸಮಿತಿಯು ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ. ಇದರ ಅಂಗವಾಗಿ ರಾಜ್ಯದ್ದಲಿ ವಕ್ಪ್ ಸಂರಕ್ಷಣೆ ನಮ್ಮ ಹೊಣೆ ಎಂಬ ಶೀರ್ಷಿಕೆ ಅಡಿಯಲ್ಲಿ ಎ.20 ರಿಂದ 27ರ ವರೆಗೆ ರಾಜ್ಯವ್ಯಾಪಿ ಚಳುವಳಿ ಹಮ್ಮಿಕೊಂಡಿದೆ ಎಂದರು.
'ಇದು ಕೇವಲ ಒಂದು ಸಮುದಾಯದ ವಿಷಯವಲ್ಲದೆ ಸಂವಿಧಾನ ವಿರೋಧಿ ನಡೆಯಾಗಿದ್ದು ರಾಜ್ಯದ ಎಲ್ಲಾ ನಾಗರಿಕರು ಈ ಹೋರಾಟಕ್ಕೆ ಬೆಂಬಲಿಸಬೇಕು' ಎಂದು ಅವರು ಮನವಿ ಮಾಡಿದರು.
ಪಕ್ಷದ ಮುಖಂಡರಾದ ಶೇಖ್ ಫರೀದ್ ಉಮರಿ, ನಾಸೀರ್ ಅಲಿ, ಎಮ್ಎಎಚ್ ಮುಖೀಮ್, ಶೇಖ್ ಮಹೆಬೂಬ, ಹಬೀಬ್ ಸಹರಾ,ಯುನೂಸ್ ನಾಯ್ಕ, ಶೇಖ್ ಅಹ್ಮದ್ ಹುಸೇನ್ ಉಪಸ್ಥಿತರಿದ್ದರು.